ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರಭಾಕರ, ಹೊನ್ನಾಳಿ
2001ರಲ್ಲಿ ₹ 2 ಲಕ್ಷ ಕೊಟ್ಟು ನಿವೇಶನ ಕೊಂಡಿದ್ದೆ. ಈಗ ಅದನ್ನು ₹ 50 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. ನನ್ನ ವಾರ್ಷಿಕ ಆದಾಯ ₹ 3 ಲಕ್ಷ. ನಿವೇಶನ ಮಾರಾಟ ಮಾಡಿದರೆ ನಾನು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ತುಂಬ ಬೇಕಾಗುತ್ತದೆಯೇ?

ಉತ್ತರ: ಎಲ್ಲಾ ಹೂಡಿಕೆಗಳಲ್ಲಿ ಸ್ಥಿರ ಆಸ್ತಿಯ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ ಎನ್ನುವುದು ನಿಮ್ಮ ಪ್ರಶ್ನೆಯಿಂದ ಖಚಿತವಾಗುತ್ತದೆ. ನಿಮ್ಮ ನಿವೇಶನ ಮಾರಾಟ ಮಾಡಿ ಬರುವ ಮೊತ್ತ ₹ 50 ಲಕ್ಷವಾದ್ದರಿಂದ, ಬಂದಿರುವ ಹಣ ₹ 50 ಲಕ್ಷವನ್ನು NHAI-REC ಬಾಂಡ್‌ನಲ್ಲಿ ತೊಡಗಿಸಿದರೆ, ಕ್ಯಾಪಿಟಲ್ ಗೇನ್ ಟ್ಯಾಕ್ಸ್‌ನಿಂದ ಸಂಪೂರ್ಣ ವಿನಾಯಿತಿ ಪಡೆಯಬಹುದು.

(See.54 EC) ಇದರ ಅವಧಿ ಬರೇ ಮೂರು ವರ್ಷಗಳು (Lock  in priod) ವಾರ್ಷಿಕ ಶೇ 5.25 ಬಡ್ಡಿ ಬರುತ್ತದೆ. ಎರಡೂ ಸರ್ಕಾರಿ ಕಂಪೆನಿಗಳಾಗಿದ್ದರಿಂದ ಭದ್ರತೆಯ ವಿಚಾರದಲ್ಲಿ ಎರಡು ಮಾತಿಲ್ಲ. ಹೀಗೆ ಮಾಡದಿರುವಲ್ಲಿ, ಕಾಸ್ಟ್‌ ಆಫ್‌ ಇನ್‌ಫ್ಲೇಶನ್‌ ಇಂಡೆಕ್ಸ್ ಲೆಕ್ಕ ಹಾಕಿ, ಬಂದಿರುವ ಹಣದಲ್ಲಿ ಕಳೆದು ಉಳಿದ ಮೊತ್ತಕ್ಕೆ ಶೇ 20 (Flat 20%) ತೆರಿಗೆ ಸಲ್ಲಿಸಬೇಕು. ನೀವು ನಿವೇಶನ ಕೊಂಡಿರುವುದು ಬರೇ ₹ 2 ಲಕ್ಷವಾದ್ದರಿಂದ ಕಾಸ್ಟ್‌ ಆಫ್‌ ಆಫ್ ಇನ್‌ಫ್ಲೇಶನ್‌ ಇಂಡೆಕ್ಸ್ ಲೆಕ್ಕ ಹಾಕಿದರೆ ಹೆಚ್ಚಿನ ಲಾಭವಾಗುವುದಿಲ್ಲ.

ಉದಾಹರಣೆಗೆ–2001–2002 (CII) 426 2015–2016 (CII.)  1081/426X2=4.88
(ಮಾರಾಟದಿಂದ ಬಂದ ₹ 50 ಲಕ್ಷದಲ್ಲಿ, ಖರೀದಿಸಿದ ₹ 2 ಲಕ್ಷ ಕಳೆದು ಬರುವ ₹ 48 ಲಕ್ಷದಲ್ಲಿ, ₹ 4.88 ಲಕ್ಷ (₹ 5ಲಕ್ಷ) ಸಿ.ಐ.ಐ. ಕಳೆದು ಉಳಿಯುವ ₹ 43 ಲಕ್ಷಕ್ಕೆ ಶೇ 20 ರಂತೆ ₹ 8.60 ಲಕ್ಷ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕೊಡಬೇಕಾಗುತ್ತದೆ)

ಹನುಮಂತ ರಾವ್, ಊರು ಬೇಡ
ನಾನು NPS A/C ಎಲ್ಲಿ ಪ್ರಾರಂಭಿಸಲಿ, ನಾನು ಅಟಲ್ ಪಿಂಚಣಿ ಯೋಜನೆ ಮಾಡಿದ್ದೇನೆ. ಇದು ಮುಂದುವರಿಸಿ NPS ಮಾಡಬಹುದಾ ತೊಂದರೆ ಇದ್ದರೆ ತಿಳಿಸಿರಿ. ಎರಡೂ ಓರ್ವ ವ್ಯಕ್ತಿ ಮಾಡಬಹುದೇ?

ಉತ್ತರ: ಎನ್.ಪಿ.ಎಸ್. ಖಾತೆಯನ್ನು ಎಸ್.ಬಿ.ಐ.ದಲ್ಲಿ ಮಾಡಿರಿ. ನೀವು ಅಟಲ್ ಪಿಂಚಣಿ ಖಾತೆ ಹೊಂದಿದ್ದರೂ, ಎನ್.ಪಿ.ಎಸ್. ಪ್ರಾರಂಭಿಸಲು ಏನೂ ತೊಂದರೆ ಇಲ್ಲ. ಈ ಎರಡೂ ಯೋಜನೆಯ ಲಾಭ ಅಥವಾ ಪ್ರತಿಫಲವನ್ನು ಓರ್ವ ವ್ಯಕ್ತಿ ಪಡೆಯಬಹುದು. ಇಲ್ಲಿ ತೊಂದರೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದರಿಂದ ತೊಂದರೆಯ ಬದಲಾಗಿ ಅನುಕೂಲವೇ ಆಗುತ್ತದೆ. ಇವೆರಡೂ ಪಿಂಚಣಿ ಯೋಜನೆಗಳಾಗಿದ್ದು, ಪಿಂಚಣಿ ಸೌಲಭ್ಯವಿರದ, ಜನಸಾಮಾನ್ಯರಿಗೆ ಜೀವನದ ಸಂಜೆಯಲ್ಲಿ ಹಾಲು ಜೇನಿನಂತೆ, ಸುಖವಾಗಿ ಬಾಳಲು ಅನುಕೂಲವಾಗುತ್ತದೆ. ನಿಮಗೆ ಇರುವ ಸಂಶಯದಿಂದ ಹೊರಬಂದು, ತಕ್ಷಣ ಎನ್.ಪಿ.ಎಸ್. ಯೋಜನೆಯಲ್ಲಿ ಹಣ ತೊಡಗಿಸಿರಿ ಹಾಗೂ ಅಟಲ್ ಪಿಂಚಣಿಯನ್ನು ಹಾಗೆಯೇ ಮುಂದುವರೆಸಿರಿ.

ಸಜ್ಜನ್.ಕೆ.ಪಿ., ಹುಬ್ಬಳ್ಳಿ
ನಾನು ಬಿ.ಇ. ಮುಗಿಸಿ ಐ.ಟಿ. ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹ 23,000. ನನ್ನ ಮನೆ ಬಾಡಿಗೆ ₹ 8,500 ಹಾಗೂ ನಾನು ₹ 2,500 ಆರ್.ಡಿ. ಮಾಡಿರುತ್ತೇನೆ. ಮನೆ ಖರ್ಚು ತಿಂಗಳು ತಿಂಗಳು ಸ್ವಲ್ಪ ವ್ಯತ್ಯಾಸವಾಗುತ್ತದೆ. ಮುಂದೆ ಉನ್ನತ ಶಿಕ್ಷಣ ಹಾಗೂ ಸ್ವಂತ ಪ್ಲ್ಯಾಟ್ ಹೊಂದಬೇಕೆಂದಿದ್ದೇನೆ. ಉತ್ತಮ ಉಳಿತಾಯದ ಪ್ಲಾನ್ ಯಾವುದು?

ಉತ್ತರ: ನೀವು ಅವಿವಾಹಿತರೆಂದು ತಿಳಿಯುತ್ತೇನೆ. ಮನೆ ಬಾಡಿಗೆ, ಆರ್‌.ಡಿ ಹಾಗೂ ಮನೆ ಖರ್ಚು ಅಂದಾಜು ₹ 5,000 ಇವುಗಳನ್ನು ನಿಮ್ಮ ಸಂಬಳದಲ್ಲಿ ಕಳೆದಾಗ ₹ 7,000 ನಿಮ್ಮೊಡನಿರುತ್ತದೆ. ನಿಮ್ಮ ಸದ್ಯದ ಪರಿಸ್ಥಿತಿಯಲ್ಲಿ ನೀವು ಹೀಗೆ ಉಳಿಸಬಹುದಾದ ₹ 7,000 ದಲ್ಲಿ ₹ 1000 ಬಿಟ್ಟು (ಅನಿವಾರ್ಯ ಖರ್ಚಿಗೆ) ಉಳಿದ ₹ 6,000 ಮೂರು ವರ್ಷಗಳ ಆರ್‌ಡಿ ಮಾಡಿರಿ. ಮೂರು ವರ್ಷಗಳಲ್ಲಿ ನೀವು ವಿವಾಹಿತರಾಗುವ ಸಾಧ್ಯತೆ ಕೂಡಾ ಇದೆ. ಹೆಚ್ಚಿನ ಸಂಬಳ ಪಡೆಯುವ ಸಂದರ್ಭದಲ್ಲಿ ಗೃಹಸಾಲ ಮಾಡಿ ಫ್ಲ್ಯಾಟ್ ಕೊಂಡುಕೊಳ್ಳಿ.

ಸಂತೋಷ್, ಬೆಂಗಳೂರು
ನಾನು ಕೇಂದ್ರ ಸರ್ಕಾರದ ನೌಕರ. ವಯಸ್ಸು 32. ತಿಂಗಳ ಸಂಬಳ ₹ 46,000 (ಎನ್‌ಪಿಎಸ್ ₹ 9424 ಕಡಿತದ ನಂತರ). ನನ್ನ ಇಂದಿನ ಉಳಿತಾಯ: (1) ₹ 5,500 ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ (2) ಚಿಟ್ ಫಂಡ್ ₹ 10,000 (3) ಎಲ್.ಐ.ಸಿ. ವಾರ್ಷಿಕ ₹ 10,000. ಮನೆ ಖರ್ಚು ₹ 14,000. ನನ್ನ ಕುಟುಂಬ– ನಾನು, ಹೆಂಡತಿ ಹಾಗೂ ಒಂದು ವರ್ಷದ ಗಂಡು ಮಗು. ಭವಿಷ್ಯದ ಏಳಿಗೆಗಾಗಿ ಉತ್ತಮ ಉಳಿತಾಯ ಯೋಜನೆ ಯಾವುದು
?

ಉತ್ತರ: ತೆರಿಗೆ ಉಳಿಸಲು ದೀರ್ಘಾವಧಿ ಹೂಡಿಕೆಯಾದ ಪಿ.ಪಿ.ಎಫ್., ಮ್ಯೂಚುವಲ್ ಫಂಡ್‌ಗಿಂತಲೂ ಉತ್ತಮ. ಮ್ಯೂಚುವಲ್ ಫಂಡ್‌ನಲ್ಲಿ ಹಾಕಿದ ಹಣ ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಮೂರು ವರ್ಷ ಕಳೆಯುತ್ತಲೇ ವಾಪಸು ಪಡೆಯುವಾಗ ಹೆಚ್ಚಿನ ಲಾಭ ಬಂದರೆ ಮಾತ್ರ ಅನುಕೂಲ.

ಇದೇ ವೇಳೆ ಕೈಗೆ ಹಣ ಬಂದರೆ, ಆ ಹಣ ಖರ್ಚಾಗುವ ಸಾಧ್ಯತೆಯೂ ಇದೆ. ಪಿ.ಪಿ.ಎಫ್. ಒಂದು 15 ವರ್ಷಗಳ ಕಂಟಕ ರಹಿತ, ಆದಾಯ ತೆರಿಗೆ ಹಾಗೂ ಬಡ್ಡಿಯಲ್ಲಿಯೂ ತೆರಿಗೆ ಇರದ, ಭದ್ರವಾದ ನಿಖರ ಆದಾಯ ಬರುವ ಉತ್ತಮ ಹೂಡಿಕೆ. ಮುಂದೆ ಈ ವಿಚಾರ ಮನಸ್ಸಿನಲ್ಲಿ ಇಟ್ಟುಕೊಳ್ಳಿ.

ನೀವು ಯಾವ ಚಿಟ್ ಫಂಡ್‌ನಲ್ಲಿ ಹಣ ಹೂಡುತ್ತಿದ್ದೀರಿ ತಿಳಿಯಲಿಲ್ಲ. ಎಂ.ಎಸ್.ಐ.ಎಲ್. ನಂತಹ ಸರಕಾರಿ ಕಂಪೆನಿಗಳನ್ನೇ ಆರಿಸಿಕೊಳ್ಳಿ. ಹೆಸರಾಂತ ಖಾಸಗಿ ಕಂಪೆನಿಯಲ್ಲಿಯೂ ತೊಂದರೆ ಇಲ್ಲ. ಸಾಧ್ಯವಾದರೆ 30X40 ನಿವೇಶನ ಸಾಲ ಮಾಡಿಯಾದರೂ ಕೊಂಡು ಕೊಳ್ಳಿ. ಈ ಸಂದರ್ಭದಲ್ಲಿ ಚಿಟ್ ಫಂಡ್ ನಿಲ್ಲಿಸಿ. ಈ ಮೊತ್ತ ಹಾಗೂ ಎಲ್ಲಾ ಖರ್ಚು ಕಳೆದು ಉಳಿಯುವ ₹ 7,000 (ಒಟ್ಟಿನಲ್ಲಿ ₹ 17,000) ಸಾಲದ ಕಂತಿಗೆ ಉಪಯೋಗಿಸಿರಿ. ಸ್ಥಿರ ಆಸ್ತಿ ಯಾವಾಗಲೂ ಸ್ಥಿರವಾಗಿರುತ್ತದೆ. ಜೊತೆಗೆ ಮನೆಕಟ್ಟಲು ಅನುಕೂಲವಾಗುತ್ತದೆ.

ರಾಜಕುಮಾರಿ ರಾಮಚಂದ್ರ, ಊರು ಬೇಡ
ನಾನು (35) ಗೃಹಿಣಿ. ಹಿಂದೆ 7 ವರ್ಷ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ನನ್ನ ಹೂಡಿಕೆ (1) ಕಾರ್ಪೋರೇಶನ್ ಬ್ಯಾಂಕ್ ₹ 20 ಲಕ್ಷ ಎಫ್.ಡಿ. 5 ವರ್ಷಗಳ ಅವಧಿಗೆ (2) ಎಸ್.ಬಿ.ಐ. ಆರ್.ಡಿ. ₹ 3 ಲಕ್ಷ, 3 ವರ್ಷ ಅವಧಿ (3) ಅಂಚೆ ಕಚೇರಿ ಕಿಸಾನ್ ವಿಕಾಸ್ ಪತ್ರ ₹ 10 ಲಕ್ಷ., ಎನ್.ಎಸ್.ಸಿ. ₹ 10 ಲಕ್ಷ. ಪ್ರಶ್ನೆ: ನಾನು ಐ.ಟಿ. ರಿಟರ್ನ್ ತುಂಬಬೇಕೇ, ತುಂಬಲು ನಾನು ಆನ್‌ಲೈನ್‌ನಲ್ಲಿ ತುಂಬಬಹುದೇ ಅಥವಾ ಆಡಿಟರ್ ಮುಖಾಂತರ ತುಂಬಬೇಕೆ. ಕಳೆದ ಎರಡು ವರ್ಷಗಳಿಂದ, ಎಸ್.ಬಿ.ಐ. ಹಾಗೂ ಕಾರ್ಪೋರೇಷನ್ ಬ್ಯಾಂಕಿಗೆ 15ಜಿ, ನಮೂನೆ ಫಾರಂ ಕೊಟ್ಟಿದ್ದೇನೆ. ನಾನು ಇದನ್ನು ಮುಂದುವರಿಸಲೇ ಅಥವಾ ಐ.ಟಿ. ರಿಟರ್ನ್ ಫೈಲ್ ಮಾಡಲೇ ತಿಳಿಸಿರಿ. ಮುಂದೆ ಹಣ ಉಳಿಸಲು ಆರ್.ಡಿ., ಎಫ್.ಡಿ. ಅಂಚೆ ಕಚೇರಿ ಠೇವಣಿ ಯಾವುದು ಉತ್ತಮ?

ಉತ್ತರ: ನಿಮ್ಮ ಒಟ್ಟು ಠೇವಣಿಗಳ ಮೊತ್ತ ₹ 43 ಲಕ್ಷ. ಸರಾಸರಿ ಶೇ 8 ಬಡ್ಡಿ ದರದಲ್ಲಿ ನೀವು ವಾರ್ಷಿಕ ಪಡೆಯುವ ಒಟ್ಟು ಬಡ್ಡಿ ₹ 3.44 ಲಕ್ಷ. ವಾರ್ಷಿಕ ಆದಾಯ ₹ 2.50 ಲಕ್ಷ ದಾಟಿದರೆ, ಹಾಗೆ ದಾಟಿದ ಮೊತ್ತಕ್ಕೆ ಆದಾಯ ತೆರಿಗೆ ಕೊಡಬೇಕಾಗುತ್ತದೆ. ನೀವು ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆಯಲು, ವಾರ್ಷಿಕವಾಗಿ ₹ 1 ಲಕ್ಷ, ಎಸ್.ಬಿ.ಐ. ಅಥವಾ ಕಾರ್ಪೋರೇಶನ್ ಬ್ಯಾಂಕಿನಲ್ಲಿ 5 ವರ್ಷಗಳ ತೆರಿಗೆ ಉಳಿಸುವ ಠೇವಣಿಯಲ್ಲಿ ಇರಿಸಬೇಕಾಗುತ್ತದೆ.

ಪ್ರತೀ ವರ್ಷವೂ ₹ 1 ಲಕ್ಷ ಠೇವಣಿ ಮಾಡಬೇಕು ನೆನಪಿರಲಿ. ನಿಮ್ಮ ವಾರ್ಷಿಕ ಬಡ್ಡಿ ಆದಾಯ ₹ 2.50ಕ್ಕೂ ಹೆಚ್ಚಿಗೆ ಇರುವುದರಿಂದ ನೀವು ಆದಾಯ ತೆರಿಗೆ ರಿಟರ್ನ್ ತುಂಬ ಬೇಕಾಗುತ್ತದೆ. ತುಂಬುವ ಮುನ್ನ ಬ್ಯಾಂಕುಗಳು ಹಾಗೂ ಅಂಚೆ ಕಚೇರಿಯಿಂದ Intrest Earned Certificate ಫಾರಂ ನಂಬರ್ 16ಎ ದಲ್ಲಿ ಪಡೆಯಬೇಕಾಗುತ್ತದೆ. ON LINEನಲ್ಲಿ ನೀವು ತೆರಿಗೆ ರಿಟರ್ನ್ ತುಂಬಬಹುದು. ಆದರೆ ನೀವು ಆಡಿಟರ್ ಮುಖಾಂತರ ಸಲ್ಲಿಸುವದೇ ಕ್ಷೇಮ.

ಈ ಮಾರ್ಗದಲ್ಲಿ ಜವಾಬ್ದಾರಿ ಹಾಗೂ ತಲೆ ನೋವು ಇರುವುದಿಲ್ಲ. ನಿಮ್ಮ ಈಗಿನ ಠೇವಣಿಯ ವಿಚಾರದಲ್ಲಿ ನನ್ನದೊಂದು ಸಲಹೆ. ನಿಮಗೆ ಖರ್ಚಿಗೆ ಬೇಕಾದಷ್ಟು ಹಣ ಬಡ್ಡಿ ರೂಪದಲ್ಲಿ ಬರಲು, ಎಫ್.ಡಿ. ಮಾಡಿರಿ. ಹಾಗೂ ಉಳಿದ ಹಣ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ.

ಇದರಿಂದ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ. ದೊಡ್ಡ ಮೊತ್ತದ ಠೇವಣಿಗಳನ್ನು ವಿಂಗಡಿಸಿ ಪ್ರತ್ಯೇಕ ಹಲವು ಬಾಂಡು ಪಡೆಯಿರಿ. ಹೀಗೆ ಮಾಡಿದಲ್ಲಿ ಅಗತ್ಯ ಬಿದ್ಸಾಗ ಯಾವುದಾದರೂ ಒಂದು ಹಿಂದಕ್ಕೆ ಪಡೆಯಲು ಹಾಗೂ ಬೇರೆ ಬೇರೆ ನಾಮ ನಿರ್ದೇಶನ ಮಾಡಲು ಅನುಕೂಲವಾಗುತ್ತದೆ.

ವಿನೋದ್, ಮಂಡ್ಯ
ನಾನು ಸರ್ಕಾರಿ ಶಾಲಾ ಶಿಕ್ಷಕ. ತಿಂಗಳ ಉಳಿಕೆ ₹ 7,000. ಸದ್ಯ ಕೈಯಲ್ಲಿ ₹ 20,000 ಇದೆ. ಮುಂದಿನ ಎರಡೂ ವರ್ಷಗಳಲ್ಲಿ ಮದುವೆ ಆಗಬೇಕು.  ನನಗೆ ಸೂಕ್ತ ಹೂಡಿಕೆ ವಿಧಾನ ಯಾವುದು?

ಉತ್ತರ: ನಿಮ್ಮ ಕೈಯಲ್ಲಿರುವ ₹ 20,000 ಉಳಿತಾಯ ಖಾತೆಯಲ್ಲಿಡಬೇಕು. ಈ ಹಣ 2 ವರ್ಷಗಳ ಅವಧಿಗೆ ಅದೇ ಬ್ಯಾಂಕಿನಲ್ಲಿ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ಉಳಿತಾಯ ಖಾತೆಯಲ್ಲಿ ಶೇ 4 ಬಡ್ಡಿ ಮಾತ್ರ, ಜೊತೆಗೆ ನೀವು ಈ ಹಣ ಏನಾದರೂ ಕಾರಣಕ್ಕೆ ತೆಗೆದು ಖರ್ಚು ಮಾಡಬಹುದು. ನೀವು ಉಳಿಸಬಹುದಾದ ₹ 7,000 ಕೂಡಾ ಅದೇ ಬ್ಯಾಂಕಿನಲ್ಲಿ 2 ವರ್ಷಗಳ ಆರ್.ಡಿ. ಮಾಡಿರಿ. ನೀವು ಬಯಸಿದಂತೆ ಅಷ್ಟರಲ್ಲಿ ನಿಮಗೆ ಕಂಕಣ ಭಾಗ್ಯ ಒದಗಲಿ ಎಂದು ದೇವರನ್ನು ಬೇಡುತ್ತೇನೆ. ನಾನು ತಿಳಿಸಿದಂತೆ ಮಾಡಿದರೆ, ಹೀಗೆ ನೀವು ಉಳಿಸುವ ಹಣ ಮದುವೆ ಖರ್ಚಿಗೆ ಸರಿ ಹೋಗುತ್ತದೆ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತಿ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಘಳೂರು–56001.

ಇ–ಮೇಲ್‌: businessdesk@prajavani.co.in

ಸಜ್ಜನ್‌ ಶೇಟ್‌, ಕಾರವಾರ
ನಾನು ಕಳೆದ ಮಾರ್ಚ್‌ ತಿಂಗಳಲ್ಲಿನ ನಡೆದ ಪಿಯುಸಿ ಪರೀಕ್ಷೆಯಲ್ಲಿ ಶೇ 99.5 ಅಂಕಪಡೆದು ಪಾಸಾಗಿರುತ್ತೇನೆ ಹಾಗೂ ರಾಜ್ಯಕ್ಕೆ ಸಿಇಟಿಯಲ್ಲಿ 1734 ರ‍್ಯಾಂಕ್‌ ಬಂದಿದೆ. ನನಗೆ   ಬಿ.ಇ. ಸೀಟ್‌ ದೊರಕಿದೆ. ನನ್ನ ಕುಟುಂಬದ ಅದಾಯ ಬಹಳ ಕಡಿಮೆ ಇದ್ದು, ನಮಗೆ ಸರ್ಕಾರ ಬಿಪಿಎಲ್‌ ರೇಷನ್‌ ಕಾರ್ಡ್‌ ಒದಗಿಸಿದೆ. ನನಗೆ ಬಿ.ಇ. ಓದಲು ಶಿಕ್ಷಣ ಸಾಲಬೇಕಾಗಿದೆ. ನನ್ನ ಖಾತೆ ಕೆನರಾ ಬ್ಯಾಂಕ್‌ನಲ್ಲಿದೆ. ಶಿಕ್ಷಣ ಸಾಲ ಪಡೆಯಲು ನಾನು ಏನು ಮಾಡಬೇಕು?

ಉತ್ತರ: ನೀವು ಪಿಯುಸಿಯಲ್ಲಿ ಶೇ 99.5 ಗಳಿಸಿ ಉತ್ತೀರ್ಣರಾಗಿರುವುದು ನನಗೆ ಹೆಮ್ಮೆ ತಂದಿದೆ. ನೀವು ಯಾವ ಗೊಂದಲವಿಲ್ಲದೇ, ಕೆನರಾ ಬ್ಯಾಂಕಿನಿಂದ ಮಾದರಿ ಶಿಕ್ಷಣ ಸಾಲದ ಅಡಿಯಲ್ಲಿ (Model Education Scheme) ಬಡ್ಡಿ ಅನುದಾನಿತ (Interest Subsidy) ಸಾಲ ಪಡೆಯಬಹುದು. ನೀವು ಕೆಳಗೆ ನಮೂದಿಸಿದ ಪುರಾವೆಗಳನ್ನು ಬ್ಯಾಂಕಿಗೆ ಒದಗಿಸಿರಿ.

ಕಾರವಾರದ ತಹಶೀಲ್ದಾರ್‌ರಿಂದ ನಿಮ್ಮ ಕುಟುಂಬದ ಒಟ್ಟು ವಾರ್ಷಿಕ ಆದಾಯ ₹ 4.50 ಲಕ್ಷದೊಳಗಿರುವ  ಸರ್ಟಿಫಿಕೇಟ್‌. ಪಿಯುಸಿ ಮಾರ್ಕ್ಸ್‌ಲಿಸ್ಟ್‌, ಸಿಇಟಿ ರ‍್ಯಾಂಕ್‌ ಪುರಾವೆ ಹಾಗೂ R.V. College of Engineering ನಲ್ಲಿ ಬಿ.ಇ. ಸೀಟು ಸಿಕ್ಕಿರುವ ಬಗ್ಗೆ ಪುರಾವೆ.

ಇನ್ನು ಇತರ ವಿಚಾರ: ನೀವು ಈಗಲೇ ಉಳಿತಾಯ ಖಾತೆ ಹೊಂದಿರುವುದರಿಂದ ವಿಳಾಸದ ಪುರಾವೆ ಅಥವಾ ಇನ್ನಿತರ ಪುರಾವೆ ಅವಶ್ಯವಿಲ್ಲ. ನೀವು ₹ 4.50 ಲಕ್ಷದೊಳಗೆ ಸಾಲ ಪಡೆಯುವಲ್ಲಿ, ಈ ಸಾಲಕ್ಕೆ ಬೇರೆಯವರ ಜಾಮೀನು ಹಾಗೂ ಆಸ್ತಿ ಭದ್ರತೆ ಕೊಡುವ ಅವಶ್ಯವಿಲ್ಲ. ಬ್ಯಾಂಕಿನಲ್ಲಿಯೂ ಕೇಳುವುದಿಲ್ಲ.

ಆದರೆ ಹೆತ್ತವರು ಸಾಲಕ್ಕೆ ಜಾಮೀನು ಹಾಕಬೇಕಾಗುತ್ತದೆ. ಬ್ಯಾಂಕ್‌ ನೀಡುವ ಸಾಲ, ಪುಸ್ತಕ, ಉಪಕರಣ, ಕಾಲೇಜು ಫೀ, ಹಾಸ್ಟೆಲ್‌ ಬಿಲ್‌ಗಳಿಗೆ ಮಾತ್ರ ಸೀಮಿತವಾಗುತ್ತದೆ. ಈ ಸಾಲ ಬಡ್ಡಿ ಅನುದಾನಿತ ಶಿಕ್ಷಣ ಸಾಲವಾದ್ದರಿಂದ, ನಿಮ್ಮ ಶಿಕ್ಷಣದ ಅವಧಿ ನಂತರ ಒಂದು ವರ್ಷದವರೆಗೆ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳು (ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಬೇಕು) ಈ ಅವಧಿಗೆ ಬಡ್ಡಿ ಅಥವಾ ಸಾಲ ಮರುಪಾವತಿ ಇರುವುದಿಲ್ಲ. ಬಡ್ಡಿ ಸರ್ಕಾರವೇ ಬ್ಯಾಂಕಿಗೆ ಒದಗಿಸುತ್ತದೆ.

ಕೆನರಾ ಬ್ಯಾಂಕ್‌ ರಾಷ್ಟ್ರದ ಹೆಮ್ಮೆಯ ಬ್ಯಾಂಕ್‌ ಆಗಿದ್ದು, ಸರ್ಕಾರದ ಎಲ್ಲಾ ಬ್ಯಾಂಕುಗಳು ಈ ಯೋಜನೆಯಡಿಯಲ್ಲಿ ಕೊಡುವ ಶಿಕ್ಷಣ ಸಾಲದ ಅನುದಾನಿತ ಬಡ್ಡಿ, ಇದೇ ಬ್ಯಾಂಕಿನ ಮುಖಾಂತರ ಸಂದಾಯವಾಗುತ್ತದೆ. ಕೆನರಾ ಬ್ಯಾಂಕ್‌ ನಿಮಗೆ ಸಕಾಲದಲ್ಲಿ ಶಿಕ್ಷಣ ಸಾಲ ಒದಗಿಸುತ್ತದೆ, ನೀವು ಬಿ.ಇ. ಮುಗಿಸಿ ಉದ್ಯೋಗಕ್ಕೆ ಸೇರಿದ ನಂತರ, ಈ ಬ್ಯಾಂಕ್‌ನ್ನು ಎಂದಿಗೂ ಮರೆಯದೆ, ಸಕಾಲದಲ್ಲಿ ಸಾಲ ತೀರಿಸಿರಿ, ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT