ಯುವ ಸಮೂಹದಲ್ಲಿ ನಾನು ಕಂಡುಕೊಂಡಿದ್ದು...

ಕಳೆದ ಕೆಲವು ತಿಂಗಳುಗಳಲ್ಲಿ ನಾನು ಪದೇ ಪದೇ ಸುತ್ತಾಟ ನಡೆಸಿದ್ದೇನೆ. ನಾನು ಹೋದ ಕೆಲವು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಸೇರಿದ್ದ ಜನರಲ್ಲಿ ನಾನು ಕಂಡುಕೊಂಡ ಸಾಮಾನ್ಯ ಸಂಗತಿಗಳ ಬಗ್ಗೆ ಆಲೋಚಿಸುತ್ತಿದ್ದೆ...

ಸಾಂದರ್ಭಿಕ ಚಿತ್ರ

ನನ್ನ ವೃತ್ತಿ ಬದುಕಿನಲ್ಲಿ ನಾನು ನೂರಾರು ಜನ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಬಹುಶಃ ಲಕ್ಷಾಂತರ ಜನರ ಜೊತೆ ಮಾತನಾಡಿದ್ದೇನೆ. ಇವರಲ್ಲಿ ಬಹುತೇಕರು ಕಾಲೇಜಿನಲ್ಲಿ ಓದುತ್ತಿರುವ ಮಧ್ಯಮ ವರ್ಗಕ್ಕೆ ಸೇರಿದ ಯುವಕರು. ನಾನು ಸಾಮಾನ್ಯವಾಗಿ ಅರ್ಧ ಗಂಟೆ ಅಥವಾ ನಲವತ್ತು ನಿಮಿಷಗಳವರೆಗೆ ಮಾತನಾಡುತ್ತೇನೆ. ನಂತರ ಸಭಿಕರು ತಮ್ಮ ಅಭಿಪ್ರಾಯ ಹೇಳುತ್ತಾರೆ ಅಥವಾ ಪ್ರಶ್ನೆಗಳನ್ನು ಎತ್ತುತ್ತಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ನಾನು ಪದೇ ಪದೇ ಸುತ್ತಾಟ ನಡೆಸಿದ್ದೇನೆ. ನಾನು ಹೋದ ಕೆಲವು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಸೇರಿದ್ದ ಜನರಲ್ಲಿ ನಾನು ಕಂಡುಕೊಂಡ ಸಾಮಾನ್ಯ ಸಂಗತಿಗಳ ಬಗ್ಗೆ ಆಲೋಚಿಸುತ್ತಿದ್ದೆ.

ಅವುಗಳಲ್ಲಿ ಮೊದಲನೆಯದು, ಆ ಜನರ ದೃಷ್ಟಿಕೋನಗಳು. ದೊಡ್ಡ ಜನಸಮೂಹದ ಮೂಲಕ ನಾನು ಸ್ಪಷ್ಟಪಡಿಸಿಕೊಂಡಿರುವುದು ಏನೆಂದರೆ, ಭಾರತದ ಮಕ್ಕಳು ಬಂಡಾಯದ ಸ್ವಭಾವ ಹೊಂದಿಲ್ಲ. ಅವರು ಸಾಂಪ್ರದಾಯಿಕ ಮನಸ್ಥಿತಿ ಹೊಂದಿದವರು. ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿರುವ ವ್ಯಕ್ತಿಗಳೂ ಹೀಗೆಯೇ ಇದ್ದಾರೆ– ತರಗತಿಗಳಲ್ಲಿ ಇರುವವರು, ಪತ್ರಕರ್ತರು, ಸೆಲೆಬ್ರಿಟಿಗಳು ಕೂಡ. ಇವರು ಬೇರೆಯವರಿಗೆ ಗೌರವ ನೀಡುವವರು. ವಿಶ್ವದ ಬಹುತೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ, ಕಾಲೇಜು ಯುವಕರು ಪ್ರಭುತ್ವಕ್ಕೆ ಗೌರವ ನೀಡುವುದಿಲ್ಲ. ಹಾಗಾಗಿ, ನಮ್ಮಲ್ಲಿನ ಮನಸ್ಥಿತಿ ಸಾಮಾನ್ಯದ್ದಲ್ಲ. ಭಾರತದ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬಂಡುಕೋರತನ ಇಲ್ಲ ಅಥವಾ ಇದ್ದರೂ ತೀರಾ ಕಡಿಮೆ. ಇದು ಚಿಂತೆಗೆ ಕಾರಣವಾಗುವ ವಿಚಾರ.

ಎರಡನೆಯ ವಿಚಾರ ಹೀಗಿದೆ: ಸಾಂಪ್ರದಾಯಿಕವಲ್ಲದ ಕೆಲವು ವಿಚಾರಗಳನ್ನು ಪರಿಗಣಿಸುವಲ್ಲಿ ನಮ್ಮ ಯುವತಿಯರು ಯುವಕರಿಗಿಂತ ಹೆಚ್ಚು ಮುಕ್ತವಾಗಿದ್ದಾರೆ. ಉದಾಹರಣೆಗೆ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನಾನು ಪ್ರಶ್ನಿಸಿದರೆ ಮಹಿಳೆಯರು ಅದಕ್ಕೆ ತಲೆದೂಗುವ ಸಾಧ್ಯತೆ ಹೆಚ್ಚು, ಕೋಪದಿಂದ ಮರುಪ್ರಶ್ನೆ ಎಸೆಯುವ ಸಾಧ್ಯತೆ ಕಡಿಮೆ.

ಸಾಮಾಜಿಕ ನ್ಯಾಯದ ಬಗ್ಗೆ ಮಾಹಿತಿ ಇಲ್ಲದಿರುವಿಕೆ ಯುವಕರು ಹಾಗೂ ಯುವತಿಯರಲ್ಲಿ ಸಮಾನವಾಗಿದೆ ಎಂಬುದು ಮೂರನೆಯ ವಿಚಾರ. ಉದಾಹರಣೆಗೆ, ನಾವು ಮೊದಲು ಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳೋಣ. ನಾನು ಭೇಟಿ ಮಾಡಿದ ಸಭಿಕರು ದಲಿತರು ಹಾಗೂ ಆದಿವಾಸಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಹಾನುಭೂತಿ ಹೊಂದಿದವರೇ ಅಲ್ಲ ಎನ್ನಬಹುದು. ಸಭಿಕರಲ್ಲಿ ಆದಿವಾಸಿಗಳು ಅಥವಾ ದಲಿತರು ಇಲ್ಲ ಅಥವಾ ಅವರನ್ನು ವ್ಯವಸ್ಥೆಯಿಂದ ಹೊರಗೆಯೇ ಇರಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಿದ ನಂತರವೂ ದೃಷ್ಟಿಕೋನ ಬದಲಾಗುವುದಿಲ್ಲ. ಈ ಎರಡು ಸಮುದಾಯಗಳು ತಾರತಮ್ಯ ಎದುರಿಸುತ್ತಿವೆ ಎಂಬ ವಾಸ್ತವವನ್ನು ಒಪ್ಪಿಕೊಂಡ ಬಳಿಕವಷ್ಟೇ ಮೀಸಲಾತಿಯ ವಿರುದ್ಧ ಟೀಕೆ ಮಾಡಬಹುದು ಎಂದು ನಾನು ಬಯಸುತ್ತೇನೆ. ಆದರೆ ಇದು ಯಾವತ್ತೂ ಆಗುವುದಿಲ್ಲ. ಮೀಸಲಾತಿಯ ಮೇಲೆ ‘ಪ್ರತಿಭೆ’ ವಿಜಯ ಸಾಧಿಸಬೇಕು ಎಂಬುದಷ್ಟೇ ಯುವಕರ ಆಗ್ರಹ.

ಮಾಧ್ಯಮಗಳ ಕಾರಣದಿಂದಾಗಿ ಯುವಕರ ಮನಸ್ಸನ್ನು ಕಲಕುವ ಅತಿದೊಡ್ಡ ವಿಚಾರ ಕಾಶ್ಮೀರ ಮಾತ್ರ. ಇದು ನಾಲ್ಕನೆಯ ಸಂಗತಿ. ಸರ್ಕಾರವು ‘ಭಯೋತ್ಪಾದನೆ’ ಎಂದು ಕರೆಯುವ ವಿದ್ಯಮಾನ ನಡೆಯುತ್ತಿರುವ ಮೂರು ಪ್ರದೇಶಗಳು ಭಾರತದಲ್ಲಿ ಇವೆ ಎಂದು ನಾನು ಅವರಿಗೆ ಹೇಳಿದ್ದೇನೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, ಈ ಮೂರು ಪ್ರದೇಶಗಳ ಪೈಕಿ ಅತಿಹೆಚ್ಚು ಹಿಂಸೆಯನ್ನು ಕಂಡಿರುವುದು ನಕ್ಸಲ್ ಪ್ರದೇಶ. ಇಲ್ಲಿ ಒಟ್ಟು 6,080 ಜನ ಸತ್ತಿದ್ದಾರೆ. ಎರಡನೆಯ ಅತಿಹೆಚ್ಚು ಹಿಂಸಾಚಾರ ನಡೆದಿರುವುದು ದೇಶದ ಈಶಾನ್ಯ ರಾಜ್ಯಗಳಲ್ಲಿ.  ಇಲ್ಲಿ 5,050 ಜನ ಸತ್ತಿದ್ದಾರೆ. ಮೂರನೆಯ ಅತಿಹೆಚ್ಚು ಹಿಂಸಾಚಾರ ನಡೆದಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. ಇಲ್ಲಿ 3,378 ಜನ ಸತ್ತಿದ್ದಾರೆ. ಹೀಗಿದ್ದರೂ, ಈಶಾನ್ಯ ರಾಜ್ಯಗಳ ಬಗ್ಗೆ ಅಥವಾ ನಕ್ಸಲ್ ಹಿಂಸಾಚಾರದ ಬಗ್ಗೆ ನನಗೆ ಪ್ರಶ್ನೆಗಳು ಬರುವುದಿಲ್ಲ. ಕಾಶ್ಮೀರ ಹಾಗೂ ಅಲ್ಲಿ ಕಲ್ಲೆಸೆಯುವ ಜನ ನಮ್ಮ ಯುವಕರ ಮನಸ್ಸನ್ನು ದೊಡ್ಡ ಮಟ್ಟದಲ್ಲಿ ಕಲಕಿಬಿಡುತ್ತಾರೆ. ಯುವಕರ ಮನಸ್ಸು ಆಕ್ರೋಶ ಹೊಂದುವುದು ಸಂವಿಧಾನದ 370ನೇ ವಿಧಿಯ ಇತಿಹಾಸದ ಕುರಿತ ಜ್ಞಾನ ಅಥವಾ ಭಾರತದ ಪ್ರಭುತ್ವದ ವರ್ತನೆ ಕುರಿತ ಜ್ಞಾನದಿಂದ ಅಲ್ಲ.

ಇವರು ವಿದ್ಯಾರ್ಥಿಗಳಾಗಿದ್ದೂ ಹೀಗಾಗುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ. ನಮ್ಮ ಟಿ.ವಿ. ವಾಹಿನಿಗಳಲ್ಲಿ ರಾಷ್ಟ್ರೀಯವಾದ ಹಾಗೂ ರಾಷ್ಟ್ರವಿರೋಧಿ ಧೋರಣೆ ಎಂದು ತೋರಿಸುವ ಸೀಮಿತ ದೃಷ್ಟಿಕೋನವೇ ಇವರಲ್ಲೂ ಇದೆ.

ಐದನೆಯ ಸಂಗತಿ ಹೀಗಿದೆ: ಈ ಮೇಲೆ ಹೇಳಿದ ಎಲ್ಲ ವಿಚಾರಗಳಿಗೂ ಅಪವಾದಗಳಿವೆ. ಅಪವಾದ ಎನ್ನುವಂತಹ ವಿದ್ಯಾರ್ಥಿಗಳು ಕಾಣುವುದು ಸಾಮಾನ್ಯವಾಗಿ ಲಲಿತ ಕಲೆಗಳು, ಸಾಹಿತ್ಯ ಹಾಗೂ ಇಂತಹ ಇತರ ಕೋರ್ಸ್‌ಗಳಲ್ಲಿ. ಎಂಜಿನಿಯರಿಂಗ್, ವಾಣಿಜ್ಯ ಹಾಗೂ ವಿಜ್ಞಾನದ ವಿದ್ಯಾರ್ಥಿಗಳು ‘ಎಲ್ಲರಂತೆ’ ಯೋಚಿಸುವುದೇ ಹೆಚ್ಚು.

ಆರನೆಯದು, ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ನಡುವೆ ಬಹಳ ಜನಪ್ರಿಯರು. ಮೋದಿ ಅವರ ಉದ್ದೇಶಗಳು ಒಳ್ಳೆಯವು ಎಂದು ಇವರು ನಂಬುತ್ತಾರೆ.  ಮೋದಿ ಅವರ ಹಿನ್ನೆಲೆ  ಹಾಗೂ ಅವರ ಸಾಧನೆ ಕುರಿತ ತಕರಾರುಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಅಲ್ಲಗಳೆಯಬಲ್ಲರು.

ಜಾನುವಾರು ಹತ್ಯೆ ಹಾಗೂ ಗೋಮಾಂಸಕ್ಕೆ ಸಂಬಂಧಿಸಿದಂತೆ ಜನರನ್ನು ಹೊಡೆದು ಸಾಯಿಸುವುದನ್ನು ಈ ಯುವಕರು ಒಪ್ಪುವುದಿಲ್ಲ. ಆದರೆ, ಇಂತಹ ಹಿಂಸೆಗಳಿಗೆ ಸರ್ಕಾರ ಹೊಣೆ ಎಂಬುದನ್ನೂ ಒಪ್ಪುವುದಿಲ್ಲ. ಇದು ಏಳನೆಯ ಸಂಗತಿ.

ಒತ್ತಾಯ ಮಾಡದಿದ್ದರೆ ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಅಥವಾ ಭಾರತದಲ್ಲಿನ ಉದ್ಯೋಗ ಮಾರುಕಟ್ಟೆ ಬಗ್ಗೆ ಮಾತನಾಡುವುದಿಲ್ಲ. ಉದ್ಯೋಗ ಎಂಬುದು ದೊಡ್ಡ ಚರ್ಚೆಯ ವಸ್ತುವಾಗಿದೆ ಎಂಬುದು ಇವರಿಗೆ ಗೊತ್ತಿರುವಂತೆ ಕಾಣುತ್ತಿಲ್ಲ ಅಥವಾ ತಮ್ಮ ಭವಿಷ್ಯ ಸುಲಲಿತವಾಗಿದೆ ಎಂದು ನಂಬಿರುವಂತಿದೆ ಎನ್ನುವುದು ಎಂಟನೆಯ ವಿಚಾರ.

ಒಂಬತ್ತನೆಯ ವಿಚಾರ ಇದು. ಪ್ರಶ್ನಿಸುವುದು ತೀರಾ ಮೂಲಭೂತ ಗುಣ. ಈ ಗುಣ ದುರ್ಬಲವಾಗಿದೆ. ಮಾಧ್ಯಮಗಳು ಹಾಗೂ ತಮ್ಮ ಶಿಕ್ಷಕರು ಹೇಳುವುದನ್ನು ಸ್ವತಂತ್ರವಾಗಿ ಪರಿಶೀಲಿಸುವ ಉತ್ತಮ ವಿದ್ಯಾರ್ಥಿಗಳನ್ನು  ನಾವು ತಯಾರು ಮಾಡುತ್ತಿಲ್ಲ.

ಇಂಗ್ಲಿಷ್‌ ಬಳಕೆ ಮಾಡುವವರ ಭಾಷಾ ಗುಣಮಟ್ಟ  ಕೆಟ್ಟದ್ದಾಗಿದೆ ಎಂಬುದು ಕೊನೆಯ ಸಂಗತಿ. ಬೌದ್ಧಿಕ ಶ್ರಮ ಬಯಸುವ ಕೆಲಸಗಳಿಗೆ ತರಬೇತಿ ಪಡೆದಿರದ ಪದವೀಧರರನ್ನು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆ ತಯಾರು ಮಾಡುತ್ತಿದೆ. ಉನ್ನತ ಮಟ್ಟದ ಕೆಲಸಗಳಿಗೆ ಅಗತ್ಯವಿರುವ ಮೂಲಭೂತ ಸಂವಹನ ಕಲೆ ಕೂಡ ಬಹುತೇಕರಲ್ಲಿ ಇಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

Comments
ಈ ವಿಭಾಗದಿಂದ ಇನ್ನಷ್ಟು
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

ದೂರ ದರ್ಶನ
ಏನಿದ್ದೀತು ಈ ಬಾರಿ ಚುನಾವಣಾ ವಿಷಯ?

20 Mar, 2018
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

ದೂರ ದರ್ಶನ
ನಮ್ಮ ತನಿಖಾ ಸಂಸ್ಥೆಗಳ ಕಥೆ-ವ್ಯಥೆ

12 Mar, 2018
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

ದೂರ ದರ್ಶನ
ಅಧಿಕಾರದಲ್ಲಿರುವ ಪಕ್ಷದ ಏಳು ಅನುಕೂಲಗಳು

5 Mar, 2018
ಗುಜರಾತ್ ಮಾದರಿಯ ಇನ್ನೊಂದು ಮುಖ!

ದೂರ ದರ್ಶನ
ಗುಜರಾತ್ ಮಾದರಿಯ ಇನ್ನೊಂದು ಮುಖ!

26 Feb, 2018

ದೂರ ದರ್ಶನ
ಹಿಂಸೆಯಿಲ್ಲದ ಯುದ್ಧದಲ್ಲಿ ತಂತ್ರಜ್ಞಾನದ್ದೇ ಮೇಲುಗೈ

ಆಧುನಿಕ ರಾಷ್ಟ್ರವು ಯುದ್ಧದ ವೇಳೆ ಶತ್ರು ರಾಷ್ಟ್ರದ ಸಂಪರ್ಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವತ್ತ ಗಮನ ನೀಡುತ್ತದೆ. ಇಂಟರ್ನೆಟ್‌ ಸೇವೆಗಳು ಸ್ಥಗಿತವಾಗುವಂತೆ ಮಾಡಿದರೆ ಯಾವುದೇ ಆಧುನಿಕ ರಾಷ್ಟ್ರ...

19 Feb, 2018