ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರವ್ಯಾಸನು ಕಾಣಿಸುವ ವಿಜಯನಗರ

Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದು ರಸಋಷಿ ಕುವೆಂಪು ಅವರು ಕವಿಗುರುವನ್ನು ಹಾಡಿ ಹೊಗಳಿದ್ದರಲ್ಲಿ ಯಾವುದೇ ಉತ್ಪ್ರೇಕ್ಷೆಯೂ ಇಲ್ಲ. ವೇದವ್ಯಾಸರ ಮಹಾಕಾವ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ, ನಿಖರವಾಗಿ, ಸಂಕ್ಷಿಪ್ತವಾಗಿ ಹಾಗೂ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಈ ಶಬ್ದಗಾರುಡಿಗ ಕಟ್ಟಿಕೊಟ್ಟಿದ್ದಾನೆ.

ವೇದವ್ಯಾಸರು ನಾಲ್ಕಾರು ಪುಟಗಳಲ್ಲಿ ಬರೆದ ಸಂಗತಿಗಳನ್ನು ಒಂದು ಪುಟ್ಟ ಷಟ್ಪದಿಯಲ್ಲಿ ಅರ್ಥಕ್ಕೆ ಭಂಗ ಬರದಂತೆ ಸ್ಥೂಲವಾಗಿ ಕೊಡುವ ಜಾಣತನ ಈ ವ್ಯಾಸಕುಮಾರನದು. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ವಸ್ತುವಿವರಗಳನ್ನು ಕೊಡುವಾಗ ವೇದವ್ಯಾಸನ ಭಾರತದಿಂದ ಹೊರಬಂದು ತನ್ನ ಸುತ್ತಲಿನ ಜಗತ್ತನ್ನು ಪರಿಚಯಿಸುತ್ತಾನೆ. ವಿಶೇಷವೆಂದರೆ ಅಂತಹ ಬಹುತೇಕ ವಿವರಗಳು ಅವನ ಕಾಲವಾದ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದವುಗಳಾಗಿವೆ. ಆ ಸಾಮ್ರಾಜ್ಯದ ಜನಜೀವನದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಂಗತಿಗಳು ಇಣುಕಿ ಹಾಕುತ್ತವೆ.

ಮಹಾಭಾರತದ ಕಥನ ಕುತೂಹಲದಿಂದ ಈತನ ಕಾವ್ಯವನ್ನು ಓದದೆ, ಎರಡು ಸಾಲಿನ ಮಧ್ಯದಲ್ಲಿ ವಿಶೇಷವನ್ನು ಕಾಣುವ ಗೂಢಾಚಾರಿಕೆಯಿಂದ ಓದಿದಾಗ ಮಾತ್ರ ಈ ಸಂಗತಿಗಳು ಹೇರಳವಾಗಿ ಗೋಚರಿಸುತ್ತವೆ. ಅಂತಹ ವಿವರಗಳನ್ನು ಹೆಕ್ಕುವ ಕೆಲಸವನ್ನು ಈ ಲೇಖನದಲ್ಲಿ ಪ್ರಯತ್ನಿದ್ದೇನೆ. ಕುಮಾರವ್ಯಾಸನ ಹತ್ತೂ ಪರ್ವಗಳನ್ನು ಪರಿಗಣಿಸುವುದು ವಿಪರೀತ ಶ್ರಮದ ಕೆಲಸವಾದ್ದರಿಂದ ಕೇವಲ ಆದಿಪರ್ವವನ್ನು ಮಾತ್ರ ಇಲ್ಲಿ ಪರಿಗಣಿಸಿದ್ದೇನೆ. ಆಸಕ್ತರು ಉಳಿದ ಪರ್ವಗಳಲ್ಲಿಯೂ ಈ ಹುಡುಕಾಟವನ್ನು ಮುಂದುವರೆಸಬಹುದು.

‘ರಾಜ’ ಪದಕ್ಕೆ ತದ್ಭವರೂಪಿಯಾಗಿ ‘ರಾಯ’ ಪದವನ್ನು ವಿಪರೀತವಾಗಿ ಬಳಸಿದವರೆಲ್ಲರೂ ಬಹುತೇಕ ವಿಜಯನಗರ ಕಾಲದ ಸಾಹಿತಿಗಳೇ ಆಗಿದ್ದಾರೆ. ಪಂಪ, ರಾಘವಾಂಕ ಮತ್ತು ವಚನಕಾರರಲ್ಲಿ ಈ ಪದದ ಬಳಕೆ ತುಂಬಾ ಕಡಿಮೆಯಿದೆ. ಆದರೆ ಕುಮಾರವ್ಯಾಸ ಪುರಂದರ ಕನಕರು ‘ರಾಯ’ ಎಂಬ ಪದವನ್ನು ಯಥೇಚ್ಛವಾಗಿ ಬಳಸಿದ್ದಾರೆ. ವಿಜಯನಗರದ ರಾಜರೆಲ್ಲರೂ ‘ರಾಯ’ ಎಂದು ತಮ್ಮನ್ನು ಕರೆದುಕೊಂಡದ್ದರ ಪ್ರಭಾವವಿದೆಂದು ನಾವು ಊಹಿಸಬಹುದು.

ಬಾಲ್ಯದಲ್ಲಿ ಕೌರವ-ಪಾಂಡವರು ಆಡುವ ಆಟಗಳ ವಿವರವನ್ನು ಗಮನಿಸೋಣ. ವೇದವ್ಯಾಸರು ಕೇವಲ ಮರವನ್ನು ಹತ್ತಿ ಹಣ್ಣು ಕೀಳುವುದು, ಈಜಾಡುವುದು, ದೂಳು ಹಾರಿಸುವುದು ಎಂಬಿತ್ಯಾದಿ ಆಟಗಳಿಂದ ಬಾಲ್ಯಕೇಳಿಯನ್ನು ವಿವರಿಸುತ್ತಾರೆ. ಆದರೆ ನಮ್ಮ ಕುಮಾರವ್ಯಾಸನು ತನ್ನ ಕಾಲದ ವಿಶೇಷ ಆಟಗಳನ್ನೆಲ್ಲಾ ಕಾಣಿಸುತ್ತಾನೆ.

ಆಳಿನೇರಿಕೆ ಹಿಡಿಗವಡೆ ಗುರಿ

ಯಾಳು ಚೆಂಡಿನ ಹೊಣಕೆ ಚಿಣಿ ಕೋ

ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ || 6-1 ||

ಗುಡುಗು ಗುತ್ತಿನಚೆಂಡು ಗುಮ್ಮನ

ಬಡಿವ ಕತ್ತಲೆ ಗುದ್ದುಗಂಬದ

ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ

ಕೆಡಹು ಕುಟ್ಟಿಗನಾದಿಯಾದವ

ಗಡ ವಿನೋದದಲಾಡಿದರು ಪಂ

ಗಡದಲೈವರು ನೂರ್ವರಿವರಿತ್ತಂಡವೊಂದಾಗಿ || 6 - 2||

ಈಗ ನಮಗೆ ಗುರುತಿಸಲೂ ಕಷ್ಟವಾಗುವಷ್ಟು ವೈವಿಧ್ಯಮಯ ಆಟಗಳನ್ನು ಕುಮಾರವ್ಯಾಸ ದಾಖಲಿಸಿದ್ದಾನೆ. ಇವೆಲ್ಲವೂ ವಿಜಯನಗರ ಕಾಲದಲ್ಲಿನ ಗಂಡು ಮಕ್ಕಳ ಆಟಗಳಾಗಿರಬಹುದೆಂದು ನಾವು ಊಹಿಸಬಹುದಾಗಿದೆ.

ಗುರು ದ್ರೋಣಾಚಾರ್ಯರ ಗರಡಿಯಲ್ಲಿ ಪಾಂಡವ-ಕೌರವ ಬಾಲಕರು ಯುದ್ಧ ವಿದ್ಯೆಯಲ್ಲಿ ಪಳಗಿದರಲ್ಲವೆ? ಆ ಕೌಶಲಗಳ ವಿವರಗಳನ್ನು ಕುಮಾರವ್ಯಾಸ ನೀಡಿರುವುದನ್ನು ಗಮನಿಸಿ.

ಸುರಗಿ ಸಬಳ ಕಠಾರಿಯುಬ್ಬಣ

ಹರಿಗೆ ಹಿರಿಯುಬ್ಬಣವಡಾಯುಧ

ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳಚಯ

ಪರಶು ಕಕ್ಕಡೆ ಮುಸಲ ಹಲ ಮು

ದ್ಗರ ಧನುರ್ದಂಡಾದಿ ಶಸ್ತ್ರೋ       

ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ ||6-45||

ವೇದವ್ಯಾಸರು ಈ ಯುದ್ಧ ವಿದ್ಯೆಗಳನ್ನು ವಿವರಿಸುವಾಗ ಬಿಲ್ಲು, ಗದೆ, ಕತ್ತಿ, ತೋಮರ, ಈಟಿ ಮತ್ತು ಶಕ್ತಾಯುಧ ಎಂದು ಹೇಳುತ್ತಾರೆ. ವಿಜಯನಗರ ಸಾಮ್ರಾಜ್ಯವು ವಿಪರೀತ ಯುದ್ಧಗಳನ್ನು ಕಂಡ ಕಾಲಘಟ್ಟ. ಸಹಜವಾಗಿಯೇ ಆ ಹೊತ್ತಿನಲ್ಲಿ ವೈವಿಧ್ಯಮಯ ಆಯುಧಗಳ ಬಳಕೆ ರೂಢಿಯಲ್ಲಿದೆ. ಯುದ್ಧದ ಪರ್ವಗಳಲ್ಲಿ ಈ ಆಯುಧಗಳ ಅನನ್ಯ ಬಳಕೆಗಳ ವಿವರಣೆಯನ್ನೂ ಕಾಣಬಹುದು.

ರಾಜಕುಮಾರರ ವಿದ್ಯೆಯ ಪ್ರದರ್ಶನಕ್ಕಾಗಿ ದ್ರೋಣ ತಯಾರಿ ಮಾಡಿದನಲ್ಲವೆ? ಅದರ ವಿವರಗಳಂತೂ ಬಹುತೇಕ ಹಂಪಿಯ ಅರಮನೆಗಳು, ಅಂತಃಪುರ ಮತ್ತು ಕಲ್ಲು ಮಂಟಪಗಳ ವಿವರಗಳಾಗಿ ಕುಮಾರವ್ಯಾಸ ಕಂಡಂತೆ ಭಾಸವಾಗುತ್ತದೆ. ಹಸ್ತಿನಾಪುರದ ವೈಭವವನ್ನು ಹಂಪೆಯ ವೈಭವದ ಮೂಲಕ ಕಾಣುವ ಕುಮಾರವ್ಯಾಸನ ಕಲ್ಪನೆಯೇ ಚಂದ.

ತರವಿಡಿದು ರಚಿಸಿದರು ನೆರೆಯು

ಪ್ಪರಿಗೆಗಳ ಹಂತಿಗಳನಂತಃ

ಪುರವ ತತ್ಪಾರ್ಶ್ವದಲಿ ಭಾರಿಯ ಭದ್ರ ಭವನಿಕೆಯ

ಪುರಜನದ ಪರಿಜನದ ನೆಲೆಯು

ಪ್ಪರಿಗೆಗಳ ರಚಿಸಿದರು ಹಸ್ತಿನ

ಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ     |7-14||

ಅದ್ಭುತವಾಗಿ ಕಲಿತ ವಿದ್ಯೆಯನ್ನು ಪ್ರದರ್ಶಿಸಿದ ಬಾಲಕರಿಗೆ ದೃಷ್ಟಿ ನಿವಾಳಿಸಬೇಕಲ್ಲವೆ? ಅದಕ್ಕಾಗಿ ನೆರೆದ ಹೆಂಗಸರು ತಮ್ಮ ಸೆರಗಿನ ತುದಿಯನ್ನು ಗಾಳಿಯಲ್ಲಿ ತೂರಿ ಉಪ್ಪಾರತಿ ಮಾಡುತ್ತಾರೆ. ವೇದವ್ಯಾಸರಿಗೆ ಈ ದೃಷ್ಟಿ ತೆಗೆಯುವ ಸಂಪ್ರದಾಯ ಗೊತ್ತಿರಲಿಕ್ಕಿಲ್ಲ.

ಭೂರಿ ಸಭೆಯಲಿ ಸುಲಿದು ಬಿಸುಡುವ

ಸೀರೆಗಳ ತೂಪಿರಿದು ಸುಳಿವು

ಪ್ಪಾರತಿಯ ತನಿ ಹರಕೆ ತಳಿತುದು ತಾಯ ನೇಮದಲಿ  ||7-30||

ದುಷ್ಟಚತುಷ್ಟಯರ ಮಧ್ಯೆ ಕುನಿಯು  ದುರ್ಬೋಧನೆಗಳನ್ನು ಮಾಡಿ (ವೇದವ್ಯಾಸ ಭಾರತದಲ್ಲಿ ಕಣಿಕನೆಂಬುವನು ಈ ದುರ್ಬೋಧನೆ ಮಾಡುತ್ತಾನೆ), ಆ ಮೂಲಕವಾಗಿ ದುರ್ಯೋಧನನ ಮನಸ್ಸನ್ನು ಕೆಡಿಸುತ್ತಾನಲ್ಲವೆ? ಅದರಲ್ಲಿ ಒಂದು ಷಟ್ಪದಿಯ ವಿವರವಂತೂ ಬಹು ವಿಶೇಷವಾಗಿದೆ. ಶತ್ರುಗಳನ್ನು ಯಾವತ್ತೂ ನಿರ್ಲಕ್ಷ್ಯ ಮಾಡಬಾರದು; ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ಇಡೀ ಕುಟುಂಬದವರ ಕಣ್ಣು ಕೀಳಿಸಿ, ಸೆರೆಮನೆಯಲ್ಲಿ ಊಟವಿಲ್ಲದಂತೆ ಅಟ್ಟಿಬಿಡುತ್ತಾನೆ ಎಂದು ಶಕುನಿ ಬೋಧಿಸುತ್ತಾನೆ. ಇದು ವಿಜಯನಗರ ಕಾಲದ ರಾಜಕೀಯ ಪಿತೂರಿಗಳ ಪ್ರಭಾವವಾಗಿರಬೇಕು ಅನ್ನಿಸುತ್ತದೆ. ಈ ವಿವರವನ್ನು ಓದಿದಾಗ ಕೃಷ್ಣದೇವರಾಯನು ತಿಮ್ಮರಸು ಮತ್ತವನ ಬಂಧುಗಳೆಲ್ಲರ ಕಣ್ಣು ಕೀಳಿಸಿ ಅರಮನೆಗೆ ಅಟ್ಟಿ ಉಪವಾಸ ಕೆಡುವಿದ ದೃಶ್ಯ ಚಕ್ಕನೆ ಕಣ್ಣ ಮುಂದೆ ಬರುತ್ತದೆ. ಬಿಜಾಪುರದ ಆದಿಲ್‌ ಶಾಹಿಯ ವಂಶಾವಳಿಯಲ್ಲಿಯೂ ರಾಜಕುಮಾರರ ಕಣ್ಣು ಕಿತ್ತು, ಅವರಿಗೆ ರಾಜ್ಯ ದಕ್ಕದಂತೆ ಮಾಡುವ ವಿವರಗಳಿವೆ.

ಶತ್ರು ಶೇಷವಿದಲ್ಪವೆಂದುಳು

ಹುತ್ತ ಬರಲಾಗದು ಕಣಾ ಭೂ

ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು

ಬಿತ್ತುವರೆ ನೇತ್ರಾವಳಿಯ ಮೀ

ಟೆತ್ತಿ ಕಾರಾಗಾರದೊಳಗೆ ಕ

ಳತ್ರ ಸಹಿತನಶದಲಧಿಕ ವ್ರತವ ಮಾಡೆಂದ ||8-27||

ದ್ರೌಪದಿಯ ಸ್ವಯಂವರಕ್ಕೆ ಯಾರೆಲ್ಲಾ ಬಂದಿದ್ದರು ಎಂಬ ಷಟ್ಪದಿಯನ್ನು ನೋಡಿ.

ಕವಿಗಮಕಿ ವಾದಿಗಳು ವಾಗ್ಮಿ

ಪ್ರವರ ಯಾಜ್ಞಿಕ ಮಾಂತ್ರಿಕರು ವೈ

ಷ್ಣವ ಮಹೇಶ್ವರ ಜೈನ ಭೈರವ ಬುದ್ಧ ಲಿಂಗಿಗಳು

ವಿವಿಧ ವರ್ಣಾಶ್ರಮ ಸುಧರ್ಮ

ವ್ಯವಹರಣ ನಿಷ್ಠರು ವಿವಾಹೋ

ತ್ಸವ ವಿಲೋಕನ ಕೌತುಕಿಗಳೊದಗಿದರಸಂಖ್ಯಾತ||12-22||

ತನ್ನ ಕಾಲದ ಶೈವ, ವೈಷ್ಣವ, ಜೈನ, ಭೈರವ, ಬೌದ್ಧ ಮತ್ತು ಲಿಂಗಾಯಿತರನ್ನೆಲ್ಲಾ ದ್ರೌಪದಿಯ ಸ್ವಯಂವರಕೆ ಕರೆಯುವ ನಮ್ಮ ಕುಮಾರವ್ಯಾಸ ನಿಜಾರ್ಥದಲ್ಲಿ ಸಮಕಾಲೀನ ಸಾಹಿತ್ಯವನ್ನು ಬರೆದ ಕವಿಯೆನ್ನಿಸುತ್ತಾನೆ.

ದ್ವಾಪರ ಯುಗದಲ್ಲಿ ದೇವಸ್ಥಾನ, ಪೂಜೆ-ಪುನಸ್ಕಾರಗಳು ಇರಲಿಲ್ಲವೆನ್ನಿಸುತ್ತದೆ. ಅಂತಹ ವಿವರಗಳು ನಮಗೆ ವೇದವ್ಯಾಸ ಭಾರತದಲ್ಲಿ ಅಷ್ಟಾಗಿ ಸಿಕ್ಕುವುದಿಲ್ಲ. ಆಗ ಯಜ್ಞವನ್ನು ನಿರ್ವಹಿಸು ವುದೇ ಅತ್ಯಂತ ಮುಖ್ಯ ವೈದಿಕ ಕ್ರಮವಾಗಿತ್ತು. ಅನಂತರದ ದಿನಗಳಲ್ಲಿ ಈ ಎಲ್ಲಾ ರೂಢಿಗಳು ಹಿಂದೂ ಧರ್ಮದಲ್ಲಿ ಸೇರಿಕೊಂಡಿವೆ. ವಿಜಯನಗರ ಕಾಲದಲ್ಲಂತೂ ದೇವಸ್ಥಾನ, ದೈವಪೂಜೆಯ ಸಂಪ್ರದಾಯ ಆರ್ಭಟವಾಗಿತ್ತು. ಆ ಕಾಲದ ಬಹುವೈಭವದ ದೇವಸ್ಥಾನವಾದ ಕಂಚಿಯ ವಿವರವು ಕೆಳಗಿನ ಷಟ್ಪದಿಯಲ್ಲಿ ಗೋಚರಿಸುತ್ತದೆ. ದ್ರೌಪದಿಯು ತಮಗೇ ಸಿಗಲಿ ಎಂಬ ಆಸೆಯಿಂದ ರಾಜರು ಗಣೇಶನಿಗೆ ಕಜ್ಜಾಯವನ್ನು ತಿನ್ನಿಸಿ, ಸ್ವಯಂವರಕ್ಕೆ ಬರುವ ವಿವರ ಕಚಗುಳಿ ಇಡುತ್ತದೆ.

ಹರಸಿಕೊಂಡರು ನಿಖಿಳ ಪೃಥ್ವೀ

ಶ್ವರರು ಮಾಯಾಪುರದ ಕಾಂಚೀ

ಪುರದ ಜಾಳಾಂಧರದ ವಿವಿಧಸ್ಥಾನ ದೇವರಿಗೆ

ಕರಿಮುಖನ ಕಜ್ಜಾಯದಲಿ ಸ

ತ್ಕರಿಸಿ ಸಂಶಯ ಭೇದವರ್ಗದ

ಹರುಷದಲಿ ಹೊರವಂಟರೊಬ್ಬರನೊಬ್ಬರುರವಣಿಸಿ  ||13-3||

ವಿಜಯನಗರದ ರಾಣಿಯರು ಪಲ್ಲಕ್ಕಿಯನ್ನು ವಿಶೇಷವಾಗಿ ಬಳಸುತ್ತಿದ್ದರು. ಸಾರ್ವಜನಿಕ ಸಮಾರಂಭದ ಹೊರತಾಗಿ ಅವರೆಂದೂ ಜನರಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಒಬ್ಬೊಬ್ಬ ರಾಯನೂ ನೂರಾರು ರಾಣಿಯರನ್ನು ಅಂತಃಪುರದಲ್ಲಿ ಸಾಕುತ್ತಿದ್ದನಾದ್ದರಿಂದ, ಸಮಾರಂಭವೊಂದಕ್ಕೆ ಅವರೆಲ್ಲಾ ಆಗಮಿಸಿದರೆ ಪಲ್ಲಕ್ಕಿಗಳ ದಂಡು ನೆರೆಯುತ್ತಿತ್ತು. ಈ ಪಲ್ಲಕ್ಕಿಗಳ ಬಳಕೆಯನ್ನು ಕುಮಾರವ್ಯಾಸ ಯಥೇಚ್ಛವಾಗಿ ಕಟ್ಟಿಕೊಡುತ್ತಾನೆ. ಸ್ವಯಂವರ ಸಭೆಗೆ ದ್ರೌಪದಿಯು ದಂಡಿಗೆಯಲ್ಲಿ ಬರುವ ವಿವರವನ್ನು ಗಮನಿಸಿ.

ಮುಂದೆ ಪಾಯವಧಾರು ಸತಿಯರ

ಸಂದಣಿಯ ಸಾಲಿನಲಿ ದಂಡಿಗೆ

ಗಿಂದುಮುಖಿ ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ ||೧೩-೨೮||

ವೀಳ್ಯದೆಲೆಯನ್ನು ಮೆಲ್ಲುವ ಸಂಪ್ರದಾಯ ವಿಜಯನಗರದಲ್ಲಿ ವಿಪರೀತವಿತ್ತು. ಈ ಜನರು ಯಾವಾಗಲೂ ಎಲೆ-ಅಡಿಕೆ ಮೆಲ್ಲುತ್ತಿರುತ್ತಾರೆ ಎಂದು ವಿಜಯನಗರ ಕಾಲದ ಪ್ರವಾಸಿಗರು ದಾಖಲಿಸಿದ್ದಾರೆ. ಎರಡನೆಯ ಶತಮಾನದ ಹೊತ್ತಿಗೆ ಈ ದೇಶಕ್ಕೆ ಇಂಡೋನೇಷ್ಯಾದಿಂದ ಈ ವೀಳ್ಯದೆಲೆ ಬಂದಿತೆಂದು ಪ್ರಾಜ್ಞರು ಹೇಳುತ್ತಾರೆ. ಆದ್ದರಿಂದ ವೇದವ್ಯಾಸ ಭಾರತದಲ್ಲಿ ವೀಳ್ಯದೆಲೆ ಮೆಲ್ಲುವ ವಿವರಗಳು ಬರುವುದಿಲ್ಲ. ಆದರೆ ದಿನದ ಎಲ್ಲಾ ಕಾಲದಲ್ಲೂ ವೀಳ್ಯದೆಲೆಯನ್ನು ಜನರು ಮೆಲ್ಲುತ್ತಿದ್ದ ದೃಶ್ಯವನ್ನು ನೋಡುತ್ತಿದ್ದ ಕುಮಾರವ್ಯಾಸ, ಅದನ್ನು ಹೇಗೆ ಬಿಟ್ಟು ಕೊಡುತ್ತಾನೆ? ದ್ರೌಪದಿಯ ಸೌಂದರ್ಯಕ್ಕೆ ಬೆರಗಾದ ಅರಸರು ಅದು ಹೇಗೆ ವೀಳ್ಯದೆಲೆ ಮೆಲ್ಲುವುದನ್ನು ಮರೆತು ಮೂಕರಾಗಿದ್ದಾರೆ ನೋಡಿ.

ಮಡಿಸಿದೆಲೆ ಬೆರಳೊಳಗೆ ಬಾಯೊಳ

ಗಡಸಿದೆಲೆ ಬಾಯೊಳಗೆ ಸಚಿವರ

ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ ||13-67||

ವಿಜಯನಗರದ ರಾಯರು ಕೋಟೆಗಳನ್ನು ಸೊಗಸಾಗಿ ಕಟ್ಟುತ್ತಿದ್ದರು. ಎತ್ತರದ ಕಲ್ಲಿನ ಗೋಡೆಗಳನ್ನು ಕಟ್ಟಿ, ಅದರ ಸುತ್ತಲೂ ಬಹುದೊಡ್ಡ ಕಂದಕವನ್ನು ನಿರ್ಮಿಸಿ, ಅದರಲ್ಲಿ ಯಾವುದಾದರೂ ನದಿಯ ನೀರು ಅಥವಾ ಸರೋವರದ ನೀರನ್ನು ಹರಿಯಬಿಟ್ಟಿರುತ್ತಿದ್ದರು. ಈ ಕೋಟೆಗೆ ಕೊತ್ತಲಗಳಿದ್ದು, ಅವುಗಳ ಮೂಲಕ ಬಿಲ್ಲು ಮತ್ತು ಗುಂಡುಗಳ ಮಳೆಯನ್ನು ಶತ್ರು ಸೈನಿಕರ ಮೇಲೆ ಸುರಿಯುತ್ತಿದ್ದರು. ಇಂತಹ ಕೋಟೆಗಳಾಗಲಿ, ಪಿರಂಗಿಯ ಮೂಲಕ ಗುಂಡನ್ನು ಉಡಾಯಿಸುವುದಾಗಲಿ ವೇದವ್ಯಾಸರಿಗೆ ಗೊತ್ತಿಲ್ಲವೆನ್ನಿಸುತ್ತದೆ; ಆದರೆ ಅವರ ಕುಮಾರನಿಗೆ ಗೊತ್ತು. ದ್ರೌಪದಿಯನ್ನು ಸ್ವಯಂವರದಲ್ಲಿ ಗೆಲ್ಲುವಲ್ಲಿ ಸೋತ ಕೌರವರು, ಪಾಂಚಾಲ ಕೋಟೆಗೆ ಲಗ್ಗೆ ಹಾಕುವ ವಿವರವನ್ನು ಗಮನಿಸಿ.

ಏಳಿ ಹತ್ತಲಿ ಲಗ್ಗೆ ಪದಹತ

ಧೂಳಿಯಲಿ ಹಿರಿಯಗಳಿನಗಲವ

ಹೂಳಿ ಕಳೆಯಲಿ ಹರಿದು ಹತ್ತಲಿ ತೆನೆಯ ಸರಿಸದಲಿ

ಕೋಲು ಗುಂಡಿನ ಹತಿಗೆ ಹುರಿಯೊಡೆ

ದಾಳ ಹೊಯ್ ಹೊಯ್ಯೆನುತ ಸಕಲ ನೃ

ಪಾಳಿ ಗರ್ಜಿಸಿ ಮುತ್ತಿದುದು ಪಾಂಚಲಪಟ್ಟಣವ||15-42||

ವೇದವ್ಯಾಸ ಭಾರತದಲ್ಲಿ ಶಿವನು ಆಗಾಗ ಬರುವನಾದರೂ, ಕೃಷ್ಣನಾಯಕತ್ವದ ಆಕೃತಿಯಲ್ಲಿ ಅವನೇ ದೊಡ್ಡ ದೈವ ಎಂದು ಕೊಂಡಾಡುವ ಮನೋಭಾವ ಕಾಣಿಸುವುದಿಲ್ಲ. ‘ತಿಳಿಯ ಹೇಳುವೆ ಕೃಷ್ಣ ಕತೆಯನು’ ಎಂದು ಕುಮಾರ ವ್ಯಾಸ ತನ್ನ ಕಾವ್ಯವನ್ನು ಆರಂಭಿಸಿದರೂ ಅವನಿಗೆ ಶಿವನ ಮೇಲೆ ವಿಶೇಷಭಕ್ತಿ-ಗೌರವಗಳಿವೆ. ಮನಬಿಚ್ಚಿ ಶಿವನನ್ನು ಕೊಂಡಾಡುತ್ತಾನೆ. ವಿಜಯನಗರದ ಕಾಲದಲ್ಲಿ ಶೈವ-ವೈಷ್ಣವಸಂಪ್ರದಾಯಗಳೆರಡೂ ಅತ್ಯಂತ ಪ್ರಚಲಿತದಲ್ಲಿದ್ದವು. ಎರಡೂ ಧರ್ಮಗಳ ಅನುಯಾಯಿಗಳು ವಿಪರೀತವಾಗಿದ್ದರು. ಎಲ್ಲ ನಂಬಿಕೆಯ ಜನರನ್ನೂ ತನ್ನ ಕಾವ್ಯದೆಡೆಗೆ ಸೆಳೆದುಕೊಳ್ಳುವ ದೃಷ್ಟಿಯಿಂದ ಕುಮಾರವ್ಯಾಸ ಸರ್ವದೈವವನ್ನೂ ಮುಕ್ತವಾಗಿ ಕೊಂಡಾಡುತ್ತಾನೆಯೆ ಎಂಬ ಅನುಮಾನವೂ ಮೂಡುತ್ತದೆ. ಕೆಳಗಿನ ಷಟ್ಪದಿಯಲ್ಲಿ ಶಿವನ ಮಹಿಮೆಯ ವಿವರವನ್ನು ನಮ್ಮ ಕೃಷ್ಣಪ್ರಿಯ ಕುಮಾರವ್ಯಾಸ ಹೇಗೆ ನೀಡಿದ್ದಾನೆಂದು ಗಮನಿಸಿ.

ಹರನ ನುಡಿಯೇ ವೇದ ಹರನಾ

ಚರಣೆಯೇ ಸನ್ಮಾರ್ಗ ಹರ ಪತಿ

ಕರಿಸಿ ನುಡಿದುದೆ ಪರಮ ಪಾವನ ಧರ್ಮತತ್ವವದು

ಬರಹ ಸಹಿತಾ ವಿಧಿಯನೊರಸಲು

ಹರ ಸಮರ್ಥನು ಹರನ ಬರಹವ

ನೊರಸಲಾಪರ ತೋರಿಸಾ ಬ್ರಹ್ಮಾದಿ ದೇವರಲಿ||16-53||

ಭಾರತದ ಭೂಗೋಳದ ವಿವರಗಳು ಎಷ್ಟರಮಟ್ಟಿಗೆ ನಮ್ಮ ಕನ್ನಡದ ಕವಿಗಳಿಗೆ ತಿಳಿದಿತ್ತೋ ಹೇಳುವುದು ಕಷ್ಟ. ಆದರೆ ಅವರೊಂದು ತಂತ್ರವನ್ನುಬಳಸುತ್ತಿದ್ದರು. ತಮ್ಮ ಸ್ಥಳದ ಸುತ್ತಮುತ್ತಲಿನ ನದಿ-ಪರ್ವತಗಳನ್ನೇ ಮಹಾಕಾವ್ಯಗಳ ಕನ್ನಡ ಮರುಕಥನದಲ್ಲಿ ಕಾಣಿಸಿ ಸಂಭ್ರಮಿಸುತ್ತಿದ್ದರು. ಅದಕ್ಕೆ ಉದಾಹರಣೆಯಾಗಿ ಅರ್ಜುನನ ಒಂದು ವರ್ಷದ ತೀರ್ಥಯಾತ್ರೆಯ ವಿವರವನ್ನು ನೋಡಬಹುದು. ವ್ಯಾಸಭಾರತದಲ್ಲಿ ಅರ್ಜುನನು ಒರಿಸ್ಸಾ(ಕಳಿಂಗ)ದ ಬಳಿ ಬ್ರಾಹ್ಮಣರಿಂದ ಬೇರ್ಪಟ್ಟು ತಾನೊಬ್ಬನೇ ಸಮುದ್ರದ ದಂಡೆಗುಂಟಾ ಯಾತ್ರೆ ಹೊರಡುತ್ತಾನೆ. ಅನಂತರ ಗೋದಾವರಿ ನದಿಯ ದರ್ಶನ ಮಾಡಿ, ಮುಂದೆ ಬರುವ ಕಾವೇರಿಯಲ್ಲಿ ಸ್ನಾನ ಮಾಡಿ, ಅನಂತರ ಮಣಿಪುರದ ರಾಜ್ಯವನ್ನು (ಬಹುಶಃ ತಮಿಳುನಾಡಿನ ಪಾಂಡ್ಯ ರಾಜ್ಯವಿರಬೇಕು ಅನ್ನಿಸುತ್ತದೆ. ಸದ್ಯದ ಭಾರತದ ‘ಮಣಿಪುರ’ ರಾಜ್ಯವಿದಲ್ಲ) ಪ್ರವೇಶಿಸುತ್ತಾನೆ. ಈ ಎಲ್ಲಾ ವಿವರಗಳು ಭಾರತದ ಭೂಗೋಳಕ್ಕೆ ಹೊಂದಿಕೊಳ್ಳುತ್ತವೆ. ಆದರೆ ನಮ್ಮ ಕುಮಾರವ್ಯಾಸನಿಗೆ ತನ್ನ ತವರನ್ನು ಕತೆಯಲ್ಲಿ ತರುವ ಉತ್ಸಾಹ. ಅದಕ್ಕಾಗಿ ಅರ್ಜುನನಿಗೆ ಪಂಚ ಗೋದಾವರಿಯ ಸ್ನಾನದ ನಂತರ, ಕಾವೇರಿಯ ನದಿಯ ಬದಲು ತುಂಗಭದ್ರಾ ನದಿಯ ದರ್ಶನ ಮಾಡಿಸಿ, ಅನಂತರ ವಿಜಯನಗರ ಸಾಮ್ರಾಜ್ಯದ ಬಹುಮುಖ್ಯ ನಗರ ಕಂಚಿಯ ಪ್ರವೇಶವನ್ನು ಮಾಡಿಸುತ್ತಾನೆ. ಎಲ್ಲಿಯ ಗೋದಾವರಿ, ಎಲ್ಲಿಯ ತುಂಗಭದ್ರಾ, ಅದೆಲ್ಲಿಯ ಕಂಚಿ ಪಟ್ಟಣ! ಆದರೆ ತನ್ನ ಶಬ್ದಮೋಡಿಯಲ್ಲಿ ಅವೆಲ್ಲವನ್ನೂ ಕುಮಾರವ್ಯಾಸ ಸೊಗಸಾಗಿ ನೇಯ್ದು ಶ್ರೋತೃವಿನ ಕಥಾರಸಕ್ಕೆ ಭಂಗ ಬರದಂತೆ ಒಪ್ಪಿಸುತ್ತಾನೆ.

ಅರಸ ಕೇಳುತ್ತರದ ಪೂರ್ವದ

ಪರಮ ತೀರ್ಥವ್ರಾತವನು ವಿಡ

ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ

ತಿರುಗಿದನು ತತ್ಪಂಚ ಗೋದಾ

ವರಿಯ ತೀರಕೆ ತುಂಗಭದ್ರಾ

ವರ ನದಿಯನುತ್ತರಿಸಿ ಕಾಂಚೀನಗರಕೈತಂದ ||19-13||

ಅರಣ್ಯವನ್ನು ಕುಮಾರವ್ಯಾಸ ನೋಡಿದ್ದು ಕನ್ನಡ ನಾಡಿನಲ್ಲಿಯೇ ಇರಬೇಕು. ಅವನು ಉತ್ತರ ಭಾರತದ ಕಡೆಗೆ ಪ್ರಯಾಣ ಮಾಡಿರಲಿಕ್ಕಿಲ್ಲ. ಆ ಕಾಲಕ್ಕೆ ಅದು ವಿಪರೀತ ಕಷ್ಟದ ಪ್ರಯಾಣವಾಗಿರುತ್ತಿತ್ತು. ಆದ್ದರಿಂದ ಖಾಂಡವವನ ದಹನದಲ್ಲಿ ಉರಿದು ಹೋಗುವ ಮರಗಳೆಲ್ಲವೂ ಬಹುತೇಕ ಕನ್ನಡ ನಾಡಿನ ಮರಗಳಾಗಿವೆ. ಎಲ್ಲಕ್ಕೂ ವಿಶೇಷವಾಗಿ ಕನ್ನಡಿಗರ ಅನನ್ಯ ಬೆಳೆಯಾದ ಅಡಿಕೆಯ ಮರಗಳು (ಪೂಗ) ಆ ಬೆಂಕಿಯಲ್ಲಿ ಉರಿದು ಹೋಗುವ ಚಿತ್ರಣ ಮುದ ನೀಡುತ್ತದೆ.

ಜಂಬು ಚೂತ ಪಲಾಶ ವಟ ದಾ

ಳಿಂಬ ಬಿಲ್ವ ತಮಾಲ ಚಂಪಕ

ನಿಂಬ ಬಕುಳ ಕಪಿತ್ಥ ಕುಟಜವಶೋಕ ಪುನ್ನಾಗ

ತುಂಬುರರಳಿ ಲವಂಗ ಪೂಗ ಕ

ದಂಬ ಗುಗ್ಗುಲ ಸಾಲ ತಿಲಕೌ

ದುಂಬರಾದಿ ದ್ರುಮ ಕುಲವನಾಲಿಂಗಿಸಿತು ವಹ್ನಿ||20-48||

ಒಂದು ಕಡೆ ಮಾತ್ರ ಕುಮಾರವ್ಯಾಸ ನನಗೆ ನಿರಾಸೆ ಮಾಡಿಬಿಟ್ಟ. ‘ಸತೀಸಹಗಮನ’ ಪದ್ಧತಿಯು ವಿಜಯನಗರ ಕಾಲದಲ್ಲಿ ಆರ್ಭಟವಾಗಿದ್ದ ಸಂಪ್ರದಾಯ. ಆಗಲ್ಲಿಗೆ ಬಂದ ಪ್ರವಾಸಿಗರೆಲ್ಲರೂ ಅದನ್ನು ಕಣ್ಣಾರೆ ನೋಡಿ, ಹೌಹಾರಿ, ವಿವರವಾಗಿ ಆ ಪದ್ಧತಿಯನ್ನುದಾಖಲಿಸಿದ್ದಾರೆ. ಮಾದ್ರಿಯು ಪಾಂಡುವಿನೊಡನೆ ಸತಿಯಾಗುವ ಸಂದರ್ಭದಲ್ಲಿ ಕುಮಾರವ್ಯಾಸ ಹೆಚ್ಚಿನ ವಿವರಗಳನ್ನು ಕೊಡುತ್ತಾನೆ ಎಂದು ಆಪೇಕ್ಷಿಸಿದ್ದೆ. ಆದರೆ ಬಹಳ ಚುಟುಕಾಗಿ ಬರೆದುಬಿಡುತ್ತಾನೆ. ಸೂಕ್ಷ್ಮ ಮನಸ್ಸಿನ ಕುಮಾರವ್ಯಾಸನಿಗೆ ಈ ಹೇಯ ಪದ್ಧತಿಯ ವಿವರ ದಾಖಲಿಸುವುದು ಮನಸ್ಸಿಗೆ ಒಗ್ಗದೆ ಹೋಗಿರಬಹುದು. ಆದರೆ ಸತಿಯ ಒಪ್ಪಿಗೆಯಿಲ್ಲದೆ ಈ ಸಹಗಮನ ನಡೆಯುತ್ತಿರಲಿಲ್ಲ ಎಂಬ ಕಟ್ಟಳೆಯನ್ನುಸ್ಪಷ್ಟವಾಗಿ ದಾಖಲಿಸಿದ್ದಾನೆ.

ಮುನಿಗಳೀಕೆಯ ತಿಳುಹಿ ಮಾದ್ರಿಗೆ

ಜನಪತಿಯ ಸಹಗಮನದಲಿ ಮತ

ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ ||5-24||

ಒಂದು ಕಾಲಘಟ್ಟದ ಕಥನವನ್ನು ನಿರೂಪಿಸುವಾಗ ಆ ಕಾಲಕ್ಕೆ ಸಂಬಂಧಿಸದ ಯಾವ ವಸ್ತು ವಿವರವೂ ಇರಕೂಡದು ಎಂಬ ಮಡಿವಂತಿಕೆಯ ಕಟ್ಟಳೆಗಳಲ್ಲಿ ನಾವಿಂದು ಬರೆಯುತ್ತಿದ್ದೇವೆ. ದ್ರುಪದನೇನಾದರೂ ಸ್ವಯಂವರದ ಆಹ್ವಾನವನ್ನು ಇತರ ರಾಜರಿಗೆ ‘ವಾಟ್ಸ್‌ ಆ್ಯಪ್‌’ ಮೂಲಕ ಕಳುಹಿಸಿದ ಎಂಬ ವಿವರವನ್ನು ಕೊಡುವುದು ಸದ್ಯದ ಸಾಹಿತ್ಯ ಲೋಕದಲ್ಲಂತೂ ಊಹಿಸಲೂ ಸಾಧ್ಯವಿಲ್ಲ. ವೇದವ್ಯಾಸರ ಕಾಲದಲ್ಲಿ ಸಂಸ್ಕೃತ ಲಿಪಿಯಿನ್ನೂ ಬಳಕೆಯಲ್ಲಿರಲಿಲ್ಲ; ಮೌಖಿಕ ಸಾಹಿತ್ಯದ ಕಾಲವದು. ಆದ್ದರಿಂದ ಸ್ವಯಂವರದ ಆಹ್ವಾನವನ್ನು ದ್ಯೂತರ ಮೂಲಕ ಹೇಳಿ ಕಳುಹಿಸುತ್ತಿದ್ದರು. ಆದರೆ ಕುಮಾರವ್ಯಾಸ ಅತ್ಯಂತ ಸೊಗಸಾಗಿ ಎಲ್ಲ ರಾಜರಿಗೂ ಸ್ವಯಂವರದ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಬಿಡುತ್ತಾನೆ! ವಿಚಿತ್ರವೆಂದರೆ ಆ ವಿವರಗಳನ್ನು ಈಗ ಓದುವಾಗ ಅಂತಹ ಆಭಾಸ ಅನ್ನಿಸುವುದಿಲ್ಲ. ಒಂದು ಕಾಲಘಟ್ಟದ ಸಾಹಿತ್ಯದ ಮಡಿವಂತಿಕೆ ಮತ್ತೊಂದು ಕಾಲಘಟ್ಟದಲ್ಲಿ ಕ್ಷುಲ್ಲಕವಾಗಿ ಬಿಡಬಹುದು.

‘ಕಲಿಯುಗ ದ್ವಾಪರವಾಗುವುದು’ ಎಂದು ಕುಮಾರವ್ಯಾಸನ ಬಗ್ಗೆ ರಸಋಷಿ ಹೇಳಿದ್ದರೂ, ಆತನ ಕಾವ್ಯದಲ್ಲಿ ಇಣುಕುವ ವಿಜಯನಗರ ಜನಜೀವನವನ್ನು ನೋಡುವಾಗ ನನಗೆ ‘ದ್ವಾಪರ ಕಲಿಯುಗವಾಗುವುದು’ ಎನ್ನುವುದೇ ಹೆಚ್ಚು ಸಮಂಜಸವೆನ್ನಿಸುತ್ತದೆ. ಹಾಗಾಗುವುದು ಕುಮಾರವ್ಯಾಸನ ದೌರ್ಬಲ್ಯವಲ್ಲ, ಶಕ್ತಿ ಎಂದು ನಾನು ಭಾವಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT