ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್: ಗೆಲುವು ಖಚಿತವಿಲ್ಲದ ಪ್ರಬಲ ಪ್ರತಿಸ್ಪರ್ಧಿ

ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡರೂ ನವಾಜ್ ಷರೀಫ್ ಅವರ ಪ್ರಾಬಲ್ಯ ಮುರಿಯುವುದು ಸುಲಭವಲ್ಲ
Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಇಮ್ರಾನ್ ಖಾನ್ ಅವರು ನಿಮ್ಮ ಪಕ್ಷಕ್ಕೆ ಸರಿಯಾದ ವ್ಯಕ್ತಿಯೇ’ ಎಂದು 1992ರಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಸುದ್ದಿ ವಾಹಿನಿಯೊಂದರ ನಿರೂಪಕರು ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಕೇಳಿದ್ದರು. ಆಗ ಇಮ್ರಾನ್ ಖಾನ್ ಇಡೀ ಪಾಕಿಸ್ತಾನದ ಹೀರೊ ಆಗಿದ್ದರು.

‘ಬಹಳ ಹಿಂದೆಯೇ ನಾನು ಅವರನ್ನು ಆಹ್ವಾನಿಸಿದ್ದೆ, ಆದರೆ ಅವರು ನಿರಾಕರಿಸಿದ್ದಾರೆ’ ಎಂದು ಇಮ್ರಾನ್ ಅವರ ಭುಜ ತಟ್ಟುತ್ತಾ ಷರೀಫ್ ಹೇಳಿದ್ದರು. ಅಲ್ಲಿ ಸೇರಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ದೊಡ್ಡದಾಗಿ ನಗಾಡಿದ್ದರು.

ಆಕರ್ಷಕ ಕ್ರೀಡಾಪಟುವಾಗಿದ್ದ ಇಮ್ರಾನ್ ಬ್ರಿಟನ್‌ನ ಹಲವು ಪ್ರಸಿದ್ಧ ಮಹಿಳೆಯರ ಜತೆಗಿನ ನಂಟಿನಿಂದಾಗಿ ಶೋಕಿವಾಲ ಎಂದೇ ಪ್ರಸಿದ್ಧರಾಗಿದ್ದರು. ಕೆಲವು ವರ್ಷ ಬಳಿಕ ಅವರು ತಮ್ಮದೇ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸ್ಥಾಪಿಸಿ ಅದರ ಮೂಲಕ ರಾಜಕೀಯಕ್ಕೆ ಬಂದರು.

ಷರೀಫ್ ಅವರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳು ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಸಾಕು ಎಂದು ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 67 ವರ್ಷದ ಷರೀಫ್ ಅವರು ಮೂರು ಬಾರಿ ಪ್ರಧಾನಿಯಾದವರು ಮತ್ತು ದಶಕಗಳಿಂದ ಪಾಕಿಸ್ತಾನ ರಾಜಕಾರಣದ ದಿಕ್ಕನ್ನು ನಿರ್ಧರಿಸುತ್ತಿರುವವರು.

64 ವರ್ಷದ ಇಮ್ರಾನ್ ಅವರಿಗೆ ಇದು ಸಿಹಿ ಗಳಿಗೆ. ಯಾಕೆಂದರೆ ನ್ಯಾಯಾಲಯದಲ್ಲಿ ಮುಖ್ಯ ಫಿರ್ಯಾದಿದಾರರೇ ಇಮ್ರಾನ್ ಅವರು. ಅಷ್ಟೇ ಅಲ್ಲದೆ, ದೇಶದುದ್ದಕ್ಕೂ ಬೀದಿ ಪ್ರತಿಭಟನೆಗಳನ್ನೂ ನಡೆಸಿದ್ದರು. ಈ ಮೂಲಕ ಪ್ರಧಾನಿ ಹುದ್ದೆಯ ಅತ್ಯಂತ ಶಕ್ತಿಯುತವಾದ ಆಕಾಂಕ್ಷಿ ಎಂದು ಇಮ್ರಾನ್ ಬಿಂಬಿತವಾಗಿದ್ದಾರೆ.

ಆದರೆ, 2018ರ ಮಧ್ಯಭಾಗದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಅವರ ಗೆಲುವು ಖಚಿತವೇನೂ ಅಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಯುನೈಟೆಡ್ ಸ್ಟೇಟ್‌ ಇನ್‌ಸ್ಟಿಟ್ಯೂಟ್‌ ಆಫ್ ಪೀಸ್‌ನ ಏಷ್ಯಾ ಕೇಂದ್ರದ ಸಹಉಪಾಧ್ಯಕ್ಷ, ಪಾಕಿಸ್ತಾನವನ್ನೇ ಕೇಂದ್ರೀಕರಿಸಿ ಸಂಶೋಧನೆ ನಡೆಸುತ್ತಿರುವ ಮೊಯೀದ್ ಯೂಸುಫ್ ಅವರದ್ದೂ ಇದೇ ಅಭಿಪ್ರಾಯ.

‘ಪನಾಮಾ ದಾಖಲೆ ಸೋರಿಕೆಯ ಹಗರಣವನ್ನು ಬಿಟ್ಟು ನೋಡಿದರೆ ನವಾಜ್ ಷರೀಫ್ ಅವರ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಖಚಿತ’ ಎಂದು ಪಾಕಿಸ್ತಾನಕ್ಕೆ ಇತ್ತೀಚೆಗೆ ನೀಡಿದ ಭೇಟಿಯ ವೇಳೆ ಕೊಟ್ಟ ಸಂದರ್ಶನದಲ್ಲಿ ಮೊಯೀದ್ ಹೇಳಿದ್ದಾರೆ.

ಷರೀಫ್ ಮತ್ತು ಅವರ ಮಕ್ಕಳು ತಮ್ಮ ಅಪಾರ ಸಂಪತ್ತನ್ನು ವಿದೇಶಗಳ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದಾರೆ ಮತ್ತು ಹೂಡಿಕೆ ಮಾಡಿದ್ದಾರೆ ಎಂದು ಕಳೆದ ವರ್ಷ ಸೋರಿಕೆಯಾದ ಪನಾಮಾ ದಾಖಲೆಗಳು ಹೇಳಿರುವುದನ್ನೇ ಮೊಯೀದ್ ಅವರು ಹಗರಣ ಎಂದು ಉಲ್ಲೇಖಿಸಿದ್ದಾರೆ.

ಷರೀಫ್ ಅವರ ಪದಚ್ಯುತಿಯ ನಂತರ ಇಮ್ರಾನ್ ಅವರು ವಿಜಯಕ್ಕೆ ಹೆಚ್ಚು ಹತ್ತಿರವಾಗಿದ್ದಾರೆ ಎಂಬುದನ್ನು ಮೊಯೀದ್ ಅವರು ಒಪ್ಪುವುದಿಲ್ಲ. ಇಮ್ರಾನ್ ಅವರು ವಿಜಯಕ್ಕೆ ಹತ್ತಿರವಾಗಲಿದ್ದಾರೆಯೇ ಎಂಬುದು ಅವರ ವರ್ತನೆಯ ಮೇಲೆ ಮತ್ತು ಷರೀಫ್ ಅವರ ಮುಂದಿನ ನಡೆಯ ಮೇಲೆ ಹಾಗೂ ಭ್ರಷ್ಟಾಚಾರ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಏನು ಮಾಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಷರೀಫ್ ಮತ್ತು ಅವರು ಕುಟುಂಬದ ಸದಸ್ಯರ ಮೇಲೆ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮುಂದಿನ ಆರು ತಿಂಗಳಲ್ಲಿ ಆದೇಶ ನೀಡಬೇಕು ಎಂದು ಭ್ರಷ್ಟಾಚಾರ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಷರೀಫ್ ಮತ್ತು ಅವರ ಕುಟುಂಬದ ವಿರುದ್ಧ ನ್ಯಾಯಾಲಯವು ನಿರ್ಣಾಯಕ ಆದೇಶ ನೀಡಬಹುದು ಎಂಬ ಬಗ್ಗೆ ಶಂಕೆ ಇದೆ. ಒಂದು ವೇಳೆ ಷರೀಫ್ ಅವರಿಗೆ ಮತ್ತೆ ಪ್ರಧಾನಿಯಾಗುವುದು ಸಾಧ್ಯವಾಗದೇ ಇದ್ದರೂ ಸಂಸತ್ತಿನಲ್ಲಿ ಪಿಎಂಎಲ್-ಎನ್ ಪ್ರಾಬಲ್ಯ ಮುಂದುವರಿಯಲಿದೆ.

ಇಮ್ರಾನ್ ಅವರು ಭಾನುವಾರ ಇಸ್ಲಾಮಾಬಾದ್‌ನಲ್ಲಿ ಭಾರಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಆಡಳಿತ ಪಕ್ಷಕ್ಕೆ ಎದುರೇಟು ನೀಡುವಂತಹ ವಿರೋಧ ಪಕ್ಷವಾಗಿ ಹೊಮ್ಮಿದ ಸಂಭ್ರಮ ಅವರ ಮಾತಿನಲ್ಲಿ ಇತ್ತು.

1996ರಲ್ಲಿ ಇಮ್ರಾನ್ ಅವರು ಪಿಟಿಐ ಪಕ್ಷ ಆರಂಭಿಸಿದಾಗ ರಾಜಕೀಯವಾಗಿ ಅವರು ಏನೂ ಅಲ್ಲ ಎಂಬ ಭಾವನೆಯೇ ಇತ್ತು. ನಂತರದ ವರ್ಷಗಳಲ್ಲಿ ಇಮ್ರಾನ್ ತೆರೆಮರೆಯಲ್ಲಿಯೇ ಇದ್ದು ವೈಫಲ್ಯ ಅನುಭವಿಸಿದ್ದಾರೆ.

2011ರವರೆಗೂ ಇಮ್ರಾನ್ ಅವರಿಗೆ ಜನಾಕರ್ಷಣೆಯ ಕೇಂದ್ರವಾಗಲು ಸಾಧ್ಯವಾಗಲಿಲ್ಲ. ಆದರೆ ಬಳಿಕ ಅವರ ಪಕ್ಷದ ಸಮಾವೇಶಗಳಿಗೆ ಜನರು ಭಾರಿ ಸಂಖ್ಯೆಯಲ್ಲಿ ಸೇರಲು ಆರಂಭಿಸಿದರು. ಸಮಾವೇಶಗಳಿಗೆ ಬರುತ್ತಿದ್ದ ಹೆಚ್ಚಿನ ಜನ ವಿದ್ಯಾವಂತರು, ನಗರದ ಯುವ ಜನರು, ವ್ಯವಸ್ಥೆಯ ಬಗ್ಗೆ ಅತೃಪ್ತಿ ಇದ್ದವರು ಮತ್ತು ಇಮ್ರಾನ್ ಅವರ ಜನಾಕರ್ಷಕ ನಿಲುವುಗಳು, ಭ್ರಷ್ಟಾಚಾರ ವಿರೋಧಿ ಮತ್ತು ಅಮೆರಿಕ ವಿರೋಧಿ ಹೇಳಿಕೆಗಳ ಸೆಳೆತಕ್ಕೆ ಒಳಗಾದವರು. ದೇಶದಿಂದ ಹೊರಗೆ ಇರುವ ಪಾಕಿಸ್ತಾನಿಯರಿಗೆ ಇಮ್ರಾನ್ ಅವರ ಪಕ್ಷದ ಬಗ್ಗೆ ಒಲವಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಿಟಿಐ ಬಹಳ ಪ್ರಬಲವಾಗಿದೆ.

ನಗರ ಪ್ರದೇಶಗಳಲ್ಲಿ ಗಟ್ಟಿ ನೆಲೆ ಕಂಡುಕೊಂಡರೂ ಷರೀಫ್ ಅವರ ಪ್ರಾಬಲ್ಯ ಮುರಿಯಲು ಇಮ್ರಾನ್‌ಗೆ ಸಾಧ್ಯವಾಗಿಲ್ಲ. ಷರೀಫ್ ಕುಟುಂಬ ಪ್ರಾಬಲ್ಯ ಇರುವ ಪಂಜಾಬ್ ಮತ್ತು ಇತರ ಎರಡು ಪ್ರಾಂತ್ಯಗಳಲ್ಲಿಯೂ ಇಮ್ರಾನ್ ಅವರಿಗೆ ನೆಲೆ ಇಲ್ಲ. ಷರೀಫ್ ಅವರನ್ನು ಬೆಂಬಲಿಸುವ ವಿಸ್ತಾರವಾದ ರಾಜಕೀಯ ಜಾಲವೇ ಇದೆ. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಅವರ ಪಕ್ಷ ಬಹುಮತ ಪಡೆದರೆ, 342 ಸದಸ್ಯ ಬಲದ ನ್ಯಾಷನಲ್ ಅಸೆಂಬ್ಲಿಯಲ್ಲಿ (ಸಂಸತ್ತು) ಇಮ್ರಾನ್ ಅವರ ಪಕ್ಷ ಗೆದ್ದಿರುವುದು 33 ಸ್ಥಾನಗಳನ್ನು ಮಾತ್ರ.

ಆದರೆ ಕಳೆದ ಚುನಾವಣೆಯ ಬಳಿಕ ಷರೀಫ್ ಅವರ ಪ್ರಬಲ ಪ್ರತಿಸ್ಪರ್ಧಿಯಾಗಿ ಇಮ್ರಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಷರೀಫ್ ಅವರು ಯಥಾಸ್ಥಿತಿವಾದಿ ಮತ್ತು ರಾಜಕೀಯ ವ್ಯವಸ್ಥೆಯನ್ನು ಕುಲಗೆಡಿಸಿರುವ ಭ್ರಷ್ಟಾಚಾರದ ಪೋಷಕ ಎಂದು ಜನರಿಗೆ ಇಮ್ರಾನ್ ಹೇಳುತ್ತಿದ್ದಾರೆ.

ಷರೀಫ್ ಅವರು ಪ್ರಧಾನಿ ಕುರ್ಚಿಯಲ್ಲಿ ಸ್ವಸ್ಥವಾಗಿ ಕುಳಿತುಕೊಳ್ಳದಂತೆ ಇಮ್ರಾನ್ ನೋಡಿಕೊಂಡಿದ್ದಾರೆ. ಇಮ್ರಾನ್ ನಡೆಸಿದ ಚಳವಳಿಗಳ ಜನಪ್ರಿಯತೆಯಿಂದಾಗಿ ಸಂಸತ್ತಿನಲ್ಲಿ ಬಹುಮತ ಇದ್ದರೂ ರಾಜಕೀಯ ಮೇಲುಗೈ ಪಡೆಯಲು ಷರೀಫ್ ಅವರಿಗೆ ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಸೇನೆ ಅಲ್ಲಿನ ಸರ್ಕಾರಕ್ಕಿಂತ ಹೆಚ್ಚು ಪ್ರಭಾವಿ. ಇಂತಹ ಸೇನೆಯ ಜತೆಗಿನ ಸಂಘರ್ಷ ಕೂಡ ಷರೀಫ್ ಅವರನ್ನು ಕಷ್ಟಕರ ಸ್ಥಿತಿಗೆ ದೂಡಿತ್ತು. ಸೇನೆಗೆ ಇಮ್ರಾನ್ ಅವರ ಬಗ್ಗೆ ಒಲವಿದೆ. ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಚುನಾವಣೆ ಮುಗಿಯುತ್ತಿದ್ದಂತೆಯೇ ಷರೀಫ್‌ ವಿರುದ್ಧ ಇಮ್ರಾನ್ ಆರೋಪ ಮಾಡಿದ್ದರು. ಸಾವಿರಾರು ಪ್ರತಿಭಟನಾಕಾರರ ಜತೆ ರಾಜಧಾನಿ ಇಸ್ಲಾಮಾಬಾದ್‌ಗೆ ಮುತ್ತಿಗೆ ಹಾಕಿದ್ದರು. ಕೆಲವು ತಿಂಗಳು ಈ ಮುತ್ತಿಗೆಯನ್ನು ಮುಂದುವರಿಸಿದ್ದರು.

ಪನಾಮಾ ದಾಖಲೆ ಸೋರಿಕೆಯಾದ ಬಳಿಕ 2016ರ ನವೆಂಬರ್‌ನಲ್ಲಿ ಮತ್ತೆ ಇಸ್ಲಾಮಾಬಾದ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಷರೀಫ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಮೇಲೆ ಇನ್ನಿಲ್ಲದ ಒತ್ತಡ ಹೇರಿದ್ದರು ಮತ್ತು ಅದು ಈಗ ಪ್ರಧಾನಿಯ ಪದಚ್ಯುತಿಯವರೆಗೆ ಬಂದು ನಿಂತಿದೆ.

ಷರೀಫ್ ಅವರ ಉತ್ತರಾಧಿಕಾರಿಯ ಆಯ್ಕೆ ಸುಲಲಿತವಾಗಿ ನಡೆದರೆ ಮತ್ತು ಅವರು ಈಗಾಗಲೇ ಆರಂಭಿಸಿರುವ ವಿದ್ಯುತ್ ಉತ್ಪಾದನೆ ಹಾಗೂ ಮೂಲಸೌಕರ್ಯ ಯೋಜನೆಗಳು ಮುಂದಿನ ಚುನಾವಣೆಗೆ ಮೊದಲೇ ಪೂರ್ಣಗೊಂಡರೆ ಪಿಎಂಎಲ್-ಎನ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

‘ಮುಂದಿನ ಪ್ರಧಾನಿಯನ್ನು ಯಾವುದೇ ಗೊಂದಲ ಇಲ್ಲದೆ ಷರೀಫ್ ಅವರು ಆಯ್ಕೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಷರೀಫ್ ಅವರಿಗೇ ಹೆಚ್ಚು’ ಎಂಬುದು ಮೊಯೀದ್ ಅವರ ಅಭಿಪ್ರಾಯ.

ಸೇನೆಯ ಜನರಲ್‌ಗಳು ಇಮ್ರಾನ್ ಅವರು ಪ್ರಧಾನಿಯಾಗುವುದನ್ನು ಬಯಸಲಿಕ್ಕಿಲ್ಲ ಎಂಬುದು ಇತರ ಕೆಲವು ವಿಶ್ಲೇಷಕರ ಅಭಿಪ್ರಾಯ. ಸೇನೆಯ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂದು ಕೆಲವರು ಇಮ್ರಾನ್ ಅವರನ್ನು ಟೀಕಿಸುತ್ತಾರೆ. ‘ತಾಲಿಬಾನ್ ಖಾನ್’ ಎಂದು ಕರೆದು ಅವರನ್ನು ಹಂಗಿಸುವವರೂ ಇದ್ದಾರೆ.

ಇಮ್ರಾನ್‌ಗೆ ಆಡಳಿತದ ಅನುಭವ ಇಲ್ಲ. ಸಂಸತ್ತಿನಲ್ಲಿ ಕುಳಿತು ಬದಲಾವಣೆ ತರಲು ಯತ್ನಿಸುವುದಕ್ಕಿಂತ ಬೀದಿ ಹೋರಾಟದ ಬಗ್ಗೆಯೇ ಅವರಿಗೆ ಹೆಚ್ಚು ಒಲವು. ಸಂಸದೀಯ ಪ್ರಕ್ರಿಯೆ ಬಗ್ಗೆ ಇಮ್ರಾನ್ ಹೊಂದಿರುವ ಅಸಡ್ಡೆಯ ಬಗ್ಗೆ ಹಲವು ರಾಜತಾಂತ್ರಿಕರು ಆಘಾತ ವ್ಯಕ್ತಪಡಿಸಿದ್ದಾರೆ. ಆದರೆ, ಇಮ್ರಾನ್ ಅವರು ಇತರ ರಾಜಕಾರಣಿಗಳ ಹಾಗೆ ಭ್ರಷ್ಟರಲ್ಲ ಎಂದು ಅವರ ಕಟ್ಟಾ ಅಭಿಮಾನಿಗಳು ಹೇಳುತ್ತಾರೆ. ಅವರು ನಡೆಸುತ್ತಿರುವ ಸಮಾಜಸೇವೆಯ ಕೆಲಸಗಳನ್ನು ತೋರಿಸಿ, ಇಮ್ರಾನ್ ಅವರು ದೇಶಕ್ಕೆ ಒಳ್ಳೆಯದು ಮಾಡುತ್ತಾರೆ ಎಂಬುದಕ್ಕೆ ಇದುವೇ ಉದಾಹರಣೆ ಎಂದು ಹೇಳುತ್ತಾರೆ.

ಷರೀಫ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಇಮ್ರಾನ್ ಒಂದು ಸಾಧನವಾಗಿ ಬಳಕೆಯಾಗಿದ್ದಾರೆಯೇ ಹೊರತು ಅವರ ಉತ್ತರಾಧಿಕಾರಿ ಆಗಲು ಸಾಧ್ಯವಿಲ್ಲ ಎಂದು ಹಡ್ಸನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಮತ್ತು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಹುಸೇನ್ ಹಕ್ಕಾನಿ ಹೇಳುತ್ತಾರೆ.

‘ಅಧಿಕಾರದಲ್ಲಿ ಎಂತಹ ವ್ಯಕ್ತಿ ಇರಬೇಕು ಎಂದು ವ್ಯವಸ್ಥೆ ಬಯಸುತ್ತದೆಯೋ ಅಂತಹ ವ್ಯಕ್ತಿ ಇಮ್ರಾನ್‌ ಅಲ್ಲ’ ಎಂದು ಹಕ್ಕಾನಿ ಅಭಿಪ್ರಾಯಪಡುತ್ತಾರೆ. ಹಕ್ಕಾನಿ ದೀರ್ಘ ಕಾಲದಿಂದ ಪಾಕಿಸ್ತಾನದ ರಾಜಕಾರಣವನ್ನು ತಿಳಿದವರು. ‘ಇಮ್ರಾನ್ ಅವರು ಚುರುಕು ಬುದ್ಧಿಯ, ಗುಟ್ಟು ಬಿಟ್ಟುಕೊಡದ ಚತುರ. ತಾವೇ ರಾಜಕೀಯ ನಾಯಕನಾಗಿ ರೂಪಿಸಿದ ಷರೀಫ್ ಅವರನ್ನು ಹೊರಗಟ್ಟಲು ಸೇನೆಯ ಜನರಲ್‌ಗಳಿಗೆ ಎರಡು ದಶಕಗಳು ಬೇಕಾದವು. ತಮಗೆ ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿಗೆ ಮತ್ತೆ ನೆರವಾಗಿ ಹಿಂದೆ ಮಾಡಿದ ತಪ್ಪನ್ನು ಅವರು ಪುನರಾವರ್ತಿಸಲಿಕ್ಕಿಲ್ಲ’ ಎಂದು ಹಕ್ಕಾನಿ ಅಭಿಪ್ರಾಯಪಡುತ್ತಾರೆ.

ಈ ಸಂಸತ್ತಿಗೆ ಅವಧಿ ಮುಂದಿನ ವರ್ಷದ ಮಧ್ಯಭಾಗದವರೆಗೆ ಇದೆ. ಸಂಸತ್ತು ಅವಧಿ ಪೂರ್ಣಗೊಳಿಸಬಹುದು ಎಂಬುದು ಹಕ್ಕಾನಿ ಅಭಿಪ್ರಾಯ. ‘ಸಂಸತ್ತು ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಪಕ್ಷಕ್ಕೆ ಬಹುಮತ ಇದೆ. ಹಾಗಾಗಿ ಅವಧಿಗೆ ಮೊದಲೇ ಚುನಾವಣೆ ನಡೆಸಲು ಕಾರಣಗಳಿಲ್ಲ. ಪಿಎಂಎಲ್– ಎನ್ ತನ್ನ ಅವಧಿ ಪೂರ್ಣಗೊಳಿಸಲಿದೆ’ ಎಂದು ಹಕ್ಕಾನಿ ಹೇಳುತ್ತಾರೆ.

ಇಮ್ರಾನ್ ವಿರುದ್ಧವೂ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗದಲ್ಲಿ ಪ್ರಕರಣಗಳು ದಾಖಲಾಗಿವೆ. ತಮ್ಮ ಸಂಪತ್ತನ್ನು ಬಹಿರಂಗಪಡಿಸಿಲ್ಲ ಮತ್ತು ಪಕ್ಷಕ್ಕೆ ವಿದೇಶಿ ದೇಣಿಗೆ ಪಡೆದಿದ್ದಾರೆ ಎಂಬ ಆರೋಪಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈ ಆರೋಪಗಳ ಕಾರಣಕ್ಕೇ ಇಮ್ರಾನ್ ಅವರನ್ನು ನ್ಯಾಯಾಲಯವು ಅನರ್ಹಗೊಳಿಸಬಹುದು ಎಂಬ ವದಂತಿಗಳು ಇವೆ. ಆದರೆ ಈ ಬಗ್ಗೆ ಕೇಳಿದರೆ ಇಮ್ರಾನ್ ನಕ್ಕುಬಿಡುತ್ತಾರೆ.

‘ನಾನು ಎಂದೂ ರಾಜಕೀಯ ಅಧಿಕಾರ ಸ್ಥಾನದಲ್ಲಿ ಇದ್ದವನಲ್ಲ. ನಾನು ಕ್ರಿಕೆಟ್ ಆಡುತ್ತಿದ್ದವನು ಎಂಬುದು ಇಡೀ ಜಗತ್ತಿಗೇ ಗೊತ್ತು. ನನ್ನ ಹಣಕಾಸಿನ ವ್ಯವಹಾರಗಳ ಎಲ್ಲ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದ್ದೇನೆ. ನಾನು ಅನರ್ಹಗೊಳ್ಳಲು ಹೇಗೆ ಸಾಧ್ಯ? ಇದೆಲ್ಲ ಬ್ಲ್ಯಾಕ್‌ಮೇಲ್ ತಂತ್ರ’ ಎಂದು ಸಂದರ್ಶನವೊಂದರಲ್ಲಿ ಇಮ್ರಾನ್ ಹೇಳಿದ್ದಾರೆ.

ಇಮ್ರಾನ್ ಅವರನ್ನು ಮೊಯೀದ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸುತ್ತಾರೆ.

‘ಮಹತ್ವದ ರಾಜಕೀಯ ಗೆಲುವು ಪಡೆಯುವುದಕ್ಕಾಗಿ ಎಲ್ಲ ಪ್ರತಿಕೂಲ ಸನ್ನಿವೇಶಗಳನ್ನು ಹಿಮ್ಮೆಟ್ಟಿಸಿದ ಪಕ್ಷ ಅಥವಾ ಚಳವಳಿಯೊಂದರ ನಾಯಕ ನೀವು. ಸಹನೆ ರೂಢಿಸಿಕೊಳ್ಳಿ ಎಂದು ಜನರು ನೀಡುವ ಸಲಹೆಯನ್ನು ಕೇಳುವ ಸ್ಥಿತಿಯಲ್ಲಿ ನೀವು ಈಗ ಇಲ್ಲ. ಗೆಲುವು ಮತ್ತು ಮೇಲುಗೈ ಪಡೆದ ಸಂಭ್ರಮಕ್ಕಿಂತ ಒಳ್ಳೆಯ ಸಲಹೆ ನಿಮ್ಮನ್ನು ಬಹುದೂರ ಕೊಂಡೊಯ್ಯತ್ತದೆ’ ಎಂದು ಮೊಯೀದ್ ಅವರು ಮಾರ್ಮಿಕವಾಗಿ ಹೇಳುತ್ತಾರೆ.

**

–ದಿ ನ್ಯೂಯಾರ್ಕ್‌ ಟೈಮ್ಸ್‌

–ಸಲ್ಮಾನ್‌ ಮಸೂದ್‌

(ಲೇಖಕ: ‘ದ ನೇಷನ್‌’ ಪತ್ರಿಕೆಯ ಸ್ಥಾನಿಕ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT