ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೇರಿ ವಿರುದ್ಧ ಜೈಪುರ ಜಯಭೇರಿ

ಮನ್‌ಪ್ರೀತ್ ಚಿಲ್ಲಾರ್‌–ಜಸ್‌ವೀರ್‌ಸಿಂಗ್‌ ಆಟಕ್ಕೆ ತುಷಾರ್‌ ಪಾಟೀಲ್‌, ಸಂತಾಪನಸೆಲ್ವಂ ಉತ್ತಮ ಸಹಕಾರ
Last Updated 10 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಾಗ್ಪುರ: ಎದುರಾಳಿ ತಂಡದ ಬಲಿಷ್ಠ ರಕ್ಷಣಾ ವಲಯವನ್ನು ಛಿದ್ರ ಮಾಡಿದ ಮಂಜೀತ್ ಚಿಲ್ಲಾರ್ ಮತ್ತು ಜಸ್ವೀರ್‌ ಸಿಂಗ್ ತಮ್ಮ ಅಪ್ರತಿಮ ರೈಡಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದರು.

ಇವರಿಗೆ ರೈಡರ್‌ ತುಷಾರ್ ಪಾಟೀಲ ಮತ್ತು ಆಲ್‌ರೌಂಡರ್‌ ಸಂತಾಪನಸೆಲ್ವಂ ಅತ್ಯುತ್ತಮ ಬೆಂಬಲ ನೀಡಿದರು. ಇದರ ಪರಿಣಾಮ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡದವರು ಪ್ರೊ ಕಬಡ್ಡಿ ಲೀಗ್‌ನ ಗುರುವಾರದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದರು.

ಇಲ್ಲಿನ ಮನ್‌ಕಾಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಎ’ ವಲಯದ ಪಂದ್ಯದಲ್ಲಿ ಸ್ಥಳೀಯ ಪ್ರೇಕ್ಷಕರ ಅಮೋಘ ಬೆಂಬಲದ ನಡುವೆಯೂ ಉತ್ತಮ ಆಟವಾಡಲು ವಿಫಲವಾದ ಪುಣೇರಿ ಪಲ್ಟಾನ್‌ 28–30ರಿಂದ ಸೋತಿತು.

ಕ್ರಮವಾಗಿ ಒಂಬತ್ತು, ಐದು ಮತ್ತು ನಾಲ್ಕು ಪಾಯಿಂಟ್ ಗಳಿಸಿದ ಮಂಜೀತ್, ಜಸ್ವೀರ್‌ಸಿಂಗ್‌ ಮತ್ತು ತುಷಾರ್ ಅವರ ಆಟಕ್ಕೆ ಪುಣೇರಿ ಆಟಗಾರರು ಸರಿಸಾಟಿಯಾಗಲಿಲ್ಲ. ಈ ತಂಡದ ರೋಹಿತ್ ಕುಮಾರ್ ಚೌಧರಿ (4), ದೀಪಕ್‌ ನಿವಾಸ್‌ ಹೂಡ (3) ಮತ್ತು ರವಿ (3) ಮಾತ್ರ ಸಮಾಧಾನಕರ ಆಟವಾಡಿದರು.

ತಲಾ ಮೂವರು ರೈಡರ್‌ಗಳೊಂದಿಗೆ ಉಭಯ ತಂಡಗಳು ಅಂಗಣಕ್ಕೆ ಇಳಿದಿದ್ದವು. ಪುಣೇರಿ ಮೂವರು ಡಿಫೆಂಡರ್‌ಗಳನ್ನು ಕರೆಸಿಕೊಂಡಿದ್ದರೆ ಜೈಪುರ್‌ ತಲಾ ಇಬ್ಬರು ಡಿಫೆಂಡರ್‌ಗಳು ಮತ್ತು ಇಬ್ಬರು ಆಲ್‌ರೌಂಡರ್‌ಗಳ ಮೇಲೆ ಭರವಸೆ ಇರಿಸಿಕೊಂಡಿತ್ತು. ಪುಣೇರಿ ಆಲ್‌ರೌಂಡರ್‌ ಸಂದೀಪ್ ನರ್ವಾಲ್ ಅವರನ್ನು ಕಣಕ್ಕೆ ಇಳಿಸಿತ್ತು.

ಪುಣೇರಿ ವಿರುದ್ಧದ ಈ ಹಿಂದಿನ ಏಳು ಪಂದ್ಯಗಳ ಪೈಕಿ ಐದನ್ನು ಗೆದ್ದಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್‌ ಗುರುವಾರ ಆರಂಭದಲ್ಲೇ ಉತ್ತಮ ಆಟವಾಡಿತು.

ಆಲ್‌ರೌಂಡರ್‌ ಸಂದೀಪ್ ನರ್ವಾಲ್‌ ಮತ್ತು ಎಡಭಾಗದ ಕಾರ್ನರ್‌ನ ಆಧಾರಸ್ತಂಭ ಗಿರೀಶ ಎರ್ನಾಕ್‌ ಪಾಯಿಂಟ್‌ ಗಳಿಸಿ ಪುಣೆಗೆ ಗೌರವ ತಂದುಕೊಟ್ಟರು. ಎದುರಾಳಿ ಪಾಳಯದವರೂ ಪರಿಣಾಮಕಾರಿ ಆಟವಾಡಿದರು. ಹೀಗಾಗಿ ಪಂದ್ಯ ಕ್ಷಣಕ್ಷಣಕ್ಕೂ ರೋಮಾಂಚಕಾರಿಯಾಯಿತು.

ಎಂಟನೇ ನಿಮಿಷದಲ್ಲಿ 6–6ರಿಂದ ಮತ್ತು 15ನೇ ನಿಮಿಷದಲ್ಲಿ 9–9ರಿಂದ ಪಂದ್ಯ ಸಮಬಲವಾಯಿತು. ನಂತರದ ಮೂರು ನಿಮಿಷ ಪುಣೇರಿ ಆಟಗಾರರನ್ನು ಕಟ್ಟಿ ಹಾಕಿದ ಜೈಪುರ ನಾಲ್ಕು ಪಾಯಿಂಟ್ ಕಲೆ ಹಾಕಿ 13–9ರ ಮುನ್ನಡೆ ಸಾಧಿಸಿತು. ಪೂರ್ವಾರ್ಧದ ಮುಕ್ತಾಯಕ್ಕೆ ಒಂದು ನಿಮಿಷ ಇದ್ದಾಗ ಆಲ್‌ಔಟ್ ಆತಂಕದಿಂದ ಪುಣೇರಿ ತಪ್ಪಿಸಿಕೊಂಡಿತಾದರೂ 11–14 ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು.

ತಿರುಗೇಟು ನೀಡಲು ವಿಫಲವಾದ ಪಲ್ಟನ್‌
ಏಕೈಕ ಆಟಗಾರನೊಂದಿಗೆ ಉತ್ತರಾರ್ಧದಲ್ಲಿ ಅಂಗಣಕ್ಕೆ ಇಳಿದ ಪುಣೇರಿ ಆರಂಭದ ನಿಮಿಷದಲ್ಲೇ ಆಲ್‌ಔಟ್‌ ಆಯಿತು. ಇದರ ಬೆನ್ನಲ್ಲೇ ನಿರಂತರ ದಾಳಿ ನಡೆಸಿದ ಜೈಪುರ 22ನೇ ನಿಮಿಷದಲ್ಲಿ ಆರು ಪಾಯಿಂಟ್‌ಗಳ (19–13) ಮುನ್ನಡೆ ಗಳಿಸಿತು.

30ನೇ ನಿಮಿಷದಲ್ಲಿ ಸಂದೀಪ್‌ ನರ್ವಾಲ್‌ ಅವರ ಸೂಪರ್ ರೈಡ್ ಮತ್ತು 38ನೇ ನಿಮಿಷದಲ್ಲಿ ಗಿರೀಶ ಎರ್ನಾಕ್‌–ರೋಹಿತ್ ಚೌಧರಿ ಜೋಡಿ ಸೂಪರ್ ಟ್ಯಾಕಲ್‌ ಮೂಲಕ ಅಪಾಯಕಾರಿ ಜಸ್ವೀರ್‌ ಸಿಂಗ್ ಅವರನ್ನು ಬಲೆಗೆ ಬೀಳಿಸಿದ್ದು ಬಿಟ್ಟರೆ ಪುಣೇರಿ ಪರಿಣಾಮಕಾರಿ ಆಟ ಆಡಲಿಲ್ಲ.

ಅಂತಿಮ ಎರಡು ನಿಮಿಷದಲ್ಲಿ ಸ್ಕೋರ್‌ 30–25 ಅಗಿದ್ದಾಗ ಜೈಪುರವನ್ನು ಆಲ್‌ಔಟ್‌ ಮಾಡಿ ಮುನ್ನಡೆ ಗಳಿಸಲು ಪುಣೇರಿಗೆ ಅವಕಾಶ ಲಭಿಸಿತ್ತು. ಇದನ್ನು ಸದುಪಯೋಗ ಮಾಡಿಕೊಳ್ಳಲು ರೋಹಿತ್ ಚೌಧರಿ ನಡೆಸಿದ ಪ್ರಯತ್ನ ವಿಫಲಗೊಳಿಸಿದ ಜೈಪುರ ಜಯಭೇರಿ ಮೊಳಗಿಸಿತು.

ಮಂಜೀತ್ 200 ಪಾಯಿಂಟ್‌ಗಳ ಒಡೆಯ
ಗುರುವಾರದ ಪಂದ್ಯದಲ್ಲಿ ಗಳಿಸಿದ ಏಳು ಟ್ಯಾಕ್ಲಿಂಗ್‌ ಪಾಯಿಂಟ್‌ಗಳೊಂದಿಗೆ ಆಲ್‌ರೌಂಡರ್‌ ಮಂಜೀತ್ ಚಿಲ್ಲಾರ್‌ 200 ಪಾಯಿಂಟ್‌ಗಳ ಒಡೆಯರೆನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ಅವರು 60 ಪಂದ್ಯಗಳಲ್ಲಿ 197 ಟ್ಯಾಕ್ಲಿಂಗ್ ಪಾಯಿಂಟ್‌ ತಮ್ಮದಾಗಿಸಿಕೊಂಡಿದ್ದರು.

ಗುರುವಾರ ಎರಡು ರೈಡಿಂಗ್ ಪಾಯಿಂಟ್ ಮೂಲಕ ಒಂಬತ್ತು ಪಾಯಿಂಟ್ ಬಗಲಿಗೆ ಹಾಕಿಕೊಂಡಿದ್ದರು. ಒಟ್ಟು ಪಾಯಿಂಟ್‌ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ (61 ಪಂದ್ಯಗಳಲ್ಲಿ 413) ಮನ್‌ಜೀತ್‌ ಹೆಚ್ಚು ಟ್ಯಾಕ್ಲಿಂಗ್ ಪಾಯಿಂಟ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 60 ಪಂದ್ಯಗಳಲ್ಲಿ 177 ಪಾಯಿಂಟ್ ಗಳಿಸಿದ ಮೋಹಿತ್ ಚಿಲ್ಲಾರ್ ಎರಡನೇ ಸ್ಥಾನದಲ್ಲಿದ್ದಾರೆ.

ಇಂದಿನಿಂದ ಅಹಮ್ಮದಾಬಾದ್‌ನಲ್ಲಿ ಪಂದ್ಯಗಳು
ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯ ಎರಡು ಚರಣಗಳು ಮುಕ್ತಾಯಗೊಂಡಿದ್ದು ಮೂರನೇ ಚರಣದ ಪಂದ್ಯಗಳು ಅಹಮದಾಬಾದ್‌ನ ‘ದಿ ಅರೆನಾ’ದಲ್ಲಿ ಶುಕ್ರವಾರದಿಂದ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ಇದೇ ಮೊದಲ ಬಾರಿ ಅಹಮ್ಮದಾಬಾದ್‌ ನಗರದಲ್ಲಿ ನಡೆಯುತ್ತಿವೆ.

ಕಳೆದ ವರ್ಷ ಕಬಡ್ಡಿ ವಿಶ್ವಕಪ್ ಟೂರ್ನಿ ಈ ಕ್ರೀಡಾಂಗಣದಲ್ಲಿ ನಡೆದಿತ್ತು. ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡಕ್ಕೆ ಇದು ತವರಿನ ಅಂಗಳ. ಮೊದಲ ದಿನ ಒಂದೇ ಪಂದ್ಯ ಇರುತ್ತದೆ. ಈ ಪಂದ್ಯದಲ್ಲಿ ಆತಿಥೇಯರು ಮಾಜಿ ಚಾಂಪಿಯನ್‌ ಯು ಮುಂಬಾವನ್ನು ಎದುರಿಸುವರು. ಇಲ್ಲಿ ಒಟ್ಟು 11ಪಂದ್ಯಗಳು ನಡೆಯಲಿದ್ದು ತವರಿನ ತಂಡ ಆರು ಪಂದ್ಯಗಳಲ್ಲಿ ಸೆಣಸಲಿದೆ.

ಹೈದರಾಬಾದ್‌ ಮತ್ತು ನಾಗ್ಪುರ ಚರಣದ ಪಂದ್ಯಗಳು ಮುಗಿದಾಗ ಗುಜರಾತ್ ಫಾರ್ಚೂನ್‌ಜೈಂಟ್ಸ್‌ ತಂಡ ಮೂರು ಪಂದ್ಯಗಳಲ್ಲಿ ಒಟ್ಟು ಎಂಟು ಪಾಯಿಂಟ್‌ಗಳನ್ನು ಕಲೆ ಹಾಕಿದೆ, ತಲಾ ಒಂದು ಜಯ ಮತ್ತು ಒಂದು ಟೈ ಸಾಧಿಸಿರುವ ತಂಡ ಒಂದರಲ್ಲಿ ಸೋತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT