ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಸ ರಸವಾಗಿಸುವ ಬಯೊ–ಲುಷನ್ಸ್‌!

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಯಲಹಂಕದ ಆ ಕಾರ್ಖಾನೆಯ ಆವರಣ ಪ್ರವೇಶಿಸುತ್ತಿದ್ದಂತೆ ಆವರಣದ ಗೋಡೆಗುಂಟ ಕೃಷಿ ತ್ಯಾಜ್ಯದ ರಾಶಿ ಕಂಡು ಅಚ್ಚರಿಯಾಯಿತು. ಇದೇನಿದು, ಜಪಾನ್‌ ತಂತ್ರಜ್ಞಾನದ ಕಾರ್ಖಾನೆ ಎಂದುಕೊಂಡು ಬಂದರೆ, ಇಲ್ಲೆಲ್ಲ ತ್ಯಾಜ್ಯ ಕಾಣುತ್ತಿದೆಯಲ್ಲ ಎಂದು ಅನುಮಾನಪಡುವಾಗಲೇ ಎದುರಾದ ನಿರ್ದೇಶಕ ಜಾರ್ಜ್‌ ಥಾಮಸ್‌ ಅವರು ಈ ಕಸವನ್ನೇ ರಸವನ್ನಾಗಿ ಪರಿವರ್ತಿಸುವ ಬಗ್ಗೆ ವಿವರಣೆ ನೀಡಲು ಆರಂಭಿಸಿದರು. ಕ್ರಮೇಣ ನನ್ನೆಲ್ಲ ಅನುಮಾನಗಳು ದೂರವಾಗತೊಡಗಿದವು. ಬಾಳೆ ದಿಂಡು, ಪೈನಾಪಲ್‌ ಎಲೆ, ಕಬ್ಬಿನ ಸಿಪ್ಪೆ, ಅಲ್ಲಿ ರಾಶಿಯಾಗಿ ಹರಡಿತ್ತು. ರೈತರಿಗೆ, ದನಕರುಗಳಿಗೆ ಬೇಡವಾದ ಈ ತ್ಯಾಜ್ಯವನ್ನೇ ಬಳಿ ಮಣ್ಣಲ್ಲಿ ಸುಲಭವಾಗಿ ಕರಗಬಹುದಾದ ಪ್ಯಾಕೆಜಿಂಗ್‌ ಸರಕು ತಯಾರಿಕೆಯ ವಿಶಿಷ್ಟ ಕಾರ್ಖಾನೆ ಅದಾಗಿತ್ತು.

ಇದೊಂದು ಪ್ರಾಯೋಗಿಕ ಘಟಕ. ಐದು ಹಂತಗಳಲ್ಲಿ ಇಲ್ಲಿ ಕಸ ರಸವಾಗಿ ಪರಿವರ್ತನೆಗೊಳ್ಳುತ್ತದೆ. ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಆರಂಭಿಸಲಿರುವ ದೊಡ್ಡ ಘಟಕದ ಕಾರ್ಯಾರಂಭದ ಮೊದಲು ಉತ್ಪನ್ನದ ಪ್ರಾಯೋಗಿಕ ತಯಾರಿಕೆ, ಮಾರುಕಟ್ಟೆ ಅಧ್ಯಯನ, ಮಾರಾಟ ವಿಸ್ತರಣೆ ಉದ್ದೇಶಕ್ಕೆ ಈ ಘಟಕ ಈಗ ಬಳಕೆಯಾಗುತ್ತಿದೆ. ವಿಶ್ವದಲ್ಲಿಯೇ ಮೊದಲ ಕಾರ್ಖಾನೆ ಇದಾಗಿದೆ ಎನ್ನುವುದೂ ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಜರ್ಮನಿಯ ಹ್ಯಾಂಬರ್ಗ್‌ನ ಬಯೊ–ಲೂಷನ್ಸ್‌ ಸಂಸ್ಥೆಯು (BIO-LUTIONS) ಭಾರತೀಯರ ನೆರವಿನಿಂದ ಸ್ಥಾಪಿಸಿದ ಘಟಕ ಇದಾಗಿದೆ ಎಂದು ಥಾಮಸ್‌ ಅವರು ಹೆಮ್ಮೆಯಿಂದಲೇ ಈ ಕಾರ್ಖಾನೆ ಸ್ಥಾಪನೆಯ ಉದ್ದೇಶ, ಅದರಿಂದ ರೈತ ಸಮುದಾಯ, ಪರಿಸರಕ್ಕೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತ ಹೋದರು.

ಜರ್ಮನಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ಆರಂಭಿಸಿದ ಮೊದಲ ಘಟಕ ಇದಾಗಿದೆ. ಫೆಬ್ರುವರಿ ಅಂತ್ಯದಲ್ಲಿ ಕಾರ್ಯಾರಂಭ ಮಾಡಿದೆ. ಜರ್ಮನಿ ತಂತ್ರಜ್ಞಾನ ಆಧರಿಸಿ ಚೀನಾದಲ್ಲಿ ತಯಾರಿಸಿದ ಯಂತ್ರೋಪಕರಣಗಳನ್ನು ಇಲ್ಲಿ ಅಳವಡಿಸಲಾಗಿದೆ. ಪರೀಕ್ಷಾರ್ಥ ಪ್ರಯೋಗ ಇಲ್ಲಿ ಯಶಸ್ವಿಯಾಗಿ ನಡೆದಿದೆ.

ಮನೆ ಮನೆಗೆ ಸರಕುಗಳನ್ನು ಪೂರೈಸುವ ಬಿಗ್‌ ಬಾಸ್ಕೆಟ್‌ ಇಲ್ಲಿ ತಯಾರಾಗುವ ಪ್ಯಾಕೆಜಿಂಗ್‌ ಉತ್ಪನ್ನವನ್ನು ಈಗಾಗಲೇ ಬಳಸಿ ಕೊಳ್ಳುತ್ತಿದೆ. ಈ ಉತ್ಪನ್ನಗಳ ತಯಾರಿಕೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಕೇವಲ ನೀರನ್ನು ಮಾತ್ರ ಬೆರೆಸಿ ಐದಾರು ಯಂತ್ರಗಳ ಮೂಲಕ ಸಂಸ್ಕರಿಸಿ ಪ್ಯಾಕೆಜಿಂಗ್‌ ತಟ್ಟೆ ತಯಾರಿಸಲಾಗುತ್ತಿದೆ. ಇಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದಿರುವುದು ವೇದ್ಯವಾಗುತ್ತದೆ.

ನಾರು ಇರುವ ( fibre) ಯಾವುದೇ ಕೃಷಿ ತ್ಯಾಜ್ಯ ಬಳಸಿ, ಬಳಸಿ ಬೀಸಾಕುವ ಇಲ್ಲವೇ ಮರು ಬಳಕೆಗೆ ಬಳಸಬಹುದಾದ ಪ್ಯಾಕೆಜಿಂಗ್‌ ಉತ್ಪನ್ನ ತಯಾರಿಸುವ ವಿಶಿಷ್ಟ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ತಂತ್ರಜ್ಞಾನದಲ್ಲಿ ಟೊಮೆಟೊ ಗಿಡದಿಂದ ಟೊಮೆಟೊ ತಟ್ಟೆಯನ್ನೂ ತಯಾರಿಸಬಹುದು. ಟೊಮೆಟೊ ಬೆಳೆಯಲು ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಅದರ ತ್ಯಾಜ್ಯ ಸಂಸ್ಕರಿಸಿ ಪ್ಯಾಕೆಜಿಂಗ್‌ ಉತ್ಪನ್ನ ತಯಾರಿಸುವುದು ಅಷ್ಟು ಒಳ್ಳೆಯದಲ್ಲ ಎನ್ನುವ ತೀರ್ಮಾನಕ್ಕೆ ಸಂಸ್ಥೆ ಬಂದಿದೆ.

ಸಂಸ್ಥೆಯ ಸ್ಥಾಪಕ ಎಡ್ವರ್ಡೊ ಗೊರ್ಡಿಲ್ಲೊ ಅವರ ಪ್ರಕಾರ, ಇಂತಹ ಸಾಧ್ಯತೆಗಳು ಅಗಣಿತ ಇವೆ. ಪ್ಯಾಕೆಜಿಂಗ್‌ ಪರಿಣತರಾದ ಇವರು 18 ತಿಂಗಳ ಕಾಲ ನಿರಂತರ ಪರಿಶ್ರಮದ ನಂತರ ತಮ್ಮ ಕನಸನ್ನು ತಮ್ಮ ಜತೆ ಕೆಲಸ ಮಾಡಿದ ಕುರಿಯನ್‌ ಮ್ಯಾಥ್ಯೂ ಜತೆ ಸೇರಿ ನನಸು ಮಾಡಿದ್ದಾರೆ.

ಕಾಗದ ಮತ್ತು ಕೃಷಿ ನಾರು ಬಳಸಿ ಪ್ಯಾಕೆಜಿಂಗ್‌ ಉತ್ಪನ್ನ ತಯಾರಿಸುವ ಸಾಂಪ್ರದಾಯಿಕ ತಂತ್ರಜ್ಞಾನದಲ್ಲಿ ಹಲವಾರು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಅಲ್ಲಿ ಸಾಕಷ್ಟು ನೀರು ಮತ್ತು ಇಂಧನ ವೆಚ್ಚವಾಗುತ್ತದೆ. ಆದರೆ, ಬಯೊ–ಲುಷನ್ಸ್‌ ಘಟಕದಲ್ಲಿ ಕೃಷಿ ತ್ಯಾಜ್ಯ ಮತ್ತು ನೀರನ್ನಷ್ಟೇ ಬಳಸಲಾಗುತ್ತಿದೆ.

ಮೊದಲ ಹಂತದಲ್ಲಿ ತ್ಯಾಜ್ಯದಲ್ಲಿನ ತೇವಾಂಶ ಬೇರ್ಪಡಿಸಲಾಗುವುದು. ಎರಡನೆ ಹಂತದಲ್ಲಿ ಮಿಶ್ರಣವನ್ನು ಯಾಂತ್ರಿಕವಾಗಿ ಅತಿ ಸಣ್ಣ ಗಾತ್ರದ (nano-size) ನಾರು ರೂಪಕ್ಕೆ ತರಲಾಗುವುದು. ಇದಕ್ಕೆ ನೀರು ಬೆರೆಸಿದಾಗ ಸೂಕ್ಷ್ಮ ಸ್ವರೂಪದ ನಾರಿನ ಕಣಗಳು ಪರಸ್ಪರ ಬೆಸೆದುಕೊಳ್ಳುತ್ತವೆ. ಈ ಮಿಶ್ರಣವನ್ನು ಸಂಸ್ಕರಿಸಿ ಬೇರೆ, ಬೇರೆ ಆಕಾರದ ಪ್ಯಾಕೆಜಿಂಗ್‌ ಉತ್ಪನ್ನಗಳಾಗಿ ತಯಾರಿಸಲಾಗುತ್ತದೆ. ನಾರಿನ ಕಣಗಳು ಬೆರೆತುಕೊಳ್ಳಲು ಇಲ್ಲಿ ರಾಸಾಯನಿಕಗಳ ಬಳಕೆಯೇ ಇರುವುದಿಲ್ಲ.

ರೈತರು ಅನಿವಾರ್ಯವಾಗಿ ಬೆಂಕಿಗೆ ಹಾಕುವ ತ್ಯಾಜ್ಯ ಈಗ ಮರುಬಳಕೆಗೆ ಉಪಯುಕ್ತವಾಗಿರಲಿದೆ. ಇದರಿಂದ ರೈತರ ಕೃಷಿ ತ್ಯಾಜ್ಯ ನಿರ್ವಹಣೆಗೆ ಪರಿಸರ ಸ್ನೇಹಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ.

ಸಂಸ್ಥೆಯವರೇ ಕೃಷಿ ಕಸ ಇದ್ದಲ್ಲಿಗೆ ಬಂದು ಪ್ರತಿ ಕೆಜಿಗೆ ಪೈಸೆಗಳ ಲೆಕ್ಕದಲ್ಲಿ ಖರೀದಿಸುವುದರಿಂದ ಬೀಸಾಕುವ ಕೃಷಿ ತ್ಯಾಜ್ಯವು ರೈತರಿಗೆ ಕೆಲಮಟ್ಟಿಗೆ ಲಾಭದಾಯಕವಾಗಲಿದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸಿಕೊಡಲಿದೆ.

‘ಸ್ಥಳೀಯವಾಗಿ ಕಸ ಸಂಗ್ರಹಿಸಿ, ಸ್ಥಳೀಯವಾಗಿಯೇ ಪ್ಯಾಕೆಜಿಂಗ್‌ ಉತ್ಪನ್ನ ತಯಾರಿಸಿ, ಸ್ಥಳೀಯ ಮಾರುಕಟ್ಟೆಗೆ ಪೂರೈಸಲಾಗುತ್ತಿದೆ’ ಎಂದು ಬಯೊ–ಲುಷನ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕುರಿಯನ್‌ ಮ್ಯಾಥ್ಯೂ ಹೇಳುತ್ತಾರೆ

ಮಂಡ್ಯ ತುಮಕೂರು ಭಾಗದ ರೈತಾಪಿ ವರ್ಗದಿಂದ ಈ ಘಟಕಕ್ಕೆ ಬೇಕಾಗುವ ಕಚ್ಚಾ ಸರಕು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ, ಜರ್ಮನಿ ತಂತ್ರಜ್ಞಾನ ಬಳಸಿಕೊಂಡ ವಿಶ್ವದಲ್ಲಿಯೇ ಮೊದಲ ತಯಾರಿಕಾ ಘಟಕ ಇದಾಗಿದೆ.

‘ಸದ್ಯಕ್ಕೆ ಒಂದು ತಿಂಗಳಲ್ಲಿ 800 ಕೆ.ಜಿಯಷ್ಟು ತ್ಯಾಜ್ಯವನ್ನು ಇಲ್ಲಿ ಸಂಸ್ಕರಿಸಲಾಗುತ್ತಿದೆ. ಮಂಡ್ಯ ಬಳಿಯ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿ ದೊಡ್ಡ ಕಾರ್ಖಾನೆಯನ್ನು ನವೆಂಬರ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ₹ 10 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಈ ಅತ್ಯಾಧುನಿಕ ಘಟಕದಲ್ಲಿ ಒಂದು ದಿನಕ್ಕೆ 6 ಟನ್‌ಗಳಷ್ಟು ತ್ಯಾಜ್ಯ ಸಂಸ್ಕರಣೆ ನಡೆಯಲಿದೆ’ ಎಂದು ನಿರ್ದೇಶಕ ಜಾರ್ಜ್‌ ಥಾಮಸ್‌ ಹೇಳುತ್ತಾರೆ.

ಕಬ್ಬಿನ ಸಿಪ್ಪೆಗೆ ರೈತರು ಸದ್ಯಕ್ಕೆ ಅನಿವಾರ್ಯವಾಗಿ ಬೆಂಕಿ ಹಾಕುತ್ತಿದ್ದಾರೆ. ಅವರಿಗೆ ಬೇರೆ ಆಯ್ಕೆಗಳೇ ಇಲ್ಲ.

ಸಂಸ್ಥೆಯು ತೋಟಗಾರಿಕೆ ಸಹಕಾರಿ ಸಂಘಗಳ ಮೂಲಕ ರೈತರನ್ನು ಸಂಪರ್ಕಿಸಿ, ಅವರ ಕೃಷಿ ತ್ಯಾಜ್ಯ ಖರೀದಿಸಲು ಮುಂದಾಗಲಿದೆ. ಇದರ ಪೂರ್ವಭಾವಿ ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ. ಸಂಸ್ಥೆಯೇ ಹೊಲ ಗದ್ದೆಗೆ ತೆರಳಿ ತ್ಯಾಜ್ಯ ಖರೀದಿಸಲಿದೆ. ಇದರಿಂದ ತ್ಯಾಜ್ಯ ನಿರ್ವಹಣೆಯ ತಲೆನೋವೂ ದೂರವಾಗಲಿದೆ.

ನೀರು ಮತ್ತು ತ್ಯಾಜ್ಯ ಮಿಶ್ರಣದಿಂದಲೇ ಈ ಪರಿಸರ ಸ್ನೇಹಿ, ಮಣ್ಣಲ್ಲಿ ಸುಲಭವಾಗಿ ಕರಗಬಹುದಾದ ಪ್ಯಾಕೆಜಿಂಗ್‌ ಸರಕು ತಯಾರಿಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಸಾಯನಿಕಗಳಿಲ್ಲ. ಹೀಗಾಗಿ ಇವುಗಳನ್ನು ಬೀಸಾಕಿದರೂ ಮಣ್ಣಲ್ಲಿ ಕರಗಿ ಹೋಗುತ್ತವೆ.

ಮೂವರು ನವೋದ್ಯಮಿಗಳ ಪ್ರಯತ್ನ

ಕಾಫಿ ಪ್ಲ್ಯಾಂಟೆಷನ್‌ ಮಾಲೀಕರಾಗಿರುವ ಕುರಿಯನ್‌ ಮ್ಯಾಥ್ಯೂ ಪ್ಯಾಕೆಜಿಂಗ್‌ ತಂತ್ರಜ್ಞರೂ ಹೌದು.  ಮ್ಯಾಥ್ಯೂ, ಜಾರ್ಜ್‌ ಥಾಮಸ್‌ ಮತ್ತು ಮೂವರೂ ಕೇರಳದವರು. ಪರಸ್ಪರ ಪರಿಚಯ ಇದ್ದವರು. ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ‘ನಾವು ಮೂವರು ಒಂದೇ ಶಾಲೆಯಲ್ಲಿ ಓದಿದವರು. ಮೂವರಲ್ಲಿಯೂ ಇರುವ ಪರಿಸರ ರಕ್ಷಣೆಯ ಕಾಳಜಿಯೂ ಈ ಹೊಸ ನವೋದ್ಯಮದಲ್ಲಿ ಕೈಜೋಡಿಸಲು ನೆರವಾಗಿದೆ’ ಎಂದು ಥಾಮಸ್ ಹೇಳುತ್ತಾರೆ.

ಬಿಗ್‌ ಬಾಸ್ಕೆಟ್ ಸದ್ಯಕ್ಕೆ ಹಣ್ಣು, ಚಿಕ್ಕು, ತರಕಾರಿ ಪ್ಯಾಕ್‌ ಮಾಡಲು ಈ ಪೆಟ್ಟಿಗೆಗಳನ್ನೇ ಬಳಸಿಕೊಳ್ಳುತ್ತಿದೆ. ಕಾಫಿ ಸರಣಿ ಮಳಿಗೆಯೊಂದಕ್ಕೆ ಕಾಫಿ ಕಪ್‌, ಬೀಸಾಕುವ ತಟ್ಟೆಗಳ ತಯಾರಿಸಿ ಪೂರೈಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಪರಿಸರ ಕಾಳಜಿ ಹೊಂದಿರುವ ಇತರ ಸಂಸ್ಥೆಗಳಿಗೂ ಈ ಪ್ಯಾಕೆಜಿಂಗ್‌ ಉತ್ಪನ್ನ ಪೂರೈಸುವ ಆಲೋಚನೆಯೂ ಇದೆ.

‘ಪೇಪರ್‌ ಕಪ್‌ನಲ್ಲಿ ಮೇಣ ಇರುತ್ತದೆ. ಬಿಸಿ ಪೇಯ ಹಾಕಿದಾಗ ದೇಹಕ್ಕೆ ಸೇರುತ್ತದೆ. ಬಯೊ –ಲುಷನ್ಸ್‌ ಉತ್ಪನ್ನಗಳಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಯಾವುದೇ ರಾಸಾಯನಿಕಗಳೇ ಇರುವುದಿಲ್ಲ. ಪ್ಲಾಸ್ಟಿಕ್‌ ನಿಷೇಧ ಆದ ನಂತರ ಇಂತಹ ನೈಸರ್ಗಿಕ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಪೂರೈಸಲು ಪ್ಯಾಕೆಜಿಂಗ್‌ಗೆ ಕ್ಷೇತ್ರದಲ್ಲಿ ಅಗಣಿತ ಅವಕಾಶಗಳಿವೆ. ವಹಿವಾಟುದಾರರ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನಗಳನ್ನು ಬೇರೆ, ಬೇರೆ ಆಕಾರ, ವಿನ್ಯಾಸದಲ್ಲಿಯೂ ಪೂರೈಸಲು ಸಾಧ್ಯವಿದೆ’ ಎಂದು ಥಾಮಸ್‌ ಹೇಳುತ್ತಾರೆ.

ಪ್ಯಾಕೆಜಿಂಗ್‌ ಮತ್ತು ವಿನ್ಯಾಸ ತಜ್ಞರೂ ಆಗಿರುವ ಕುರಿಯನ್‌ ಮ್ಯಾಥ್ಯೂ ಅವರು ಆರಂಭದಲ್ಲಿ ಟೈಟನ್‌ ಸಂಸ್ಥೆಗೆ ಕೆಲಸ ಮಾಡುತ್ತಿದ್ದರು. ಚೀನಾದಲ್ಲಿ ಟೈಟನ್‌ ವಾಚ್‌ ಬಾಕ್ಸ್‌ಗೆ ವಿನ್ಯಾಸ ರೂಪಿಸುತ್ತಿದ್ದರು. ಅಲ್ಲಿ ಅವರಿಗೆ ಎಡ್ವರ್ಡೊ ಗೊರ್ಡಿಲ್ಲೊ ಅವರ ಪರಿಚಯವಾಗುತ್ತದೆ. ಎಡ್ವರ್ಡೊ ಅವರ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಇಬ್ಬರೂ ಪ್ರಯತ್ನಗಳನ್ನು ಆರಂಭಿಸುತ್ತಾರೆ. ಅವರಿಬ್ಬರ ಜಂಟಿ ಪ್ರಯತ್ನದ ಫಲವಾಗಿ ಸೋಮನಹಳ್ಳಿಯಲ್ಲಿ ಘಟಕ ಅಸ್ತಿತ್ವಕ್ಕೆ ಬರುತ್ತಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವ ಬೆಂಗಳೂರಿನಲ್ಲಿ ಇಂತಹ ಉತ್ಪನ್ನಗಳಿಗೆ ಸಹಜವಾಗಿಯೇ ವಿಶಾಲ ಮಾರುಕಟ್ಟೆ ಇದೆ. ಬಿ2ಬಿ ಜತೆಗೆ, ಬಿ2ಸಿ ವಹಿವಾಟು ನಡೆಸುವ ಆಲೋಚನೆಯೂ ಸಂಸ್ಥೆಗೆ ಇದೆ. ವಿತರಕರ ಮೂಲಕ ಯಾರಾದರೂ ಖರೀದಿಸಬಹುದು. ರೈಲ್ವೆಗಳಲ್ಲಿ ಪೂರೈಸುವ ಚಹ ಕಾಫಿ ಮತ್ತು ಆಹಾರ ಪದಾರ್ಥಗಳನ್ನು ಪ್ಯಾಕ್‌ ಮಾಡಲೂ ಈ ಉತ್ಪನ್ನ ಬಳಸಬಹುದು.

ರೈತರ ಹಿತ ಕಾಯುವ, ಕೃಷಿ ತ್ಯಾಜ್ಯ ಸಮಸ್ಯೆಗೆ ಪರಿಸರ ಸ್ನೇಹಿ ಪರಿಹಾರ ಒದಗಿಸುವ, ವಿಶಿಷ್ಟ ತಂತ್ರಜ್ಞಾನದ ಈ ಸ್ಟಾರ್ಟ್‌ಅಪ್‌ನಿಂದ ಕೃಷಿ ತ್ಯಾಜ್ಯ ಹಸನಾಗುವುದರ ಜತೆಗೆ ಪರಿಸರವೂ ತ್ಯಾಜ್ಯ ಮುಕ್ತವಾಗಲಿದೆ.

’ನಮ್ಮ ಹಿತ್ತಲಿನಲ್ಲಿಯೇ ಇರುವ ಸರಕನ್ನು ನಾವೇ ಬಳಸಿಕೊಳ್ಳುವುದು ಬಯೊ –ಲುಷನ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ವಿಶ್ವದಾದ್ಯಂತ ಪೇಟೆಂಟ್‌ ಪಡೆಯಲಾಗಿದೆ. ಪರಿಸರ ಸ್ನೇಹಿ, ಮಣ್ಣಲ್ಲಿ ಕರಗುವ ಮತ್ತು ಮಿತವ್ಯಯದ ಉತ್ಪನ್ನ ಇದಾಗಿದೆ. ಕಬ್ಬಿನ ಸಿಪ್ಪೆ, ಅಡಿಕೆ ಹಾಳೆ, ಬಾಳೆ ದಿಂಡು, ಪೈನಾಪಲ್‌ ಬೆಳೆಯಲು ಹೆಚ್ಚಾಗಿ ರಾಸಾಯನಿಕಗಳನ್ನು ಬಳಸುವುದಿಲ್ಲ.

ಹೀಗಾಗಿ ಇವುಗಳ ಕಸದಿಂದ ತಯಾರಿಸಿದ ಪ್ಯಾಕೆಜಿಂಗ್‌ ಉತ್ಪನ್ನಗಳು ಆಹಾರ ಪದಾರ್ಥಗಳ ಪ್ಯಾಕ್‌ ಮಾಡಲು ಬಳಸುವುದರಿಂದ ಯಾವುದೇ ಅಪಾಯ ಇರುವುದಿಲ್ಲ. ವಿದ್ಯುತ್‌ ರಿಯಾಯ್ತಿ ದರದಲ್ಲಿ ಒದಗಿಸಲು ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ನಮ್ಮಂತಹ ನವೋದ್ಯೋಮಿಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಸರ್ಕಾರ ನಮ್ಮ ಅಹವಾಲಿಗೆ ಓಗೊಡಬೇಕು’ ಎಂದು ಥಾಮಸ್‌ ಹೇಳುತ್ತಾರೆ.

***

3.2 ಕೋಟಿ ಟನ್‌ ದೇಶದಲ್ಲಿ ಪ್ರತಿವರ್ಷ ಸುಟ್ಟು ಹಾಕುವ ಕೃಷಿ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT