ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಬಳಗಕ್ಕೆ ಸರಣಿ ಜಯದ ಹುಮ್ಮಸ್ಸು

ಜ್ವರದಿಂದ ಬಳಲಿದ್ದ ರಾಜ್ಯದ ಕೆ.ಎಲ್.ರಾಹುಲ್ ಗುಣಮುಖ: ಮುಕುಂದ್‌ ಹೊರಗೆ ಉಳಿಯಬೇಕಾದುದು ಅನಿವಾರ್ಯ
Last Updated 2 ಆಗಸ್ಟ್ 2017, 20:20 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ್ದ ಭಾರತ ತಂಡ ಸರಣಿ ಜಯದ ಗುರಿಯೊಂದಿಗೆ ಗುರುವಾರ  ಕಣಕ್ಕಿಳಿಯಲಿದೆ.

ಮೂರು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ ಸಿಂಹಳೀಯ ಸ್ಪೋರ್ಟ್ಸ್‌ ಕ್ಲಬ್‌ (ಎಸ್‌ಎಸ್‌ಸಿ) ಮೈದಾನದಲ್ಲಿ ನಡೆಯಲಿದೆ. ಗಾಲ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬಳಗ 304 ರನ್‌ಗಳ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಶಿಖರ್‌ ಧವನ್‌ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿಧ್ದ ಸ್ಫೋಟಕ ಶತಕ, ಚೇತೇಶ್ವರ್ ಪೂಜಾರ ಅವರ ಅಮೋಘ 153 ರನ್‌, ಎರಡನೇ ಇನಿಂಗ್ಸ್‌ನಲ್ಲಿ ಅಭಿನವ್ ಮುಕುಂದ್‌ ಮತ್ತು ವಿರಾಟ್ ಕೊಹ್ಲಿ ಅವರ ಉತ್ತಮ ಬ್ಯಾಟಿಂಗ್‌, ರವೀಂದ್ರ ಜಡೇಜ–ರವಿಚಂದ್ರನ್ ಅಶ್ವಿನ್‌ ಜೋಡಿಯ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಮೊದಲ ಪಂದ್ಯದಲ್ಲಿ ಭಾರತಕ್ಕೆ ದಾಖಲೆಯ ಜಯ ಒಲಿದಿತ್ತು. ಇನ್ನೊಂದೆಡೆ ಶ್ರೀಲಂಕಾದ ಯುವ ಆಟಗಾರರು ಭಾರತಕ್ಕೆ ಉತ್ತರ ನೀಡಲು ವಿಫಲರಾಗಿದ್ದರು.

ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್‌ ಜ್ವರದಿಂದ ಬಳಲಿದ್ದ ಕಾರಣ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಶಿಖರ್ ಧವನ್‌ ಜೊತೆ ಇನಿಂಗ್ಸ್ ಆರಂಭಿಸಿದ ಅಭಿನವ್ ಮುಕುಂದ್‌ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾದರೂ ಎರಡನೇ ಇನಿಂಗ್ಸ್‌ನಲ್ಲಿ 81 ರನ್‌ ಗಳಿಸಿ ಮಿಂಚಿದ್ದರು. ರಾಹುಲ್‌ ಅನುಪಸ್ಥಿತಿಯಲ್ಲೂ ತಂಡ ವಿಜಯದುಂದುಭಿ ಮೊಳಗಿಸಿತ್ತು. ಈಗ ರಾಹುಲ್‌ ಗುಣಮುಖರಾಗಿದ್ದಾರೆ. ಅವರು ಕಣಕ್ಕೆ ಇಳಿಯಲು ಸಂಪೂರ್ಣ ಸಜ್ಜಾಗಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದು ಎರಡನೇ ಪಂದ್ಯದಲ್ಲಿ ಅವರಿಗಾಗಿ ಅಭಿನವ್‌ ಮುಕುಂದ್‌ ಅಥವಾ ಶಿಖರ್ ಧವನ್ ಹೊರಗೆ ಉಳಿಯಬೇಕಾದೀತು.

ಗಾಲ್‌ನಲ್ಲಿ ಧವನ್‌ 168 ಎಸೆತಗಳಲ್ಲಿ 190 ರನ್ ಸಿಡಿಸಿದ್ದರು. ಇದರಿಂದಾಗಿ ಭಾರತ ಮೊದಲ ದಿನವೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮುಕುಂದ್‌ ಅವರಿಗೆ ಮೊದಲ ಇನಿಂಗ್ಸ್‌ನಲ್ಲೇ ಮಿಂಚಲು ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳ ಹಿಂದೆ ಭಾರತ ಇಲ್ಲಿಗೆ ಬಂದಾಗಲೂ ಆರಂಭಿಕ ಆಟಗಾರರ ಸಮಸ್ಯೆ ಕಾಡಿತ್ತು. ಆಗ ಶಿಖರ್ ಧವನ್‌ ಮತ್ತು ಮುರಳಿ ವಿಜಯ್‌ ಗಾಯಗೊಂಡಿದ್ದ ಕಾರಣ ರಾಹುಲ್ ಮತ್ತು ಚೇತೇಶ್ವರ್ ಪೂಜಾರ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದರು.

ಆತಿಥೇಯರಿಗೆ ಪುಟಿದೇಳುವ ಆಸೆ

ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಆತಿಥೇಯ ಶ್ರೀಲಂಕಾ ಬಲಿಷ್ಠ ಭಾರತದ ಎದುರು ಸಪ್ಪೆಯಾಗಿತ್ತು. ಆದ್ದರಿಂದ ಎರಡನೇ ಪಂದ್ಯದಲ್ಲಿ ಪುಟಿದೆದ್ದು ಉತ್ತಮ ಆಟವಾಡುವ ನಿರೀಕ್ಷೆಯಲ್ಲಿದೆ. ಆದರೆ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಭಾರತದ ಎದುರು ಏಳನೇ ಸ್ಥಾನದಲ್ಲಿರುವ ಲಂಕಾ ಜಯ ಗಳಿಸಲು ಯಾವ ತಂತ್ರಗಳನ್ನು ಬಳಸುತ್ತದೆ ಎಂಬುದನ್ನು ಕಾದು ನೋಡಬೇಕು. ವರ್ಷದ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 3–0 ಅಂತರದಿಂದ ಗೆದ್ದಿದ್ದ ಶ್ರೀಲಂಕಾ ಈಗ ಬಲ ಕಳೆದುಕೊಂಡಿದೆ. ನ್ಯುಮೋನಿಯಾದಿಂದ ಬಳಲಿ ಮೊದಲ ಪಂದ್ಯದಲ್ಲಿ ಆಡದೇ ಇದ್ದ ನಾಯಕ ದಿನೇಶ್ ಚಾಂಡಿಮಲ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವುದು ತಂಡದಲ್ಲಿ ಭರವಸೆ ಮೂಡಿಸಿದೆ.

ಚಾಂಡಿಮಲ್‌ ಉತ್ತಮ ಬ್ಯಾಟ್ಸ್‌ಮನ್‌. ಭಾರತದ ವಿರುದ್ಧ ಎರಡು ವರ್ಷಗಳ ಹಿಂದೆ ನಡೆದ ಟೆಸ್ಟ್‌ನಲ್ಲಿ ಅವರು 169 ಎಸೆತಗಳಲ್ಲಿ 162 ರನ್ ಗಳಿಸಿದ್ದರು. ಆದ್ದರಿಂದ ಎರಡನೇ ಟೆಸ್ಟ್‌ನಲ್ಲಿ ಅವರು ತಂಡಕ್ಕೆ ಬಲ ತುಂಬುವ ವಿಶ್ವಾಸದಲ್ಲಿದ್ದಾರೆ. ಗಾಯಗೊಂಡಿರುವ ಅಸೇಲ ಗುಣರತ್ನೆ ಅವರ ಬದಲಿಗೆ ಉತ್ತಮ ಫಾರ್ಮ್‌ನಲ್ಲಿರುವ ಲಾಹಿರು ತಿರಿಮಾನ್ನೆ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಇದು ಕೂಡ ತಂಡದ ಭರವಸೆಗೆ ಕಾರಣವಾಗಿದೆ. ಒಂದು ವರ್ಷದ ಹಿಂದೆ ಕೊನೆಯದಾಗಿ ಟೆಸ್ಟ್ ಆಡಿರುವ ತಿರಿಮಾನ್ನೆ ಭಾರತ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಕುಂದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ರಂಗನಾ ಹೆರಾತ್‌ ಅವರನ್ನು ಕೈಬಿಡುವ ಪ್ರಸಂಗ ಬಂದರೆ ಅವರ ಬದಲಿಗೆ ಕಣಕ್ಕೆ ಇಳಿಯಲು ಎಡಗೈ ಸ್ಪಿನ್ನರ್‌ ಲಕ್ಷಣ್‌ ಸಂಡಗನ್‌ ತಂಡದಲ್ಲಿದ್ದಾರೆ. ಮೊದಲ ಟೆಸ್ಟ್‌ನಲ್ಲಿ  ಫೀಲ್ಡಿಂಗ್ ಮಾಡುವಾಗ ಹೆರಾತ್ ಅವರ ಕೈಬೆರಳಿಗೆ ಗಾಯವಾಗಿತ್ತು.

ಕೊಲಂಬೊ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಶ್ರೀಲಂಕಾಕ್ಕೆ ಮಿಶ್ರ ಫಲ ಲಭಿಸಿದೆ. ಇಲ್ಲಿ ಉಭಯ ತಂಡಗಳು ಒಟ್ಟು ಎಂಟು ಟೆಸ್ಟ್‌ಗಳನ್ನು ಆಡಿದ್ದು ನಾಲ್ಕು ಪಂದ್ಯಗಳು ಡ್ರಾ ಆಗಿವೆ. ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. 2015ರಲ್ಲಿ ಕೊನೆಯದಾಗಿ ನಡೆದ ಪಂದ್ಯದಲ್ಲಿ ಭಾರತ 117 ರನ್‌ಗಳಿಂದ ಜಯ ಗಳಿಸಿತ್ತು. 1993ರಲ್ಲಿ ಮಹಮ್ಮದ್ ಅಜರುದ್ದೀನ್‌ ನೇತೃತ್ವದ ಭಾರತ ತಂಡ ಇಲ್ಲಿ 235 ರನ್‌ಗಳಿಂದ ಜಯ ಸಾಧಿಸಿತ್ತು.

(ವಿಶ್ರಾಂತಿ ಸಮಯ)

ತಂಡಗಳು

ಭಾರತ: ವಿರಾಟ್‌ ಕೊಹ್ಲಿ (ಭಾರತ), ಶಿಖರ್ ಧವನ್‌, ಲೋಕೇಶ್ ರಾಹುಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಇಶಾಂತ್ ಶರ್ಮಾ, ಉಮೇಶ್‌ ಯಾದವ್‌, ಹಾರ್ದಿಕ್ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಮಹಮ್ಮದ್ ಶಮಿ, ಕುಲದೀಪ್‌ ಯಾದವ್‌, ಅಭಿನವ್‌ ಮುಕುಂದ್‌.

ಶ್ರೀಲಂಕಾ: ದಿನೇಶ್ ಚಾಂಡಿಮಲ್‌ (ನಾಯಕ), ಏಂಜೆಲೊ ಮ್ಯಾಥ್ಯೂಸ್‌, ಉಪುಲ್‌ ತರಂಗ, ದಿಮುತ್‌ ಕರುಣರತ್ನೆ, ನಿರೋಷನ್‌ ಡಿಕ್ವೆಲ್ಲಾ (ವಿಕೆಟ್‌ ಕೀಪರ್‌), ಕುಶಾಲ್‌ ಮೆಂಡಿಸ್‌, ಧನಂಜಯ ಡಿ ಸಿಲ್ವಾ, ಧನುಷ್ಕಾ ಗುಣತಿಲಕ, ಲಾಹಿರು ಕುಮಾರ, ವಿಶ್ವ ಫರ್ನಾಂಡೊ, ನುವಾನ್ ಪ್ರದೀಪ್‌, ರಂಗನಾ ಹೆರಾತ್‌, ದಿಲ್ರುವಾನ್‌ ಪೆರೇರ, ಮಲಿಂದ ಪುಷ್ಪಕುಮಾರ್‌, ಲಕ್ಷಣ್‌ ಸಂಡಗನ್‌, ಲಾಹಿರು ತಿರಿಮಾನ್ನೆ.

ಪೂಜಾರಗೆ 50ನೇ ಟೆಸ್ಟ್‌

ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅಮೋಘ 153 ರನ್‌ ಗಳಿಸಿದ್ದ ಚೇತೇಶ್ವರ್ ಪೂಜಾರ 50ನೇ ಟೆಸ್ಟ್ ಆಡುವ ಕನಸಿನಲ್ಲಿದ್ದಾರೆ. ಕಳೆದ ಬಾರಿ ಈ ಕ್ರೀಡಾಂಗಣದಲ್ಲಿ ಭಾರತ ಆಡಿದಾಗ ಆಕಸ್ಮಿಕವಾಗಿ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದ ಪೂಜಾರ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 145 ರನ್‌ ಗಳಿಸಿದ್ದರು. ನಂತರ ಅವರು ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡುತ್ತ ಬಂದಿದ್ದಾರೆ.

2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪೂಜಾರ ಈ ವರೆಗೆ 49 ಪಂದ್ಯಗಳಲ್ಲಿ (83 ಇನಿಂಗ್ಸ್‌) 3966 ರನ್‌ ಗಳಿಸಿದ್ದಾರೆ. ಔಟಾಗದೆ ಗಳಿಸಿದ 206 ರನ್ ಅವರ ಗರಿಷ್ಠ ಮೊತ್ತ. 12 ಶತಕ ಮತ್ತು 15 ಅರ್ಧಶತಕಗಳು ಅವರ ಖಾತೆಗೆ ಜಮೆ ಆಗಿವೆ. 52.18 ರನ್ ಸರಾಸರಿ ದಾಖಲೆ ಹೊಂದಿರುವ ಸೌರಾಷ್ಟ್ರದ ಈ ಆಟಗಾರ 48.17 ಸ್ಟ್ರೈಕ್‌ ರೇಟ್ ಹೊಂದಿದ್ದಾರೆ.

ಲಂಕಾದ ಪಂದ್ಯ ನೋಡಲು ಇಷ್ಟವಿಲ್ಲ: ರಣತುಂಗ

ಶ್ರೀಲಂಕಾ ತಂಡ ಇತ್ತೀಚೆಗೆ ಆಡುವ ವಿಧಾನ ಜಿಗುಪ್ಸೆ ಹುಟ್ಟಿಸಿದೆ. ಆದ್ದರಿಂದ ನಮ್ಮ ತಂಡದ ಪಂದ್ಯ ನೋಡುವುದನ್ನೇ ಬಿಟ್ಟಿದ್ದೇನೆ ಎಂದು ಮಾಜಿ ನಾಯಕ ಅರ್ಜುನ ರಣತುಂಗ ಹೇಳಿದ್ದಾರೆ. ನಾನು ಸದ್ಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯನ್ನು ವೀಕ್ಷಿಸಲು ಆದ್ಯತೆ ನೀಡುತ್ತಿದ್ದೇನೆ. ಈ ಸರಣಿಯ ನಾಲ್ಕನೇ ಪಂದ್ಯ ಆಗಸ್ಟ್ ನಾಲ್ಕರಂದು ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಭಾರತ ಮತ್ತು ಶ್ರೀಲಂಕಾ ಟೆಸ್ಟ್ ನಡೆಯುತ್ತಿರುತ್ತದೆ. ಆದರೆ ನಾನು ಇಂಗ್ಲೆಂಡ್‌–ಆಫ್ರಿಕಾ ಪಂದ್ಯವನ್ನೇ ವೀಕ್ಷಿಸುತ್ತೇನೆ’ ಎಂದು ಅವರು ಸ್ಥಳೀಯ ಸುದ್ದಿಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

* ರಾಹುಲ್‌ ತಂಡದ ಪ್ರಬಲ ಆರಂಭಿಕ ಬ್ಯಾಟ್ಸ್‌ಮನ್‌. ಅವರು ಈಗ ಅನಾರೋಗ್ಯದಿಂದ ಗುಣಮುಖರಾಗಿದ್ಧಾರೆ. ಆದ್ದರಿಂದ ಶಿಖರ್ ಧವನ್ ಅಥವಾ ಅಭಿನವ್ ಮುಕುಂದ್ ಅವರು ಹೊರಗುಳಿದು ರಾಹುಲ್‌ಗೆ ಅವಕಾಶ ಮಾಡಿಕೊಡಬೇಕಾದೀತು
– ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

====

* ಮೊದಲ ಪಂದ್ಯದಲ್ಲಿ ಸಾಧಿಸಿದ ಭಾರಿ ಜಯ ಭಾರತಕ್ಕೆ ಭರವಸೆ ತುಂಬಿದೆ

* ಲಂಕಾ ತಂಡಕ್ಕೆ ಮರಳಿದ ನಾಯಕ ದಿನೇಶ್‌ ಚಾಂದಿಮಲ್‌

* ಗಾಯಗೊಂಡಿರುವ ಅಸೇಲ ಗುಣರತ್ನೆ ಬದಲಿಗೆ ತಂಡದಲ್ಲಿ ಲಾಹಿರು ತಿರಿಮನ್ನೆ

=====

ಪಂದ್ಯ ಆರಂಭ: ಬೆಳಿಗ್ಗೆ 10
ನೇರ ಪ್ರಸಾರ: ಸೋನಿ

ಚೇತೇಶ್ವರ ಪೂಜಾರ ಟೆಸ್ಟ್‌ ಸಾಧನೆ

ಪಂದ್ಯ 49

ಇನಿಂಗ್ಸ್‌ 83

ನಾಟೌಟ್‌ 7

ಒಟ್ಟು ರನ್‌ 3966

ಗರಿಷ್ಠ 206*

ಸರಾಸರಿ 52.18

ಸ್ಟ್ರೈಕ್‌ರೇಟ್‌ 48.17

ಶತಕ 12

ಅರ್ಧಶತಕ 15

********

ಕೆ.ಎಲ್‌. ರಾಹುಲ್‌ ಟೆಸ್ಟ್‌ ಸಾಧನೆ

ಪಂದ್ಯ 17

ಇನಿಂಗ್ಸ್‌ 28

ನಾಟೌಟ್‌ 1

ಒಟ್ಟು ರನ್‌ 1200

ಗರಿಷ್ಠ 199

ಸರಾಸರಿ 44.44

ಸ್ಟ್ರೈಕ್‌ರೇಟ್‌ 56.41

ಶತಕ 4

ಅರ್ಧಶತಕ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT