ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಪ್ರತಿಭೆ ಸುಖೇಶ್

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಿಮಗೆ ಕಬಡ್ಡಿ ಆಸಕ್ತಿ ಬಂದದ್ದು ಹೇಗೆ?

ಊರು ಉಡುಪಿ ಜಿಲ್ಲೆಯ ಕರತಾಳ. ಪ್ರೈಮರಿ ಶಾಲೆಯಲ್ಲಿ ಸ್ನೇಹಿತರು ಆಡುವುದನ್ನು ನೋಡಿ ಕಬಡ್ಡಿ ಬಗ್ಗೆ ಆಸಕ್ತಿ ಹುಟ್ಟಿತು. ನಮ್ಮ ಕುಕ್ಕುಜೆ ಶಾಲೆಯಲ್ಲಿ ಮೊದಲಿಗೆ ಪ್ರೋತ್ಸಾಹ ನೀಡಿದರು. ತಾಲ್ಲೂಕು, ಜಿಲ್ಲಾ ಮಟ್ಟದ ಪಂದ್ಯಗಳಲ್ಲಿ ಆಡುತ್ತಿದ್ದೆ. 2010ರಲ್ಲಿ ಆಳ್ವಾಸ್ ಕಾಲೇಜು ಸೇರಿದೆ. ಕರುಣಾಕರ ಶೆಟ್ಟಿ ನನಗೆ ಸಾಕಷ್ಟು ಪ್ರೋತ್ಸಾಹ ತುಂಬಿದರು. ಮೋಹನ್ ಆಳ್ವಾ ಅವರು ಕಬಡ್ಡಿ ಆಟದ ಜತೆ ನನಗೆ ಉಚಿತ ಶಿಕ್ಷಣದ ಬೆಂಬಲ ನೀಡಿದರು. ಇದೇ ಕ್ರೀಡೆಯಲ್ಲಿ ನಾನು ಮುಂದುವರಿಯಲು ಅವರು ಪ್ರೇರಣೆಯಾದರು. 2011–12ರಲ್ಲಿ ಅಲ್ಲಿಯೇ ಕಬಡ್ಡಿ ಆಡಿದೆ.

2012ರಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೂರ್ನಿಯಲ್ಲಿ ನಮ್ಮ ತಂಡ ಪದಕ ಗೆದ್ದುಕೊಂಡಿತು. ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಕೂಡ ಸಿಕ್ಕಿತು.

2014 ಮತ್ತು 16ರಲ್ಲಿ ಭಾರತ ತಂಡದಲ್ಲಿ ರೈಡರ್ ಆಗಿ ಆಡಿದ್ದೇನೆ. 2016ರಲ್ಲಿ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿ ಕೂಡ ಇದ್ದೆ. ಪ್ರೊ ಕಬಡ್ಡಿಯ ಮೊದಲ ನಾಲ್ಕು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ಪರ ಆಡಿದ್ದೇನೆ.

ಪ್ರೊ ಕಬಡ್ಡಿಯ ನಾಲ್ಕನೇ ಆವೃತ್ತಿಯಲ್ಲಿ ಕೇವಲ ಒಂಬತ್ತು ಪಂದ್ಯಗಳನ್ನು ಮಾತ್ರ ಆಡಿದ್ದೀರಿ. ಕಾರಣ ಏನು?

ಪ್ರೊ ಕಬಡ್ಡಿ ಆರಂಭಕ್ಕೂ ಮೊದಲು ಮೊಣಕಾಲಿಗೆ ಏಟು ಆಗಿತ್ತು. ಚೇತರಿಸಿಕೊಂಡು ಆಡಿದೆ. ಆದರೆ ಅದೇ ಜಾಗಕ್ಕೆ ಮತ್ತೆ ಪೆಟ್ಟು ಬಿದ್ದಾಗ ಗಾಯ ಹೆಚ್ಚಾಯಿತು. ಕೊನೆಯ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ.

ಗುಜರಾತ್‌ ತಂಡದ ಶಕ್ತಿ ಏನು. ನಾಯಕನಾಗಿ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ?
ನಮ್ಮ ತಂಡಕ್ಕೆ ಡಿಫೆಂಡರ್‌ಗಳು ಪ್ರಬಲ ಶಕ್ತಿ. ಎಲ್ಲಾ ನಾಲ್ಕೂ ವಿಭಾಗದ ಡಿಫೆಂಡರ್‌ಗಳು ಪ್ರಬಲವಾಗಿದ್ದಾರೆ. ಆದರೆ ಎದುರಾಳಿ ತಂಡ ಕೂಡ ಇದೇ ವಿಭಾಗದಲ್ಲಿ ಪ್ರಬಲವಾಗಿದ್ದರೆ ನಾವು ರೈಡಿಂಗ್‌ನಲ್ಲಿ ಪಾಯಿಂಟ್ಸ್ ಪಡೆಯಲೇಬೇಕು. ಆ ವೇಳೆ ಪಂದ್ಯದ ಸಮತೋಲನ ಕಾಪಾಡಬೇಕು. ಜತೆಗೆ ಡಿಫೆಂಡರ್‌ಗಳ ಮೇಲಿನ ಒತ್ತಡ ತಗ್ಗಿಸುವುದು ಕೂಡ ಅವಶ್ಯಕ. ಇಲ್ಲದಿದ್ದರೆ ಪಂದ್ಯ ಸೋಲುವ ಸಾಧ್ಯತೆಯೇ ಹೆಚ್ಚಿರುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸುವ ಯೋಜನೆ ರೂಪಿಸಿದ್ದೇವೆ.

ಬೆಂಗಳೂರಿನಲ್ಲಿ ಈ ಬಾರಿ ಪಂದ್ಯಗಳು ನಡೆಯುತ್ತಿಲ್ಲ?
ಹೌದು. ತುಂಬಾ ಬೇಸರ ಆಯಿತು. ನಮ್ಮ ಕುಟುಂಬದವರು, ಸ್ನೇಹಿತರು ಎಲ್ಲರೂ ಅಲ್ಲಿಗೆ ಬಂದು ನನಗೆ ಹಾಗೂ ನಮ್ಮ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಈಗ ಆ ಅವಕಾಶ ಇಲ್ಲವಾಗಿದೆ.

ತಂಡದ ತರಬೇತಿ ಹಾಗೂ ಫಿಟ್‌ನೆಸ್ ಬಗ್ಗೆ ಹೇಳಿ
ಬೆಳಿಗ್ಗೆ 6 ರಿಂದ 8.30 ವರೆಗೂ ವ್ಯಾಯಾಮ, ಈಜು ಹಾಗೂ ಜಿಮ್‌ನಲ್ಲಿ ಒಂದು ಗಂಟೆ ಬೆವರು ಇಳಿಸುತ್ತೇವೆ. ಸಂಜೆ ಕಬಡ್ಡಿ ಅಭ್ಯಾಸ ಮಾಡುತ್ತೇವೆ. ಅಹಮದಾಬಾದ್‌ನ ಗಾಂಧಿನಗರದಲ್ಲಿ 40 ದಿನ ತರಬೇತಿ ಶಿಬಿರ ನಡೆಸಿ ಸಜ್ಜಾಗಿದ್ದೇವೆ. ಇದು ದೀರ್ಘವಾದ ಲೀಗ್‌ ಆದ್ದರಿಂದ ಸಣ್ಣ ಪುಟ್ಟ ಗಾಯ ಆದರೆ ಅಂತರರಾಷ್ಟ್ರೀಯ ಫಿಜಿಯೊ ಇದ್ದಾರೆ. ಅವರು ನೆರವಾಗುತ್ತಾರೆ. ಎರಡು ದಿನಗಳಲ್ಲಿ ಗಾಯದಿಂದ ಹೊರಬರಬಹುದು.  ಆದರೆ ದೊಡ್ಡ ಪ್ರಮಾಣದಲ್ಲಿ ಏಟು ಬಿದ್ದರೆ ಏನೂ ಮಾಡಲು ಸಾಧ್ಯವಿಲ್ಲ.

ಮೊದಲ ಆವೃತ್ತಿಗಿಂತ ನಿಮ್ಮ ಅಂಕಗಳಲ್ಲಿ ಇಳಿಮುಖ ಆಗಿದೆ?
ಮೊದಲ ಎರಡು ಆವೃತ್ತಿಯಲ್ಲಿ ಉತ್ತಮ ಅಂಕ ಪಡೆದೆ. ಬಳಿಕ ಪಾಯಿಂಟ್ಸ್ ಸಿಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಗಾಯ. ಗಾಯದ ಸಮಸ್ಯೆಯಿಂದ ನನ್ನ ಯೋಜನೆಗಳು ವಿಫಲವಾದವು.

ರೈಡಿಂಗ್‌ನಲ್ಲಿ ನಿಮ್ಮ ತಂಡ ಪಾಯಿಂಟ್ಸ್ ಮಾಡುತ್ತಿಲ್ಲ?
ರೈಡಿಂಗ್‌ನಲ್ಲಿ ಸಚಿನ್ ಪಾಯಿಂಟ್ಸ್ ಪಡೆಯುತ್ತಿದ್ದಾರೆ. ಡಿಫೆಂಡರ್‌ಗಳಿಗೆ ಹೆಚ್ಚು ಪಾಯಿಂಟ್ಸ್ ಸಿಗುತ್ತಿವೆ. ಸದ್ಯದ ಮಟ್ಟಿಗೆ ನಾವು ರೈಡಿಂಗ್‌ನಿಂದ ಪಾಯಿಂಟ್ಸ್ ಪಡೆಯದಿದ್ದರೂ ಗೆಲ್ಲಬಹುದು.

ನಾಯಕನಾಗಿ ಕನಸುಗಳು?
ಮೊದಲು ನಾಯಕನ ಜವಾಬ್ದಾರಿ ಪಡೆದಾಗ ತುಂಬಾ ಭಯ ಆಗಿತ್ತು. ಕಷ್ಟ ಆಯಿತು. ಕೋಚ್ ಬಳಿ ಸಲಹೆಗಳನ್ನು ಕೇಳಿಕೊಂಡೆ. ಎದುರಾಳಿ ತಂಡ ನಮಗಿಂತ ಹೆಚ್ಚು ಪಾಯಿಂಟ್ಸ್ ಪಡೆದಾಗ ಅಥವಾ ಸಮಬಲ ಹೊಂದಿದ್ದಾಗ ನಾಯಕನಾಗಿ ನನ್ನ ಜವಾಬ್ದಾರಿ ಹಚ್ಚುತ್ತದೆ. ಇದಕ್ಕೆ ನಾನು ಮಾನಸಿಕವಾಗಿ ಸಿದ್ಧಗೊಂಡಿದ್ದೇನೆ. ಮೊದಲ ಪಂದ್ಯ ಗೆದ್ದಮೇಲೆ ವಿಶ್ವಾಸ ಇಮ್ಮಡಿಯಾಗಿದೆ.

ಗುಜರಾತ್ ತಂಡದ ತವರಿನ ಅಂಗಳ ಅಹಮದಾಬಾದ್‌. ಅಲ್ಲಿಯ ಪಂದ್ಯಗಳಿಗಾಗಿ ಸಿದ್ಧತೆ ಹೇಗೆ ನಡೆದಿದೆ?
ಅಲ್ಲಿ ಆರು ಪಂದ್ಯಗಳನ್ನು ಆಡಬೇಕು. ಸತತ ಪಂದ್ಯಗಳನ್ನು ಆಡಬೇಕಿರುವುದರಿಂದ ಉತ್ತಮ ಯೋಜನೆ ರೂಪಿಸಬೇಕು. ಬಲಿಷ್ಠ ತಂಡಗಳ ಜತೆ ಪಂದ್ಯಗಳು ಇವೆ. ಇದಕ್ಕಾಗಿ ಆಡುವ ಬಳಗದಲ್ಲಿ ಯಾರನ್ನೆಲ್ಲ ಆಡಿಸಬೇಕು ಎಂದು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ರೈಡಿಂಗ್ ವಿಭಾಗಕ್ಕೆ ಹೆಚ್ಚು ಒತ್ತು ನೀಡಲಿದ್ದೇವೆ.

ಯಾವ ತಂಡ ನಿಮಗೆ ಬಿಲಿಷ್ಠ ಎದುರಾಳಿ ಆಗಬಹುದು?
ನಮ್ಮ ಗುಂಪಿನಲ್ಲಿ ಪುಣೆಯಲ್ಲಿ ಅನುಭವಿ ಆಟಗಾರರು ಇದ್ದಾರೆ. ಈ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ದೀಪಕ್ ಹೂಡ ಹಾಗೂ ರಾಜೇಶ್‌ ಮಂಡಾಲ್‌ರನ್ನು ನಿಯಂತ್ರಿಸುವ ಸವಾಲು ನಮಗೆ ಇದೆ. ಉಳಿದ ತಂಡಗಳನ್ನೂ ಹಗುರವಾಗಿ ಪರಿಗಣಿಸಿಲ್ಲ. 

ಮೊದಲ ಪಂದ್ಯದಲ್ಲಿಯೇ ದಬಂಗ್‌ ದೆಹಲಿಯನ್ನು ಮಣಿಸಿ ಶುಭಾರಂಭ ಮಾಡಿದ್ದೀರಿ?
ಹೌದು ಇದೊಂದು ಒಳ್ಳೆಯ ಆರಂಭ. ಮೊದಲ ಹತ್ತು ನಿಮಿಷ ಒತ್ತಡ ಇತ್ತು. ಆದರೆ ಆ ನಂತರ ಉತ್ತಮ ಹಿಡಿತ ಸಿಕ್ಕಿತು. ನಮ್ಮದು ಹೊಸ ತಂಡ ಹಾಗೂ ಯುವ ಆಟಗಾರರನ್ನು ಹೊಂದಿದೆ. ಈ ಕಾರಣಕ್ಕೆ ಎದುರಾಳಿ ತಂಡದ ಯೋಜನೆಗಳು ತಲೆಕೆಳಗಾದವು. ನಮ್ಮ ತಂಡದ ಆಳುವ ಬಳಗದ ಮಾಹಿತಿ ಅವರಿಗೆ ಇರಲಿಲ್ಲ. ಇದು ನಮಗೆ ಲಾಭ ಆಯಿತು. ಮೊದಲರ್ಧದ ವೇಳೆಗೆ ಅವರು ರೈಡಿಂಗ್‌ನಲ್ಲಿ ಒಂದು ಪಾಯಿಂಟ್ ಮಾತ್ರ ಪಡೆದಿದ್ದರು. ಆಗ ನಮಗೆ ಪಂದ್ಯ ಗೆಲ್ಲುವ ವಿಶ್ವಾಸ ಮೂಡಿತು.

ಪರ್ವೇಶ್ ಬೈಂಸ್‌ವಾಲ್‌, ಸಚಿನ್‌, ಸುನಿಲ್‌ ಕುಮಾರ್‌, ಅಬ್‌ಜೊರ್ ಮಿಗಾನಿ ಹೊಸಬರು. ಎದುರಾಳಿ ತಂಡದವರಿಗೆ ಇವರ ಆಟದ ಬಗ್ಗೆ ಮಾಹಿತಿ ಇರಲಿಲ್ಲ.ಮುಖ್ಯ ಕೋಚ್‌ ಮಣಿಪ್ರೀತ್ ಸಿಂಗ್ ಅವರು ಈ ನಿಟ್ಟಿನಲ್ಲಿ ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT