ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ಅವಳಿಗಳು

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ ಎಂದಾಕ್ಷಣ ತಟ್ಟನೆ ನೆನಪಾಗೋದೆ ಬೆಳಗಾವಿಯ ಕುಂದಾ, ಗೋಕಾಕಿನ ಕರದಂಟು. ಅಷ್ಟೇ ಸಿಹಿ ಅನುಭವ ಕೊಡುವ ಹಲವು ಜಲಪಾತಗಳೂ ಜಿಲ್ಲೆಯಲ್ಲಿವೆ. ಅವುಗಳಲ್ಲಿ ಪ್ರಮುಖ ಆಕರ್ಷಣೆ ಗೋಕಾಕ ಮತ್ತು ಗೊಡಚಿನಮಲ್ಕಿ ಜಲಪಾತಗಳದ್ದು. ಒಂದು ಮನೆಯಂಗಳದ ರಂಗೋಲಿಯಂತೆ ಹರಡಿಕೊಂಡು ಚಿತ್ತಾರ ಮೂಡಿಸಿದರೆ, ಮತ್ತೊಂದು ನಾರಿಯ ನೀಳ ಜಡೆಯಂತೆ ಗೋಚರವಾಗುತ್ತದೆ.

ಘಟಪ್ರಭಾ ನದಿಯ ಗೋಕಾಕ ಫಾಲ್ಸ್, ಮಾರ್ಕಂಡೇಯ ನದಿಯ ಗೊಡಚಿನಮಲ್ಕಿ ಜಲಪಾತಗಳು ಸೌಂದರ್ಯದಲ್ಲಿ ಅವಳಿ ಸಹೋದರಿಯರಂತಿವೆ.

ಗೊಡಚಿನಮಲ್ಕಿ ಜಲಪಾತ: ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳೆರಡೂ ಹರಿಯುವುದು ಪೂರ್ವಾಭಿಮುಖವಾಗಿ. ಉದಯಿಸುವ ಸೂರ್ಯನನ್ನು ನೋಡೋದಕ್ಕೆ ಧಾವಿಸಿ ಬರುತ್ತಿವೆ ಅನ್ನುವ ಹಾಗೆ ಹರಿಯುವ ಘಟಪ್ರಭಾ, ಮಾರ್ಕಂಡೇಯ ನದಿಗಳು ಮಹಾರಾಷ್ಟ್ರ-ಕರ್ನಾಟಕದಲ್ಲಿ ಹಲವು ಜಲಪಾತಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಎರಡು ಜಲಪಾತಗಳು.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಜಲಪಾತ ಬೆಳಗಾವಿ ನಗರದಿಂದ 40 ಕಿ.ಮೀ ಹಾಗೂ ಗೋಕಾಕಪಟ್ಟಣದಿಂದ 16 ಕಿ.ಮೀ. ಕ್ರಮಿಸಿದರೆ ಸಿಗುತ್ತದೆ. ಗೊಡಚಿನಮಲ್ಕಿ ಗ್ರಾಮದಿಂದ ಎರಡು ಕಿ.ಮೀ ಕಾಲುದಾರಿಯಲ್ಲಿ ಸಾಗಿ ಗೊಡಚಿಮಲ್ಕಿ ಜಲಪಾತ ಸೇರಬೇಕು. ಮಾರ್ಕಂಡೇಯ ನದಿಯಲ್ಲಿರುವ ಕಲ್ಲುಗಳ ಮೇಲೆ ನಗೆಚೆಲ್ಲಿ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಜಲಪಾತವು ಕಲ್ಲಿನ ಹಾಸಿಗೆ ಮೇಲೆ ಹಂತ ಹಂತವಾಗಿ ಚಾಚಿಕೊಂಡು ಹರಿದು (40 ಅಡಿ) ಎತ್ತರದಿಂದ ಧುಮ್ಮಿಕ್ಕುವ ದೃಶ್ಯ ನೋಡುಗರ ಮೈ ಮರೆಸುತ್ತೆ. ಇಲ್ಲಿ ನೀರಿನಲ್ಲಿ ಆಟವಾಡಬಹುದು. ಈ ಪರಿಸರವೂ ಪ್ರಶಾಂತವಾಗಿದ್ದು ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ಸ್ಥಳ.

ಗೋಕಾಕ ಜಲಪಾತ: ಗೋಕಾಕದಿಂದ 6 ಕಿ.ಮೀ. ಮತ್ತು ಗೋಕಾಕ ರಸ್ತೆ ರೈಲು ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭಾ ನದಿ ಕಣಿವೆಗೆ (71 ಅಡಿ) ಎತ್ತರದಿಂದ ಧುಮ್ಮಿಕ್ಕುವ ನೋಟ ಗಮನ ಸೆಳೆಯುತ್ತದೆ. ವಿಶಾಲವಾಗಿ ಧುಮ್ಮಿಕ್ಕುವ ಜಲಪಾತವೂ ಹಾಲಿನ ನೊರೆಯಂತೆ ಕಾಣುತ್ತದೆ. ಘಟಪ್ರಭಾ ನದಿಯ ಒಂದು ಬದಿಯಿಂದ ಇನ್ನೊಂದು ಬದಿ ಸೇರಲು (659 ಅಡಿ) ಉದ್ದದ ತೂಗುಸೇತುವೆ ನಿರ್ಮಿಸಲಾಗಿದ್ದು ಅದರ ಮೇಲೆ ನಡಿಯುವುದೇ ರೋಮಾಂಚನ. ನದಿ ದಂಡೆಯಲ್ಲಿ ಕಟ್ಟಿದ ಮಹಾಲಿಂಗೇಶ್ವರ ದೇವಸ್ಥಾನ ಭಕ್ತರ ಶ್ರದ್ಧಾಕೇಂದ್ರವು ಹೌದು. ಜಲಪಾತದ ಒಂದು ಬದಿಯಲ್ಲಿ ವಿದ್ಯುತ್ ಉತ್ಪಾದನೆ ಕೇಂದ್ರವಿದೆ.

ಹೋಗುವುದು ಹೇಗೆ: ಜೂನ್‌ ಆರಂಭದಿಂದ ಅಕ್ಟೋಬರ್‌ ಕೊನೆಯವರೆಗೂ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತವೆ. ಬೆಳಗಾವಿಯಿಂದ ಗೋಕಾಕದವರೆಗೆ ಬಸ್ಸಿನಲ್ಲಿ ಅಥವಾ ಗೋಕಾಕ ರಸ್ತೆವರೆಗೆ ರೈಲಿನಲ್ಲಿ ಬಂದು ನಂತರ ಬಸ್‌ ಅಥವಾ ಖಾಸಗಿ ವಾಹನಗಳಲ್ಲಿ ಸಾಗಿ ಎರಡು ಜಲಪಾತಗಳನ್ನು ತಲುಪಬಹುದು. ದೂರದಿಂದ ಬಂದವರಿಗೆ ಗೋಕಾಕದಲ್ಲಿ ವಸತಿ ಸೌಲಭ್ಯವಿದೆ. ಗೋಕಾಕ ಜಲಪಾತದ ಹತ್ತಿರ ಉಪಹಾರ, ಊಟ ದೊರೆಯುತ್ತದೆ. ಆದರೆ ಗೋಡಚಿನಮಲ್ಕಿಯಲ್ಲಿ ಯಾವುದೇ ಸೌಲಭ್ಯ ಇಲ್ಲ.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT