ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಬರೆಯಲು ಭಾರತ ಕಾತರ

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕ್ಯಾಂಡಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ ಈಗ ಐತಿಹಾಸಿಕ ಸರಣಿ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.

ಶ್ರೀಲಂಕಾ ವಿರುದ್ಧದ ಮೂರನೇ ಪಂದ್ಯ ಶನಿವಾರ ಶುರುವಾಗಲಿದ್ದು ಈ ಪಂದ್ಯದಲ್ಲಿ ಗೆದ್ದು ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಲು ವಿರಾಟ್‌ ಕೊಹ್ಲಿ ಪಡೆ ಕಾತರಿಸುತ್ತಿದೆ. ಇದಕ್ಕಾಗಿ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಭಾರತ ತಂಡ ಅಂತಿಮ ಹಣಾಹಣಿಯಲ್ಲಿ ಗೆದ್ದರೆ, ವಿದೇಶಿ ನೆಲದಲ್ಲಿ ಆಡಿದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಬಾರಿಗೆ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿದ  ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲಿದೆ.

ಗಾಲ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 304ರನ್‌ಗಳಿಂದ ಆತಿಥೇಯರನ್ನು ಹಣಿದಿದ್ದ ಭಾರತ, ಕೊಲಂಬೊದಲ್ಲಿ ಜರುಗಿದ್ದ ಎರಡನೇ ಹೋರಾಟದಲ್ಲಿ ಇನಿಂಗ್ಸ್‌ ಮತ್ತು 53ರನ್‌ಗಳಿಂದ ಜಯಭೇರಿ ಮೊಳಗಿಸಿತ್ತು. ಈಗಾಗಲೇ ಸರಣಿ ಗೆದ್ದಿರುವ ಕಾರಣ ನಾಯಕ ಕೊಹ್ಲಿ ಅಂತಿಮ ಪಂದ್ಯದಲ್ಲಿ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿ ಭುವನೇಶ್ವರ್‌ ಕುಮಾರ್‌ಗೆ ಅವಕಾಶ ಕೊಡಬಹುದು. ನಿಷೇಧ ಶಿಕ್ಷೆ ಎದುರಿಸುತ್ತಿರುವ ರವೀಂದ್ರ ಜಡೇಜ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಎರಡನೇ ಸ್ಪಿನ್ನರ್‌ ರೂಪದಲ್ಲಿ ಕಣಕ್ಕಿಳಿಸಬಹುದಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಅಮೋಘ ಆಟ ಆಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ಶಿಖರ್‌ ಧವನ್‌ ಅವರು ಮೂರನೇ ಪಂದ್ಯದಲ್ಲೂ ರನ್‌ ಗೋಪುರ ಕಟ್ಟಲು ಉತ್ಸುಕರಾಗಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರ ಬಲ ತಂಡಕ್ಕಿದೆ. ಪೂಜಾರ ಮತ್ತು ರಹಾನೆ ಅವರು ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಂತಿಮ ಪಂದ್ಯದಲ್ಲೂ ಇವರು ಸಿಂಹಳೀಯ ನಾಡಿನ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ. ಪೂಜಾರ ಅವರು  ಸರಣಿಯಲ್ಲಿ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿದ್ದಾರೆ. ಎರಡು ಪಂದ್ಯಗಳಿಂದ ಅವರು 100.33ರ ಸರಾಸರಿಯಲ್ಲಿ 301ರನ್‌ಗಳನ್ನು ಕಲೆ ಹಾಕಿದ್ದಾರೆ.

ಹಿಂದಿನ ಎರಡೂ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ಲಯ ಕಂಡುಕೊಳ್ಳಬೇಕಿದೆ. ಬೌಲಿಂಗ್‌ನಲ್ಲೂ ಭಾರತ ತಂಡ ಬಲಿಷ್ಠವಾಗಿದೆ. ಉಮೇಶ್‌ ಯಾದವ್‌ ಮತ್ತು ಮಹಮ್ಮದ್‌ ಶಮಿ ಅವರು ವೇಗದ ಬೌಲಿಂಗ್‌ನಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ.

ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಇವರು ಆರಂಭದಲ್ಲೇ ವಿಕೆಟ್‌ ಕೆಡವಿ ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲರು. ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರ ಬಲವೂ ತಂಡದ ಬೆನ್ನಿಗಿದೆ. ಅಶ್ವಿನ್‌ ಅವರು ಆಡಿದ ಎರಡು ಪಂದ್ಯಗಳಿಂದ 11 ವಿಕೆಟ್‌ ಉರುಳಿಸಿದ್ದಾರೆ.

ತಿರುಗೇಟು ನೀಡುವ ಗುರಿ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಲಂಕಾ ತಂಡ ಅಂತಿಮ ಪಂದ್ಯದಲ್ಲಿ ವಿರಾಟ್‌ ಪಡೆಗೆ ತಿರುಗೇಟು ನೀಡಲು ಹವಣಿಸುತ್ತಿದೆ.

ಪ್ರಮುಖ ಆಟಗಾರರು ಗಾಯಗೊಂಡಿರುವ ಕಾರಣ ಪಂದ್ಯಕ್ಕೂ ಮುನ್ನವೇ ಆತಿಥೇಯರಿಗೆ ಅಲ್ಪ ಹಿನ್ನಡೆ ಎದುರಾಗಿದೆ. ಹೀಗಿದ್ದರೂ ಚಾಂಡಿಮಲ್‌ ಪಡೆ ಕೊನೆಯ ಹೋರಾಟದಲ್ಲಿ ಗೆದ್ದು ‘ವೈಟ್‌ ವಾಷ್‌’ ಭೀತಿಯಿಂದ ಪಾರಾಗುವ ಆಲೋಚನೆಯಲ್ಲಿದೆ.

ಆರಂಭಿಕ ಆಟಗಾರ ದಿಮುತ್‌ ಕರುಣಾರತ್ನೆ, ಬ್ಯಾಟಿಂಗ್‌ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ. ಅವರು ಎರಡು ಪಂದ್ಯಗಳಿಂದ 66.25ರ ಸರಾಸರಿಯಲ್ಲಿ 265ರನ್‌ ಕಲೆಹಾಕಿದ್ದಾರೆ.

ಉಪುಲ್‌ ತರಂಗ, ಕುಶಾಲ್‌ ಮೆಂಡಿಸ್‌, ನಾಯಕ ದಿನೇಶ್‌ ಚಾಂಡಿಮಲ್‌ ಮತ್ತು ಅನುಭವಿ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ ಅವರು ಜವಾಬ್ದಾರಿ ಅರಿತು ಆಡಬೇಕಿದೆ. ಬೌಲಿಂಗ್‌ನಲ್ಲೂ ತಂಡ ಶ್ರೇಷ್ಠ ಸಾಮರ್ಥ್ಯ ತೋರಿದರೆ ಮಾತ್ರ ಸರಣಿಯಲ್ಲಿ ಚೊಚ್ಚಲ ಗೆಲುವಿನ ಕನಸು ಸಾಕಾರಗೊಳ್ಳಬಹುದು.

ಪಂದ್ಯದ ಆರಂಭ: ಬೆಳಿಗ್ಗೆ 10ಕ್ಕೆ.
ನೇರ ಪ್ರಸಾರ: ಟೆನ್‌ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT