ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆನಾ ಬರಹದ ಭರ್ಜರಿ ಸರ್ವ್!

Last Updated 6 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

'ಸೆರೆನಾ ವಿಲಿಮಯ್ಸ್ ಪ್ರತಿ ಗೆಲುವೂ ನನ್ನದೇ ಎಂದುಕೊಳ್ಳುತ್ತಾ ಬಂದವಳು. ದೊಡ್ಡ ಕನಸುಗಾತಿ. ತನ್ನ ಬಣ್ಣದ ಕೀಳರಿಮೆ ಮೀರಿದವಳು. ಮೂದಲಿಕೆಗಳ ದಾಟಿದವಳು. ಅವರಪ್ಪ ರಿಚರ್ಡ್ ವಿಲಿಯಮ್ಸ್ ತನ್ನ ಎರಡೂ ಹೆಣ್ಣುಮಕ್ಕಳನ್ನು ಸರ್ವಶ್ರೇಷ್ಠ ಟೆನಿಸ್ ಆಟಗಾರ್ತಿಯರ ಸಾಲಿನಲ್ಲಿ ನಿಲ್ಲಿಸುವ ಕನಸು ಕಟ್ಟಿ, ನೀರೆರೆದರು. ಮಕ್ಕಳು ಅದನ್ನು ಸಾಕಾರಗೊಳಿಸಿದರು...'

ಬಾರ್ಬಡೋಸ್ ಬೇರಿನ ಅಮೆರಿಕನ್ ಕಪ್ಪು ವರ್ಣೀಯ ಕಾದಂಬರಿಕಾರ್ತಿ ನವೋಮಿ ಜಾಕ್ಸನ್ ಹೀಗೆ ಅರ್ಥಪೂರ್ಣ ಪ್ರಬಂಧವೊಂದರಲ್ಲಿ ಬರೆದಿದ್ದಾರೆ. ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ಗಳ ರೆಫ್ರಿಜರೇಟರಿನ ಮೇಲೆ ಅಂಟಿಸಿದ್ದ ಸೆರೆನಾ ಪೋಸ್ಟರ್‌ಗಳ ಬಗೆಗೂ ಅವರು ಪ್ರಸ್ತಾಪಿಸಿದ್ದಾರೆ. ಹೀಗಳಿಕೆಗೆ ಈಡಾಗಿದ್ದ ದೇಹವನ್ನು ಕ್ರೀಡಾಧಿಪತ್ಯ ಸಾಧಿಸಲು ಕಟೆದ ವಿಕ್ರಮವನ್ನು ವಿಪರೀತ ಕೊಂಡಾಡಿದ್ದಾರೆ. ಮಾಂಸದ ದೊಡ್ಡ ತಡಿಕೆಯಂಥ ಕಾಯವನ್ನು ಮಾರುಕಟ್ಟೆಯ ಭಾಗವಾಗಿಸಿಯೂ ತನ್ನತನ ಉಳಿಸಿಕೊಂಡ ಸಾಕ್ಷಿಪ್ರಜ್ಞೆಯನ್ನೂ ಶ್ಲಾಘಿಸಿದ್ದಾರೆ.

ಅವರ ಪ್ರಬಂಧದ ತುಂಬೆಲ್ಲ ಸೆರೆನಾ ಗುಣಗಾನ. ತನ್ನ ನಾಡಿಮಿಡಿತವೇ ಆ ಆಟಗಾರ್ತಿ ಎಂಬಷ್ಟು ಆರಾಧನಾ ಭಾವ ಅವರ ಸಾಲುಗಳಲ್ಲಿ ಢಾಳಾಗಿದೆ.

ನವೋಮಿ ತಮ್ಮ ಕಾದಂಬರಿ 'ದಿ ಸ್ಟಾರ್ ಸೈಡ್ ಆಫ್ ಬರ್ಡ್‌ಹಿಲ್'ನ ಮುಖಪುಟ ತೋರಿಸುತ್ತಾ, ಪುಲಕಗೊಳ್ಳುತ್ತಿದ್ದರು. ಆ ಮುಖಪುಟದ ಕಪ್ಪು ದಡೂತಿ ಹೆಣ್ಣಿಗೂ ಅವರ ಆರಾಧ್ಯ ಆಟಗಾರ್ತಿ ಸೆರೆನಾಗೂ ಹೋಲಿಕೆ ಇತ್ತು.

ಸೆರೆನಾ ಕೂಡ ಆಗೀಗ ಬರೆಯುತ್ತಿರುತ್ತಾರೆ. ಆ ಬರವಣಿಗೆ ಪುರುಷರಿಗೆ ಚುರುಕು ಮುಟ್ಟಿಸುವ ಹಲವು ಸಂಗತಿಗಳನ್ನು ಒಳಗೊಳ್ಳುತ್ತಿರುತ್ತದೆ. ಮೊನ್ನೆ 'ಫಾರ್ಚೂನ್' ನಿಯತಕಾಲಿಕೆಯಲ್ಲಿ ಅವರು ಬರೆದ ಸಾವಿರ ಪದಗಳ ಪ್ರಬಂಧ ಎಷ್ಟೋ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಕಪ್ಪು ಮಹಿಳೆಗೆ ಸಮಾನ ವೇತನಬೇಕೆಂದು ಆಗ್ರಹಿಸಲೇ ಒಂದು ದಿನಾಚರಣೆ ಇದೆ. ಅದರ ನಿಮಿತ್ತ ಬರೆದ ಪ್ರಬಂಧವದು.

ಅವರ ಬರವಣಿಗೆಯಲ್ಲಿ ಮೆಲುಕು ಹಾಕಲೇಬೇಕಾದ ಕೆಲವು ಸಾಲುಗಳಿವೆ, ಓದಿ: 'ಗಂಡಸಿನಷ್ಟೇ ಹಣ ಸಂಪಾದಿಸಲು ಹೆಣ್ಣು ಅವನಿಗಿಂತ ಎಂಟು ತಿಂಗಳು ಹೆಚ್ಚು ಕೆಲಸ ಮಾಡಬೇಕು. ಅಮೆರಿಕದಲ್ಲಿ ಪುರುಷ ಒಂದು ಡಾಲರ್ ಸಂಪಾದಿಸಲು ಎಷ್ಟು ಕೆಲಸ ಮಾಡುತ್ತಾನೋ ಅಷ್ಟನ್ನೇ ಮಾಡುವ ಕಪ್ಪು ಮಹಿಳೆಗೆ ಸಿಗುವುದು ಬರೀ 63 ಸೆಂಟ್. ಅದೇ ದೇಶದಲ್ಲಿ ಬಿಳಿ ಮಹಿಳೆಗಿಂತ ಕಪ್ಪು ಹೆಣ್ಣುಮಗಳಿಗೆ ಶೇ 17ರಷ್ಟು ಕಡಿಮೆ ಪಗಾರ ಸಿಗುತ್ತದೆ. ಪದವಿ ಪಡೆದ ಕಪ್ಪು ವನಿತೆಯರಿಗೂ ವೇತನದಲ್ಲಿ ತಾರತಮ್ಯವಿದೆ. ಈ ವ್ಯತ್ಯಾಸ ಸರಿಯಲ್ಲ ಎಂಬ ಪ್ರಜ್ಞೆ  ಶೇ 44ರಷ್ಟು ಬಿಳಿ ಹುಡುಗರಿಗೆ ಇದೆ. ಬಡತನ, ವರ್ಣಭೇದ, ಲೈಂಗಿಕ ದೌರ್ಜರ್ನ್ಯದ ಗೋಡೆಗಳನ್ನು ಒಡೆದುಕೊಂಡು ಮುನ್ನುಗ್ಗುವುದು ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವುದಕ್ಕಿಂತ ಕಷ್ಟ'.

ಸೆರೆನಾ ಹೀಗೆ ಗುಂಡು ಹೊಡೆವಂತೆ ಪದೇ ಪದೇ ಬರೆದಿದ್ದಾರೆ. ಆ ಬರಹಗಳೆಲ್ಲವನ್ನೂ ಪೋಣಿಸಿದರೆ ಅವರ ಆತ್ಮಕತೆಯ ಹಂದರದಂತೆ ಕಂಡೀತು.

ಕಳೆದ ವರ್ಷ 'ಪೋರ್ಟರ್' ನಿಯತಕಾಲಿಕೆಗೆ 'ದೊಡ್ಡ ಕನಸು ಕಾಣಿರಿ... ಹೆಣ್ಣುಮಕ್ಕಳೇ' ಎಂಬ ಪ್ರಬಂಧ ಬರೆದಿದ್ದರು. 'ಅಮೆರಿಕದ ವಿಶ್ವ ಖ್ಯಾತಿಯ ಮಹಿಳಾ ಅಥ್ಲೀಟ್ ಸೆರೆನಾ' ಎಂಬ ಹೊಗಳಿಕೆ ಕಿವಿಮೇಲೆ ಬಿದ್ದಾಗಲೆಲ್ಲ ತಮಗೆ ಇರುಸು ಮುರುಸಾಗುತ್ತದೆ ಎಂದು ಅದರಲ್ಲಿ ಬರೆದಿದ್ದರು. ಎಲ್ಲ ಗುಣವಿಶೇಷಣಗಳ ಹಿಂದೆ 'ಮಹಿಳೆ' ಎನ್ನುವ ಪದ ಸೇರಿಸುವುದರ ಕುರಿತು ಅವರಿಗೆ ತಕರಾರು.

ದೊಡ್ಡ ಕನಸು ಕಾಣುತ್ತಾ, ಅದನ್ನು ಸಾಕಾರಗೊಳಿಸಿಕೊಂಡ ಸೆರೆನಾ ಅವರ ವಯಸ್ಸೀಗ 35 ದಾಡಿದೆ. ಅಭಿಪ್ರಾಯ ಹಾಗೂ ದನಿಯಲ್ಲಿ ಮಾತ್ರ ಅದೇ ಬಿಸುಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT