ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ಮೀಸಲು ಹೋರಾಟ ಹತಾಶೆ, ಅಭದ್ರತೆಯ ಸಂಕೇತ

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹರಿಯಾಣದ ಜಾಟರು, ರಾಜಸ್ತಾನದ ಗುಜ್ಜರರು, ಆಂಧ್ರದ ಕಾಪು, ಗುಜರಾತ್‌ನ ಪಾಟೀದಾರ– ಪಟೇಲರು ಮತ್ತು ಈಗ ಮಹಾರಾಷ್ಟ್ರದ ಮರಾಠರು. ಇವರದೆಲ್ಲ ಒಂದೇ ಬೇಡಿಕೆ. ತಮ್ಮನ್ನು ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಬೇಕು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂಬುದು. ಇದಕ್ಕಾಗಿ ಭಾರೀ ಚಳವಳಿಗಳನ್ನು ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ.

ಇವರೆಲ್ಲ ತಮ್ಮ ತಮ್ಮ ರಾಜ್ಯಗಳಲ್ಲಿ ಸಂಘಟಿಸಿದ್ದ ರ್‍ಯಾಲಿ, ಆಂದೋಲನಗಳಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಮೊನ್ನೆ ಮೊನ್ನೆ, ಅಂದರೆ ಬುಧವಾರ ಮುಂಬೈಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಆಶ್ರಯದಲ್ಲಿ ನಡೆದ ಜಾಥಾದಲ್ಲಿ ಭಾಗವಹಿಸಿದ್ದವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು ಎಂದು ಅಂದಾಜು. ಇನ್ನೊಂದು ವಿಶೇಷ ಎಂದರೆ, ಈ ಎಲ್ಲ ಸಮುದಾಯಗಳ ಮೂಲ ಕಸುಬು ಕೃಷಿ. ಬಹುಪಾಲು ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಾಬಲ್ಯ ಹೊಂದಿವೆ.

ಮಹಾರಾಷ್ಟ್ರದ ಉದಾಹರಣೆಯನ್ನೇ ನೋಡುವುದಾದರೆ, ರಾಜ್ಯದ ಜನಸಂಖ್ಯೆಯಲ್ಲಿ ಮರಾಠರು ಮೂರನೇ ಒಂದು ಭಾಗದಷ್ಟಿದ್ದಾರೆ. 1960ರ ನಂತರ ಅಲ್ಲಿ ಅಧಿಕಾರಕ್ಕೆ ಏರಿದ 18 ಮುಖ್ಯಮಂತ್ರಿಗಳಲ್ಲಿ 10 ಮಂದಿ ಮರಾಠಾ ಸಮುದಾಯಕ್ಕೆ ಸೇರಿದವರು.

ರಾಜ್ಯದ ಅರ್ಧದಷ್ಟು ಶಿಕ್ಷಣ ಸಂಸ್ಥೆಗಳು, ಶೇ 70ರಷ್ಟು ಜಿಲ್ಲಾ ಸಹಕಾರ ಬ್ಯಾಂಕುಗಳು, ಶೇ 90ರಷ್ಟು ಸಕ್ಕರೆ ಕಾರ್ಖಾನೆಗಳು ಮರಾಠಾ ರಾಜಕಾರಣಿಗಳು ಮತ್ತು ಮುಖಂಡರ ನಿಯಂತ್ರಣದಲ್ಲಿವೆ. ಆದರೂ ಹಿಂದುಳಿದಿರುವಿಕೆ ಹಣೆಪಟ್ಟಿ ಅಂಟಿಸಿಕೊಳ್ಳಲು ಪೈಪೋಟಿ. ಅದಕ್ಕೆ ಕಾರಣ, ಮೀಸಲಾತಿಯಿಂದ ಸಿಗುವ ಪ್ರಯೋಜನ.

ಬಲಿಷ್ಠ ಎಂದು ಪರಿಗಣಿಸಲಾದ ಸಮುದಾಯಗಳೇ ಹೀಗೆ ಮೀಸಲಾತಿಗೆ ಪಟ್ಟು ಹಿಡಿಯುವ ಪ್ರವೃತ್ತಿ ಶುರುವಾಗಿದ್ದು 90ರ ದಶಕದ ಈಚೆಗೆ. ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಮಂಡಲ್‌ ಆಯೋಗದ ವರದಿ ಜಾರಿಯ ನಂತರ. ಆದರೆ ಅದು ಹೀಗೆ ಸರ್ಕಾರವನ್ನೇ ಮಣಿಸುವಷ್ಟು ಬಲವಾಗಿ ಬೆಳೆದಿದ್ದು ಮಾತ್ರ ಇತ್ತೀಚಿನ ವರ್ಷಗಳಲ್ಲಿ. ಇದಕ್ಕೆ ಮುಖ್ಯವಾಗಿ ರಾಜಕೀಯ ಪಕ್ಷಗಳ ಓಲೈಕೆ ರಾಜಕಾರಣ ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟು ದೊಡ್ಡ ಕೊಡುಗೆ ಕೊಟ್ಟಿವೆ.

ನಮ್ಮ ದೇಶದಲ್ಲಿ ಕೃಷಿ ಎನ್ನುವುದು ರೈತ ಕುಟುಂಬಗಳನ್ನು ಸಾಲದ ಕೂಪದಲ್ಲಿ ತಳ್ಳುವ ನಷ್ಟದ ಕಸುಬಾಗಿದೆ. ಕೂಲಿ, ಪರಿಕರಗಳು ದುಬಾರಿಯಾಗುತ್ತಿದ್ದು ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಅತಿವೃಷ್ಟಿ– ಅನಾವೃಷ್ಟಿಗಳು ಕಾಡುತ್ತಿವೆ. ಬೆಳೆಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತಾಪಿ ಸಮೂಹದಲ್ಲಿ ಹತಾಶೆ, ನಿರಾಸೆ ಮನೆಮಾಡಿದೆ.

ಅವರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಆದರೆ ಕೃಷಿಯೇತರ ಕ್ಷೇತ್ರಗಳಲ್ಲೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಹೀಗಾಗಿ ಈ ವರ್ಗದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ಸಿಗುತ್ತಿರುವ ಮೀಸಲಾತಿ ತಮ್ಮನ್ನು ಉದ್ಯೋಗಾವಕಾಶದಿಂದ ವಂಚಿಸುತ್ತಿದೆ ಎಂಬ ಅಭಿಪ್ರಾಯ ಈ ಸಮುದಾಯಗಳಲ್ಲಿ ಬೆಳೆಯುತ್ತಿದೆ.

ಅಸಹನೆಗಿಂತಲೂ ಹೆಚ್ಚಾಗಿ ಆತಂಕ, ಭವಿಷ್ಯದ ಚಿಂತೆ ಕಾಡುತ್ತಿದೆ. ಅಭದ್ರತೆ ಜಾಸ್ತಿಯಾಗುತ್ತಿದೆ. ಅದನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಸರ್ಕಾರಗಳು ಸೋತಿವೆ ಅಥವಾ ಕೊಡಬೇಕಾದಷ್ಟು ಗಮನ ಕೊಟ್ಟಿಲ್ಲ.

ಮರಾಠಾ ಮೀಸಲು ಹೋರಾಟದಲ್ಲಿ ಮೀಸಲಾತಿ ಜತೆಗೆ ‘ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ’ ರದ್ದಾಗಬೇಕು ಎಂಬ ಬೇಡಿಕೆಯೂ ಸೇರಿಕೊಂಡಿದೆ. ಈ ಕಾಯ್ದೆಯನ್ನು ದಲಿತರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಹೋರಾಟಗಾರರ ಆಕ್ಷೇಪ.

2016ರ ಜುಲೈಯಲ್ಲಿ ಅಹಮದ್‌ ನಗರ ಜಿಲ್ಲೆಯ ಗ್ರಾಮವೊಂದರಲ್ಲಿ 14 ವರ್ಷದ ಮರಾಠಾ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲ್ಲಲಾಗಿತ್ತು. ಈ ಪ್ರಕರಣದ ಮೂವರೂ ಆರೋಪಿಗಳು ದಲಿತರು. ಆಗ ರಾಜ್ಯದಾದ್ಯಂತ ಮರಾಠರು ದೊಡ್ಡ ಪ್ರಮಾಣದಲ್ಲಿ ಬೀದಿಗೆ ಇಳಿದಿದ್ದರು.

ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅದಕ್ಕೆ ಈಗ, ಮೀಸಲಾತಿ ಬೇಕು ಎಂಬ ಬೇಡಿಕೆ ಕೂಡ ಮುಖ್ಯ ವಿಷಯವಾಗಿ ಸೇರಿಕೊಂಡಿದೆ. ಇದನ್ನು ಹಿಂದುಳಿದವರ ಪಟ್ಟಿಗೆ ಸೇರಲು ಪೈಪೋಟಿ ಎಂದು ಪರಿಗಣಿಸುವುದಕ್ಕಿಂತ ಸಾಮಾಜಿಕ ಅಸಮಾಧಾನ ಹೆಚ್ಚುತ್ತಿರುವುದರ ಸಂಕೇತ ಎಂದು ಪರಿಗಣಿಸಬೇಕು.

ಯಾರಿಗೂ ಅನ್ಯಾಯವಾಗದಂತೆ ನಾಜೂಕಾಗಿ ನಿಭಾಯಿಸಬೇಕು. ಆ ಕೆಲಸ ಬೇಗ ಆಗಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರಗಳ ಮುಂದಿರುವ ದೊಡ್ಡ ಸವಾಲು ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT