ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿಸೀತೇ ತಾರಬನ್ಸಿ ನಿನಾದ?

Last Updated 9 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಾದ್ಯಗಳು, ಅವುಗಳಿಂದ ಹೊಮ್ಮುವ ರಾಗಗಳ ಕುರಿತು ಅಪಾರ ಪ್ರೀತಿಯಿಂದ ಮಾತನಾಡುವ ಕೊಳಲುವಾದಕ ವಿನಾಯಕ ಹೊನ್ನಾವರ ಅವರು ಪುರಾಣದಲ್ಲಿ ದೂರವೇ ಉಳಿದ ಸರಸ್ವತಿ ಮತ್ತು ಕೃಷ್ಣನನ್ನು ಒಟ್ಟು ಮಾಡಿದ್ದಾರೆ.

ಇದೀಗ ಸರಸ್ವತಿಯ ಸಿತಾರ ಮತ್ತು ಕೃಷ್ಣನ ಕೊಳಲಿನ ಸಮ್ಮಿಲನವಾಗಿದೆ. ಅದುವೇ ‘ತಾರಬನ್ಸಿ’. ತಂತಿ ವಾದ್ಯ ಮತ್ತು ಸುಸಿರ ವಾದ್ಯದ ಹದವಾದ ಮಿಶ್ರಣ (ಸಿತಾರ- ತಾರ - ತಂತಿ ವಾದ್ಯ; ಬಾನ್ಸುರಿ, ಬಿದಿರಿನ ವಾದ್ಯ- ಬನ್ಸಿ -ಬಿದಿರು) ಇದಾಗಿದೆ.

ಎಳವೆಯಲ್ಲಿ ಪಿವಿಸಿ ಪೈಪ್‌ಅನ್ನೇ ಬಾನ್ಸುರಿಯನ್ನಾಗಿಸಿ ಸುಮಧುರ ಸ್ವರ ಹೊಮ್ಮಿಸುತ್ತಿದ್ದರು ವಿನಾಯಕ. ಉಸ್ತಾದ್ ಶಾಹಿದ್ ಪರ್ವೇಜ್‌ ಅವರ ಸಿತಾರವಾದನ ಅವರನ್ನು ಇನ್ನಿಲ್ಲದಂತೆ ಕಾಡಿತು. ತಾವೂ ಸಿತಾರ ಕಲಿತಿದ್ದರೆ ಚೆನ್ನಾಗಿರುತ್ತಿತ್ತು ಅಂದುಕೊಂಡರು.

ಆದರೆ, ಕೊಳಲುವಾದನ ಕಲಿಕೆಯನ್ನು ಅರ್ಧಕ್ಕೆ ತೊರೆಯುವ ಮನಸ್ಸಾಗಲಿಲ್ಲ. ಸಿತಾರ ಅಭ್ಯಾಸ ಆರಂಭಿಸಿದರೆ, ಹೆಚ್ಚಿನ ಸಮಯವನ್ನು ಬಾನ್ಸುರಿಗೆ ಕೊಡಲಾಗುವುದಿಲ್ಲ. ಆಗ ತಲೆಗೆ ಬಂದದ್ದು, ಇವೆರಡನ್ನೂ ಒಂದೇ ವಾದ್ಯವಾಗಿ ನುಡಿಸುವಂತಿದ್ದರೆ ಎಷ್ಟೊಂದು ಚೆನ್ನಾಗಿತ್ತು ಎಂಬ ಆಲೋಚನೆ. ಮೊದಲು ಬಾಲಿಶ ಎನಿಸಿತು. ಆದರೆ, ಹಿಂದೆಯೇ ಏಕೆ ಈ ಎರಡೂ ವಾದ್ಯಗಳ ಸಮ್ಮಿಲನಗೊಳಿಸಬಾರದು ಎಂಬ ತರ್ಕವೂ ಕಾಡಿತು.

ಆಗ ಸಹಾಯಕ್ಕೆ ಬಂದದ್ದೇ, ಮೆಕ್ಯಾನಿಕಲ್ ಬುದ್ಧಿ. ಕಲಿತದ್ದು ಎಂಜಿನಿಯರಿಂಗ್, ಆದರೆ ಮೈಮನಸ್ಸು ಆವರಿಸಿದ್ದು ಮಾತ್ರ ಸಂಗೀತ. ಮನಸ್ಸಿನಲ್ಲಿ ಮೂಡಿದ್ದ, ಅಸ್ಪಷ್ಟ ಸಿತಾರ - ಬಾನ್ಸುರಿಗಳ ಮಿಶ್ರಣ ಮೆಕ್ಯಾನಿಕಲ್ ಕೌಶಲ ಅರಗಿಸಿಕೊಂಡ ಮಿದುಳಿನಲ್ಲಿ ಸ್ಪಷ್ಟರೂಪ ತಾಳಲು ಶುರು ಮಾಡಿತು.

ಈ ಹೊಸ ವಾದ್ಯವನ್ನು ಸಿನಿಮಾದಲ್ಲಿ ನೋಡುವಂತೆ ಕೆಲಗಂಟೆಗಳಲ್ಲಿ ತಯಾರಿಸಲು ಆಗಲಿಲ್ಲ. ‘ತಾರಬನ್ಸಿ’ ಸತತ ಎರಡು ವರ್ಷಗಳ ಪರಿಶ್ರಮದ ಫಲ. ಇದಕ್ಕೆ ಒಳ್ಳೆಯ ಕೊಳಲನ್ನೇ ಬಳಸಬೇಕಿತ್ತು. ಹೊಸ ಕೊಳಲುಗಳು ಇದ್ದವು. ಆದರೆ ಅದರಲ್ಲಿ ಅಷ್ಟು ಆರಾಮವಾಗಿ ನುಡಿಸಲು ಆಗುವುದಿಲ್ಲ ಎನ್ನುವ ಚಿಂತೆ ಕಾಡುತ್ತಿತ್ತು. ಹೊಸ ಪ್ರಯೋಗ ಕೈಕೊಟ್ಟರೆ, ಅಚ್ಚುಮೆಚ್ಚಿನ ಕೊಳಲಿನ ಗತಿ? ವಿನಾಯಕ ಅವರ ತಲೆಯಲ್ಲಿ ಗೊಂದಲ. ಕಡೆಗೆ ಗಟ್ಟಿ ಮನಸ್ಸು ಮಾಡಿ, ಪ್ರಯೋಗಕ್ಕೆ ಅಣಿಯಾದರು.

ವಾದ್ಯಗಳನ್ನು ತಯಾರಿಸುವವರಿಗೆ ಹೊಸ ವಾದ್ಯ ರಚನೆಯ ನಕ್ಷೆ ಹಾಕಿಕೊಟ್ಟರು. ಅವರ ಬಳಿಯೇ ತಾಸುಗಟ್ಟಲೆ ಕುಳಿತರು. ತಾರಬನ್ಸಿಯ ಎರಡೂ ಬದಿ ಒಂದೇ ತೂಕ ಇರಬೇಕು, ಒಂದು ಕಡೆ ಭಾರ, ಮತ್ತೊಂದು ಕಡೆ ಹಗುರವಾದರೆ ನುಡಿಸಲು ಕಷ್ಟ. ಹೊಸ ವಾದ್ಯದಲ್ಲಿ ಸರಸ್ವತಿಯ ವಾಹನ ಹಂಸ ಇದ್ದರೆ ಚೆನ್ನ ಎನಿಸಿತು. ಪುಟ್ಟ ಹಂಸವನ್ನು ಕೆತ್ತಿಸಿದರು. ಹಂಸ ಇರುವ ತುದಿ ಭಾರ ಎನಿಸಿದಾಗ ತಳ ಭಾಗ ಕೊರೆದು ಹಗುರಾಗಿಸಿದರು. ತಂತಿಯನ್ನು ಬಿಗಿಗೊಳಿಸಲು ವಯೊಲಿನ್ ವಾದ್ಯಕ್ಕೆ ಬಳಸುವಂತಹ ಬಿರುಡೆಗಳನ್ನು ಅಳವಡಿಸಿದರು. ಬೇಕಾದಷ್ಟು ಬಿಗಿ ಆಗಲಿಲ್ಲ. ಗಿಟಾರ್‌ನ ಸ್ಕ್ರೂಗಳಿಂದ ಬಿಗಿದು ನೋಡಿದರು. ಆಗ ತಂತಿಗಳು ಬಿಗಿಗೊಂಡು ಬೇಕಾದ ಹದ ಸಿದ್ಧಿಸಿತು.

ಆರಂಭದಲ್ಲಿ ನುಡಿಸಲು ಕಷ್ಟವೆನಿಸಿತು. ಅಭ್ಯಸಿಸುತ್ತಾ ಹೋದಂತೆ ತಾರಬನ್ಸಿಯಲ್ಲಿ ಇಂಪಾದ ಹೊಸ ಸ್ವರ ಹೊಮ್ಮಿತು. ಈ ಹೊಸ ವಾದ್ಯದೊಂದಿಗೆ ಇವರು ‘ವಿಶ್ವ ಕೊಳಲು ಸಮ್ಮೇಳನ’ದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನ ಸೆಪ್ಟೆಂಬರ್ 21ರಿಂದ 23ರವರೆಗೆ ಅರ್ಜೆಂಟಿನಾದಲ್ಲಿ ನಡೆಯಲಿದೆ. ಮೂರು ದಿನಗಳೂ ಇವರು ಕಾರ್ಯಕ್ರಮ ನೀಡಲಿದ್ದಾರೆ. ‘ತಾರಬನ್ಸಿ’ ವಾದನದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಸಹ ಇರಲಿದೆ.

‘ಮಧ್ಯಮವರ್ಗದ ಕುಟುಂಬದ ಮಕ್ಕಳಿಗೆ ವೃತ್ತಿ, ಪ್ರವೃತ್ತಿಗಳು ಬೇರೆ ಬೇರೆ ಆಗಿರುತ್ತವೆ. ಸಂಸಾರದ ನೊಗ ಎಳೆಯಬೇಕಲ್ಲ? ಪ್ರವೃತ್ತಿಗೆ ಪೂರ್ಣ ಸಮಯ ಮೀಸಲಿಡಲು ಆಗುವುದಿಲ್ಲ’ ಎನ್ನುವ ವಿನಾಯಕ ಅವರಿಗೆ ವೃತ್ತಿ-ಪ್ರವೃತ್ತಿಗಳೆರಡೂ ಸೇರಿ ನೂತನ ಆವಿಷ್ಕಾರಕ್ಕೆ ನೆರವಾಗಿವೆ.

ವಿನಾಯಕ ಅವರ ಊರು ಹೊನ್ನಾವರ ಹತ್ತಿರದ ಕಡತೋಕ. ‘ಅಮ್ಮ ನಿತ್ಯ ಭಜನೆಗಳನ್ನು ಹಾಡುತ್ತಿದ್ದರು. ಅವರ ತೊಡೆಯ ಮೇಲೆ ಕೂರಿಸಿಕೊಂಡು ತಾಳ ಹೇಳಿಕೊಡುತ್ತಿದ್ದರು. ನನ್ನ ಸಂಗೀತ ಪಾಠ ಶುರುವಾಗಿದ್ದು ಅವರಿಂದಲೇ’ ಎಂದು ಮೊದಲ ಪಾಠ ನೆನೆಯುತ್ತಾರೆ.

ಮುಂಬೈನಲ್ಲಿ ವಾಸವಿದ್ದ ಇವರು, ಅಪ್ಪ ಅನಾರೋಗ್ಯದಿಂದ ಮೃತಪಟ್ಟಾಗ ಅಜ್ಜಿ ಊರಾದ ಶಿರಾಲಿಗೆ ಮರಳುತ್ತಾರೆ. ಆಗ ಇವರಿಗೆ ನಾಲ್ಕರ ಪ್ರಾಯ. ಅಮ್ಮನ ಮನೆಯವರೆಲ್ಲ ಕಲಾವಿದರೇ. ಹವ್ಯಾಸಿ ಯಕ್ಷಗಾನ ಕಲಾ ತಂಡವೇ ಇವರ ಮನೆಯಲ್ಲಿದೆ. ಮೇಳದಲ್ಲಿ ಆಗಾಗ ಭಾಗವಹಿಸುತ್ತಿದ್ದರು. ಮಾವ ಬಿ. ಶಂಕರ ಸಹ ಕೊಳಲು ನುಡಿಸುತ್ತಾರೆ. ಸದಾ ಮಾವನ ಹಿಂದೆಯೇ ಬಾಲದಂತೆ ಅಂಟಿಕೊಂಡಿರುತ್ತಿದ್ದ ವಿನಾಯಕ, ಆಕಾಶವಾಣಿಯಲ್ಲಿ ಬರುವ ಎಲ್ಲ ಕಾರ್ಯಕ್ರಮಗಳನ್ನು ಅವರೊಟ್ಟಿಗೆ ಕೇಳುತ್ತಿದ್ದರು. ಹಾಡಲು ಹವಣಿಸುತ್ತಿದ್ದರು.

‘ನಾನು ಹತ್ತು ವರ್ಷದವನಿರುವಾಗ, ಒಮ್ಮೆ ಮಾವ ಪಿವಿಸಿ ಪೈಪ್‌ಅನ್ನು ಕೊಳಲಿನ ಹಾಗೆ ಮಾಡಿಕೊಟ್ಟರು. ಅದರಲ್ಲೇ ನುಡಿಸುತ್ತಿದ್ದೆ. ಮನೆಯಲ್ಲಿ ಎಲ್ಲರಿಗೂ ಇಷ್ಟವಾಯಿತು. ಅಜ್ಜಿ, ಸಂಬಂಧಿಕರ ಮನೆಗೆ ಹೋದಲ್ಲೆಲ್ಲ ಮೊಮ್ಮನಿಗೆ ಒಂದು ಚಂದದ ಕೊಳಲಿದ್ದರೆ ಕೊಡಿ ಎಂದು ಕೇಳಿ, ಒಂದು ಕೊಳಲು ತಂದುಕೊಟ್ಟಿದ್ದರು’ ಎಂದು ಬಾಲ್ಯದ ಕೊಳಲಿನ ಕಥೆ ಮೆಲುಕು ಹಾಕುತ್ತಾರೆ. ಶಾಲೆಯಲ್ಲಿ ತಪ್ಪದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ವಿನಾಯಕ, ಬಹುಮಾನಗಳನ್ನು ಬಾಚುತ್ತಿದ್ದರು. ಹೈಸ್ಕೂಲ್‌ಗೆ ಬರುತ್ತಿದ್ದಂತೆ, ವಿನಾಯಕ ದೇವಾಡಿಗ ಅವರಲ್ಲಿ ಆರೋಹಣ, ಅವರೋಹಣಗಳನ್ನು ಕಲಿತರು. ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯ ಅವರ ವಾದನ ಮತ್ತಷ್ಟು ಪ್ರೇರಣೆ ನೀಡಿತು. ಮುಂದೆ ಪಂಡಿತ್ ಭೀಮಸೇನ ಜೋಶಿ ಅವರ ಶಿಷ್ಯರಾದ ಬಿ.ಆರ್. ಜೋಶಿ ಅವರ ಬಳಿ ವಿನಾಯಕ ಅವರು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು.

ನಂತರ ಕೊಳಲು ಪಂಡಿತ್ ವೆಂಕಟೇಶ ಗೋಡ್ಖಿಂಡಿ ಅವರ ಬಳಿ ಅಭ್ಯಾಸ ಮುಂದುವರಿಸಿದರು. ಹಾಡುವುದು, ಕೊಳಲು ನುಡಿಸುವುದಷ್ಟೇ ಅಲ್ಲ, ಇವರು ಯಕ್ಷಗಾನ ಕಲಾವಿದರೂ ಹೌದು. ಓದಿನಲ್ಲಿ ಮುಂದಿದ್ದರೂ ಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಲು ಬಯಸಿದರು. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದೇ ತಪ್ಪಾಯಿತು ಎಂಬಂತೆ, ಮನೆಯವರೆಲ್ಲ ಓದು ಮುಂದುವರಿಸೆಂದು ಒತ್ತಾಯಿಸಿದರು.

ಪಿಯುಸಿ ನಂತರ ದಾವಣಗೆರೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿತರು. ಅಲ್ಲಿಯೂ ಇವರ ಹಾಡುಗಾರಿಕೆ, ಕೊಳಲು ವಾದನದಿಂದ ಗುರುತಿಸಿಕೊಂಡರು. ಪಂಡಿತ್ ಭೀಮಸೇನ ಜೋಶಿ ಅವರಿಗೆ ‘ಭಾರತ ರತ್ನ’ ಲಭಿಸಿದಾಗ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಕೊಳಲು ನುಡಿಸುವ ಅವಕಾಶ ದೊರೆಯಿತು.

ಸದ್ಯ ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಪ್ರಾಸೆಸ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಮಟ್ಟದ ವಾದ್ಯ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಮುಂಬೈ, ಜೈಪುರ, ದೆಹಲಿ ಸೇರಿದಂತೆ ಹಲವೆಡೆ ಸಂಗೀತ ಕಛೇರಿ ನೀಡಿದ್ದಾರೆ. ಮೈಸೂರಿನ ನಿರ್ವಾಣ ಯೋಗ ಕೇಂದ್ರದಲ್ಲಿ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಿಗರು ಇವರಲ್ಲಿ ಕೊಳಲು ವಾದನ ಕಲಿಯುತ್ತಿದ್ದಾರೆ.
ವಿನಾಯಕ ‘ಥಾಂಕಾರಿ’ ಎಂಬ ಹೊಸ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಸಂಗೀತದಲ್ಲಿಯೂ ಹೊಸ ಹೊಸ ಆವಿಷ್ಕಾರಗಳು ಆಗಬೇಕು ಎನ್ನುತ್ತಾರೆ.

ಸಮ್ಮೇಳನದ ವೈಶಿಷ್ಟ್ಯ

ಸಮ್ಮೇಳನದಲ್ಲಿ ಸಂಗೀತ ಕಛೇರಿ, ಉಪನ್ಯಾಸ ಮತ್ತು ಪ್ರದರ್ಶನ ಇರಲಿವೆ. ಮೂರೂ ವಿಭಾಗಗಳಲ್ಲಿ ವಿನಾಯಕ ಭಾಗವಹಿಸುತ್ತಿದ್ದಾರೆ. ಕೊಳಲು ವಾದಕರು, ಕೊಳಲಿನ ಕುರಿತು ಹೊಸ ಆವಿಷ್ಕಾರ ಮಾಡಿದವರು, ವಾದ್ಯ ತಯಾರಕರು- ಈ ಮೂರೂ ವರ್ಗದವರನ್ನು ಒಂದೇ ವೇದಿಕೆಯಲ್ಲಿ ತಂದು ಪ್ರೋತ್ಸಾಹಿಸುವ ಉದ್ದೇಶ ಸ್ಮಮೇಳನದ್ದು.

ಸಾಮಾನ್ಯವಾಗಿ ಕಲಾವಿದರು ಒಂದು ಅಥವಾ ಎರಡು ವಿಭಾಗಗಳಲ್ಲಿ ಅವಕಾಶ ಪಡೆದರೆ, ಭಾರತವನ್ನು ಪ್ರತಿನಿಧಿಸುತ್ತಿರುವ ವಿನಾಯಕ ಅವರು ಮೂರೂ ವಿಭಾಗಗಳಲ್ಲಿ ಭಾಗವಹಿಸುತ್ತಿದ್ದಾರೆ. ‘ತಾರಬನ್ಸಿ’ ಈ ಬಾರಿಯ ಸಮ್ಮೇಳನದಲ್ಲಿ ವಿಶಿಷ್ಟ ವಾದ್ಯವಾಗಿ ಗಮನ ಸೆಳೆಯುವ ಸಾಧ್ಯತೆ ಇದೆ. 2010ರಲ್ಲಿ ವಿಶ್ವ ಕೊಳಲು ಸಮ್ಮೇಳನಕ್ಕೇ ಪ್ರವೀಣ್ ಗೋಡ್ಖಿಂಡಿ ಆಯ್ಕೆಯಾದ ಮೊದಲ ಕನ್ನಡಿಗರಾಗಿದ್ದರು. ಈಗ ವಿನಾಯಕ ಹೊನ್ನಾವರ ಅವರ ಸರದಿ. ಕನ್ನಡದ ಹುಡುಗ ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

⇒ಚಿತ್ರಗಳು: ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT