ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಮತ್ತು ಸಂಸ್ಕೃತಿಯ ಹೊರೆ

Last Updated 8 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜೆಸ್ಸಿ ಪಿ.ವಿ., ಪುತ್ತೂರು

ಉಪನ್ಯಾಸಕಿಯರು ಕಡ್ಡಾಯವಾಗಿ ಸೀರೆ ಧರಿಸಿ ತರಗತಿಗೆ ಬರಬೇಕು ಎಂಬ ಆದೇಶ ಕೆಲವು ದಿನಗಳ ಹಿಂದೆ ಹೊರಬಿದ್ದಾಗ, ನಾನು ಸದಸ್ಯಳಾಗಿರುವ ಕೆಲವು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಇದರ ಕುರಿತಾಗಿ ಕಾವೇರಿದ ಚರ್ಚೆ ನಡೆಯಿತು.

ಹೈಸ್ಕೂಲ್ ಶಿಕ್ಷಕರ ಗುಂಪಿನಲ್ಲಿ ನಡೆದ ಚರ್ಚೆಯಲ್ಲಿ ನಾನು ಕೆಲವು ವಾದಗಳನ್ನು ಮಂಡಿಸಿದೆ. ಸೀರೆ ಸಾಂಪ್ರದಾಯಿಕ ವಸ್ತ್ರವಿರಬಹುದು, ಆದರೆ ಸಭ್ಯವಂತೂ ಅಲ್ಲ. ಅತ್ಯಂತ ಮಾದಕ ಉಡುಗೆಗಳಲ್ಲಿ ಅದೂ ಒಂದು. ಸೀರೆಯನ್ನು ಕೆಲವರು ಎಷ್ಟು ಕೆಟ್ಟದಾಗಿ, ಮಾದಕವಾಗಿ ಉಡುತ್ತಾರೆಂದರೆ ಸ್ವತಃ ಸ್ತ್ರೀಯರಿಗೇ ಅದನ್ನು ನೋಡಲು ನಾಚಿಕೆಯಾಗುತ್ತದೆ. ಸೀರೆಯನ್ನು ಉಡುವುದಕ್ಕೆ ಉಳಿದ ಬಟ್ಟೆಗಳನ್ನು ಧರಿಸುವುದಕ್ಕಿಂತ ಹೆಚ್ಚು ಸಮಯ ಹಾಗೂ ಕೌಶಲದ ಅಗತ್ಯವಿದೆ. ಎಷ್ಟೇ ಚೆನ್ನಾಗಿ ಸೀರೆಯುಟ್ಟರೂ ಕೆಲವು ಕೋನಗಳಿಂದ ನೋಡಿದರೆ ಸ್ತ್ರೀ ಶರೀರದ ಭಾಗಗಳು ಕಾಣಿಸುತ್ತವೆ. ಸೀರೆಯುಟ್ಟು ದ್ವಿಚಕ್ರವಾಹನ ಓಡಿಸುವುದು ಬಹಳ ಕಷ್ಟ. ದ್ವಿಚಕ್ರ ವಾಹನ ಚಾಲನೆಯ ಸಂದರ್ಭದಲ್ಲಿ ಸಿಗ್ನಲ್‌ಗಳಲ್ಲಿ, ಇನ್ನಿತರ ಕೆಲವು ಕಡೆಗಳಲ್ಲಿ ಕಾಲುಗಳನ್ನು ನೆಲಕ್ಕೆ ಊರಬೇಕಾಗುತ್ತದೆ. ಆಗ ಸೀರೆ ಕಾಲಿಗೆ ತೊಡರಿಕೊಂಡು ಅಪಘಾತವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಮಳೆಗಾಲದಲ್ಲಂತೂ ಆರು ಮೀಟರಿನ ಈ ಸೀರೆ, ಅದರಡಿಯ ಲಂಗ ಮಳೆಯಲ್ಲಿ ಒದ್ದೆಯಾದಾಗ ನಡೆಯುವುದಂತೂ ಬಲುಕಷ್ಟ. ಆ ಒದ್ದೆ ಸೀರೆ ಬೇಗ ಒಣಗುವುದೂ ಇಲ್ಲ. ಅದರಿಂದಾಗುವ ಹಿಂಸೆ ಮಹಿಳೆಯರಿಗಷ್ಟೇ ಗೊತ್ತು. ಇನ್ನು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವವರ ಗೋಳು ಬೇರೆಯೇ ರೀತಿಯದು. ಬಸ್ಸಿನಲ್ಲಿ ಸೀಟು ಸಿಗದೇ ಇದ್ದರೆ ಕಂಬಿ ಹಿಡಿದು ನಿಲ್ಲಬೇಕಾಗುತ್ತದೆ. ಆಗ ಎಷ್ಟೇ ಪ್ರಯತ್ನಪಟ್ಟರೂ ಸೀರೆಯು ಮುಚ್ಚಿಲ್ಲದ ಕಡೆ ಶರೀರ ಪ್ರದರ್ಶನವಾಗಿ, ಕಾಮುಕರ ಕೆಟ್ಟ ದೃಷ್ಟಿಯಿಂದ ಪಾರಾಗಲು ಹರಸಾಹಸ ಪಡಬೇಕಾಗುತ್ತದೆ.

ಸೀರೆಯುಟ್ಟರೆ ಅದನ್ನು ಸ್ವಲ್ಪ ಎತ್ತಿ ಹಿಡಿಯದೆ ಅಥವಾ ಎತ್ತಿ ಕಟ್ಟದೆ ಸಲೀಸಾಗಿ ನಡೆಯಲು ಸಾಧ್ಯವಿಲ್ಲ. ಸೀರೆಯುಟ್ಟ ಹೆಣ್ಣುಮಕ್ಕಳ ಒಂದು ಕೈ ಯಾವಾಗಲೂ ಸೀರೆಯ ನೆರಿಗೆಯಲ್ಲೇ ಇರಬೇಕಾಗುತ್ತದೆ. ಬ್ಯಾಗ್, ಕೊಡೆ, ಒಂದು ಮಗು ಕೈಯಲ್ಲಿರುವ ಮಹಿಳೆ ಸೀರೆಯುಟ್ಟು ನಡೆಯುವಾಗ ಅಕ್ಷರಶಃ ಸರ್ಕಸ್ ಮಾಡಬೇಕಾಗುತ್ತದೆ.

‘ಹಿಂದಿನ ಕಾಲದ ಹೆಂಗಸರು ಸೀರೆಯುಟ್ಟು ಎಲ್ಲಾ ಕೆಲಸಗಳನ್ನೂ ನಿಭಾಯಿಸಲಿಲ್ಲವೇ’ ಎಂಬ ಪ್ರಶ್ನೆ ಮುಂದಿಟ್ಟು ಹೆಂಗಸರು ಸೀರೆಯುಡಲೇಬೇಕು ಎಂದು ಕೆಲವರು ವಾದಿಸುತ್ತಾರೆ. ಆ ಕಾಲದಲ್ಲಿ ಸೀರೆಗೆ ಬದಲಿ ವ್ಯವಸ್ಥೆ ಇರಲಿಲ್ಲ. ಅಂಗಾಂಗ ಪ್ರದರ್ಶನವಾಗದ, ನಿರ್ವಹಣೆಗೆ ಅತಿ ಸುಲಭವಾದ, ಧರಿಸಲು ಹಿತಕರವಾದ ಬದಲಿ ವ್ಯವಸ್ಥೆಗಳಿರುವಾಗ ಮಹಿಳೆ ಯಾಕೆ ಸಂಪ್ರದಾಯದ ಹೆಸರಲ್ಲಿ ನಲುಗಬೇಕು?

ನನ್ನ ವಾದಗಳನ್ನು ಕೇಳಿದ ನಮ್ಮ ಶಿಕ್ಷಕ ಗುಂಪಿನ ಪುರುಷ ಸದಸ್ಯರು ಬಹಳ ತೀವ್ರವಾಗಿ ಪ್ರತಿಕ್ರಿಯಿಸಿ, ‘ಹೆಂಗಸರು ಸೀರೆ ಧರಿಸಿ ಸಂಪ್ರದಾಯವನ್ನು ಉಳಿಸಬೇಕು’ ಎಂಬ ಒಂದೇ ನಿಲುವನ್ನು ವ್ಯಕ್ತಪಡಿಸಿದರು. ಬರಹಗಾರರ ಒಂದು ಗುಂಪಿನ ಪುರುಷ ಸದಸ್ಯರ ನಿಲುವೂ ಭಿನ್ನವಾಗಿರಲಿಲ್ಲ. ಹೆಂಗಸರನ್ನು ಭಾರತೀಯ ಸಂಸ್ಕೃತಿಯ ರಾಯಭಾರಿಗಳನ್ನಾಗಿಸುವ ಪುರುಷ ಮನಸ್ಥಿತಿಯನ್ನು ಪ್ರಶ್ನಿಸಿ, ‘ಸಲ್ವಾರ್ ಕಮೀಜ್‌ ಕೂಡಾ ಭಾರತೀಯವೇ. ಅದು ಕೂಡಾ ಸಾಂಪ್ರದಾಯಿಕ ಹಾಗೂ ಅತ್ಯಂತ ಸಭ್ಯ ಉಡುಗೆ. ಅಷ್ಟಕ್ಕೂ ಪುರುಷರು ಧರಿಸುವ ಸೂಟು, ಪ್ಯಾಂಟು ವಿದೇಶಿ ಸಂಸ್ಕೃತಿ. ಹಾಗಾಗಿ ಪಂಚೆ, ಧೋತಿ ಧರಿಸಿ ಗಂಡಸರೂ ಭಾರತೀಯ ಸಂಸ್ಕೃತಿ ಉಳಿಸುವುದು ಉತ್ತಮ’ ಎಂದೆ. ‘ಸೀರೆ ನಮ್ಮ ಪುರಾತನ ಸಂಸ್ಕೃತಿ’ ಎಂದ ಅವರಿಗೆ ‘ಬಹಳ ಹಿಂದಿನ ಇತಿಹಾಸ ಪರೀಕ್ಷಿಸಿದರೆ ಮನುಷ್ಯ ಮರದ ತೊಗಟೆ, ಪ್ರಾಣಿಗಳ ಚರ್ಮ ಇತ್ಯಾದಿಗಳನ್ನು ಧರಿಸುತ್ತಿದ್ದ ಕಾಲವೊಂದಿತ್ತು. ಅದೂ ಒಂದು ರೀತಿಯ ಪುರಾತನ ಸಂಸ್ಕೃತಿಯೇ’ ಎಂದು ಉತ್ತರಿಸಿದೆ. ಸಂಸ್ಕೃತಿ ಉಳಿಸುವ ಭಾರವನ್ನು ಸ್ತ್ರೀಯರ ಮೇಲೆ ಹಾಕಿ ತಾವು ತಮ್ಮ ಅನುಕೂಲಕ್ಕೆ ತಕ್ಕಂತೆ ಬಟ್ಟೆ ಧರಿಸುತ್ತೇವೆಂಬ ಮನೋಧೋರಣೆ ಹೊಂದಿದ್ದ ಕೆಲವು ಪುರುಷರ ಚರ್ಚೆಯ ವೈಖರಿಗೆ ರೋಸಿ ಹೋಗಿ ಆ ಶಿಕ್ಷಕ ಗುಂಪಿನಿಂದ ನಾನು ಹೊರಬಂದೆ.

ನಾನು ನನ್ನ ಸ್ವಾನುಭವವನ್ನು ಹೇಳಿದ್ದು ವಸ್ತ್ರಸಂಹಿತೆಯ ಕುರಿತಾದ ಪುರುಷರ ಮನಸ್ಥಿತಿಯನ್ನು ತಿಳಿಸಲಿಕ್ಕಾಗಿ. ಸಂಸ್ಕೃತಿ ವ್ಯಕ್ತವಾಗುವುದು, ವ್ಯಕ್ತವಾಗಬೇಕಾದುದು ವಸ್ತ್ರಧಾರಣೆ ಇತ್ಯಾದಿ ಪ್ರದರ್ಶನಗಳಲ್ಲಲ್ಲ, ಆಚರಣೆಯಲ್ಲಿ ಹಾಗೂ ವರ್ತನೆಗಳಲ್ಲಿ. ದಿನೇ ದಿನೇ ನಾಗರಿಕತೆ, ವೈಜ್ಞಾನಿಕತೆ ಬೆಳೆಯುತ್ತಿರುವ ಈ ಕಾಲದಲ್ಲಿ ನಾವು ಬಳಸುವ ಎಲ್ಲಾ ವಸ್ತುಗಳಲ್ಲಿ ಹೊಸ ಮಾಡೆಲ್‌ಗಳು, ಹೊಸ ಬಳಕೆಯ ವಿಧಾನಗಳು ಬಂದಿವೆ. ಎಲ್ಲವೂ ಹೊಸತನದತ್ತ ಹೊರಳುತ್ತಿರುವಾಗ ಸೀರೆಯೊಳಗೆ ಮಹಿಳೆಯನ್ನೇಕೆ ಬಂಧಿಸಿಡಬೇಕು? ಪುರುಷರು ಪಾಶ್ಚಾತ್ಯ ಉಡುಗೆಗಳನ್ನು ಹಾಕಿ ರಾಜಾರೋಷವಾಗಿ ಮೆರೆಯುವಾಗ ಹೆಣ್ಣಷ್ಟೇ ಏಕೆ ಸಂಸ್ಕೃತಿಯನ್ನು ಉಳಿಸಬೇಕು? ಅಂದರೆ ನನ್ನ ಮಾತಿನ ಅರ್ಥ ‘ಸೀರೆಯನ್ನು ತ್ಯಜಿಸಿ ಮಾಡರ್ನ್ ಡ್ರೆಸ್ ಧರಿಸಬೇಕೆಂದು ಅಲ್ಲ’. ಮೈಮುಚ್ಚುವ, ಸಭ್ಯ ಎಂದು ಸಮಾಜ ಅಂಗೀಕರಿಸಿರುವ ಉಡುಗೆಗಳನ್ನು ಧರಿಸುವುದರಿಂದ ಸ್ತ್ರೀಯರನ್ನು ನಿರ್ಬಂಧಿಸಬಾರದು.

ಯಾವ ಮಹಿಳೆಯೂ ಸೀರೆಯ ವಿರೋಧಿಯಲ್ಲ. ಶೇ 99ರಷ್ಟು ಮಹಿಳೆಯರು ಸೀರೆಯನ್ನು ಇಷ್ಟಪಡುತ್ತಾರೆ. ಆದರೆ ನಿತ್ಯದ ಉಡುಗೆಯಾಗಿ ಅದನ್ನು ಬಳಸುವ ಅನನುಕೂಲಗಳಿಂದಾಗಿ ಇತರ ಉಡುಗೆಗಳನ್ನು ಧರಿಸಲು ಅವರು ಬಯಸುತ್ತಾರೆ. ಆದರೆ ಅವರವರ ಹುದ್ದೆ, ಉದ್ಯೋಗ, ಸ್ಥಾನಮಾನಗಳಿಗೆ ಶೋಭೆ ತರುವ ಉಡುಗೆಗಳನ್ನು ಧರಿಸುವುದು ಉತ್ತಮ ಹಾಗೂ ಅದು ಸಭ್ಯತೆಯ ಲಕ್ಷಣ. ಮದುವೆ ಮನೆಯಲ್ಲಿ ಹಾಗೂ ಸಾವಿನ ಮನೆಯಲ್ಲಿ ನಮ್ಮ ಉಡುಗೆ ಒಂದೇ ತರಹ ಇರುವುದಿಲ್ಲ. ಹಾಗೇ ಪಿಕ್ನಿಕ್ ಸಂದರ್ಭದಲ್ಲಿ ಹಾಗೂ ಕಚೇರಿ ವೇಳೆಯಲ್ಲಿ ನಮ್ಮ ಉಡುಗೆಗಳು ಒಂದೇ ರೀತಿ ಇರುವ ಸಂದರ್ಭ ಕಡಿಮೆ.

ತರಗತಿ ಕೊಠಡಿಗೆ ಲೆಗ್ಗಿನ್ಸ್ ಹಾಗೂ ಶಾರ್ಟ್ ಟಾಪ್, ಸೈಡ್ ಕಟ್ ಟಾಪ್ ಹಾಗೂ ಪುಷ್ ಅಪ್ ಪ್ಯಾಂಟ್, ಜೀನ್ಸ್ ಹಾಗೂ ಟಾಪ್ ಇನ್ನಿತರ ಪಾಶ್ಚಾತ್ಯ ಉಡುಪುಗಳು ಖಂಡಿತ ಸೂಕ್ತವೆನಿಸದು. ಇಂತಹ ಡ್ರೆಸ್ ಗಳನ್ನು ಖಾಸಗಿ ಸಂದರ್ಭಗಳಲ್ಲಿ ಬಳಸುವುದು ಒಳಿತು. ಶಾಲಾ ಕಾಲೇಜುಗಳ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೆಯಾಗುವ ಉತ್ತಮವಾದ ಚೂಡಿದಾರ್ ಹಾಗೂ ಸೀರೆಗಳನ್ನು ಉಡಲು ಮಹಿಳೆಯರಿಗೆ ಅವಕಾಶವಿರಬೇಕು.

ಈ ನಿಟ್ಟಿನಲ್ಲಿ ಯಾವುದನ್ನೂ ನಿರ್ದಿಷ್ಟವಾಗಿ ಸೂಚಿಸದೆ ‘ಸಭ್ಯ ಉಡುಪು ಧರಿಸಿ’ ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಸುತ್ತೋಲೆ ಒಂದು ಉತ್ತಮ ಬೆಳವಣಿಗೆ ಎನ್ನಬಹುದು.

***

ವಾದ– ವಿವಾದ ಬೇಕಿಲ್ಲ
‘ವಸ್ತ್ರಸಂಹಿತೆ: ಅಲರ್ಜಿ ಏಕೆ?’ ಎಂ. ಅಬ್ದುಲ್ ರೆಹಮಾನ್ ಪಾಷ ಅವರ ಬರಹ (ಪ್ರ.ವಾ., ಚರ್ಚೆ, ಆಗಸ್ಟ್‌ 7) ವಸ್ತ್ರಸಂಹಿತೆಯ ಇನ್ನೊಂದು ಮಗ್ಗುಲನ್ನು ತೆರೆದಿಟ್ಟಿದೆ. ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಚಿಂತನಾರ್ಹವಾದವು.

ಯಾರೇ ಇರಲಿ ಧರಿಸುವ ಬಟ್ಟೆ ನಮ್ಮ ಮನಸ್ಥಿತಿಯ, ವ್ಯಕ್ತಿತ್ವದ ಒಂದು ಪ್ರತೀಕ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ವಿಕಾರತೆ ಎನ್ನುವುದು ವ್ಯಕ್ತಿಗತ ಮನಸ್ಥಿತಿಯ ಒಂದು ಧಾತುವಾದರೂ ಅದನ್ನು ಪ್ರಭಾವಿಸುವ ಸುತ್ತಲಿನ ಸಂಗತಿಗಳು ಹತ್ತಾರು. ನಾವು ನೋಡುವ ಪರಿಸರ, ದೃಶ್ಯ, ಸನ್ನಿವೇಶ, ಆಂಗಿಕ ಹಾವಭಾವ, ಕೇಳುವ ಮಾತು ಎಲ್ಲವೂ ನಮ್ಮ ಆ ಕ್ಷಣದ ನೋಟದಲ್ಲಿ, ವರ್ತನೆಯಲ್ಲಿ ವ್ಯತ್ಯಾಸ ತರಬಾರದು ಎಂದೇನಿಲ್ಲ. ಗಂಡಾಗಲಿ ಹೆಣ್ಣಾಗಲಿ ಧರಿಸುವ ಬಟ್ಟೆ ಸಂದರ್ಭಕ್ಕೆ ತಕ್ಕಂತೆ ಅನುಕೂಲಕರವಾಗಿದ್ದು, ಗೌರವ ತಂದುಕೊಡುತ್ತದೆ ಎಂದಾದರೆ ತಪ್ಪೇನು? ಸಂಸ್ಕೃತಿ, ಸಭ್ಯತೆ, ಮರ್ಯಾದೆ, ನಮ್ಮ ಬಟ್ಟೆ ನಮ್ಮ ಇಷ್ಟ.... ಇತ್ಯಾದಿ ಪರಿಕಲ್ಪನೆಗಳನ್ನು ಪಕ್ಕಕ್ಕೆ ಸರಿಸಿ ಒಂದಿಷ್ಟು ಹೊತ್ತು ನಾನು ‘ನನ್ನತನ’ದ ಆಳಕ್ಕಿಳಿದು ಚಿಂತಿಸಿದರೆ ವಸ್ತ್ರಸಂಹಿತೆಯ ವಾದ ವಿವಾದ ಮತ್ತೆ ಜೀವ ಪಡೆಯಲಿಕ್ಕಿಲ್ಲ.
–ಧರ್ಮಾನಂದ ಶಿರ್ವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT