ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಮನೆಗಳ ಅರುಣೋದಯ ಕಾಲ

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸ್ವಂತ ಮನೆಯ ಕನಸು ಶ್ರೀಮಂತನಿಗಷ್ಟೇ ಅಲ್ಲ, ಸಾಮಾನ್ಯನಿಗೂ ಇರುತ್ತದೆ. ಬಾಡಿಗೆ ಕಟ್ಟಿ ಸೋತ ಮನಸುಗಳು ಇದೀಗ ‘ತಮ್ಮ’ ಸ್ವಂತ ಮನೆಯ ಕನಸಿಗೆ ಇಳಿದಿವೆ. ಅಡ್ವಾನ್ಸ್‌ ಬದಲು ಡೌನ್‌ ಪೇಮೆಂಟ್‌ ಕಟ್ಟಿ, ಬಾಡಿಗೆ ಬದಲು ಇಎಂಐ ಕಟ್ಟುತ್ತಾ ‘ಇದು ನನ್ನ ಮನೆ’ ಎನ್ನುವ ಸಾರ್ಥಕದ ಕ್ಷಣಗಳನ್ನು ಕಳೆಯಲು ಬಯಸುವ ಸಾಮಾನ್ಯನಿಗೆ ಇದು ಸಂತಸ ಅರಳುವ ಸಮಯ.

ಹೌದು, ಈ ವರ್ಗದ ಮನೆಗಳ ಬೆಲೆಯಲ್ಲಿ ಈಗಾಗಲೇ ಶೇ 3ರಿಂದ 4ರಷ್ಟು ಕುಸಿತ ಕಂಡಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‌ಮೆಂಟ್‌ ಕೌನ್ಸಿಲ್ ವರದಿ ಹೇಳುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಗಳೂ ಹುಟ್ಟಿಕೊಂಡಿವೆ.

ಅಗ್ಗದ ಮನೆಗಳು ಲಕ್ಷಾಂತರ ಭಾರತೀಯರ ಭರವಸೆಯನ್ನು ಹೆಚ್ಚಿಸಿವೆ. ಬೆಂಗಳೂರು ಸಹ ಇದಕ್ಕೆ ಹೊರತಲ್ಲ. ಬಹುತೇಕ ವಲಸಿಗರಿಂದಲೇ ತುಂಬಿರುವ ಬೆಂಗಳೂರಿನಲ್ಲಿ ಮಧ್ಯಮ ವರ್ಗದ ಮನೆಗಳ ಕನಸಿರುವವರೇ ಹೆಚ್ಚು. ಇಲ್ಲಿ ಇದ್ದಷ್ಟು ದಿನ ಸ್ವಂತ ಮನೆಯ ನೆಮ್ಮದಿಯನ್ನುಂಡು, ನಂತರ ಮತ್ತೆ ತಮ್ಮ ನೆಲೆಗೆ ಮರಳಬೇಕಾಗಿ ಬಂದಾಗ ಈ ಮನೆಯನ್ನು ಮಾರಾಟ ಮಾಡಿ ಹೋಗಬಹುದು ಎನ್ನುವ ಲೆಕ್ಕಾಚಾರಕ್ಕೂ ಈ ಮನೆಗಳು ಅನುಕೂಲಕರ.

‘ಕೈಗೆಟುಕುವ ಮನೆಗಳ ಬೇಡಿಕೆ ಕಳೆದ ಐದಾರು ವರ್ಷಗಳಿಂದ ಈಚೆಗೆ ಹೆಚ್ಚಿದೆ. ವೈಟ್‌-ಕಾಲರ್‌ನ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳ, ಉದ್ಯೋಗಸ್ಥ ದಂಪತಿ ವರ್ಗ, ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದು ಸೂರು ಇರಬೇಕು ಎನ್ನುವ ಕೇಂದ್ರ ಸರ್ಕಾರದ ದೃಷ್ಟಿಕೋನ, ಹೆಚ್ಚುತ್ತಿರುವ ಆದಾಯ, ಚಿಕ್ಕದಾದರೂ ಸರಿ, ಸ್ವಂತದ್ದೊಂದು ಮನೆ ಇರಲಿ ಎನ್ನುವ ಯುವಜನರ ಮಹತ್ವಾಕಾಂಕ್ಷೆ ಈ ಮನೆಗಳು ಹೆಚ್ಚು ಖ್ಯಾತಿ ಪಡೆಯಲು ಕಾರಣವಾಗಿವೆ’ ಎನ್ನುತ್ತಾರೆ ಪುರವಂಕರ ಪ್ರಾಜೆಕ್ಟ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶೀಶ್ ಪುರವಂಕರ.

‘ಈ ಬೆಳವಣಿಗೆಯಲ್ಲಿ ಸರ್ಕಾರ ಹಾಗೂ ಆರ್‌ಬಿಐ ಪಾತ್ರವೂ ಸಾಕಷ್ಟಿದೆ. ರೇರಾ ಹಾಗೂ ಜಿಎಸ್‌ಟಿಯಂತಹ ಕ್ರಮಗಳು ಈ ವರ್ಗದ ಮನೆಗಳಿಗೆ ವರದಾನವಾಗಿಯೇ ಪರಿಣಮಿಸಿವೆ. ಮನೆ ಸಾಲಗಳ ಮೇಲಿನ ಬಡ್ಡಿದರವನ್ನು ಆರ್‌ಬಿಐ ಕಡಿಮೆಗೊಳಿಸಿದ್ದು ಅಗ್ಗದ ಮನೆಗಳತ್ತ ಆಸಕ್ತಿ ಹೆಚ್ಚಲು ಕಾರಣವಾಗಿದೆ’ ಎನ್ನುವ ವಿಶ್ಲೇಷಣೆ ಅವರದು.

ಉದ್ಯಮಿಗಳಿಗೂ ಪ್ರೋತ್ಸಾಹ: ಈ ವರ್ಗದ ಮನೆಗಳ ನಿರ್ಮಾಣದಲ್ಲಿ ಖಾಸಗಿ ವಲಯವೂ ಆಸಕ್ತಿ ಹೊಂದಿದೆ. ಸಾಂಸ್ಥಿಕ ಕ್ರೆಡಿಟ್‌ಗೆ (institutional credit.) ಹಣ ಸಂಗ್ರಹಿಸಲು ಡೆವಲಪರ್‌ಗಳಿಗೆ ಇದು ಹೊಸ ಮಾರ್ಗಗಳನ್ನು ತೆರೆದಿದೆ. ಹೊಸ ಕಾಯ್ದೆ–ಕಾನೂನುಗಳಡಿ ಈ ವಲಯದ ಮನೆಗಳಿಗೆ ಕೆಲವು ವಿನಾಯಿತಿಗಳು ಇರುವುದೂ ಸಹ ಅಗ್ಗದ ಮನೆಗಳ ವಲಯ ದಾಪುಗಾಲು ಹಾಕಲು ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಈ ವರ್ಗದ ಮನೆಗಳಿಗೆ ಬೇಡಿಕೆಯೂ ಹೆಚ್ಚಲಿದೆ. ಡೆವಲಪರ್‌ಗಳೂ ಇನ್ನು ಮುಂದೆ ಕೋಟಿಗಳ ಲೆಕ್ಕದ ಮನೆಗಳನ್ನು ಕಡಿಮೆ ಮಾಡಿ, ಕೈಗೆಟುಕುವ ದರದ ಮನೆಗಳ ನಿರ್ಮಾಣದತ್ತ ಮನಸು ಮಾಡಲಿದ್ದಾರೆ. ಈ ಬೆಳವಣಿಗೆ ಈಗಾಗಲೇ ಅನೇಕ ಅಂತರರಾಷ್ಟ್ರೀಯ ಉದ್ಯಮಿಗಳನ್ನು ಆಕರ್ಷಿಸಿದೆ. ಭವಿಷ್ಯದ ಈ ಹೂಡಿಕೆದಾರರು ವಿವಿಧ ವಿಭಾಗಗಳಲ್ಲಿ ಕೈಗೆಟುಕುವ ವಸತಿ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

ಅಲ್ಲದೆ, ಈ ಬೆಳವಣಿಗೆ ರೇರಾ ಹಾಗೂ ಜಿಎಸ್‌ಟಿ ಅನುಷ್ಠಾನದಿಂದ ಬಹುತೇಕ ಗೊಂದಲಕ್ಕಿಳಿದ ಡೆವೆಲಪರ್‌ಗಳು ಮತ್ತು ಖರೀದಿದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿದೆ.

ಲಕ್ಸುರಿ ಮನೆಗಳಿಗೇನೂ ಬಾಧೆ ಇಲ್ಲ: ಅಗ್ಗದ ಮನೆಗಳ ಬೇಡಿಕೆ ಹೆಚ್ಚುತ್ತಿದೆ ಎಂದರೆ ಲಕ್ಸುರಿ ಮನೆಗಳ ಬೇಡಿಕೆ ಕುಸಿದಿದೆ ಎಂದು ಅರ್ಥವಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಲಕ್ಸುರಿ ಅಥವಾ ಪ್ರೀಮಿಯಂ ವಿಭಾಗದ ಮನೆಗಳ ಬೇಡಿಕೆಯಲ್ಲಿ ಒಂದು ನಿಶ್ಚಲತೆ ಇರುವುದಂತೂ ಸತ್ಯ. ಪ್ರೀಮಿಯಂ ವಿಭಾಗದ ಮನೆಗಳ ಬೇಡಿಕೆಯಲ್ಲಿ ಮಂದಗತಿ ಕಂಡುಬರಲು ಬೇರೆ ಬೇರೆ ಕಾರಣಗಳು ಇವೆ. ಹೀಗಾಗಿ ಕೈಗೆಟುಕುವ ಮನೆಗಳಿಗೆ ಬೇಡಿಕೆ ಹೆಚ್ಚುವುದು ಮತ್ತು ಐಷಾರಾಮಿ ವಿಭಾಗದಲ್ಲಿ ಬೇಡಿಕೆ ಕುಸಿಯುವುದು ಈ ಎರಡರ ನಡುವೆ ಪರಸ್ಪರ ಸಂಬಂಧವನ್ನು ಕಲ್ಪಿಸಲಾಗದು.

ಆದಾಗ್ಯೂ ಈಗ ಕೈಗೆಟುಕುವ ಮನೆಗಳ ಗ್ರಾಹಕರ ನಡುವೆ ಐಷಾರಾಮಿ ವಿಭಾಗದ ಗ್ರಾಹಕರು ತುಸು ದಿನ ತಟಸ್ಥರಾಗಿಯೇ ಉಳಿಯುತ್ತಾರೆ ಎಂದೇ ಹೇಳಬಹುದು.

ಇತ್ತೀಚಿನ ಪ್ರಮುಖ ಬೆಳವಣಿಗೆಯಾದ ಜಿಎಸ್‌ಟಿ ಪರಿಣಾಮದ ಬಗ್ಗೆ ಮಾತನಾಡುವುದಾದರೆ, ಸಿಮೆಂಟ್ ಮತ್ತು ಉಕ್ಕು ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಮೇಲಿನ ತೆರಿಗೆಯಲ್ಲಿ ಇಳಿಕೆ ಕಂಡಿದೆ. ಇದರಿಂದ ಡೆವೆಲಪರ್‌ಗಳು ಯೋಜನೆಯ ವೆಚ್ಚವನ್ನು ಕಡಿಮೆ ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳು ಕೈಗೆಟುಕುವ ವಸತಿ ಮತ್ತು ಮಧ್ಯಮ-ವಿಭಾಗದ ವಸತಿಗೆ ಸಕಾರಾತ್ಮಕ ಮಾರ್ಗವನ್ನು ತೆರೆದಿಟ್ಟಿವೆ. ಮುಂಬರುವ ವರ್ಷಗಳಲ್ಲಿ ಈ ವಿಭಾಗಗಳಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ಕಾಣುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರಿಯಾಲ್ಟಿ ತಜ್ಞರು.

*
ಅನೇಕ ದೊಡ್ಡ ದೊಡ್ಡ ಉದ್ಯಮಿಗಳೂ ಸಹ ಈಗ ಕೈಗೆಟುಕುವ ವಸತಿ ವಿಭಾಗದಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಏಕೆಂದರೆ ಭವಿಷ್ಯದ ರಿಯಲ್‌ ಎಸ್ಟೇಟ್‌ ಉದ್ಯಮ ವಲಯದಲ್ಲಿ ಇದೊಂದು ಮಹತ್ವದ ವಲಯವಾಗಿ ಬೆಳೆಯಲಿದೆ.

ಪುರವಂಕರ ಲಿಮಿಟೆಡ್ ಕೂಡ ಈ ಬೆಳವಣಿಗೆಯ ಪ್ರಯೋಜನವನ್ನು ಪಡೆಯುತ್ತಿದೆ. ಪ್ರೊವಿಡೆಂಟ್‌ ಹೌಸಿಂಗ್ ಲಿಮಿಟೆಡ್‌ ಅಡಿಯಲ್ಲಿ ಈ ಹೊಸ ಅಲೆಯಲ್ಲಿ ಈಜಲು ಸಜ್ಜಾಗಿದೆ.
–ಅಶೀಶ್ ಪುರವಂಕರ,
ವ್ಯವಸ್ಥಾಪಕ ನಿರ್ದೇಶಕ, ಪುರವಂಕರ ಪ್ರಾಜೆಕ್ಟ್ಸ್ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT