ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ವೈದಿಕರ ಗುಲಾಮರಲ್ಲ...

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವೀರಶೈವ, ಲಿಂಗಾಯತ ವಿಷಯದಲ್ಲಿ ಪರ-ವಿರೋಧದ ಕೂಗು ದಿನೇ ದಿನೇ ಹೆಚ್ಚುತ್ತಿದ್ದು ಈಗಾಗಲೇ ಇರುವ ಗೊಂದಲಗಳು ಇನ್ನಷ್ಟು ವಿಸ್ತರಣೆಯಾಗುತ್ತಿವೆ. 12ನೇ ಶತಮಾನದಲ್ಲಿ ಧಾರ್ಮಿಕ ಅಸಮಾನತೆಯನ್ನು ಸಾರಾಸಗಟಾಗಿ ಖಂಡಿಸಿದ ಬಸವಾದಿ ಶರಣರೆಲ್ಲಾ ಸೇರಿ ಸತ್ಯ, ಶುದ್ಧ, ಕಾಯಕ, ದಾಸೋಹದ ತಳಹದಿಯಲ್ಲಿ ‘ಲಿಂಗಾಯತ’ ಎಂಬ ಹೊಸ ಧರ್ಮ ಹುಟ್ಟು ಹಾಕಿದರು. ಇಂತಹ ಲಿಂಗಾಯತ ಧರ್ಮವು ಸಾರ್ವಕಾಲಿಕ ಮಾನ್ಯತೆ ಹೊಂದಬೇಕಾಗಿದೆ. ಇನ್ನಾದರೂ ವೈದಿಕರ ಕಪಿಮುಷ್ಟಿಯಿಂದ ಲಿಂಗಾಯತ ಧರ್ಮ ಮುಕ್ತಿ ಹೊಂದಬೇಕೆನ್ನುವುದೇ ನಮ್ಮ ಗುರಿ ಮತ್ತು ಉದ್ದೇಶ.

‘ಹಿಂದೂ’ ಒಂದು ಧರ್ಮವಲ್ಲ. ಅದಕ್ಕೊಂದು ಧರ್ಮಗ್ರಂಥವೂ ಇಲ್ಲ. ಅದು ಕೇವಲ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡ ಆಚರಣೆಯೆಂದು ಗುರುತಿಸಬಹುದಷ್ಟೇ. ಆದರೆ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಕಟ್ಟಳೆಗಳಿವೆ, ಚೌಕಟ್ಟುಗಳಿವೆ. ಬೌದ್ಧ, ಜೈನ, ಸಿಖ್‌ ಧರ್ಮಗಳಿಗೆ ಹೇಗೆ ಅವುಗಳದ್ದೇ ಆದ ಧಾರ್ಮಿಕ ನೆಲೆಯಿದೆಯೋ ಹಾಗೆಯೇ ಲಿಂಗಾಯತ ಧರ್ಮಕ್ಕೂ ಪ್ರತ್ಯೇಕವಾದ ನೆಲೆ ಎಂಬುದಿದೆ.

ಲಿಂಗಾಯತ ಧರ್ಮದ ವಿಶೇಷ ಗುಣವೇನೆಂದರೆ, ಅದು ಅಸ್ಪೃಶ್ಯತೆಗೆ ಒಳಗಾದ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿ ಪಕ್ಷಿ ಸೇರಿದಂತೆ ಸಕಲ ಜೀವ ಸಂಕುಲವನ್ನು ಸಮಾನವಾಗಿ ಕಂಡಿರುವುದು. ಪುರೋಹಿತಶಾಹಿ ಹಾಗೂ ವರ್ಣಾಶ್ರಮದ ವ್ಯವಸ್ಥೆಯನ್ನು ಒಳಗೊಂಡ ವೈದಿಕ ಪದ್ಧತಿಯ ವಿರುದ್ಧ, ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಸಮರ ಸಾರಿದ ಬಸವಾದಿ ಶರಣರನ್ನು ಬೆಂಬಲಿಸಿದ್ದು ತಳಸಮುದಾಯದ ಜನರೇ ಹೊರತು ಮೇಲ್ವರ್ಗದವರಲ್ಲ. ಒಂದರ್ಥದಲ್ಲಿ, ಲಿಂಗಾಯತ ಧರ್ಮವು ಪುರೋಹಿತಶಾಹಿ, ಶೈವ, ವೀರಶೈವರಿಂದ ತುಳಿತಕ್ಕೊಳಗಾಗಿತ್ತು. ಇದರಿಂದ ಸಿಡಿದೆದ್ದ ದಮನಿತ ಸಮುದಾಯಗಳ ಧರ್ಮವೇ ಲಿಂಗಾಯತ ಧರ್ಮವಾಯಿತು.

ಗುರುನಾನಕರು ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಒಂದು ಹೊಸ ಪಂಥ ಸ್ಥಾಪಿಸಿದರು. ಬುದ್ಧನ ವಿಷಯದಲ್ಲೂ ಹೀಗೇ. ವಿಕಾಸವಾದದ ಹಿನ್ನೆಲೆಯಲ್ಲಿ ಬೇರೆ ಬೇರೆ ಧಾರ್ಮಿಕ ಪಂಥಗಳು ಬದಲಾದಂತೆ ಶೈವರು ಕೂಡಾ ಒಂದು ಹಂತದಲ್ಲಿ ವೀರಶೈವರಾದರು. ಒಂದು ಕಾಲಘಟ್ಟದಲ್ಲಿ ಪಂಚಪೀಠದವರು ಶೈವರಿಂದ ದೂರ ಸರಿದು ವೀರಶೈವ ಪಂಥ ಮಾಡಿಕೊಂಡರೇನೋ ನಿಜ, ಆದರೆ ವರ್ಣಾಶ್ರಮ ವ್ಯವಸ್ಥೆ ಮತ್ತು ವೈದಿಕ ಪದ್ಧತಿಯನ್ನು ವಿರೋಧಿಸಲಿಲ್ಲ.

ಆ ಕಾರಣಕ್ಕಾಗಿಯೇ ಬಸವಣ್ಣನವರು ಬರೀ ಧರ್ಮಪ್ರಚಾರಕರಾಗದೇ ತತ್ವಜ್ಞಾನಿಯಾಗಿ, ವೈದಿಕಶಾಹಿ ವಿರುದ್ಧ ಮನುಕುಲದ ಸರ್ವಾಂಗೀಣ ಒಳಿತಿಗಾಗಿ ಸಮತಾವಾದದ ವಿಚಾರಗಳನ್ನು ಬಿತ್ತಿದರು. ಅಂತೆಯೇ ಆ ಕಾಲಘಟ್ಟದಲ್ಲಿನ ಅಸ್ಪೃಶ್ಯರು, ಶ್ರಮಿಕರು, ಅವಮಾನಿತರು ಮತ್ತು ದಲಿತರೆಲ್ಲ ಒಟ್ಟಾಗಿ ಅಂದಿನ ಕ್ರೂರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಬಸವಣ್ಣನ ಅನುಯಾಯಿಗಳಾದರು. ಆಗ ಅದು ಲಿಂಗಾಯತ ಧರ್ಮವೆಂದು ರೂಪುಗೊಂಡಿತು.

ವೈಚಾರಿಕ ಹಿನ್ನೆಲೆಯುಳ್ಳ ಬಸವತತ್ವಗಳೆಲ್ಲವೂ ನಮ್ಮ ಬದುಕಿನ ಜೀವಾಳ. ಆದರೆ, ಅವು ಇಂದು ವೀರಶೈವರ ಕಪಿಮುಷ್ಟಿಯಲ್ಲಿ ನಲುಗುತ್ತಿವೆ. ಲಿಂಗಾಯತ ಸ್ವತಂತ್ರ ಧರ್ಮವೆಂದು ಮನ್ನಣೆ ಪಡೆಯುವ ಸುಯೋಗ ಈಗ ಬಂದಿದೆ. ಮುಖ್ಯಮಂತ್ರಿ ಇದಕ್ಕೆ ಸ್ಪಂದಿಸಿ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿದ್ಧರಾಗಿದ್ದಾರೆ.

ಲಿಂಗಾಯತರಿಗೆ ಸಂವಿಧಾನಬದ್ಧವಾಗಿ ಹೊಸ ಧರ್ಮದ ಮಾನ್ಯತೆ ಸಿಗುವುದಕ್ಕೆ ಪಂಚಪೀಠಗಳು ಅವಕಾಶ ಮಾಡಿಕೊಡ ಬೇಕು. ಬಸವಣ್ಣನವರ ಕಾಯಕ ಧರ್ಮಕ್ಕೆ ಶಕ್ತಿ ತುಂಬಲು ಎಲ್ಲರೂ ಬೆಂಬಲ ಸೂಚಿಸಬೇಕು.

– ಬಿ.ಆರ್‌. ಪಾಟೀಲ, ಶಾಸಕ, ಆಳಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT