ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ಪ್ರೀತಿಯ ‘ಜುಗಲ್‌ಬಂದಿ’

Last Updated 4 ಆಗಸ್ಟ್ 2017, 14:39 IST
ಅಕ್ಷರ ಗಾತ್ರ

ಚಿತ್ರ: ಜಬ್ ಹ್ಯಾರಿ ಮೆಟ್ ಸೆಜಲ್ (ಹಿಂದಿ)
ನಿರ್ಮಾಣ: ಗೌರಿ ಖಾನ್
ನಿರ್ದೇಶನ: ಇಮ್ತಿಯಾಜ್ ಅಲಿ
ತಾರಾಗಣ: ಶಾರುಖ್ ಖಾನ್, ಅನುಷ್ಕಾ ಶರ್ಮ, ಸಯಾನಿ ಗುಪ್ತ

ಆಗೀಗ ನಾಯಕ-ನಾಯಕಿಯ ಕಂಗಳಲ್ಲಿ ಜುಗಲ್‌ಬಂದಿ. ನಿಶ್ಚಿತಾರ್ಥದ ಉಂಗುರ ಕಳೆದುಕೊಂಡವಳು ಅವಳು. ಪಂಜಾಬಿನ ತನ್ನೂರಿನ ಗೋಧಿತೆನೆಯ ಹೊಲವನ್ನು ಪದೇ ಪದೇ ಕನವರಿಸುವವನು ಅವನು. ವಿದೇಶದಲ್ಲಿ ಅವಳು ತನ್ನೊಳಗೆ ಹುದುಗಿರುವ ಇನ್ನೊಂದು ವ್ಯಕ್ತಿತ್ವ ಅನಾವರಣಗೊಳಿಸಿಕೊಂಡರೆ, ಲಾಗಾಯ್ತಿನಿಂದ ಹುಡುಕಾಟದಲ್ಲಿರುವ ಹೆಣ್ಣು ಜೀವ ಒಲಿದುಬಂದಂಥ ನಿರಾಳತೆ ಅವನಿಗೆ. ಇಬ್ಬರ ಕಣ್ಣುಗಳೂ ಸಂಧಿಸಿದಾಗಲೆಲ್ಲ ಭಾವಗಳ ವಿನಿಮಯವಾಗುತ್ತವೆ. ಅವನ್ನು ನೋಡುವಷ್ಟು ಸಂಯಮ ಪ್ರೇಕ್ಷಕರಾದ ನಮಗೆ ಇರಬೇಕು.

ನಿರ್ದೇಶಕ ಇಮ್ತಿಯಾಜ್ ಅಲಿ ಮೊದಲಿನಿಂದಲೂ ಪ್ರವಾಸದಲ್ಲಿನ ಹುಡುಕಾಟದ ಕಥನಗಳನ್ನೇ ಕಟ್ಟಿಕೊಟ್ಟವರು. ಪ್ರಜ್ಞಾಪೂರ್ವಕವಾಗಿಯೇ ಅವರು ಆ ‘ಟೆಂಪ್ಲೇಟ್’ ಮೇಲೆಯೇ ಸಿನಿಮಾ ವಿನ್ಯಾಸ ಮಾಡುತ್ತಾ ಬಂದಿದ್ದಾರೆ. ಈ ಸಿನಿಮಾದಲ್ಲೂ ಪ್ರಯಾಣವಿದೆ. ಒಂದು ಗಂಡು-ಒಂದು ಹೆಣ್ಣು ಜೀವ ಸಂಚಾರದಲ್ಲೇ ಹುಡುಕಾಟ ನಡೆಸುತ್ತವೆ. ನಾಯಕಿ ಕಳೆದುಕೊಂಡದ್ದು ಉಂಗುರವಷ್ಟೇ ಅಲ್ಲ ಎನ್ನುವುದು ಬಹಳ ಬೇಗ ಅರ್ಥವಾಗುತ್ತದೆ.

ಚಿತ್ರದ ನಾಯಕ ಪ್ರವಾಸಿ ಮಾರ್ಗದರ್ಶಕ. ನಾಯಕಿ ಉಳ್ಳವರ ಕುಟುಂಬದವಳು. ತನ್ನದೇ ಶೋಧದಲ್ಲಿ ತೊಡಗಿರುವ ಅಪರೂಪದ, ಬೋಲ್ಡ್ ತರುಣಿ. ಮದುವೆ ನಿಶ್ಚಯವಾದ ಹುಡುಗಿ ಇನ್ನೊಬ್ಬನಲ್ಲಿ ಜೀವದ ಗೆಳೆಯನನ್ನು ಕಾಣುವುದು ಭಾರತೀಯ ಸಿನಿಮಾಗಳ ಮಟ್ಟಿಗೆ ಹೊಸತೇನೂ ಅಲ್ಲ. ಇಲ್ಲಿಯೂ ಅದೇ ಆಗುತ್ತದೆ. ಆದರೆ, ಆ ಆಗುವಿಕೆಯಲ್ಲಿ ಇಮ್ತಿಯಾಜ್ ಕವಿಹೃದಯ ಹುದುಗಿರುವುದು ವಿಶೇಷ.

ಪಾತ್ರಗಳನ್ನು ಚರ್ಚೆಯಲ್ಲಿ ತೊಡಗಿಸಿ, ಅವುಗಳ ಆಂತರ್ಯದಲ್ಲಿ ಏನು ನಡೆಯುತ್ತಿದೆ ಎಂದು ಊಹಿಸುವ ಕೆಲಸವನ್ನು ಪ್ರೇಕ್ಷಕರಿಗೆ ಬಿಡುವ ಜಾಣ ಕುಸುರಿತನ ಇಮ್ತಿಯಾಜ್ ಅವರಿಗಿದೆ. ಹಾಗೆಂದು ಸದಾ ಕಾಲ ಅದೊಂದೇ ಚಲನಚಿತ್ರವನ್ನು ಗಟ್ಟಿಗೊಳಿಸಲಾಗದು. ‘ಕಾವ್ಯ ಖಾಸಗಿ’ ಎನ್ನುವ ಮಾತನ್ನು ಅನ್ವಯಿಸಿದರೆ, ಈ ಚಿತ್ರದ ಮಿತಿಯೂ ಅದೇ ಎನ್ನಬೇಕಾದೀತು. ಚಲನಶೀಲವಾಗಿ ಕಾಣುವ ಪಾತ್ರಗಳು ಅಲ್ಲೇ ನಿಂತಂತೆ ಭಾಸವಾಗುವುದು ಕೂಡ ಇದೇ ಕಾರಣಕ್ಕೆ.

ಪ್ರವಾಸದಲ್ಲಿ ಸಂಧಿಸುವ ಎರಡು ಹೃದಯಗಳ ನಡುವಿನ ಬಾಂಧವ್ಯ ಗಾಢವಾಗಿಸುವುದರಲ್ಲಿನ ಸಾವಧಾನ ಸಿನಿಮಾದ ಕಾಡುವ ಗುಣ. ‘ಪಂಜಾಬಿಗಳು ಹೊಲದಲ್ಲಿ ತಾವು ಓಡಿಸುವ ಟ್ರ್ಯಾಕ್ಟರ್ ಸದ್ದಿಗಿಂತ ಜೋರಾಗಿ ಹಾಡಬೇಕು. ಅದಕ್ಕೇ ಅವರದ್ದು ತಾರಕ ಸ್ವರ’ ಎಂಬ ನಾಯಕನ ಆತ್ಮವಿಮರ್ಶೆ, ಅವನ ಮಗುವಿನಂಥ ಅಳು, ಅದಕ್ಕೆ ಅನುನಯದಿಂದ ಸ್ಪಂದಿಸುವ ನಾಯಕಿಯ ಕಕ್ಕುಲತೆ... ಎಲ್ಲವೂ ಸಿನಿಮಾದ ಮೆಚ್ಚತಕ್ಕ ಅಂಶಗಳು.

ಶಾರುಖ್ ಖಾನ್ ಜನಪ್ರಿಯತೆಯ ಚೌಕಟ್ಟಿನಿಂದ ತಮ್ಮ ಅರ್ಧ ದೇಹವನ್ನು ಆಚೆ ಹಾಕಿದಂತೆ ಅಭಿನಯಿಸಿದ್ದಾರೆ. ಅಲ್ಲಲ್ಲಿ ಅವರ ಅತಿನಟನೆ ಮುಂದುವರಿದಿದ್ದರೂ, ಪ್ರಯೋಗಕ್ಕೆ ಈಗಲಾದರೂ ತೆರೆದುಕೊಂಡಿರುವ ಅವರನ್ನು ಶ್ಲಾಘಿಸಬೇಕು. ಕೆಲವೆಡೆ ಕಟೆದ ಅವರ ದೇಹಕ್ಕೂ ಸಂಭಾಷಣೆಗಳು ಭಾರವಾದವೇನೋ ಅನಿಸುತ್ತದೆ. ನಾಯಕಿ ಅನುಷ್ಕಾ ಶರ್ಮ ಪಾರಿಜಾತದ ತೊಟ್ಟಿನಂತೆ ಅತಿ ಕೋಮಲ. ಅವರ ಕಣ್ಣ ಚೌಕಟ್ಟಿನ ತೇವ ನಮ್ಮ ಎದೆಯನ್ನು ಆರ್ದ್ರಗೊಳಿಸುತ್ತದೆ. ಕೆ.ಯು. ಮೋಹನನ್ ಕ್ಯಾಮೆರಾ ಮುಖಭಾವಗಳನ್ನು ಸೆರೆಹಿಡಿಯುವ ನಾಜೂಕಿನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದೆ. ಪ್ರೀತಂ ಸ್ವರ ಸಂಯೋಜನೆಯಲ್ಲಿ ಅಂಥ ಜಿಗಿತವೇನೂ ಇಲ್ಲ.

‘ಹೈವೇ’ಯಲ್ಲಿ ಭಾವದ ನದಿಯಲ್ಲಿ ಮೀಯಿಸಿದ್ದ ಇಮ್ತಿಯಾಜ್, ಈ ಇನಿಂಗ್ಸ್‌ನಲ್ಲಿ ತುಸು ಫಾರ್ಮ್ ಕಳೆದುಕೊಂಡಿರುವುದೇನೋ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT