ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಗೆ ಮಾಯಾವತಿ ಸ್ಪರ್ಧೆ?

Last Updated 8 ಆಗಸ್ಟ್ 2017, 20:08 IST
ಅಕ್ಷರ ಗಾತ್ರ

ನವದೆಹಲಿ: ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಸದ್ಯದಲ್ಲೇ ಉತ್ತರಪ್ರದೇಶದಿಂದ ಲೋಕಸಭೆಗೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವ ದಟ್ಟ ಸಾಧ್ಯತೆ ಇದೆ.

ಉತ್ತರಪ್ರದೇಶದ ಉಪಮುಖ್ಯಮಂತ್ರಿಯಾಗಿ ನೇಮಕವಾಗಿರುವ ಕೇಶವಪ್ರಸಾದ ಮೌರ್ಯ ಅವರ ರಾಜೀನಾಮೆಯಿಂದ ತೆರವಾಗಲಿರುವ ಫೂಲ್ಪುರ್ ಲೋಕಸಭಾ ಕ್ಷೇತ್ರದಿಂದ ಮಾಯಾವತಿ ಅವರು ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ ಎಂದು ಬಿ.ಎಸ್.ಪಿ ಮೂಲಗಳು ತಿಳಿಸಿವೆ.

ದಲಿತರ ಮೇಲಿನ ದೌರ್ಜನ್ಯಗಳ ಚರ್ಚೆಗೆ ರಾಜ್ಯಸಭೆಯಲ್ಲಿ ಅವಕಾಶ ನೀಡಲಿಲ್ಲವೆಂದು ಪ್ರತಿಭಟಿಸಿ ಕಳೆದ ತಿಂಗಳು ಅವರು ಮೇಲ್ಮನೆಯ ಸದಸ್ಯತ್ವಕ್ಕೆ ಹಠಾತ್ ರಾಜೀನಾಮೆ ನೀಡಿದ್ದರು. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಂಬರುವ ಏಪ್ರಿಲ್ ತಿಂಗಳಲ್ಲಿ ತೀರಲಿತ್ತು.

ಬಿಜೆಪಿ ಲೋಕಸಭಾ ಸದಸ್ಯರಾದ ಯೋಗಿ ಆದಿತ್ಯನಾಥ್ ಮತ್ತು ಕೇಶವಪ್ರಸಾದ್ ಮೌರ್ಯ ಅವರು ಕಳೆದ ಮಾರ್ಚ್ ತಿಂಗಳಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಹೀಗಾಗಿ ಈ ಇಬ್ಬರು ಮುಂಬರುವ ಸೆಪ್ಟಂಬರ್ 19ರ ಒಳಗಾಗಿ ಉತ್ತರಪ್ರದೇಶದ ವಿಧಾನಸಭೆಗೆ ಇಲ್ಲವೇ ವಿಧಾನಪರಿಷತ್ತಿಗೆ ಆಯ್ಕೆಯಾಗಬೇಕಿದೆ. ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ನೀಡಬೇಕಿದೆ. ಇವರಿಬ್ಬರು ಅನುಕ್ರಮವಾಗಿ ಪ್ರತಿನಿಧಿಸುತ್ತಿದ್ದ ಗೋರಖಪುರ್ ಮತ್ತು ಫೂಲ್ಪುರ್ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ.

ಈ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸಲು ಉತ್ತರಪ್ರದೇಶದ ಪ್ರಮುಖ ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಚುನಾವಣೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಮೈತ್ರಿಯ ಅಂಗವಾಗಿ ಫೂಲ್ಪುರದಲ್ಲಿ ಸಮಾಜವಾದಿ ಪಕ್ಷವು ಮಾಯಾವತಿ ಅವರನ್ನು ಮತ್ತು ಗೋರಖಪುರ್ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷವು ಸಮಾಜವಾದಿ ಪಕ್ಷದ ಹುರಿಯಾಳನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT