ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಂಬನಾಳದ ಪರೀಕ್ಷೆ ಹಾಗೂ ಗರ್ಭಧಾರಣೆ

Last Updated 4 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಕ್ಕಳಿಲ್ಲದ ದಂಪತಿಗಳಿಗೆ ಕೃತಕ ಗರ್ಭಧಾರಣೆ ಹೊರತಾಗಿಯೂ ಮಕ್ಕಳನ್ನು ಪಡೆಯುವ ಒಂದು ತಂತ್ರವನ್ನು ನೂರಾರು ವರ್ಷಗಳ ಹಿಂದೆಯೇ ಪ್ರಯೋಗಿಸಲಾಗಿತ್ತು. ಇದೀಗ ಹೊಸ ಸಂಶೋಧನೆಯೊಂದು ಆ ಪ್ರಾಚೀನ ವೈದ್ಯಕೀಯ ತಂತ್ರವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಈ ತಂತ್ರದ ಕುರಿತು ಸಾಕಷ್ಟು ಮಾಹಿತಿಯಿಲ್ಲ. ಹಾಗೆಯೇ ಇದರ ಬಗ್ಗೆ ತಿಳಿದವರೂ ಕಡಿಮೆಯೇ.

ಡಿಂಬ ನಾಳಕ್ಕೆ (ಫ್ಯಾಲೊಪೀನ್ ಟ್ಯೂಬ್‍ಗೆ) ಅಯೊಡೀಕರಿಸಿದ ತೈಲವನ್ನು ಒಳಗೆ ನುಗ್ಗಿಸುವ ಮೂಲಕ ನಡೆಯುವ ಪ್ರಕ್ರಿಯೆ ಇದು. ಗರ್ಭಧಾರಣೆಗೆ ಇದರಿಂದ ಗಮನಾರ್ಹ ಪ್ರಯೋಜನಗಳು ದೊರೆತಿರುವುದರ ಪುರಾವೆಗಳೂ ಇರುವುದಾಗಿ ಸಂಶೋಧನೆಯು ತಿಳಿಸಿದೆ. ಇದನ್ನು H2Oil ಅಧ್ಯಯನ ಎಂದು ಕರೆದಿದ್ದಾರೆ.

ಈ ಪ್ರಕ್ರಿಯೆಯನ್ನು 'ಹಿಸ್ಟೆರೊಸಾಲ್ಪಿಂಗೋಗ್ರಫಿ' (ಎಚ್‌ಅಎಸ್‌ಜಿ) ಎಂದು ಕರೆಯುತ್ತಾರೆ. ಎಕ್ಸ್‌ರೇ ಮೂಲಕ ನಡೆಯುವ ಡಿಂಬನಾಳಗಳ ಪರೀಕ್ಷೆ ಇದು. ಈ ತಂತ್ರವನ್ನು ಮೊದಲು 1917ರಲ್ಲಿ ಕೈಗೊಳ್ಳಲಾಯಿತು. 1950ರವರೆಗೂ ಜಲ ಅವಲಂಬಿತ ಹಾಗೂ ತೈಲ ಅವಲಂಬಿತ ಸೊಲ್ಯೂಷನ್‌ಗಳನ್ನು ಬಳಸಲಾಗಿತ್ತು.

‘ಮಕ್ಕಳಾಗದ ಮಹಿಳೆಯರಲ್ಲಿ ಈ ಪ್ರಕ್ರಿಯೆ ನಡೆಸಿದ ನಂತರ ಗರ್ಭಧಾರಣೆಯ ಪ್ರಮಾಣವೂ ಹೆಚ್ಚಿರುವುದಾಗಿ ತಿಳಿದುಬಂದಿದೆ. ಆದರೆ ಇದುವರೆಗೂ, ಪ್ರಕ್ರಿಯೆಗೆ ಬಳಸುವ ದ್ರವವು ಈ ಬದಲಾವಣೆಗೆ ಕಾರಣವಾಗಿದೆಯೇ ಎಂಬುದರ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಸಂಶೋಧನೆಯು, ಈ ಪ್ರಾಚೀನ ವೈದ್ಯಕೀಯ ತಂತ್ರವು ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆ ಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ತಿಳಿಸಲು ಸಹಾಯ ಮಾಡುತ್ತಿದೆ.

ತೈಲ ಆಧಾರಿತ ಫಲಿತಾಂಶ
ತೈಲ ಆಧಾರಿತ ಫ್ಲಷಿಂಗ್ ತಂತ್ರವನ್ನು ಕೈಗೊಂಡ ಆರು ತಿಂಗಳ ಒಳಗೆ ಗರ್ಭಧಾರಣೆಯ ಸಾಧ್ಯತೆಯು 40%ರಷ್ಟು ಹೆಚ್ಚಿಸಿದೆ. ಈ ಅಧ್ಯಯನದಲ್ಲಿ ಕೈಗೊಂಡ ತೈಲ ಆಧಾರಿತ ಉತ್ಪನ್ನವೆಂದರೆ ಲಿಪಿಒಡೋಲ್ ಅಲ್ಟ್ರಾ ಫ್ಯುಯೆಲ್ (Lipiodol® Ultra-Fluid). ತೈಲ ಆಧಾರಿತ ಪ್ರಕ್ರಿಯೆಯಲ್ಲಿ ಗರ್ಭಧಾರಣೆಯು ಯಶಸ್ವಿಯಾದ ಮಟ್ಟವೂ ಗಮನಾರ್ಹವಾಗಿದೆ. ಅದೂ ಒಂದೇ ಬಾರಿಯ ಚಿಕಿತ್ಸೆಯಿಂದ. ಕೃತಕ ಗರ್ಭಧಾರಣೆ ಹೊರತಾಗಿ ಇನ್ನಾವ ಆಯ್ಕೆಯೂ ಇಲ್ಲದ ಮಹಿಳೆಯರಿಗೆ ಇದು ಉಪಯುಕ್ತವೂ ಆಗಬಹುದು ಎಂದು ಭಾವಿಸಲಾಗಿತ್ತು. ಮಕ್ಕಳಿಲ್ಲದ ದಂಪತಿಗಳಿಗೆ ಭರವಸೆಯನ್ನೂ ತಂದುಕೊಟ್ಟಿತ್ತು.

ಗರ್ಭಧಾರಣೆಗೆ ಅಡ್ಡಿಯುಂಟುಮಾಡುವಂಥ ಕೆಲವು ಬೇಡದ ಅಂಶಗಳನ್ನು ಡಿಂಬ ನಾಳಗಳಿಂದ ಫ್ಲಷಿಂಗ್ ಮಾಡುವುದರ ಮೂಲಕ ಪರೀಕ್ಷೆಗೆ ಒಳಪಡಿಸುವುದು ಗರ್ಭಧಾರಣೆಗೆ ಸಹಾಯವಾಗುತ್ತದೆ ಎಂಬುದು ನಂಬಿಕೆ. ವಾಸ್ತವ ಎಂದರೆ, ಹೇಗೆ ಅದು ಉಪಯೋಗಕಾರಿ ಹಾಗೂ ಈ ತಂತ್ರದಿಂದ ಮಾತ್ರ ಹೇಗೆ ನೆರವಾಗುತ್ತದೆ ಎಂಬ ವಿಷಯ ಇನ್ನೂ ಸ್ಪಷ್ಟವಾಗಿಲ್ಲ.

ಈ ವೈದ್ಯಕೀಯ ತಂತ್ರದ ಕುರಿತು ಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳಲು ಇನ್ನಷ್ಟು ಸಂಶೋಧನೆಗಳನ್ನು ನಡೆಸುವ ಅವಶ್ಯಕತೆಯೂ ಇದೆ. ನೂರು ವರ್ಷದ ಹಿಂದೆ ಬಳಸುತ್ತಿದ್ದ, ಯಾವುದೇ ಅಡ್ಡಪರಿಣಾಮವನ್ನು ಹೊಂದಿರದ ತಂತ್ರವನ್ನು ಪರಿಗಣಿಸಿದರೆ, ಇದೊಂದು ಬಹುಪ್ರಯೋಜನಕಾರಿ ಚಿಕಿತ್ಸೆಯಾಗಬಹುದು ಎಂದು ಪರಿಗಣಿಸಲಾಗಿದೆ. ಇದು ಕೃತಕ ಗರ್ಭಧಾರಣೆಗಿಂತ ಕಡಿಮೆ ವೆಚ್ಚದಲ್ಲೂ ಆಗುವುದು ಲಾಭದಾಯಕವೂ ಅಲ್ಲವೇ?

ಮಧ್ಯವಯಸ್ಕ ಮಹಿಳೆಯರಲ್ಲಿ ಗರ್ಭಧಾರಣೆ ವಿಫಲತೆ: ಮಧ್ಯವಯಸ್ಕ ಮಹಿಳೆಯರಲ್ಲಿ ಗರ್ಭಪಾತ ಹಾಗೂ ಕ್ರೋಮೋಸೋಮಿನ ಅಸಹಜತೆ ಹೊಂದಿದ ಮಗು ಜನಿಸುವ ಪ್ರಮಾಣವು ಹೆಚ್ಚಿರುತ್ತದೆ. 37 ವಯಸ್ಸು ದಾಟುತ್ತಿದ್ದಂತೆ ಮಕ್ಕಳಾಗುವ ಸಾಧ್ಯತೆಯೂ ಅತಿ ವೇಗವಾಗಿ ಕ್ಷೀಣಿಸುತ್ತಾ ಹೋಗುತ್ತದೆ. 42 ದಾಟಿದ ಮಹಿಳೆಯರಲ್ಲಿ ಯಾವುದೇ ಚಿಕಿತ್ಸೆಯನ್ನು ಪಡೆಯದೇ ಮಕ್ಕಳಾಗುವ ಸಾಧ್ಯತೆಯು ಕೇವಲ 5% ಇರುತ್ತದೆ. ಸಮಸ್ಯೆ ಎಂದರೆ, ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ ಅಂಡಾಣುವಿಗೂ ವಯಸ್ಸಾಗುತ್ತದೆ. ಇದರಿಂದ ಕ್ರೋಮೋಸೋಮಿನಲ್ಲಿನ ಅಸಹಜತೆಯ ಸಾಧ್ಯತೆಯೂ ಹೆಚ್ಚುತ್ತದೆ.

ಈ ಸಮಸ್ಯೆಗಳು ಡೌನ್‌ ಸಿಂಡ್ರೋಮ್‌ನಂಥ ಪರಿಸ್ಥಿತಿಗೂ ಕಾರಣವಾಗಬಹುದು. ಇದಕ್ಕೂ ಮುನ್ನ, ಅಂಡಾಣುವಿನಲ್ಲಿನ ಕ್ರೋಮೋಸೋಮಿನ ಈ ಅಸಹಜತೆಗಳು ಭ್ರೂಣವನ್ನು ಬೆಳವಣಿಗೆ ಮಾಡದೆ ಗರ್ಭಧಾರಣೆಯಾಗದಂತೆ ತಡೆಯಬಹುದು ಇಲ್ಲವೇ ಗರ್ಭಪಾತ ಸಂಭವಿಸಬಹುದು. 40 ವಯಸ್ಸು ಮೀರಿದ ಮಹಿಳೆಯರಲ್ಲಿ ಅಂಡಾಣುವಿನಲ್ಲಿನ ಅಸಮರ್ಪಕ ಕ್ರೋಮೋಸೋಮು ಗರ್ಭಪಾತಕ್ಕೆ ಎಡೆಮಾಡಿಕೊಟ್ಟ ಸಾಮಾನ್ಯ ಕಾರಣವಾಗಿವೆ.

ಆದರೆ ಇದರ ಹಿಂದೆ ಇನ್ನೂ ಒಂದು ಅಂಶವಿದೆ. ಸೆಕ್ಯುರಿನ್ ಎಂಬ ಪ್ರೊಟೀನಿನ ಮಟ್ಟವನ್ನು ಹೇಗೆ ಅಂಡಾಣುವು ನಿಯಂತ್ರಿಸುತ್ತದೆ ಎಂಬುದನ್ನು ಆಧರಿಸಿ ಸಮಸ್ಯೆಯನ್ನು ಪರಿಗಣಿಸಬಹುದು. ಅಂಡದ ಬೆಳವಣಿಗೆಯ ಕೊನೆಯ ಹಂತದಲ್ಲಿ, ಅಂಡೋತ್ಪತ್ತಿಗೆ ಮುನ್ನ ಮಿಯೋಸಿಸ್ 1 ಹಾಗೂ ಮಿಯೋಸಿಸ್‌ ಎಂಬ ಎರಡು ರೀತಿಯ ವಿಭಜನೆ ನಡೆಯುತ್ತದೆ. ಈ ಎರಡೂ ವರ್ಗಕ್ಕೂ ಸೆಕ್ಯುರಿನ್ ಅತಿ ಮುಖ್ಯ. ಆದರೆ ವಯಸ್ಸಾದ ಮಹಿಳೆಯರಲ್ಲಿ, ಅಂಡಾಣುವಿನಲ್ಲಿ ಮಿಯೋಸಿಸ್ ಸಹಜವಾಗಿ ಸಂಭವಿಸಲು ಅಗತ್ಯ ಸೆಕ್ಯುರಿನ್ ಕೊರತೆ ಇರುವುದು ಕಂಡುಬಂದಿದೆ.

ಮಿಯೋಸಿಸ್‌ ಮೊದಲ ಹಂತದಲ್ಲಿ ನಡೆಯುವ ವಿಭಜನೆಯಲ್ಲಿ ಕ್ರೋಮೋಸೋಮಿನ ಅಸಹಜತೆಗಳು ಕಾಣಿಸಿಕೊಳ್ಳುವುದು. ಎರಡನೇ ಹಂತದಲ್ಲೂ ಗಣನೀಯ ಪ್ರಮಾಣದಲ್ಲಿ ಅಸಹಜತೆಗಳು ಕಂಡುಬರುತ್ತವೆ. ಮಧ್ಯವಯಸ್ಕ ಮಹಿಳೆಯರಲ್ಲಿ ಈ ಪ್ರಕ್ರಿಯೆಯು ಸೆಕ್ಯುರಿನ್‌ನ ಕೊರತೆಯಿಂದಾಗಿ ಸಹಜವಾಗಿ ನಡೆಯಲು ಸಾಧ್ಯವಾಗದೇ ಸೋಲುತ್ತವೆ. ಹೀಗಾಗಿ ಗರ್ಭಧಾರಣೆಯೂ ವಿಫಲಗೊಳ್ಳುತ್ತದೆ.

ಕೆಲವೇ ಕ್ರೋಮೋಸೋಮಿನ ಅಸಹಜತೆ ಹೊಂದಿರುವ ಮಹಿಳೆಯರಲ್ಲೂ ಅಂಡೋತ್ಪತ್ತಿಯು ಸಾಧ್ಯವಾಗುವಂತೆ ಈ ಪ್ರಕ್ರಿಯೆಯನ್ನು ನಿಯಂತ್ರಿಸಿ, ಅಂದರೆ ಎರಡೂ ಹಂತದಲ್ಲೂ ಸೆಕ್ಯುರಿನ್‌ನ ಮಟ್ಟವನ್ನು ನಿಯಂತ್ರಿಸುವ ಮೂಲಕ ಅಥವಾ ಸೆಕ್ಯುರಿನ್ ನಿಯಂತ್ರಿಸುವ ಸೆಪರೇಸ್ ಎಂಬ ಪ್ರೊಟೀನಿನ ನಿಯಂತ್ರಣದ ಮೂಲಕ ಗರ್ಭಧಾರಣೆಯ ಹೊಸ ಸಾಧ್ಯತೆಗಳೂ ಕಂಡುಬಂದಿವೆ.

ಪ್ರಸ್ತುತ, ಮೊದಲ ಮಗುವನ್ನು ಪಡೆಯುವ ಮಹಿಳೆಯ ವಯಸ್ಸಿನ ಪ್ರಮಾಣವೂ ಹೆಚ್ಚುತ್ತಿರುವುದರಿಂದ ಅಂಡಾಣುವಿನ ಗುಣಮಟ್ಟವನ್ನು ವೃದ್ಧಿಸುವಂತೆ ಮಾಡುವ ಹೊಸ ಚಿಕಿತ್ಸಕ ವಿಧಾನಗಳನ್ನು ಕಂಡುಕೊಳ್ಳುವ ಮಾರ್ಗವೂ ಅತಿ ಮುಖ್ಯವಾಗುತ್ತಿದೆ.

ಇದು ಒಂದು ರೀತಿ ಸವಾಲೇ ಸರಿ. ಏಕೆಂದರೆ ಅಂಡಾಣುವಿಗೆ ಸಂಬಂಧಿಸಿದ ಯಾವುದೇ ಚಿಕಿತ್ಸೆಯೂ ಸೂಕ್ಷ್ಮ ಹಾಗೂ ಸುರಕ್ಷಿತವಾಗಿ ಇರಬೇಕಾಗುತ್ತದೆ.

ಸದ್ಯಕ್ಕೆ ಮಧ್ಯವಯಸ್ಕ ಮಹಿಳೆಯರಲ್ಲಿ ಕ್ರೋಮೋಸೋಮುಗಳಲ್ಲಿ ಹೆಚ್ಚುತ್ತಿರುವ ಅಸಹಜತೆಯ ಪ್ರಮಾಣ ಹಾಗೂ ಗರ್ಭಪಾತಕ್ಕೆ ಇರುವ ಕಾರಣಗಳಲ್ಲಿ ಒಂದರ ಕುರಿತಾದರೂ ತಿಳಿದುಬಂದಿದ್ದು, ಅದನ್ನು ನಿವಾರಣೆ ಮಾಡುವ ಪ್ರಯತ್ನ ನಡೆಸಲು ಸಹಕಾರಿಯಾಗಿದೆ.

ಗರ್ಭಧಾರಣೆ ಸಮಸ್ಯೆ, ವಯಸ್ಸು–ಕೆಲವು ಸತ್ಯಗಳು
ಮಹಿಳೆಯರಿಗೆ ವಯಸ್ಸಾದಂತೆ ಅಂಡಾಣುವಿಗೂ ವಯಸ್ಸಾಗುತ್ತದೆ. ಹಾಗೆಯ ಅಸಹಜ ಕ್ರೋಮೋಸೋಮುಗಳೂ ಹೆಚ್ಚುತ್ತವೆ. ಅಸಹಜ ಕ್ರೋಮೋಸೋಮು ಗರ್ಭಪಾತಕ್ಕೆ ಅತಿ ಸಾಮಾನ್ಯ ಕಾರಣ.

20ರ ವಯೋಮಾನದ ಮಹಿಳೆಯಲ್ಲಿ, ಪ್ರತಿ ಗರ್ಭಧಾರಣೆಗೂ ಗರ್ಭಪಾತದ ಸಾಧ್ಯತೆ 12–15% ಇದ್ದರೆ, 40ರ ವಯೋಮಾನದವರಲ್ಲಿ ಇದು 50% ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT