ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕೂಲಿಂಗ್’ ಸಮಸ್ಯೆಗೆ ಸುಲಭ ಪರಿಹಾರ

Last Updated 7 ಆಗಸ್ಟ್ 2017, 13:53 IST
ಅಕ್ಷರ ಗಾತ್ರ

ಕೆಲವು ಪೂರ್ವಸಿದ್ಧತೆಗಳನ್ನು ಮಾಡಿ ಇನ್ನು ಕೆಲವು ವಿಷಯಗಳನ್ನು ಗಮನದಲ್ಲಿಟ್ಟರೆ ಮಕ್ಕಳ ಸ್ಕೂಲಿಂಗ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಗು ಹಟ ಮಾಡುವಾಗ, ‘ಇರು, ನಿನ್ನನ್ನು ಶಾಲೆಗೆ ಕಳಿಸ್ತೇನೆ. ಅಲ್ಲಿ ಮಿಸ್ ನಿನಗೆ ಬುದ್ಧಿ ಕಲಿಸ್ತಾರೆ’ ಎಂದು ಕೆಲವು ಅಮ್ಮಂದಿರು ಬೆದರಿಸುತ್ತಾರೆ. ಆದರೆ ಇದರಿಂದ ಮಗುವಿಗೆ ಶಾಲೆ ಹಾಗೂ ಟೀಚರ್‌ಗಳ ಬಗ್ಗೆ ಭಯ ಮೂಡುತ್ತದೆ. ಯಾವತ್ತೂ ಶಾಲೆ ಹಾಗೂ ಶಿಕ್ಷಕರ ಬಗ್ಗೆ ಧನಾತ್ಮಕವಾದ ಮಾತುಗಳನ್ನಾಡಿ.

l ಶಾಲೆಯೆಂದರೆ ಖುಷಿಕೊಡುವ, ಹೊಸ ಗೆಳೆಯರು ದೊರೆಯುವ, ಆಡಿ, ಹಾಡಿ ನಲಿಯುವ, ಹೊಸ ವಿಷಯ ಕಲಿಯುವ ಸ್ಥಳ ಎಂಬ ಭಾವನೆ ಮಗುವಿನಲ್ಲಿ ಮೂಡಿಸಿ.

l ಪ್ರಾಣಿ, ಪಕ್ಷಿ, ಹೂವು, ಹಣ್ಣು, ತರಕಾರಿಗಳ ಚಿತ್ರವಿರುವ ಪುಸ್ತಕ ಅಥವಾ ಚಾರ್ಟ್ ತಂದುಕೊಟ್ಟು ಅವುಗಳ ಹೆಸರನ್ನು ಹೇಳಿಸಿ.

l ಒಂದೆರಡು ನರ್ಸರಿ ರೈಮ್ಸ್, ನೀತಿಕಥೆಗಳನ್ನು ಮಕ್ಕಳಿಗೆ ಹೇಳಿ. ಶಾಲೆಯಲ್ಲಿ ಇಂತಹ ಬಹಳಷ್ಟು ವಿಷಯಗಳನ್ನು ತಿಳಿಯಬಹುದು ಎಂದು ಅವರ ಕುತೂಹಲ ಕೆರಳಿಸಿ.

l ಮಗುವಿನ ದಿನಚರ್ಯೆಗಳನ್ನು ಕ್ರಮಬದ್ಧಗೊಳಿಸಿ. ಅಂದರೆ ಬೆಳಗ್ಗೆ ಏಳುವುದು, ಶೌಚಕ್ರಿಯೆಗಳನ್ನು ಮಾಡುವುದು, ತಿಂಡಿ, ಊಟ ಮಾಡುವುದು ಇತ್ಯಾದಿಗಳಿಗೆ ನಿರ್ದಿಷ್ಟ ಸಮಯ ನಿಗದಿಗೊಳಿಸಿ. ಮಗು ಶಾಲೆಗೆ ಹೋಗತೊಡಗುವಾಗ ಮಗುವಿಗೂ ಅಮ್ಮನಿಗೂ ಇದರಿಂದ ಪ್ರಯೋಜನವಾಗುತ್ತದೆ.

l ಅರೆನಿದ್ರೆಯಲ್ಲಿ ಮಗು ಎದ್ದರೆ ಶಾಲೆಗೆ ಹೋಗಲು ಕಿರಿಕಿರಿ, ಹಟ ಮಾಡಬಹುದು. ಅದಕ್ಕೆ ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ಮಾಡಿಸಿ.

l ಚಂದದ ಕೊಡೆ/ರೈನ್ ಕೋಟ್, ಆಕರ್ಷಕ ಸ್ಕೂಲ್ ಬ್ಯಾಗ್, ಪೆನ್ಸಿಲ್ ಬಾಕ್ಸ್, ವಾಟರ್ ಬಾಟಲ್ ಮುಂತಾದವನ್ನು ತಂದುಕೊಟ್ಟು ಅವನ್ನು ಹಿಡಿದು ಶಾಲೆಗೆ ಹೋಗುವ ಕುತೂಹಲ ಮೂಡಿಸಿ.

l ಮಗುವಿಗೆ ಮನೆಯಲ್ಲಿ ತನ್ನ ವಸ್ತುಗಳನ್ನು ಒಪ್ಪ ಓರಣವಾಗಿಡಲು ಹೇಳಿಕೊಡಿ. ಮುಂದೆ ತನ್ನ ಶಾಲಾವಸ್ತುಗಳನ್ನು ನೀಟಾಗಿಡಲು ಇದರಿಂದ ಮಗು ಕಲಿಯುತ್ತದೆ.

l ಮಗುವಿನ ಮುಂದೆ ಶಾಲೆ ಹಾಗೂ ಶಿಕ್ಷಕರನ್ನು ಎಂದೂ ದೂರದಿರಿ.

l ಶಾಲೆಗೆ ಸೇರಿಸುವ ಮೊದಲೇ ಮಗುವಿಗೆ ಒತ್ತಾಯದಿಂದ ಬರೆಯಲು ಕಲಿಸುವ ಪ್ರಯತ್ನ ಮಾಡಬೇಡಿ. ಶಾಲೆಯಲ್ಲಿ ಮೊದಲು ಶಿಶುಗೀತೆ, ಆಟ ಮುಂತಾದವುಗಳ ಮೂಲಕ ಮಗುವನ್ನು ಶಾಲಾ ವಾತಾವರಣಕ್ಕೆ ಹೊಂದುವಂತೆ ಮಾಡಿ, ನಂತರ ಅಕ್ಷರ ಬರೆಯಲು ಪೂರ್ವಸಿದ್ಧತೆಯಾಗಿ, ಪೆನ್ಸಿಲ್ ಹಿಡಿಯುವ ಕ್ರಮ, ಬರೆಯುವ ಕ್ರಮ ತಿಳಿಸಲಿಕ್ಕಾಗಿ ಚಿತ್ರಗಳು, ರೇಖೆಗಳು, ವೃತ್ತಗಳು ಹಾಗೂ ಅಕ್ಷರ ಸಂಕೇತಗಳನ್ನು ಕಲಿಸಲಾಗುತ್ತದೆ.

l ಶಾಲೆ ಪ್ರಾರಂಭವಾಗಿ, ಅಕ್ಷರ–ಬರಹಕ್ಕೆ ಸಿದ್ಧತೆ ಮಾಡಿದ ಮೇಲೆ ದಿನಕ್ಕೆ ಒಂದೆರಡು ಅಕ್ಷರ ಅಥವಾ ಐದು ಅಕ್ಷರಗಳನ್ನು ಒಂದು ಗುಂಪಾಗಿ ಕಲಿಸುತ್ತಾರೆ. ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ಕಲಿಸಲು ಶಿಕ್ಷಕರು ಒಂದು ತಿಂಗಳು ತೆಗೆದುಕೊಳ್ಳಬಹುದು. ಆದುದರಿಂದ ಮಗು ಒಮ್ಮೆಲೇ ಕಲಿಯಬೇಕೆಂಬ ಅತ್ಯಾತುರದಿಂದ ದೂರವಿರಿ.

l ಶಾಲಾ ಆರಂಭದ ದಿನಗಳಲ್ಲಿ ಮಗುವಿಗೆ ಒತ್ತಾಯದಿಂದ, ಹೊಡೆದು ಬಡಿದು ಕಲಿಸುವ ಪ್ರಯತ್ನ ಮಾಡಬೇಡಿ. ಕಟ್ಟುನಿಟ್ಟಿನ ವರ್ತನೆ ತೋರಿದರೆ ಮಗುವಿಗೆ ಶಾಲೆ ಹಾಗೂ ಕಲಿಕೆಯ ಬಗ್ಗೆ ಜುಗುಪ್ಸೆ ಮೂಡಬಹುದು. ಮೊದಲು ಮಗು ಶಾಲೆಗೆ ಒಗ್ಗಿಕೊಳ್ಳಲಿ. ನಂತರ ಸಕಾರಾತ್ಮಕ ಮಾತುಗಳಿಂದ ಮಗುವನ್ನು ಕಲಿಕೆಯ ಕಡೆಗೆ ಸೆಳೆಯಿರಿ.

l ಟಿ.ವಿ. ವೀಕ್ಷಣೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ಇದರಿಂದ ಮುಂದೆ ಮಗುವಿಗೆ ಹೋಮ್ ವರ್ಕ್ ಮಾಡಿಸಲು ಒದ್ದಾಡಬೇಕಾಗಿಲ್ಲ.
ಮಗುವನ್ನು ಪ್ರಥಮ ಬಾರಿ ಶಾಲೆಗೆ ಕಳಿಸುವ ಬಗ್ಗೆ ಹೆತ್ತವರಿಗೆ ಆತಂಕಗಳಿದ್ದರೂ ಅವನ್ನು ಮಗುವಿಗೆ ತೋರ್ಪಡಿಸದೇ, ಉತ್ಸಾಹ ತುಂಬುವ ಮಾತುಗಳಿಂದ ಮಗುವನ್ನು ಶಾಲೆಗೆ ಸಿದ್ಧಗೊಳಿಸಿ. ಹೆತ್ತವರ ಧೋರಣೆ, ವರ್ತನೆ ಸರಿಯಿದ್ದರೆ ಮಗುವಿನ ‘ಸ್ಕೂಲಿಂಗ್’ ಒಂದು ಸಮಸ್ಯೆಯೆನಿಸದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT