ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿಗೆ ಬಂಧನ ಭೀತಿ?

₹ 600 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು ಪತ್ತೆ
Last Updated 4 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ಅವರ ಆಪ್ತರು ಹಾಗೂ ಸಂಬಂಧಿಕರ ಮನೆಗಳಲ್ಲಿ ₹ 600 ಕೋಟಿಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿವೆ.

ಬೆಂಗಳೂರು, ಮೈಸೂರು, ದೆಹಲಿ ಸೇರಿದಂತೆ ವಿವಿಧೆಡೆಗಳಲ್ಲಿ  ವಶಪಡಿಸಿಕೊಂಡಿರುವ ಈ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಶೀಘ್ರವೇ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದೆ.

ವಿದೇಶಗಳಲ್ಲಿ ಹೂಡಿಕೆ: ‘ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಸಿಂಗಪುರ, ಕತಾರ್‌ ಹಾಗೂ ಲಂಡನ್‌ನಲ್ಲಿ ಹೂಡಿಕೆ ಮಾಡಿರುವ ದಾಖಲೆ ಪತ್ರಗಳು ಇದರಲ್ಲಿ ಸೇರಿವೆ. ಬಹುತೇಕ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹಣ ತೊಡಗಿಸಿರುವುದು ಪತ್ತೆಯಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಶಿವಕುಮಾರ್‌, ಲಾಭ ಗಳಿಕೆಯ ಉದ್ದೇಶದಿಂದ ಹೊರ ದೇಶಗಳಲ್ಲಿ ಈ ಹೂಡಿಕೆ ಮಾಡಿಲ್ಲ. ತಮ್ಮ ಬಳಿ ಇರುವ ಹಣವನ್ನು ಜೋಪಾನ ಮಾಡಿಕೊಳ್ಳುವ ದೃಷ್ಟಿಯಿಂದ ಹೂಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳೂ ಐ.ಟಿ ಅಧಿಕಾರಿಗಳಿಗೆ ದೊರೆತಿವೆ.  ಶಿವಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆಯಲಾಗುತ್ತಿದೆ’ ಎಂದೂ ಮೂಲಗಳು ವಿವರಿಸಿವೆ.
‘ತಪಾಸಣೆ ಸಮಯದಲ್ಲಿ ಸಿಕ್ಕಿರುವ ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ಸಚಿವರು ಸಮರ್ಪಕವಾದ ಉತ್ತರ ಕೊಡಬೇಕು. ಆಸ್ತಿ ಸಂಪಾದನೆಯ ಮೂಲಗಳನ್ನು ಬಹಿರಂಗಪಡಿಸಬೇಕು.

ಹಣ ವರ್ಗಾವಣೆಯ ವಿವರಗಳನ್ನು ಸಲ್ಲಿಸಬೇಕು. ಇದರಲ್ಲಿ ಏರುಪೇರು ಕಂಡುಬಂದರೆ ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿಕೊಳ್ಳಬಹುದು’ ಎಂದು ಮೂಲಗಳು ವಿವರಿಸಿವೆ.

‘ಈ ಪ್ರಕರಣದಲ್ಲಿ ಇದುವರೆಗೆ ಇ.ಡಿ ಮೂಗು ತೂರಿಸಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ತೀರ್ಮಾನಿಸಿದರೆ ಪ್ರಕರಣ ವರ್ಗಾವಣೆ ಆಗಲಿದೆ. ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಅಸರ್ಮಪಕವಾಗಿದ್ದರೆ ಇ.ಡಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ’ ಎಂದೂ ಹೇಳಲಾಗುತ್ತಿದೆ.

(ಅಣ್ಣ ಶಿವಕುಮಾರ್‌ ಭೇಟಿಗೆ ಬಂದ ಸಂಸದ ಡಿ.ಕೆ. ಸುರೇಶ್‌ ಅವರು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಗದರಿಸಿದ್ದು ಹೀಗೆ...)

ಪ್ರಾಸಿಕ್ಯೂಟರ್‌ಗಾಗಿ ಹುಡುಕಾಟ:  ಜಾರಿ ನಿರ್ದೇಶನಾಲಯವು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕ ಮಾಡುವುದಕ್ಕಾಗಿ ಪ್ರಕ್ರಿಯೆ ಆರಂಭಿಸಿದೆ.  ಈ ಕುರಿತಂತೆ ಬೆಂಗಳೂರಿನ ಕೆಲವು ಹಿರಿಯ ವಕೀಲರನ್ನು ಸಂಪರ್ಕಿಸಿದೆ.

ಮೂರನೇ ದಿನವೂ ವಿಚಾರಣೆ:  ಶಿವಕುಮಾರ್‌ ಅವರ ಸದಾಶಿವ ನಗರದ ಮನೆಗೆ ಶುಕ್ರವಾರ ಐ.ಟಿ ಇಲಾಖೆ ಉನ್ನತ ಅಧಿಕಾರಿಯೊಬ್ಬರು ಭೇಟಿ ನೀಡಿ  ವಿಚಾರಣೆ ನಡೆಸಿದರು. ‘ದಾಖಲೆಗಳ ಮಹಜರು ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ವಿವಿಧ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮತ್ತು ಷೇರು ವ್ಯವಹಾರಕ್ಕೆ ಸಂಬಂಧಿಸಿ ಶಿವಕುಮಾರ್‌ ಅವರಿಂದ ಹೇಳಿಕೆ ಪಡೆಯುವ ಕಾರ್ಯ ಮುಂದುವರೆದಿದೆ’ ಎಂದು ಐ.ಟಿ ಮೂಲಗಳು ತಿಳಿಸಿವೆ.

‘ಎಲ್ಲ ಕಡೆಗಳಲ್ಲಿ ಶೋಧ ಕಾರ್ಯ ಪೂರ್ಣಗೊಂಡಿದ್ದು, ವಶಪಡಿಸಿಕೊಂಡ ದಾಖಲೆಗಳನ್ನು ಸದಾಶಿವನಗರದ ಮನೆಗೆ ತರಲಾಗಿದೆ. ಈ ಎಲ್ಲ ದಾಖಲೆಗಳ ಮಹಜರು ಮತ್ತು ಅದಕ್ಕೆ ಸಂಬಂಧಿಸಿ ಹೇಳಿಕೆ ಪಡೆಯುವ ಕಾರ್ಯ ಶುಕ್ರವಾರ ಮಧ್ಯರಾತ್ರಿ ಒಳಗೆ ಅಂತ್ಯವಾಗಬಹುದು.  ಶನಿವಾರ ಬೆಳಿಗ್ಗೆ ಅಧಿಕಾರಿಗಳ ತಂಡ ಸ್ಥಳದಿಂದ ನಿರ್ಗಮಿಸಲಿದೆ’ ಎಂದೂ ಮೂಲಗಳು ಹೇಳಿವೆ.

‘ಈವರೆಗೆ ಒಟ್ಟು ₹ 11.5 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿರುವ ಐ.ಟಿ ಇಲಾಖೆ ಮೂಲಗಳು, ಈ ಹಣವನ್ನು ಎಲ್ಲಿಂದ ಜಪ್ತಿ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಡಿ.ಕೆ. ಸುರೇಶ್‌ ಭೇಟಿ: ಬೆಳಿಗ್ಗೆ ಶಿವಕುಮಾರ್‌ ಅವರ ತಮ್ಮ, ಸಂಸದ ಡಿ.ಕೆ. ಸುರೇಶ್‌ ಅಣ್ಣನನ್ನು ಭೇಟಿ ಮಾಡಲು ಬಂದರೂ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಆರೋಗ್ಯ ವಿಚಾರಿಸಲು ಬಂದಿರುವುದಾಗಿ ತಿಳಿಸಿದರೂ ಸಮ್ಮತಿಸಲಿಲ್ಲ.

ವೈದ್ಯರ ತಂಡ ಹೊರ ಹೋಗುತ್ತಿದ್ದಂತೆ ಮತ್ತೆ ಬಂದ ಡಿ.ಕೆ. ಸುರೇಶ್‌ ಅವರನ್ನು ಅಧಿಕಾರಿಗಳು ಮನೆಯೊಳಗೆ ಬಿಟ್ಟರು. ಬಳಿಕ ಮಾತನಾಡಿದ ಅವರು, ‘ಅಧಿಕಾರಿಗಳ ಸಮ್ಮುಖದಲ್ಲಿ ಅಣ್ಣನ ಜೊತೆ ಮಾತನಾಡಿದ್ದೇನೆ. ಐ.ಟಿ ದಾಳಿ ಪ್ರಕ್ರಿಯೆ ಇಂದು ಅಥವಾ ನಾಳೆ ಅಂತ್ಯ ಆಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.  ವಿಚಾರಣೆ ಮುಗಿದ ಬಳಿಕ ವಸ್ತುಸ್ಥಿತಿ ತಿಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ’ ಎಂದರು.

‘ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ತಾಯಿಗೆ ಇಲ್ಲ. ಆಕೆ ಚಿಂತೆಗೀಡಾಗಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಮುಖ್ಯಮಂತ್ರಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ತಾಯಿ ಜೊತೆ ನಾನು ಮಾತನಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ಲಾಕರ್‌ಗಳು ಪತ್ತೆ (ಮೈಸೂರು/ಹಾಸನ ವರದಿ): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾವ ಆರ್‌.ತಿಮ್ಮಯ್ಯ ಅವರಿಗೆ ಸೇರಿದ ನಗರದ ಇಟ್ಟಿಗೆಗೂಡಿನ ಮಾನಸರ ರಸ್ತೆಯಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಮೂರನೇ ದಿನವೂ ಮುಂದುವರಿದಿದ್ದು, ಕೆಲ ಲಾಕರ್‌ಗಳನ್ನು ಶುಕ್ರವಾರ ಪರಿಶೀಲಿಸಲಾಗಿದೆ.

ಏಳು ಅಧಿಕಾರಿಗಳ ಪೈಕಿ ಮೂವರು ಮಾತ್ರ ಮನೆಯಲ್ಲಿ ತಂಗಿದ್ದು, ಉಳಿದವರು ಮರಳಿದ್ದಾರೆ. ಬೆಳಿಗ್ಗೆ 7ಕ್ಕೆ ಪರಿಶೀಲನೆ ಮುಂದುವರಿಸಿದ ಅಧಿಕಾರಿಗಳು ರಾತ್ರಿಯವರೆಗೂ ನಡೆಸಿದರು. ಸ್ಥಳೀಯ ಸಿಬ್ಬಂದಿಯ ನೆರವಿನೊಂದಿಗೆ ಮಾಹಿತಿ ಕಲೆಹಾಕಿದರು. ಹಾಸನದ ಉದ್ಯಮಿ ಸಚಿನ್ ನಾರಾಯಣ್ ಹಾಗೂ ಸಹೋದರ ಚೇತನ್ ಮನೆಯಲ್ಲಿ ಮೂರನೇ ದಿನವಾದ ಶುಕ್ರವಾರವೂ ದಾಖಲೆಗಳ ಪರಿಶೀಲನೆ ನಡೆಯಿತು.

ರಕ್ತದೊತ್ತಡ ಹೆಚ್ಚಳ
ಐ.ಟಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಡಾ. ರಮಣರಾವ್‌ ಅವರಿಗೆ ಕಾರು ಕಳುಹಿಸಿ  ಕರೆಸಿಕೊಂಡು ಶಿವಕುಮಾರ್‌ ಅವರ ಆರೋಗ್ಯ ತಪಾಸಣೆ  ನಡೆಸಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿ ರಾವ್‌ ಅವರನ್ನೂ ಶೋಧಿಸಿದ ಬಳಿಕ ಮನೆಯ ಒಳಗಡೆ ಬಿಟ್ಟಿದ್ದಾರೆ.
‘ಶಿವಕುಮಾರ್‌ ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡ ಇದೆ. ಅವರ ಆರೋಗ್ಯ ತಪಾಸಣೆ ನಡೆಸಿದಾಗ ಮಾನಸಿಕ ಒತ್ತಡದಿಂದಾಗಿ ರಕ್ತದೊತ್ತಡ ಜಾಸ್ತಿಯಾಗಿರುವುದು ಗೊತ್ತಾಗಿದೆ’ ಎಂದು ಡಾ. ರಮಣ ರಾವ್‌ ‘ಪ್ರಜಾವಾಣಿ’ಗೆ  ತಿಳಿಸಿದರು.

‘ಸತತ ವಿಚಾರಣೆಯಿಂದ ಶಿವಕುಮಾರ್‌ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಆದರೂ ಸ್ಥಿರವಾಗಿದೆ. ವಿಶ್ರಾಂತಿ ನೀಡಿ ವಿಚಾರಣೆ ಮುಂದುವರಿಸುವಂತೆ ಐ.ಟಿ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಧ್ಯಾನ ಮಾಡುವಂತೆ ಶಿವಕುಮಾರ್‌ಗೆ ಸೂಚಿಸಿದ್ದೇನೆ’ ಎಂದರು.

‘ ಐ.ಟಿ ಅಧಿಕಾರಿಗಳ ಪೈಕಿ ಯಾರಿಗೂ ಕನ್ನಡ ಮಾತನಾಡಲು ಬರುವುದಿಲ್ಲ. ಅವರು ಕಾನೂನುನಡಿ ಶೋಧ ಪ್ರಕ್ರಿಯೆ ನಡೆಸುತ್ತಿದ್ದಾರೆ’ ಎಂದರು.

‘ಸಿಂಗಪುರಕ್ಕೆ ಯಾಕೆ ಹೋಗಬೇಕು’: ಗುಜರಾತ್‌ ವಿಧಾನಸಭೆಯಿಂದ  ರಾಜ್ಯಸಭೆಗೆ ಚುನಾವಣೆ ನಡೆಯಲಿರುವ ಕಾರಣಕ್ಕೆ ಜುಲೈ ಕೊನೆಯ ವಾರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಾಗ ಶಿವಕುಮಾರ್‌ ಸಿಂಗಪುರದಲ್ಲಿ ಇದ್ದರು. ರಜಾ ದಿನ ಕಳೆಯಲು ಅವರು ಅಲ್ಲಿಗೆ ಪ್ರವಾಸ ತೆರಳಿದ್ದರು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.

ತಕ್ಷಣ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ಮರಳಿದ ಶಿವಕುಮಾರ್‌, ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಗುಜರಾತ್‌ ಶಾಸಕರ ಯೋಗಕ್ಷೇಮ ವಿಚಾರಿಸಲು ನೇರವಾಗಿ ಬಂದಿದ್ದರು.

ಆದರೆ, ಅಣ್ಣ ಶಿವಕುಮಾರ್‌ ಸಿಂಗಪುರ ಪ್ರವಾಸವನ್ನು ಡಿ.ಕೆ. ಸುರೇಶ್‌ ಅವರು ನಿರಾಕರಿಸಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಮೊರೆ?
ಆದಾಯ ತೆರಿಗೆ ಇಲಾಖೆ ದಾಳಿಯಿಂದ ತತ್ತರಿಸಿರುವ ಶಿವಕುಮಾರ್‌ ಅವರಿಗೆ ಬಂಧನದ ಭೀತಿ  ಎದುರಾಗಿದೆ. ಇ.ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರೆ ಶಿವಕುಮಾರ್ ಸ್ಥಳೀಯ ಸೆಷನ್ಸ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಲಿದ್ದಾರೆ. ಈ ಸಂಬಂಧ ಅವರ ಆಪ್ತರು ಈಗಾಗಲೇ ಬೆಂಗಳೂರು ಮತ್ತು ದೆಹಲಿಯ ಕೆಲವು ಹಿರಿಯ ವಕೀಲರನ್ನು  ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT