ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇರಾ ಪ್ರಾಜೆಕ್ಟ್ ನೋಂದಣಿ ಸವಾಲು

Last Updated 10 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ (ರೇರಾ) ನಿಯಮಾವಳಿಗಳನ್ನು ರಾಜ್ಯ ಸರ್ಕಾರ ರೂಪಿಸಿ, ಅಧಿಕೃತವಾಗಿ ಜಾರಿಗೊಳಿಸಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶಿಸ್ತು ತರುವ ಉದ್ದೇಶದಿಂದ ಕೇಂದ್ರ ಜಾರಿಗೊಳಿಸಿದ್ದ ಕಾಯ್ದೆ ಪ್ರಕಾರ, ರಿಯಲ್ ಎಸ್ಟೇಟ್ ಉದ್ಯಮಗಳು ತಮ್ಮ ಯೋಜನೆಗಳನ್ನು ರೇರಾ ಪ್ರಾಧಿಕಾರದಡಿ ನೋಂದಾಯಿಸಿಕೊಳ್ಳಬೇಕಿದೆ. ಜತೆಗೆ ಏಜೆಂಟರು (ಬ್ರೋಕರ್ಸ್) ಕೂಡಾ ಕಾಯ್ದೆ ವ್ಯಾಪ್ತಿಗೆ ಬರುತ್ತಿದ್ದು, ಅವರ ನೋಂದಣಿಯೂ ಕಡ್ಡಾಯ. ಆದರೆ ಸರ್ಕಾರದ ನಿರ್ದೇಶನದಂತೆ ಜುಲೈ 31ರಂದು ನೋಂದಣಿ ಅವಧಿ ಮುಗಿದಿದೆ.

ಜುಲೈ 24ರಂದು ಆರಂಭವಾದ ನೋಂದಣಿ ಪ್ರಕ್ರಿಯೆಗೆ 31ರ ಗಡುವು ವಿಧಿಸಲಾಗಿತ್ತು. ಕೊನೆಯ ದಿನ ಸುಮಾರು 990 ಯೋಜನೆಗಳು ಹಾಗೂ 354 ಬ್ರೋಕರ್‍ಗಳ ನೋಂದಣಿಯಾಗಿದೆ. ಆದರೆ ಒಂದೇ ವಾರದ ಅವಧಿಯಲ್ಲಿ ಎಲ್ಲ ಯೋಜನೆಗಳ ನೋಂದಣಿ ಪೂರ್ಣಗೊಳಿಸುವುದು ಉದ್ಯಮ ವಲಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಒಂದು ವಾರದ ಅವಧಿಯಲ್ಲಂತೂ ತಮ್ಮ ಯೋಜನೆಗಳನ್ನು ನೋಂದಾಯಿಸಲು ಕಂಪೆನಿಗಳು ಭಾರಿ ಕಸರತ್ತು ನಡೆಸಿದವು. ಆನ್‍ಲೈನ್ ಪೋರ್ಟಲ್‍ನಲ್ಲಿ ಎಲ್ಲ ಕಂಪೆನಿಗಳು ನೋಂದಣಿಗೆ ಮುಂದಾಗಿದ್ದರಿಂದ ಸಮಸ್ಯೆ ಎದುರಿಸಬೇಕಾಯಿತು. ಬೇರೆ ರಾಜ್ಯಗಳು ನೋಂದಣಿ ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿವೆ. ಹಾಗೆಯೇ ಕರ್ನಾಟಕದಲ್ಲೂ ಅವಧಿ ವಿಸ್ತರಿಸಬೇಕು ಎಂಬುದು ರಿಯಲ್ ಎಸ್ಟೇಟ್ ಕಂಪೆನಿಯೊಂದರ ಮುಖ್ಯಾಧಿಕಾರಿಯ ಆಗ್ರಹ. ಕೇವಲ ಒಂದೇ ವಾರದಲ್ಲಿ ನೋಂದಣಿ ಕಷ್ಟ ಎಂಬುದು ಅವರ ವಾದ.

ರೆಡ್‍ವುಡ್ಸ್ ಪ್ರಕಾರ, ಬೆಂಗಳೂರು ಒಂದರಲ್ಲೇ ಸುಮಾರು 86 ಸಾವಿರ ವಸತಿ ಯೋಜನೆಗಳು ಪ್ರಗತಿಯಲ್ಲಿವೆ. 2015ರಲ್ಲಿ ಇವು ಶುರುವಾಗಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ ಸುಮಾರು 10 ಸಾವಿರ ಬ್ರೋಕರ್‍ಗಳು ಕೆಲಸ ಮಾಡುತ್ತಿದ್ದಾರೆ.

ಆದರೆ ನೋಂದಣಿ ಅವಧಿಯನ್ನು ಅಧಿಕೃತವಾಗಿ ವಿಸ್ತರಿಸಿಲ್ಲವಾದರೂ ನೋಂದಣಿ ಆಗಬಯಸುವವರಿಗೆ ಸರ್ಕಾರದ ಜತೆ ನೆರಾಡ್ಕೊ (ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಕೌನ್ಸಿಲ್) ಕೂಡಾ ನೆರವು ನೀಡುತ್ತಿವೆ ಎಂದು ರಿಯಲ್ ಎಸ್ಟೇಟ್ ವಲಯದ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ. ಒಂದೆರಡು ತಿಂಗಳಲ್ಲಿ ಈ ಗೊಂದಲ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ಅವರದ್ದು.
ನೆರಾಡ್ಕೊ ನೆರವು: ರೇರಾ ಬಗ್ಗೆ ಗ್ರಾಹರಕು, ಬಿಲ್ಡರ್‍ಗಳಿಗೆ ಸರಿಯದ ಮಾಹಿತಿ ಕೊರತೆ ಇರುವುದೇ ಎಲ್ಲ ಗೊಂದಲಗಳಿಗೆ ಕಾರಣ ಎನ್ನುತ್ತಾರೆ ನೆರಾಡ್ಕೊದ ಜಂಟಿ ಕಾರ್ಯದರ್ಶಿ ಸುನಿಲ್ ಗುಪ್ತಾ.
‘ಬೆಂಗಳೂರಿನಲ್ಲಿ ಜನರಿಗೆ ಹಾಗೂ ಬಿಲ್ಡರ್‍ಗಳಿಗೆ ಈ ಬಗ್ಗೆ ಅರಿವು ಮೂಡಿಸಲು ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ. ಅಲ್ಲಿ ರೇರಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಒಂದಿಷ್ಟು ಸಮಯ ನಡೆಯಲಿದೆ. ನೆರಾಡ್ಕೊದಿಂದ ಸಾಧ್ಯವಿರುವ ಎಲ್ಲ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಕ್ರೆಡಾಯ್ ಕೂಡಾ ಅವರ ಸದಸ್ಯರಿಗೆ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದೆ’ ಎನ್ನುತ್ತಾರೆ ಸುನಿಲ್ ಗುಪ್ತಾ.

ಒಟ್ಟಿನಲ್ಲಿ ರೇರಾ ಕಾಯ್ದೆಯಡಿ ರೂಪಿಸಿರುವ ನಿಯಮಗಳಿಂದಾಗಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಕಾಲಮಿತಿ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತದೆ ಉದ್ಯಮ ವಲಯ. ಬಿಲ್ಡರ್‍ಗಳಿಗೆ ನೆರವಾದಂತೆ ಗ್ರಾಹಕರಿಗೂ ಇದರಿಂದ ಅನುಕೂಲ ಎಂಬ ಅಭಿಪ್ರಾಯವೂ ಬಲಗೊಳ್ಳುತ್ತಿದೆ. ಈ ಗೊಂದಲಗಳು ತಾತ್ಕಾಲಿಕ ಎನ್ನುತ್ತವೆ ಕಂಪೆನಿಗಳು.

***

ಚಾಲ್ತಿಯಲ್ಲಿರುವ ಯೋಜನೆಗಳನ್ನು ರೇರಾ ಕಾಯ್ದೆಯಡಿ ನೋಂದಣಿ ಮಾಡುವ ಅವಧಿಯನ್ನು ವಿಸ್ತರಿಸಿದರೆ ನಿಜಕ್ಕೂ ಸಹಾಯವಾಗಲಿದೆ. ಈವರೆಗೆ ಇಂತಹ ಘೋಷಣೆ ಆಗಿಲ್ಲ. ಸಂಬಂಧಪಟ್ಟ ಪ್ರಾಧಿಕಾರ ಹೊರಿಡಿಸಿದ್ದ ಅಧಿಸೂಚನೆ ಪ್ರಕಾರ ನೋಂದಣಿ ಪ್ರಕ್ರಿಯೆ ಮುಗಿದಿದೆ. ವಿಸ್ತರಣೆಯಾದಲ್ಲಿ ಅದು ಅನುಕೂಲಕರ.

ಆಶಿಶ್ ಪುರವಂಕರ, ಎಂಡಿ, ಪುರವಂಕರ

***

ನೋಂದಣಿ ಅವಧಿ ವಿಸ್ತರಣೆ ಮಾಡಿದರೆ ಚಿಕ್ಕಪುಟ್ಟ ಬಿಲ್ಡರ್‌ಗಳಿಗೆ ಅನುಕೂಲವಾಗುತ್ತಿತ್ತು. ಸಮಯ ಕಡಿಮೆ ಇದ್ದುದರಿಂದ ಗೊಂದಲ ಉಂಟಾಗಿದೆ. ರೇರಾ ಕಾಯ್ದೆಯಿಂದ ಅನುಕೂಲವೇ ಹೆಚ್ಚು.
ನರಸಿಂಹ ಸ್ವಾಮಿ ಎನ್‌. ವಿಬಿಎಚ್‌ಸಿಯ ಮಾರುಕಟ್ಟೆ ಮತ್ತು ಗ್ರಾಹಕ ಸೇವೆ ಮುಖ್ಯಸ್ಥ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT