ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 4 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

*ನನ್ನ ಹೆಸರು ಉಷಾ. ನನ್ನ ವಯಸ್ಸು 29. ನನಗೆ 2 ಮಕ್ಕಳು. ದೊಡ್ಡ ಮಗಳಿಗೆ 7 ವರ್ಷ ವಯಸ್ಸು. ಅವಳು ಈಗ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವಳು ಚೆನ್ನಾಗಿ ಓದುತ್ತಾಳೆ, ಆದರೆ ಅಷ್ಟೇ ಬೇಗ ಮರೆತು ಬಿಡುತ್ತಾಳೆ. ತುಂಬ ಯೋಚನೆ ಮಾಡುತ್ತಾಳೆ. ಇದಕ್ಕೆ ಪರಿಹಾರ ತಿಳಿಸಿ?
7ನೇ ವಯಸ್ಸಿಗೇ ಮಗುವಿನ ಬುದ್ಧಿಮಟ್ಟ ಅಥವಾ ನೆನಪಿನ ಶಕ್ತಿಯ ಸಾಮಾರ್ಥ್ಯವನ್ನು ನಿರ್ಧರಿಸುವುದು ಸರಿಯಲ್ಲ. ಓದಿನ ಕಡೆ ಹೆಚ್ಚು ಗಮನ ಕೊಡುವಂತಹ ವಯಸ್ಸು ಆಕೆಗಿಲ್ಲ. ಈ ವಯಸ್ಸಿನಲ್ಲಿ ಅವರಿಗೆ ಆಟದ ಕಡೆ ಹೆಚ್ಚು ಗಮನ ಇರುತ್ತದೆ. ಪೋಷಕರು ಮತ್ತು ಶಿಕ್ಷಕರೇ ಮಗುವಿನ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು.

ನಿಮ್ಮ ಮಗು ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂಬುದನ್ನು ಗಮನಿಸಿ. ವಿಷಯಗಳನ್ನು ಆಕೆ ಸರಿಯಾಗಿ ಅರ್ಥಮಾಡಿಕೊಂಡಿದ್ದಾಳೆಯೇ ಎಂಬುದನ್ನು ಗ್ರಹಿಸಿ. ಶಾಲೆಯ ಶಿಕ್ಷಕರ ಬಳಿ ಈ ಬಗ್ಗೆ ವಿಚಾರಿಸಿ, ಓದಿನಲ್ಲಿ ಹಿಂದಿದ್ದಾಳೆಯೇ ಎಂಬುದನ್ನು ತಿಳಿದುಕೊಳ್ಳಿ. ಆಕೆ ಹೆಚ್ಚು ಸಮಯ ಟೀ.ವಿ. ವೀಕ್ಷಿಸುತ್ತಿದ್ದರೆ ಆ ಸಮಯವನ್ನು ಕಡಿತಗೊಳಿಸಿ ಆಟ ಆಡುವುದಕ್ಕೆ ಹೆಚ್ಚು ಸಮಯ ನೀಡಿ.

ಎರಡೆರಡು ಬಾರಿ ಓದುವಂತೆ ಮಾಡಿ. ಆಕೆಯ ಆಹಾರ ಬಗ್ಗೆಯೂ ಗಮನ ಕೊಡಿ. ನಿದ್ರಾ ಅವಧಿ ಬಗ್ಗೆಯೂ ಎಚ್ಚರವಿರೆ. ಆಟ ಮತ್ತು ನಿದ್ದೆ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಖ್ಯವಾಗಿ ನಿಮ್ಮ ಮಗುವನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರ ಜೊತೆ ಹೋಲಿಕೆ ಮಾಡಬೇಡಿ. ಪ್ರತೀ ಮಗವೂ ಭಿನ್ನ.

****
ಮೇಡಂ, ನನ್ನ ಹೆಸರು ವಿನೋದ್‍. ಡಿಪ್ಲೊಮ ಮುಗಿಸಿ ಸರ್ಕಾರಿ ಕೆಲಸಕ್ಕೆ ಕಾಯುತ್ತಿರುವೆ. ನನ್ನ ಸಮಸ್ಯೆ ವಿಪರೀತ ಆಲಸ್ಯ ಮನೋಭಾವದ್ದು. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬೇಕು?
ಆಲಸ್ಯ ಮನೋಭಾವ ಎಂಬುದು ನಿಮ್ಮ ಆಸೆಗಳಗೆ ಅಡ್ಡಿಯಾಗುವಂತಹ ದೊಡ್ಡ ಶತ್ರು. ಇದು ನಿಮ್ಮನ್ನು ನಿಷ್ಕ್ರಿಯಗೊಳಿಸುತ್ತದೆ. ನಿಮ್ಮ ಅಭಿವೃದ್ಧಿಯನ್ನು ಅದು ಸಹಿಸುವುದಿಲ್ಲ. ನೀವು ಇದ್ದ ಹಾಗೆಯೇ ಇರಬೇಕು ಬದಲಾವಣೆಯನ್ನು ಅದು ಒಪ್ಪುವುದಿಲ್ಲ.

ಸಂತೋಷದ ವಿಷಯವೆಂದರೆ ನೀವು ನಿಮ್ಮ ಆಲಸ್ಯ ಮನೋಭಾವವನ್ನು ಗುರುತಿಸಿದ್ದೀರಿ. ಇಷ್ಟು ಸಾಕು ನೀವು ಇದರ ಸುಳಿಯಿಂದ ತಪ್ಪಿಸಿಕೊಂಡು ಬರುವುದಕ್ಕೆ.

ನಿಮ್ಮಲ್ಲಿನ ಶಿಸ್ತು ಮತ್ತು ಏನಾದರೂ ಸಾಧಿಸಬಲ್ಲೆ ಎಂಬ ಮನೋಭಾವವನ್ನು ಮತ್ತಷ್ಟು ದೃಢಗೊಳಿಸಿ. ಇದು ನಿಮ್ಮಲ್ಲಿನ ಪರಿಶ್ರಮ, ನಿರಂತರತೆ, ಸಹನೆಯನ್ನು ದೃಢಗೊಳಿಸುತ್ತದೆ. ಇದರಿಂದ ನಿಮ್ಮಲ್ಲಿರುವ ಆಲಸ್ಯ ಮತ್ತು ಚಂಚಲ ಮನೋಭಾವ ದೂರವಾಗುತ್ತದೆ.

ವ್ಯಾಯಾಮ ಮತ್ತು ಉತ್ತಮ ಆಹಾರ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ. ನಿಮ್ಮಲ್ಲಿನ ಚುರುಕುತನವನ್ನು ಹೆಚ್ಚಿಸುತ್ತದೆ. ನಿಮ್ಮಲ್ಲಿನ ದೃಢಚಿತ್ತ ಮತ್ತು ಮನೋಸಾಮರ್ಥ್ಯವನ್ನು ಜಾಗೃತಗೊಳಿಸಿ. ನಿಮ್ಮ ಗುರಿ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಗಮನಹರಿಸಿ.

***
ನನ್ನ ಹೆಸರು ಮಮತಾ (ಹೆಸರು ಬದಲಾಯಿಸಿದೆ). ವಯಸ್ಸು ೩೫ ವರ್ಷ. ನನಗೆ ಪೋಲಿಯೋದಿಂದ ಎರಡೂ ಕಾಲು ಸ್ವಾಧೀನ ಇಲ್ಲ. ಆದರೂ ವಿಶ್ವವಿದ್ಯಾಲಯ ಮಟ್ಟದ ವಿದ್ಯೆ ಪಡೆದಿರುವೆ. ಸಂಸ್ಕಾರ, ವಿಚಾರಶಕ್ತಿ, ಬುದ್ಧಿಶಕ್ತಿಯಲ್ಲಿ ಯಾರಿಗೂ ಕಡಿಮೆಯಿಲ್ಲ. ಒಳ್ಳೆ ಹೃದಯವಂತ ವ್ಯಕ್ತಿಯೊಂದಿಗೆ ಮದುವೆಯಾಗಿದೆ .ನಮ್ಮವೈವಾಹಿಕ ಜೀವನಕ್ಕೆ 11 ವರ್ಷಗಳಾದವು. ಅವರು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಮಗೆ ಹೆಣ್ಣು ಮಗು ಇದೆ. ಆದರೂ, ಗಂಡನ ಮನೆ, ತವರುಮನೆ ಅಥವಾ ಬಂಧುಮಿತ್ರರಿಂದ ನನಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎನ್ನುವ ಚಿಂತೆ ನನ್ನನ್ನು ಕಾಡುತ್ತಿದೆ. ನನ್ನ ಯಾವುದೇ ತಪ್ಪಿಲ್ಲದೆ ಅವಮಾನಿತಳಾಗಿರುವುದಿದೆ. ಬಹುಶಃ ಇದಕ್ಕೆ ನನ್ನ ದೈಹಿಕ ದೌರ್ಬಲ್ಯ, ಆರ್ಥಿಕ ಅಸಾಯಕತೆ ಕಾರಣ ಇರಬಹುದು. ಹಣ-ಅಧಿಕಾರಕ್ಕೆ ಇರುವ ಬೆಲೆ ಹೃದಯವಂತಿಕೆಗೆ ಇಲ್ಲ ಎಂಬ ಸತ್ಯ ನನ್ನ ಜೀವನದಲ್ಲಿ ಕಂಡೆ. ಉದ್ಯೋಗಕ್ಕೆ ತುಂಬಾ ಪ್ರಯತ್ನ ಪಡುತ್ತಿರುವೆ. ಸಿಗುತ್ತಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವೆ. ಏನು ಮಾಡಲಿ? ಸಲಹೆ ನೀಡಿ, ಪ್ಲೀಸ್.
ನಿಮ್ಮ ಸಮಸ್ಯೆಗೆ ನನಗೆ ಅರ್ಥವಾಗುತ್ತೆ. ನಿಮ್ಮ ನ್ಯೂನತೆಯನ್ನೇ ಸವಾಲಾಗಿ ಸ್ವೀಕರಿಸಿರುವ ನಿಮ್ಮ ನಿರ್ಧಾರ ಮೆಚ್ಚುವಂಥದ್ದು, ನಿಮ್ಮಲ್ಲಿ ಒಳ್ಳೆಯತನ ಇರುವುದರಿಂದಲೇ ನಿಮಗೆ ಉತ್ತಮ ಸಂಸಾರ ಮತ್ತು ಉತ್ತಮ ಸಂಗಾತ್ಯ ಸಿಕ್ಕಿದೆ.

ಬೇರೆಯವರ ಮಾತುಗಳಿಗೆ ನಡವಳಿಕೆ ತಲೆಕೆಸಿಕೊಳ್ಳಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಜೀವನವನ್ನು ಯಾವುದೇ ತೊಂದರೆ ಇಲ್ಲದೆ ನಡೆಸಬಹುದು. ಯಾಕೆಂದರೆ ನಿಮ್ಮ ನ್ಯೂನತೆ ಬಗ್ಗೆ ನೀವು ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿ ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸ ಕುಗ್ಗದಿರಲಿ. ನಿಮ್ಮ ಮಗು ಮತ್ತು ಪತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಅವರು ಬಿಟ್ಟರೆ ನಿಮ್ಮ ಜೀವನಕ್ಕೆ ಬೇರಾವುದೂ ಮುಖ್ಯವಲ್ಲ.

ನಿಮ್ಮ ಸಂಬಂಧಿಕರು ಮತ್ತು ನೆರೆಹೊರೆಯವಲ್ಲಿ ನಿಮ್ಮನ್ನು ಉಪಚರಿಸುತ್ತಿರುವ ರೀತಿ ಇಷ್ಟವಿಲ್ಲ ಎಂದು ತಿಳಿಸಿ. ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಒಳ್ಳೆಯದು. ಅವರ ಸ್ವಭಾವವೇ ಹಾಗಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ನಿಮಗೆ ಇಷ್ಟವಾದ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ. ನಿಮ್ಮಲ್ಲಿ ಸಕರಾತ್ಮಕ ಆಲೋಚನೆಗಳನ್ನು ಮೂಡಿಸುವಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮಲ್ಲಿನ ಆತ್ಮವಿಶ್ವಾಸ ಯಾವುದೇ ಕಾರಣಕ್ಕೂ ಕುಂದಬಾರದು. ಯಾವಾಗಲೂ ಸಂತೋಷದಿಂದ ಇರಿ. ಜೀವನ ಸುಂದರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT