ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 12–8–1967

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನೆಹರು ಭರವಸೆ ಗಾಳಿಗೆ, ಹಿಂದಿ ಏಕೈಕ ಅಧಿಕೃತ ಭಾಷೆ ಆಗುವ ನಿರೀಕ್ಷೆ(ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಆ. 10–
ಹಿಂದಿಯೇತರ ಭಾಷಾ ಜನರಿಗೆ ದಿವಂಗತ ಜವಹರಲಾಲ್ ನೆಹರು ಅವರು ನೀಡಿದ್ದ ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲವೆಂದೂ ಗಣನೀಯ ಅಲ್ಪಾವಧಿಯಲ್ಲೇ ಹಿಂದಿ ಭಾಷೆಯನ್ನು ಏಕೈಕ ಅಧಿಕೃತ ಹಾಗೂ ಸಂಪರ್ಕ ಭಾಷೆಯನ್ನಾಗಿ ಮಾಡುವುದೇ ಸರ್ಕಾರದ ಪ್ರಯತ್ನವಾಗಿದೆಯೆಂದೂ ಈಗ ವಿಶ್ವಾಸಾರ್ಹವಾಗಿ ತಿಳಿದು ಬಂದಿದೆ.

ಬರುವ ಮಂಗಳವಾರ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಸರ್ಕಾರದ ಭಾಷಾನೀತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಈ ಬಗ್ಗೆ ಸಂಪುಟದಲ್ಲಿ ನಡೆಯುತ್ತಿರುವ ಚರ್ಚೆಯ ಧಾಟಿಯನ್ನು ಗಮನಿಸಿದಾಗ, ಹಿಂದಿ ಭಾಷೇತರ ಜನರು ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳಲು ಸಿದ್ಧರಾಗುವವರೆಗೆ ಇಂಗ್ಲಿಷ್ ಭಾಷೆಯೇ ಮುಂದುವರೆಯುವುದೆಂಬ ನೆಹರು ಅವರ ಆಶ್ವಾ
ಸನೆಯನ್ನು ಮಾನ್ಯ ಮಾಡುವುದಿಲ್ಲವೆಂಬುದು ಸ್ಪಷ್ಟವಾಗುತ್ತಿದೆ.

ಇಂಗ್ಲಿಷ್ ಭಾಷೆಯಿಂದ ಹಿಂದಿಗೆ ಅಧಿಕೃತ ಭಾಷೆಯ ವರ್ಗಾವಣೆಗೆ ಖಚಿತವಾದ ಕಾಲಮಿತಿ ವಿಧಿಸಬೇಕು ಎಂಬ ಮುರಾರಜಿ ಅವರ ವಾದ ನಿನ್ನೆ ಸಂಪುಟದ ಸಭೆಯಲ್ಲಿ ಶ್ರೀಗಳಾದ ಚಾಗಲಾ ಮತ್ತು ಅಶೋಕ ಮೆಹ್ತಾ ಅವರ ವಿರೋಧವನ್ನು ಮೆಟ್ಟಿ ಪರಿಣಾಮ ಬೀರಿತು. ಅಧಿಕೃತ ಮೂಲಗಳ ಪ್ರಕಾರ ಇಂಗ್ಲಿಷ್‌ನಿಂದ ಹಿಂದಿ ವರ್ಗಾವಣೆಗೆ 10 ವರ್ಷಗಳ ಮಿತಿ ವಿಧಿಸಲು ಸರ್ಕಾರದ ಬೆಂಬಲ ವ್ಯಕ್ತಪಟ್ಟಿದೆಯೆಂದೂ ತಿಳಿದು ಬಂದಿದೆ.\

ಕಾದಿದ್ದಳು ‘ಶಬರಿ’ ಲಾಸ್ಏಂಜೆಲೀಸ್ (ಕ್ಯಾಲಿಫೋರ್ನಿಯಾ) 
ಆ. 10–
ರಂಗಭೂಮಿಯ ಮೇಲೆ ಆ ಪಾತ್ರ ವಹಿಸಲು ಆಕೆ ಇಪ್ಪತ್ತಾರು ವರ್ಷಗಳು ಕಾಯಬೇಕಾಯಿತು.

ಈಗ ಆ ‍ಪಾತ್ರಕ್ಕಾಗಿ ಆಕೆ ದುಡಿಯುತ್ತಿದ್ದಾಳೆ. ಈಕೆ ಖ್ಯಾತ ನಟಿ ಇನ್‌ಗ್ರಿಡ್ ಬರ್ಗ್‌ಮನ್. ಇನ್ನು ಕೆಲವು ವಾರಗಳಿಗೆ 50ರ ಹೊಸಿಲು ದಾಟಲಿರುವ ಈ ಖ್ಯಾತ ಸ್ವೀಡಿಷ್ ನಟಿ, ಯೂಜೀನ್ ಓನೀಲ್ ಅವರ ‘ಮೋರ್ ಸ್ಟೇಟ್ಲಿ ಮ್ಯಾನ್ಸನ್ಸ್’ ನಾಟಕದಲ್ಲಿ ಅಜ್ಜಿಯ ಪಾತ್ರ ವಹಿಸುವಳು. ತಮ್ಮ ನಾಟಕದಲ್ಲಿ ಆಕೆ ಪಾತ್ರ ವಹಿಸಬೇಕೆಂದು ಓನೀಲ್ 26 ವರ್ಷಗಳ ಹಿಂದೆ ಬಯಸಿದ್ದರು.

‘ಆತ ನನ್ನೊಡನೆ ಮಾತನಾಡಿದಾಗ ಅಜ್ಜಿಯ ಪಾತ್ರಕ್ಕೆ ಕೇಳುವರೆಂದು ನಾನು ನಿರೀಕ್ಷಿಸಿಯೇ ಇರಲಿಲ್ಲ’ ಎಂದು ಕುಮಾರಿ ಬರ್ಗ್‌ಮನ್ ಉದ್ಗಾರವೆತ್ತಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT