ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹಾದಿಯಲ್ಲಿ ‘ದಾಖಲೆಯ’ ಸರಣಿ

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಸ್ಸಾಂ ರಾಜಧಾನಿ ಗುವಾಹಟಿಯ ಕ್ರಿಕೆಟ್ ಪ್ರಿಯರು ಈಗ ಸಂಭ್ರಮದಲ್ಲಿದ್ದಾರೆ. ಫುಟ್‌ಬಾಲ್‌, ದೇಶಿ–ಸಾಂಪ್ರದಾಯಿಕ ಕ್ರೀಡೆಗಳ ಜೊತೆಯಲ್ಲಿ ಕ್ರಿಕೆಟ್‌ಗೂ ಹೃದಯದಲ್ಲಿ ಸ್ಥಾನ ಕಲ್ಪಿಸಿರುವವರು ಇಲ್ಲಿನ ಜನರು. ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯಗಳ ರಸವನ್ನು ಉಂಡವರಿಗೆ ಈಗ ಟಿ–20 ಪಂದ್ಯದ ರಸಗವಳ ಸವಿಯುವ ಅವಕಾಶ ಲಭಿಸಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯಕ್ಕೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

2010ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಂತರ ಗುವಾಹಟಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿಲ್ಲ. ಆರು ವರ್ಷಗಳಿಂದ ಕಾಯುತ್ತಿದ್ದ ಇಲ್ಲಿನ ಜನರಿಗೆ ಬಿಸಿಸಿಐ ಭರ್ಜರಿ ಕಾಣಿಕೆ ನೀಡಿದೆ. ಬರ್ಸಾಪರಕ್ಕೆ ಅಂತರರಾಷ್ಟ್ರೀಯ ಪಂದ್ಯವನ್ನು ಕೊಡುಗೆಯಾಗಿ ನೀಡಿದೆ.

ಇತ್ತ ಕೇರಳ ರಾಜಧಾನಿ ತಿರುವನಂತಪುರದಲ್ಲೂ ಇದೇ ಸ್ಥಿತಿ. ಅಥ್ಲೆಟಿಕ್ಸ್‌ ಮತ್ತು ಫುಟ್‌ಬಾಲ್‌ ಪ್ರಿಯರ ನಾಡಿನವರು ಇಲ್ಲಿಯ ವರೆಗೆ ಅಂತರರಾಷ್ಟ್ರೀಯ ಪಂದ್ಯ ವೀಕ್ಷಿಸಲು ಇದ್ದದ್ದು ಕೊಚ್ಚಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣ ಮಾತ್ರ. ಇದೀಗ ರಾಜ್ಯ ರಾಜಧಾನಿಯಲ್ಲೂ ಅಂತರರಾಷ್ಟ್ರೀಯ ಪಂದ್ಯಕ್ಕೆ ಅಂಗಣ ಸಜ್ಜಾಗಿದೆ. ನ್ಯೂಜಿಲೆಂಡ್‌ ವಿರುದ್ಧದ ಟಿ–20 ಪಂದ್ಯ ಇಲ್ಲಿ ನಡೆಯಲಿದೆ.

ಹೊಸ ಅಂಗಳಗಳಲ್ಲಿ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದರೆ, ಕೆಲವು ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಭಾರತ ತಂಡ ಮೂರು ತಿಂಗಳ ಕಾಲ ತವರಿನಲ್ಲಿ ಮೆರೆದಾಡುವ ತವಕದಲ್ಲಿದೆ. ಬಲಿಷ್ಠ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳ ವಿರುದ್ಧ ಏಕದಿನ ಮತ್ತು ಟಿ–20 ಸರಣಿಗಳನ್ನು ಆಡಲಿರುವ ತಂಡ ನಂತರ ಶ್ರೀಲಂಕಾ ವಿರುದ್ಧ ‘ಪೂರ್ಣ ಪ್ರಮಾಣದ’ ಸರಣಿಯಲ್ಲಿ ಭಾಗಿಯಾಗಲಿದೆ. ತಲಾ ಮೂರು ಟೆಸ್ಟ್‌, ಏಕದಿನ ಮತ್ತು ಟಿ–20 ಪಂದ್ಯಗಳು ಈ ಸರಣಿಯಲ್ಲಿವೆ.

ಹೊಸ ದಿಗಂತಕ್ಕೆ ಜಿಗಿಯುವ ಆಸೆ

ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಏಕಪಕ್ಷೀಯವಾಗಿ ಗೆದ್ದಿದ್ದ ಆಸ್ಟ್ರೇಲಿಯಾ ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೋತಿತ್ತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈ ತಂಡಕ್ಕೆ ಮಳೆ ದುರದೃಷ್ಟಕರವಾಗಿ ಕಾಡಿತ್ತು. ಆದ್ದರಿಂದ ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ತಂಡ ಮರುಜೀವ ಪಡೆಯಲು ಶ್ರಮಿಸಲಿದೆ. ಟಿ–20ಯಲ್ಲಿ ಶ್ರೀಲಂಕಾ ವಿರುದ್ಧ ಉತ್ತಮ ಸಾಧನೆ ಮಾಡಿರುವ ಆಸ್ಟ್ರೇಲಿಯಾ ಭರವಸೆಯಿಂದಲೇ ಇಲ್ಲಿ ಅಂಗಳಕ್ಕೆ ಇಳಿಯಲಿದೆ.

ನ್ಯೂಜಿಲೆಂಡ್‌ ಕಳೆದ ವರ್ಷದ ಕೊನೆ ಮತ್ತು ಈ ವರ್ಷದಲ್ಲಿ ಇಲ್ಲಿಯ ವರೆಗೆ ನಡೆದ ಟಿ–20 ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧ ಪರಿಣಾಮಕಾರಿ ಆಟ ಆಡಲು ವಿಫಲವಾಗಿತ್ತು. ಬಾಂಗ್ಲಾದೇಶ ವಿರುದ್ಧ ಮಾತ್ರ ಜಯದ ಹಾದಿಯಲ್ಲಿ ಹೆಜ್ಜೆ ಹಾಕಿತ್ತು. ಏಕದಿನ ಕ್ರಿಕೆಟ್‌ನಲ್ಲೂ ಈ ತಂಡ ಗಮನಾರ್ಹ ಸಾಧನೆ ಮಾಡಲಿಲ್ಲ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿರುವ ತಂಡ ಭಾರತದಲ್ಲಿ ಪುಟಿದೇಳಲು ಪ್ರಯತ್ನಿಸಲಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಳಪೆ ಆಟವಾಡಿದ್ದ ಶ್ರೀಲಂಕಾ ನಂತರ ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ನಿರಾಸೆ ಅನುಭವಿಸಿ ಹಿರಿಯ ಕ್ರಿಕೆಟಿಗರು ಮತ್ತು ಸರ್ಕಾರದ ಟೀಕೆಗೆ ಒಳಗಾಗಿತ್ತು.
ಕಳೆದ ವರ್ಷ ಜಿಂಬಾಬ್ವೆ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆದ್ದ ನಂತರ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು 3–0ಯಿಂದ ಸೋತಿತ್ತು. ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಸಾಧ್ಯವಾಗಿತ್ತು. ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯವನ್ನು ಗೆದ್ದಿತ್ತು.

ಈ ವರ್ಷ ಟಿ–20ಯಲ್ಲಿ ಶ್ರೀಲಂಕಾ ಉತ್ತಮ ಸಾಧನೆ ಮಾಡಿದೆ. ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ ಐದನ್ನು ಗೆದ್ದುಕೊಂಡಿದೆ. ಭಾರತದಲ್ಲಿ ನಡೆಯುವ ಪೂರ್ಣ ಸರಣಿ ಈ ತಂಡಕ್ಕೆ ಅತ್ಯಂತ ಮಹತ್ವದ್ದು ಆಗಲಿದೆ.

***

ಕಾರ್ಯವಟ್ಟಂ ಮತ್ತು ಬರ್ಸಪಾರ

ತಿರುವನಂತಪುರದ ಕಾರ್ಯವಟ್ಟಂ ಮತ್ತು ಗುವಾಹಟಿಯ ಬರ್ಸಪಾರದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣಗಳು ಈಗ ಹೊಸ ಪುಳಕಕ್ಕೆ ಕಾದಿವೆ. ಬರ್ಸಪಾರದಲ್ಲಿ 2012ರಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣದಲ್ಲಿ ಮೊದಲು ನಡೆದದ್ದು ಪೂರ್ವ ವಲಯ ಅತರರಾಜ್ಯ ಮಹಿಳೆಯರ ಪಂದ್ಯ. 2013–14ನೇ ಸಾಲಿನಲ್ಲಿ ಇಲ್ಲಿ ನಾಲ್ಕು ರಣಜಿ ಪಂದ್ಯಗಳು ನಡೆದಿವೆ. ಡಾ.ಭೂಪೇನ್ ಹಜಾರಿಕ ಅವರ ಹೆಸರಿನಲ್ಲಿರುವ ಈ ಕ್ರೀಡಾಂಗಣವನ್ನು ಎಸಿಎ ಕ್ರೀಡಾಂಗಣ ಎಂದೂ ಕರೆಯಲಾಗುತ್ತದೆ.

ತಿರುವನಂತಪುರ 29 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಪಂದ್ಯವೊಂದಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. 1988ರಲ್ಲಿ ಇಲ್ಲಿನ ವಿಶ್ವವಿದ್ಯಾಲಯ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಏಕದಿನ ಪಂದ್ಯ ನಡೆದಿತ್ತು. ವಿವಿಯನ್‌ ರಿಚರ್ಡ್ಸ್‌ ನಾಯಕತ್ವದ ವಿಂಡೀಸ್‌ ತಂಡ ಅಂದು ರವಿಶಾಸ್ತ್ರಿ ನೇತೃತ್ವದ ಭಾರತ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತ್ತು. ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಇಲ್ಲಿ ಟಿ–20 ಪಂದ್ಯ ನಡೆಯಲಿದೆ. ಇದು ಕೇರಳದಲ್ಲಿ ನಡೆಯಲಿರುವ ಮೊದಲ ಟಿ–20 ಪಂದ್ಯವೂ ಆಗಿದೆ. ಕೊಚ್ಚಿಯಲ್ಲಿರುವ ಕ್ರೀಡಾಂಗಣದಲ್ಲಿ ಇಲ್ಲಿಯ ವರೆಗೆ ಕೇವಲ 10 ಏಕದಿನ ಪಂದ್ಯಗಳು ಮಾತ್ರ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT