ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸ್ವಾತಂತ್ರ್ಯದ ಅರ್ಥ ಬದಲಾಯಿತೆ?

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬದಲಾದ ಈ ಸಂದರ್ಭ ಹೆಣ್ಣಿನ ಬದುಕನ್ನು ಸುಧಾರಿಸಿದೆಯೇ ಹೊರತು 'ಸಮಾನತೆ'ಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿಯೇ 'ಸ್ತ್ರೀ ಸ್ವಾತಂತ್ರ್ಯ' ಎನ್ನುವ ಪರಿಕಲ್ಪನೆಯ ಬಗ್ಗೆ ಈಗಲೂ ಮಾತನಾಡುತ್ತೇವೆ, ಅದು ಕ್ಲೀಷೆಯೆಂದು ತಿಳಿದೂ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಸ್ವಾತಂತ್ರ್ಯನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಮಾತು ಎಲ್ಲಾ ಕಾಲಕ್ಕೂ ಇದ್ದದ್ದೇ. ತನ್ನದೇ ಅಸ್ತಿತ್ವ ಹುಡುಕುವ, ಪ್ರತಿಭಟಿಸುವ, ಹಾಗೆಯೇ ಸಮಾಜ ಧಿಕ್ಕರಿಸುವಂತೆ ನೋಡಿದರೂ ಮುನ್ನುಗ್ಗುವ ಸ್ತ್ರೀ ಮನೋಧರ್ಮವೂ ಎಲ್ಲಾ ಕಾಲಘಟ್ಟದಲ್ಲೂ ಒಂದಲ್ಲಾ ಒಂದು ರೀತಿ ಪ್ರಕಟಗೊಳ್ಳುತ್ತಲೇ ಬಂದಿದೆ. ಅದು ಸ್ವಾತಂತ್ರ್ಯವನ್ನು ಪರಿಭಾವಿಸುವ ರೀತಿಯೂ ಆಗಿದೆ.

ದೂಷಿತರಾಗದೆ ಇರಬೇಕು

–ವಿ.ಕೆ. ಸಂಜ್ಯೋತಿ, ನಿರ್ದೇಶಕಿ
ಸ್ವಾತಂತ್ರ್ಯದ ಪ್ರಕ್ರಿಯೆ ಸಮಾನ ನೆಲೆಯಲ್ಲಿ ನಡೆಯುವುದೇ ಇಲ್ಲ. ಅದು ಹೆಣ್ಣುಮಕ್ಕಳ ಮನಸ್ಥಿತಿ, ಪರಿಸ್ಥಿತಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ ಅಷ್ಟೆ. ಪರದಾ ಪದ್ಧತಿ ಇರುವೆಡೆ ಪರದೆ ಹಾಕಿಕೊಳ್ಳದೇ ಇರುವುದೇ ಪ್ರತಿಭಟನೆಯ ದೊಡ್ಡ ನಡೆ ಆಗಿರುತ್ತದೆ. ಮಲೆನಾಡಿನ ಹಳ್ಳಿಯಲ್ಲಿ ಜೀನ್ಸ್‌ ಹಾಕಿಕೊಳ್ಳುವುದು ಇಂದಿಗೂ ದೊಡ್ಡ ವಿಷಯವೇ. ಬೆಂಗಳೂರಿನಂಥ ನಗರದಲ್ಲೂ ಹುಡುಗಿಯರು ಬೈಕ್ ಓಡಿಸಿದರೆ ಈರ್ಷ್ಯೆಯಿಂದ ನೋಡುವವರು ಈಗಲೂ ಇದ್ದಾರೆ. ಆದ್ದರಿಂದ 'ಹೀಗೆ ಮಾಡಿದರಷ್ಟೇ ಸ್ವಾತಂತ್ರ್ಯ' ಎಂದು ಹೇಳಲು ಸಾಧ್ಯವೇ ಇಲ್ಲ.

'ನನ್ನ ಬದುಕಿನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬಲ್ಲೆ. ಆ ಕಾರಣಕ್ಕೆ ಸಮಾಜದಲ್ಲಿ ದೂಷಿತೆ ಆಗದೇ ನನ್ನ ವ್ಯಕ್ತಿತ್ವದ ಗೌರವವನ್ನು ಉಳಿಸಿಕೊಂಡು ಬದುಕುವೆ' ಎನ್ನುವ ಪರಿಸ್ಥಿತಿ ಇದೆ ಅನ್ನಿಸುವುದೇ ನನಗೆ ಸ್ವತಂತ್ರಳು ಎಂಬ ಭಾವ ತರುತ್ತದೆ. ಇದು ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಎಷ್ಟೋ ಹೆಣ್ಣುಮಕ್ಕಳಿಗೆ ಇದುವರೆಗೂ ಸಾಧ್ಯವಾಗಿಲ್ಲ. ಹಾಗೆಂದು ಸಮಾಜದ ಸಂಬಂಧಗಳನ್ನು ನಿರ್ಲಕ್ಷಿಸಬೇಕು ಎಂದರ್ಥವಲ್ಲ.

ಪುರುಷರಿಗೆ ಸಹಜವಾಗಿರುವ ಕೆಲವು ನಡೆಗಳು ಮಹಿಳೆಯರಿಗೂ ಸಹಜವಾಗೇ ಮೈಗೂಡಬೇಕು. ಶಿಕ್ಷಣ, ವೃತ್ತಿ, ಭವಿಷ್ಯಕ್ಕೆ ಇರುವ ಆಯ್ಕೆಯನ್ನು ಪುರುಷರಷ್ಟೇ ಸಹಜವಾಗಿ ಹೆಣ್ಣೂ ಅನುಭವಿಸಿದರೆ, ಅದೇ ಸ್ವಾತಂತ್ರ್ಯ.

ಹೊಂದಾಣಿಕೆಯನ್ನು ಹೆಣ್ಣು ಮಕ್ಕಳಿಂದ ಮಾತ್ರ ನಿರೀಕ್ಷಿಸದೇ ಇದ್ದರೆ ಅದು ಸ್ತ್ರೀಸ್ವಾತಂತ್ರ್ಯ. ಸ್ವಾತಂತ್ರ್ಯದ ನಮ್ಮ ಪರಿಭಾಷೆಯ ಕುರಿತು ಭ್ರಮೆಗಳಿಂದ ಹೊರಬಂದು ಮೊದಲು ನಾವೇ ಪರಾಮರ್ಶಿಸಿ ನೋಡಿಕೊಳ್ಳಬೇಕಿದೆ.

***

ನನ್ನ ಪಾಡಿಗೆ ನಾನು...
–ಮಾನ್ವಿತಾ ಹರೀಶ್, ನಟಿ

ಪುರಾಣ ಕಾಲದಲ್ಲಿ ವೇದ ಉಪನಿಷತ್ತನ್ನು ಹೆಣ್ಣುಮಕ್ಕಳಿಗೂ ಕಲಿಸುತ್ತಿದ್ದರಂತೆ. ಸಾಹಸಿ ತರುಣಿಯರನ್ನು ಯುದ್ಧಕ್ಕೂ ಕಳುಹಿಸುತ್ತಿದ್ದರು ಎಂಬುದನ್ನೆಲ್ಲಾ ಓದಿದ್ದೆ. ಆದರೆ ಕಾಲಾನಂತರ ದೈಹಿಕ ಕಾರಣಕ್ಕಾಗಿ ಸ್ತ್ರೀಯರನ್ನು ಇವುಗಳಿಂದ ದೂರವೇ ಇಡಲಾಯಿತು. ಆ ಮನೋಭಾವ ತಲೆಮಾರುಗಳಿಂದ ತಲೆಮಾರುಗಳಿಗೆ ಮುಂದುವರಿದು, ಹೆಣ್ಣು ನಿರ್ಲಕ್ಷ್ಯಕ್ಕೆ ಒಳಗಾದಳು.

ಈಗಿನ ಕಾಲಕ್ಕೆ, ನನ್ನ ಕಾಲ ಮೇಲೆ ನನ್ನನ್ನು ನಿಲ್ಲೋಕೆ ಬಿಡೋದೇ ಸ್ವಾತಂತ್ರ್ಯ. ನನಗೆ ಏನು ಬೇಕೋ ಅದನ್ನು ತೆಗೆದುಕೊಳ್ಳುವ ಒಂದು ಯೋಗ್ಯತೆಯನ್ನು ನಾನೇ ಬೆಳೆಸಿಕೊಳ್ಳಲು ಸಮಾಜ ಅನುವು ಮಾಡಿಕೊಟ್ಟರೆ, ಅಂದರೆ ನೈತಿಕ ಬೆಂಬಲ ನೀಡಿದರೆ ಅದೇ ಸ್ವಾತಂತ್ರ್ಯ.

ಬೆಂಬಲ ಎಂದರೆ ಸಹಾಯ ಮಾಡಬೇಕು ಎಂದರ್ಥವಲ್ಲ. ಓರ್ವ ಹೆಣ್ಣನ್ನು ಮಹಿಳೆಯನ್ನು 'ಹೀಗೇ' ಎಂದು ತೀರ್ಮಾನಕ್ಕೆ ಒಳಪಡಿಸದೇ, ಬೇರೆಯವರ ವಿಷಯಕ್ಕೆ ಹೋಗದೇ ಇದ್ದರೆ ಸಾಕು.

ನಾನೇನು ಮಾಡಬೇಕು, ದಿನದಿಂದ ದಿನಕ್ಕೆ ಹೇಗೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತಮಗೆ ತಾವೇ ಯೋಚನೆ ಮಾಡಿ ಮುಂದುವರೆದಿದ್ದರೆ ಅವರಿಗೆ ಅವರೇ ಸ್ವಾತಂತ್ರ್ಯ ಕೊಟ್ಟುಕೊಂಡ ಹಾಗೆ.

***

ಶಿಕ್ಷಣವೇ ಸ್ವಾತಂತ್ರ್ಯ
–ಎಂ.ಡಿ. ಪಲ್ಲವಿ, ಗಾಯಕಿ

ಹಿಂದೆಲ್ಲ ಹೆಣ್ಣು ಹುಟ್ಟಿದ ದಿನದಿಂದಲೇ ಹೂಡಿಕೆ ಮಾಡಲು ಆರಂಭಿಸುತ್ತಿದ್ದರು. ಆ ನಿಧಿ ಅವಳ ಮದುವೆಗೆ ಬಳಕೆಯಾಗುತ್ತಿತ್ತು. ಮದುವೆ ಮೇಲೆಯೇ ಹೆಣ್ಣಿನ ಇಡೀ ಬದುಕು ನಿಂತಿತ್ತು. ಈಗ ಕಾಲ ಬದಲಾಗಿದೆ. ಈಗ ಶಿಕ್ಷಣಕ್ಕೆ ಹಣ ಕೂಡಿಡುತ್ತಾರೆ, ಶಿಕ್ಷಣವೇ ಸ್ವಾತಂತ್ರ್ಯದ ಅಸ್ತ್ರವಾಗಿದೆ. ಹುಡುಗನಷ್ಟೇ ಸಹಜವಾಗಿ ಹುಡುಗಿಯರಿಗೂ ಶಿಕ್ಷಣ ಕೊಡಿಸುವ ನಡೆಯೂ ಹೆಚ್ಚಾಗಿದೆ. ಅದನ್ನು ಈಗಿನ ಕಾಲದ ಸ್ತ್ರೀಸ್ವಾತಂತ್ರ್ಯ ಎಂದೇ ಪರಿಗಣಿಸಬಹುದು. ಚೆನ್ನಾಗಿ ಓದಿದರೆ ಸ್ವಾತಂತ್ರ್ಯ ಸಿಕ್ಕಹಾಗೆ ಎಂದೇ ಪರಿಗಣಿಸಬಹುದು.

ಜೀವನಶೈಲಿಯಲ್ಲಾಗಲೀ ಸಮಾಜದಲ್ಲಾಗಲೀ ಹೆಣ್ಣುಮಕ್ಕಳು ತಮ್ಮದೇ ಐಡೆಂಟಿಟಿ ಸೃಷ್ಟಿಸಿಕೊಳ್ಳುತ್ತಿರುವ ನಡೆಯೇ ಒಂದು ರೀತಿ ಧನಾತ್ಮಕ ಸ್ವಾತಂತ್ರ್ಯ ಎನ್ನಬಹುದು.
ಈಗ ಮದುವೆಯಾಗಬೇಕೋ ಬೇಡವೋ, ಓದಬೇಕೋ ಬೇಡವೋ, ಕೆಲಸಕ್ಕೆ ಸೇರಬೇಕೋ ಬೇಡವೋ - ಹೀಗೆ ಯೋಚನೆ ಮಾಡುವ, ಯೋಚಿಸಲು ಅನುಕೂಲ ಮಾಡಿಕೊಡುವ ನಡೆಯಿಂದಲೇ ಸ್ವಾತಂತ್ರ್ಯವನ್ನು ಅಳೆಯಬಹುದಲ್ಲವೇ?

***
ಕಟ್ಟುಪಾಡುಗಳಿಲ್ಲದ ನಡಿಗೆ
–ಶ್ವೇತಾ ಶ್ರೀನಿವಾಸ್, ರಂಗನಟಿ

ಪುರುಷರು ನಮಗೆ ಆದ್ಯತೆ ಕೊಡುತ್ತಿಲ್ಲ. ನಾವೂ ಪುರುಷರಂತೆ ಬಾಳಬೇಕು. ಅವರನ್ನು ಮೀರಿ ಬೆಳೆಯಬೇಕು - ಇಂಥ ಯೋಚನೆಗಳೆಲ್ಲ ಈಗ ತುಂಬಾ ಔಟ್‌ಡೇಟೆಡ್ ಆಗಿವೆ. ನಿಜವಾದ ಸ್ತ್ರೀ ಸ್ವಾತಂತ್ರ್ಯ ಎಂದರೆ ಅದಲ್ಲವೇ ಅಲ್ಲ. ಕಾಲ ಕಳೆದಂತೆ ಕೆಲವು ಭ್ರಮೆಗಳೂ ಕಳಚುತ್ತವೆ.

ನಮ್ಮೊಳಗಿನ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾ, ಅದನ್ನು ಸಾಧನೆಯಾಗಿ ಪರಿವರ್ತಿಸುವುದೇ ನಿಜವಾದ ಸ್ವಾತಂತ್ರ್ಯ. ಯಾವುದೇ ಪೂರ್ವಾಪರಗಳಿಲ್ಲದೇ, ಕಟ್ಟುಪಾಡುಗಳಿಲ್ಲದೇ ನಡೆಯುವುದು ನಮ್ಮ ಕಾಲಕ್ಕೆ ಸ್ವಾತಂತ್ರ್ಯ ಎಂದು ಪರಿಗಣಿಸಬಹುದು.

ಕೆಲವೊಮ್ಮೆ ಸಮಾಜದಿಂದ ಸಣ್ಣಪುಟ್ಟ ತೊಡಕಾದರೂ, ಒಮ್ಮೆ ನನ್ನ ಒಳಗಿನ ಸಾಧ್ಯತೆಗಳು ತೆರೆದುಕೊಂಡರೆ ಸಮಾಜವೂ ಅದನ್ನು ಒಪ್ಪುತ್ತದೆ. ಯಾವ ಹಂತದವರೆಗೂ ಯಾವುದೇ ಅಡೆತಡೆ ಇಲ್ಲದೇ ನನ್ನನ್ನು ನಾನು ಕೊಂಡೊಯ್ಯಬಹುದು ಎನ್ನುವುದನ್ನು ಅರಿತು ನಡೆವುದೇ ಸ್ವಾತಂತ್ರ್ಯ.

ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಆತ್ಮಶಕ್ತಿಯ ಮೇಲೆ ರೂಪುಗೊಳಿಸಿಕೊಳ್ಳುವುದೇ ಈಗಿನ ಸ್ವಾತಂತ್ರ್ಯ.

***
ಸ್ವಂತ ಬದುಕಿನ ಛಲ
–ಉಮಾ ಕೃಷ್ಣಮೂರ್ತಿ, ಅಧ್ಯಾಪಕಿ

ನನ್ನ ಅಮ್ಮ, ಅಜ್ಜಿಯ ಕಾಲಕ್ಕೆ ಹೋಲಿಸಿದರೆ ನನಗೆ ಯಾವುದೇ ಕಟ್ಟುಪಾಡುಗಳಿಲ್ಲ. ಮನೆಯಲ್ಲೂ ಗಂಡ-ಹೆಂಡತಿ ಇಬ್ಬರಿಗೂ ಸಮಾನ ಅಧಿಕಾರವಿದೆ. ಇಬ್ಬರ ಆಲೋಚನೆಗಳಿಗೂ ಬೆಲೆ ಇದೆ. ನಮ್ಮ ನಮ್ಮ ಐಡೆಂಟಿಟಿ ಉಳಿಸಿಕೊಂಡೇ ಗೌರವಯುತವಾಗಿ ಜೊತೆಯಾಗಿ ಬದುಕಲು ಸಾಧ್ಯವಾಗಿರುವುದೇ ನನಗೆ ಸ್ವಾತಂತ್ರ್ಯ.

ಸಮಾಜದಲ್ಲಿ ನಾನು ಕಂಡಂತೆ, ಬೇರೆಲ್ಲಾ ವಿಷಯಗಳಿಗಿಂತ ಮದುವೆ ಎಂಬ ವಿಷಯವೇ ಸ್ವಾತಂತ್ರ್ಯದ ಒಂದು ಮಜಲನ್ನು ಅಳೆದುಬಿಡುವ ಅಂಶವಾಗಿತ್ತು. ಆಗಿನ ಕಾಲದಲ್ಲಿ ಗಂಡ ಎಷ್ಟೇ ಕಷ್ಟಕೊಟ್ಟರೂ ಗಂಡನ ಜೊತೆಯೇ ಬಾಳಬೇಕು ಎಂಬ ಒತ್ತಾಯ ಇರುತ್ತಿತ್ತು. ಒಂದಿಷ್ಟು ಎದುರು ನಡೆದರೂ ದೊಡ್ಡ ಸಮಸ್ಯೆಯೇ ಆಗುತ್ತಿತ್ತು. ಹೊಂದಾಣಿಕೆ ಹೆಣ್ಣಿಗೆ ಮಾತ್ರ ಎಂದೇ ಅನ್ನಿಸಿತ್ತು.

ಆದರೆ ಈಗ ಹಾಗಿರಬೇಕಿಲ್ಲ. ಅಂಥ ಕಟ್ಟುಪಾಡುಗಳ ನಡುವೆ ಪ್ರಾಣ ಹೋಗುವಂತೆ ಹಿಂಸೆ ಕೊಟ್ಟರೂ ಎಲ್ಲವನ್ನೂ ಸಹಿಸಿಕೊಂಡು ಬದುಕಬೇಕಿಲ್ಲ. ಈಗಲೂ ಮದುವೆಯ ಚೌಕಟ್ಟಿನಿಂದ ಹೊರಬಂದವರನ್ನು ಅನುಮಾನದಿಂದ ನೋಡುವವರಿದ್ದಾರೆ. ಆದರೆ ಹಾಗೆ ಹೊರಬಂದು ಸ್ವಂತ ಬದುಕು ಕಟ್ಟಿಕೊಳ್ಳುವ ಹೆಣ್ಣು ಮಕ್ಕಳ ಛಲವಿದೆಯಲ್ಲಾ - ಅದೇ ಈಗಿನ ಕಾಲಕ್ಕೆ ಸ್ತ್ರೀ ಸ್ವಾತಂತ್ರ್ಯ ತೋರುವ ಅಂಶ.

***
ಪ್ರಶ್ನೆಗಳಿಗಿದು ಕಾಲ!
–ಶ್ರುತಿ, ವಿದ್ಯಾರ್ಥಿನಿ

ಸಾಕಷ್ಟು ನಿಬಂಧನೆಗಳನ್ನೇ ಪರಿಗಣಿಸಿ ಸ್ವಾತಂತ್ರ್ಯ ಇಲ್ಲ ಎಂದುಕೊಳ್ಳುತ್ತಿದ್ದ ಕಾಲ ಒಂದಿತ್ತು. ಆದರೆ ತಂತ್ರಜ್ಞಾನ ಇಷ್ಟು ಮುಂದುವರೆದಿರುವ ಈಗಿನ ಕಾಲಕ್ಕೂ ಅದು ಹೊರತಲ್ಲ. ಅತ್ಯಾಚಾರ, ಕೌಟುಂಬಿಕ ಹಿಂಸೆ ಇವೆಲ್ಲಾ ಈಗಲೂ ಇವೆ, ಇನ್ನೂ ಹೆಚ್ಚಾಗಿವೆ.

ಇತ್ತೀಚೆಗೆ, ಮಧ್ಯರಾತ್ರಿ ಹೆಣ್ಣುಮಕ್ಕಳು ಏಕೆ ಓಡಾಡಬೇಕು? ಎಂದು ಪ್ರಶ್ನೆ ಚರ್ಚೆಗೆ ಬಂದಿತ್ತು. ಹಾಗಿದ್ದರೆ ಗಂಡುಮಕ್ಕಳಿಗಾದರೂ ಅಂಥ ಕೆಲಸ ಏನಿರುತ್ತೆ? ಹೆಣ್ಣುಮಕ್ಕಳು ಮನೆಗೆ ಬರುವುದು ತಡವಾದರೆ ಏಕೆ ತಡ ಎಂದು ಏಕೆ ಕೇಳ್ತೀರ?

ಹೀಗೆ ಪ್ರಶ್ನೆಗಳನ್ನು ಕೇಳುತ್ತೇವಲ್ಲ, ಅದು ಸ್ವಾತಂತ್ರ್ಯ. ಈಗಿನ ವ್ಯಾಖ್ಯಾನ ಬೇರೆಯೇ ಇದೆ. ಈಗ ಎಲ್ಲರ ಎದುರು ನಿಂತು ಧೈರ್ಯವಾಗಿ ಮಾತನಾಡುವ ಒಂದು ವಿಷಯವೇ ಸ್ವಾತಂತ್ರ್ಯ. ಇವೆಲ್ಲಾ ಸಣ್ಣ ಪುಟ್ಟ ವಿಷಯವಾದರೂ ಪರಿಣಾಮ ಹೆಚ್ಚು.

ನಮಗೂ ನಿಬಂಧನೆಗಳಿಲ್ಲದೇ ಧೈರ್ಯವಾಗಿ ಹೊರಗೆ ಕಳುಹಿಸಿಕೊಟ್ಟರೆ ನಮಗೂ ಸ್ವಾತಂತ್ರ್ಯ ಇದೆ ಅನ್ನಿಸುತ್ತದೆ. ಹಾಗೆಯೇ ಆ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದಿರುವ ಜವಾಬ್ದಾರಿಯೂ ನಮ್ಮದಾಗಿರುತ್ತದೆ. ಈಗ ನಾಯಕತ್ವ ತೆಗೆದುಕೊಳ್ಳುವುದೇ ಸ್ವಾತಂತ್ರ್ಯದ ಪರಿಭಾಷೆ. ನಾನೂ ಕೆಲವು ಚಳವಳಿಯಲ್ಲಿ ತೊಡಗಿಕೊಂಡಾಗ, ಇದೆಲ್ಲಾ ಯಾಕೆ ಬೇಕಿತ್ತು ಎಂದವರೂ ಇದ್ದಾರೆ. ಆದರೆ ನನಗೆ ಹಾಗೆ ಮಾತನಾಡುವುದೇ ಸ್ವಾತಂತ್ರ್ಯ ಎನ್ನಿಸುತ್ತದೆ.

***

ಅಳುಕು-ಆತಂಕ ಇಲ್ಲದ ಪರಿಸ್ಥಿತಿ
–ಅಶ್ವಿನಿ ಭಟ್, ಉದ್ಯೋಗಿ

ಸ್ವಾತಂತ್ರ್ಯ ಎನ್ನುವುದು ಎಲ್ಲಾ ಕಾಲದಲ್ಲೂ ಇತ್ತು. ಆದರೆ ಅದನ್ನು ಬಳಸಿಕೊಳ್ಳುವ ವ್ಯವಸ್ಥೆ ಇರಲಿಲ್ಲ ಎನ್ನಬಹುದೇನೋ. ಹುಡುಗಿಯರು ಈಗ ಆರಾಮಾಗಿ ಹೊರಗೆ ತಿರುಗಾಡುವ ಅವಕಾಶವಿದೆ. ಸುರಕ್ಷತೆ ಇಲ್ಲ ಅಷ್ಟೆ. ಅಂಥ ವ್ಯವಸ್ಥೆ ಬಂದರೆ ಅದು ಸ್ವಾತಂತ್ರ್ಯ ಎನ್ನಿಸಿಕೊಳ್ಳಬಹುದೇನೋ.

ಆಗಿನ ಕಾಲಕ್ಕೆ ಹೋಲಿಸಿದರೆ ಈಗ ಎಲ್ಲವೂ ಬದಲಾಗಿದೆ ಎನ್ನುತ್ತಾರೆ. ಆದರೆ ಹಳೇ ಕಾಲದಲ್ಲೂ ಸ್ವಾತಂತ್ರ್ಯ ಇದ್ದಿರಬಹುದು, ಆದರೆ ವಾತಾವರಣ, ಅನುಕೂಲಗಳು ಮುನ್ನೆಲೆಗೆ ಬರದಂತೆ ತಡೆದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT