ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಾರುತಿ.ಟಿ., ಬೆಂಗಳೂರು

ನಾನು ವಿದ್ಯಾರ್ಥಿ, ಓದಿಗೆ ಕೊಟ್ಟ ಹಣದಲ್ಲಿ ₹ 20,000 ಉಳಿಸಿದ್ದೇನೆ. ಈ ಹಣ ಈಗ ಅಗತ್ಯವಿಲ್ಲ. ಎರಡು ವರ್ಷಗಳ ನಂತರ ಮುಂದಿನ ಓದಿಗೆ ಈ ಹಣ ಬೇಕಾಗುತ್ತದೆ. ವಿಜಯ ಹಾಗೂ ಸಿಂಡಿಕೇಟ್ ಬ್ಯಾಂಕಿನಲ್ಲಿ ಖಾತೆ ಇದೆ. ಎಲ್ಲಿ ಹೇಗೆ ಉಳಿಸಲಿ?

ಉತ್ತರ: ವಿದ್ಯಾರ್ಥಿಯಾಗಿದ್ದಾಗಲೇ, ಹಣ ಉಳಿಸುವ ನಿಮ್ಮ ಮನೋಭಾವನೆ ಉಳಿದ ವಿದ್ಯಾರ್ಥಿಗಳು ಕೇಳಿ ತಿಳಿಯುವಂತಿದೆ. ಈ ರೀತಿ ಜೀವನದಲ್ಲಿಯೂ ಮುಂದೆ ಉತ್ತಮ ಉಳಿತಾಯದ ಯೋಜನೆ ಅಳವಡಿಸಿಕೊಳ್ಳಿ. ನಿಮ್ಮೊಡನಿರುವ ₹ 20,000, ತಕ್ಷಣ ನಿಮಗೆ ಸಮೀಪದ, ವಿಜಯ ಅಥವಾ ಸಿಂಡಿಕೇಟ್ ಬ್ಯಾಂಕಿನಲ್ಲಿ, 2 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. (ಸಿಂಡಿಕೇಟ್ ಬ್ಯಾಂಕಿನಲ್ಲಿ ಈ ಠೇವಣಿಯನ್ನು ವಿಕಾಸ್ ಕ್ಯಾಷ್ ಸರ್ಟಿಫಿಕೇಟ್ ಎಂತಲೂ, ವಿಜಯ ಬ್ಯಾಂಕಿನಲ್ಲಿ ವಿಜಯಾ ಕ್ಯಾಷ್ ಸರ್ಟಿಫಿಕೇಟ್ ಎಂತಲೂ ಕರೆಯುತ್ತಾರೆ) ಎರಡು ವರ್ಷಗಳ ನಂತರ, ಅಸಲು ಬಡ್ಡಿ ಪಡೆದು ಮುಂದಿನ ಓದಿಗೆ ಉಪಯೋಗಿಸಿರಿ ಅಥವಾ ಅವಶ್ಯ ಬೀಳದಿರುವಲ್ಲಿ ಅದೇ ಬ್ಯಾಂಕಿನಲ್ಲಿ ಮುಂದುವರೆಸಿರಿ.

ಅನಿಲ್ ಮೊಖಾಶಿ, ಬೆಂಗಳೂರು

NSC-NCD ಹೂಡಿಕೆಯ ವಾರ್ಷಿಕ ಆದಾಯವನ್ನು ತೆರಿಗೆ ಉಳಿಸಲು ಹೇಗೆ ತೋರಿಸಲಿ. ಉಳಿದ ತೆರಿಗೆ ವಿನಾಯಿತಿಯ ಯೋಜನೆಗಳು ಯಾವುವು?

ಉತ್ತರ: ಎನ್.ಎಸ್.ಸಿ., ಎನ್.ಸಿ.ಡಿ.ಗಳಲ್ಲಿ ಒಮ್ಮೆಲೇ ಬಡ್ಡಿ ಬರುವುದಾದರೂ ವಾರ್ಷಿಕವಾಗಿ ಬರುವ ಅಂದರೆ ಅಸಲಿಗೆ ಸೇರಿಸುವ (Accrued Interest) ಬಡ್ಡಿ ವಿವರ ಆಯಾಯ ಕಚೇರಿಯಿಂದ ಪಡೆದು, ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ. ಎನ್.ಎಸ್.ಸಿ.ಯಲ್ಲಿ ಬರುವ ಬಡ್ಡಿ, ಸೆಕ್ಷನ್ 80ಸಿ ಆಧಾರದ ಮೇಲೆ ತೆರಿಗೆ ಉಳಿಸಲು ಸಾಧ್ಯವಿದೆ. ಆದರೆ ಇದೇ ವೇಳೆ ಹೀಗೆ ಬರುವ ಬಡ್ಡಿಗೆ ತೆರಿಗೆ ಕೂಡಾ ಇದೆ. ತೆರಿಗೆ ಉಳಿಸಲು ಸೆಕ್ಷನ್ 80ಸಿ ಆಧಾರದ ಮೇಲೆ ಎಲ್.ಐ.ಸಿ., ಪಿ.ಎಫ್., ಪಿ.ಪಿ.ಎಫ್., ಎರಡೂ ಮಕ್ಕಳ ಟ್ಯೂಷನ್ ಫೀ, ಗೃಹ ಸಾಲದ ಕಂತು, 5 ವರ್ಷಗಳ ಬ್ಯಾಂಕ್ ಠೇವಣಿ, ಅಂಚೆ ಕಚೇರಿ 5 ವರ್ಷಗಳ ಠೇವಣಿ ಹಾಗೂ ಹಿರಿಯ ನಾಗರಿಕರ ಠೇವಣಿ ಹೀಗೆ ಎಲ್ಲವೂ ಒಟ್ಟು ಸೇರಿ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಉಳಿಸಬಹುದು.

ಶ್ರೀನಾಥ, ತುಮಕೂರು

ನಾನು ವಿಲ್ (Will) ಮುಖಾಂತರ ನನ್ನ ತಾಯಿಯಿಂದ ಮನೆ ಮನೆ ಪಡೆದಿದ್ದೆ. ಅಕ್ಟೋಬರ್ 2016 ರಲ್ಲಿ 45 ಲಕ್ಷಕ್ಕೆ ಮಾರಾಟ ಮಾಡಿ, ₹ 40ಲಕ್ಷಕ್ಕೆ ಒಂದು ಹಳೆ ಮನೆ ಕೊಂಡುಕೊಂಡೆ. ಉಳಿದ ₹ 5 ಲಕ್ಷಕ್ಕೆ ತೆರಿಗೆ ಉಳಿಸಲು ಮಾರ್ಗದರ್ಶನ ನೀಡಿ?

ಉತ್ತರ: ಸೆಕ್ಷನ್ 54ಇಸಿ ಆಧಾರದ ಮೇಲೆ ₹ 5 ಲಕ್ಷವನ್ನು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಇಲೆಕ್ಟಿಫಿಕೇಷನ್ ಕಂಪೆನಿಯಲ್ಲಿ ಮಾರಾಟ ಮಾಡಿದ ಆರು ತಿಂಗಳೊಳಗೆ ಮೂರು ವರ್ಷಗಳ ಅವಧಿಗೆ ಇರಿಸಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಿರಿ.

ಕಿರಣ್ ದೊಡ್ಡಮನಿ, ವಿಜಯಪುರ

ನಾನು ಹಾಗೂ ಬಹಳಷ್ಟು ಸರ್ಕಾರಿ ನೌಕರರು Assets and Liability ಹೇಗೆ ಸರ್ಕಾರಕ್ಕೆ ತಿಳಿಸಬೇಕು, ಬರೆಯುವ ಕ್ರಮ ತಿಳಿದಿಲ್ಲ. ನೀವು ಈ ವಿಚಾರದಲ್ಲಿ ವಿವರವಾಗಿ ತಿಳಿಸಬಹುದೇ?

ಉತ್ತರ: ಠೇವಣಿ ಆದಲ್ಲಿ, ಬ್ಯಾಂಕ್ ಹೆಸರು, ಇಟ್ಟಿರುವ ತಾರೀಕು, ಠೇವಣಿ ಮೊತ್ತ, ಠೇವಣಿದಾರರ ಹೆಸರು ಇವೆಲ್ಲವನ್ನೂ ಕ್ರಮವಾಗಿ ನಮೂದಿಸಬೇಕು. ಸ್ಥಿರ ಆಸ್ತಿಯಾದಲ್ಲಿ, ಆಸ್ತಿ ಕೊಂಡ ತಾರೀಕು, ಆಸ್ತಿ ವಿವರ, ಕೊಂಡ ಬೆಲೆ, ಯಾರ ಹೆಸರಿನಲ್ಲಿ ಆಸ್ತಿ ಇದೆ. ಇವುಗಳನ್ನು ನಮೂದಿಸಬೇಕು. ಬಂಗಾರವಾದಲ್ಲಿ ಕೊಂಡ ತಾರೀಕು ಅಥವಾ ತಂದೆ ತಾಯಿ ಅತ್ತೆ ಮಾವ ಇವರಿಂದ ಗಿಫ್ಟ್ ಆಗಿ ಬಂದ ತಾರೀಕು. ಅಂದಿನ–ಇಂದಿನ ಬೆಲೆ ನಮೂದಿಸಬೇಕು.

ಅದೇ ರೀತಿ ಸಾಲವಿರುವಲ್ಲಿ, ಸಾಲದ ತಾರೀಕು, ಸಾಲದ ಮೊತ್ತ, ಸಾಲದ ಉದ್ದೇಶ, ಸಾಲದ ವಿವರ (ಪಡೆದ ಬ್ಯಾಂಕ್) ನಮೂದಿಸಬೇಕು. ಇವೆಲ್ಲವನ್ನೂ ಕ್ರಮವಾಗಿ ಬರೆದು ವಾರ್ಷಿಕವಾಗಿ ಸರ್ಕಾರಕ್ಕೆ ಸಲ್ಲಿಸಿರಿ. ಈ ವಿಚಾರದಲ್ಲಿ ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲ.

ಅಭಿಲಾಷ್‌. ಎನ್‌.ಪಿ., ಬೆಂಗಳೂರು

ನಾನು ₹ 1.7 ಲಕ್ಷ ಶಿಕ್ಷಣ ಸಾಲ ಬ್ಯಾಂಕಿನಿಂದ ಪಡೆದಿದ್ದೆ. ನಾನು ಎಂ.ಎಸ್‌ಸಿ. (ಮ್ಯಾತ್ಸ್‌) ಓದಲು 2014 ರಲ್ಲಿ ಸಾಲ ಪಡೆದದ್ದಾಗಿದೆ. 2015 ರಲ್ಲಿ ಓದು ಮುಗಿಸಿ Wipro Infotechನಲ್ಲಿ ಕೆಲಸಕ್ಕೆ ಸೇರಿದೆ. ತಿಂಗಳ ಸಂಬಳ ₹ 8000 (ಎಂಟು ಸಾವಿರ ಮಾತ್ರ) 2017 ರಲ್ಲಿ ಬ್ಯಾಂಕಿನವರು ನೋಟಿಸು ಕಳಿಸಿ ತಿಂಗಳಿಗೆ ₹ 3000 ಸಾಲಕ್ಕೆ ಜಮಾ ಮಾಡಲು ಹೇಳಿದರು. ಸಾಲ ಕಟ್ಟದಿರುವಲ್ಲಿ Cibilಗೆ ತಿಳಿಸಿ, ನನ್ನನ್ನು Black Listಗೆ ಹಾಕುವುದಾಗಿ ತಿಳಿಸಿದ್ದಾರೆ. ನನ್ನ ಈಗಿನ ಸಂಬಳ ನನ್ನ ಖರ್ಚಿಗೆ ಸರಿಹೋಗುತ್ತದೆ. ನಾನು ಏನು ಮಾಡಲಿ?

ಉತ್ತರ: ಮಾಹಿತಿ ತಂತ್ರಜ್ಞಾನ(Information Technology) ಕ್ಷೇತ್ರದಲ್ಲಿ ದುಡಿಯುವ ಯುವಕರು ಕೈ ತುಂಬಾ ಸಂಬಳ ಪಡೆಯುತ್ತಾರೆ ಎನ್ನುವ ಕೂಗು ದೇಶದೆಲ್ಲೆಡೆ ಹರಡಿರುವಾಗ, ನೀವು ಬರೇ ₹ 8000 ಸಂಬಳ ತಿಂಗಳಿಗೆ ಪಡೆಯುವುದು ತಿಳಿದು   ಬೇಸರವಾಯಿತು. ಅಲ್ಲಿ ಸ್ವಲ್ಪ ಸಮಯ ಕಾದು ಉತ್ತಮ ಕೆಲಸ ಹುಡುಕಿ ಬೇರೆ ಉದ್ಯೋಗಕ್ಕೆ (Other than I.T.) ಪ್ರಯತ್ನಿಸಿರಿ. ನಿಮಗೆ ಆದಾಯ ಇಲ್ಲದಿದ್ದರೂ ಬ್ಯಾಂಕಿನಲ್ಲಿ ಪಡೆದ ಶಿಕ್ಷಣ ಸಾಲ, ಕೆಲಸಕ್ಕೆ ಸೇರಿದ ತಕ್ಷಣ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಬ್ಯಾಂಕಿನವರು ತಿಳಿಸಿರುವುದರಲ್ಲಿ ತಪ್ಪೇನಿಲ್ಲ. ಈ ವಿಚಾರ ನಿಮ್ಮ ತಂದೆ ತಾಯಿಗಳನ್ನು ವಿಚಾರಿಸಿ, ಸಾಲ ತೀರಿಸಲು ಪ್ರಯತ್ನಿಸಿರಿ. Cibil Rating ಕಡಿಮೆ ಆದಲ್ಲಿ ಮುಂದೆ ಯಾವುದೇ ರೀತಿಯ ಸಾಲವು ಯಾವ ಬ್ಯಾಂಕಿನಲ್ಲಿಯೂ ದೊರೆಯುವುದಿಲ್ಲ.

ಕೆ.ಎಸ್‌. ಕೃಷ್ಣ, ತುಮಕೂರು

ಯಾವುದೋ ಒಬ್ಬ ವ್ಯಕ್ತಿ ದ್ವಿಚಕ್ರ ಸಾಲ ಪಡೆದು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸದಿರುವ ಕಾರಣ, ಈ ವ್ಯವಹಾರ ತಪ್ಪಾಗಿ ನನ್ನ ಖಾತೆಗೆ ಸೇರಿಕೊಂಡು, ನನ್ನ (Cibil Rate Down) ಆಗಿದೆ. ನಾನು ಏನು ಮಾಡಬೇಕು?

ಉತ್ತರ: ಸಾಮಾನ್ಯವಾಗಿ ಈ ರೀತಿ ಎಂದರೆ ಒಬ್ಬರ ಸಾಲ ಇನ್ನೊಬ್ಬರ ಹೆಸರಿನಲ್ಲಿ ತಪ್ಪಾಗಿ ಸೂಚಿಸಿ, ತೊಂದರೆಯಾಗಿರುವ ಉದಾಹರಣೆಗಳುಂಟು. ನೀವು ಗಾಬರಿಯಾಗುವುದು ಬೇಡ. ಇಂತಹ ತಪ್ಪು ಪ್ಯಾನ್‌ ಕಾರ್ಡು ಸಂಖ್ಯೆ ಬರೆಯುವಾಗ ವ್ಯತ್ಯಾಸವಾದಲ್ಲಿ ಹಾಗೂ ಒಂದೇ ಹೆಸರು ಇರುವಲ್ಲಿ ಆಗುವುದು ಕಂಡುಬಂದಿದೆ. ನೀವು Cibilಗೆ ನೇರವಾಗಿ ರಿಜಿಸ್ಟರ್ಡ್‌ ಪೋಸ್ಟ್‌ನಲ್ಲಿ ಅರ್ಜಿ ಕಳಿಸಿ ಮಾಹಿತಿ ಕೇಳಿರಿ. ಆಗ ಅವರು, ಸಾಲದ ವಿವರ– ಬ್ಯಾಂಕ್‌ ಅಥವಾ ಆರ್ಥಿಕ ಸಂಸ್ಥೆಯ ವಿವರ, ತಿಳಿಸುತ್ತಾರೆ. ಅವರಿಗೆ ನೀವು ಸಾಲ ಪಡೆದವರಲ್ಲ ಎನ್ನುವುದು ಖಚಿತವಾಗಿ, ರೀಮಾರ್ಕ್‌ ಹಿಂದಕ್ಕೆ ಪಡೆಯುತ್ತಾರೆ. ಠೇವಣಿ ಮೇಲೆ ಇಂತಹ ವಿಚಾರ ಬಂದಲ್ಲಿ TDS TRACES (form no. 26AS)ನಲ್ಲಿ ಹುಡುಕಿದರೆ, ವಿವರ ಸಿಗುತ್ತದೆ. ಅಲ್ಲಿಯೂ, ಬ್ಯಾಂಕ್‌ ಅಥವಾ ಆರ್ಥಿಕ ಸಂಸ್ಥೆಗೆ ತಿಳಿಸಿ, ಸರಿ ಮಾಡಿಕೊಳ್ಳುವ ಅವಕಾಶವಿದೆ.

ಹೇಮಂತ ಕುಮಾರ್‌. ಮೈಸೂರು

ಅಪೊಲೊ ಮುನಿಚ್‌ನಲ್ಲಿ ₹ 1 ಲಕ್ಷದ ಆರೋಗ್ಯ ವಿಮೆ ಮಾಡಿದ್ದೇನೆ. ವಾರ್ಷಿಕ ಪ್ರೀಮಿಯಂ ಹಣ ₹ 2200 ಈಗ 2+1 ಮೂವರಿಂದ ಸಿಂಡ್‌ ಆರೋಗ್ಯ ವಿಮೆ ಮಾಡಿಸಬೇಕೆಂದಿದ್ದೇನೆ. ಈ ಎರಡು ಕಂಪೆನಿಗಳಲ್ಲಿ ಏನಾದರೂ ವ್ಯತ್ಯಾಸವಿದೆಯೇ, ಯಾವುದು ಒಳ್ಳೆಯದು?

ಉತ್ತರ: ಅಪೊಲೊ ಮುನಿಚ್‌– ಸಿಂಡ್‌ ಆರೋಗ್ಯ ಇವೆರಡರ ಉದ್ದೇಶ ಒಂದೇ ಆಗಿದೆ. ಯಾವುದು ಉತ್ತಮ ಎಂದು ಹೇಳಲು ಬರುವುದಿಲ್ಲ. ಎರಡೂ ಉತ್ತಮ ಆರೋಗ್ಯ ವಿಮಾ ಕಂಪೆನಿಗಳು. ಯಾವುದೇ ಆರೋಗ್ಯ ವಿಮೆ ಕಂಪೆನಿಯಾದರೂ, ಓರ್ವ ವ್ಯಕ್ತಿ ಆಸ್ಪತ್ರೆಗೆ ಸೇರುವ ಸಂದರ್ಭದಲ್ಲಿ, ಅಲ್ಲಿ ದೊರೆಯುವ ಸೇವೆ, ವಿಮೆ ಇಳಿಸಿದ ಮೊತ್ತ   ನಗದು ರಹಿತ (Cash Less) ಸೇವೆ ಇರಬೇಕು. ವಿಮೆ ಇಳಿಸುವ ಮುಖ್ಯ ಉದ್ದೇಶವೇ ಇದಾಗಿರುತ್ತದೆ. ನೀವು ಬಯಸಿದಂತೆ, 2+1 (ತಂದೆ, ತಾಯಿ, ಮಗು) ಒಟ್ಟಿನಲ್ಲಿ ಒಂದೇ ಪಾಲಿಸಿ ತೆಗೆಯಿರಿ. ಇದನ್ನು Floating Policy ಎಂಬುದಾಗಿ ಕರೆಯುತ್ತಾರೆ. ಇಂತಹ ಪಾಲಿಸಿಯಲ್ಲಿ ವಿಮೆ ಮಿತಿಯೊಳಗೆ ಮೂರಲ್ಲಿ ಯಾರಾದರೊಬ್ಬರು ಆಸ್ಪತ್ರೆಗೆ ಸೇರುವ ಸಂದರ್ಭದಲ್ಲಿ ಅವಧಿಯ ಒಳಗೆ ನಗದು ರಹಿತ ಸೇವೆ ಪಡೆಯಬಹುದು.

ಮಂಜುನಾಥ, ಬೆಂಗಳೂರು

ನನ್ನ ಮಗಳು IT-NMC ಯಲ್ಲಿ ಕೆಲಸ ಮಾಡುತ್ತಾಳೆ. ಅವಳ ಸಂಬಳಕ್ಕೆ ಶೇ 20 ಆದಾಯತೆರಿಗೆ ಬರುತ್ತದೆ. ಅವಳು ನವೆಂಬರ್‌ 2016 ರಲ್ಲಿ ₹ 50,000 ಎನ್‌ಪಿಎಸ್‌ ಮಾಡಿ, ಸೆಕ್ಷನ್‌ 80 ಸಿಸಿಡಿ(1ಬಿ) ಪ್ರಕಾರ ₹ 50,000, ವಿನಾಯತಿ ಪಡೆದಿದ್ದಾಳೆ. ನನ್ನ ಪ್ರಶ್ನೆ: ಅವಳಿಗೆ PRAN A/C  ಇದೆ. ಅವಳು ಎರಡು ಇಂತಹ ಖಾತೆ ಹೊಂದಬಹುದೇ ಅಥವಾ ಒಂದೇ ಖಾತೆ ಇರಬೇಕು ಎನ್ನುವ ನಿರ್ಬಂಧ ಇದೆಯೇ. ಅವಳು ಇನ್ನು ₹ 50000 ತುಂಬಿ, ₹ 1 ಲಕ್ಷದ ತನಕ ವಿನಾಯತಿ ಪಡೆಯಬಹುದೇ?.

ಉತ್ತರ: ನೀವು ಪ್ಯಾನ್‌ ಖಾತೆಯ ವಿಚಾರ ಕೇಳುತ್ತಿದ್ದೀರಿ ಎಂದು ಭಾವಿಸುತ್ತೇವೆ. ಓರ್ವ ವ್ಯಕ್ತಿ ಒಂದೇ ಪ್ಯಾನ್‌ ಖಾತೆ ಹೊಂದಬೇಕು. ಎರಡು ಖಾತೆ ಹೊಂದುವುದು ಅಪರಾಧವಾಗುತ್ತದೆ. ಸೆಕ್ಷನ್‌ 80ಸಿಸಿಡಿ(1ಬಿ) ಆಧಾರದ ಮೇಲೆ, ಎನ್‌ಪಿಎಸ್‌ನಲ್ಲಿ ಪಡೆಯುವ ಗರಿಷ್ಠ ವಿನಾಯತಿ ₹ 50,000 ಮಾತ್ರ. ಇಲ್ಲಿ ಹೆಚ್ಚಿನ ಹಣ ತೊಡಗಿಸುವ ಅವಕಾಶವಿದ್ದರೂ ತೆರಿಗೆ ವಿನಾಯತಿಯ ಮಿತಿ ₹ 50,000 ಮಾತ್ರ, ನಿಮ್ಮ ಮಗಳು ಎಲ್‌.ಐ.ಸಿ. ಹಾಗೂ ಪಿ.ಪಿ.ಎಫ್‌. ಖಾತೆ ತೆರೆದು, ಗರಿಷ್ಠ ವಾರ್ಷಿಕ ₹ 1.50 ಲಕ್ಷ ಉಳಿಸಿದರೆ, ಈಗಿನ ₹ 50,000 ಜೊತೆಗೆ ಇನ್ನೂ ₹ 1.50 ಲಕ್ಷಗಳ ತನಕ (ಒಟ್ಟು ₹ 2 ಲಕ್ಷ) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಪ್ರಕಾಶ್‌ ಮೆಹತಾ, ಹಗರಿಬೊಮ್ಮನಹಳ್ಳಿ

ನನ್ನ ಹೆಂಡತಿ ಮದುವೆಯಾಗುವಾಗ ತಾಯಿಯಿಂದ ಒಂದು ನಿವೇಶನ ದಾನವಾಗಿ (By Gift) ಪಡೆದಿದ್ದಳು. ಈಗ ಆ ನಿವೇಶನ ₹ 24.50 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆಯೇ ತಿಳಿಸಿ. ಗಿಫ್ಟ್‌ನಲ್ಲಿ ಪಡೆದ ಆಸ್ತಿ ಮಾರಾಟ ಮಾಡುವಾಗ ಇಂತಹ ತೆರಿಗೆ ವಿನಾಯತಿ ಇದೆ ಎಂಬುದಾಗಿ ಹಿಂದೆ ಬರೆದಿರುತ್ತೀರಿ.

ಉತ್ತರ: ರಕ್ತ ಸಂಬಂಧಿಗಳಿಂದ ದಾನವಾಗಿ ಪಡೆದ ಹಣ, ಬಂಗಾರ, ಆಸ್ತಿಗೆ ಗಿಫ್ಟ್‌ ಟ್ಯಾಕ್ಸ್ ಕೊಡುವವರಿಗೂ ಪಡೆಯುವವರಿಗೂ ಇರುವುದಿಲ್ಲ. ಆದರೆ, ಇಂತಹ ವಿಚಾರ ಮಾರಾಟ ಮಾಡುವಾಗ ಬಂಡವಾಳ ವೃದ್ಧಿ ತೆರಿಗೆ ಬರುತ್ತದೆ. ನಿಮ್ಮ ವಿಚಾರದಲ್ಲಿ ನೀವು ಬಂಡವಾಳ ವೃದ್ಧಿ ತೆರಿಗೆ ಉಳಿಸಲು, NHIA-REC ಬಾಂಡಿನಲ್ಲಿ ಮೂರು ವರ್ಷಗಳ ಅವಧಿಗೆ ಠೇವಣಿ ಇರಿಸಿ ವಿನಾಯತಿ ಪಡೆಯಿರಿ. ನಾನು ಹಿಂದೆ ಬರೆದ ಉತ್ತರಕ್ಕೆ ನಂತರದ ವಾರದಲ್ಲಿ ತಿದ್ದುಪಡಿ ಕೂಡಾ ಹಾಕಿದ್ದೆ.

ಹೆಸರು ಬೇಡ, ಬೆಳಗಾವಿ

ನಾನು ಸರ್ಕಾರಿ ‘ಸಿ’ ದರ್ಜೆ ನೌಕರ. ವಯಸ್ಸು 34. ಹೆಂಡತಿ (ಗೃಹಿಣಿ) 27 ವರ್ಷ. 5 ವರ್ಷದ ಹೆಣ್ಣು, ಒಂದು ವರ್ಷದ ಗಂಡು ಹೀಗೆ ಇಬ್ಬರು ಮಕ್ಕಳಿದ್ದಾರೆ. ಒಟ್ಟು ಸಂಬಳ ₹ 26,900. ಕಡಿತ ಪಿ.ಎಲ್‌.ಐ. 2338, ಎಲ್‌ಐಸಿ 3115, ಸುಕನ್ಯಾ ₹ 2000 ಕೆಜಿಐಡಿ 1632, ಎನ್‌ಪಿಎಸ್‌ ಹಾಗೂ ಮನೆ ಖರ್ಚು ಹೋಗಿ ₹ 5000 ಉಳಿಯುತ್ತದೆ. ನನ್ನ ಹೆಸರಿನಲ್ಲಿ 40X50 ನಿವೇಶನವಿದೆ. 3 ಎಕರೆ ಕೃಷಿ ಜಮೀನಿದ್ದು, ವಾರ್ಷಿಕ ವರಮಾನ ₹ 50,000. ಉಳಿತಾಯದಲ್ಲಿ ಬದಲಾವಣೆ ಮಾಡಬೇಕೇ, ವಿಮೆ ಹೆಚ್ಚಾಗಿದೆಯೇ, ಕಡಿತ ಮಾಡಬೇಕೇ, ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದೇ?

ಉತ್ತರ: ನಿಮ್ಮ ಉಳಿತಾಯ ಯೋಜನೆಗಳು ಚೆನ್ನಾಗಿವೆ.   ವಿಮೆ ಮಧ್ಯದಲ್ಲಿ ನಿಲ್ಲಿಸಿದರೆ, ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಈ ಯೋಜನೆ ಎಂದಿಗೂ ನಿಲ್ಲಿಸಬೇಡಿ. ನೀವು ಪ್ರತಿ ತಿಂಗಳೂ ಉಳಿಸಬಹುದಾದ ₹ 5000, 10 ವರ್ಷಗಳ ಆರ್‌.ಡಿ. ಮಾಡಿರಿ. ವಾರ್ಷಿಕವಾಗಿ ಕೃಷಿ ಆದಾಯವನ್ನು ಸಾಧ್ಯವಾದರೆ ಕನಿಷ್ಠ ₹ 25000, 10 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಬ್ಯಾಂಕ್‌ ಠೇವಣಿ ಮಾಡಿರಿ. ಈ ಎರಡು ಪ್ರಕ್ರಿಯೆ ನಿರಂತರವಾಗಿರಲಿ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ನೀವು ಅರ್ಜಿ ಸಲ್ಲಿಸಿ ಬೆಳಗಾವಿಯಲ್ಲಿ ಮನೆ ಕಟ್ಟಿಸಬಹುದು. ನಿಮ್ಮ ಆದಾಯಕ್ಕೆ ಈ ಯೋಜನೆ ಹೇಳಿ ಮಾಡಿಸಿದಂತಿದೆ. ನಿಮಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆ ಶುಭ ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT