ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದಿಂದ ಕರಾಚಿವರೆಗೆ ‘ಬಹೂ’ಯಾನ...

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಸೂದುನ್ನೀಸಾ, ಕರಾಚಿ, ಪಾಕಿಸ್ತಾನ
ನಿರೂಪಣೆ: ಅರ್ಶದ್ ಹುಸೇನ್, ಕೊಪ್ಪ

ಪಾಕಿಸ್ತಾನ ಎಂದಾಕ್ಷಣ ಮನದಲ್ಲಿ ಮೂಡುವುದು ಶತ್ರು ರಾಷ್ಟ್ರ. ಪತ್ರಿಕೆಗಳಲ್ಲಿ ಪಾಕಿಸ್ತಾನದ ವಿರುದ್ಧ ಟೀಕೆ ಇದ್ದದ್ದೇ. ವಾಸ್ತವವಾಗಿ  ಅಂತರಾಳದಲ್ಲಿ ಇಂದಿಗೂ ಪಾಕಿಸ್ತಾನ ಮತ್ತು ಭಾರತದ ನಡುವೆ ಭ್ರಾತೃತ್ವ ಸಂಬಂಧವಿದೆ. ನಾವು ಮೂಲತಃ ಭಟ್ಕಳದ ಸಮೀಪ ಮುರ್ಡೇಶ್ವರದ ನವಾಯತ್ ಸಮುದಾಯಕ್ಕೆ ಸೇರಿದವರು. ನಮ್ಮ ಅಜ್ಜ ಸ್ವಾತಂತ್ರ್ಯದ ಬಳಿಕ  ಮಲೆನಾಡಿನ ಕೊಪ್ಪಕ್ಕೆ ಬಂದು ನೆಲೆಸಿದ ಕಾರಣ ನಾವೆಲ್ಲಾ ಮಲೆನಾಡಿನಲ್ಲಿಯೇ ಜನಿಸಿ, ಬಾಲ್ಯವೆಲ್ಲಾ ಮಲೆನಾಡಿನಲ್ಲಿಯೇ ಕಳೆಯಿತು. ಭಟ್ಕಳದ ನವಾಯತ್ ಸಮುದಾಯ ವ್ಯಾಪಾರವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವವರು. ನೂರಾರು ವರ್ಷಗಳಿಂದ ವ್ಯಾಪಾರ ನಿಮಿತ್ತ ದೂರದ ಊರುಗಳಿಗೆ ತೆರಳಿ ಅಂಗಡಿಗಳನ್ನು ತೆರೆಯುತ್ತಿದ್ದರು. ದೂರದ ಮುಂಬೈ, ಕರಾಚಿ ನಗರದಲ್ಲಿ ಇವರ ವ್ಯಾಪಾರ ಹೆಚ್ಚಾಗಿ ಅಭಿವೃದ್ಧಿಗೊಂಡ ಕಾರಣ ಎರಡೂ ನಗರಗಳ ನಡುವೆ ಹೆಚ್ಚು ಹೆಚ್ಚು ಜನರು ತಮ್ಮ ವ್ಯಾಪಾರ ಮುಂದುವರೆಸಿ ತಮ್ಮ ತಮ್ಮ ಕುಟುಂಬಗಳನ್ನು ಅಲ್ಲಿಗೆ ಕರೆಸಿಕೊಂಡರು.

ಮುರ್ಡೇಶ್ವರದ ನೂರಾರು ಕುಟುಂಬಗಳು ಕೂಡ ಹೀಗೆ ಕರಾಚಿಯಲ್ಲಿ ತಮ್ಮ ವ್ಯಾಪಾರವನ್ನು ವೃದ್ಧಿಸಿದವು. 1947ರ ಸ್ವಾತಂತ್ರ್ಯ ಸಂಗ್ರಾಮದವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು.

ಆದರೆ, ಸ್ವಾತಂತ್ರ್ಯ ಪಡೆದ ಬಳಿಕ ವಿಶಾಲ ಭಾರತದ ನಡುವೆ ಗೆರೆಯೊಂದನ್ನು ಎಳೆದು ಇನ್ನು ಮೇಲೆ ಇದು ಭಾರತ, ಇದು ಪಾಕಿಸ್ತಾನ ಎಂದು ಕರೆದ ನಂತರವಷ್ಟೇ ಲಕ್ಷಾಂತರ ಭಾರತೀಯರ ಜೊತೆಗೆ ಭಟ್ಕಳ- ಮುರ್ಡೇಶ್ವರದ ಜನತೆಗೂ ಬರಸಿಡಿಲು ಎರಗಿದಂತಾದದ್ದು. ದೇಶ ಇಬ್ಭಾಗವಾಗಿ ಹೋಗಿದೆ.ಮುಂಬೈ ಭಾರತಕ್ಕೂ, ಕರಾಚಿ ಪಾಕಿಸ್ತಾನಕ್ಕೂ ಸೇರಿದೆ. ಈಗ ನೀವು ಒಂದೋ ಪಾಕಿಸ್ತಾನವನ್ನು ಆರಿಸಿಕೊಳ್ಳಬೇಕು ಅಥವಾ ಭಾರತವನ್ನು ಆರಿಸಿಕೊಳ್ಳಬೇಕು ಎಂಬ ಆಯ್ಕೆ ಎದುರಾಗಿತ್ತು. ಭಟ್ಕಳ, ಮುರ್ಡೇಶ್ವರದ ಅರ್ಧಕ್ಕಿಂತಲೂ ಹೆಚ್ಚು ಜನರು ಅದಾಗಲೇ ಕರಾಚಿ ನಗರದಲ್ಲಿ ತಮ್ಮ ವ್ಯಾಪಾರವನ್ನು ಸ್ಥಾಪಿಸಿಯಾಗಿತ್ತು.

ಈಗ ಅವರಿಗೆ ದೇಶ ತೊರೆಯದೇ ನಿರ್ವಾಹವೇ ಇರಲಿಲ್ಲ. ಇತ್ತ ತಮ್ಮೂರಿನಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದ ಮನೆ, ಗದ್ದೆ, ತೋಟಗಳನ್ನು ಬಿಟ್ಟು ಹೋಗಲೂ ಆಗದು ಎಂಬ ಸಂದಿಗ್ಧತೆಯಲ್ಲಿ ತೊಳಲಾಡಿದರು. ಸಾಕಷ್ಟು ಸಮಾಲೋಚನೆ, ವಿಚಾರ ವಿಮರ್ಶೆಯ ಬಳಿಕ ಹೆಚ್ಚೂ ಕಡಿಮೆ ಅರ್ಧ ಊರಿನ ಜನತೆ ದೇಶ ಬಿಟ್ಟು ಕರಾಚಿ ನಗರಕ್ಕೆ ವಲಸೆ ಹೋಗುವುದು ಎಂದು ತೀರ್ಮಾನಿಸಿದರು. ಭಾರವಾದ ಹೃದಯದಿಂದ ‘ಟ್ರೇನ್ ಟು ಪಾಕಿಸ್ತಾನ್’ ಹತ್ತಿ ಭಾರತಕ್ಕೆ ವಿದಾಯ ಹೇಳಿದರು. ಅಂದು ಅರ್ಧ ಭಟ್ಕಳ, ಅರ್ಧ ಮುರ್ಡೇಶ್ವರ ಖಾಲಿಯಾಯಿತು.

ಹೀಗೆ ವಿದಾಯ ಹೇಳಿದ ಕುಟುಂಬವೊಂದರಲ್ಲಿ ನನ್ನ ಅಜ್ಜಿ (ದಿವಂಗತ ಶಹರ್ ಬಾನು)ಯವರ ತಂಗಿ (ದಿವಂಗತ ಬೀಬೀ ಹಾಜಿರಾ) ಅವರ ಕುಟುಂಬವೂ ಒಂದು. ನನ್ನ ಅಜ್ಜ (ದಿವಂಗತ ಮೊಹಮ್ಮದ್ ಗೌಸ್) ಅವರು ಪಾಕಿಸ್ತಾನಕ್ಕೆ ಹೋಗಲು ಇಷ್ಟಪಡದೇ ಮಲೆನಾಡಿನ ಮಾವಿನಕಟ್ಟೆಗೆ ಮೊದಲು ಬಂದು, ನಂತರದಲ್ಲಿ ಕೊಪ್ಪದಲ್ಲಿ ನೆಲೆಸಿದರು. ಇದೇ ಕಾರಣಕ್ಕೆ ನಮ್ಮ ಕುಟುಂಬವನ್ನು ಇಂದಿಗೂ ಮಾವಿನಕಟ್ಟೆ ಸಾಹೇಬರು ಎಂದೇ ಜನರು ಗುರುತಿಸುತ್ತಾರೆ.

ಮನ ಇಬ್ಭಾಗವಾಗಲಿಲ್ಲ

ದೇಶ ಇಬ್ಭಾಗವಾದರೇನು, ಮನಸ್ಸು ಇಬ್ಭಾಗವಾಗುತ್ತದೆಯೇ? ಹುಟ್ಟೂರಿನ ಆಕರ್ಷಣೆ ಹೋಗುತ್ತದೆಯೇ? ಕರಾಚಿ ಸೇರಿದ ನಮ್ಮ ಜನರಿಗೂ ಸದಾ ತಮ್ಮ ಸ್ವಂತ ಊರಿನ ಚಿಂತೆ ಕಾಡುತ್ತಿತ್ತು. ತಮ್ಮವರನ್ನು ಬಿಟ್ಟು ಬಂದ ದುಃಖ ಸದಾ ಇರುತ್ತಿತ್ತು. ಅಂದೆಲ್ಲಾ ಇಂದಿನಂತೆ ಫೋನು, ಇಂಟರ್ನೆಟ್‌ ಸೌಲಭ್ಯವಿರಲಿಲ್ಲ. ಹಾಗಾಗಿ ಹೆಚ್ಚಿನವರು ಸ್ವತಃ ವರ್ಷಕ್ಕೊಂದು ಬಾರಿ ತಮ್ಮ ಹುಟ್ಟೂರಿಗೆ ಬಂದು ಹೋಗುತ್ತಿದ್ದರು. ಇಲ್ಲಿನ ಗದ್ದೆ, ತೋಟ, ತೆಂಗಿನ ತೋಟಗಳನ್ನು (ನಮ್ಮ ಭಾಷೆಯಲ್ಲಿ ಇದಕ್ಕೆ ಪೊಡಸು ಎಂದು ಕರೆಯುತ್ತಾರೆ) ಗೇಣಿಗೆ ಕೊಟ್ಟು ಹಾಳುಬೀಳದಂತೆ ನೋಡಿಕೊಂಡರು. ಅಂದೆಲ್ಲಾ ಹೀಗೆ ಕರಾಚಿಯಿಂದ ಬರುವ ವ್ಯಕ್ತಿಗಳಿಗೆ ಊರಿನಲ್ಲಿ ಭವ್ಯವಾದ ಸ್ವಾಗತ ದೊರಕುತ್ತಿತ್ತು.

ಕರಾಚಿಯಲ್ಲಿ ಆಗ ವ್ಯಾಪಾರವೂ ಉತ್ತಮವಿದ್ದುದರಿಂದ ಶೀಘ್ರದಲ್ಲಿಯೇ ಹಣವಂತರಾದ ಜನರು ಹೀಗೆ ಗಳಿಸಿದ ಹಣದಲ್ಲಿ ಮುರ್ಡೇಶ್ವರ, ಮನ್ಕಿ, ಹಳದೀಪುರ, ಹೊನ್ನಾವರ, ಭಟ್ಕಳ, ಕಾಯ್ಕಿಣಿ, ತೋನ್ಸೆ ಮೊದಲಾದ ಕಡೆಗಳಲ್ಲಿ ಮಸೀದಿಗಳನ್ನು, ಧಾರ್ಮಿಕ ಶಿಕ್ಷಣ ಕ್ಷೇತ್ರಗಳನ್ನು, ವೈದ್ಯಕೀಯ ಸವಲತ್ತುಗಳನ್ನು, ಸೇತುವೆ ಇಲ್ಲದೆಡೆ ದೋಣಿಯ ವ್ಯವಸ್ಥೆ, ಸ್ಮಶಾನ ಮೊದಲಾದ ಸೇವೆ ನೀಡಿದರು. ತಮ್ಮ ತೋಟಗಳಿಂದ ಯಾವುದೇ ಉತ್ಪನ್ನ ಬರದೇ ಇದ್ದರೂ ತೊಂದರೆ ಇಲ್ಲ, ತೋಟ ಹಾಳಾಗಬಾರದು ಎಂಬ ಉದ್ದೇಶದಿಂದ ಎಷ್ಟೋ ಬಡಕುಟುಂಬಗಳಿಗೆ ಅಲ್ಲಿಯೇ ಮನೆ ಮಾಡಿಕೊಂಡಿರಲು ನೆರವು ನೀಡಿ ನೆಲೆ ನೀಡಿದರು.

ಕುಡಿಯುವ ನೀರಿಗಾಗಿ ಬಾವಿ, ಕೆರೆಗಳ ನಿರ್ಮಾಣಕ್ಕಾಗಿ ಕೊಡುಗೈ ದೇಣಿಗೆ ನೀಡಿದರು. ಈ ಕಾಲದಲ್ಲಿ ನಿರ್ಮಾಣವಾದ ನೂರಾರು ಬಾವಿ, ಮೆಟ್ಟಿಲು ಮೆಟ್ಟಿಲಾಗಿರುವ ಕೊಳಗಳು ಇಂದಿಗೂ ಕರಾವಳಿಯಾದ್ಯಂತ ನೂರಾರು ಜನರಿಗೆ ನೀರು ಒದಗಿಸುತ್ತಿವೆ. ಈ ಸಂಬಂಧ ನಮ್ಮ ಕಾಲದಲ್ಲಿ ಕೊನೆಯಾಗಬಾರದು, ನಮ್ಮ ಮಕ್ಕಳಲ್ಲಿಯೂ ಈ ಬಾಂಧವ್ಯ ಮುಂದುವರೆಯಬೇಕು ಎಂಬ ಬಯಕೆಯಿಂದ ಈ ಹಿರಿಯರು ಪಾಕಿಸ್ತಾನದಲ್ಲಿರುವ ಮತ್ತು ಭಾರತದಲ್ಲಿರುವ ಕುಟುಂಬಗಳ ನಡುವೆ ವಿವಾಹಗಳನ್ನು ನಡೆಸುತ್ತಿದ್ದರು. ಇದರ ಪರಿಣಾಮವಾಗಿ ಭಟ್ಕಳ, ಮುರ್ಡೇಶ್ವರದ ಕಡೆಯ ನೂರಾರು ಯುವತಿಯರು ಸೊಸೆಯರಾಗಿ ಪಾಕಿಸ್ತಾನ ಸೇರಿದರೆ ಅತ್ತ ಕರಾಚಿಯಿಂದ ನೂರಾರು ಯುವತಿಯರು ಭಟ್ಕಳದ ಸೊಸೆಯರಾಗಿ ಬಂದರು.

ನಮ್ಮ ಅಜ್ಜಿ ಹಾಗೂ ಅವರ ತಂಗಿಯ ಬಾಂಧವ್ಯ ಮುಂದುವರೆಯಬೇಕೆಂಬ ಬಯಕೆಯಿಂದ ಅಜ್ಜಿಯ ಮೊಮ್ಮಗಳಾದ ನನ್ನನ್ನು ಚಿಕ್ಕಜ್ಜಿಯ (ಅಜ್ಜಿಯ ತಂಗಿ) ಮಗನಿಗೆ 1986ರಲ್ಲಿ ವಿವಾಹ ಮಾಡಿ ಕೊಡಲಾಯಿತು (ಪತಿ-ಶೌಕತ್ ಹುಸೇನ್ ದುರ್ಗಾ).

***

ಮುಸ್ಲಿಮರು ತಂದುಕೊಟ್ಟ ಕೃಷ್ಣ ಶಿವನಿಗೆ ಪೂಜೆ!

ನಾನು ಮದುವೆಯಾಗಿ ಬಂದ ಹೊಸದರಲ್ಲಿ ನಮ್ಮೆಜಮಾನರ ಮಿತ್ರರೊಬ್ಬರು ಮನೆಗೆ ಬಂದವರು ತಮ್ಮ ಹೆಸರು ಚಂದು, ತನಗೆ ಮುಂದಿನ ಬಾರಿ ಬರುವಾಗ ಭಾರತದಿಂದ ಕೃಷ್ಣನ ಮೂರ್ತಿಯೊಂದನ್ನು ತಂದುಕೊಡಿ ಎಂದು ವಿನಂತಿಸಿದ್ದರು. ಆಗಲೇ ಇಲ್ಲಿಯೂ ಹಿಂದೂ ಧರ್ಮೀಯರು ಇದ್ದಾರೆಂದು ತಿಳಿದಿದ್ದು! ನಮ್ಮೆಜಮಾನರ ಕೆಲವು ಹಿಂದೂ ಮಿತ್ರರು ತಮ್ಮ ಹಬ್ಬಗಳಾದ ದೀಪಾವಳಿ, ನವರಾತ್ರಿ ಮೊದಲಾದ ಸಂದರ್ಭಗಳಲ್ಲಿ ನಮ್ಮ ಮನೆಗೆ ಬಂದು ಸಿಹಿ ಹಂಚುತ್ತಾರೆ. ಮಾತಿಗೆ ತಪ್ಪದಂತೆ ನಮ್ಮೆಜಮಾನರು ಮುಂದಿನ ಭೇಟಿಯ ಸಮಯದಲ್ಲಿ ಭಾರತದಿಂದ ಕೃಷ್ಣನ ವಿಗ್ರಹವೊಂದನ್ನು ತಮ್ಮ ಸ್ನೇಹಿತರಿಗೆ ತಂದುಕೊಟ್ಟಾಗ ಅವರ ಕಣ್ಣಾಲಿಗಳು ತುಂಬಿಬಂದಿದ್ದವಂತೆ. ಮುಂದಿನ ಬಾರಿ ತನಗೆ ಶಿವ– ಪಾರ್ವತಿಯವರ ವಿಗ್ರಹ ತರಲು ಸಾಧ್ಯವೇ ಎಂದು ಕೇಳಿಕೊಂಡಿದ್ದು ನಂತರದ ಭಾರತ ಭೇಟಿಯಲ್ಲಿ ಆ ವಿಗ್ರಹಗಳನ್ನೂ ಕೊಂಡೊಯ್ದು ಅವರಿಗೆ ತಲುಪಿಸಿದ್ದೇವೆ. ಅವರ ಮನೆಯಲ್ಲಿ ಈ ವಿಗ್ರಹಗಳಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಆ ಕುಟುಂಬದ ಪ್ರಾರ್ಥನೆಗೆ ನೆರವಾಗಿರುವ ಸಾರ್ಥಕ ಭಾವನೆ ಮನಸ್ಸಿಗೆ ನೆಮ್ಮದಿ ನೀಡಿದೆ.

***

ಬರ್ಗರ್ ಫ್ಯಾಮಿಲಿ

ಪಾಕಿಸ್ತಾನದಿಂದಲೂ ಹಲವಾರು ಜನ ಅಮೇರಿಕಕ್ಕೆ ಹೋಗಿ ನೆಲೆಸಿದ್ದು ಅಲ್ಲಿನ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ. ಈ ಕುಟುಂಬದ ಹಿರಿಯರು ಪಾಕಿಸ್ತಾನಕ್ಕೆ ಬಂದಾಗ ಇಲ್ಲಿನ ಜನರೊಂದಿಗೆ ನಯವಂತಿಕೆಯಿಂದ ನಡೆದುಕೊಂಡರೂ ಇವರ ಮಕ್ಕಳು ಅಲ್ಲಿಯೇ ಹುಟ್ಟಿ ಬೆಳೆದವರಾಗಿದ್ದು ಇವರಿಗೆ ಪಾಕಿಸ್ತಾನದ ಬಗ್ಗೆ ಅತೀವವಾದ ತಾತ್ಸಾರ. ಇವರ ಹಿರಿಯರು ತಮ್ಮ ಮಕ್ಕಳನ್ನು ತಮ್ಮ ತಾಯ್ನಾಡು ಸಂಸ್ಕೃತಿಯನ್ನು ಪರಿಚಯಿಸಲು ಇಲ್ಲಿ ಕರೆದುಕೊಂಡು ಬಂದರೆ ಈ ಮಕ್ಕಳು ಮಾತ್ರ ತಮ್ಮನ್ನು ಅಮೆರಿಕದ ಸ್ವರ್ಗದಿಂದ ತಮ್ಮನ್ನು ಇಳಿಸಿ ಈ ಪಾಕಿಸ್ತಾನವೆಂಬ ನರಕಕ್ಕೆ ದೂಡಿದ್ದಾರೆ ಎಂಬಂತೆ ವರ್ತಿಸುತ್ತಾರೆ. ನಿರ್ಲಕ್ಷ್ಯ, ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇವರು ಅತಿಥಿಗಳಾಗಿ ಹೋದ ಮನೆಯವರು ಅಕ್ಕರೆಯಿಂದ ಬಿರಿಯಾನಿ ಮಾಡಿದರೆ ‘ನಮಗೆ ಬಿರಿಯಾನಿ ಬೇಡ, ಬರ್ಗರ್ ತರಿಸಿ’ ಎಂಬ ಬೇಡಿಕೆ ಇಡುತ್ತಾರೆ. ಇದೇ ಕಾರಣಕ್ಕೆ ಈ ಕುಟುಂಬದ ಸದಸ್ಯರನ್ನು ಬರ್ಗರ್ ಫ್ಯಾಮಿಲಿ ಎಂದು ಕರೆಯುತ್ತಾರೆ. ಇಡೀ ಕರಾಚಿಯಲ್ಲಿ ಈ ವ್ಯಕ್ತಿಗಳು ಎಲ್ಲೇ ತಿರುಗಾಡಲಿ, ಜನರು ಇವರನ್ನು ಬರ್ಗರ್ ಫ್ಯಾಮಿಲಿ ಎಂದೇ ಗುರುತಿಸುತ್ತಾರೆ. ಹೆಚ್ಚಿನವರು ಇವರ ನಿರ್ಲಕ್ಷ್ಯಕ್ಕೆ ಬಗ್ಗದೇ ’ಬರ್ಗರ್ ಬೇಕಾದರೆ ಅಮೆರಿಕಕ್ಕೇ ಹೋಗಿ, ಇಲ್ಲಿ ಸಿಗುವುದು ಬಿರಿಯಾನಿಯೇ’ ಎಂದು ದಿಟ್ಟತನದಿಂದ ಉತ್ತರಿಸುವುದಿದೆ.

***

ಕರಾಚಿಯಲ್ಲಿ ಕನ್ನಡ ಹರಟೆ

ಹುಟ್ಟಿದಾಗಿನಿಂದಲೂ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದ ನನಗೆ ಕರಾಚಿಗೆ ಬಂದ ಬಳಿಕ ಕನ್ನಡದಲ್ಲಿ ಮಾತನಾಡಲು ಯಾರೂ ಇಲ್ಲದೇ ತುಂಬಾ ಬೇಸರವಾಗುತ್ತಿತ್ತು. ಮನೆಯಿಂದ ಬರುವಾಗ ಆಹಾರವಸ್ತುಗಳನ್ನು ಕಟ್ಟಿಕೊಟ್ಟ ಕನ್ನಡ ಪತ್ರಿಕೆಗಳ ಹಳೆಯ ಪುಟಗಳನ್ನೇ ಕೆಲವಾರು ಬಾರಿ ಓದಿದ್ದಿದೆ. ಕನ್ನಡ ಪತ್ರಿಕೆಗಳು ಸಿಗುವುದಂತೂ ಕನಸಿನ ಮಾತು. ನನ್ನ ತಮ್ಮ ಸಾಧ್ಯವಾದಾಗಲೆಲ್ಲಾ ಸುಧಾ, ತರಂಗ, ಮಯೂರ ಮೊದಲಾದ ಪತ್ರಿಕೆಗಳನ್ನು ಆಗಾಗ ಕಳುಹಿಸಿಕೊಡುತ್ತಿದ್ದ. ಅದು ಬಿಟ್ಟರೆ ಕನ್ನಡವನ್ನು ಮಾತನಾಡುವುದು ನಾನು ರಜೆಗೆ ಕರ್ನಾಟಕಕ್ಕೆ ಬಂದಾಗಲೇ. ಆದರೂ ನಾನು ಇಂದಿಗೂ ಕನ್ನಡವನ್ನು ಮರೆತಿಲ್ಲ. ಇಂಟರ್ನೆಟ್ ಬಂದ ಬಳಿಕ ‘ಪ್ರಜಾವಾಣಿ’ ಸೇರಿದಂತೆ ಇತರ ಕನ್ನಡ ಪತ್ರಿಕೆ ಮೊದಲಾದವು ಆನ್‌ಲೈನಿನಲ್ಲಿ ಸಿಗತೊಡಗಿದ ಬಳಿಕ ಸಮಯ ಸಿಕ್ಕಾಗೆಲ್ಲಾ ಕೊಂಚ ಕೊಂಚ ಓದುತ್ತಿದ್ದೇನೆ. ಇಷ್ಟು ಬಿಟ್ಟರೆ ಕರಾಚಿಯಲ್ಲಾಗಲೀ, ಇಡೀ ಪಾಕಿಸ್ತಾನದಲ್ಲಿ ಕನ್ನಡ ಎಲ್ಲೂ ಸಿಕ್ಕಿಲ್ಲವೆಂದೇ ಹೇಳಬಹುದು. ವಾಟ್ಸ್ಯಾಪ್ ಬಂದ ಬಳಿಕವಂತೂ ನನ್ನ ಹಳೆಯ ಗೆಳತಿಯರೆಲ್ಲಾ ಸಿಕ್ಕಿದ್ದಾರೆ. ನಾವು ಕನ್ನಡದಲ್ಲಿಯೇ ಹರಟುತ್ತೇವೆ.

***

ಪಾಕಿಸ್ತಾನದ ಸೊಸೆಯಾಗಿ...

ಹೀಗೆ ಪಾಕಿಸ್ತಾನದ ಸೊಸೆಯಾಗುವಂತಾಯಿತು. ಆಗೆಲ್ಲಾ ಪಾಕಿಸ್ತಾನಕ್ಕೆ ಹೋಗಿಬರಲು ದೂರ ಒಂದೇ ಅಡ್ಡಿ. ವೀಸಾ ಪಡೆಯುವುದೇನೂ ಕಷ್ಟವಾಗುತ್ತಿರಲಿಲ್ಲ. ಪಾಕಿಸ್ತಾನದ‌ವರಿಗೆ ಭಾರತಕ್ಕೆ ಬರಲು ಕೇವಲ ಒಂದು ಏರೋಗ್ರಾಂ (ಭಾರತದ ಅಂಚೆ ಇಲಾಖೆಯಿಂದ ನಸುನೀಲಿ ಬಣ್ಣದ ಮುದ್ರಿತ ಅಂಚೆಚೀಟಿ ಇದ್ದ ಕಾಗದಕ್ಕೆ ಇನ್ ಲ್ಯಾಂಡ್ ಲೆಟರ್ ಭಾರತದೊಳಗೆ ಉಪಯೋಗಿಸುವುದಾದರೆ ಮೂವತ್ತೈದು ಪೈಸೆ ಹಾಗೂ ವಿದೇಶಕ್ಕೆ ಉಪಯೋಗಿಸುವುದಾದರೆ ಒಂದು ರೂಪಾಯಿ ಎಪ್ಪತ್ತು ಪೈಸೆ ಇತ್ತು, ಇದಕ್ಕೆ ಏರೋಗ್ರಾಂ ಎಂದು ಹೇಳುತ್ತಿದ್ದರು) ಪತ್ರದಲ್ಲಿ ವಿವಾಹಕ್ಕೋ, ಗೃಹಪ್ರವೇಶಕ್ಕೋ ಬನ್ನಿ ಎಂದು ಆಮಂತ್ರಿಸುತ್ತಿದ್ದರು. ಕರಾಚಿಯಲ್ಲಿ ಈ ಕಾಗದ ಮತ್ತು ಅಲ್ಲಿನ ಗುರುತಿನ ಚೀಟಿ ನೀಡಿದರೆ ಭಾರತದ ಎರಡು ತಿಂಗಳ ವೀಸಾ ದೊರಕುತ್ತಿತ್ತು. ಭಾರತದವರಿಗೂ ಅಷ್ಟೇ, ಪಾಕಿಸ್ತಾನದಲ್ಲಿರುವ ತಮ್ಮ ಸಂಬಂಧಿಕರ ಗುರುತಿನ ಪತ್ರದ ನಕಲು ಪ್ರತಿಯನ್ನು ತೋರಿಸಿ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದೇವೆ ಎಂದು ವಿವರಿಸುವ ಅರ್ಜಿ ತುಂಬಿಸಿ ಪಾಕಿಸ್ತಾನದ ದೂತಾವಾಸಕ್ಕೆ ಕಳುಹಿಸಿದರೆ ವೀಸಾ ದೊರಕುತ್ತಿತ್ತು.

ಇಂದಿಗೂ ಕರಾಚಿಯಲ್ಲಿ ಭಾರತದಲ್ಲಿರುವಷ್ಟೇ ನವಾಯತ್ ಸಮುದಾಯದ ಜನರಿದ್ದಾರೆ. ಆದರೆ ತೊಂಬತ್ತರ ದಶಕದಲ್ಲಿ ದೇಶಗಳ ನಡುವಣ ಕಲಹದ ಪರಿಣಾಮವಾಗಿ ವೀಸಾ ಪ್ರಕ್ರಿಯೆ ಅತ್ಯಂತ ಬಿಗಿಗೊಳಿಸಿದ ಕಾರಣ ಮದುವೆಗಳನ್ನು ಮಾಡಬಯಸುವವರು ಎರಡನೆಯ ಬಾರಿ ಯೋಚಿಸುವಂತಾಯ್ತು. 2000ನೇ ಇಸವಿಯ ಬಳಿಕ ಬೆರಳೆಣಿಕೆಯಷ್ಟು ಮಾತ್ರವೇ ವಿವಾಹಗಳು ಜರುಗಿವೆ. ಇತ್ತೀಚಿನ ದಿನಗಳಲ್ಲಂತೂ ಈ ವಿವಾಹಗಳ ಬಗ್ಗೆ ಚಕಾರವೆತ್ತುವುದೇ ಅಪರಾಧ ಎಂಬಂತಾಗಿದೆ.

ತಮ್ಮ ಜೀವಮಾನವಿಡೀ ವರ್ಷಕ್ಕೊಮ್ಮೆ ತಪ್ಪದೇ ಬರುತ್ತಿದ್ದ ನಮ್ಮ ಹಿರಿಯರು ಈಗ ವಯೋಸಹಜವಾಗಿ ತಮ್ಮ ಇಹಜೀವನ ಪೂರೈಸಿದ್ದಾರೆ. ಆದರೆ ಆ ಬಾಂಧವ್ಯ ಇಂದಿನ ಪೀಳಿಗೆಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ನಮ್ಮ ಮಾತೃಭಾಷೆ ನವಾಯತ್ ಅನ್ನು ಇಲ್ಲಿ ಹೆಚ್ಚಿನವರು ಮರೆತಿದ್ದಾರೆ. ಇಂದಿನ ಮಕ್ಕಳು ನಾವೇಕೆ ನವಾಯತ್ ಕಲಿಯಬೇಕು ಎಂದು ಕೇಳುತ್ತಾರೆ. ಇಲ್ಲಿಂದ ವಲಸೆಹೋದ ಬಳಿಕ ಮುರ್ಡೇಶ್ವರ, ಭಟ್ಕಳಗಳಲ್ಲಿ ನೂರಾರು ಮನೆಗಳು ಪಾಳುಬಿದ್ದಿದ್ದು, ಇವುಗಳ ವಾರಸುದಾರರು ಇವುಗಳ ಒಡೆತನ ಪಡೆಯಲು ಮುಂದೆ ಬರುತ್ತಿಲ್ಲ.

ನಾನು ನನ್ನ ತಂದೆತಾಯಿಯರಿಗೆ ನಾಲ್ಕನೆಯವಳಾಗಿ ಮಲೆನಾಡಿನ ಕೊಪ್ಪದಲ್ಲಿ ಜನಿಸಿದ್ದು. ಕೊಪ್ಪದಲ್ಲಿಯೇ ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನಡೆಯಿತು. ಉನ್ನತ ಶಿಕ್ಷಣ ಕೇವಲ ನಗರಗಳಲ್ಲಿರುವ ಯುವತಿಯರಿಗೆ ಲಭ್ಯವಾಗುತ್ತಿತ್ತು.

ನನ್ನ ವಿವಾಹ ಮುರ್ಡೇಶ್ವರದ ನಮ್ಮ ಹಿರಿಯರ ಸ್ವಗೃಹದಲ್ಲಿ ಜರುಗಿತು. ಈ ಮನೆ ಇಂದಿಗೂ ಸುಸ್ಥಿತಿಯಲ್ಲಿದೆ. ಆಗೆಲ್ಲಾ ಕರಾಚಿ ಎಂದರೆ ನಮಗೆಲ್ಲಾ ದೂರದ ಸ್ವರ್ಗ ಎಂದೇ ಭಾವನೆ. ನಮ್ಮ ಮಲೆನಾಡಿನ ಕೊಪ್ಪದಲ್ಲಿರುವ ಏಕಮಾತ್ರ ಜೆ.ಎಂ.ಜೆ. ಟಾಕೀಸಿನಲ್ಲಿ ಹಿಂದಿನ ವರ್ಷ ಬಿಡುಗಡೆಯಾಗಿದ್ದ ಕನ್ನಡ ಚಿತ್ರ ಸತತವಾಗಿ ಒಂದು ತಿಂಗಳು ಓಡುತ್ತಿದ್ದ ಸಮಯವದು. ಕರಾಚಿಯಿಂದ ಬಂದವರು ತಾವು ನೋಡಿದ ಲೇಟೆಸ್ಟ್ ಹಿಂದಿ ಚಲನಚಿತ್ರಗಳನ್ನೂ, ಹಾಲಿವುಡ್ ಚಿತ್ರಗಳ ಬಗ್ಗೆ, ಮನೆಯಲ್ಲಿ ಟೀವಿ, ವೀಸಿಆರ್, ಏಸಿ ಮೊದಲಾದವುಗಳ ಬಗ್ಗೆ ಹೇಳುತ್ತಿದ್ದರೆ ಕರಾಚಿಯೊಂದು ಸ್ವರ್ಗನಗರಿಯಂತೆಯೇ ಅನ್ನಿಸುತ್ತಿತ್ತು. ಈ ಕಾಲ್ಪನಿಕ ಸ್ವರ್ಗನಗರಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು 1986ರ ಡಿಸೆಂಬರಿನಲ್ಲಿ ಕರಾಚಿ ನಗರಕ್ಕೆ ಬಂದಿಳಿದಿದ್ದೆ.

ಮನೆಯ ಹಿರಿಯರೇ (ನನ್ನ ಮಾವ ದಿವಂಗತ ದುರ್ಗಾ ಅಹ್ಮದ್ ಸಾಹೇಬ್) ಬಹುತೇಕ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಮಕ್ಕಳಿಗೆ ಹೆಸರು ಇಡುವುದರಿಂದ ಹಿಡಿದು ಯಾವ ಶಿಕ್ಷಣ ಪಡೆಯಬೇಕು ಎಂಬ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಆಗ ಹಿರಿಯರು ಕೈಗೊಳ್ಳುತ್ತಿದ್ದ ಇನ್ನೊಂದು ಮುಖ್ಯ ನಿರ್ಧಾರವೆಂದರೆ ಈ ವರ್ಷ ಭಾರತಕ್ಕೆ ಯಾರು ಯಾರು ಹೋಗಬೇಕು ಎಂಬುದು. ಆ ದಿನಗಳಲ್ಲಿ ಪ್ರತಿವರ್ಷವೂ ಕೊಪ್ಪದ ನಮ್ಮ ಮನೆಗೆ ಕರಾಚಿಯಿಂದ ಹತ್ತು ಹದಿನೈದು ಜನರಾದರೂ ಅತಿಥಿಗಳಾಗಿ ಆಗಮಿಸುತ್ತಿದ್ದರು. 1985ರಲ್ಲಿ ಈ ಅವಕಾಶ ಪಡೆದ ನನ್ನ ಪತಿ ನಮ್ಮ ಮನೆಗೆ ಅತಿಥಿಗಳಾಗಿ ಬಂದು ನನ್ನನ್ನು ಮೆಚ್ಚಿಕೊಂಡು ಬಳಿಕ ವಿವಾಹದ ಪ್ರಸ್ತಾಪ ಎತ್ತಿದ್ದರು ಎಂದು ನನಗೆ ನಂತರ ತಿಳಿಯಿತು.

ಕರಾಚಿಯಲ್ಲಿ ನಮ್ಮ ಹಿರಿಯರು ಭಾರತದಿಂದ ಬಂದಿರುವ ಸೊಸೆಯರಿಗೆ ಹೆಚ್ಚಿನ ಅಕ್ಕರೆ ತೋರುತ್ತಿದ್ದರು. ಪಾಕಿಸ್ತಾನದಲ್ಲಿಯೇ ಹುಟ್ಟಿ ಬೆಳೆದ ಮಕ್ಕಳಿಗೆ ಒಂದು ಬಾರಿ ಭಾರತಕ್ಕೆ ಹೋಗಿ ಬಂದ ಬಳಿಕ ಮುಂದಿನ ಅವಕಾಶ ಸಿಗಲು ಹತ್ತು ಹದಿನೈದು ವರ್ಷಗಳೇ ಬೇಕಾಗುತ್ತಿತ್ತು. ಆದರೆ ಭಾರತದಿಂದ ಬಂದ ಸೊಸೆ ಎಂಬ ವಿಶೇಷ ಸವಲತ್ತು ಪಡೆದ ನಾವು ಹೆಚ್ಚೂ ಕಡಿಮೆ ಪ್ರತಿವರ್ಷವೂ ತವರುಮನೆಗೆ ಬರುತ್ತಿದ್ದೆವು. 1987ರಲ್ಲಿ ಮೊದಲ ಮಗ ಹುಟ್ಟಿದ ಸಮಯದಲ್ಲಿ ನನಗೆ ಭಾರತದಲ್ಲಿ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಯಿತು. ಅದೇ ಕೊನೆ, ಆ ಬಳಿಕ ವೀಸಾ ಪ್ರಕ್ರಿಯೆ ತೀರಾ ಜಟಿಲವಾದ ಕಾರಣ ನನ್ನ ಎರಡನೆಯ ಮಗನ ಸಮಯದಲ್ಲಿ (1991) ತುಂಬಾ ತೊಂದರೆಯಾಯಿತು. ಆಗ ಮಕ್ಕಳಿಗೆ ಪ್ರತ್ಯೇಕ ಪಾಸ್‌ಪೋರ್ಟ್ ತೆಗೆಸುವ ಅಗತ್ಯವಿರಲಿಲ್ಲ.

ತಾಯಿಯ ಪಾಸ್‌ಪೋರ್ಟ್‌ನಲ್ಲಿಯೇ ಹೆಸರನ್ನು ನಮೂದಿಸಲಾಗುತ್ತಿತ್ತು. ಆದರೆ ಈ ಕ್ರಿಯೆಗಾಗಿ ನಮಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ಆಗ ಡಿಸೆಂಬರ್ ತಿಂಗಳು, ದೆಹಲಿಯಲ್ಲಿ ಭಾರೀ ಚಳಿ, ಒಂದು ತಿಂಗಳಿನ ಮಗು ತೊಡೆಯ ಮೇಲಲ್ಲದೇ ಬೇರೆಲ್ಲೂ ಮಲಗುತ್ತಲೇ ಇರಲಿಲ್ಲ. ದೆಹಲಿಗೆ ರೈಲಿನಲ್ಲಿ ಹೋಗಿಬರುವ ಸುಮಾರು ಆರು ದಿನವೂ ನಾನೂ ನನ್ನ ತಮ್ಮನೂ ಮಗುವನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಹೆಚ್ಚೂ ಕಡಿಮೆ ಎಚ್ಚರಾಗಿಯೇ ಇದ್ದು ಕಾಲ ಕಳೆದೆವು. ಈಗ ಕಾನೂನು ಬದಲಾಗಿದೆ. ಹುಟ್ಟಿದ ಮಕ್ಕಳಿಗೂ ಹೊಸ ಪಾಸ್‌ಪೋರ್ಟ್ ಮಾಡಿಸಬೇಕಿದೆ. ಈ ಅನುಭವದಿಂದ ಪಾಠ ಕಲಿತ ನಾನು ಮೂರನೆಯ ಮಗುವಿನ (ಹೆಣ್ಣು) ಹೆರಿಗೆಯನ್ನು (1998) ಕರಾಚಿ ನಗರದಲ್ಲಿಯೇ ಆಗುವಂತೆ ಆಯ್ದುಕೊಂಡೆ. ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಾರಣ ಮಹಿಳೆಯರಿಗೂ ತಂದೆಯ ಆಸ್ತಿಯ ಸಮಾನ ಹಕ್ಕು ಪಡೆಯುವ ಅವಕಾಶವಿದೆ. ಭಾರತದಂತೆ ಇಲ್ಲಿಯೂ ಈಗ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನೂ ಸಮಾಜದಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಕಡೆಗಳಲ್ಲಿ ಉದ್ಯೋಗಗಳನ್ನು ನಡೆಸುತ್ತಿದ್ದಾರೆ.

ಕರಾಚಿಗೆ ಬಂದ ಬಳಿಕ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ನಾನು ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆ ಪೂರ್ಣ ಹುಸಿಯಾಗಿತ್ತು. ಕರಾಚಿ ನಗರವನ್ನು ನೋಡಿದಾಗ ನಮ್ಮ ಮುಂಬೈ ನಗರಕ್ಕೆ ಬಂದಂತೆಯೇ ಅನಿಸುತ್ತದೆ. ಇಲ್ಲಿನ ಜೀವನವೂ ಹೆಚ್ಚೂ ಕಡಿಮೆ ಮುಂಬೈ ನಗರದ ಜನರ ಜೀವನವನ್ನು ಹೋಲುತ್ತದೆ. ಮಲೆನಾಡಿನ ಪುಟ್ಟ ಊರಿನಿಂದ ನೇರವಾಗಿ ಕರಾಚಿಯಂತಹ ಬೃಹತ್ ನಗರಕ್ಕೆ ಬಂದಿಳಿದ ನನಗೆ ಸ್ವಾಭಾವಿಕವಾಗಿ ಇಲ್ಲಿನ ಜೀವನ ಮತ್ತು ಗೌಜಿ ಹೊಸದಾಗಿತ್ತು. ಆದರೆ ಹೊಂದಿಕೊಳ್ಳಲು ಹೆಚ್ಚೇನೂ ಸಮಯ ಹಿಡಿಯಲಿಲ್ಲ. ನಮ್ಮ ಕುಟುಂಬದ ಹಿರಿಯರೂ ನನ್ನನ್ನು ಸೊಸೆಗಿಂತ ಹೆಚ್ಚಾಗಿ ಮನೆಯ ಮಗಳಂತೆಯೇ ಕಾಣುತ್ತಿದ್ದರು. ತವರು ಮನೆ ಬಿಟ್ಟು ಇಷ್ಟು ದೂರ ಬಂದ ದುಃಖವೂ ಬಾಧಿಸುತ್ತಿರಲಿಲ್ಲ.

ಕಾಲ ಕಳೆದಂತೆ ನಮ್ಮ ಮಕ್ಕಳೆಲ್ಲ ದೊಡ್ಡವರಾಗಿ ಅಮೆರಿಕ, ಸೌದಿ, ದುಬೈ ಎಂದು ವಿದೇಶಗಳನ್ನು ಸೇರಿ ತಮ್ಮ ಕುಟುಂಬ ಸದಸ್ಯರನ್ನು ಕರೆಸಿಕೊಂಡ ಬಳಿಕ ಕೂಡು ಕುಟುಂಬದ ವ್ಯವಸ್ಥೆ ಇಲ್ಲವಾಗುತ್ತಾ ಸಾಗಿದೆ. ಭಾರತದಂತೆಯೇ ಇಲ್ಲಿಯೂ ಈಗ ಹೆಚ್ಚೂ ಕಡಿಮೆ ಎಲ್ಲರೂ ಪ್ರತ್ಯೇಕವಾಗಿ ವಾಸಿಸಲು ಇಷ್ಟಪಡುತ್ತಾರೆ.

ಪಟಾಕಿಯಷ್ಟೇ ಸುಲಭಕ್ಕೆ ಬಂದೂಕು

ಪಾಕಿಸ್ತಾನದಲ್ಲಿ ಒಟ್ಟು ನಾಲ್ಕು ರಾಜ್ಯಗಳಿವೆ. ಪಂಜಾಬ್, ಸಿಂಧ್, ಬಲೂಚಿಸ್ತಾನ ಹಾಗೂ ಖೈಬರ್ ಪಖ್ತೂನ್ಖ್ವಾ. ಕರಾಚಿ ಸಿಂಧ್ ರಾಜ್ಯದಲ್ಲಿದೆ. ಇಸ್ಲಾಮಾಬಾದ್ ದೇಶದ ರಾಜಧಾನಿಯಾದರೂ ವಾಣಿಜ್ಯ ನಗರಿ ಹಾಗೂ ಅತಿ ಹೆಚ್ಚು ಅಭಿವೃದ್ದಿ ಮತ್ತು ಆಧುನಿಕತೆ ಪಡೆದ ನಗರ ಕರಾಚಿ. ಆದರೆ ಈ ಆಧುನೀಕತೆಯೇ ನಗರಕ್ಕೆ ಎರಗಿದ ಶಾಪವೆಂದರೆ ತಪ್ಪಾಗಲಾರದು. ಆಧುನಿಕ ಉಪಕರಣಗಳು ಎಷ್ಟು ಇಲ್ಲಿ ಬರುತ್ತವೆಯೋ ಅದಕ್ಕಿಂತಲೂ ಹೆಚ್ಚು ಅಮೆರಿಕ ಮತ್ತಿತರ ದೇಶಗಳಿಂದ ಮಾರಕಾಸ್ತ್ರಗಳು ಬರುತ್ತವೆ. ಬಂದೂಕು ಇಲ್ಲಿ ದೀಪಾವಳಿಯ ಪಟಾಕಿಯಷ್ಟೇ ಸುಲಭವಾಗಿ ದೊರಕುತ್ತದೆ. ಬಂದೂಕು ಕೊಂಡ ವ್ಯಕ್ತಿ ಅದನ್ನು ಹೀಗೇ ಬಳಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಗಲ್ಲಿ ಗಲ್ಲಿಗಳಲ್ಲಿ ಇವರು ಬಂದೂಕು ಹಿಡಿದುಕೊಂಡು ತಿರುಗುತ್ತಾ ಗಲ್ಲಿಯಲ್ಲಿ ನುಸುಳುವ ಯಾರೇ ಆದರೂ ಅವರಿಗೆ ಬಂದೂಕು ತೋರಿಸಿ ಮೊಬೈಲು, ಹಣ, ಚಿನ್ನವನ್ನೆಲ್ಲಾ ದೋಚಿಬಿಡುವುದಿದೆ.

ಆದ್ದರಿಂದ ಮನೆಯಿಂದ ಹೊರ ಹೋಗುವ ಯಾರೇ ಆದರೂ ಅತ್ಯಂತ ಅಗ್ಗದ, ಹಳೆಯ ಮೊಬೈಲು ಮತ್ತು ಅಂದಿನ ದಿನಕ್ಕೆ ಸಾಕಾಗುವಷ್ಟು ಮಾತ್ರ ನಗದು ಹಣ ಕೊಂಡು ಹೋಗುತ್ತಾರೆ. ಮಹಿಳೆಯರಂತೂ ಮದುವೆ ಮೊದಲಾದ ಮುಖ್ಯ ಸಮಾರಂಭಗಳ ಹೊರತಾಗಿ ಹೊರಹೋಗುವ ಸಂದರ್ಭದಲ್ಲಿ ಚಿನ್ನವನ್ನೇ ಧರಿಸುವುದಿಲ್ಲ. ಈ ಕಳ್ಳರನ್ನು ನಿಗ್ರಹಿಸಲು ನಮ್ಮ ಸರ್ಕಾರ ಪೂರ್ಣವಾಗಿ ಸೋತಿದೆ ಎಂದೇ ಹೇಳಬಹುದು. ಏಕೆಂದರೆ ಪಾಕಿಸ್ತಾನದಾದ್ಯಂತ ಭ್ರಷ್ಟಾಚಾರ ಎಷ್ಟೊಂದು ಆವರಿಸಿದೆ ಎಂದರೆ ದೂರು ಕೊಡಲು ಹೋದ ವ್ಯಕ್ತಿಯನ್ನೇ ಆರೋಪಿಯಾಗಿಸಿ ಅವರಿಂದ ಹಣ ಕೀಳುವ ಕೀಳುಮಟ್ಟದ ಮನೋಭಾವದ ಪೋಲೀಸರು ಇಲ್ಲಿದ್ದಾರೆ. ವ್ಯತಿರಿಕ್ತವಾಗಿ ತೊಂದರೆಗೊಳಗಾದವರಿಗೆ ತಮ್ಮಿಂದಾದ ಸಹಾಯ ಮಾಡುವ ಸಹೃದಯಿ ಪೋಲೀಸರೂ ಇದ್ದಾರೆ. ಆದರೆ ಇವರನ್ನು ಗುರುತಿಸುವುದೇ ದೊಡ್ಡ ಕಷ್ಟವಾಗಿದೆ. ಎ.ಟಿ.ಎಂ ನಲ್ಲಿಯೂ ಒಂಟಿಯಾಗಿ ಹೋಗುವುದು ಭಾರೀ ಅಪಾಯಕರ. ಹಾಗಾಗಿ ವಿಶೇಷವಾಗಿ ಮಹಿಳೆಯರು ಜನನಿಬಿಡ ಮಾರುಕಟ್ಟೆ ಹಾಗೂ ಇತರ ಸ್ಥಳಗಳ ಹೊರತಾಗಿ ದೂರದ ಸ್ಥಳಗಳಿಗೆ ಮನೆಯ ಗಂಡಸರ ಜೊತೆ ಇಲ್ಲದೇ ಹೋಗುವುದಿಲ್ಲ.

ಇತರರಂತೆ ನಾನೂ ಪಾಕಿಸ್ತಾನದಲ್ಲಿ ಕೇವಲ ಮುಸಲ್ಮಾನರು ಮಾತ್ರವೇ ಇರುತ್ತಾರೆ ಅಂದುಕೊಂಡಿದ್ದೆ. ಸ್ವಾತಂತ್ರ್ಯದ ಬಳಿಕ ಭಾರತದಲ್ಲಿರುವ ಮುಸಲ್ಮಾನರಿಗೆ ಹೇಗೆ ಪಾಕಿಸ್ತಾನ ಅಥವಾ ಭಾರತವನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವಿತ್ತೋ ಅಂತೆಯೇ ಪಾಕಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ ಧರ್ಮೀಯರಿಗೂ ಇಲ್ಲಿ ಉಳಿಯುವ ಅಥವಾ ಭಾರತಕ್ಕೆ ಹೋಗುವ ಅವಕಾಶ ಒದಗಿಸಲಾಗಿತ್ತು. ಆದರೆ ಇಲ್ಲಿಂದ ಭಾರತಕ್ಕೆ ಹೋದವರ ಸಂಖ್ಯೆ ಕಡಿಮೆ. ಸಿಖ್ ಜನರೇ ಹೆಚ್ಚು ವಲಸೆಗೊಂಡವರು. ಪ್ರಾರಂಭದಲ್ಲಿ ಇಡಿಯ ಪಾಕಿಸ್ತಾನದಲ್ಲಿ ಹಿಂದೂ ಧರ್ಮೀಯರಿದ್ದರೂ ಕಾಲಕ್ರಮೇಣ ಧರ್ಮಾಂಧ ಜನರ ಉಪಟಳ ತಾಳಲಾರದೇ ಇವರೆಲ್ಲಾ ಸುರಕ್ಷಿತವಾದ ಕರಾಚಿ ನಗರವನ್ನು ಆಯ್ದುಕೊಂಡರು. ಅಂತೆಯೇ ಇಂದು ಇಡೀ ಪಾಕಿಸ್ತಾನದಲ್ಲಿ ಹಿಂದೂ ಧರ್ಮೀಯರು ಕರಾಚಿ ನಗರದಲ್ಲಿಯೇ ಗರಿಷ್ಠ ಸಂಖ್ಯೆಯಲ್ಲಿದ್ದು ತಮ್ಮ ಧರ್ಮದ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಆದರೆ ಭಾರತದಲ್ಲಿದ್ದಂತೆ ಸದ್ದಿನ ಆರ್ಭಟವಿಲ್ಲ.

ದೇವಾಲಯಗಳೆಲ್ಲ ಸರ್ಕಾರಿ ಕಚೇರಿ ಕಟ್ಟಡಗಳು

ಪಾಕಿಸ್ತಾನ ಉದಯವಾದಾಗ ಈ ಪ್ರದೇಶದಲ್ಲಿದ್ದ ನೂರಾರು ಮಂದಿರಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ಸರ್ಕಾರಿ ಕಚೇರಿಗಳನ್ನಾಗಿ ಪರಿವರ್ತಿಸಿದೆ. ಆದರೆ ದೇವಾಲಯಗಳ ಕಟ್ಟಡವನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡು ಬಂದಿದೆ. ಇಂತಹ ಬಹುತೇಕ ಕಚೇರಿಗಳಲ್ಲಿ ಗರ್ಭಗುಡಿಯನ್ನು ಮೂಲಸ್ಥಿತಿಯಲ್ಲಿಯೇ ಬಿಡಲಾಗಿದ್ದು ಉಳಿದ ಸ್ಥಳವನ್ನು ಸರ್ಕಾರಿ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿನ ಪ್ರಾಚ್ಯವಸ್ತು ಇಲಾಖೆ ಈ ನಿಟ್ಟಿನಲ್ಲಿ ಪುರಾತನ ಕಲಾಕೃತಿಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲು ಅತ್ಯುತ್ತಮ ಕೆಲಸವನ್ನು ಮಾಡಿದೆ. ಆದರೂ ಧರ್ಮಾಂಧರಾದ ಕೆಲವು ವ್ಯಕ್ತಿಗಳು ಕೆಲವು ಕಡೆ ವಿಗ್ರಹಗಳನ್ನು ಹಾಳುಗೆಡವಿದ್ದಾರೆ. ಬೌದ್ಧ ಪ್ರತಿಮೆಗಳನ್ನೂ ಟಿಬೆಟ್ ಮತ್ತಿತರ ಕಡೆಗಳಲ್ಲಿ ಸಂಬಂಧಪಟ್ಟ ಮಂದಿರಗಳಿಗೆ ಕಳುಹಿಸಿಕೊಡಲಾಗಿದೆ. ಬ್ರಿಟಿಷರ ಕಾಲದಲ್ಲಿ ಶಿವಾಲಯವೊಂದರಲ್ಲಿ ಪೂಜೆಯನ್ನು ನಿಷೇಧಿಸಲಾಗಿದ್ದುದನ್ನು ಇತ್ತೀಚೆಗಷ್ಟೇ ತೆರವುಗೊಳಿಸಿ ಈಗ ಪೂಜೆಗೆ ಅನುವು ಮಾಡಿಕೊಡಲಾಗಿದೆ.

ಭಾರತದಲ್ಲಿರುವಂತೆಯೇ ಸಿಖ್ ಧರ್ಮೀಯರ ಗುರುದ್ವಾರಗಳು ಪಾಕಿಸ್ತಾನದಲ್ಲಿಯೂ ಹಲವಾರಿವೆ. ಈ ಗುರುದ್ವಾರಗಳಿಗೆ ಪ್ರತಿವರ್ಷವೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಕರಾಚಿಯಲ್ಲಿರುವ ಹಿಂದೂ ಧರ್ಮೀಯರು ಇಲ್ಲಿನ ಬಹುಸಂಖ್ಯಾತ ಮುಸ್ಲಿಮರೊಂದಿಗೂ ಸಹಬಾಳ್ವೆ ನಡೆಸುತ್ತಾ ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ವೀಸಾ ಕಟ್ಟುಪಾಡು ಇವರಿಗೂ ತಟ್ಟಿರುವ ಕಾರಣ ಮೊದಲಿನಂತೆ ಇವರು ತಮ್ಮವರನ್ನು ಭೇಟಿಯಾಗಲು ಭಾರತಕ್ಕೆ ಸುಲಭವಾಗಿ ಹೋಗಲು ಆಗುತ್ತಿಲ್ಲ. ಆದರೆ ಭಾರತದಿಂದ ತಮ್ಮವರು ಬಂದರೆ ಇವರು ಜೀವ ಬಿಡುತ್ತಾರೆ. ಇವರಲ್ಲಿ ಹೆಚ್ಚಿನವರು ಗುಜರಾತಿನ ಸಿಂಧೀಯರು. ಮಲಯಾಳಿಗಳು ಇಲ್ಲಿಯೂ ಇದ್ದಾರೆ. ಆದರೆ ತುಂಬಾ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಆದರೆ ಕನ್ನಡಿಗರ ಸಂಖ್ಯೆ ಮಾತ್ರ ಬಹಳವೇ ಕಡಿಮೆ. ನನ್ನ ಇಲ್ಲಿನ ಇಷ್ಟು ವರ್ಷದ ವಾಸ್ತವ್ಯದಲ್ಲಿ ಕರಾಚಿಯಲ್ಲಿ ಎಲ್ಲೂ ನಾನು ಕನ್ನಡದ ಕಲರವ ಕೇಳಿಲ್ಲ. ನಮ್ಮ ಭಟ್ಕಳ ಮುರ್ಡೇಶ್ವರದಿಂದ ಬಂದಿರುವ ಸೊಸೆಯರಿಗೂ ಕನ್ನಡ ಮರೆತೇ ಹೋದಂತಿದೆ.

ಪತ್ರಿಕೆಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಹಾಗೂ ಭಾರತದ ವಿರುದ್ಧ ಪಾಕಿಸ್ತಾನದಲ್ಲಿ ಎಷ್ಟೇ ಟೀಕೆ ಟಿಪ್ಪಣಿಗಳು, ದ್ವೇಷ ಭಾವನೆಯ ವರದಿಗಳು ಬರಲಿ, ಜನಜೀವನದ ವಿಷಯ ಬಂದಾಗ ಈಗಲೂ ಪಾಕಿಸ್ತಾನದ ಜನತೆ ಭಾರತದ ಜನರನ್ನು ತಮ್ಮ ಸಹೋದರರೆಂದೇ ಭಾವಿಸುತ್ತಾರೆ. ನಾನು ಬಂದ ಹೊಸದರಲ್ಲಿ ಹೋದಲ್ಲೆಲ್ಲಾ ’ಆಪ್ ಇಂಡಿಯಾ ಸೇ ಹೈಂ?’ ಎಂದೇ ನನ್ನನ್ನು ಜನರು ಮಾತನಾಡಿಸುತ್ತಿದ್ದರು. ಆದರೆ ಈಗ ಉಭಯ ದೇಶಗಳಲ್ಲಿ ಸರ್ಕಾರಗಳು ಜನರ ಮನದಲ್ಲಿ ದ್ವೇಷಭಾವನೆ ತುಂಬಿರುವ ಕಾರಣ ನಾನು ಭಾರತದಿಂದ ಬಂದಿದ್ದೆ ಎಂದು ಎದೆತಟ್ಟಿ ಹೇಳಿಕೊಳ್ಳಲು ಭಯವಾಗುತ್ತದೆ. ಬರೀ ನನಗೆ ಮಾತ್ರವಲ್ಲ, ಇಲ್ಲಿನ ಬಹಳಷ್ಟು ಜನರಿಗೆ ಈ ಬಗ್ಗೆ ಖೇದವಿದೆ. ನನ್ನ ಎರಡನೆಯ ಮಗ ಕೇವಲ ಐದು ವರ್ಷದವನಾಗಿದ್ದಾಗ ಶಾಲೆಯಲ್ಲಿ ’ಭಾರತೀಯರು ನಮ್ಮ ಶತ್ರುಗಳು’ ಎಂದು ಕಲಿಸಿದ್ದರಂತೆ, ಆ ಮಗು ಹಾಗೇ ಬಂದು ನನ್ನಲ್ಲಿ ಹೇಳಿದ್ದ. ಅವಾಕ್ಕಾದ ನಾನು ತಕ್ಷಣ ಆತನ ಮನದಲ್ಲಿರುವ ಈ ಭಾವನೆಯನ್ನು ತೊಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿ ಸಾವಕಾಶವಾಗಿ ಎಲ್ಲವನ್ನೂ ವಿವರಿಸಿದ ಬಳಿಕವೇ ಆತ ತಿದ್ದಿಕೊಂಡ.

ನಮ್ಮ ಕುಟುಂಬದಲ್ಲಿರುವ ಹಲವು ಮಕ್ಕಳಿಗೂ ಇದೇ ರೀತಿಯ ಪಾಠವನ್ನು ಕಲಿಸಲಾಗಿತ್ತು. ಇದರ ಮೂಲವನ್ನು ಹುಡುಕಿ ಈ ತಪ್ಪು ಪಾಠ ಹೇಳಿದ ಶಿಕ್ಷಕರೊಬ್ಬರಿಗೆ ಬುದ್ಧಿವಾದ ಹೇಳಲು ನಮಗೆ ತುಂಬಾ ಕಷ್ಟವಾಯಿತು. ಇಂದು ಹಿರಿಯರಾಗಿರುವ ಜನತೆಯ ಮನದಲ್ಲಿ ಇಂದಿಗೂ ಭಾರತೀಯರ ಬಗ್ಗೆ ಒಳ್ಳೆಯ ಭಾವನೆ ಇದೆ. ಸರ್ಕಾರದ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಈ ದ್ವೇಷಭಾವನೆಯನ್ನು ಬಲವಂತವಾಗಿ ಹೇರುತ್ತಿದ್ದಾರೆ ಎಂಬುವುದು ಇಲ್ಲಿರುವ ನಮಗೆಲ್ಲ ಸ್ಪಷ್ಟವಾಗಿ ಅರ್ಥವಾಗಿದೆ. ಹಾಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತೀಯರಿಗೆ ಸರ್ಕಾರದ ನಿಯಂತ್ರಣವಿರುವವರೆಗೆ ಅಂದರೆ ಗಡಿಗಳಲ್ಲಿ, ಏರ್‌ಪೋರ್ಟ್‌ಗಳಲ್ಲಿ ಮಾತ್ರವೇ ಸರ್ಕಾರಿ ಅಧಿಕಾರಿಗಳಿಂದ ತಪಾಸಣೆ, ಅನುಮಾನದ ನೋಟ, ವಿಚಾರಣೆ ಮೊದಲಾದವು ನಡೆಯುತ್ತವೆ. ಆದರೆ ಒಮ್ಮೆ ಗಡಿ ದಾಟಿ ಪಾಕಿಸ್ತಾನದ ಒಳಗೆ ಬಂದ ಬಳಿಕ ಇವರನ್ನೆಲ್ಲಾ ಪಾಕಿಸ್ತಾನೀಯರು ತಮ್ಮ ಮನೆಗೆ ಬಂದ ಅತಿಥಿಗಳಂತೆಯೇ ಆಹ್ವಾನಿಸುತ್ತಾರೆ. ಭಾರತದಲ್ಲಿಯೂ ಅಷ್ಟೇ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳ ನಿಯಂತ್ರಣವಿರುತ್ತದೆಯೋ ಅಲ್ಲಿಯವರೆಗೆ ನಮಗೆ ಕೊಂಚ ಒತ್ತಡವಿದ್ದೇ ಇರುತ್ತದೆ. ಆದರೆ ಜನಸಾಮಾನ್ಯರ ನಡುವೆ ಬಂದ ಬಳಿಕ ಏನೂ ತೊಂದರೆ ಇಲ್ಲ. ಇಲ್ಲಿನ ಜನರೊಂದಿಗೆ ಬೆರೆತು ಓಡಾಡಲು ಯಾವ ತೊಂದರೆಯೂ ಆಗುವುದಿಲ್ಲ.

ಭಾರತಕ್ಕೆ ಮುಂಬೈ ಹೇಗೋ ಹಾಗೇ ಪಾಕಿಸ್ತಾನಕ್ಕೆ ಕರಾಚಿ. ಇವೆರಡೂ ಸರಿಸುಮಾರಾಗಿ ಸಮಾನ ಲಕ್ಷಣ, ಸೌಲಭ್ಯ ಹೊಂದಿದ್ದು ನೂರಾರು ವರ್ಷಗಳಿಂದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಪಾಕಿಸ್ತಾನದ ಬಟ್ಟೆ ಉದ್ಯಮ ಅತ್ಯುತ್ತಮ ವಹಿವಾಟು ನಡೆಸುತ್ತಿದ್ದು ವಿಶೇಷವಾಗಿ ಮಹಿಳೆಯರ ಉಡುಪುಗಳ ಮೂಲಕ ವಿಶ್ವವಿಖ್ಯಾತಿ ಗಳಿಸಿದೆ. ಪಾಕಿಸ್ತಾನದ ಬಟ್ಟೆಗಳಿಗೆ ಭಾರತದಲ್ಲಿಯೇ ಹೆಚ್ಚಿನ ಬೇಡಿಕೆ. ಪಾಕಿಸ್ತಾನದ ಸಿಯಾಲ್ ಕೋಟ್ ಎಂಬ ಪ್ರದೇಶದ ಚರ್ಮೋದ್ಯಮ ವಿಶ್ವದ ಒಂದು ದೊಡ್ಡ ಉದ್ಯಮವಾಗಿದ್ದು ಇದರ ಉತ್ಪನ್ನಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಉತ್ತರ ಪಾಕಿಸ್ತಾನದಿಂದ ಬರುವ ಒಣಫಲಗಳು, ಅದರಲ್ಲೂ ಚಿಲ್ಗುಝಾ ಎಂಬ ಒಣಫಲ ಅತ್ಯಂತ ರುಚಿಯಾಗಿದ್ದು ಪೂರೈಸಲೂ ಸಾಧ್ಯವಾಗದಷ್ಟು ಬೇಡಿಕೆ ಇದೆ. ಸಾಂಬಾರ ಮಸಾಲೆಗಳಿಗೆ ತುರ್ಕಿಯ ಇಸ್ತಾಂಬುಲ್ ನಗರದಲ್ಲಿ ಒಂದು ಮಾರುಕಟ್ಟೆ ಇದೆ. ಈ ನಗರ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚಿನ ವೈವಿಧ್ಯಮಯ ಸಾಂಬಾರ ಪದಾರ್ಥಗಳು ಕರಾಚಿಯ ಸಾಂಬಾರ ಮಾರ್ಕೆಟ್ಟಿನಲ್ಲಿ ಸಿಗುತ್ತವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಉಭಯ ಸರ್ಕಾರಗಳ ನಡುವಣ ದ್ವೇಷಭಾವನೆ ವಾಣಿಜ್ಯ ವಹಿವಾಟಿನ ಮೇಲೂ ಆಗುತ್ತದೆ. ಯಾವಾಗ ಗಡಿಭಾಗದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿಗಳ ಚಟುವಟಿಕೆಗಳ ಬಗ್ಗೆ ಪತ್ರಿಕೆಯಲ್ಲಿ ಬರುತ್ತದೆಯೋ ಆಗೆಲ್ಲಾ ಇದರ ಪರಿಣಾಮ ನೇರವಾಗಿ ವಾಣಿಜ್ಯ ವಹಿವಾಟಿನ ಮೇಲೆ ಆಗುವುದನ್ನು ಕಾಣಬಹುದು. ಕೆಲವು ಅಧಿಕಾರಿಗಳು ಬೇಕೆಂದೇ ಈ ಕೋಳಿ ಜಗಳವನ್ನು ಜೀವಂತವಾಗಿಟ್ಟು ಲಾಭ ಮಾಡಿಕೊಳ್ಳುತ್ತಿರುವುದು ಎಂದು ಬಹುತೇಕ ವ್ಯಾಪಾರಿಗಳು, ಗ್ರಾಹಕರು ಮಾತನಾಡಿಕೊಳ್ಳುತ್ತಾರೆ. ಇದಕ್ಕೆ ಇಂಬುಕೊಡುವಂತೆ ನಮ್ಮ ರಾಜಕಾರಣಿಗಳೂ ಶಾಂತಿಯ ಮಾತುಕತೆಗೆ ಕರೆದಾಗ ಶಾಂತಿಯ ವಿಷಯ ಬಿಟ್ಟು ಉಳಿದೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಿರುವ ಬಗ್ಗೆ ಪತ್ರಿಕೆಗಳಲ್ಲಿ ಬರುವ ವರದಿಗಳು ಮುಜುಗರ ತರಿಸುತ್ತವೆ. ಒಟ್ಟಾರೆ ನೋಡಿದರೆ ಬಹುತೇಕ ಪಾಕಿಸ್ತಾನೀಯರು ಭಾರತದೊಂದಿಗೆ ಶಾಂತಿಯನ್ನು ಬಯಸುತ್ತಾರೆ. ಆದರೆ ಭ್ರಷ್ಟ ವ್ಯಕ್ತಿಗಳಿರುವವರೆಗೆ ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ.

ಬಟ್ಟೆಬರೆಯ ಹೊರತಾಗಿ ಪಾಕಿಸ್ತಾನದಲ್ಲಿ ಬೆಳೆಯಲಾಗುವ ಅಕ್ಕಿ, ಒಣಫಲಗಳು, ಟೀಪುಡಿ, ಮಾರ್ಬಲ್ ನಿಂದ ತಯಾರಾದ ವಸ್ತುಗಳು, ಹತ್ತಿಯ ಹೊದಿಕೆ, ಮಾವಿನ ಹಣ್ಣು, ಕಿತ್ತಳೆ ಮೊದಲಾದವುಗಳಿಗೆ ಉತ್ತಮ ಬೇಡಿಕೆ ಇದೆ. ಭಾರತದಿಂದಲೂ ತೆಂಗಿನ ಕಾಯಿ, ಬೇಳೆಕಾಳುಗಳು, ಟೈರುಗಳು ಮೊದಲಾದವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಎಲೆಕ್ಟ್ರಾನಿಕ್ಸ್, ಮೊಬೈಲು ಮೊದಲಾದುವೆಲ್ಲ ಚೀನಾ ಮತ್ತು ಇತರೆಡೆಗಳಿಂದ ಬರುತ್ತವೆ. ನಮ್ಮ ಮಾಧ್ಯಮಗಳು ಭಾರತ ಪಾಕಿಸ್ತಾನದ ನಡುವಣ ಕಾದಾಟವನ್ನೇ ವೈಭವೀಕರಿಸುತ್ತವೆಯೇ ಹೊರತು ಈ ಉತ್ತಮ ಸಂಬಂಧದ ಬಗ್ಗೆ ಎಲ್ಲಿಯೂ ತಿಳಿಸದಿರುವುದೇ ವಿಷಾದಕರ.

ಕರಾಚಿಯಲ್ಲಿ ಕೆಲವಾರು ಸ್ವಾರಸ್ಯಗಳಿವೆ. ಇಲ್ಲಿನ ಬಸ್ ಹಾಗೂ ಟ್ರಕ್ ಮಾಲಿಕರಿಗೆ ತಮ್ಮ ವಾಹನಗಳನ್ನು ಸಿಂಗರಿಸುವ ಪದ್ಧತಿಯಿದೆ. ಅಲ್ಯೂಮಿನಿಯಂ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಬಸ್ಸು ಲಾರಿಗಳ ಮುಂಭಾಗ ಹಿಂಭಾಗದಲ್ಲೆಲ್ಲಾ ಅಳವಡಿಸುತ್ತಾರೆ. ಅಲ್ಯೂಮಿನಿಯಂ ಹಾಳೆಗಳ ಚಿಕ್ಕ ಚಿಕ್ಕ ತುಂಡುಗಳನ್ನು ಸರದಂತೆ ಪೋಣಿಸಿ ಮುಂಭಾಗದ ಕೆಳಗಿನ ಅಂಚುಗಳಲ್ಲಿ ಸಾಲಾಗಿ ನೇತುಹಾಕುತ್ತಾರೆ. ಬಸ್ಸು ಚಲಿಸಿದಂತೆಲ್ಲಾ ಇವೆಲ್ಲಾ ಛಲ್ ಛಲ್, ಘಲ್ ಘಲ್ ಸದ್ದು ಮೂಡಿಸುತ್ತಾ ಹಿಂದೆ ನಮ್ಮ ಊರಿನಲ್ಲಿ ಎತ್ತಿನಗಾಡಿ ಚಲಿಸುತ್ತಿದ್ದಾಗ ಗೆಜ್ಜೆಗಳು ಮೂಡಿಸುತ್ತಿದ್ದ ನಾದ ನೆನಪಿಗೆ ಬರುತ್ತದೆ.

ಕರಾಚಿಯಲ್ಲಿ ಪಾಕಿಸ್ತಾನಿ ಸಿನಿಮಾಗಳಿಗಿಂತ ಭಾರತದ ಸಿನಿಮಾಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತವೆ. ಹಾಗಾಗಿ ನಮಗೆಲ್ಲಾ ಮನರಂಜನೆ ಎಂದರೆ ಮನೆಯ ಟಿ.ವಿಯಲ್ಲಿ ಲಭ್ಯವಾಗುವ ರಂಜನೆಯೇ ಹೆಚ್ಚು. ಎಷ್ಟೋ ವರ್ಷಗಳ ಹಿಂದೆ ಸರ್ಕಸ್ಸೊಂದು ಬಂದಿದ್ದು ಬಿಟ್ಟರೆ ಈಗ ಹೊರಗೆ ಹೋಗಿ ಮನೆಮಂದಿಯೆಲ್ಲಾ ಸಂಭ್ರಮಪಡುವ ಕಾರ್ಯಕ್ರಮಗಳು ಇಲ್ಲವೆಂದೇ ಹೇಳಬಹುದು.

ಸಾಮಾನ್ಯ ನಮ್ಮ ಜನರೆಲ್ಲಾ ಹೆಚ್ಚಾಗಿ ಮದುವೆ ಮತ್ತು ಮರಣದ ಸಂದರ್ಭದಲ್ಲಿ ಒಂದೆಡೆ ಸೇರುತ್ತೇವೆ. ಕೇವಲ ಮೂರು ಗಂಟೆಗಳಿಗೆ ಮಾತ್ರ ಮದುವೆ ಹಾಲ್ ಬಾಡಿಗೆಗೆ ದೊರಕುತ್ತದೆ. ಗರಿಷ್ಠ ಆರು ಗಂಟೆಗಳ ಕಾಲಕ್ಕೆ ಮಾತ್ರ ಹಾಲ್ ಲಭ್ಯ. ಅಂದರೆ ಎರಡು ಅವಧಿಗಳು. ಉಳಿದಂತೆ ಪಾಕಿಸ್ತಾನದ ಕಾನೂನಿನ ಪ್ರಕಾರ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಒಂದು ಜ್ಯೂಸ್ ಅಥವಾ ಟೀ ಮತ್ತು ಕೆಲವು ಬಿಸ್ಕತ್ ಅಥವಾ ಖರ್ಜೂರ ಇಷ್ಟು ಮಾತ್ರವೇ ಸತ್ಕಾರಕ್ಕೆ ಒದಗಿಸಲು ಸಾಧ್ಯ. ಆಡಂಬರದ ಔತಣಕ್ಕಿಲ್ಲಿ ನಿಷೇಧವಿದೆ. ಹಿಂದೆಲ್ಲಾ ಇಡಿಯ ಊರಿಗೆ ಔತಣ ಹಾಕಿದ ಬಳಿಕ ಬಡಜನತೆ ಹೈರಾಣಾಗಿ ಹೋಗಿದ್ದುದನ್ನು ಕಂಡ ನಾಯಕರು ಈ ಕಾನೂನು ಮಾಡಿದ್ದಾರೆ. ಮದುವೆಯ ಬಳಿಕ ಕೇವಲ ಆಪ್ತರಿಗೆ ಮತ್ತು ಕುಟುಂಬಸದಸ್ಯರಿಗೆ ಮಾತ್ರ ಮನೆಯ ಚಾವಣಿಯ ಮೇಲೆ ಅದ್ಧೂರಿ ಊಟದ ಏರ್ಪಾಡು ಮಾಡುವುದಿದೆ. ಮದುವೆಯಲ್ಲಿ ವಧುವಿನ ಅಲಂಕಾರಕ್ಕೆ ಅತಿ ಹೆಚ್ಚಿನ ಸಮಯ. ವರನಿಗೆ ಸರಳ ಉಡುಪು ಹಾಗೂ ಒಂದು ಗುಲಾಬಿಹೂವಿನ ಹಾರ. ಹಿಂದೆಲ್ಲಾ ವಧೂವರರಿಗೆ ಉಡುಗೊರೆಗಳು ಹೇರಳವಾಗಿ ಲಭಿಸುತ್ತಿದ್ದವು. ಈಗ ಹೆಚ್ಚಿನವರು ನಗದು ಹಣವನ್ನೇ ನೀಡುತ್ತಾರೆ.

ಹಿಂದಿನಂತೆ ಈಗ ಭಾರತಕ್ಕೆ ಸುಲಭವಾಗಿ ಬರಲು ಸಾಧ್ಯವಿಲ್ಲ ಎಂಬ ಒಂದೇ ಕೊರತೆ ಬಿಟ್ಟರೆ ಜೀವನ ಇಲ್ಲಿ ಸುಖಕರವೇ ಆಗಿದೆ. ಎರಡು ವರ್ಷಗಳ ಹಿಂದೆ ನನ್ನ ದೊಡ್ಡಮಗನ ವಿವಾಹವೂ ಆಗಿದ್ದು ಈಗ ದುಬೈಯಲ್ಲಿ ಕುಟುಂಬದೊಂದಿಗಿದ್ದಾನೆ. ನನ್ನ ಸೊಸೆ ಭಟ್ಕಳದಿಂದ ವಲಸೆ ಬಂದ ಕುಟುಂಬವೊಂದರ ಮೊಮ್ಮಗಳು. ಭಾರತ ಬಿಟ್ಟು ಮೂವತ್ತೊಂದು ವರ್ಷವಾಗಿದ್ದರೂ ನನಗೆ ಇಂದಿಗೂ ಭಾರತದಿಂದ ಹೊರಬಂದಂತೆ ಅನ್ನಿಸುತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ಬರುವ ವಿಷಭರಿತ ಮಾತುಗಳನ್ನು ಓದುವಾಗ ಮಾತ್ರ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಪಾಕಿಸ್ತಾನದ ಹೆಸರು ವಾಸ್ತವವಾಗಿ ಪಾಕ್-ಸ್ತಾನ್ ಎಂದಾಗಿತ್ತು. ಪಾಕ್ ಎಂದರೆ ಶುಭ್ರ, ಸ್ತಾನ್ ಅಂದರೆ ನಾಡು. ಶುಭ್ರವಾದ ನಾಡು ಎಂಬರ್ಥದ ಈ ಪದವನ್ನು ಹೀಗೆ ಹೇಳಿದರೆ ನಾಲಿಗೆ ತಿರುಗದು ಎಂಬ ಕಾರಣಕ್ಕೆ ಎರಡರ ನಡುವೆ ಇ ಕಾರವನ್ನು ಸೇರಿಸಿ ಪಾಕಿಸ್ತಾನ ಎಂದು ಕರೆದರು. ಇಲ್ಲಿನ ಮುಸ್ಲಿಮ್ ಕುಟುಂಬಗಳ ಕುಟುಂಬ ಹೆಸರುಗಳೆಲ್ಲಾ ಭಾರತದ ಹಿಂದೂ ಮತ್ತು ಜೈನರ ಹೆಸರುಗಳನ್ನು ಹೋಲುತ್ತವೆ. ಉದಾಹರಣೆಗೆ ಹೆಗಡೆ, ಚೌಧುರಿ, ಕೋಬಟ್ಟೆ, ಶಿರಸ್ತೇದಾರ್, ಚಾಮುಂಡಿ, ಕೋಲಾ, ಗೌಡಾ ಇತ್ಯಾದಿ. ಅಂದಹಾಗೆ ನಮ್ಮ ಮನೆಯ ಕುಟುಂಬದ ಹೆಸರು ದುರ್ಗಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT