ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಧಾನವೇ ದಾರಿ’

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಒತ್ತಡ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿಯೂ ಇದ್ದೇ ಇರುತ್ತದೆ. ನನ್ನ ಬದುಕಿನಲ್ಲಿ ಒತ್ತಡವೇ ಇಲ್ಲ, ನಾನು ‘ಸ್ಟ್ರೆಸ್‌’ ಮಾಡಿಕೊಳ್ಳುವುದೇ ಇಲ್ಲ ಎಂಬುದೆಲ್ಲ ಸುಳ್ಳು. ಎಲ್ಲರ ಬದುಕಿನಲ್ಲಿಯೂ ಅದು ಇರುತ್ತದೆ. ವಿದ್ಯಾರ್ಥಿಗಳಾಗಿದ್ದಾಗ ಪರೀಕ್ಷಾ ಒತ್ತಡ, ನಂತರ ವೃತ್ತಿಯಲ್ಲಿ ಕೆಲಸದ ಒತ್ತಡ – ಹೀಗೆ ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದರೆ ಅದರನ್ನು ಎದುರಿಸಲೇಬೇಕಲ್ಲವೇ ಅದನ್ನು ಹೇಗೆ  ಎದುರಿಸುತ್ತೇವೆ ಎನ್ನುವುದರ ಮೇಲೆ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ.

ನನ್ನ ವೈಯಕ್ತಿಕ ವಿಷಯಕ್ಕೆ ಬರುವುದಾದರೆ ನನಗೆ ಕುಟುಂಬದ ಬೆಂಬಲ ತುಂಬಾ ಚೆನ್ನಾಗಿದೆ. ಆ ವಿಷಯದಲ್ಲಿ ನಾನು ಅದೃಷ್ಟಶಾಲಿ. ಅವರು ನನಗೆ ಯಾವಾಗಲೂ ನೈತಿಕ ಬೆಂಬಲ ನೀಡುತ್ತಾರೆ. ನನಗೆ ಒತ್ತಡ ಉಂಟಾದಾಗ ಹೇಳಿಕೊಳ್ಳಲು ಅಮ್ಮ, ಅಪ್ಪ – ಈಗ ಮದುವೆ ಆದಮೇಲೆ ಯಶ್‌ ಯಾರಾದರೂ, ನನ್ನ ಜೊತೆ ಇದ್ದೇ ಇರುತ್ತಾರೆ. ಇಂಥ ಒಳ್ಳೆಯ ವಾತಾವರಣ ಇದ್ದಾಗ ಒತ್ತಡಕ್ಕೆ ಬಲಿಯಾಗಿ ಡಿಪ್ರೆಶನ್‌ಗೆ ಹೋಗುವುದು, ಏನಾದರೂ ಅನಾಹುತ ಮಾಡಿಕೊಳ್ಳುವುದು – ಇಂಥ ಮೂರ್ಖತನದ ಕೆಲಸಕ್ಕೆ ಮುಂದಾಗುವುದಿಲ್ಲ.

ಅಲ್ಲದೇ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಧ್ಯಾನವನ್ನೂ ಮಾಡಬಹುದು. ಧ್ಯಾನ ಎಂದರೆ ಒಂದು ಕಡೆ ಕುಳಿತುಕೊಂಡು ಕಣ್ಣುಮುಚ್ಚಿಕೊಂಡು ತಪಸ್ಸು ಮಾಡುವುದು ಅಂತಲ್ಲ; ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು.

ನಾನು ಒತ್ತಡಕ್ಕೆ ಒಳಗಾದಾಗ ನನಗೆ ಇಷ್ಟವಾಗುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಅಂದರೆ ನನಗೆ ಪೇಂಟಿಂಗ್‌ ಇಷ್ಟ. ನಿಸರ್ಗದಲ್ಲಿ ಸುಮ್ಮನೆ ಸುತ್ತಾಡುವುದು ನನಗಿಷ್ಟ. ಒಂದು ವಾಕ್‌ ಹೋಗಿ ಬರುತ್ತೇನೆ. ಒಂದು ಒಳ್ಳೆಯ ಪುಸ್ತಕ ಓದುತ್ತೇನೆ. ಒಳ್ಳೆಯ ಸಿನಿಮಾ ನೋಡುತ್ತೇನೆ. ಹೀಗೆ ನಮ್ಮನ್ನು ಸಮಾಧಾನಗೊಳಿಸುವ, ಮನಸ್ಸಿಗೆ ಖುಷಿಕೊಡುವ ಕೆಲಸದಲ್ಲಿ ತೊಡಗಿಕೊಳ್ಳುವುದು ತುಂಬ ಒಳ್ಳೆಯದು.

ಏಕೆಂದರೆ ಒತ್ತಡದಲ್ಲಿ ವಿವೇಚನೆ ಕೆಲಸ ಮಾಡುತ್ತಿರುವುದಿಲ್ಲ. ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿರುವುದಿಲ್ಲ. ಆದ್ದರಿಂದ ಒಮ್ಮೆ ನಮ್ಮಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮನಸ್ಸು ತಣಿದ ನಂತರ ಆ ಒತ್ತಡಕ್ಕೆ ಕಾರಣವಾದ ಸಂಗತಿಗಳ ಕುರಿತು ಯೋಚಿಸಬೇಕು. ಅದನ್ನು ನಿವಾರಿಸುವುದು ಹೇಗೆ ಎಂದು ಯೋಚಿಸಬೇಕು. ಮನಸ್ಸು ಸಮಾಧಾನದಲ್ಲಿದ್ದಾಗ ಒತ್ತಡ ಉಂಟುಮಾಡುವ ಸಮಸ್ಯೆಯನ್ನು ಎದುರಿಸಲು ಧೈರ್ಯ ಬರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದರಿಂದ  ಹೇಗೆ ನಿಭಾಯಿಸಬೇಕು ಎನ್ನುವುದು ನಿಮಗೇ ತಿಳಿಯುತ್ತದೆ.

ಹಾಗೆಯೇ ನಮ್ಮ ಮನಸ್ಸಿನ ದುಗುಡವನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದೂ ಅಷ್ಟೇ ಮುಖ್ಯ. ಕುಟುಂಬದವರೊಂದಿಗೇ ಎಲ್ಲವನ್ನೂ ಹಂಚಿಕೊಳ್ಳಲಿಕ್ಕೆ ಆಗದಿರಬಹುದು. ಆಗ ನಿಮ್ಮ ಆಪ್ತ ಸ್ನೇಹಿತರೊಂದಿಗೆ ಮಾತನಾಡಿ. ಒತ್ತಡದ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳೇ ಬರುತ್ತಿರುತ್ತವೆ.  ಎಲ್ಲವೂ ನಕಾರಾತ್ಮವಾಗಿಯೇ ಕಾಣುತ್ತಿರುತ್ತದೆ. ಆಗ ಆಪ್ತರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಅವರ ಸಲಹೆ ಪಡೆದುಕೊಂಡರೆ ಅದೂ ಸಹಾಯವಾಗುತ್ತದೆ.

ಒತ್ತಡವನ್ನು ಹೆಚ್ಚಿಸಿಕೊಳ್ಳುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಇನ್ನಷ್ಟು ಜಟಿಲವಾಗುತ್ತದಷ್ಟೆ. ಅದರಿಂದ ನಮ್ಮ ಆರೋಗ್ಯವೂ ಹದಗೆಡುತ್ತದೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುವುದಕ್ಕಿಂತ, ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕಲಿತುಕೊಂಡರೆ ನೀವು ಮೂರ್ಖತನದ ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟಕ್ಕೆ ಎಂದಿಗೂ ಇಳಿಯುವುದಿಲ್ಲ.

ನಿರೂಪಣೆ: ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT