ರಾಮಾಯಣ ರಸಯಾನ

ತಪಸ್ಸು: ಸೃಷ್ಟಿಗೂ ಕಾವ್ಯಕ್ಕೂ ಬೆಳಕು

ಈ ಕಾರಣದಿಂದ ವೇದವನ್ನು ಕಾವ್ಯ ಎಂದು ಕರೆಯಲಾದೀತೆ? ಈ ವಿಷಯದ ಬಗ್ಗೆ ಬೇರೆ ಬೇರೆ ರೀತಿಯ ಹಾಗೂ ನೆಲೆಯ ವಿಶ್ಲೇಷಣೆ ನಡೆದಿದೆ. ಸದ್ಯಕ್ಕೆ ಇಲ್ಲಿ ಅವುಗಳ ವಿವರಗಳು ಅಪ್ರಸ್ತುತ. ರಾಮಾಯಣವನ್ನು ಆದಿಕಾವ್ಯ ಎಂದು ಸ್ವೀಕರಿಸಿ ಮುಂದುವರೆಯೋಣ.

ತಪಸ್ಸು: ಸೃಷ್ಟಿಗೂ ಕಾವ್ಯಕ್ಕೂ ಬೆಳಕು

ವಾಲ್ಮೀಕಿ ರಾಮಾಯಣ ‘ಆದಿಕಾವ್ಯ’; ಮೊದಲ ಕಾವ್ಯ ಎಂದು ಇದರ ಅರ್ಥ. ರಾಮಾಯಣಕ್ಕೂ ಮೊದಲು ನಮ್ಮಲ್ಲಿ ಕಾವ್ಯ ಇರಲಿಲ್ಲವೆ? ಹೇಳುವುದು ಕಷ್ಟ; ಪರಂಪರೆಯಂತೂ ರಾಮಾಯಣವನ್ನೇ ಆದಿಕಾವ್ಯ ಎಂದು ಗೌರವಿಸಿದೆ. ರಾಮಾಯಣಕ್ಕಿಂತಲೂ ಅತ್ಯಂತ ಪ್ರಾಚೀನ ಸಾಹಿತ್ಯವೆಂದರೆ ವೇದ. ವೇದದ ಹಲವು ಭಾಗಗಳು ಕಾವ್ಯಮಯವಾಗಿಯೇ ಇವೆ.

ಈ ಕಾರಣದಿಂದ ವೇದವನ್ನು ಕಾವ್ಯ ಎಂದು ಕರೆಯಲಾದೀತೆ? ಈ ವಿಷಯದ ಬಗ್ಗೆ ಬೇರೆ ಬೇರೆ ರೀತಿಯ ಹಾಗೂ ನೆಲೆಯ ವಿಶ್ಲೇಷಣೆ ನಡೆದಿದೆ. ಸದ್ಯಕ್ಕೆ ಇಲ್ಲಿ ಅವುಗಳ ವಿವರಗಳು ಅಪ್ರಸ್ತುತ. ರಾಮಾಯಣವನ್ನು ಆದಿಕಾವ್ಯ ಎಂದು ಸ್ವೀಕರಿಸಿ ಮುಂದುವರೆಯೋಣ.

‘ಮೊದಲ ಕಾವ್ಯ’ ಎಂದರೆ ಸಾಮಾನ್ಯವಾದ ಎಣಿಕೆಯಲ್ಲಿ ‘ಒಂದು ಪ್ರಯೋಗ; ಇನ್ನೂ ಪೂರ್ಣಸಿದ್ಧಿಯನ್ನು ಪಡೆಯದ ಪ್ರಯತ್ನ’. ಮನೆಯಲ್ಲಿ ದೋಸೆ ಮಾಡುವಾಗ ಗಮನಿಸಿ. ಮೊದಲನೆಯ ಸಲವೇ ದೋಸೆ ‘ದೋಸೆ’ ಆಗಲಾರದು; ಹಿಟ್ಟು–ದೋಸೆಗಳ ವಿಚಿತ್ರ ಸಾಂಗತ್ಯದಲ್ಲಿ ದೋಸೆಯ ಮುದ್ದೆಯೊಂದು ಕಾವಲಿಯ ಮೇಲೆ ಆಕಾರ ತಳೆಯುತ್ತದೆ; ಇದೊಂದು ವಿಧದಲ್ಲಿ 'ಬಲಿ'.

ಈ ಬಲಿಯ ಅನಂತರದ ಎರೆಯುವಿಕೆಯಲ್ಲೇ ದೋಸೆಯ ಪರಂಪರೆ ಆರಂಭವಾಗುತ್ತದೆಯಷ್ಟೆ. (ನಾನ್‌–ಸ್ಟಿಕ್‌ಪ್ಯಾನ್‌ನ ಈ ಕಾಲದಲ್ಲಿ ಇದು ಅಪವಾದವಾಗಿ ಕಾಣಬಹುದೆನ್ನಿ!) ಆದರೆ ರಾಮಾಯಣ ಹೀಗೆ ಪ್ರಯೋಗಕ್ಕೆ ‘ಬಲಿ’ಯಾದ ಮೊದಲ ಕಾವ್ಯವಲ್ಲ; ಪ್ರತಿಭೆಯ ಮೊದಲನೆಯ ಎರೆಯುವಿಕೆಯಲ್ಲಿ ಪರಿಪೂರ್ಣ ಕಾವ್ಯ ಎನಿಸಿತು.

ಇದರ ಕರ್ತೃ ವಾಲ್ಮೀಕಿ ಮಹರ್ಷಿಗಳು ‘ನಾನೊಬ್ಬ ಕವಿ’ ಎಂಬ ಅಹಂಗೆ ಅಂಟಿಕೊಳ್ಳದೇ ಇದ್ದುದರಿಂದಲೇ ಇದು ಸಾಧ್ಯವಾಯಿತೇನೋ? ರಾಮಾಯಣ ಆದಿಕಾವ್ಯ ಎಂಬ ವಿಷಯವಾಗಿ ಡಿವಿಜಿಯವರ ಮಾತುಗಳು ಉಲ್ಲೇಖಾರ್ಹವಾದಂಥವು: ‘ಶ್ರೀಮದ್ರಾಮಾಯಣವು ಕಾವ್ಯಮಾತ್ರವಲ್ಲ – ಆದಿಕಾವ್ಯ. ಅದರ ಆದಿತ್ವವು ಕಾಲಮಾನಮಾತ್ರದ್ದಲ್ಲ; ಗುಣಾಧಿಕ್ಯದಿಂದಲೂ ಸಿದ್ಧವಾದದ್ದು.

ಪ್ರಪಂಚದ ಸಾಹಿತ್ಯಚರಿತ್ರೆಯಲ್ಲಿ ಇದು ಒಂದು ಅಚ್ಚರಿಯ ಸಂಗತಿ. ಪ್ರಪಂಚದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲನೆಯ ಕಾವ್ಯವೇ ಕಾವ್ಯದ ಸಲ್ಲಕ್ಷಣಗಳಿಗೆ ಆದರ್ಶವೂ ಆಗಿದೆ. ಪ್ರಪಂಚದ ಇತರ ವಸ್ತುಗಳ ಚರಿತ್ರೆಯಲ್ಲಿ ಪ್ರಥಮಕೃತಿಗೂ ಆಮೇಲಿನದಕ್ಕೂ ನಡುವೆ ಒಂದು ಪರಿಷ್ಕಾರಕ್ರಮ ಕಂಡುಬರುತ್ತದೆ.

ಮೊದಮೊದಲಿನ ಕೃತಿ ಒರಟಾಗಿ ಪೆಡಸಾಗಿರುತ್ತದೆ; ಆಮೇಲಿನದರಲ್ಲಿ ನಯ ನಾಜೂಕುಗಳು ಕಾಣುತ್ತವೆ. ... ಸರ್ವಾಂಗಪರಿಪೂರ್ಣವೂ ಸರ್ವಾಂಗಸುಂದರವೂ ಆದ ಒಂದು ಸಮಗ್ರಕಾವ್ಯವನ್ನು ಪ್ರಥಮವಾಗಿ ನಿರ್ಮಿಸಿದ ಯಶಸ್ಸು ವಾಲ್ಮೀಕಿಯದು.’

ಆದಿಕಾವ್ಯದ ಮೊದಲ ನುಡಿಯೇ ‘ತಪಸ್ಸು’.  ಅದರ ಜೊತೆಯಲ್ಲಿಯೇ ‘ಸ್ವಾಧ್ಯಾಯ’ವೂ ಇದೆ. ನಮ್ಮನ್ನೂ ವಿಶ್ವವನ್ನೂ ನಮಗೆ ಕಾಣಿಸಬಲ್ಲ ಎರಡು ಕಣ್ಣುಗಳು ಇವು.

ತಪಸ್ಸು ಎಂದರೆ ದೇಹದಂಡನೆ ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ನಾವು ಮಾಡಿದ ಯಾವುದೋ ತಪ್ಪಿಗೆ ಪ್ರಾಯಶ್ಚಿತ್ತವಾಗಿ ವಿಧಿಸಿಕೊಳ್ಳುವ ದಂಡನೆ ತಪಸ್ಸಲ್ಲ. ಯಾವುದಾದರೊಂದು ವಿಷಯವನ್ನು ಕುರಿತಾಗಿ ನಮ್ಮ ಏಕಾಗ್ರತೆಯ ತೀವ್ರಸ್ಥಿತಿಯೇ ತಪಸ್ಸು. ‘ಆಲೋಚನೆ’ ಎಂಬ ಅರ್ಥದ ಧಾತುವಿನ ಹುಟ್ಟಿದ್ದು ‘ತಪಸ್ಸು’ ಎಂಬ ಶಬ್ದ. ಪ್ರಜಾಪತಿಯು ಸೃಷ್ಟಿ ಮಾಡಲು ಸಾಧ್ಯವಾದದ್ದೇ ತಪಸ್ಸಿನಿಂದ ಎನ್ನುತ್ತದೆ ಶ್ರುತಿ.

ಅವನು ಏನನ್ನು ಸೃಷ್ಟಿ ಮಾಡಲು ತೊಡಗಿದನೋ ಅದನ್ನು ಸಮಾಧಾನದಿಂದ ಆಲೋಚಿಸಿದನಂತೆ – ಧ್ಯಾನಿಸಿದನಂತೆ. ಅದೇ ಸೃಷ್ಟಿಯಾಗಿ ಹೊರಹೊಮ್ಮಿತು. ಕವಿಯೂ ಕೂಡ ಸೃಷ್ಟಿಕರ್ತನೇ. ಅಕ್ಷರರೂಪದಲ್ಲಿ  ಅವನ ಕಾವ್ಯ ಪ್ರಕಟವಾಗುವ ಮೊದಲು ಅವನ ಅಂತರಂಗದ ಆಲೋಚನೆಯ ಬೀಜದಲ್ಲಿ ಅಡಗಿರುತ್ತದೆ.

ಈ ಆಲೋಚನೆಯ ಮೂಲವನ್ನೇ ‘ಪ್ರತಿಭೆ’ ಎಂದೂ ಕರೆದಿರುವುದು. ಕಾವ್ಯಸೃಷ್ಟಿಗೆ ಇದರ ಜೊತೆಗೆ ಬೇಕಾಗಿರುವುದೇ ‘ವ್ಯುತ್ಪತ್ತಿ’. ‘ಸ್ವಾಧ್ಯಾಯ’ ಎಂದರೆ ಕಲಿಕೆ; ವೇದಾಭ್ಯಾಸ – ಎಂದೂ ಹೇಳುವುದುಂಟು. ಅನುಭವದ ಅರಿವೇ ವೇದ; ಲೋಕದ ಬಗ್ಗೆ ಸೂಕ್ಷ್ಮವಾದ ತಿಳಿವಳಿಕೆ. ಇದೇ ವ್ಯುತ್ತತ್ತಿ.

‘ಪ್ರತಿಭೆ’–  ಅಂತರಂಗದ ಕಾವು; ‘ವ್ಯುತ್ಪತ್ತಿ’ – ಬಹಿರಂಗದ ಬೆಳಕು. ಆದಿಕಾವ್ಯದ ಮೊದಲಲ್ಲೇ ಸೃಷ್ಟಿಶೀಲತೆಗೆ ಆವಶ್ಯಕವಾದ ಪ್ರತಿಭೆ ಮತ್ತು ವ್ಯುತ್ಪತ್ತಿ – ಎರಡನ್ನೂ ಸೂಚಿಸಿರುವುದು ಸ್ವಾರಸ್ಯಕರವಾಗಿದೆ. ಇಷ್ಟಕ್ಕೂ ನಾರದರನ್ನು ವಾಲ್ಮೀಕಿಮಹರ್ಷಿ ಕೇಳಿದ ಪ್ರಶ್ನೆಯಾದರೂ ಏನು?

Comments
ಈ ವಿಭಾಗದಿಂದ ಇನ್ನಷ್ಟು

ಸ್ವಾಧ್ಯಾಯ
ಅಗ್ನಿಯ ಸ್ತುತಿ

ಋಗ್ವೇದ ಆರಂಭವಾಗುವುದೇ ಅಗ್ನಿಯ ಸ್ತುತಿಯಿಂದ; ಋಗ್ವೇದದ ಮೊದಲ ಮಂತ್ರ ಹೀಗಿದೆ. ಈ ಮಂತ್ರದ ಋಷಿ: ಮಧುಚ್ಛಂದಾ; ಛಂದಸ್ಸು: ಗಾಯತ್ರೀ; ದೇವತೆ: ಅಗ್ನಿ

21 Apr, 2018
ಏನ್‌ ಎಮ್ಮೆಲ್ಲೆಗಳೋ ಯಾಕ್ಹಿಂಗ್‌ ಆಡ್ತಾರೊ!

ವಿಡಂಬನೆ
ಏನ್‌ ಎಮ್ಮೆಲ್ಲೆಗಳೋ ಯಾಕ್ಹಿಂಗ್‌ ಆಡ್ತಾರೊ!

21 Apr, 2018
ಯಾಗದ ಕುದುರೆ ಹೊರಟಿತು ಸಂಚಾರಕೆ

ರಾಮಾಯಣ ರಸಯಾನ 36
ಯಾಗದ ಕುದುರೆ ಹೊರಟಿತು ಸಂಚಾರಕೆ

21 Apr, 2018
ಎಲ್ಲ ತತ್ವದೆಲ್ಲೆ ಮೀರಿ...

ಬೆಳಕು – ಬೆರಗು
ಎಲ್ಲ ತತ್ವದೆಲ್ಲೆ ಮೀರಿ...

18 Apr, 2018

ಬೆಳಕು – ಬೆರಗು
ಐಕಾನ್‍ಗಳಾಚೆಗೆ...

‘ಬಸವನೆಂದರೆ ಪಾಪ ದೆಸೆಗಟ್ಟಿ ಓಡುವುದಯ್ಯಾ’ ಎಂಬ ಮಾತಿದೆ. ಬಹುಶಃ ತಳ ಸಮುದಾಯಗಳು ತಮ್ಮನ್ನು ಕೇಡು ಆಚರಣೆಗಳಿಂದ ದೂರ ಇಟ್ಟುಕೊಳ್ಳಲು ಭಾವನಾತ್ಮಕವಾಗಿ ಹೀಗೆ ಬಸವನೊಂದಿಗೆ ಬೆಸೆದುಕೊಂಡಿವೆ. ...

18 Apr, 2018