ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮಕಾರಿ ಕಲಿಕೆಗೆ ವೀಕ್ಷಣೆಯ ಸೂತ್ರ-ಮಂತ್ರ

Last Updated 7 ಆಗಸ್ಟ್ 2017, 14:04 IST
ಅಕ್ಷರ ಗಾತ್ರ

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಕಲಿಕೆ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಸಹಜವಾಗಿ ನಡೆಯುವ ಒಂದು ಪ್ರಕ್ರಿಯೆ. ಬೆಂಜಮಿನ್ ಫ್ರಾಂಕ್ಲಿನ್ ಎಂಬ ತತ್ವಜ್ಞಾನಿ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೀಗೊಂದು ಮಾತು ಹೇಳಿದ್ದಾನೆ: ‘ಹೇಳಿ - ನಾನು ಮರೆಯುತ್ತೇನೆ, ಬೋಧಿಸಿ -ನಾನು ನೆನಪಿಟ್ಟುಕೊಳ್ಳುತ್ತೇನೆ, ತೊಡಗಿಸಿಕೊಳ್ಳಿ - ನಾನು ಕಲಿಯುತ್ತೇನೆ’. ಕಲಿಕೆಯಲ್ಲಿ ವಿದ್ಯಾರ್ಥಿ ನೇರವಾಗಿ ಪಾಲ್ಗೊಳ್ಳಬೇಕಾದ ಅಗತ್ಯವನ್ನು ಈ ಹೇಳಿಕೆ ಸೂಚಿಸುತ್ತದೆ. ಯಾವುದೇ ಹಂತದಲ್ಲಿ ವಿದ್ಯಾರ್ಥಿಯ ಕಲಿಕೆಯು ಸರಳವಾಗಿ ಹಾಗೂ ಸುಗಮವಾಗಿ ನಡೆಯಬೇಕಾದಲ್ಲಿ ತನ್ನ ಸುತ್ತಲಿನ ಪ್ರಪಂಚ - ಅದು ಶಾಲೆಯ ಕೋಣೆಯಿರಬಹುದು ಇಲ್ಲವೇ ಶಾಲೆಯ ಹೊರಗಿನ ವಾತಾವರಣವಿರಬಹುದು - ಅಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಸೂಕ್ಷ್ಮವಾಗಿ ವೀಕ್ಷಿಸುವುದು ಅತ್ಯವಶ್ಯ.

ವೀಕ್ಷಣೆಯ ಮೂಲಕ ಕಲಿಕೆ

ಬೆಳೆಯುತ್ತಿರುವ ಒಂದು ಸಣ್ಣ ಮಗು ಮನೆಯಲ್ಲಿ ಹಿರಿಯರು ಮಾಡುವ ಕೆಲಸಗಳನ್ನು ಗಮನಿಸುತ್ತದೆ. ಹೀಗೆ ಗಮನಿಸುವ ಮೂಲಕವೇ ಹಲವಾರು ವಿಷಯಗಳನ್ನು ಗ್ರಹಿಸುತ್ತದೆ. ತಾನೂ ಕಲಿಯುತ್ತದೆ. ತಾಯಿಯ ಜೋಗುಳದ ಹಾಡು, ಆಕೆಯ ಹಾವಭಾವಗಳ ವೀಕ್ಷಣೆ ಮುಂತಾದ ಚಟುವಟಿಕೆಗಳು ಮಗುವಿನ ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ, ಮಗುವಿನ ವಾಕ್ ಶಕ್ತಿ ಮತ್ತು ಶ್ರವಣ ಶಕ್ತಿ ಬೆಳೆಯುವುದಕ್ಕೂ ಕಾರಣವಾಗುತ್ತವೆ. ಮಗು ಬೆಳೆಯುತ್ತಿದ್ದಂತೆ, ತನ್ನ ಸುತ್ತ ಮುತ್ತ ನಡೆಯುವ ಎಲ್ಲ ಬಗೆಯ ಚಟುವಟಿಕೆಗಳನ್ನು ವೀಕ್ಷಿಸುತ್ತ, ಅವುಗಳಲ್ಲಿ ಪಾಲ್ಗೊಳ್ಳುತ್ತ ಕಲಿಕೆಯ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಬಹು ಬೇಗ, ನಿರಾಯಾಸವಾಗಿ ಕಲಿಯುತ್ತದೆ. ಹಿರಿಯರ ಒಡನಾಟದ ಜೊತೆಗೆ, ಹಬ್ಬ ಹರಿದಿನಗಳಲ್ಲಿ ಮನೆಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರೇರಣೆಯೂ ಮಗುವಿಗೆ ದೊರಕುವುದರಿಂದ ಅದರ ಭಾಷೆಯೂ ಬೆಳೆಯುತ್ತದೆ. ಇದರಿಂದಾಗಿ ಮಗುವಿನ ಮುಂದಿನ ಶಾಲಾ ಜೀವನದ ಕಲಿಕೆ ಸುಲಭವಾಗುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.

ಶಾಲಾ ಕಲಿಕೆಯಲ್ಲಿ ವೀಕ್ಷಣೆಯ ಪಾತ್ರ

ಮಗು ಶಾಲೆಗೆ ಸೇರಿದ ನಂತರ ಅದರ ಕಲಿಕೆಯು ಶಾಲೆಯ ನಾಲ್ಕು ಕೋಣೆಗಳ ಒಳಗೇ ನಡೆಯಬೇಕೆಂಬ ತಪ್ಪು ಕಲ್ಪನೆ ಬಹಳಷ್ಟು ಮಂದಿಗೆ ಇದೆ. ಆದರೆ, ನಾಲ್ಕು ಗೋಡೆಗಳ ನಡುವೆ ಮೂವತ್ತು-ನಲವತ್ತು ಮಕ್ಕಳನ್ನು ನಾಲ್ಕಾರು ಗಂಟೆಗಳ ಕಾಲ ಕೂಡಿಹಾಕಿಕೊಂಡು ಒತ್ತಾಯಪೂರ್ವಕವಾಗಿ ‘ಕಲಿಸುವುದು’ ಕಲಿಕೆಯಾಗುವುದಿಲ್ಲ. ಶಾಲಾ ಕೋಣೆಯ ಹೊರಗೆ ಹಕ್ಕಿಗಳ ಚಿಲಿಪಿಲಿ, ಪಶು ಪ್ರಾಣಿಗಳ ಧ್ವನಿ, ಗಾಳಿಯಿಂದ ಅಲುಗಾಡುವ ತರಗೆಲೆಗಳ ಸದ್ದು, ಇವೇ ಮುಂತಾದ ವಾತಾವರಣದಲ್ಲಿ ಮಕ್ಕಳು ಅತ್ಯಂತ ಸುಲಭವಾಗಿ ಕಲಿಯುತ್ತಾರೆ. ನೈಸರ್ಗಿಕ ವಸ್ತುಗಳನ್ನು ಆಟಿಕೆಗಳಾಗಿ ಬಳಸುತ್ತ ಅವುಗಳ ಗುಣ-ಧರ್ಮಗಳನ್ನು ಗ್ರಹಿಸುವ ಪ್ರಯತ್ನ ಮಾಡುತ್ತಾರೆ.

ಬಿಡುವಿನ ಸಮಯದಲಿ ಶಾಲೆಯ ಆವರಣದಲ್ಲಿ ಇರುವ ಗಿಡ-ಮರಗಳಿಂದ ಉದುರಿದ ಎಲೆ, ಕಡ್ಡಿ-ಬೀಜ ಇವುಗಳನ್ನು ಸಂಗ್ರಹಿಸಿ ಅಂಥ ವಸ್ತುಗಳ ರಚನೆ ಹಾಗೂ ಕಾರ್ಯವೈವಿಧ್ಯಗಳ ಬಗ್ಗೆ ಆಸಕ್ತಿ ಮತ್ತು ಕುತೂಹಲಗಳನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ಮಕ್ಕಳಲ್ಲಿ ಉತ್ತೇಜಿಸಬೇಕು. ಆಗಲೇ ಅವರಲ್ಲಿ ಕಲಿಕೆಯ ಆಸಕ್ತಿ ಮೂಡುವುದು ಸಾಧ್ಯ. ನೀರು, ಮಣ್ಣು, ಬಿಸಿಲು, ಮಳೆಗಳಲ್ಲಿ ಆಡುತ್ತಲೇ ಮಕ್ಕಳು ತಮ್ಮ ವೀಕ್ಷಣಾ ಸಾಮರ್ಥ್ಯ ಬಳಸಿಕೊಂಡು ಹಲವಾರು ಪ್ರಾಕೃತಿಕ ನಿಯಮಗಳನ್ನು ಕಲಿಯುತ್ತಾರೆ. ಮಳೆ ನೀರು ಯಾವ ಕಡೆ ಹರಿಯುತ್ತದೆ? ಎಲ್ಲ ರೀತಿಯ ಹಸಿ ಮಣ್ಣಿನಿಂದ ಆಕೃತಿ ರಚನೆ ಏಕೆ ಸಾಧ್ಯವಿಲ್ಲ? ಮುಂತಾದ ಹತ್ತು ಹಲವು ಪ್ರಶ್ನೆಗಳಿಗೆ ಅವರೇ ಸಹಜವಾದ ಉತ್ತರಗಳನ್ನು ಹುಡುಕಿಕೊಳ್ಳುತ್ತಾರೆ. ನಿಜವಾದ ಕಲಿಕೆ ವಾಸ್ತವವಾಗಿ ತರಗತಿ ಕೋಣೆಯ ಹೊರಗೇ ಹೆಚ್ಚು ನಡೆಯುತ್ತದೆ. ಇದಕ್ಕಾಗಿ, ಮಕ್ಕಳಿಗೆ ಪ್ರಕೃತಿಯ ಮಡಿಲಲ್ಲಿ ಸುರಕ್ಷಿತವಾದ ಮುಕ್ತ ವಾತಾವರಣವನ್ನು ನಿರ್ಮಿಸಿಕೊಡುವುದು ಅತ್ಯವಶ್ಯ.

ಈ ಹಂತದ ಮಕ್ಕಳಲ್ಲಿ ಬೆಳೆದು ಬಂದಿರುವ ವೀಕ್ಷಣಾ ಸಾಮರ್ಥ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದರೆ ತರಗತಿಯ ಒಳಗಡೆಯೂ ಅಂತಹದ್ದೇ ಒಂದು ವಾತಾವರಣವನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕೆ ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ದೃಷ್ಟಿಯನ್ನು ಇಟ್ಟುಕೊಂಡೇ ಈಗ ವಿವಿಧ ಹಂತಗಳಲ್ಲಿ ಎಲ್ಲ ವಿಷಯಗಳಲ್ಲಿ ಚಟುವಟಿಕೆಯಾಧಾರಿತ ಬೋಧನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾಷೆಯೂ ಸೇರಿದಂತೆ ಎಲ್ಲ ವಿಷಯಗಳಲ್ಲಿ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನ ಪ್ರಾರಂಭವಾಗಿದೆ. ಶಿಕ್ಷಕರು ಪ್ರದರ್ಶಿಸುವ ಚಟುವಟಿಕೆಗಳನ್ನು ವೀಕ್ಷಿಸುವ ಮೂಲಕ, ಇಲ್ಲವೇ ಅವರು ಮಾಡಿಸುವ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುವ ಮೂಲಕ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ವೀಕ್ಷಣೆ ಹೆಚ್ಚಿದಷ್ಟೂ ಕಲಿಕೆ ಹೆಚ್ಚುತ್ತದೆ

ತರಗತಿಯ ಕೋಣೆಯ ಒಳಗೇ ನಡೆಸಬಹುದಾದಂಥ ವೀಕ್ಷಣಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಮನಸ್ಸಿಟ್ಟು ಗಮನಿಸಬೇಕು. ಶಿಕ್ಷಕರು ಹೇಳುತ್ತಿರುವ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಶಿಕ್ಷಕರು ನೀಡುವ ವಿವರಣೆಯ ಪ್ರಮುಖ ಅಂಶಗಳನ್ನು ಮನದಟ್ಟು ಮಾಡಿಕೊಳ್ಳುವತ್ತ ತಮ್ಮ ಚಿತ್ತವನ್ನು ಹರಿಸಬೇಕು. ಈ ಸಂದರ್ಭದಲ್ಲಿ ಬೇರೆ ವಿಷಯಗಳ ಅಥವಾ ವ್ಯಕ್ತಿಗಳ ಬಗ್ಗೆ ಗಮನ ಹರಿಸಬಾರದು. ಚಟುವಟಿಕೆಯ ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ವೀಕ್ಷಿಸಬೇಕು. ಪೂರಕವಾದ ಟಿಪ್ಪಣಿಗಳನ್ನು ಮಾಡಿಕೊಳ್ಳಬೇಕು. ಚಟುವಟಿಕೆಗಳು ನೀಡುವ ಹೊಸ ಅನುಭವಗಳಿಗೆ ಒಡ್ಡಿಕೊಳ್ಳಬೇಕು. ನಿಮ್ಮಲ್ಲಿ ಮೂಡುವ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು. ಅದು ಗುಂಪು ಚಟುವಟಿಕೆಯಾಗಿದ್ದಲ್ಲಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ವೀಕ್ಷಣೆ ನಿಮಗೆ ತೃಪ್ತಿಕರವಾಗಿಲ್ಲ ಎನಿಸಿದಲ್ಲಿ ಚಟುವಟಿಕೆಯನ್ನು ಮತ್ತೊಮ್ಮೆ ಮಾಡುವಂತೆ ಹೇಳಿ, ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಹೆಚ್ಚು ಬಾರಿ ವೀಕ್ಷಿಸಿದಷ್ಟೂ ಸ್ಪಷ್ಟತೆ ಹೆಚ್ಚುತ್ತದೆ.

ಎಲ್ಲ ವಿಷಯಗಳ ಕಲಿಕೆಗೆ ವೀಕ್ಷಣೆ ಪ್ರಮುಖ ಸಾಧನೆ ಆಗುತ್ತದೆಯಾದರೂ, ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನು ಒರೆಗೆ ಹಚ್ಚುವುದು ವಿಶೇಷವಾಗಿ ವಿಜ್ಞಾನದ ಕಲಿಕೆ. ಶಿಕ್ಷಕರು ತಾವೇ ಮಾಡಿತೋರಿಸುವ ಪ್ರಯೋಗಗಳಿರಬಹುದು ಅಥವಾ ನೀವೇ ಪ್ರತ್ಯಕ್ಷವಾಗಿ ಮಾಡುವ ಪ್ರಯೋಗವಿರಬಹುದು, ಅದರ ಎಲ್ಲ ಹಂತಗಳನ್ನು ನೀವು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ನೀವು ಗಮನಿಸಿದ ಬದಲಾವಣೆಗಳಿಗೆ ತಾರ್ಕಿಕವಾದ ಕಾರಣಗಳನ್ನು ಪತ್ತೆ ಮಾಡಬೇಕು. ಪ್ರಶ್ನೆಗಳನ್ನು ಕೇಳಬೇಕು. ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕು. ಬಂದಿರುವ ಫಲಿತಾಂಶವು ನೀವು ಕಲಿಯಬೇಕಾದ ಯಾವ ಸಿದ್ಧಾಂತವನ್ನು ನಿರೂಪಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹೀಗೆ, ವ್ಯವಸ್ಥಿತವಾಗಿ ತೊಡಗಿಕೊಂಡಲ್ಲಿ ನಿಮ್ಮ ವೀಕ್ಷಣಾ ಸಾಮರ್ಥ್ಯವು ಹೆಚ್ಚುತ್ತದೆ. ವಿಷಯದಲ್ಲಿ ಕಂಡುಬರುವ ಕ್ಲಿಷ್ಟ ಅಂಶಗಳು ಪರಿಹಾರವಾಗುತ್ತದೆ. ಇದರಿಂದಾಗಿ, ನಿಮ್ಮ ಕಲಿಕೆಯ ಪ್ರಕ್ರಿಯೆ ಸುಲಭವಾಗುತ್ತದೆ.

ಶಿಕ್ಷಕರ ಪಾತ್ರ

ವೀಕ್ಷಣೆಯ ಮೂಲಕ ವಿದ್ಯಾರ್ಥಿಗಳು ಕಲಿಯುವ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರವೂ ಮಹತ್ತರವಾದುದು. ’ವಿದ್ಯಾರ್ಥಿಗಳಿಗೆ ಏನೂ ಗೊತ್ತಿರುವುದಿಲ್ಲ. ನಾನು ಹೇಳಿದಂತೆ ಅವರು ಕಲಿಯಬೇಕು. ಅವರು ಯಾವ ಪ್ರಶ್ನೆಯನ್ನೂ ಕೇಳಬಾರದು’ ಎಂಬ ಮನೋಭಾವ ಶಿಕ್ಷಕರಲ್ಲಿ ಇರಬಾರದು. ತನ್ನ ವಿದ್ಯಾರ್ಥಿಯ ಜೊತೆಗೆ ತಾನೂ ಕಲಿಯಬೇಕಾದ್ದು ಸಾಕಷ್ಟಿದೆ ಎಂಬುದನ್ನು ಶಿಕ್ಷಕರು ಸದಾ ನೆನಪಿಟ್ಟುಕೊಳ್ಳಬೇಕು. ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಿಕೊಂಡು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವ, ಅವರ ಕುತೂಹಲವನ್ನು ತಣಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಇದರಿಂದ ಶಿಕ್ಷಕರಲ್ಲಿಯೂ ಕ್ರಿಯಾಶೀಲತೆ ಹೆಚ್ಚುತ್ತದೆ. ಪ್ರತಿ ಬಾರಿ, ಹೊಸತೇನಾದರೊಂದನ್ನು ಮಾಡಿ ತೋರಿಸಬೇಕು ಎಂಬ ಆಸಕ್ತಿಯೂ ಹುಟ್ಟುತ್ತದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಶಾಲೆಯ ಕಲಿಕೆಯಲ್ಲಿ ಎರಡು ವಾರಗಳ ನಂತರ ವಿದ್ಯಾರ್ಥಿಯ ನೆನಪಿನಲ್ಲಿ ಉಳಿಯುವುದು ಓದಿದ್ದರ 10% ಮಾತ್ರವಾದರೆ, ಕೇಳಿದ್ದರಲ್ಲಿ ಉಳಿಯುವುದು 20% ಮಾತ್ರ. ಆದರೆ, ವಿದ್ಯಾರ್ಥಿ ಗಮನವಿಟ್ಟು ನೋಡಿದ್ದರಲ್ಲಿ 30%ರಷ್ಟು ನೆನಪಿನಲ್ಲಿ ಉಳಿಯುತ್ತದೆ. ನೋಡಿದ್ದನ್ನು ತಾನೇ ವಿವರಿಸಲು ಸಾಧ್ಯವಾದರೆ ಆತ ಶೇ 50ರಷ್ಟನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಅದನ್ನು ಬೇರೆಯವರಿಗೆ ವಿವರಿಸಲು ಸಮರ್ಥನಾದರೆ, ನೆನಪಿನ ಪ್ರಮಾಣ ಶೇ 70ಕ್ಕೆ ಏರುತ್ತದೆ. ವಿವರಿಸುವುದರ ಜೊತೆಗೆ, ಕಲಿತದ್ದನ್ನು ತಾನೇ ಮಾಡಿ ತೋರಿಸಿದಲ್ಲಿ, ನೂರಕ್ಕೆ 90ರಷ್ಟು ವಿಷಯವನ್ನು ಎರಡು ವಾರಗಳ ನಂತರವೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಆತನಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ಕನ್ನಡದಲ್ಲಿ ಒಂದು ಮಾತಿದೆ. ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಲೇಸು. ‘ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಲೇಸು’. ಹೀಗಾಗಿ, ಹೆಚ್ಚು ವೀಕ್ಷಿಸಿ ಹೆಚ್ಚು ಕಲಿಸುವ ಹಾಗೂ ಹೆಚ್ಚು ಕಲಿಯುವ ಪ್ರಕ್ರಿಯೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಪೂರಕವಾಗಿ ಪಾಲ್ಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT