ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, ಆಗಸ್ಟ್‌ 02, 1967

50 ವರ್ಷಗಳ ಹಿಂದೆ
Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತಂಟೆಯ ಗಂಟೆ

ನವದೆಹಲಿ, ಆ. 1– ಎಲ್ಲ ಅಸಂತೋಷಕ್ಕೂ ಗಂಟೆಯೇ ಕಾರಣ ಎಂಬುದು ಲೋಕಸಭೆಯ ಸ್ಪೀಕರರ ಅಭಿಪ್ರಾಯ.

ಗೃಹಸಚಿವರ ವಿರುದ್ಧ ಹಕ್ಕುಬಾಧ್ಯತಾ ಸೂಚನೆಯನ್ನು ಚರ್ಚಿಸಿದ ಇಂದಿನ ಲೋಕಸಭೆಯ ಶ್ರಮದಾಯಕ ಅಧಿವೇಶನದ ನಂತರ ಸಾರ್ವಜನಿಕ ಸಭೆಯೊಂದರ ಅಧ್ಯಕ್ಷತೆ ವಹಿಸುವುದು ನಿಜಕ್ಕೂ ‘ಚೇತೋಹಾರಿ’ ಎಂಬುದನ್ನು ಡಾ. ಸಂಜೀವ ರೆಡ್ಡಿ ಒಪ್ಪಿಕೊಂಡರು.

‘ಸ್ಪೀಕರರಿಗೆ ಇದು ನಿಜಕ್ಕೂ ತುಂಬಾ ಶ್ರಮದಾಯಕ ಅಧಿವೇಶನ, ಉಪಾಧ್ಯಕ್ಷರಿಗೂ ಅಷ್ಟೇ’ ಎಂದು ಡಾ. ರೆಡ್ಡಿಯವರು ಶ್ರೀ ಆರ್.ಕೆ. ಖಾಡಿಲ್ಕರ್ ಅವರ ಕಡೆಗೆ ನೋಡಿ ನುಡಿದಾಗ ಎಲ್ಲರೂ ನಕ್ಕರು.

‘ಸದಸ್ಯರನ್ನು ಅಸಂತೋಷ ಗೊಳಿಸುವಂತಹ ಗಂಟೆ ಇಲ್ಲದ ಕಡೆ’ ಅಧ್ಯಕ್ಷತೆ ವಹಿಸಲು ತಮಗೆ ನಿಶ್ಚಿಂತೆ ಎಂದರು ಸ್ಪೀಕರ್.

ಸಂದರ್ಭ: ತಿಲಕರ ಪುಣ್ಯತಿಥಿ ಆಚರಣೆಯ ಅಂಗವಾಗಿ ವ್ಯವಸ್ಥಿತವಾಗಿದ್ದ ಸಾರ್ವಜನಿಕ ಸಮಾರಂಭ. ಅಧಿಕ ಸಂಖ್ಯೆಯಲ್ಲಿ ಪಾರ್ಲಿಮೆಂಟ್ ಸದಸ್ಯರು ಮತ್ತು ಗೃಹ ಸಚಿವ ಶ್ರೀ ಚವಾಣ್ ಹಾಜರಿದ್ದರು.

**

4ನೇ ಯೋಜನೆ ಒಳಗೆ ಕನ್ನಡ ನಿಘಂಟು ಪ್ರಕಟಣೆ

ಬೆಂಗಳೂರು, ಆ. 1– ಕನ್ನಡ ನಿಘಂಟಿನ ಪ್ರಕಟಣೆಯ ಕಾರ್ಯ ವಿಳಂಬವಾಗಿರುವುದೆಂದು ಇಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡ ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು, ‘ಕನ್ನಡ ಸಾಹಿತ್ಯ ಪರಿಷತ್ತಿನವರು ಈ ಕೆಲಸವನ್ನು ಮುಗಿಸಲು ಶಕ್ತರಾಗಿದ್ದಾರೆಂದು ಕಂಡರೆ ಅವರಿಗೆ ವಹಿಸಿಕೊಡಲಾಗುವುದು, ಇಲ್ಲವಾದರೆ ಪ್ರಕಟಣೆಯ ಸಂಬಂಧದಲ್ಲಿ ಬೇರೆ ವ್ಯವಸ್ಥೆ ಮಾಡುವ ವಿಚಾರವನ್ನು ಪರಿಶೀಲಿಸಲಾಗುವುದು’ ಎಂದರು.

ನಾಲ್ಕನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕನ್ನಡ ನಿಂಘಟಿನ ಪ್ರಕಟಣೆಯ ಕಾರ್ಯವನ್ನು ಮುಗಿಸಲಾಗುವುದೆಂದು ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರು ಶ್ರೀ ಎಂ.ಪಿ.ಎಲ್. ಶಾಸ್ತ್ರಿ ಅವರ ಪ್ರಶ್ನೆಗೆ ಉತ್ತರವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT