ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ: ತೇಪೆ ಕಾಮಗಾರಿ

Last Updated 9 ಆಗಸ್ಟ್ 2017, 6:38 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಸೋಮವಾರ ನಡೆದ ಅಪಘಾತದಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮಂಗಳವಾರ ದುರಸ್ತಿ ಕಾಮಗಾರಿ ಆರಂಭಿಸಿದರು.

ಕ್ರೀಡಾಂಗಣದ ತಿರುವಿನ ಸ್ಥಳದಲ್ಲಿದ್ದ ಹೊಂಡ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹವಾಗುತ್ತಿತ್ತು. ಇದರಿಂದ ರಸ್ತೆ ಹದಗೆಟ್ಟು ಆ ಭಾಗದಲ್ಲಿ ಹೊಂಡ ನಿರ್ಮಾಣವಾಗಿತ್ತು. ತಿರುವಿನಲ್ಲಿ ವೇಗವಾಗಿ ಬಂದ ಟಿಪ್ಪರ್‌ ಹೊಂಡ ತಪ್ಪಿಸಲು ಹೋಗಿ, ನಿಯಂತ್ರಣ ಕಳೆದುಕೊಂಡು, ವಿಭಜಕದ ಮೇಲೆ ಹಾಯ್ದುಹೋಗಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಪ್ರವಾಸಿ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು.

ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ರಾಷ್ಟ್ರೀಯ ಹೆದ್ದಾರಿ 63 ಅನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ನಗರದ ಹೊರವಲಯದ ಹಿರೇಹಳ್ಳ ಸೇತುವೆಯಿಂದ ಅಭಯ್‌ ಸಾಲ್ವೆಂಟ್‌ ವರೆಗೂ ಸಿಸಿ ರಸ್ತೆ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಅಪಘಾತ ನಡೆದ ತಿರುವಿನಲ್ಲಿ ರಸ್ತೆ ನಿರ್ಮಿಸುವಾಗ ಅಂಡರ್‌ ಡ್ರೈನೇಜ್‌ ನಿರ್ಮಿಸಿ ನೀರು ಹರಿದುಹೋಗುವಂತೆ ವ್ಯವಸ್ಥೆ ಮಾಡಲು ತಿಳಿಸಲಾಗಿತ್ತು. ಸಮೀಪದ ಪೆಟ್ರೋಲ್‌ ಬಂಕ್‌ನ ಮಾಲೀಕರು ಸ್ಥಳದ ಬಗ್ಗೆ ತಕರಾರು ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಡಲಾಗಿತ್ತು. ಮಳೆ ಬಂದಾಗ ಆ ಸ್ಥಳದಲ್ಲಿ ನೀರು ನಿಂತು ರಸ್ತೆ ಹಾಳಾಗಿದೆ.

ರಸ್ತೆ ಹೊಂಡದಿಂದಾಗಿಯೇ ಅಪಘಾತ ಸಂಭವಿಸಿದೆ ಎನ್ನುವುದು ಮೇಲ್ನೋಟಕ್ಕೆ ಕಂಡರೂ. ಇದು ಲಾರಿ ಚಾಲಕನಿಂದಾದ ತಪ್ಪಾಗಿದೆ. ನಗರ ಪ್ರವೇಶಿಸುವ ವಾಹನಗಳು ಅತಿ ವೇಗದಿಂದ ಸಂಚರಿಸುವುದು ಅಪಘಾತಕ್ಕೆ ಕಾರಣವಾಗಿದೆ. ಸದ್ಯಕ್ಕೆ ರಸ್ತೆ ದುರಸ್ತಿಗೊಳಿಸುವಂತೆ ಸೂಚಿಸಲಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT