ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಂಗಣದ ಸಹ್ಯಾದ್ರಿ ಕಣಿವೆ

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು-ಧರ್ಮಸ್ಥಳ ಹೆದ್ದಾರಿಯಲ್ಲಿನ ಉಜಿರೆ ಪಶ್ಚಿಮ ಘಟ್ಟದಂಚಿನ ಊರು. ಇಲ್ಲಿಗೆ ಬಂದಾಗ ನೋಡಲೇಬೇಕಾದ ವಿಶಿಷ್ಟ ಸ್ಥಳವೊಂದಿದೆ. ಅದುವೇ ‘ಆರ್ಬೋರೇಟಂ’ (ಸಸ್ಯೋದ್ಯಾನ). ಸಹ್ಯಾದ್ರಿ ಶ್ರೇಣಿಯ ಬಹು ಅಮೂಲ್ಯ ಸಸ್ಯ ಸಂಕುಲಗಳನ್ನು ಬೆಳೆಸಿ ಉಳಿಸಲೆಂದೇ ರೂಪಿಸಿರುವ ವಿಸ್ತಾರವಾದ ಉದ್ಯಾನವಿದು. ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಪ್ರಾಂಗಣದಲ್ಲಿರುವ ಈ ಸಸ್ಯಲೋಕದೊಳಗೆ ಅಡಿಯಿಟ್ಟರೆ, ಮಳೆಕಾಡಿನ ಕಣಿವೆಯೊಂದಕ್ಕೇ ಹೋದ ಅನುಭವವಾಗುವಷ್ಟು ನೈಜಪರಿಸರವಾಗಿ ರೂಪುಗೊಂಡಿದೆ ಅದು.

ಸಸ್ಯಶಾಸ್ತ್ರೀಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಬಲ್ಲಂಥ ಸಸ್ಯೋದ್ಯಾನವೊಂದನ್ನು ಕಾಲೇಜಿನಂಗಳದಲ್ಲಿಯೇ ರೂಪಿಸಿದರೆ ಹೇಗೆ? ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆಯೇ ಹೀಗೆ ಚಿಂತಿಸಿದ್ದು, ಕಾಲೇಜಿನ ಅಂದಿನ ಪ್ರಾಂಶುಪಾಲ ಡಾ.ಬಿ. ಯಶೋವರ್ಮ. ಅವರು ಮೂಲತಃ ಓರ್ವ ಸಸ್ಯಶಾಸ್ತ್ರಜ್ಞ. ಜೊತೆಗೆ ಲ್ಯಾಂಡ್-ಸ್ಕೇಪ್ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹಾಗೂ ಕೌಶಲವುಳ್ಳವರು. ಸರಿ, ಅಂದಿನಿಂದಲೇ ಕಾರ್ಯಪ್ರವೃತ್ತರಾದರು.

ಈ ಇಂಗಿತದ ಮಹತ್ವವನ್ನು ಗುರುತಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರೇಂದ್ರ ಹೆಗ್ಗಡೆಯವರು ಕಾಲೇಜಿನ ಪ್ರಾಂಗಣಕ್ಕೆ ಹೊಂದಿಕೊಂಡಿರುವ ಸಂಸ್ಥೆಯ ಸುಮಾರು ಹತ್ತು ಎಕರೆ ಅಮೂಲ್ಯ ಸ್ಥಳ ಹಾಗೂ ಆರ್ಥಿಕ ಅನುದಾನ ನೀಡಿ ಪ್ರೋತ್ಸಾಹಿಸಿದರು. ಹೀಗೆ, 1995ರಿಂದಲೇ ಈ ಯೋಜನೆ ಅರಳತೊಡಗಿತು. ಕಾಲೇಜಿನ ಸಸ್ಯಶಾಸ್ತ್ರ ಮತ್ತು ಜೈವಿಕತಂತ್ರಜ್ಞಾನದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಸ್ಯಪ್ರಬೇಧಗಳ ಆಯ್ಕೆ, ಸಂಗ್ರಹಣೆ, ನಾಟಿ ಇತ್ಯಾದಿಗಳ ಜವಾಬ್ದಾರಿ ತೆಗೆದುಕೊಂಡರೆ, ಪಕ್ಕದಲ್ಲಿರುವ ಅಂಗಸಂಸ್ಥೆ ‘ರತ್ನಮಾನಸ’ ಇದರ ದೈನಂದಿನ ನಿರ್ವಹಣೆಯ ಜವಾಬ್ದಾರಿ ಹೊತ್ತಿತು.

ಪ್ರಾಚಾರ್ಯ ಯಶೋವರ್ಮ ದಂಪತಿಯಂತೂ ಮುಂಜಾನೆಯ ಕಾಲ್ನಡಿಗೆಯನ್ನು ಇಲ್ಲಿಗೇ ಬೆಳೆಸಿ, ಮನೆಯಂಗಳದ ತೋಟದ ತೆರನಲ್ಲಿ ಕಾಳಜಿಯಿಂದ ಗಿಡ ಬೆಳೆಸಿದರು. ಅಂಥ ಸತತ ಮತ್ತು ಸಂಘಟಿತ ಶ್ರಮದ ಫಲವಾಗಿ ಇಂದು ವಿಸ್ತಾರವಾದ ಈ ‘ಮಿನಿ ಲಾಲ್‌ಬಾಗ್’ ರೂಪುಗೊಂಡಿದೆ. ಸುಮಾರು 400ಕ್ಕೂ ಮಿಕ್ಕಿ ಪ್ರಬೇಧಗಳ ಹತ್ತಾರು ಸಾವಿರ ಗಿಡಮರಗಳು ಇಲ್ಲಿ ತಲೆದೂಗುತ್ತಿವೆ.

ಹೀಗಾಗಿ, ಕಾಲೇಜಿನಂಗಳದ ಈ ಸಸ್ಯೋದ್ಯಾನ ಸಹ್ಯಾದ್ರಿಯ ಕಣಿವೆಯಂತೆಯೇ ತೋರುತ್ತದೆ. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ, ‘ಇವೆಲ್ಲ ಎಲ್ಲರೂ ಒಂದು ತಂಡವಾಗಿ ನಿರಂತರ ಶ್ರಮವಹಿಸಿದ್ದರ ಫಲ’, ಎಂದು ಅಭಿಮಾನದಿಂದ ಹೇಳುತ್ತಾರೆ, ಇದೀಗ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಡಾ.ಬಿ.ಯಶೋವರ್ಮ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅವಕಾಶ ನಿರ್ಮಿಸುವ ಉತ್ತಮ ಮಾದರಿಯಂತಿದೆ ಈ ಕಾರ್ಯ.

ವಿಧ–ವಿಧ ಅಂಕಣಗಳು: ಈ ತೋಟದಲ್ಲಿ ಬಹುವಿಧದ ಅಂಕಣಗಳಿವೆ. ಮರದರಶಿನ, ದುರ್ವಾಸನೆಮರ, ರಾಮಪತ್ರೆ, ಸುರಹೊನ್ನೆಯಂಥ ಹಲವು ಅಪರೂಪದ ಸಸ್ಯಪ್ರಬೇಧಗಳನ್ನು ನೋಡಬೇಕೆ? ಅವೆಲ್ಲ ಪಶ್ಚಿಮಘಟ್ಟದಿಂದ ಸಂಗ್ರಹಿಸಿ ತಂದು ಬೆಳೆಸಿದ ವಿನಾಶದಂಚಿನ ಗಿಡಗಳ ಅಂಕಣದಲ್ಲಿವೆ. ಶತಾವರಿ, ಕರ್ಪೂರತುಳಸಿ, ಸರ್ಪಗಂಧ, ಗೌರಿಹೂವು, ಕಿರಾತಕಡ್ಡಿ, ಅಮೃತಬಳ್ಳಿ, ವಿಡಂಗದಂಥ ಗಿಡಮೂಲಿಕೆಗಳು ಔಷಧಿಗಿಡಗಳ ಅಂಕಣದಲ್ಲಿವೆ.

ನೇರಲು, ಗುಡ್ಡೆಗೇರು, ಕೌಳಿಹಣ್ಣು, ಕೊಟ್ಟೇಹಣ್ಣು, ಹಲಸು, ಕಾಡುಮಾವು, ನೆಲ್ಲಿ ಇವೆಲ್ಲ ಕಾಡಿನ ಹಣ್ಣುಹಂಪಲಿನ ವಿಭಾಗದಲ್ಲಿವೆ. ರೈತರಿಗೆ ಮಾರ್ಗದರ್ಶನ ನೀಡಬಲ್ಲ ತೋಟಗಾರಿಕಾ ಪ್ರಾಂಗಣದಲ್ಲಿ ಬಾಳೆ, ಚಿಕ್ಕು, ಕೊಕ್ಕೊ, ಅರಿಶಿಣ, ರಸ್ನಾ, ಜಾಯಿಕಾಯಿ, ಸರ್ವಸುಗಂಧೀ, ವೀಳ್ಯದೆಲೆ, ಕರಿಮೆಣಸು, ಅಡಿಕೆ ಇತ್ಯಾದಿಗಳೆಲ್ಲ ಸೇರಿವೆ. ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾದ ವಿವಿಧ ಪೂಜಾಕ್ರಮಗಳಲ್ಲಿ ಬಳಸುವ ಹೂಪತ್ರೆಗಳುಳ್ಳ ‘ಪವಿತ್ರವನ’ ಇಲ್ಲಿನ ಇನ್ನೊಂದು ಆಕರ್ಷಣೆ. ನಕ್ಷತ್ರವನ, ರಾಶಿವನ, ತೀರ್ಥಂಕರ ವನಗಳಂಥ ಸುಮಾರು ಹತ್ತುವನಗಳು ಇಲ್ಲಿವೆ.

ಆರ್ಬೋರೇಟಂನಲ್ಲಿನ ಗ್ರೀನ್‌ಹೌಸ್ ಅಪರೂಪದ ಸಸ್ಯಪ್ರಬೇಧಗಳ ಸಂರಕ್ಷಣಾ ಕೇಂದ್ರ. 200ಕ್ಕೂ ಮಿಕ್ಕಿ ಅಪರೂಪದ ಸಸ್ಯಪ್ರಬೇಧಗಳು ಇಲ್ಲಿವೆ. ಪೂರ್ವಾಂಚಲದಿಂದ ಬಂದ ಕೀಟಭಕ್ಷಕ ಪೀಚರ್, ಹಿಮಾಲಯದ ದೇವದಾರಿ ನಂಥವುಗಳ ಸಂಗ್ರಹವೂ ಇದೆ. ಯಾವುದೇ ಹೊಸಪ್ರಬೇಧ ದೊರಕಿದರೆ, ಅದರ ಒಂದೆರಡು ಗಿಡಗಳನ್ನು ಇಲ್ಲಿ ಬೆಳೆಸುವುದರ ಮೂಲಕ, ಅವುಗಳ ತಳಿಗಳನ್ನಿಲ್ಲಿ ಸಂರಕ್ಷಿಸಲಾಗುತ್ತದೆ.

ಇದಕ್ಕೆ ಜೊತೆಯಾಗಿ ಪಕ್ಕದಲ್ಲೇ ಕಾರ್ಯನಿರ್ವಹಿಸುವುದು ನರ್ಸರಿ. ವಾರ್ಷಿಕ ಸುಮಾರು 10 ಸಾವಿರ ಮಿಕ್ಕಿ ಸಸ್ಯೋತ್ಪಾದನೆ ಮಾಡುವ ಈ ವಿಭಾಗ, ಬೆಳ್ತಂಗಡಿ ತಾಲ್ಲೂಕಿನ ರೈತರು, ಅರಣ್ಯ ಇಲಾಖೆ, ಸಂಸ್ಥೆಗಳಿಗೂ ಗಿಡಗಳನ್ನು ನೀಡುತ್ತದೆ. ಕಾಡಿನಿಂದ ತಂದು ಬೆಳೆಸಿ, ಸಂರಕ್ಷಿಸಿದ ಸಸ್ಯವೈವಿಧ್ಯಗಳನ್ನು ಪುನಃ ನೈಸರ್ಗಿಕ ತಾಣಕ್ಕೆ ಹಿಂತಿರುಗಿಸುವ ಸಂರಕ್ಷಣಾ ಜೀವಶಾಸ್ತ್ರದ ಅಮೂಲ್ಯ ತತ್ವವೊಂದರ ಅಚರಣೆಯಾಗುವುದು ಹೀಗೆ.

ವನದಲ್ಲೂ ವರ್ಗೀಕರಣ ಸಸ್ಯಶಾಸ್ತ್ರ: ಬೆಂಥೆಮ್ ಮತ್ತು ಹೂಕರ್ ಎಂಬೀರ್ವರು ಬ್ರಿಟಿಷ್ ಸಸ್ಯಸಾಸ್ತ್ರಜ್ಞರು ರೂಪಿಸಿದ ಜಾಗತಿಕ ಸಸ್ಯವರ್ಗೀಕರಣ ನೀತಿ ಇಂದೂ ಆಧುನಿಕ ಸಸ್ಯಶಾಸ್ತ್ರದಲ್ಲಿ ಬಳಕೆಯಾಗುತ್ತಿದೆ. ‘ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಇವುಗಳ ಪ್ರಾತ್ಯಕ್ಷಿಕೆ ನೀಡಲೆಂದೇ, ಆರ್ಬೋರೇಟಂನಂಚಿನ ವಿಶಾಲ ಪ್ರದೇಶದಲ್ಲಿ ಇದೇ ಅನುಕ್ರಮದಲ್ಲಿ ಗಿಡಗಳನ್ನು ಬೆಳೆಸಲಾಗಿದೆ’, ಎನ್ನುತ್ತಾರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ
ಡಾ. ಕುಮಾರ್ ಹೆಗಡೆ. ಈ ಕ್ರಮ ಅನುಸರಿಸಿದ ಉದ್ಯಾನವನ ರಾಜ್ಯದಲ್ಲಿ ಬೇರೊಂದಿಲ್ಲ ಎಂದು ಸಸ್ಯಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ, ನೆಲ್ಲಿ-ತಾರೆ-ಅಣಲೆಗಳ ‘ತ್ರಿಫಲಾ’ ಅಂಕಣ ಹಾಗೂ ಹೊನ್ನೆ, ಜತ್ರೋಫಾ ಇತ್ಯಾದಿಗಳುಳ್ಳ ಜೈವಿಕ ಡೀಸೈಲ್ ಗಿಡಗಳ ತಾಣವೂ ರೂಪುಗೊಂಡಿದೆ.

ವನದ ಇನ್ನೊಂದು ಪಕ್ಕದಂಚಿನಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ನೈಸರ್ಗಿಕ ಕಾಡೂ ಇದೆ. ನೂರಾರು ವನ್ಯ ಪ್ರಬೇಧಗಳು ಅಲ್ಲೇ ಬೀಜ ಉದುರಿಸಿ, ನೈಸರ್ಗಿಕವಾಗಿ ಬೆಳೆದುನಿಂತ ಅರಣ್ಯವಿದು. ನಡುವೆ ಒಂದು ಚಿಕ್ಕ ತೊರೆಯೂ ಇದೆ. ಮತ್ತಿ, ಹೊನಗಲು, ಅತ್ತಿ, ತಾರೆ, ಬಿದಿರು, ಬೆತ್ತ, ನೀಟಂ ಬಳ್ಳಿಗಳಂಥ ಗಿಡಮರಗಳು, ನೂರಾರು ಪ್ರಬೇಧದ ಪಕ್ಷಿಗಳು, ಹತ್ತಾರು ಬಗೆಯ ಸರಿಸೃಪಗಳು, ಜಿಂಕೆಯಂಥ ಸಸ್ತನಿ, ಎಲ್ಲ ಕಾಣಸಿಗುತ್ತವೆ ಇಲ್ಲಿ. ಈ ಕಿರುಕೊಳ್ಳಕ್ಕಿಳಿದರೆ, ಯಾವುದೋ ಕಾಡಿನ ಕಣಿವೆಯಲ್ಲಿದ್ದಂತೆ ಭಾಸವಾಗುತ್ತದೆ!

ಇಂಗುಗುಂಡಿ, ಚಂದ್ರಕಾಲುವೆ, ತಡೆಯೊಡ್ಡು- ಇಂಥ ಮಳೆನೀರ ಸಂಗ್ರಹದ ಮಾದರಿಗಳನ್ನೆಲ್ಲ ತೋಟದ ತುಂಬೆಲ್ಲ ಅಳವಡಿಸಿಕೊಳ್ಳಲಾಗಿದೆ. ‘ಅಲ್ಲೇ ಸಿಗುವ ತರಗಲೆಗಳನ್ನು ಬಳಸಿ ಕಾಂಪೋಸ್ಟ್, ಎರೆಗೊಬ್ಬರ ಕೂಡ ತಯಾರಿಸಿ, ಬಳಸುತ್ತೇವೆ ಎಂದು ಉತ್ಸಾಹದಿಂದ ವಿವರಿಸುತ್ತಾರೆ, ನಿರ್ವಹಣೆಯ ದೈನಂದಿನ ಹೊಣೆಹೊತ್ತಿರುವ ಶ್ರೀಕೃಷ್ಣ ಶೆಟ್ಟಿ. ಕಾಲೇಜಿನ ಹಾಸ್ಟೇಲುಗಳಿಂದ ಹೊರಬೀಳುವ ತ್ಯಾಜ್ಯನೀರನ್ನು ಸಂಸ್ಕರಿಸಿ ಬೇಸಿಗೆಯ ನೀರಾವರಿಗೆ ಬಳಸಲಾಗುತ್ತದೆ. ಮಳೆಗಾಲದಲ್ಲಿ ಹುಲ್ಲನ್ನು ನೆಲಕ್ಕೆ ಮುಚ್ಚಿ ನೆಲದ ಸಾರರಕ್ಷಣೆ ಮಾಡಲಾಗುತ್ತದೆ. ಹೀಗೆ, ನೆಲಜಲ ರಕ್ಷಣೆಯ ಬಹುಬಗೆಯ ಸುಸ್ಥಿರ ಮಾದರಿಗಳು ಇಲ್ಲಿ ಸಂದರ್ಶಕರಿಗೆ ಲಭ್ಯ. ‘ಈ ಸಂರಕ್ಷಣಾಕಾರ್ಯಗಳನ್ನೆಲ್ಲ ಗುರುತಿಸಿ, 2010ರಲ್ಲಿಯೇ ರಾಜ್ಯ ಜೀವವೈವಿಧ್ಯ ಮಂಡಳಿ ಆರ್ಬೋರೇಟಂನ್ನು ಗೌರವಿಸಿದೆ’, ಎಂದು ಈಗಿನ ಪ್ರಾಂಶುಪಾಲ ಪ್ರೊ. ಮೋಹನನಾರಾಯಣ ಅಭಿಮಾನದಿಂದ ನೆನೆಯುತ್ತಾರೆ.

ಕಳೆದೊಂದು ದಶಕದಿಂದ ಈ ಜೀವವೈವಿಧ್ಯ ವನದ ಕುರಿತು ಒಳ್ಳೆಯ ಮಾತು ಕಿವಿಯಿಂದ ಕಿವಿಗೆ ಸಾಗಿ, ಇದೀಗ ಇದೊಂದು ಶೈಕ್ಷಣಿಕ ಪ್ರವಾಸಿತಾಣವಾಗಿ ರೂಪುಗೊಳ್ಳುತ್ತಿದೆ. ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಂಶೋಧಕರು, ರೈತರು, ಗಿಡಮೂಲಿಕೆ ತಜ್ಞರು, ಧರ್ಮಸ್ಥಳದ ಯಾತ್ರಿಗಳು- ಇವರೆಲ್ಲ ಭೆಟ್ಟಿ ನೀಡುತ್ತಿರುತ್ತಾರೆ. ಈ ವನದೊಳೆಗೇ ಇರುವ ಚಿಕ್ಕ ತೆರೆದ ಸಭಾಂಗಣದಲ್ಲಿ ಆಗಾಗ ಮಾಹಿತಿ-ತರಬೇತಿ ನೀಡುವ ಗೋಷ್ಠಿಗಳೂ ಜರುಗುತ್ತಿವೆ. ಪಕ್ಕದಲ್ಲಿರುವ ಸ್ನಾತಕೋತ್ತರ ಕೇಂದ್ರದ ಹಾಗೂ ಸ್ಥಳೀಯ ವಿದ್ಯಾರ್ಥಿಗಳು- ತಮ್ಮ ಸಂಶೋಧನಾ ಪ್ರಾಜೆಕ್ಟುಗಳಿಗಾಗಿ ಬರುತ್ತಾರೆ. ಹೀಗಾಗಿ, ವನಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನೆಯ ಒಂದಲ್ಲ ಒಂದು ಚಟುವಟಿಕೆ ಇಲ್ಲಿ ಸಾಗಿರುತ್ತದೆ.

ಉಜಿರೆಯನ್ನು ಒಂದು ಹಸಿರುಗ್ರಾಮವನ್ನಾಗಿ ರೂಪಿಸಲು ಪಣತೊಟ್ಟಂತಿರುವ ಡಾ. ಯಶೋವರ್ಮರ ಮನದಲ್ಲಿ ಇನ್ನೂ ಅನೇಕ ಯೋಜನೆಗಳಿವೆ. ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರು, ಗೃಹಿಣಿಯರು- ಹೀಗೆ ವಿವಿಧ ಗುಂಪುಗಳಿಗೆ ನಿರಂತರ ಮಾಹಿತಿ ಮತ್ತು ತರಬೇತಿ ಕೊಡುವ ಯೋಜನೆಗಳನ್ನು ಅವರೀಗ ರೂಪಿಸುತ್ತಿದ್ದಾರೆ. ಹಸಿರಿನ ನಡುವಲ್ಲಿ ಸ್ಥಳೀಯರ ಜಾಗಿಂಗ್ ಹಾಗೂ ವಾಯುವಿಹಾರಕ್ಕಾಗಿ ಟ್ರ್ಯಾಕ್ ನಿರ್ಮಿಸುವ ಕಾರ್ಯವೂ ಜಾರಿಯಾಗುತ್ತಿದೆ. ಉಜಿರೆ ವಾತಾವರಣದ ಇಂಗಾಲದ ಅನಿಲವನ್ನು ಘನೀಕರಿಸುವಲ್ಲಿ ಇಲ್ಲಿನ ಹಸಿರುಕವಚದ ಪಾತ್ರವೇನು ಎನ್ನುವ ಕುರಿತು ಇತ್ತೀಚೆಗೆ ಸಂಶೋಧನೆಗೂ ಚಾಲನೆ ನೀಡಿದ್ದಾರೆ! ಈ ಸಸ್ಯಕ್ಷೇತ್ರ ಸ್ಥಳೀಯವಾಗಿ ಸುಸ್ಥಿರ ಅಭಿವೃದ್ಧಿಯ ಆಶಯಗಳಿಗೆ ಮೂರ್ತರೂಪ ಕೊಡುವ ತಾಣವಾಗಬೇಕು ಎನ್ನುವ ತುಡಿತ ಅವರದ್ದು.

ಅಂದಹಾಗೆ, ಕೇಂದ್ರ ಮಾನವಸಂಪನ್ಮೂಲ ಇಲಾಖೆಯಿಂದ ದೇಶದ 75 ಶ್ರೇಷ್ಠ ಕಾಲೇಜುಗಳಲ್ಲಿ ಒಂದೆಂಬ ಗೌರವ ಈ ಕಾಲೇಜಿಗೆ ಲಭಿಸಿದೆ. ಸುಸಜ್ಜಿತ ಗೃಂಥಾಲಯ, ಪ್ರಯೋಗಾಲಯ, ಎಫ್‌ಎಂ ರೇಡಿಯೊ, ಸ್ಟುಡಿಯೊ, ವಿಸ್ತಾರವಾದ ಕ್ರೀಡಾಂಗಣ, ಈಜುಕೊಳ ಇತ್ಯಾದಿ ಎಲ್ಲ ಕಲಿಕಾ ಸೌಕರ್ಯಗಳಿವೆ ಇಲ್ಲಿ. ಆರ್ಬೋರೇಟಂ ಪರಿಸರ ಸಂರಕ್ಷಣೆಯ ಅರಿವನ್ನು ವಿಸ್ತರಿಸುವ ಕಾಲೇಜಿನ ನಿರಂತರ ಪ್ರಯತ್ನದ ಪ್ರತೀಕ.

ದೇಶದೆಲ್ಲೆಡೆಯ ಶಾಲಾಕಾಲೇಜುಗಳಲ್ಲಿ ಕಡ್ಡಾಯವಾಗಿ ಪರಿಸರ ಶಿಕ್ಷಣ ನೀಡುವ ಕ್ರಮ ಜಾರಿಯಾಗಿ ದಶಕವೇ ಸಂದಿತು. ಆದರೆ, ಪಠ್ಯದ ಪಾಠದೊಂದಿಗೆ ಪ್ರಾಯೋಗಿಕ ಅನುಭವವನ್ನೂ ಬೆರೆಸಿ, ಪರಿಸರ ಶಿಕ್ಷಣವನ್ನು ಒಂದು ವ್ರತವೆಂಬಂತೆ ರೂಪಿಸಿರುವ ಇಲ್ಲಿನ ಶೈಕ್ಷಣಿಕ ಮಾದರಿ ಮಾತ್ರ ಅನನ್ಯವೇ ಸರಿ. ಇದನ್ನು ಉಜಿರೆಗೇ ಪಯಣಿಸಿಯೇ ಅರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT