ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದ ಆಕಾಶಕ್ಕೆ ಲಗ್ಗೆಯಿಡುವ ದಾರಿಗಳು

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಧ್ಯಾತ್ಮದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದರ ವಿಶೇಷತೆ ಏನೆಂದರೆ ಅಧ್ಯಾತ್ಮದ ಅನುಭವಕ್ಕಾಗಿ ನಾವು ಏನನ್ನೂ ತೆರಬೇಕಿಲ್ಲ. ಇದರಲ್ಲಿ ಹಣದ ಸಹಭಾಗಿತ್ವವೇ ಇಲ್ಲ. ‘ಬೆಲೆ’ ಎನ್ನುವುದು ಅಧ್ಯಾತ್ಮದ ಅನುಭವದಲ್ಲಿ ಬರುವುದೇ ಇಲ್ಲ. ಯಾರು ಹೆಚ್ಚು ಕೊಡುತ್ತಾರೆ, ಯಾರು ಹೆಚ್ಚು ಪಡೆದುಕೊಳ್ಳುತ್ತಾರೆ ಎಂಬೆಲ್ಲ ಸ್ಪರ್ಧೆಗೂ ಇಲ್ಲಿ ಅವಕಾಶವಿಲ್ಲ.ಆತ್ಮೋನ್ನತಿಗೆ ಕಾರಣವಾಗಬಲ್ಲಂಥ, ನಮ್ಮ ಮನಸ್ಸಿಗೆ ಸಾಂತ್ವನ ನೀಡಬಲ್ಲ ಅಲೌಕಿಕ ಚೈತನ್ಯ ಇಂದು ಎಲ್ಲರ ಅವಶ್ಯಕತೆಯೂ ಹೌದು.

ಈ ಅನುಭವ ನಮಗೆ ಯಾವಾಗ ಬೇಕಾದರೂ ಆಗಬಹುದು. ಸಂಗಾತಿ ನನಗಾಗಿ ಅದ್ಭುತ ಕಾಫಿಯೊಂದನ್ನು ಮಾಡಿ ತಂದು, ಕೈಗಿತ್ತಾಗ ನನಗೆ ಆ ಅನುಭವ ಆಗುತ್ತದೆ. ಸಹೋದರ/ರಿ ಅಥವಾ ಸ್ನೇಹಿತರು ‘ಸುಮ್ಮನೆ ಮಾತಾಡೋಣ ಬಾ’ ಎಂದು ಕರೆದಾಗ ನನಗೆ ಅನಿರ್ವಚನೀಯ ಸಾಂತ್ವನದ ಅನುಭವ ಆಗುತ್ತದೆ. ಯಾವ ನಿರ್ದಿಷ್ಟ ಉದ್ದೇಶವೂ ಇಲ್ಲದೆ, ಯಾವ ನಿರೀಕ್ಷೆ – ಬೇಡಿಕೆಗಳೂ ಇಲ್ಲದೆ, ಯಾವ ಒತ್ತಡವೂ ಇಲ್ಲದೆ ಒಬ್ಬಂಟಿಯಾಗಿ ಕುಳಿತಿರುವಾಗ ನನ್ನೊಳಗಿನ ‘ಪ್ರೇಮ’ದ ಅರಿವು ನನಗೇ ಆಗುತ್ತದೆ. ಒಬ್ಬಂಟಿ ಕುಳಿತಿರುವಾಗ ಟ್ಯೂಬ್‌ಲೈಟ್‌ ಆರಿಹೋಗಿ ಮತ್ತೆ ಒಮ್ಮಿಂದೊಮ್ಮೆಲೇ ಹೊತ್ತಿಕೊಳ್ಳುತ್ತದಲ್ಲ, ಆಗ ಆಗುವ ವಿಶಿಷ್ಟ ಅನುಭವದಲ್ಲಿಯೇ ಅಲೌಕಿಕತೆ ಇದೆ.

ಇಂಥ ವಿಶೇಷ ಸುಂದರ ಅನುಭವಗಳನ್ನು ಪ್ರತಿಕ್ಷಣ ಗ್ರಹಿಸಲು ಸಾಧ್ಯವಾಗುವಂತೆ ಮಾಡುವ ನಮ್ಮ ಇಂದ್ರಿಯಗಳೇ ನಮಗೆ ಸಿಕ್ಕ ದೊಡ್ಡ ಉಡುಗೊರೆ. ಮನಸ್ಸು ಶಾಂತ ಮತ್ತು ಜಾಗೃತವಾಗಿದ್ದಾಗ ಮಾತ್ರ ಇಂಥ ಸೂಕ್ಷ್ಮ ಗಳಿಗೆಗಳನ್ನು ಅನುಭವಿಸಲು ಸಾಧ್ಯ. ನಿಮ್ಮ ಸುತ್ತಲಿನ ಜಗತ್ತು ನೀಡುವ ಸಂಜ್ಞೆಗಳನ್ನು ಗಮನಿಸುತ್ತಿರಿ. ನಿಧಾನವಾಗಿ ಎಲ್ಲ ದಿಕ್ಕುಗಳಿಂದಲೂ ನಿಮ್ಮತ್ತ ಹರಿದುಬರುತ್ತಿರುವ ಪ್ರೇಮದ ಸೆಲೆಗಳು ಕಾಣಲು ಶುರುವಾಗುತ್ತವೆ. ಅಧ್ಯಾತ್ಮದ ಆಕಾಶಕ್ಕೆ ಲಗ್ಗೆಯಿಡಲು ಹಲವು ಅಂಶಗಳು ಅವಶ್ಯಕ.

ಹಣೆಪಟ್ಟಿಗಳನ್ನು ಕಳಚಿ: ನಮ್ಮ ಮಿತಿಯನ್ನು ಮೀರಿ ಇರುವ ಸಂಗತಿಗಳನ್ನು ಕಾಣುವ ಹಂಬಲವೂ ಅಧ್ಯಾತ್ಮದಲ್ಲಿ ಅತಿ ಮುಖ್ಯ. ನಿಮ್ಮ ಭೌತಿಕ ಅಸ್ತಿತ್ವವನ್ನು ಮೀರಿ ಆಲೋಚಿಸಿ. ಇದಕ್ಕಾಗಿ ನಾವು ನಮ್ಮ ಭೌತಿಕ ಬದುಕಿಗೆ ಅಂಟಿಕೊಂಡಿರುವ ಹಣೆಪಟ್ಟಿಗಳನ್ನು ಕಳಚಿಡಲು ಸಿದ್ಧರಾಗಬೇಕು. ಉದಾಹರಣೆಗೆ ಇಂದು ನಾನು ‘ಬರಹಗಾರ’ ಎಂಬ ಹಣೆಪಟ್ಟಿಯನ್ನು ಕಳಚಿಟ್ಟೆ ಎಂದುಕೊಳ್ಳಿ.

ಅದರಿಂದ ನಾನು ಕುಗ್ಗುವುದಿಲ್ಲ. ಇಂಥ ಭೌತಿಕ ಹಣೆಪಟ್ಟಿಗಳ ಮೇಲೆಯೇ ಗಮನ ಕೇಂದ್ರೀಕರಿಸುವುದನ್ನು ಬಿಟ್ಟು, ನಮ್ಮ ಮನಸ್ಸನ್ನು ಹಿಗ್ಗಿಸಿಕೊಂಡರೆ ಅಲ್ಲಿ ಅನಂತವಾದ ಇನ್ನೊಂದು ಅವಕಾಶ ಇರುವುದು ಅನುಭವಕ್ಕೆ ಬರುತ್ತದೆ. ಅದು ಅಧ್ಯಾತ್ಮದ ಅವಕಾಶ.ಅಧ್ಯಾತ್ಮಿಕದ ಆಕಾಶವನ್ನು ಕಂಡುಕೊಳ್ಳುವುದು ತುಂಬ ಆಳವಾದ ಬದಲಾವಣೆ. ಆ ಅವಕಾಶವನ್ನು ಮುಟ್ಟುವುದೆಂದರೆ ಸಾವನ್ನೂ ಬದುಕಿನ ವಿಸ್ತರಣೆ ಎಂದು ಒಪ್ಪಿಕೊಳ್ಳುವುದು.

ಯಾವಾಗ ನೀವು ಭೌತಿಕ ಗುರುತುಗಳ ಬೆನ್ನುಬೀಳುವುದು ಬಿಡುತ್ತೀರೋ, ಆಗ ಎಲ್ಲರನ್ನೂ ಖುಷಿಗೊಳಿಸಬೇಕು ಎಂಬ ಹಟವೂ ಇಲ್ಲವಾಗುತ್ತದೆ. ಅಧ್ಯಾತ್ಮದ ಅವಕಾಶಕ್ಕೆ ಅಡಿಯಿಟ್ಟಾಗ ‘ವಾವ್‌! ಇದು ನನ್ನ ಅಸ್ತಿತ್ವಕ್ಕಿಂತ ಎಷ್ಟು ಅನಂತವಾಗಿದೆಯಲ್ಲ’ ಎಂಬ ಭಾವ ಆವರಿಸಿಕೊಳ್ಳುತ್ತದೆ. ಇಲ್ಲಿ ನಿಮ್ಮ ಅನುಭವಕ್ಕೆ ಬರುವ ಚೈತನ್ಯ ಭೌತಿಕ ಶರೀರದ ಸಾಮರ್ಥ್ಯವಲ್ಲ. ಅದು ನಿಶ್ಶಬ್ದವಾದದ್ದು, ಭವ್ಯವಾದದ್ದು. ವಿಶ್ವಾತ್ಮಕ ಚೈತನ್ಯದಲ್ಲಿ ಬೆರಗಿನಿಂದ ತೇಲುತ್ತಿರುವಾಗ ಭೌತಿಕ ಸಾಮರ್ಥ್ಯದ ಕುರಿತು ಇರುವ ಹೆಮ್ಮೆಗಳೆಲ್ಲ ಅಳಿಸಿ ಹೋಗುತ್ತವೆ.

ಉದ್ದೇಶವೆನ್ನುವುದು ಔನತ್ಯದ ದಾರಿ: ಅಧ್ಯಾತ್ಮದ ಇನ್ನೊಂದು ಅವಶ್ಯಕತೆ ಉದ್ದೇಶ. ಉದ್ದೇಶವೆನ್ನುವುದು ಎಷ್ಟು ಮುಖ್ಯವೆಂದರೆ ಅದರಿಂದಲೇ ನಾವು ಅನುದಿನವೂ ಹಾಸಿಗೆಯಿಂದ ಏಳುವುದು. ಬದುಕುವ ಆಸೆ ಹುಟ್ಟುವುದೂ ಉದ್ದೇಶದ ಕಾರಣದಿಂದಲೇ. ಉದ್ದೇಶವೇ ನಮ್ಮ ನಿರ್ದೇಶಿಸುತ್ತದೆ. ಅದರ ಪ್ರೇರಣೆಯಿಂದಲೇ ನಾವು ಚೈನತ್ಯವನ್ನು ಗಳಿಸಿಕೊಳ್ಳುವುದು; ಬದುಕನ್ನು ಸಂಘಟಿಸಿಕೊಳ್ಳುವುದು. ನಮ್ಮ ಬದುಕು ಸ್ಪಷ್ಟವಾದ ಉದ್ದೇಶದಿಂದ ಕೂಡಿದ್ದರೆ ಅದು ಅರ್ಥಪೂರ್ಣವೂ ಆಗುತ್ತದೆ. ನಮ್ಮ ಅಂತರಂಗ ಅದನ್ನು ಆಸ್ವಾದಿಸುತ್ತದೆ.

ಆದರೆ ನಮ್ಮ ಬದುಕಿನ ಉದ್ದೇಶವನ್ನು ಅಹಂಕಾರ ಹೈಜಾಕ್‌ ಮಾಡದಂತೆ ಎಚ್ಚರ ವಹಿಸುವುದೂ ಅಷ್ಟೇ ಅವಶ್ಯಕ. ಈ ಎಚ್ಚರ ಇದ್ದಾಗಲೇ ಉದ್ದೇಶದ ಪಾವಿತ್ರ್ಯ ಮತ್ತು ನಮ್ಮ ವ್ಯಕ್ತಿತ್ವದ ಪರಿಶುದ್ಧತೆ ಎರಡೂ ಉಳಿದುಕೊಳ್ಳುವುದು. ನಾನು ಉದ್ಯಾನವನದ ಮಾಲಿಯಾಗಿದ್ದರೆ, ನಾನು ಸುಂದರವಾದ ಹೂಗಿಡಗಳನ್ನು ಬೆಳೆಸಬಹುದು. ಆದರೆ ಅಸಹನೆಯ ವ್ಯಕ್ತಿಯಾಗಿದ್ದರೆ, ಸಿನಿಕನಾಗಿದ್ದರೆ, ಹಗೆಯಿಂದ ನನ್ನ ಮನಸ್ಸು ಹೊಗೆಯಾಡುತ್ತಿದ್ದರೆ, ಅಹಂಕಾರಿಯಾಗಿದ್ದರೆ, ನನ್ನ ಮನಸ್ಸಿನೊಳಗೆ ಮಂದಹಾಸ, ಪ್ರೇಮ, ದೈವೀಗುಣದ ಒಂದು ಸುಂದರ ಹೂತೋಟವನ್ನು ಬೆಳೆಸುವುದು ಸಾಧ್ಯವಾಗುವುದಿಲ್ಲ.

ಉದ್ದೇಶ ಎನ್ನುವುದು ನನ್ನ ಹೃದಯದ ಭಾವನೆಯನ್ನು ಅಭಿವ್ಯಕ್ತಿಗೊಳಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಹೃದಯವನ್ನು ತೆರೆದುಕೊಳ್ಳುವುದು ಎಂದರೆ ಹರ್ಷದ ಹೊನಲನ್ನು ಹರಿಬಿಡುವ ಸುಂದರ ಪರಿಸರದ ಕಿಟಕಿಯನ್ನು ತೆರೆದಂತೆ. ಆ ಕಿಟಕಿಯನ್ನು ಹೆಚ್ಚು ಹೆಚ್ಚು ತೆರೆದಂತೆಲ್ಲ, ನಮ್ಮ ಬದುಕಿನ ಉದ್ದೇಶವೂ ಅಷ್ಟೇ ಅರ್ಥಪೂರ್ಣವಾಗುತ್ತ ಹೋಗುತ್ತದೆ. ಈ ಹವ್ಯಾಸವನ್ನು ಬೆಳೆಸಿಕೊಂಡರೇ ನಾವು ಏನೇ ಮಾಡಿದರೂ ಅದು ಉದ್ದೇಶಪೂರ್ಣವಾಗಿರುತ್ತದೆ ಮತ್ತು ಅರ್ಥಪೂರ್ಣವೂ ಆಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ಬದ್ಧತೆ ಹುಟ್ಟಿಕೊಳ್ಳುವುದೂ ಆಗಲೇ. ಈ ಹಂತದಲ್ಲಿ ನಮ್ಮ ಮನಸ್ಸಿಗೆ ಎರವಾಗುವ ಎಲ್ಲ ಅನುಭವವೂ ರೋಮಾಂಚವನ್ನೇ ಉಂಟುಮಾಡುತ್ತವೆ.

ಸಕಾರಾತ್ಮಕತೆಯ ನೂಲಿನಲ್ಲಿ ಬದುಕನ್ನು ಹೆಣೆಯಿರಿ: ಅಧ್ಯಾತ್ಮವು ಬೇಡುವ ಇನ್ನೊಂದು ಅನುಭವವೆಂದರೆ ಸುಸಂಘಟನಾ ಸಾಮರ್ಥ್ಯ. ಛಿದ್ರಗೊಂಡ ಬದುಕನ್ನು ಸಕಾರಾತ್ಮಕತೆಯ ನೂಲಿನಲ್ಲಿ ಹೆಣೆಯುವ ಕಲೆ ನಮ್ಮದಾಗಿರಬೇಕು. ಒಂದು ಉದಾಹರಣೆಯೊಂದಿಗೆ ಈ ವಿಷಯನ್ನು ಅರ್ಥಮಾಡಿಕೊಳ್ಳಬಹುದು.

ಒಮ್ಮೆ ಒಬ್ಬ ಮನುಷ್ಯ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ. ಅವನನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಲಾಯಿತು. ಅಲ್ಲಿ ಅವನು ತನ್ನನ್ನು ತಾನೇ ಸೂಕ್ಷ್ಮವಾಗಿ ಗಮನಿಸಿಕೊಳ್ಳುತ್ತಿದ್ದ. ಯಾವಾಗ  ಅವನು ಈ ಎದೆನೋವಿನಿಂದ ಹಾರ್ಟ್‌ ಅಟ್ಯಾಕ್‌ ಆಗಬಹುದು, ಇನ್ನು ಮುಂದೆ ಸಲೀಸಾಗಿ ಬದುಕು ಸಾಗಿಸುವುದು ಸಾಧ್ಯಿವಿಲ್ಲ ಎಂದೆಲ್ಲ ಯೋಚನೆ ಮನಸ್ಸಿಗೆ ಬಂದಾಗ ಅವನ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ಏರುತ್ತಿತ್ತು. ನಂತರ ತನ್ನನ್ನು ತಾನೆ ಸಮಾಧಾನ ಮಾಡಿಕೊಂಡು ‘ಇದು ಬರೀ ಸ್ನಾಯುಸೆಳೆತದ ನೋವಷ್ಟೆ. ನನಗೇನೂ ಆಗಿಲ್ಲ. ಬಹುಬೇಗನೇ ವಾಸಿಯಾಗುತ್ತದೆ. ನಾಳೆಯೇ ನಾನು ಎಂದಿನಂತೆ ಖುಷಿಯಿಂದ ಆಫೀಸಿಗೆ ಹೋಗಲು ಸಿದ್ಧನಾಗುತ್ತೇನೆ. ಎಂದು ಯೋಚಿಸಿದಾಗೆಲ್ಲ ಹೃದಯಬಡಿತ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೊನೆಗೆ ಅವನು ಸಕಾರಾತ್ಮಕ ಯೋಚನೆಗಳ ಸಹಾಯದಿಂದಲೇ ಪೂರ್ತಿ ಗುಣಮುಖನಾಗಿ ಮನೆಗೆ ಹೋದ.

ವಾಸ್ತವ ಏನೆಂದರೆ, ಯಾವಾಗ ನಮಗೆ ಭೌತಿಕ ಹಸಿವಿಗಿಂತ ಅಧ್ಯಾತ್ಮಿಕ ಹಸಿವು ಅವಶ್ಯಕ ಅನಿಸುತ್ತದೆಯೋ, ಆಗ ನಮ್ಮ ಬದುಕು ಇನ್ನಷ್ಟು ಆರೋಗ್ಯಕರ ಮತ್ತು ಸಂತೋಷಕರವಾಗುತ್ತದೆ. ದಾಂಪತ್ಯ ಬದುಕಿನ ಸಂಕಷ್ಟದ ಸಂದರ್ಭಗಳಲ್ಲಿ ಅಂತರಂಗ, ಸಮಾಧಾನ, ಕಾಳಜಿಗಳ ಮೂಲಕ ಸಂಬಂಧಗಳನ್ನು ರಕ್ಷಿಸಲು ಬಯಸುತ್ತಿರುತ್ತದೆ. ಅದೇ ಸಮಯದಲ್ಲಿ ನಮ್ಮ ಬಾಹ್ಯಮನಸ್ಸು ‘ನಾನೇ ಸರಿ, ನೀನು ತಪ್ಪು’ ಎಂದು ಕಿರುಚುತ್ತಿರುತ್ತದೆ. ನಮ್ಮೊಳಗಿನ ಆಧ್ಯಾತ್ಮಿಕ ಚೈತನ್ಯ ಸಾಮರಸ್ಯ, ಪ್ರಾಮಾಣಿಕತೆ, ಶಾಂತಿಯನ್ನು ಬಯಸುತ್ತಿರುತ್ತದೆ. ಅದಕ್ಕೆ ಆ ವಾತಾವರಣವನ್ನು ಕಲ್ಪಿಸಿಕೊಡಿ. ಆಗ ನಿಮ್ಮ ಬದುಕಿನ ಆಳ–ಅಗಲಗಳು ಬದಲಾಗುತ್ತವೆ. ಖುಷಿ ತಂತಾನೆಯೇ ಬದುಕನ್ನು ತುಂಬಿಕೊಳ್ಳುತ್ತದೆ.

ಅಧ್ಯಾತ್ಮಿಕದ ಆಕಾಶವನ್ನು ಕಂಡುಕೊಳ್ಳುವುದು ತುಂಬ ಆಳವಾದ ಬದಲಾವಣೆ. ಆ ಅವಕಾಶವನ್ನು ಮುಟ್ಟುವುದೆಂದರೆ ಸಾವನ್ನೂ ಬದುಕಿನ ವಿಸ್ತರಣೆ ಎಂದು ಒಪ್ಪಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT