ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಅಂದ್ರೆ ಲಾಠಿ, ಐಪಿಸಿ ಅಷ್ಟೇ ಅಲ್ಲ’

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಎಎಸ್‌, ಐಪಿಎಸ್‌ ಅಧಿಕಾರಿಗಳು ಬೇರೆ ಬೇರೆ ರಾಜ್ಯಗಳಿಗೆ ನಿಯೋಜಿತರಾಗುವುದು ಸಾಮಾನ್ಯ. ಆದರೆ ನನ್ನ ಸೇವಾವಧಿಯನ್ನು ಬಹುತೇಕ ಕರ್ನಾಟಕದಲ್ಲಿಯೇ ಕಳೆದೆ. ಅದರಲ್ಲೂ ಬಹುಪಾಲು ನನ್ನ ನೇಮಕಾತಿ ಬೆಂಗಳೂರಿನಲ್ಲಿಯೇ ಆಯಿತು. ಒಂದರ್ಥದಲ್ಲಿ ನಾನು ಭಾಗ್ಯಶಾಲಿ. ಕರ್ನಾಟಕದ ಜನರ ಸ್ವೀಕಾರ ಮನೋಭಾವ ಮತ್ತು ಇಲ್ಲಿ ನನಗೆ ಸಿಕ್ಕಿದ ಕೆಲಸದ ವಾತಾವರಣ ಮನಸ್ಸು ತುಂಬಿ ಬರುವಂತೆ ಮಾಡುತ್ತಿದೆ. ಜತೆಗೆ, ನನ್ನಿಷ್ಟದ ಸಾಹಿತ್ಯ ಸಾಂಗತ್ಯ ಬಹುಶಃ ಬೇರೆಲ್ಲೇ ಇದ್ದಿದ್ದರೂ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. 

ನಾನು ಕರ್ನಾಟಕಕ್ಕೆ ಬಂದದ್ದು 1976ರ ಜನವರಿಯಲ್ಲಿ. ವಿಂಧ್ಯಾಚಲದಿಂದ ಈಚೆ ಕಾಲಿಟ್ಟಿದ್ದು ಅದೇ ಮೊದಲು. ಇಲ್ಲಿ ಬಂದಾಗ ನಾನಿಲ್ಲಿ ಹೊಸಬ ಎಂದು ನನಗನಿಸಲೇ ಇಲ್ಲ. ಐಪಿಎಸ್‌ನ ಎರಡನೇ ಹಂತದ ಅಂದರೆ ಸ್ಥಳೀಯ ಕಾನೂನು ಮತ್ತು ಭಾಷೆ ಕಲಿಯುವ ತರಬೇತಿಗಾಗಿ ಮೈಸೂರಿಗೆ ತೆರಳಿದೆ. ಈಗಿನ ಕರ್ನಾಟಕ ಪೊಲೀಸ್‌ ಅಕಾಡೆಮಿ ಆಗ ಪೊಲೀಸ್‌ ತರಬೇತಿ ಕಾಲೇಜು ಆಗಿತ್ತು. ತಾಂತ್ರಿಕ ತರಬೇತಿಗಾಗಿ ನನ್ನನ್ನು ಮಂಗಳೂರಿಗೆ ಕಳಿಸಿದ್ರು.

ಅಲ್ಲಿಯೇ ಎಎಸ್‌ಪಿಯಾಗಿ ನೇಮಕಗೊಂಡೆ. ದಕ್ಷಿಣ ಕನ್ನಡದ ನನ್ನ ಸೇವಾವಧಿ, ನನ್ನ ಬದುಕು ಮತ್ತು ವೃತ್ತಿಜೀವನಕ್ಕೆ ಮಹತ್ವದ ಪಾಠ ಕಲಿಸಿತು. ಒಂದು– ಅಲ್ಲಿನ ಜನರಿಗೆ ಕಾನೂನಿನ ತಿಳಿವಳಿಕೆ ಇದೆ. ಇದು ಪೊಲೀಸ್‌ ಇಲಾಖೆಯ ಕೆಲಸವನ್ನು ಹಗುರ ಮಾಡುತ್ತದೆ. ಇನ್ನೊಂದು– ಆಗ ಎಸ್‌ಪಿ ಆಗಿದ್ದ ಡಿ.ಜಿ.ಭಾಸ್ಕರ್‌ ಅವರು ಮೊದಲ ದಿನದಿಂದಲೇ ಕುಟುಂಬದ ಸದಸ್ಯನಂತೆ ನಡೆಸಿಕೊಂಡರು.

ಜತೆಗೆ ನನ್ನ ಕೆಲಸದ ಮೇಲೆ ನಂಬಿಕೆ, ವಿಶ್ವಾಸ ತೋರಿದರು. ಇದು ನನಗೆ ಕೆಲಸದಲ್ಲಿ ಇನ್ನಷ್ಟು ಶ್ರದ್ಧೆಯಿಂದ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ವಾರಕ್ಕೆ ನಾಲ್ಕೈದು ಸಲವಾದರೂ ಮನೆಗೆ ಊಟಕ್ಕೆ ಕರೆಯೋರು. ಕೆಲಸದ ಮೇಲೆ ಎಲ್ಲೇ ಹೋಗುವುದಿದ್ದರೂ ನನ್ನನ್ನೂ ಕರೆದುಕೊಂಡು ಹೋಗೋರು. ಇದರಿಂದ ಕರ್ತವ್ಯದ ಸೂಕ್ಷ್ಮಗಳನ್ನು, ಪರಿಸ್ಥಿತಿಗಳನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲೂ ಅವಕಾಶ ಸಿಕ್ಕಿತು.

ಡಿವೈಎಸ್‌ಪಿ ಕರುಣಾಕರ್‌ ಕೂಡಾ ಉತ್ತಮ, ದಕ್ಷ ಅಧಿಕಾರಿಯಾಗಿದ್ದರು. ಮೂಲ್ಕಿಯಲ್ಲಿ ನಡೆದ ರಾಜಕೀಯಪ್ರೇರಿತ ಘರ್ಷಣೆ‌ಯೊಂದರ ತನಿಖೆ ನಡೆಸಿ ನಾನು ತೆಗೆದುಕೊಂಡ ನಿರ್ಧಾರವನ್ನು ಈ ಇಬ್ಬರೂ ಅಧಿಕಾರಿಗಳು ಮೆಚ್ಚಿದ್ದರು. ಇದು ಅವರು ನನ್ನಲ್ಲಿಟ್ಟಿದ್ದ ನಂಬಿಕೆ. ಕಿರಿಯ ಅಧಿಕಾರಿಗೆ ಇದಕ್ಕಿಂತ ದೊಡ್ಡ ಬಹುಮಾನ ಇನ್ನೇನು ಬೇಕು?

ತರಬೇತಿಯನ್ನು ಪೂರ್ತಿಗೊಳಿಸಲು ಮಂಗಳೂರಿನಿಂದ ಮೈಸೂರಿನ ಎಟಿಐಗೆ ಕಳಿಸಿದ್ರು. ಐಎಎಸ್‌ ಉತ್ತೀರ್ಣರಾದ ಅಭ್ಯರ್ಥಿಗಳೂ ಎಟಿಐಗೆ ನಮ್ಮಂತೆಯೇ, ಒಂದೇ ತಂಡದಲ್ಲಿ ತರಬೇತಿ ಪಡೆಯಬೇಕಿತ್ತು. ಐಎಎಸ್‌ ತಂಡದಲ್ಲಿ ನಮ್ಮ ತಾರಾ ಕೂಡಾ ಇದ್ರು. ಆಗ ಅವರ ಹೆಸರು ತಾರಾ ಗೋವಿಂದನ್‌. ಮೊದಲ ಪರಿಚಯದಲ್ಲೇ ಅವರು ನಂಗೆ ಇಷ್ಟವಾದ್ರು. ಪ್ರೀತಿಸಿ ಮದುವೆನೂ ಆದ್ವಿ. ಮದುವೆಯಾದ ನಾಲ್ಕನೇ ದಿನ ತಿರುವನಂತಪುರಂನಲ್ಲಿ ಆರತಕ್ಷತೆ ಇತ್ತು. ನೋಡಿ ಅಲ್ಲೊಂದು ಕಪ್ಪು–ಬಿಳುಪು ಫೋಟೊ ಇದ್ಯಲ್ಲ ಅದು ಅವತ್ತೇ ತೆಗೆದದ್ದು. ಈ ಎಲ್ಲಾ ಬೆಳವಣಿಗೆಗಳು ನಡೆದದ್ದು 1978ರಲ್ಲಿ.

ನಮ್ಮ ಕೌಟುಂಬಿಕ ಜೀವನದ ಬಗ್ಗೆ ಎರಡು ಮಾತು ಹೇಳಬೇಕು. ನಾನು ಮತ್ತು ತಾರಾ ಮನೆಗಿಂತ ಹೊರಗಿದ್ದುದೇ ಹೆಚ್ಚು. ಒಟ್ಟಿಗೆ ಕುಳಿತು ಊಟ ಮಾಡುವ ಅವಕಾಶಗಳು ಸಿಕ್ಕಿದ್ದೂ ಕಡಿಮೆಯೇ. ನನಗಿಂತ ತಾರಾ ಹೆಚ್ಚು ಕಷ್ಟಪಟ್ಟಿದ್ದಾರೆ. ಇಬ್ಬರಿಗೂ ಅಗತ್ಯವಿದ್ದಾಗ ನಮ್ಮಿಬ್ಬರ ಬಂಧುಗಳು ಯಾರಾದರೂ ನೆರವಿಗೆ ಬರುತ್ತಿದ್ದರು. ನನ್ನ ಮಗನಿಗೆ ಆರು ತಿಂಗಳು ಇದ್ದಾಗ ತಾರಾಗೆ ಸ್ಕಾಟ್ಲೆಂಡ್‌ಗೆ ನಿಯೋಜನೆಯಾಯಿತು.

ಆ ಪುಟ್ಟ ಮಗುವನ್ನು ಬಿಟ್ಟು ಹೇಗೆ ಹೋಗುವುದು ಎಂಬ ಚಿಂತೆ ಇಬ್ಬರಿಗೂ. ನನಗೆ ರಾಷ್ಟ್ರಪತಿಗಳ ಕಾರ್ಯಕ್ರಮ. ರಜೆ ಕೇಳುವಂತೆಯೇ ಇರಲಿಲ್ಲ. ಕೊನೆಗೆ ಮಗುವನ್ನು ತಾರಾ ಅವರ ಅಕ್ಕ ನೋಡಿಕೊಂಡರು. ತಾರಾ ತರಬೇತಿಗೆ ಹೋದರು. ನನ್ನ ಸೇವಾವಧಿಯುದ್ದಕ್ಕೂ ನಾನು ಮನೆ ಮತ್ತು ಸಂಸಾರದತ್ತ ಗಮನ ಕೊಡಲಿಲ್ಲ ಎಂದೇ ಹೇಳಬೇಕು. ತಾರಾ ಹೇಗೆ ನಿಭಾಯಿಸುತ್ತಿದ್ದರೋ ಅವರಿಗೇ ಗೊತ್ತು. ನನ್ನ ಮಕ್ಕಳಾದ ಅಲೋಕ್‌ ಮತ್ತು ದೀಪಕ್‌ ಸಣ್ಣವರಿರುವಾಗ ಅದು ಬೇಕು... ಇದು ಬೇಕು ಎಂದು ಕೇಳಿದವರೇ ಅಲ್ಲ. ನಾನು ಅವರಿಬ್ಬರಿಗೂ ಆಭಾರಿಯಾಗಿದ್ದೇನೆ.

ನಾನು ನನ್ನ ಹೆಚ್ಚಿನ ಸೇವಾವಧಿಯನ್ನು ಇಲ್ಲೇ ಕಳೆದಿದ್ದೆ ಎಂದು ಆರಂಭದಲ್ಲೇ ಹೇಳಿದೆ. ಚಿತ್ರದುರ್ಗಕ್ಕೆ ಒಮ್ಮೆ, ರಾಯಚೂರಿಗೆ ಎರಡು ಸಲ ಆಗಿದ್ದ ವರ್ಗಾವಣೆ ರದ್ದಾಗಿತ್ತು. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲೇ ಅಪರಾಧ ವಿಭಾಗದ ಡಿಸಿಪಿಯಾಗಿ (ಡಿಸಿಪಿ ಕ್ರೈಂ) ನಿಯೋಜನೆಗೊಂಡೆ. ವಿಚಿತ್ರ ಗೊತ್ತಾ? ಅದುವರೆಗೂ, ಪೊಲೀಸ್‌ ಕಮಿಷನರ್‌ ನಂತರದ ಹಿರಿಯ ಅಧಿಕಾರಿಗೇ ಮೀಸಲಾಗಿರುತ್ತಿದ್ದ ಡಿಸಿಪಿ ಕ್ರೈಂ ಹುದ್ದೆ ಎಲ್ಲಾ ಎಎಸ್‌ಪಿಗಳಲ್ಲಿ ಕಿರಿಯವನಾದ ನನಗೆ ಕೊಟ್ಟಿದ್ದು ಆಗಿನ ಕಮಿಷನರ್‌ಗೆ ಇಷ್ಟವಾಗಿರಲಿಲ್ಲವಂತೆ. ಇಲಾಖೆಯಲ್ಲಿ ಇದೇ ಸುದ್ದಿ. ಆದರೆ ಮತ್ತೊಂದು ಶಾಕ್‌ ಏನಂದ್ರೆ, ನಾನು ಅಧಿಕಾರ ಸ್ವೀಕರಿಸಿದ ದಿನದಿಂದ ಕೊನೆಯವರೆಗೂ ಅವರು ಅತ್ಯಂತ ವಿಶ್ವಾಸ ತೋರಿಸಿಬಿಟ್ರು.

ನಾನು ಕ್ರೈಂ ವಿಭಾಗಕ್ಕೆ ಬರುವುದಕ್ಕೂ ಮೊದಲೇ ನಗರದಲ್ಲಿ 8–9 ವಯಸ್ಸಿನ ಇಬ್ಬರು ಬಾಲಕಿಯರನ್ನು ಕತ್ತು ಕುಯ್ದು ಕೊಲೆ ಮಾಡಲಾಗಿತ್ತು. ನಾನು ಬಂದ ಮೇಲೆ ಅಂತಹುದೇ ಪ್ರಕರಣಗಳು ಮರುಕಳಿಸಿದವು. ಅದರಲ್ಲೂ ಹುಣ್ಣಿಮೆ ಮತ್ತು ಅಮಾವಾಸ್ಯೆಯ ಹಿಂದೆ ಮುಂದೆ ನಡೆಯುತ್ತಿದ್ದವು. ನನಗೆ ಬಹಳ ಚಿಂತೆಯಾಯಿತು. ಹುಣ್ಣಿಮೆ, ಅಮಾವಾಸ್ಯೆಗೂ ಮುಂಚೆ ನಾನು ಅಧಿಕಾರಿಗಳ ಸಭೆ ಕರೆದು ಅಲರ್ಟ್‌ ಮಾಡೋದು, ರಾತ್ರಿ 8ರಿಂದ ಮುಂಜಾನೆ 5 ಗಂಟೆವರೆಗೆ ಗಸ್ತು ತಿರುಗುತ್ತಿದ್ದೆವು. ಆದರೆ ಆರೋಪಿಗಳ ಪತ್ತೆಯಾಗಲೇ ಇಲ್ಲ.

ಒಂದು ದಿನ ಹಾಗೇ ರೌಂಡ್ಸ್‌ ಮುಗಿದು ಮನೆಯಲ್ಲಿ ಪೇಪರ್‌ ಓದುತ್ತಾ ಕೂತಿದ್ದೆ. ಮಹಾರಾಷ್ಟ್ರದ ಪರಬನಿ ಎಂಬ ಊರಿನಲ್ಲಿ ಬಾಲಕಿಯರ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಿರುವ ವರದಿ ಅಲ್ಲಿತ್ತು. ಅದೇ ಸುಳಿವಿನ ಆಧಾರದಲ್ಲಿ ಜ್ಞಾನಭಾರತಿ ಠಾಣೆಯ ಇನ್‌ಸ್ಪೆಕ್ಟರ್‌ ಡಿಸೋಜಾ ಅವರೊಂದಿಗೆ ಒಂದು ತಂಡವನ್ನು ಅಲ್ಲಿಗೆ ಕಳುಹಿಸಿದೆ. ಸಿನಿಮೀಯ ರೀತಿಯಲ್ಲಿ ಆ ಪ್ರಕರಣದ ಆರೋಪಿಗಳ ಪತ್ತೆಯಾಯಿತು. ಬೆಂಗಳೂರಿನ ಶ್ರೀರಾಂಪುರದ ಒಬ್ಬ ಸ್ವಾಮಿ ಮತ್ತು ಕೋಲಾರದ ಒಬ್ಬ ವ್ಯಕ್ತಿಯೂ ಪ್ರಮುಖ ಆರೋಪಿಗಳಾಗಿದ್ದರು. ಅವರನ್ನು ಬಂಧಿಸಲಾಯಿತು. ಆದರೆ ಆ ಸ್ವಾಮಿ ಉಸಿರಾಟದ ತೊಂದರೆಯಿಂದಾಗಿ ನಿಧನರಾದರು. ಅದು ಭಾರಿ ವಿವಾದ ಸೃಷ್ಟಿಸಿತ್ತು. ಆದರೆ ಬಾಲಕಿಯರ ಹತ್ಯೆ ಪ್ರಕರಣ ಮರುಕಳಿಸಲಿಲ್ಲ.

ಆಗ ನಗರದಲ್ಲಿ ಇದ್ದುದು ಐದೇ ಮಂದಿ ಡಿಸಿಪಿಗಳು. ಅಪರಾಧ, ಕಾನೂನು ಸುವ್ಯವಸ್ಥೆ, ಸಂಚಾರ, ಸಿಎಆರ್‌ ಮತ್ತು ಕೇಂದ್ರ ಕಚೇರಿ. ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಕಾರ್ತಿಕೇಯನ್‌, ವೈ.ಎಸ್‌. ರಾವ್‌, ಅಬೀದ್ ಅಲಿ, ಭಾಸ್ಕರರಾವ್‌ ಅವರು ಕಿರಿಯವನಾದ ನನ್ನನ್ನು ಗೌರವದಿಂದ ನಡೆಸಿಕೊಂಡ ರೀತಿಗೆ ಅವರನ್ನು ಯಾವಾಗಲೂ ಸ್ಮರಿಸುತ್ತೇನೆ. ‘ಸೇವಾ ಹಿರಿತನ, ಅಧಿಕಾರಶಾಹಿ ಇರಬೇಕು. ಆದರೆ ಅದು ಟೀಂಗೆ ತೊಂದರೆ ಕೊಡುವಂತಿರಬಾರದು’ ಅನ್ನೋದು ಈ ಅಧಿಕಾರಿಗಳ ಪಾಲಿಸಿಯಾಗಿತ್ತು. ರಾಜಕೀಯ ಪ್ರಭಾವ ಆಗಲೂ ಇತ್ತು. ಆದರೆ ಅದಕ್ಕೆ ಅಷ್ಟು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ.

ಆಗಿನ ಬೆಂಗಳೂರನ್ನು ನೆನಪಿಸಿಕೊಳ್ಳಲೇಬೇಕು. ಇಲ್ಲಿಗೆ ಡಿಸಿಪಿ ಕ್ರೈಂ ಆಗಿ ಬಂದಾಗ ಕಂಟೋನ್ಮೆಂಟ್‌ನಲ್ಲಿ ವಸತಿಗೃಹ ಕೊಟ್ಟಿದ್ದರು. ಆಗ ಟ್ರಾಫಿಕ್‌ನ ಒತ್ತಡವೇ ಇರಲಿಲ್ಲ. ಟ್ರಾಫಿಕ್‌ ಡಿಸಿಪಿ ಸಂಜೆ ಐದೂವರೆಗೆಲ್ಲಾ ಮನೆಗೆ ಹೋಗಬಹುದಾಗಿತ್ತು. ಅಂದರೆ ಸಂಚಾರ ಸಂಬಂಧಿ ಪ್ರಕರಣಗಳು, ದೂರುಗಳು ಅಷ್ಟು ಕಡಿಮೆ ಇರುತ್ತಿದ್ದವು. ನಾನು ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ಬಾಗ್‌ನಲ್ಲಿ ಅಡ್ಡಾಡಿ ಖುಷಿಪಡುತ್ತಿದ್ದೆ. ಸಾಹಿತಿ ಡಿ .ಆರ್. ನಾಗರಾಜ್‌ ಮತ್ತು ನಾನು ಸಾಹಿತ್ಯ ಮತ್ತು ಕಾವ್ಯದ ಬಗ್ಗೆ ಅಲ್ಲಿ ಅಡ್ಡಾಡುತ್ತಾ ಚರ್ಚೆ ಮಾಡುತ್ತಿದ್ದೆವು. 1984ರಿಂದ 88ರವರೆಗೂ ಸಂಚಾರ ವಿಭಾಗದ ಡಿಸಿಪಿಯಾಗಿದ್ದೆ. 1985ರ ನಂತರ ಬೆಂಗಳೂರು ನಗರೀಕರಣದ ಪ್ರಕ್ರಿಯೆ ಶುರುವಾಯಿತೆನ್ನಬಹುದು.

ನನ್ನ ಸಾಹಿತ್ಯದ ಸಾಂಗತ್ಯದ ಬಗ್ಗೆ ಎಲ್ಲರೂ ಕೇಳುತ್ತಾರೆ. ಚಿಕ್ಕ ವಯಸ್ಸಿನಲ್ಲೇ ನಮ್ಮ ನೆಗ್ಲಾಕೋಠಿಯ ಮನೆಯಲ್ಲಿ ಸಾಹಿತ್ಯದ ವಾತಾವರಣವಿತ್ತು. ನಮ್ಮ ಮನೆಯಲ್ಲೇ ಡಿಸ್ಟ್ರಿಕ್ಟ್‌ ಬೋರ್ಡ್‌ನ ಗ್ರಂಥಾಲಯವಿತ್ತು. ಇಂಗ್ಲಿಷ್‌, ಹಿಂದಿ, ಸಂಸ್ಕೃತ ಮತ್ತು ಉರ್ದು ಭಾಷೆಯ ನೂರಾರು ಪುಸ್ತಕಗಳು ಇದ್ದವು. ನಂಬ್ತೀರೋ ಇಲ್ವೋ ನಾನು ಎಂಟನೇ ತರಗತಿಯಲ್ಲಿದ್ದಾಗಲೇ ಕಾಳಿದಾಸ, ರವೀಂದ್ರನಾಥ ಟ್ಯಾಗೋರ್‌, ಟಾಲ್‌ಸ್ಟಾಯ್‌, ಬರ್ನಾರ್ಡ್ ಷಾ, ಶರತ್‌ಚಂದ್ರ ಚಟರ್ಜಿ, ತಾರಾಶಂಕರ್‌ ಬಂಡೋಪಾಧ್ಯಾಯ ಅವರ ಕೃತಿಗಳನ್ನು ಓದಿಮುಗಿಸಿದ್ದೆ. ಪರೀಕ್ಷೆ ಸಮಯದಲ್ಲಿ ಪಠ್ಯಪುಸ್ತಕದ ಮಧ್ಯೆ ಈ ಪುಸ್ತಕಗಳನ್ನಿಟ್ಟುಕೊಂಡು ಓದಿ ಮನೆಯವರು ಬಂದರೆ ಮೆತ್ತಗೆ ಪಠ್ಯಪುಸ್ತಕವನ್ನು ಮೇಲಕ್ಕೆಳೆದುಕೊಂಡು ಇನ್ನೂ ಗಂಭೀರವಾಗಿ ಕುಳಿತುಕೊಳ್ಳುತ್ತಿದ್ದೆ. ಪುಣ್ಯಕ್ಕೆ ಕ್ಲಾಸ್‌ನಲ್ಲಿ ಒಳ್ಳೆಯ ಅಂಕ ಬರುತ್ತಿತ್ತು. ಹಾಗಾಗಿ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಸಾಹಿತ್ಯದ ಓದು ನನ್ನ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದೆ. ಅದಿಲ್ಲದೆ ನಾನು ನಾನಲ್ಲ. 1976ರಲ್ಲಿ ಕರ್ನಾಟಕಕ್ಕೆ ಬಂದ ನಾನು ಶಿವಮೊಗ್ಗಕ್ಕೆ ವರ್ಗವಾದ ಬಳಿಕ ಹೆಗ್ಗೋಡಿಗೆ ಆಗಾಗ ಭೇಟಿ ಕೊಡುತ್ತಿದ್ದೆ. 1986ರಲ್ಲಿ ಕೆ.ವಿ. ಸುಬ್ಬಣ್ಣ ಅವರು 10 ದಿನಗಳ ಸಿನಿಮಾ ರಸಗ್ರಹಣ ಶಿಬಿರ ಏರ್ಪಡಿಸಿದ್ದರು. ನಾನು ರಜೆ ಹಾಕಿ ಹೋಗಿದ್ದೆ. ಅಲ್ಲಿ ಪ್ರಸನ್ನ, ಚಂದ್ರಶೇಖರ ಕಂಬಾರ, ಎಚ್.ಎಸ್. ಶಿವಪ್ರಕಾಶ್‌, ಡಿ.ಆರ್.ನಾಗರಾಜ್‌ ಪರಿಚಯವಾದರು. ಯು.ಆರ್.ಅನಂತಮೂರ್ತಿ ಅವರು 1978ರಲ್ಲೇ ಮೈಸೂರಿನ ಎಟಿಐನಲ್ಲಿ ಭೇಟಿಯಾಗಿದ್ದರು. ಅವರು ಕೊಟ್ಟಿದ್ದ ‘ಮೇಕಿಂಗ್‌ ಆಫ್‌ ಶಿವ’ ಎಂಬ ವಚನಗಳ ಅನುವಾದದ ಪುಸ್ತಕ (ಎ.ಕೆ. ರಾಮಾನುಜನ್‌) ಈಗಲೂ ನನ್ನಲ್ಲಿದೆ. ಈ ಪುಸ್ತಕ ನನ್ನನ್ನು ಅಲ್ಲಮ ಮತ್ತು ವಚನಗಳತ್ತ ಸೆಳೆಯಿತು ಎನ್ನಬಹುದು. ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ, ಸಿದ್ದರಾಮೇಶ್ವರ ಅವರನ್ನು ಆ ಪುಸ್ತಕದ ಮೂಲಕ ಅರ್ಥಮಾಡಿಕೊಂಡೆ.

ಶಿವಪ್ರಕಾಶ್‌, ಪ್ರಸನ್ನ ಮತ್ತು ಎಂ.ಪಿ.ಪ್ರಕಾಶ್‌ ಅವರು ವಚನ ಆಂದೋಲನದ ಬಗ್ಗೆ ಹಿಂದಿ ಧಾರಾವಾಹಿ ಮಾಡಲು ಮುಂದಾದಾಗ ಹಿಂದಿ ಅನುವಾದ ನಾನೇ ಮಾಡಿಕೊಟ್ಟಿದ್ದೆ. ಈ ವೇಳೆ ವಚನಗಳ ಆಳ–ವಿಸ್ತಾರವನ್ನು ತಿಳಿದುಕೊಂಡೆ. ಮುಂದೆ ನಾನು ‘ಅಲ್ಲಮ ಮತ್ತು ಕಬೀರ–ಒಂದು ತುಲನಾತ್ಮಕ ಅಧ್ಯಯನ’ ಎಂಬ ಮಹಾಪ್ರಬಂಧ (ಪಿಎಚ್‌.ಡಿ) ಸಿದ್ಧಪಡಿಸಲು ಈ ಎಲ್ಲಾ ಸಾಂಗತ್ಯಗಳೇ ಪ್ರೇರಣೆಯಾದವು. ಕಿ.ರಂ. ನಾಗರಾಜ್‌, ಪ್ರಭಾಶಂಕರ್‌ ಪ್ರೇಮಿ ಅವರೂ ಸಾಕಷ್ಟು ಮಾರ್ಗದರ್ಶನ, ಮಾಹಿತಿ ನೀಡುತ್ತಿದ್ದರು. ಆಗ ನಾನು ರಾಜ್ಯ ಗುಪ್ತಚರ ವಿಭಾಗದಲ್ಲಿದ್ದೆ.

ಅಧ್ಯಯನ ಪ್ರಬಂಧಕ್ಕಾಗಿ ಗ್ರಂಥಗಳನ್ನು ಸಂಪಾದಿಸುತ್ತಿರುವಾಗಲೇ ನನಗೆ ಎಂ.ಎಂ.ಕಲಬುರ್ಗಿ ಅವರ ಪರಿಚಯವಾದದ್ದು. ಧಾರವಾಡ ವಿಶ್ವವಿದ್ಯಾಲಯದಲ್ಲೇ ಅವರನ್ನು ಭೇಟಿಯಾಗಿ ವಚನ ಸಾಹಿತ್ಯದ ಅಧ್ಯಯನಕ್ಕೆ ನೆರವಾಗುವಂತೆ ವಿನಂತಿಸಿದ್ದೆ. ಅವರ ಸೂಚನೆಯಂತೆ ‘ಶೂನ್ಯ ಸಂಪಾದನೆ’ಯನ್ನು ಸಂಪೂರ್ಣವಾಗಿ ಓದಿದೆ. ಕಲಬುರ್ಗಿಯವರು ಬಹಳ ಖಡಕ್‌ ವ್ಯಕ್ತಿಯಾದರೂ ಬೆಂಗಳೂರಿಗೆ ಬರುವಾಗ ನನಗಾಗಿ ಅಧ್ಯಯನ ಪರಿಕರಗಳನ್ನು ತಂದುಕೊಟ್ಟಿದ್ದರು! ಹೀಗೆ, ಎಲ್ಲೇ ಹೋದರೂ ನನಗೆ ಧೀಮಂತ ವ್ಯಕ್ತಿಗಳ ಸಾಂಗತ್ಯ ಸಿಗುತ್ತಿತ್ತು. ಬಹುಶಃ ಇದು ಕರ್ನಾಟಕ ಮತ್ತು ಬೆಂಗಳೂರಿನ ಮಣ್ಣಿನ ಗುಣವೇ ಇರಬೇಕು.

ಪೊಲೀಸ್‌ ಇಲಾಖೆಯಲ್ಲಿ ಡಿಜಿಪಿಯಾಗಿ ನಿವೃತ್ತನಾದೆ ನಾನು. ಪೊಲೀಸ್‌ ಅಂದರೆ ಲಾಠಿ ಮತ್ತು ಐಪಿಸಿ ಅಷ್ಟೇ ಅಲ್ಲ. ಪೊಲೀಸರು ವಿಶೇಷವಾಗಿ ಮನೋವಿಜ್ಞಾನಿಗಳಾಗಬೇಕು. ಸಾಹಿತ್ಯದ ಓದು ಅವರಿಗೆ ಅಗತ್ಯವಿದೆ. ಅದು ನಮಗೆ ವಿಶೇಷವಾದ ಶಕ್ತಿ ತುಂಬುತ್ತದೆ. ನಾನಂತೂ ವಚನ ಸಾಹಿತ್ಯದ ಸಂಪರ್ಕಕ್ಕೆ ಬಂದಾಗ ಬಸವೇಶ್ವರರನ್ನೂ ಓದಿದೆ. ಅಕ್ಕಮಹಾದೇವಿ ತನ್ನ ವಚನಗಳಲ್ಲಿ ವಿಷದಂತಗಳ ಬಗ್ಗೆ ಹೇಳ್ತಾರೆ ನೋಡಿ. ನನ್ನ ಪ್ರಕಾರ ಸ್ವಾರ್ಥ ಮತ್ತು ದ್ವೇಷವೇ ವಿಷದಂತಗಳು. ಅಂತಹ ದಂತಗಳು ನಮ್ಮಲ್ಲಿಲ್ಲದಿದ್ದರೆ ಎಲ್ಲರೂ ನಮ್ಮವರಾಗುತ್ತಾರೆ.

***

ಒಂದಿಷ್ಟು ಮಾಹಿತಿ

* ಡಾ.ಅಜಯ್‌ ಕುಮಾರ್‌ ಸಿಂಗ್‌ ಅಖಿಲೇಶ್‌

* ಮೂಲ: ಉತ್ತರ ಪ್ರದೇಶದ ನೆಗ್ಲಾಕೋಠಿ

* ಶಿಕ್ಷಣ: ರಾಜ್ಯ ಶಾಸ್ತ್ರ ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ, ಪಿಎಚ್‌.ಡಿ

* ತಂದೆ: ಹಮ್ಮೀರ್‌ ಸಿಂಗ್‌

* ತಾಯಿ: ಕೃಷ್ಣಾಕುಮಾರಿ

* ಪತ್ನಿ: ತಾರಾ ಅಜಯ್‌ಸಿಂಗ್‌

* ಮಕ್ಕಳು: ಅಲೋಕ್‌, ದೀಪಕ್‌

* ನಿವಾಸ: ರಿಚರ್ಡ್ಸ್‌ ಟೌನ್‌

* ಸಂಪರ್ಕಕ್ಕೆ: ajaiksingh74@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT