ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹ್ಮದ್ ಪಟೇಲ್ ಮತ್ತು ಆನಂತರ!

Last Updated 9 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಒಂದೆಡೆ, ಅಹ್ಮದ್ ಪಟೇಲ್ ಎಂಬ ಕಾಂಗ್ರೆಸ್ ಚಾಣಾಕ್ಷ, ರಾಜ್ಯಸಭೆಗೆ ಬರದಂತೆ ತಡೆಯಲು ಬೃಹತ್ ಬಹುಮತವುಳ್ಳ ಕೇಂದ್ರ ಸರ್ಕಾರವೇ ಟೊಂಕ ಕಟ್ಟಿ ನಿಂತಿತ್ತು. ಇನ್ನೊಂದೆಡೆ, ಗುಜರಾತಿಗೆ ರಾಹುಲ್ ಗಾಂಧಿ ಬರದಂತೆ ತಡೆಯಲು ಬಿಜೆಪಿಯ ಸಣ್ಣಮಟ್ಟದ ಪದಾಧಿಕಾರಿಯೊಬ್ಬ ಝಡ್ ರಕ್ಷಣೆ ‘ಭೇದಿಸಿ’ ಕಲ್ಲೆಸೆದು ರಾಹುಲ್ ಕೂತಿದ್ದ ಕಾರಿನ ಗಾಜೊಡೆಯುತ್ತಿದ್ದ.

ಝಡ್ ರಕ್ಷಣೆ ಭೇದಿಸಿ ನುಗ್ಗುವಂಥ ಕೆಲಸ, ಸರ್ಕಾರಗಳ ಪರೋಕ್ಷ ಬೆಂಬಲವಿರದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಈ ಎರಡೂ ಘಟನೆಗಳು ಒಂದೇ ಕುಟಿಲ ಯೋಜನೆಯ ಯೋಜಿತ ನಿರ್ವಹಣೆಗಳು ಎಂಬುದು ಬಿಜೆಪಿ ರಾಜಕಾರಣ ಬಲ್ಲವರಿಗೆಲ್ಲ ಗೊತ್ತಾಗುತ್ತದೆ.

ಆದರೆ ಇವೆರಡೂ ಘಟನೆಗಳು ಈ ಇಬ್ಬರು ನಾಯಕರ ಬಗ್ಗೆ ಬಿಜೆಪಿಗಿರುವ ಭಯವನ್ನೂ ಸೂಚಿಸುವಂತಿವೆ! ಅಹ್ಮದ್ ಪಟೇಲ್, ರಾಜೀವ್‌ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ಸಿನ ಒಳತಂತ್ರವನ್ನು ರೂಪಿಸುತ್ತಾ ಬಂದವರು; ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ. ಸಾಧಾರಣ ಮುಸ್ಲಿಂ ಕುಟುಂಬದಿಂದ ಬಂದ ಅಹ್ಮದ್ ಪಟೇಲ್ ಕಾಂಗ್ರೆಸ್ ವಿದ್ಯಾರ್ಥಿ ನಾಯಕರಾಗಿದ್ದವರು.

ಅವರ ಹೆಸರಿನಲ್ಲಿರುವ ‘ಪಟೇಲ್’ನಿಂದಾಗಿ ಅವರು ಮುಸ್ಲಿಂ ನಾಯಕರೆನ್ನುವುದು ಕೂಡ ಅನೇಕರಿಗೆ ಗೊತ್ತಿಲ್ಲ! ಇಂದಿರಾ ಗಾಂಧಿಯವರು ಸೋತ ವರ್ಷವೂ, ಪಟೇಲ್ ಇಪ್ಪತ್ತೆಂಟರ ಹರೆಯದಲ್ಲೇ ಪಾರ್ಲಿಮೆಂಟ್ ಎಲೆಕ್ಷನ್ ಗೆದ್ದವರು. ಅವತ್ತಿನಿಂದ ಇವತ್ತಿನವರೆಗೂ ಸದ್ದಿಲ್ಲದೆ ಕಾಂಗ್ರೆಸ್ ಕೆಲಸ ಮಾಡಿದವರು. ಸಂಗೀತ ಕೇಳಬಲ್ಲವರು.

ನೆಹರೂ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ತಮ್ಮ ಉಸ್ತುವಾರಿಯಲ್ಲಿ ಒಂದೇ ವರ್ಷದಲ್ಲಿ ಅತ್ಯಾಧುನಿಕ ಜವಾಹರ್ ಭವನ ಕಟ್ಟಿ ದಾಖಲೆ ಸ್ಥಾಪಿಸಿದವರು. ಎಲ್ಲಕ್ಕಿಂತ ಮುಖ್ಯವಾಗಿ, ಗುಜರಾತಿನ ಭೀಕರ ಕೋಮುವಾದಕ್ಕೆ ಬಲಿಯಾದ ಸಂಸತ್ ಸದಸ್ಯ ಎಹ್ಸಾನ್ ಜಾಫ್ರಿಯವರ ನಂತರ ಪಾರ್ಲಿಮೆಂಟಿನಲ್ಲಿ ಗುಜರಾತನ್ನು ಪ್ರತಿನಿಧಿಸುವ ಏಕಮಾತ್ರ ಮುಸ್ಲಿಂ ಪ್ರತಿನಿಧಿಯಾಗಿರುವವರು. ಜಾಫ್ರಿಯವರ ಬರ್ಬರ ಹತ್ಯೆಯ ವಿರುದ್ಧ ಕಾನೂನು ಹೋರಾಟಗಳನ್ನು ಹಿನ್ನೆಲೆಯಲ್ಲಿದ್ದು ರೂಪಿಸಿದವರು.

ಅದರ ಜೊತೆಗೇ, ಈ ಪಟೇಲ್ ತಮ್ಮ ಕೈ ನಡೆಯುವಾಗ ಗುಜರಾತ್ ಕೋಮುವಾದದ ಪಿತಾಮಹರೆಂದು ಖ್ಯಾತರಾಗಿರುವ ಅಮಿತ್ ಷಾಗೆ ಸಾಕಷ್ಟು ಕಿರುಕುಳವನ್ನೂ ಕೊಟ್ಟವರು! ಬರಲಿರುವ ಗುಜರಾತ್ ಚುನಾವಣೆಯಲ್ಲಿ ಅಮಿತ್ ಷಾ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪ್ರಯತ್ನಿಸಿಯಾರೆಂಬ ಭಯದಲ್ಲಿ ಅವರನ್ನು ರಾಜ್ಯಸಭೆಗೆ ಕಳಿಸುವ ಕಾರ್ಯತಂತ್ರದಲ್ಲಿ ಗುಜರಾತ್ ಬಿಜೆಪಿ ಬಣ ನಿರತವಾಗಿತ್ತು; ಇತ್ತ ಮಾಧ್ಯಮದ ಪ್ರಚಾರಬಲ ನೆಚ್ಚಿದ ಅಮಿತ್ ಷಾಗೆ ರಾಜ್ಯಸಭೆಯಂಥ ವಿಚಾರಮಂಥನದ ವೇದಿಕೆಯಲ್ಲಿ, ಚುರುಕಾದ ರಾಜಕಾರಣಿಗಳ ನಡುವೆ ಮಂಕಾಗುವ ಭಯವಿತ್ತು; ಅದರಲ್ಲೂ ಅಹ್ಮದ್ ಪಟೇಲರಷ್ಟು ರಾಜಕೀಯ ಜ್ಞಾನ ಇವತ್ತು ಆಯ್ಕೆಯಾಗಿರುವ ಸ್ಮೃತಿ ಇರಾನಿ, ಅಮಿತ್ ಷಾ ಇಬ್ಬರಿಗೂ ಇಲ್ಲ.

ಲೋಕಸಭೆಯಂತೆ ಬಹುಸಂಖ್ಯಾತ ಸದಸ್ಯರ ಅಬ್ಬರದ ಮೂಲಕ ಇಲ್ಲಿ ಸದಸ್ಯರ ಬಾಯಿ ಮುಚ್ಚಿಸುವುದು ಕಷ್ಟ. ಹೀಗಾಗಿ ಷಾಗೆ ಇದ್ದ ಒಂದೇ ಮಾರ್ಗ ಅಹ್ಮದ್ ಪಟೇಲರನ್ನು ‘ಮುಗಿಸುವುದು!’ ಅದಕ್ಕಾಗಿ ದುರಾಸೆಯ ಕಾಂಗ್ರೆಸ್ ಶಾಸಕರ ‘ಅರ್ಥ’ಪೂರ್ಣ ರಾಜೀನಾಮೆ, ಪಕ್ಷಾಂತರ, ರೆಸಾರ್ಟ್ ಯಾತ್ರೆ, ರಾಜ್ಯಸಭೆಯ ಎಲೆಕ್ಷನ್ನಿನಲ್ಲಿ ‘ನೋಟಾ’ ಪ್ರಯೋಗ, ಡಿ.ಕೆ. ಶಿವಕುಮಾರ್ ಮೇಲೆ ಐ.ಟಿ. ದಾಳಿ… ಒಂದೇ ಎರಡೇ!

ಇಂಥ ದುಷ್ಟ ನಡೆಗಳನ್ನೆಲ್ಲ ‘ಚಾಣಕ್ಯನೀತಿ’, ‘ಆಪರೇಷನ್ ಕಮಲ’ ಎಂದು ಹೆಮ್ಮೆಯಿಂದ ಬಣ್ಣಿಸುವ ಆತ್ಮಸಾಕ್ಷಿಹೀನ ಮಾಧ್ಯಮಗಳು ತಾವು ಮಾಡಬೇಕಾದದ್ದು ನಿಜವಾದ ವಿರೋಧ ಪಕ್ಷದ ಕೆಲಸ ಎಂಬುದನ್ನೇ ಮರೆತಂತಿವೆ. ಬಹುಮತವುಳ್ಳ ಚುನಾಯಿತ ಸರ್ಕಾರವೊಂದು ಒಬ್ಬ ವ್ಯಕ್ತಿಯ ಭಯದಿಂದ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಾಗ, ಮಾಧ್ಯಮವೇ ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗುತ್ತದೆ.

ಇವತ್ತು ಇಂದಿರಾ ಗಾಂಧಿಯವರ ಎಮರ್ಜೆನ್ಸಿಯನ್ನು ಟೀಕಿಸುತ್ತಿರುವವರು ಆವತ್ತು ಇಂದಿರಾರ ಚೇಲಾಗಳು, ಅಧಿಕಾರಿಗಳು ಮಾಡಿದ ಬೇಟೆಗಳ ಬಗ್ಗೆ ಹೇಳುತ್ತಿರುವುದೆಲ್ಲವೂ ಸತ್ಯವೇ. ಆದರೆ ಇವತ್ತಿನ ಆಡಳಿತ ಪಕ್ಷವೂ ಅದಕ್ಕಿಂತ ಭೀಕರ ಬೇಟೆಯಲ್ಲಿ ಮುಳುಗಿರುವುದನ್ನು ಆ ಪಕ್ಷದವರೂ, ಮಾಧ್ಯಮಗಳೂ, ಮತದಾರರೂ ಇನ್ನಷ್ಟು ತೀಕ್ಷ್ಣವಾಗಿ ಗಮನಿಸಬೇಕಾಗುತ್ತದೆ.

ಇದೆಲ್ಲದರ ನಡುವೆ, ಅಪ್ರಿಯ ಪ್ರಚಾರದಿಂದಾಗಿ ಕಂಗೆಟ್ಟಿದ್ದ ಡಿ.ಕೆ. ಶಿವಕುಮಾರ್, ಟಿ.ವಿ. ಚಾನಲ್‌ಗಳ ಟಿ.ಆರ್.ಪಿ. ಏರಿಸಿ, ಚಿಂತಾಕ್ರಾಂತರಾಗಿದ್ದರೂ, ಮುಗುಳ್ನಗಲೆತ್ನಿಸುತ್ತಿದ್ದರು. ಆದರೂ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಯಾರೂ ಮಾಡಲಾಗದ ‘ಕಲ್ಯಾಣ’ ಕೆಲಸವೊಂದನ್ನು ನಿಭಾಯಿಸಿ, ಪಟೇಲರನ್ನು ಪಾರು ಮಾಡಿದ ಮೇಲೆ ಕಾಂಗ್ರೆಸ್ ಪಾರ್ಟಿಯಲ್ಲಿ ಡಿ.ಕೆ.ಶಿ.ಯವರ ಟಿ.ಆರ್.ಪಿ. ಏಕದಂ ಏರಿ ಅವರಲ್ಲೀಗ ಅಸಲಿ ಮುಗುಳ್ನಗೆ ಉಕ್ಕಿರಬಹುದು! ಅಹ್ಮದ್ ಪಟೇಲ್ ಗೆಲುವಿನಲ್ಲಿ ಚಿದಂಬರಂ, ಗೆಹ್ಲೋಟ್, ಕಪಿಲ್ ಸಿಬಲ್ ಥರದ ಕಾಂಗ್ರೆಸ್ಸಿನೊಳಗಿನ ಸಂವಿಧಾನತಜ್ಞರು ಮಾಡಿದ ತೆರೆಮರೆ ಕೆಲಸವೇನೂ ಸಾಧಾರಣವಾದದ್ದಲ್ಲ.

ಪಳಗಿದ ಇಸ್ಪೀಟ್ ಆಟಗಾರರಂತೆ ಏಕ್‌ದಂ ಇಬ್ಬರು ಶಾಸಕರ ಮತಗಳನ್ನು ಅಸಿಂಧುಗೊಳಿಸುವ ಕಾರ್ಡ್ ಬಳಸಿ, ಎರಡು ಮತಗಳನ್ನು ಕಳೆದುಹಾಕಿದ್ದು ಈ ಚುನಾವಣೆಯ ಅತ್ಯಂತ ನಿರ್ಣಾಯಕ ನಡೆಯಾಗಿತ್ತು; ಚುನಾವಣಾ ಆಯೋಗ ಇನ್ನೂ ಕೆಟ್ಟಿಲ್ಲ ಎನ್ನುವುದರ ಸೂಚನೆಯೂ ಆಗಿತ್ತು. ಇದೆಲ್ಲದರ ಜೊತೆಗೆ, ಯಾವ ಹುದ್ದೆಯೂ ಸಿಗದೆ, ಈಗ ಸ್ಪಷ್ಟವಾಗಿ ಬಂಡೆದ್ದಿರುವ ಶರದ್ ಯಾದವ್ ನಿಲುವಿನಿಂದಾಗಿ ಕೂಡ ಜೆಡಿಯುನ ಚೋಟು ಭಾಯ್‌ ಅವರೂ ಪಟೇಲರಿಗೆ ವೋಟು ಹಾಕಿದರು. ಹಾಗೆಯೇ, ನಿರ್ನಾಮವಾಗುತ್ತಿರುವ ಎನ್‌ಸಿಪಿಗೆ ಕಾಂಗ್ರೆಸ್ ಬಿಟ್ಟರೆ ಗತಿಯಿಲ್ಲವೆಂಬುದು ಗ್ಯಾರಂಟಿಯಾಗಿ, ಆ ಶಾಸಕರೂ ಇತ್ತ ಬಂದಿರಬಹುದು.

ಅಹ್ಮದ್ ಪಟೇಲ್ ಚುನಾವಣೆಯ ಮತಗಳ ಎಣಿಕೆಯ ಬಿಕ್ಕಟ್ಟಿನಲ್ಲಿದ್ದ ದಿನವೇ ಕಾಂಗ್ರೆಸ್ ಥಿಂಕ್ ಟ್ಯಾಂಕಿನ ಮತ್ತೊಬ್ಬ ಮುಖ್ಯಸದಸ್ಯ ಜಯರಾಂ ರಮೇಶ್ ಕಾಂಗ್ರೆಸ್ ಮತ್ತೆ ‘ಅ ಆ’ದಿಂದ ಶುರು ಮಾಡಬೇಕು ಎಂದು ಆಂತರಿಕ ವಿಶ್ಲೇಷಣೆ ಆರಂಭಿಸಿದ್ದಾರೆ. ಈ ವರ್ಷದ ಕೊನೆಗೆ ರಾಹುಲ್ ಗಾಂಧಿಯವರನ್ನು ಪಟ್ಟಕ್ಕೇರಿಸಲಿರುವ ಕಾಂಗ್ರೆಸ್, ಅಹ್ಮದ್ ಪಟೇಲ್ ಗೆಲುವಿನ ನಂತರ ಮತ್ತೆ ಹೊಸ ಬಗೆಯ ‘ಅ ಆ’ ದಿಂದ ಶುರು ಮಾಡಬಲ್ಲ ವಿನಯ ತೋರುತ್ತದೆಯೋ ಇಲ್ಲವೋ ಆ ಮಾತು ಬೇರೆ; ಆದರೆ ಗುಜರಾತ್ ಚುನಾವಣೆಗೆ ಹೊಸ ಆತ್ಮವಿಶ್ವಾಸದಿಂದ ಮುನ್ನುಗ್ಗಿ, ದಶಕಗಳ ಆಡಳಿತ ವಿರೋಧಿ ಅಸಮಾಧಾನವನ್ನು ಅಲೆಯನ್ನಾಗಿ ಪರಿವರ್ತಿಸುವ ಸಾಧ್ಯತೆಯಂತೂ ಇವತ್ತು ಕಾಂಗ್ರೆಸ್ಸಿಗಿದೆ.

ಇವತ್ತಿನ ಮಾರ್ಕೆಟ್ ನಿಯಂತ್ರಿತ ಶಕ್ತಿ ರಾಜಕಾರಣದಲ್ಲಿ ಕೇವಲ ಪೇಮೆಂಟ್ ಪಡೆದ ಸೋಷಿಯಲ್ ಮೀಡಿಯಾ ಬೇಟೆಗಾರರಲ್ಲದೆ, ಎಂಜಲು ತಿನ್ನದೆ, ಹೊಸದಾಗಿ ಯೋಚಿಸುವ ಹೊಸ ತಲೆಮಾರು ಕೂಡ ಜಾಗೃತವಾಗಿದೆ ಎಂಬುದನ್ನು ಮರೆಯದಿರೋಣ. ವಿಸ್ಮಯವೆಂಬಂತೆ, ಮುಸಲ್ಮಾನ ಪಟೇಲ್ ಗುಜರಾತಿನಿಂದ ಚುನಾವಣೆ ಗೆಲ್ಲುವ ಕೆಲವೇ ಗಂಟೆಗಳ ಕೆಳಗೆ ಇಂಡಿಯಾದ ಪ್ರಧಾನಮಂತ್ರಿಗಳು ದೇಶದ ದಿನಪತ್ರಿಕೆಗಳ ಮುಖಪುಟದಲ್ಲಿ ಕೋಮುವಾದಮುಕ್ತ ಭಾರತದ ನಿರ್ಮಾಣಕ್ಕಾಗಿ ಕರೆ ಕೊಟ್ಟಿದ್ದಾರೆ.

ಈವರೆಗೆ ಸ್ವಚ್ಛ ಭಾರತ ನಿರ್ಮಾಣದಿಂದ ಹಿಡಿದು ಪ್ರಧಾನಮಂತ್ರಿ ಕೊಟ್ಟಿರುವ ಬಹುತೇಕ ಕರೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದವರು ಕೂಡ ಈ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಒಳ್ಳೆಯದು. ಸಾಧ್ಯವಾದರೆ, ಆ ಕೆಲಸ ಬರಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಿಂದಲೇ ಆರಂಭವಾದರೆ ಇನ್ನಷ್ಟು ಒಳ್ಳೆಯದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT