ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಚುಂಚನಗಿರಿ, ಆರ್ಟ್‌ ಆಫ್‌ ಲಿವಿಂಗ್‌ಗೆ ಅಮಿತ್ ಷಾ ಭೇಟಿ

Last Updated 7 ಆಗಸ್ಟ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 12ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇದೇ ವೇಳೆ ಆದಿಚುಂಚನಗಿರಿ ಮಠ, ಆರ್ಟ್ ಆಫ್‌ ಲಿವಿಂಗ್‌ ಭೇಟಿ ನೀಡಲಿದ್ದಾರೆ.

2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕಾರ್ಯತಂತ್ರ ರೂಪಿಸಲು ರಾಜ್ಯಕ್ಕೆ ಬರಲಿರುವ ಷಾ, ತಾಜ್ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವಿವಿಧ ಹಂತಗಳ ಪ್ರಮುಖರು, ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸಲಿರುವ ಅವರು, ವಿವಿಧ ಜಿಲ್ಲೆಗಳಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ.

ಇದೇ 13ರಂದು ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಬಿಜೆಪಿ ಜತೆಗೆ ಇಲ್ಲಿಯವರೆಗೆ ಗುರುತಿಸಿಕೊಳ್ಳದ ಸಾಹಿತ್ಯ ಕ್ಷೇತ್ರದ ಪ್ರಮುಖರು, ವಕೀಲರು, ವೈದ್ಯರು, ಶಿಕ್ಷಣ ತಜ್ಞರು, ನಿವೃತ್ತ ನ್ಯಾಯಮೂರ್ತಿಗಳ ಜತೆ ಷಾ ಸಮಾಲೋಚನೆ ನಡೆಸಲಿದ್ದಾರೆ.

ಬಿಜೆಪಿಯಿಂದ ದೂರ ಉಳಿದಿರುವ ದಲಿತ ಸಂಘಟನೆಗಳು ಹಾಗೂ ಹಿಂದುಳಿದ ಸಮುದಾಯದ ಪ್ರಮುಖರ ಜತೆಗೆ ಚರ್ಚೆ ನಡೆಸಲಿರುವ ಷಾ, ಪಕ್ಷದ ಒಲವು, ನಿಲುವುಗಳ ಜತೆಗೆ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಸೈದ್ಧಾಂತಿಕ ಭೇದ ಇರುವ ಎಲ್ಲ ವರ್ಗ, ಸಮುದಾಯಗಳನ್ನೂ ಸಂಪರ್ಕಿಸಿ, ಬಿಜೆಪಿಯ ಬಗ್ಗೆ ಅವರಿಗೆ ಇರುವ ಅಭಿಪ್ರಾಯಗಳನ್ನು ಹೋಗಲಾಡಿಸುವಂತೆ ಮಾಡುವುದು ಷಾ ಅವರ ಅಪೇಕ್ಷೆ ಎಂದು ಮೂಲಗಳು ಹೇಳಿವೆ.

25ಕ್ಕೂ ಹೆಚ್ಚು ಸಭೆ: ‘ಅಮಿತ್‌ ಷಾ ಅವರು ಮೂರು ದಿನಗಳಲ್ಲಿ 25ಕ್ಕೂ ಹೆಚ್ಚಿನ ಸಭೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಬಿಜೆಪಿ ವಕ್ತಾರ, ಶಾಸಕ ಎಸ್‌. ಸುರೇಶಕುಮಾರ್‌ ತಿಳಿಸಿದರು.

ಭೇಟಿಯ ಮೊದಲ ದಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಬರಲಿರುವ ಅವರು ಜಗನ್ನಾಥ ಭವನದಲ್ಲಿ ನೂತನ ಗ್ರಂಥಾಲಯ ಉದ್ಘಾಟಿಸಲಿದ್ದಾರೆ ಎಂದರು.

ಅದಾದ ಬಳಿಕ ಪಕ್ಷದ ರಾಜ್ಯ ಪದಾಧಿಕಾರಿಗಳು, ವಿಭಾಗದ ಮಟ್ಟದ ಸಂಘಟನಾ ಕಾರ್ಯದರ್ಶಿಗಳು, ಎಲ್ಲ ಜಿಲ್ಲೆಗಳ ಪ್ರಭಾರಿಗಳು, ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಘಟಕಗಳ ಸಂಚಾಲಕರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

ಅದೇ ದಿನ ಸಂಜೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಭೇಟಿ ಮಾಡಿ, ಪಕ್ಷದ ಸಂಘಟನೆ, ಮುಂದಿನ ಚುನಾವಣೆಯ ಗೆಲುವಿಗೆ ರೂಪಿಸಬೇಕಾದ ತಂತ್ರಗಳ ಕುರಿತು ಸಲಹೆ ನೀಡಲಿದ್ದಾರೆ.

ರಾಜ್ಯದಲ್ಲಿ ನಡೆದ ವಿಸ್ತಾರಕ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಮಂಡಲ ಉಸ್ತುವಾರಿಗಳಾಗಿದ್ದವರು, ಸಕ್ರಿಯವಾಗಿ ಪಾಲ್ಗೊಂಡ ಆಯ್ದ ಕಾರ್ಯಕರ್ತರ ಸಭೆ ನಡೆಸಿ, ಅವರ ಅನುಭವ ಆಲಿಸಲಿದ್ದಾರೆ. ಪಕ್ಷವನ್ನು ಬೇರು ಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ವಿಸ್ತಾರಕರಿಗೆ ಸೂಕ್ತ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರದ ಮೇಲೆ ಕಣ್ಣು
ವಿಧಾನಸಭೆ ಚುನಾವಣೆ ಜತೆಗೆ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೂ ಷಾ ಕಣ್ಣಿಟ್ಟಿದ್ದಾರೆ.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದೇ ಇದ್ದ 11 ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ಈಗಿನಿಂದಲೇ ಸಂಘಟನಾತ್ಮಕ ಚಟುವಟಿಕೆ ಆರಂಭಿಸಲು ಷಾ ಚಿಂತನೆ ನಡೆಸಿದ್ದಾರೆ.

ಸೋತ ಅಭ್ಯರ್ಥಿಗಳು ಹಾಗೂ ಪ್ರಮುಖರ ಜತೆಗೆ ಸಮಾಲೋಚನೆ ನಡೆಸಲಿರುವ ಅವರು, ಮುಂದಿನ ಎರಡು ವರ್ಷದ ಕಾರ್ಯಸೂಚಿಯನ್ನು ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT