ಸಂಸ್ಕೃತಿಯ ಪೋಷಣೆಗೆ ಸಂವಿಧಾನದ ಆಸರೆ ಬೇಕೇ?

ವೀರಶೈವ ಮತ್ತು ಲಿಂಗಾಯತ ವಿವಾದದಲ್ಲಿ ಎರಡು ಪ್ರಶ್ನೆಗಳಿವೆ. ಮೊದಲನೆಯದು, ವೀರಶೈವ ಮತ್ತು ಲಿಂಗಾಯತ ಇವುಗಳು ಒಂದೆಯೇ ಅಥವಾ ಬೇರೆಯವೇ ಎನ್ನುವುದು. ಎರಡನೆಯದು, ವೀರಶೈವ- ಲಿಂಗಾಯತ ಮತ್ತು ಹಿಂದೂ ಧರ್ಮ ನಡುವಿನ ಸಂಬಂಧ. ಈ ಎರಡೂ ಪ್ರಶ್ನೆಗಳು ಬಹುಮುಖ್ಯವಾಗಿ ವೀರಶೈವ- ಲಿಂಗಾಯತ ಸಮುದಾಯವೇ ನಿರ್ಧರಿಸಿಕೊಳ್ಳಬೇಕಾಗಿರುವ ಆಂತರಿಕ ವಿಚಾರ.

ಸಾಂದರ್ಭಿಕ ಚಿತ್ರ

ವೀರಶೈವ ಮತ್ತು ಲಿಂಗಾಯತ ವಿವಾದದಲ್ಲಿ ಎರಡು ಪ್ರಶ್ನೆಗಳಿವೆ. ಮೊದಲನೆಯದು, ವೀರಶೈವ ಮತ್ತು ಲಿಂಗಾಯತ ಇವುಗಳು ಒಂದೆಯೇ ಅಥವಾ ಬೇರೆಯವೇ ಎನ್ನುವುದು. ಎರಡನೆಯದು, ವೀರಶೈವ- ಲಿಂಗಾಯತ ಮತ್ತು ಹಿಂದೂ ಧರ್ಮ ನಡುವಿನ ಸಂಬಂಧ. ಈ ಎರಡೂ ಪ್ರಶ್ನೆಗಳು ಬಹುಮುಖ್ಯವಾಗಿ ವೀರಶೈವ- ಲಿಂಗಾಯತ ಸಮುದಾಯವೇ ನಿರ್ಧರಿಸಿಕೊಳ್ಳಬೇಕಾಗಿರುವ ಆಂತರಿಕ ವಿಚಾರ. ಅಂದರೆ ತಾವು ಯಾರು ಮತ್ತು ತಮ್ಮ ನಂಬಿಕೆಗಳು ಹಾಗೂ ಆಚರಣೆಗಳು ಯಾವುವು ಎನ್ನುವುದನ್ನು ಸಮುದಾಯಗಳೇ ನಿರ್ಧರಿಸಿಕೊಳ್ಳಬೇಕು.

ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಆಗುವಂತೆ, ಧರ್ಮಸ್ಥಾಪನೆಯ ಅಥವಾ ಸಮುದಾಯದ ಹುಟ್ಟಿನ ಎರಡು ವಿಭಿನ್ನ ಕಥನಗಳನ್ನು ವೀರಶೈವ- ಲಿಂಗಾಯತರ ವಿಷಯದಲ್ಲಿಯೂ ಕಾಣುತ್ತೇವೆ. ಇವುಗಳಲ್ಲಿ ವಚನ ಪರಂಪರೆ, ಇಷ್ಟಲಿಂಗಧಾರಣೆಗಳನ್ನು ಎತ್ತಿಹಿಡಿದು ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸುವ ಒಂದು ಕಥನವಿದೆ. ಮತ್ತೊಂದು ಕಥನದಲ್ಲಿ ವೀರಶೈವವನ್ನು ಅನಾದಿಯೆಂದು ಕರೆಯುವ, ಸಂಸ್ಕೃತ ಮೂಲದ ವೇದಾಗಮಗಳನ್ನು ವಚನ ಪರಂಪರೆಯ ಕೆಲವು ಆಯಾಮಗಳೊಡನೆ ಕಸಿ ಮಾಡುವ ಪ್ರಯತ್ನವನ್ನು ನಾವು ಗಮನಿಸಬಹುದು. ಎರಡೂ ಕಥನಗಳು ಅವುಗಳು ಪುನಾರಚಿಸಲು ಪ್ರಯತ್ನಿಸುತ್ತಿರುವ ಸಂಕೀರ್ಣ ಐತಿಹಾಸಿಕ ವಾಸ್ತವವನ್ನು, ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಗಳನ್ನು ಸರಳೀಕರಿಸುತ್ತವೆ. ಹಾಗಾಗಿಯೇ ನಾನು ಈ ಎರಡೂ ಕಥನಗಳನ್ನು ಸಮರ್ಥಿಸಿಕೊಳ್ಳಲು ಅಗತ್ಯವಿರುವ ಬೌದ್ಧಿಕ ಸಾಮಗ್ರಿಗಳು ಎರಡೂ ಪಕ್ಷದವರಿಗೆ ದೊರಕುತ್ತವೆ ಎನ್ನುವ ಅಂಶವನ್ನು ಕಳೆದ ವಾರ ಗುರುತಿಸಿದ್ದೆ. ಇವುಗಳಲ್ಲಿ ಸಮುದಾಯದ ಒಲವು, ಒಮ್ಮತಗಳು ಯಾವ ಕಥನದ ಕಡೆಗೆ, ಯಾವ ನಂಬಿಕೆಗಳು ಮತ್ತು ಆಚರಣೆಗಳ ಕಡೆಗಿವೆ ಎನ್ನುವುದನ್ನು ವೀರಶೈವ- ಲಿಂಗಾಯತರೇ ತೀರ್ಮಾನಿಸಬೇಕು. ಇದೊಂದು ಸಾಮಾಜಿಕ ಮತ್ತು ರಾಜಕೀಯ ಆಯ್ಕೆ ಎನ್ನುವುದನ್ನು ಮರೆಯಬಾರದು.

ಇದು ನಿಜವಾದರೆ ನಮ್ಮ ಮುಂದೆ ಎರಡು ಪ್ರಶ್ನೆಗಳು ಏಳುತ್ತವೆ. ಮೊದಲನೆಯದು, ಎಲ್ಲ ಧರ್ಮಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಸ್ಥಾಪಕ ಹಾಗೂ ಆತನಿಗೆ ಜ್ಞಾನೋದಯವಾದ ಪ್ರಕ್ರಿಯೆಯ ಬಗ್ಗೆ ಮುಖ್ಯವಾದ ನಂಬಿಕೆಗಳು ಇರುತ್ತವೆ. ಅವುಗಳನ್ನು ನಮಗೆ ದೊರೆತಿರುವ ಸ್ವಾಭಾವಿಕವಾದ ನಂಬಿಕೆಗಳು ಎಂದೇ ಭಾವಿಸುತ್ತೇವೆ. ಅಂದರೆ ಇಲ್ಲಿ ತತ್ವಮೀಮಾಂಸೆ ಅಥವಾ ಮೆಟಾಫಿಸಿಕ್ಸ್‌ಗೆ ಸಂಬಂಧಿಸಿದ ವಿಚಾರಗಳನ್ನು ಇತಿಹಾಸದ ಪರೀಕ್ಷೆಗೆ ಒಡ್ಡುವುದಿಲ್ಲ. ಮಿಕ್ಕಂತೆ ನಮಗೆ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಇತಿಹಾಸದ ರಚನೆಯಾಗುತ್ತದೆ. ಧರ್ಮಸ್ಥಾಪಕರ ಬದುಕಿನ ಸಮಯ ಮತ್ತು ಜ್ಞಾನೋದಯದ ಕ್ಷಣದಿಂದ ಧರ್ಮಸ್ಥಾಪನೆಯಾಯಿತು ಎನ್ನುವುದು ನಿಜ. ಹಾಗಾದರೆ ಮತ್ತೆ ಸಮುದಾಯಗಳು ಆಯ್ಕೆ ಮಾಡಬೇಕಿರುವುದು ಏನನ್ನು ಮತ್ತು ಹೇಗೆ? ಈ ಮುಖ್ಯವಾದ ಪ್ರಶ್ನೆಗಳಿಗೆ ಒಂದು ಸರಳವಾದ ಉತ್ತರವೂ ಇದೆ. ಬುದ್ಧ, ಮೊಹಮ್ಮದ್, ಮಹಾವೀರ, ಏಸುಕ್ರಿಸ್ತ ಹೀಗೆ ಧರ್ಮಸ್ಥಾಪಕರು ತಾವು ಪಡೆದುಕೊಂಡ ಅರಿವನ್ನು ಹಂಚಿಕೊಂಡರು ಎನ್ನುವುದು ನಿಜ. ಅಂತಹ ಅರಿವನ್ನು ಕಾಲದಿಂದ ಕಾಲಕ್ಕೆ ವಿಭಿನ್ನವಾಗಿ ಅರ್ಥೈಸಿಕೊಂಡು, ಅವುಗಳ ಸುತ್ತ ಹೊಸ ನಂಬಿಕೆಗಳು, ಆಚರಣೆಗಳು ಮತ್ತು ಜೀವನವಿಧಾನಗಳನ್ನು ಧಾರ್ಮಿಕ ಸಮುದಾಯಗಳು ಕಟ್ಟಿಕೊಳ್ಳುತ್ತಲೇ ಬಂದಿವೆ. ಇಂತಹ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ ತಮ್ಮ ಧರ್ಮಸ್ಥಾಪಕರ ತತ್ವಗಳನ್ನು ಸರಿಯಾಗಿಯೇ ವ್ಯಾಖ್ಯಾನಿಸುತ್ತಿದ್ದೇವೆ ಎಂದು ವಾದಿಸುತ್ತಲೇ, ಹೊಸ ಸಂದರ್ಭಕ್ಕೆ ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ನಡೆಯುವ ಆಯ್ಕೆಗಳು ಧರ್ಮ ಅಥವಾ ತತ್ವಮೀಮಾಂಸೆಗೆ ಸಂಬಂಧಿಸಿದ ವಿಚಾರಗಳಲ್ಲ. ನಾನು ಮೇಲೆ ಗುರುತಿಸಿದಂತೆ ನಿರ್ದಿಷ್ಟ ಐತಿಹಾಸಿಕ ಸಂದರ್ಭಗಳಲ್ಲಿ ನಾವು ಮಾಡುವ ಸಾಮಾಜಿಕ ಮತ್ತು ರಾಜಕೀಯ ಆಯ್ಕೆಗಳು. ಈ ಹಿನ್ನೆಲೆಯಲ್ಲಿ ವೀರಶೈವ -ಲಿಂಗಾಯತರಲ್ಲಿ ನಡೆಯುತ್ತಿರುವುದು ಇಂತಹ ಒಂದು ಪ್ರಕ್ರಿಯೆಯೇ. ಹಾಗಾಗಿ ಹಿಂದೂ ಧರ್ಮದ ಜೊತೆಗೆ ತಮ್ಮ ಸಂಬಂಧ ಹಿಂದೆ ಹೇಗಿತ್ತು, ಇಂದು ಹೇಗಿರಬೇಕು ಎನ್ನುವ ಜಿಜ್ಞಾಸೆಯನ್ನು ಅವರು ನಡೆಸಿಕೊಳ್ಳುತ್ತಿದ್ದಾರೆ.

ನಮ್ಮ ಮುಂದೆ ಏಳುವ ಎರಡನೆಯ ಪ್ರಶ್ನೆ, ಇತಿಹಾಸಕ್ಕೆ ಸಂಬಂಧಿಸಿದ್ದು. ವೀರಶೈವ- ಲಿಂಗಾಯತದ ಹುಟ್ಟಿಗೆ ಸಂಬಂಧಿ­ಸಿದ ಎರಡು ವಿಭಿನ್ನ ಕಥನ­ಗಳಿವೆ ಎಂದರೆ ಕನಿಷ್ಠ ಮಟ್ಟದ ವಸ್ತು­ನಿಷ್ಠತೆಯಿರುವ ಐತಿಹಾಸಿಕ ಕಥನವನ್ನು ಒಬ್ಬ ವೃತ್ತಿಪರ ಇತಿಹಾಸಕಾರ ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ. ಲಭ್ಯವಿರುವ ಆಧಾರಗಳನ್ನು ಬಳಸಿ ಕೆಲವು ತೀರ್ಮಾನಗಳನ್ನು ಹೇಳಲು ಸಾಧ್ಯವಿದೆ. ಇಂದಿನ ವೀರಶೈವ- ಲಿಂಗಾ­ಯತ ಚರ್ಚೆಯ ಒಂದು ವಿವಾದಾತ್ಮಕ ವಿಚಾರವನ್ನು ಉದಾಹರಣೆಯಾಗಿ ಪರಿ­ಗಣಿ­ಸೋಣ. 800 ವರ್ಷಗಳಲ್ಲಿ ವೀರಶೈವ- ಲಿಂಗಾಯತರು ಇಷ್ಟಲಿಂಗ ಪೂಜೆಯನ್ನು ತಮ್ಮ ಮುಖ್ಯ ಆಚರಣೆಯಾಗಿ ಹೊಂದಿದ್ದರು, ಸ್ಥಾವರ ದೇವಾಲಯಗಳಲ್ಲಿ ಪೂಜಿಸುವುದನ್ನಲ್ಲ ಎನ್ನುವುದು ನಮ್ಮಲ್ಲಿರುವ ಸಾಮಾನ್ಯ ಗ್ರಹಿಕೆ. ಈ ಮಾತಿಗೆ ಕೆಲವು ಅಪ­ವಾದಗಳಿವೆ ಎಂದು ನಮಗೆ ಒಮ್ಮೊಮ್ಮೆ ತೋರಿದರೂ, ಈ ಸಮುದಾಯದಲ್ಲಿ ಹೆಚ್ಚಿನ ಮಟ್ಟಿಗೆ ದೀಕ್ಷೆಯ ಮೂಲಕ ಪಡೆದ ಇಷ್ಟಲಿಂಗವನ್ನು, ಅದನ್ನು ಧರಿಸಿರುವ ವ್ಯಕ್ತಿಯೇ ಪೂಜಿಸುವುದು ವಾಡಿಕೆ. ಜೀವನಚಕ್ರ (ಲೈಫ್‌ಸೈಕಲ್) ಆಚರಣೆಗಳನ್ನು ವೀರಶೈವ - ಲಿಂಗಾಯತ ಸಮುದಾಯಕ್ಕೆ ಸೇರಿದ ಪರಿಣತರು (ಜಂಗಮರು ಅಥವಾ ಗುರುಗಳು) ನಡೆಸಿ­ಕೊಡುತ್ತಾರೆ. ವಿರಕ್ತ ಮತ್ತು ಪಂಚ­ಪೀಠ ಪರಂಪರೆಗಳೆರಡಕ್ಕೆ ಸೇರಿದವರಲ್ಲಿ ಇಷ್ಟರಮಟ್ಟಿನ ಸಾಮಾನ್ಯ ಅಂಶಗಳು ಇರುತ್ತವೆ. ಹಾಗಾಗಿಯೇ ದೀಕ್ಷೆಯ ಮೂಲಕ ವೀರಶೈವ-ಲಿಂಗಾಯತಕ್ಕೆ ಪರಿವರ್ತನೆಯಾಗುವ ಅವಕಾಶ ಇಂದಿಗೂ ಉಳಿದುಬಂದಿದೆ. ಈ ದೃಷ್ಟಿಯಲ್ಲಿ ನೋಡಿದಾಗ, ಸಿಖ್ಖರು, ಜೈನರು ಮತ್ತು ಬೌದ್ಧರಂತೆ ವೀರಶೈವ - ಲಿಂಗಾಯತರು ಬೇರೆಯದೇ ಆದ ಸಮುದಾಯವನ್ನು ಐತಿಹಾಸಿಕವಾಗಿ ಕಟ್ಟಿಕೊಂಡರು, ಅದಕ್ಕೊಂದು ಮಠಗಳ ಸಾಂಸ್ಥಿಕ ಚೌಕಟ್ಟನ್ನು ಹಾಕಿಕೊಂಡರು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಅವರ ಸಮುದಾಯವು ಕಬೀರ್‌ಪಂಥ ಅಥವಾ ಶ್ರೀವೈಷ್ಣವರಿಗಿಂತ ಸಾಮಾಜಿಕವಾಗಿ (ಸೋಶಿಯಲಾಜಿಕಲಿ) ಭಿನ್ನವಾದುದು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಈ ಬಗೆಯ ಚರ್ಚೆಯ ಮೂಲಕ ತಕ್ಕಮಟ್ಟಿಗೆ ವಸ್ತುನಿಷ್ಠವಾದ ತೀರ್ಮಾನಗಳನ್ನು ವೃತ್ತಿಪರ ಇತಿಹಾಸಕಾರರು ನೀಡಬಹುದು. ಆದರೆ ವೀರಶೈವ- ಲಿಂಗಾಯತವು ಇಂದಿನ ಹಿಂದೂ ಧರ್ಮದಿಂದ ಭಿನ್ನವಾಗಿ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತದೆಯೇ ಎನ್ನುವುದು ಆ ಸಮುದಾಯವೇ ಮಾಡಬೇಕಿರುವ ರಾಜಕೀಯ ಆಯ್ಕೆ. ಈ ಆಯ್ಕೆಗೆ ಇರುವ ಮತ್ತೊಂದು ರಾಜಕಾರಣದ ಆಯಾಮವೆಂದರೆ ಅಸ್ತಿತ್ವ ಮತ್ತು ಅನನ್ಯತೆಗಳನ್ನು ಕುರಿತಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ಹೋಗಬೇಕಿರುವ ಅಗತ್ಯವೇನು ಎನ್ನುವುದು. ನಾನು ಮೇಲೆ ಚರ್ಚಿಸಿರುವ ರೀತಿಯ ಆಂತರಿಕ ಚರ್ಚೆಗಳು ಮತ್ತು ಆಯ್ಕೆಗಳನ್ನು ಎಲ್ಲ ಸಮುದಾಯಗಳೂ ನಡೆಸುತ್ತಲೇ ಇರುತ್ತವೆ. ಆದರೆ ಸರ್ಕಾರವು ತನ್ನ ಸಂಪನ್ಮೂಲಗಳನ್ನು ಹಂಚುವಾಗ, ವಿವಿಧ ಸಮುದಾಯಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಪೋಷಿಸುವ ರೀತಿಯ ನಾಗರಿಕ ಸಮಾಜವನ್ನು ಕಟ್ಟುವಾಗ, ಸಮುದಾಯಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ನೀತಿಯನ್ನು ರೂಪಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿಯೇ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಕಾರ್ಯಕ್ರಮಗಳು ಬಹುತೇಕ ಎಲ್ಲ ಪ್ರಜಾಸತ್ತಾತ್ಮಕ ದೇಶಗಳಲ್ಲಿಯೂ ಇವೆ.

ವೀರಶೈವ- ಲಿಂಗಾಯತರು ದಶವಾರ್ಷಿಕ ಜನಗಣತಿಯಲ್ಲಿ ಪ್ರತ್ಯೇಕ ಸಂಖ್ಯೆಯನ್ನು ಕೇಳಿದ್ದು ಈ ಹಿನ್ನೆಲೆಯಲ್ಲಿಯೇ. ಬಹಳ ಹಳೆಯದೇ ಆದ ಈ ಬೇಡಿಕೆಗೆ ಎರಡು ಬಗೆಯ ತಾರ್ಕಿಕತೆಯಿದೆ. 2000ದ ಜನಗಣತಿ ಮತ್ತು ಅದಕ್ಕೂ ಮೊದಲು ಈ ಬೇಡಿಕೆ ಕೇಳಿಬರುತ್ತಿದ್ದುದು ವೀರಶೈವ- ಲಿಂಗಾಯತರಿಗೆ ಹಿಂದುಳಿದ ವರ್ಗಗಳ ಪಟ್ಟ ದೊರಕುವುದಿಲ್ಲ ಎನ್ನುವ ಕಾರಣದಿಂದ. 2000ದಲ್ಲಿ ವೀರಶೈವ ಮಹಾಸಭಾ ನಡೆಸಿದ ಚಳವಳಿಯ ಸಂದರ್ಭದಲ್ಲಿ ಮುಂದಿಡಲಾದ ವಾದವು ಹೀಗಿತ್ತು. 1931ರ ನಂತರದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯದೆ ಇದ್ದ ಕಾರಣ, ವೀರಶೈವ - ಲಿಂಗಾಯತರ ಜನಸಂಖ್ಯೆಯ ಅಂದಾಜು ಸರಿಯಾಗಿ ಆಗಿಲ್ಲ. ಈಗ ಪ್ರತ್ಯೇಕವಾದ ಸಂಖ್ಯೆಯನ್ನು ನೀಡಿದರೆ ಆಗ ದೊರಕುವ ಸರಿಯಾದ ಸಂಖ್ಯೆಯು ಲಿಂಗಾಯತರನ್ನು ಹಿಂದುಳಿದವರು ಎಂದು ಸ್ಥಾಪಿಸಲು ಸಹಕಾರಿಯಾಗುತ್ತದೆ. ಈ ವಾದದ ತರ್ಕ ಇಷ್ಟೇ. ಇಂದು ವೀರಶೈವ- ಲಿಂಗಾ­ಯತರನ್ನು ಮುಂದುವರೆದ ಜನಾಂಗ ಎಂದು ಗುರುತಿಸಲಾಗಿದ್ದರೆ, ಅದಕ್ಕೆ ಕಾರಣವೆಂದರೆ ಈ ಸಮುದಾಯದ ಜನಸಂಖ್ಯೆಯ ಅಂದಾಜು ಸರಿ­ಯಿಲ್ಲದಿರುವುದು. ಈ ಸಮುದಾಯಕ್ಕೆ ಸೇರಿದ ಎಲ್ಲರನ್ನೂ ಎಣಿಸಿ, ಅವರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸ್ಥಿತಿಗತಿಗಳ ಸರಿಯಾದ ಚಿತ್ರಣ ಒದಗಿಸಿದರೆ ವೀರಶೈವ-ಲಿಂಗಾಯತರು ಸಹ ಹಿಂದು­ಳಿದವರಾಗುತ್ತಾರೆ. ಪಟೇಲರು ಮತ್ತು ಮರಾಠರು ಸಹ ಇಂತಹ ವಾದಗಳನ್ನೇ ಮುಂದಿಡುತ್ತ, ಮೀಸಲಾತಿಯನ್ನು ಕೇಳುತ್ತಿದ್ದಾರೆ.

ಇಂದು ಲಿಂಗಾಯತರು ಅಲ್ಪ­ಸಂಖ್ಯಾತ ಸ್ಥಾನಮಾನಗಳನ್ನು ಕೇಳಲು ಬೇರೊಂದು ತರ್ಕವಿದೆ. ಅದೇನೆಂದರೆ ಅಲ್ಪಸಂಖ್ಯಾತ ಸಂಸ್ಥೆಗಳಿಗೆ, ಅದರಲ್ಲೂ ಶಿಕ್ಷಣ ಸಂಸ್ಥೆಗಳಿಗೆ, ಸಾಂವಿಧಾನಿಕವಾಗಿ ದೊರಕುವ ವಿಶೇಷ ಸವಲತ್ತುಗಳು. ನಾಲ್ಕು ವಿಶ್ವವಿದ್ಯಾಲಯಗಳು, ತಾಂತ್ರಿಕ, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ವೀರಶೈವ - ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ದೊರಕಿದರೆ ಆರ್.ಟಿ.ಇ. ಸೇರಿದಂತೆ ಸರ್ಕಾರದ ಹಲವಾರು ಕಡ್ಡಾಯ ನಿಯಮಗಳನ್ನು ಪಾಲಿಸಬೇಕಿಲ್ಲ. ಈ ಪ್ರಲೋಭನೆಯ ಕಾರಣದಿಂದಲೇ ರಾಮಕೃಷ್ಣ ಮಿಷನ್ ಮತ್ತು ಸ್ವಾಮಿನಾರಾಯಣ ಸಂಪ್ರದಾಯದವರೆಲ್ಲರೂ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಳುತ್ತಿರುವುದು. ಅವರಿಗೆ ಹೋಲಿಸಿದಾಗ, ಖಂಡಿತವಾಗಿಯೂ ಲಿಂಗಾಯತರ ವಾದ ಹೆಚ್ಚು ಸಮರ್ಥನೀಯವಾದುದು.
ಆದರೆ ನಮ್ಮ ಮುಂದಿರುವ ಪ್ರಶ್ನೆ ಬೇರೆಯದು: ಲಿಂಗಾಯತರು ಹಿಂದೂಗಳಲ್ಲದಿದ್ದರೂ ಅವರ ಸಂಸ್ಕೃತಿಯನ್ನು ಪೋಷಿಸಿಕೊಳ್ಳಲು ಈ ಬಗೆಯ ಸಾಂವಿಧಾನಿಕ ರಕ್ಷಣೆಯ ಅಗತ್ಯವಿದೆಯೇ? ಈ ನೈತಿಕ ಪ್ರಶ್ನೆಗೂ ಉತ್ತರವು ಸಮುದಾಯದೊಳಗಿನಿಂದಲೇ ಬಂದರೆ ಉಚಿತ.

Comments
ಈ ವಿಭಾಗದಿಂದ ಇನ್ನಷ್ಟು
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ನಿಜದನಿ
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

26 Jan, 2018

ನಿಜದನಿ
ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ....

12 Jan, 2018
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ನಿಜದನಿ
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

29 Dec, 2017
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ನಿಜದನಿ
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

15 Dec, 2017
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ನಿಜದನಿ
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

30 Nov, 2017