ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ: ವೇದ ವಿರೋಧಿಯೇ?

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಸವಣ್ಣನವರು ವೇದಗಳನ್ನು ವಿರೋಧಿಸುತ್ತಲೇ ಬಂದವರು. ಅದರಲ್ಲಿದೆ ಎಂದು ಅವರು ಅಂದುಕೊಂಡ ವರ್ಣಾಶ್ರಮ ಧರ್ಮವನ್ನು, ಅಸಮಾನತೆಯನ್ನು, ಯಜ್ಞಯಾಗಾದಿಗಳನ್ನು ಖಂಡಿಸುತ್ತಿದ್ದರೆಂಬುದು ಅವರ ವಚನಗಳಿಂದ ತಿಳಿದುಬರುತ್ತದೆ.

ನನ್ನ ಅನಿಸಿಕೆಯಂತೆ ಬಸವಣ್ಣನವರು– ಬ್ರಾಹ್ಮಣ ವರ್ಣದಲ್ಲಿ ಹುಟ್ಟಿದ್ದರೂ– ವೇದಾಧ್ಯಯನ ಮಾಡಿದ ಹಾಗೆ ಕಾಣುವುದಿಲ್ಲ. ಏಕೆಂದರೆ, ಅವರು ರಾಜಕೀಯದಲ್ಲಿ ಮುಳುಗಿದ್ದರಾದ ಕಾರಣ ವೇದಾಧ್ಯಯನಕ್ಕೆ ವ್ಯವಧಾನವಿರಲಿಲ್ಲ ಅಂತ ಕಾಣುತ್ತದೆ.

ಹಾಗಾಗಿ, ಆ ಕಾಲದ ಬ್ರಾಹ್ಮಣರ ಆಚರಣೆಗಳು, ಮಾತುಗಳನ್ನು ಕೇಳಿ ವೇದಗಳಲ್ಲಿ ಹೀಗೆಯೇ ಇದೆ ಅಂತ ಅವರು ಗ್ರಹಿಸಿರಬೇಕು. ‘ಮಂತ್ರವನ್ನು ಕೇಳಿಸಿಕೊಂಡ ಶೂದ್ರನ ಕಿವಿಯೊಳಕ್ಕೆ ಕಾದ ಸೀಸವನ್ನು ಸುರಿಯಬೇಕು’ ಅಂತ ಮನುಸ್ಮೃತಿಯಲ್ಲಿ ಅದ್ಯಾವನೋ ಸೇರಿಸಿದ ಶ್ಲೋಕವನ್ನು ಉದ್ಧರಿಸಿ ‘ಇದು ವೇದಾದೇಶ’ ಅಂತ ಹೇಳಿದರೂ ‘ಆ ಶ್ಲೋಕವು ವೇದ ಮಂತ್ರವಾಗಿರಬೇಕು’ ಎಂದುಕೊಂಡಿರಲು ಸಾಕು ಆ ಕಾಲದ ಜನ!

ಬಸವಣ್ಣನವರ ಕಾಲದಲ್ಲಾಗಲೇ ಬ್ರಾಹ್ಮಣರು ಸಹ ವೇದ ವಿರೋಧಿ ಆಚರಣೆಗಳನ್ನು ಪ್ರಾರಂಭಿಸಿ ವೈದಿಕ ಮಾರ್ಗದಿಂದ ಬಹಳ ದೂರ ಸರಿದಾಗಿತ್ತು! ಅರ್ಥವಿಲ್ಲದ ಶಾಸ್ತ್ರ– ಸಂಪ್ರದಾಯಗಳನ್ನವರು ಅನುಸರಿಸುತ್ತಿದ್ದರು. ಬ್ರಾಹ್ಮಣರೇ ಆಚರಿಸುತ್ತಿದ್ದುದರಿಂದ ಈ ಶಾಸ್ತ್ರ –ಸಂಪ್ರದಾಯಗಳು ವೇದೋಕ್ತವೇ ಆಗಿರಬೇಕು ಅಂತ ಜನ ಅಂದು ಕೊಂಡರೇ ವಿನಾ ವೇದಗಳನ್ನು ಪರಿಶೀಲಿಸುವ ಗೋಜಿಗೇ ಯಾರೂ ಹೋಗಲಿಲ್ಲ! ಅದೇ ದಾರಿಯನ್ನು ಬಸವಣ್ಣನವರೂ ಹಿಡಿದರು: ‘ವೇದಗಳಲ್ಲಿ ಹಾಗೆಲ್ಲಾ ಇದೆಯಾ? ಅಂತಹ ವೇದಗಳು ನಮಗೆ ಮಾನ್ಯವಲ್ಲ, ಅದರ ಬದಲಿಗೆ ಹೀಗೆ ಮಾಡಿ’ ಅಂತ ಜನರಿಗೆ ಕೆಲವು ವಚನಗಳನ್ನು ರಚಿಸಿ ಕೊಟ್ಟರು. ವಿಚಿತ್ರ ಏನು ಗೊತ್ತೇ? ಆ ವಚನಗಳು ವೇದಗಳದೇ ಕನ್ನಡಾನುವಾದದ ಹಾಗಿದ್ದವು! ಜನರಿಗೆ ಈ ವಚನಗಳು ಬಸವಣ್ಣನವರ ಹೊಸ ಸಂಶೋಧನೆಯ ಹಾಗೆ ಕಾಣಿಸಿದವು. ಏಕೆಂದರೆ ಅವರಿಗೆ ವೇದ ಗೊತ್ತಿರಲಿಲ್ಲವಲ್ಲಾ!

ನೋಡಿ, ಬಸವಣ್ಣನವರು ಸಮಾನತೆಯನ್ನು ಬೋಧಿಸಿದರು. ಸಮಾನತೆಯ ಬಗೆಗೆ ವೇದಗಳಲ್ಲಿ ಮಂತ್ರಗಳಿವೆ. ‘ದೇವನೊಬ್ಬ, ನಾಮ ಹಲವು’ ಅಂದರು ಬಸವಣ್ಣನವರು. ಈ ವಿಚಾರ ವೇದಗಳಲ್ಲೂ ಇದೆ. ‘ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ಅಂದರು ಬಸವಣ್ಣನವರು. ಪ್ರಾಣಿ ಹತ್ಯೆಯನ್ನು ನಿಷೇಧಿಸುವ ಹಲವಾರು ಮಂತ್ರಗಳು ವೇದಗಳಲ್ಲಿವೆ! ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬಸವಣ್ಣನವರು ಬಾಯಲ್ಲಿ ವೇದಗಳ ವಿರೋಧದ ಮಾತನಾಡುತ್ತಾ ಕೃತಿಯಲ್ಲಿ ವೇದಗಳ ಕನ್ನಡಾನುವಾದ ಮಾಡಿರುತ್ತಾರೆಂಬುದು ಸ್ಪಷ್ಟವಾಗುತ್ತದೆ! ಹೀಗಿರುವಾಗ ಬಸವಣ್ಣನವರದು ಬೇರೆ ಧರ್ಮ ಹೇಗಾಗುತ್ತದೆ ಎಂದು ಬಸವಣ್ಣನವರ ಅನುಯಾಯಿಗಳೇ ಹೇಳಬೇಕು.

ಇನ್ನು ಯಜ್ಞ ಯಾಗಾದಿಗಳನ್ನು ಬಸವಣ್ಣನವರು ವಿರೋಧಿಸಿದ್ದರು. ಯಜ್ಞ ಯಾಗಾದಿಗಳಲ್ಲಿ ಪಶುಬಲಿಯನ್ನು ಧೂರ್ತರು ಮಾಡುತ್ತಾರಲ್ಲದೆ ಅದಕ್ಕೆ ವೇದಾಧಾರವಿಲ್ಲ ಅಂತ ಮಹಾಭಾರತ ಸಾರುತ್ತದೆ. ಸಾತ್ವಿಕ ಯಜ್ಞಗಳಲ್ಲಿ ಹೋಮ ಮಾಡುವ ಸಮಿತ್ತುಗಳು, ಹವಿಸ್ಸುಗಳು ಹೊರಸೂಸುವ ಧೂಮದಲ್ಲಿ ಯಾವೆಲ್ಲ ಘಟಕಗಳಿರುತ್ತವೆ, ಅವುಗಳಿಂದ ವಾತಾವರಣದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಕಂಡುಕೊಳ್ಳುವ ವೈಜ್ಞಾನಿಕ ವಿಧಾನಗಳಾವುವೂ ಆ ಕಾಲದಲ್ಲಿ ಗೊತ್ತಿರಲಿಲ್ಲವಾದ ಕಾರಣ, ಪದಾರ್ಥಗಳನ್ನು ಸುಟ್ಟು ಹಾಳು ಮಾಡಲಾಗುತ್ತದೆ, ವಾತಾವರಣದಲ್ಲಿ ಹೊಗೆ ತುಂಬಿಕೊಂಡು ಉಸಿರು ಕಟ್ಟುತ್ತದೆ ಎಂಬಂತಹ ಕಣ್ಣಿಗೆ ಕಾಣುವ ವಿಚಾರಗಳಿಂದಾಗಿ ಬಸವಣ್ಣನವರು ಯಜ್ಞ ಯಾಗಾದಿಗಳನ್ನು ವಿರೋಧಿಸಿದ ಹಾಗೆ ಕಾಣುತ್ತದೆ. ಬಸವಣ್ಣನವರು ಈಗ ಇದ್ದಿದ್ದರೆ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುತ್ತಿದ್ದರೆಂದು ನನ್ನ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT