ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನಿಂದ ಪಾರಾದ ಬೆಂಗಳೂರು ಬುಲ್ಸ್‌

ಉತ್ತರಾರ್ಧದಲ್ಲಿ ಅಮೋಘ ಆಟವಾಡಿ ಪ್ರೇಕ್ಷಕರ ಹೃದಯ ಗೆದ್ದ ತಮಿಳ್‌ ತಲೈವಾಸ್‌
Last Updated 4 ಆಗಸ್ಟ್ 2017, 20:20 IST
ಅಕ್ಷರ ಗಾತ್ರ

ನಾಗಪುರ: ಉತ್ತರಾರ್ಧದದಲ್ಲಿ ಪ್ರತಿರೋಧ ಒಡ್ಡಿದರೂ ಬೆಂಗಳೂರು ಬುಲ್ಸ್‌ನಿಂದ ಜಯ ಕಸಿದುಕೊಳ್ಳಲು ತಮಿಳ್ ತಲೈವಾಸ್‌ಗೆ ಸಾಧ್ಯವಾಗಲಿಲ್ಲ. ಅಮೋಘ ಆಟ ಆಡಿದ ಬುಲ್ಸ್‌ ಆಟಗಾರರು ಕೇವಲ ಒಂದು ಪಾಯಿಂಟ್‌ನಿಂದ ಎದುರಾಳಿಗಳನ್ನು ಮಣಿಸಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ಎರಡನೇ ಜಯ ತಮ್ಮದಾಗಿಸಿಕೊಂಡರು.

ಇಲ್ಲಿನ ಮಣಕಪುರ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್‌ ಆಟಗಾರರು ಆರಂಭದಿಂದಲೇ ಪ್ರಬಲ ದಾಳಿ ನಡೆಸಿದರು. ಇದಕ್ಕೆ ಉತ್ತರ ನೀಡಲು ವಿಫಲವಾದ ತಮಿಳ್‌ ತಲೈವಾಸ್ ತಂಡದವರು ಸೋಲಿನ ಸುಳಿಯಲ್ಲಿ ಬಿದ್ದರು.

ಪೂರ್ವಾರ್ಧದಲ್ಲಿ 8–23ರ ಹಿನ್ನಡೆ ಅನುಭವಿಸಿದ್ದ ತಲೈವಾಸ್‌ ನಂತರ ದಿಟ್ಟ ಆಟವಾಡಿತು. ಅಂತಿಮ ಕ್ಷಣಗಳಲ್ಲಿ ಪಂದ್ಯಕ್ಕೆ ತಿರುವು ನೀಡಿತು. ಹೀಗಾಗಿ ಒಂದು ಹಂತದಲ್ಲಿ ಈ ತಂಡ ಗೆಲುವಿನ ಕದ ತಟ್ಟಿತ್ತು. ಕೊನೆಗೆ 32–31ರಿಂದ ಪಂದ್ಯ ಬುಲ್ಸ್ ಪಾಲಾಯಿತು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಲಭ್ಯವಿಲ್ಲದ ಕಾರಣ ಬೆಂಗಳೂರು ಬುಲ್ಸ್‌ನ ತವರಿನ ಪಂದ್ಯಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳನ್ನು  ಸವಿಯುವ ಅವಕಾಶ ಇಲ್ಲಿನ ಕ್ರೀಡಾಪ್ರಿಯರಿಗೆ ಲಭಿಸಿತ್ತು. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಇರಲಿಲ್ಲ. ಗ್ಯಾಲರಿಯ ಎಲ್ಲ ಬದಿಯ ಆಸನಗಳು ಕೂಡ ಬಹುತೇಕ ಖಾಲಿಯಾಗಿಯೇ ಉಳಿದಿದ್ದವು.

ಪ್ರೇಕ್ಷಕರ ಕೊರತೆಯ ನಡುವೆಯೂ ದಕ್ಷಿಣದ ಎರಡು ತಂಡಗಳ ನಡುವಿನ ಪಂದ್ಯ ಆರಂಭದಲ್ಲೇ ಕಳೆಕಟ್ಟಿತು. ನಿರಂತರ ರೈಡಿಂಗ್‌ ಪಾಯಿಂಟ್ ಹೆಕ್ಕಿ ತಂದ ಬುಲ್ಸ್ ರೈಡರ್‌ಗಳು ಎದುರಾಳಿಗಳನ್ನು  ಬಲೆಯಲ್ಲಿ ಕೆಡವಿದರು. ಹೀಗಾಗಿ ಮುನ್ನಡೆಯನ್ನು ಕಾಪಾಡಿಕೊಂಡು ಮುಂದೆ ಸಾಗಲು ಬುಲ್ಸ್‌ಗೆ ಸಾಧ್ಯವಾಯಿತು.

ಬೆಂಗಳೂರು ತಂಡದ ಪ್ರಮುಖ ರೈಡರ್‌, ನಾಯಕ ರೋಹಿತ್ ಕುಮಾರ್‌ ನಿರಂತರ ಪಾಯಿಂಟ್‌ಗಳನ್ನು ಗಳಿಸಿದರೆ ತಲೈವಾಸ್‌ನ ಭರವಸೆಯಾಗಿದ್ದ ಅಜಯ್‌ ಠಾಕೂರ್‌ ಪಾಯಿಂಟ್ ಗಳಿಸಲು ಪರದಾಡಿದರು. ಈ ನಡುವೆ ತಲೈವಾಸ್‌ ಎರಡು ಬಾರಿ ಆಲ್‌ ಔಟ್ ಆಯಿತು.

ಬದಲಾದ ಚಿತ್ರಣ
ಉತ್ತರಾರ್ಧದಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. ಪಟ್ಟು ಬಿಡದೆ ಆಡಿದ ತಲೈವಾಸ್‌ ಎದುರಾಳಿಗಳಿಗೆ ಭಾರಿ ಪೆಟ್ಟು ನೀಡಿದರು. ಇದರಿಂದ ವಿಚಲಿತಗೊಂಡ ಬುಲ್ಸ್‌ ಪಾಯಿಂಟ್ ಗಳಿಸಲು ಪರದಾಡಿತು. ಬುಲ್ಸ್‌ ತಂಡವನ್ನು ಎದುರಾಳಿಗಳು ಎರಡು ಬಾರಿ ಆಲ್‌ಔಟ್ ಮಾಡಿದರು.

ಅಂತಿಮ ನಿಮಿಷಗಳಲ್ಲಿ ಪಂದ್ಯ ಸಂಪೂರ್ಣವಾಗಿ ತಲೈವಾಸ್‌ ಹಿಡಿತಕ್ಕೆ ಸಿಗುವ ಸಾಧ್ಯತೆಗಳು ಕಂಡುಬಂದವು. ಒಂದು ಹಂತದಲ್ಲಿ 28–31ರಿಂದ ಹಿನ್ನಡೆ ಅನುಭವಿಸಿದ್ದ ತಲೈವಾಸ್‌ ಇದನ್ನು 29–31ಕ್ಕೆ ಕುಗ್ಗಿಸಿತು. ಈ ಸಂದರ್ಭದಲ್ಲಿ ನಿರ್ಣಾಯಕ ರೈಡ್ ಮಾಡಿದ ರೋಹಿತ್ ಕುಮಾರ್‌ ಒಂದು ಪಾಯಿಂಟ್ ಗಳಿಸಿ ಬುಲ್ಸ್ ಮುನ್ನಡೆಯನ್ನು ಹಿಗ್ಗಿಸಿದರು.

ನಂತರದ ರೈಡ್‌ನಲ್ಲಿ ತಲೈವಾಸ್ ಪ್ರತ್ಯುತ್ತರ ನೀಡಿತು. ಅಂತಿಮ ನಿಮಿಷದ ಮೊದಲ ರೈಡ್‌ನಲ್ಲಿ ತಲೈವಾಸ್‌ನ ಕೆ.ಪ್ರಪಂಜನ್‌ ಒಂದು ಪಾಯಿಂಟ್ ಹೆಕ್ಕಿ ತಂದು ತಂಡದ ಹಿನ್ನಡೆಯನ್ನು 32–31ಕ್ಕೆ ಇಳಿಸಿದರು. ಪಂದ್ಯದ ಅಂತಿಮ ರೈಡ್ ಮಾಡಿದ ರೋಹಿತ್ ಕುಮಾರ್‌ ಚಾಣಾಕ್ಷತನ ಮೆರೆದು ವಾಪಸಾದರು. ಈ ಮೂಲಕ ಮುನ್ನಡೆಯನ್ನು ಉಳಿಸಿಕೊಂಡರು.

ಅಂಗಳಕ್ಕೆ ಇಳಿದ ಕನ್ನಡಿಗ
ಬುಲ್ಸ್ ತಂಡದಲ್ಲಿರುವ ಏಕೈಕ ಕನ್ನಡಿಗ ಹರೀಶ್ ನಾಯಕ್ ಶುಕ್ರವಾರ ಅಂಗಳಕ್ಕೆ ಇಳಿದರು. ಬದಲಿ ಆಟಗಾರನಾಗಿದ್ದ ಅವರು ಪಂದ್ಯದ ಉತ್ತರಾರ್ಧದಲ್ಲಿ ಪ್ರೀತಮ್‌ ಚಿಲ್ಲಾರ್ ಅವರ ಬದಲಿಗೆ ಬಂದು ರೈಡ್ ಮಾಡಿದರು. ಆದರೆ ಯಶಸ್ಸು ಗಳಿಸಲಿಲ್ಲ.

ಪಂದ್ಯದಲ್ಲಿ ಬುಲ್ಸ್‌ ಒಟ್ಟು 15 ರೈಡಿಂಗ್ ಪಾಯಿಂಟ್‌ ಕಲೆ ಹಾಕಿದರೆ ತಲೈವಾಸ್‌ 16 ರೈಡಿಂಗ್‌ ಪಾಯಿಂಟ್‌ ಗಳಿಸಿತು. ಬುಲ್ಸ್‌ಗೆ 13 ಟ್ಯಾಕ್ಲಿಂಗ್ ಪಾಯಿಂಟ್‌ಗಳು ಲಭಿಸಿದರೆ ಎಂಟು ಟ್ಯಾಕ್ಲಿಂಗ್ ಪಾಯಿಂಟ್‌ಗಳು ತಲೈವಾಸ್‌ಗೆ ಲಭಿಸಿದವು. ಎರಡೂ ತಂಡಗಳಿಗೆ ತಲಾ ನಾಲ್ಕು ಆಲ್‌ಔಟ್ ಪಾಯಿಂಟ್‌ಗಳು ಸಿಕ್ಕಿದವು.

ಇಂದಿನ ಪಂದ್ಯಗಳು
ಯು ಮುಂಬಾ– ದಬಂಗ್ ಡೆಲ್ಲಿ ರಾತ್ರಿ 8ಕ್ಕೆ
ಬೆಂಗಳೂರು ಬುಲ್ಸ್ – ಯು.ಪಿ ಯೋಧಾ ರಾತ್ರಿ 9ಕ್ಕೆ

**

ಪುಣೇರಿ ಪಲ್ಟನ್‌ಗೆ ಸುಲಭ ಜಯ

ರಾಜೇಶ್‌ ಮಂಡಲ್‌ (ಎಂಟು ರೈಡಿಂಗ್ ಪಾಯಿಂಟ್‌) ಮತ್ತು ದೀಪಕ್‌ ನಿವಾಸ್ ಹೂಡ (ಏಳು ರೈಡಿಂಗ್ ಪಾಯಿಂಟ್‌) ಅವರ ಉತ್ತಮ ಆಟದ ನೆರವಿನಿಂದ ಪುಣೇರಿ ಪಲ್ಟನ್‌ ತಂಡ ದಬಂಗ್ ದೆಲ್ಲಿ ವಿರುದ್ಧ 26–21 ಪಾಯಿಂಟ್‌ಗಳ ಅಂತರದ ಜಮಯ ಸಾಧಿಸಿತು. ಶುಕ್ರವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಸ್ಥಳೀಯ ಪ್ರೇಕ್ಷರಕರು ಮಹಾರಾಷ್ಟ್ರದ ತಂಡಕ್ಕೆ ಉತ್ತಮ ಬೆಂಬಲ ನೀಡಿದರು. ಅವರನ್ನು ನಿರಾಸೆಗೊಳಿಸದ ಪಲ್ಟನ್‌ ಪೂರ್ವಾರ್ಧದಲ್ಲಿ 11–7ರಿಂದ ಮುನ್ನಡೆ ಸಾಧಿಸಿತು. ಉತ್ತರಾರ್ಧದಲ್ಲಿ ದೆಲ್ಲಿ ತಂಡದವರು ಮರು ಹೋರಾಟ ನಡೆಸಿದರು. ಆದರೂ ಜಯ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಈ ತಂಡದ ಆನಂದ ಪಾಟೀಲ ಆರಂಭದಿಂದಲೇ ಉತ್ತಮ ಆಟ ಆಡಿ ಒಟ್ಟು ಎಂಟು ರೈಡಿಂಗ್ ಪಾಯಿಂಟ್ ಸುನಿಲ್ ನಾಲ್ಕು ಪಾಯಿಂಟ್‌ ಗಳಿಸಿದರು. ಆದರೆ ಮೆರಾಜ್ ಶೇಖ್‌, ನೀಲೇಶ್ ಶಿಂಧೆ ಮುಂತಾದವರು ಮಿಂಚಲು ವಿಫಲರಾದರು. ಇದು ತಂಡ ಸೋಲಿನ ಸುಳಿಯಲ್ಲಿ ಸಿಲುಕಲು ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT