ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಪ್ಪನ ಜೀವನ ಯಾತ್ರೆ

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ರಾಮಚಂದ್ರ ಹೆಗಡೆ

ವೆಂಕಪ್ಪ ನಡೆಯುತ್ತಿರಲಿಲ್ಲ. ಅವನಿಗೆ ಆದಾಗಲೇ ತೊಂಭತ್ತು ವರ್ಷ ದಾಟಿರಬಹುದು. ಆದರೆ ಓಡುತ್ತಿದ್ದ. ಯಾವಾಗಲೂ ಓಡುವುದೇ. ಕೇವಲ ನೀರು ಬಾರಿಗೆ ಬಂದಾಗ ನೀರು ಪೋಲಾಗುತ್ತಿದೆಂದು ಓಡುವುದಲ್ಲ. ಅಂಗಡಿಗೆ ಹೋಗುವಾಗ, ಕುಮಟೆಗೆ ಬಸ್ಸು ಹಿಡಿಯಲು ಹೋಗುವಾಗ, ನೆಂಟರ ಮನೆಗೆ ನವರಾತ್ರಿಗೆ ಹೋಗುವಾಗಲೂ ಓಡುವುದೇ.

ಅವನು ಹೆಂಡತಿ ಶರಾವತಿಯನ್ನು ಎಲ್ಲೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದನ್ನು ಯಾರೂ ನೋಡಿಲ್ಲ. ಒಮ್ಮೆ ಕರೆದುಕೊಂಡು ಹೋಗಿದ್ದಿದ್ದರೆ ಅವಳು ಅವನಿಗಿಂತ ಒಂದು ಮೈಲಿಯಾದರೂ ಹಿಂದಿರುತ್ತಿದ್ದಳಿರಬೇಕು. ಅಂದಹಾಗೆ ಶರಾವತಿ ತೀರಿಹೋಗಿ ಹಲವು ವರ್ಷಗಳಾಗಿರಬೇಕು. ಅವಳು ತೀರಿಕೊಂಡಾಗ ಅವನಿಗೆ ಬೇಸರವಾಗಿತ್ತು. ಅದರ ಕುರಿತು ಆತ ದುಃಖಪಟ್ಟು ಹೇಳಿದ್ದ: ‘ನಾನು ಶರಾವತಿಯನ್ನು ಮದುವೆಯಲ್ಲೇ ನೋಡಿದ್ದು. ಆಗ ನನಗೆ ಹನ್ನೆರಡು ಹದಿಮೂರು ವರ್ಷ. ಅವಳಿಗೆ ಆರು ಏಳು ವರ್ಷ. ಅವಳದು ಎಣ್ಣೆಗಪ್ಪು ಬಣ್ಣ.ಹಲ್ಲು ಮುಂದೆಬಂದು ವಿಕಾರವಾಗಿತ್ತು. ಇವಳನ್ನು ಯಾಕಾದರೂ ಮದುವೆಯಾದೆನೋ ಅನಿಸಿತ್ತು. ನಂತರ ಐವತ್ತು ವರ್ಷ ಕಳೆಯಿತು. ಮಕ್ಕಳು ಮರಿ ಹುಟ್ಟಿದರು. ಎಲ್ಲಾ ನಡೀತು... ಕಡೇಗೆ ನೋಡಿದರೆ ಶರಾವತಿ ಚಲೋನೆ ಬಂತು’ ಎಂದು ಹೇಳಿದ್ದ.

ಶರಾವತಿ ತೀರಿಕೊಂಡರೂ ಅವನ ಜೀವನೋತ್ಸಾಹದ ಬುಗ್ಗೆ ಉಕ್ಕಿ ಹರಿಯುತ್ತಲೇ ಇತ್ತು. ಚಾದಂಗಡಿ ಹೆಗಡೆಯ ಮಗಳು ನೇತ್ರಾವತಿ ಅಂದರೆ ಅವನಿಗೆ ತುಂಬ ಪ್ರೀತಿ. ಎಲ್ಲಿಗೆ ಹೋಗುವುದಿದ್ದರೂ ಎಷ್ಟೇ ಅರ್ಜೆಂಟಾಗಿದ್ದರೂ ಆತ ನೇತ್ರಾವತಿಯ ಭಜಿ ತಿಂದೇ ಹೋಗುವುದು. ಅವಳ ರೀತಿ ಭಜಿ ಮಾಡುವವರು ಯಾರೂ ಇಲ್ಲ ಎಂದು ಆತ ಹೇಳುತ್ತಿದ್ದ. ಅವಳಿಗೆ ಆಗ 16-18 ವರ್ಷ ಇರಬೇಕು. ಇವನಿಗೆ ತೊಂಭತ್ತು ವರ್ಷವಾದರೇನಾಯಿತು? ನೇತ್ರು ಕುರಿತು ಆತನಿಗೆ ಕ್ರಶ್‌ ಇತ್ತು ಎನ್ನುವುದು ಎಲ್ಲರಿಗೂ ಗೊತ್ತು.

ಅವನ ದಿನಚರಿ ಒಂದು ಅದ್ಭುತ. ಬೆಳಿಗ್ಗೆ ಸೂರ್ಯೋದಯದ ಮೊದಲೇ ಎದ್ದು ಚಾದರ ಹೊದ್ದುಕೊಂಡೇ ತೋಟಕ್ಕೆ ಬರುವುದು. ನೀರು ಹರಿಯುವ ಕೊಡ್ಲದಂಡೆಯ ಅಥವಾ ರಸ್ತೆಯ ಬದಿಗೇ ನಿರ್ಭಯವಾಗಿ ವಿಸರ್ಜನೆಗೆ ಕುಳಿತುಕೊಳ್ಳುವುದು. ನಿರ್ದಾಕ್ಷಿಣ್ಯವಾಗಿ ಆ ಕಡೆ ಈ ಕಡೆ ಹೋಗಿ ಬರುವವರನ್ನು ಕುಳಿತಲ್ಲಿಂದಲೇ ಮಾತನಾಡಿಸುತ್ತಿದ್ದ. ತಂಗೀ, ಕಾಲೇಜಿಗೆ ಹೊರಟುಬಿಟ್ಟ್ಯನೇ? ಇತ್ಯಾದಿ.

ಒಂದು ರೀತಿಯ ದಿವ್ಯ ವಿರಕ್ತಿ ಅವನಲ್ಲಿ ಇದ್ದಿದ್ದು ಹೌದು. ಅವರ ಮನೆಯ ತೋಟದಲ್ಲಿಯೇ ಹಾದುಹೋದರೂ ದಿನಾಲೂ ಅಡಿಕೆ ಹೆಕ್ಕೇ ಬಿಡುತ್ತಿದ್ದ ಎಂದೇನೂ ಇರಲಿಲ್ಲ. ಅಡಿಕೆ, ತೆಂಗಿನ ಮರಗಳ ಹೊಡೆ ನೋಡುತ್ತ ಬಹಳ ಹೊತ್ತು ನಿಂತುಬಿಡುತ್ತಿದ್ದ. ನೀರು ಬಾರಿ ಮಾಡುವುದು ಅವನಲ್ಲ. ಮಣಿಕಂಠ ಅಥವಾ ಗಜಾನನ. ಮಣಿಕಂಠ ಮತ್ತು ಗಜಾನನನಿಗೆ ಇಡೀ ದಿನ ವೇದ, ಪುರಾಣ, ಭಗವದ್ಗೀತೆ ಇತ್ಯಾದಿ ತತ್ವಜ್ಞಾನ ಹೇಳುತ್ತಿದ್ದ: ‘ಮರಕ್ಕೆನೀರು ಹಾಕೋದು, ಗೊಬ್ಬರ ಹಾಕೋದು ಅಷ್ಟೇ ಕೆಲಸ ನಮ್ಮದೋ! ಫಲ ಕೊಡೋದು ಅವನೋ!’ ಎಂದು ಆಕಾಶದಕಡೆ ಕೈ ತೋರಿಸುತ್ತಿದ್ದ. ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ನಿಷ್ಕಾಮ ಕರ್ಮ ಎಂದರೆ ಅದೇ!’ ಎಂದು ಹೇಳುತ್ತಿದ್ದ.

ಹಾಗೆಂದು ಅವನ ತೋಟಕ್ಕೆ ಆತ ನೀರು ನಿಯಮಿತವಾಗಿ ಹಾಕುತ್ತಿರಲಿಲ್ಲ. ಗೊಬ್ಬರವನ್ನೂ ಹಾಕುತ್ತಿರಲಿಲ್ಲ. ಅದೆಲ್ಲ ಕೆಲಸ ಮಾರಜ್ಜಂದು. ಮಾರಜ್ಜನಿಗೆ ಯಾವಾಗಲಾದ್ರೂ ಪುರುಸೊತ್ತಾದ್ರೆ ಒಂದೊಂದು ಚೂಳಿ ಗೊಬ್ಬರ ತೋಟದಲ್ಲಿ ಹಾಕುತ್ತಿದ್ದ. ಹಾಗಂತ ಗೊಬ್ಬರ ಆ ವರ್ಷವೇ ಹರಡುವುದು ಎಂದೇನೂ ಇಲ್ಲ. ಅಪ್ಪನ ತತ್ವಜ್ಞಾನ ಕೇಳಿ ಕೇಳಿ ಇಹ ಜಗತ್ತಿನ ಕುರಿತು ಆಸಕ್ತಿಯನ್ನೇ ಕಳೆದುಕೊಂಡಿದ್ದ ಗಜಾನನ ಕೆಲವೊಮ್ಮೆ ‘ತೋಟಕ್ಕೆ ನೀರು ಬಾರಿ ಮಾಡಿ ಬಾರೋ’ ಎಂದರೆ ನಿರಾಕರಿಸುತ್ತಿದ್ದ. ‘ತೋಟಕ್ಕೆ ಯಾಕೆ ನೀರು ಹಾಕುವುದು? ಬೆಟ್ಟದ ಮೇಲಿನ ಗಿಡಮರಗಳಿಗೆ ಯಾರು ನೀರು ಹಾಕುವುದು? ಎಲ್ಲವನ್ನು ನೋಡಿಕೊಳ್ಳುವವನು ಭಗವಂತನೇ ಅಲ್ಲವೇ’ ಎಂದು ಪ್ರಶ್ನಿಸಿದ್ದ. ಅದಕ್ಕೆ ವೆಂಕಪ್ಪನೂ ಒಮ್ಮೆ ಕಂಗಾಲಾಗಿ ‘ಅಯ್ಯೋ... ಹಾಗೆ ಅಲ್ಲವೋ!’ ಎಂದು ಏನೋ ಹೇಳಬೇಕೆನ್ನುವಷ್ಟರಲ್ಲಿ ‘ತಿರುಗಿ ಮಾತಾಡಿದ್ರೆ ಬುರುಡೆಗೆ ಹೊಡೆತೆ’ ಎಂದು ಗಜಾನನ ಹೇಳಿದ್ದರಿಂದ ಸುಮ್ಮನಾಗಿದ್ದ.

ಮಣಿಕಂಠ ಹಾಗೆ ಹೇಳುತ್ತಿರಲಿಲ್ಲ. ಆದ್ರೆ ಆತನಿಗೆ ಹುಡುಗಿಯರೆಂದರೆ ಭಯ. 'ಬೆಳ್ಳಿಮನೆ ಹೆಣ್ಮಕ್ಕಳು ದೇವೆಡೆ ಮನೆ ಹೆಣ್ಮಕ್ಳು ಎಲ್ಲ ತೋಟಕ್ಕೆ ಬತ್ತ, ಹಾಂಗಾಗಿ ನಾ ಹೋಗುದಿಲ್ಲ' ಎನ್ನುತ್ತಿದ್ದ. ಅಲ್ಲದೆ ಆತನಿಗೆ ದೊಡ್ಡ ದೊಡ್ಡ ವಸ್ತುಗಳೆಲ್ಲ, ಅಂದರೆ: ಚೂಳಿ ಮುಟ್ಟಿ, ಅಡಿಕೆ ತೊನೆ, ತೆಂಗಿನ ಕಾಯಿ, ಕುಟಾರೆ, ಪಿಕಾಸು ಹಾರೆ ಇತ್ಯಾದಿ, ಗಂಟಲೊಳಗೆ ಹೋಗಿಬಿಟ್ಟರೆ ಏನು ಮಾಡುವುದು ಎಂಬ ಭಯ. ಮೇಲಿನಿಂದ ಅವನಿಗೆ ಸ್ನಾನ ಎಂದರೆ ಪ್ರೀತಿ. ಸ್ನಾನಕ್ಕೆ ನಿಂತರೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆರೆಯ ಸುರಿಯು ನೀರಿಗೆ ತಲೆಕೊಟ್ಟು ನಿಲ್ಲುವುದು. ಮತ್ತೆ ಮನೆಗೆ ಹೋಗಿ ಅತ್ತಿಗೆ ಅಡಿಗೆಗೆ ತಂದಿಟ್ಟ ನೀರನ್ನೂ ತಲೆಯ ಮೇಲೆ ಸುರಿದುಕೊಂಡು ಬಿಡುತ್ತಿದ್ದ. ಹೀಗಾಗಿ ಅವನಿಗೂ ತೋಟದ ಕಡೆ ಬರಲು ಪುರುಸೊತ್ತಿಲ್ಲ. ಆದರೆ ಹೇಗೋ ಏನೋ ಅವರ ಮನೆ ತೋಟದಲ್ಲಿ ಕೊನೆ ಕಾಯಿ ಕಡಿಮೆ ಬರುತ್ತಿರಲಿಲ್ಲ. ಮಾರಜ್ಜನಿಗೆ ಪುರುಸೊತ್ತಾದಾಗ ಕೊಯ್ಯುವುದು.

ಅದಿರಲಿ, ವೆಂಕಪ್ಪ ಬಹಿರ್ದೆಸೆ ಮುಗಿಸಿದ ನಂತರ ಕೆರೆಗೆ ಬಂದು ಹಲ್ಲುತಿಕ್ಕಿ, ಮುಖ ತೊಳೆಯುವುದು. ಆಮೇಲೆ, ನಮ್ಮ ಮನೆ, ದೊಡ್ಡಪ್ಪನ ಮನೆ, ಭಟ್ಟನ ಮನೆ ಹೀಗೆ ಯಾವುದಾದರೂ ಮನೆಯಲ್ಲಿ ಬೆಳಗಿನ ಆಸರಿ. ಸುಮ್ಮನೆ ಅಲ್ಲ. ಇಡೀ ಜಗತ್ತಿನ ವ್ಯಾವಹಾರಿಕ ವಿಷಯಗಳು ಮತ್ತು ತತ್ವಜ್ಞಾನ ಅವನ ವಿಶಾಲ ಲೋಕಜ್ಞಾನದ ಹಿನ್ನೆಲೆಯಲ್ಲಿ ನಿರಂತರ ಮಾತನಾಡುತ್ತ. ಯಾವ ರೀತಿ ತಯಾರಿಸಿದರೆ ದೋಸೆ ರುಚಿಯಾಗುತ್ತದೆ? ಯಾವ ಬೆಲ್ಲ ಉತ್ತಮ? ವಾಲಗಳ್ಳಿಯದೋ ಅಥವಾ ಕಂಡ್ರಕೋಣಿಂದೋ? ಬಾರಕೂರಿನಲ್ಲಿ ಯಾರದೋ ಮನೆಯಲ್ಲಿ ತಿಂದ ಬೆಲ್ಲ ಅಪರೂಪದ ಮಧುರ ಬೆಲ್ಲ ಅನ್ನುತ್ತಿದ್ದ. ವಿವರಣೆ ದೊಡ್ಡದು. ಚಹಾ ಬಂದರೆ ಅದು ಆಕಳ ಹಾಲಿನ ಚಹಾನೋ, ಎಮ್ಮೆ ಹಾಲಿಂದೋ? ಅವರ ಮನೆಯದೇ ಎಮ್ಮೆಯದೋ? ತೆಗೆದುಕೊಂಡು ಬಂದಿದ್ದೋ? ಚಾ ಪುಡಿ ಯಾವ ಅಂಗಡಿಯದು? ಗಣೇಶ ಭಟ್ರ ಅಂಗಡಿಯದೋ? ಶೆಟ್ಟಿ ಅಂಗಡಿಯದೋ? ಪುಡಿಯಂತಹದೋ? ಕಾಳು ಕಾಳಿನಂತಹದೋ? ಉತ್ತಮ ಚಹಾ ಪುಡಿ ಏನಿದ್ರೂ ಕುಮಟೆಯ ಬಂಗ್ಲೆ ಅಂಗಡಿಯದು ಎನ್ನುತ್ತಿದ್ದ. ಚಹಾ ಕುಡಿಯಲು ಕೊಟ್ಟ ತಟ್ಟೆ ಯಾವಾಗ, ಎಲ್ಲಿಯ ಅಂಗಡಿಯಿಂದ ತಂದದ್ದು? ಎಷ್ಟು ರೇಟು? ಇಂತದ್ದೇ ಲೋಟ ನಮ್ಮನೆಗೆ ತಂದಿಡಬೇಕಾಯಿತು ಎನ್ನುತ್ತಿದ್ದ

‘ಸಾಕು, ನಿನ್ನ ಸುದ್ದಿ ಮಾರಾಯ. ನಮಗೆ ಕೊಟ್ಟಿಗೆಗೆ ಹೋಗುವ ಕೆಲಸವಿದೆ’ ಎಂದು ಹೆಂಗಸರು ಹೇಳಿದರೆ ಮೇಲೆ ಅವರ ಬಳಿ ‘ಕೊಟ್ಗೆಗೆ ಏನು ಕೆಲಸ? ನೀನು ಹುಷಾರಿ ಮಾರಾಯ್ತಿ...’ ಇತ್ಯಾದಿ ಮತ್ತೆ ಮುಂದುವರಿದ ಕಥನ. ಹೊರಗೆ ಬಂದು ಕವಳ ಹಾಕಲು ಕುಳಿತರೆ ಇದು ಯಾವ ಎಲೆ? ಅಂಬಾಡಿಯೋ ಕರಿ ಎಲೆನೋ? ಅಡಿಕೆ ಯಾವುದು? ಸುಲಿದವರಾರು? ಸುಣ್ಣ ಎಲ್ಲಿದು? ಸುಣ್ಣದ ಜಾನ್‌ನ ಬಳಿಯಿಂದ ತಂದಿದ್ದೋ ಅಥವಾ ಬೇರೇನೋ? ಜಾನ್‌ನೇ ಚಲೋ. ಮನೇಲೇ ಮಾಡಿದ್ದೋ? ರೆಡಿ ತಂದಿದ್ದೋ? ಸುಣ್ಣದ ತಿಳಿ ಆರಿದೆಯೋ? ಇಲ್ಲವೋ ಹಳೆ ಸುಣ್ಣವೋ, ಹೊಸ ಸುಣ್ಣವೋ? ತಂಬಾಕು ಮಲಬಾರ ತಂಬಾಕೋ ಅಥವಾ ನಿಪ್ಪಾಣಿದೋ? ಮಲಬಾರದ ತಂಬಾಕು ಘಾಟು.

ಆಮೇಲೆ ಯಾರಾದ್ರೂ ಮಾತಾಡಲು ಸಿಕ್ಕಿದರೆ ‘ಶ್ರೀಧರ ಸ್ವಾಮಿಗಳು ಹೇಳಿದ್ದೋ ಅದೇಯೋ! ಅವರು ಜಗತ್ತನ್ನೇ ಗೆದ್ದಲ್ರೋ! ಅದು ಜಗತ್ತು ಗೆಲ್ಲಲು ಮನಸ್ಸು ಗೆಲ್ಲಬೇಕೋ! ಅದೆಲ್ಲ ಹಾಗೆಲ್ಲ ಸುಲಭ ಅಲ್ಲವೋ!’ ಅನ್ನುತ್ತಿದ್ದ. ಅವನನ್ನು ಕೆಣಕುವುದು ಅಣ್ಣಯ್ಯ. ಅವನನ್ನು ಕೆಣಕಲು ‘ದೇವರೇ ಇಲ್ಲ. ದೇವರ ಅಸ್ತಿತ್ವದ ಬಗ್ಗೆ ನಿನ್ನಲ್ಲಿ ಏನು ಫ್ರೂಪ್‌ ಇದೆ ಹೇಳೇಬಿಡು ಈಗ’ ಎಂದು ಹೇಳುತ್ತಿದ್ದ. ಅದಕ್ಕೆಲ್ಲ ಆತ ಬಗ್ಗುತ್ತಿರಲಿಲ್ಲ. ‘ದೇವರನ್ನು ಕಾಣಲು ಕಣ್ಣು ಬೇಕೋ! ನಿನ್ನ ಈ ಕಣ್ಣಲ್ಲ. ಬೇರೆ ದಿವ್ಯಕಣ್ಣು. ಆ ಕಣ್ಣು ಬಂದಾಗ ನಿನ್ಗೆ ದೇವರು ಕಾಣ್ತು. ನಿನ್ಗೆ ದಿವ್ಯದೃಷ್ಟಿ ಬರವು. ಸುಮ್ಮನೆ ಅಧಿಕ ಪ್ರಸಂಗ ಮಾಡಡ. ದೇವರೇ ಈ ಜಗತ್ತನ್ನ ನಡೆಸುವದು ಅವನೇ ಸರ್ವಾಂತಯಾಮಿ. ಕ್ಷಣಮಪಿ ನಚಲತಿ ತೇನ ಬಿನಾ’ ಎನ್ನುತ್ತಿದ್ದ.

‘ಅಣು ರೇಣು ತೃಣ ಕಾಷ್ಟದಲ್ಲಿ ಎಲ್ಲಾ ಕಡೆ ಇರೋದು ದೇವರೇನೋ. ಇಡೀ ಜಗತ್ತೇ ಭಗವಂತಮಯ’ ಎನ್ನುತ್ತಿದ್ದ.
ಅವನಿಗೆ ನಿಜವಾಗಿಯೂ ಒಂದು ಸ್ವಾಮೀಜಿಯ ಕಳೆ ಇತ್ತು. ಅವರ ಮನೆಯ ಒಂಭತ್ತು ದಿನದ ನವರಾತ್ರಿ ಪೂಜೆಗೆ ಕೂಡುವುದು ಅವನೇ. ಆಗಂತೂ ಇಡೀ ದಿನ ಕೊಕ್ಕೆ ತೆಗೆದುಕೊಂಡು ಕರವೀರ, ದಾಸಾಳ, ಪತ್ರೆ, ಮಂದಾರ ಗಿಡಗಳ ಬಳಿಯೇ ಇರುತ್ತಿದ್ದ. ಒಂದೊಂದು ದಿನ ಕೆರೆಯಲ್ಲಿಯೇ ಸ್ನಾನ ಮುಗಿಸಿ ಸಂಧ್ಯಾವಂದನೆಗೆ ಕುಳಿತರೆ ಅದರಲ್ಲಿಯೇ ಆತ ತಲ್ಲೀನನಾಗಿ ಹೋಗುತ್ತಿದ್ದ. ನಾಲ್ಕು ಗಂಟೆಗೆ ಸುಮಾರಿಗೆ ಊಟಕ್ಕೆ ಹೋಗುವುದು. ಎಷ್ಟು ತಲ್ಲೀನತೆಯೆಂದರೆ ಅಲ್ಲಿಯೇ ನಿದ್ದೆಗೆ ಜಾರಿ ತೂಕಡಿಸುತ್ತಿದ್ದ. ವಿಷ್ಣು ಸಹಸ್ರನಾಮ, ರುದ್ರ, ಭಗವದ್ಗೀತೆಯ ಕೆಲವು ಅಧ್ಯಾಯಗಳು ಅವನಿಗೆ ಬಾಯಿಪಾಟು. ಕಾಶಿಯಿಂದ ರಾಮೇಶ್ವರದವರೆಗೆ ಹೆಚ್ಚು ಕಡಿಮೆ ಎಲ್ಲ ತೀರ್ಥಕ್ಷೇತ್ರಗಳ ದರ್ಶನ ಮಾಡಿದ್ದ.

ಆದರೆ ಪೂರ್ತಿ ಇಹವನ್ನು ತ್ಯಜಿಸಿ ಸಂತನಾಗಲೂ ಅವನ ಹಣೆಯಲ್ಲಿ ಬರೆದಿರಲಿಲ್ಲ ಎಂದು ಕಾಣುತ್ತದೆ. ಹೆಚ್ಚು ಕಡಿಮೆ ದಿನಾಲು ಕುಮಟೆಗೆ ಹೋಗಲೇಬೇಕು. ಅಂತಹ ಕೆಲಸವೇನೂ ಇಲ್ಲ. ಏನು ಕೆಲಸವೆಂದು ಕುಮಟಾಕ್ಕೆ ಹೋಗಿಯೇ ವಿಚಾರ ಮಾಡುವುದು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಿಡುತ್ತಿದ್ದ ಸ್ಪೆಷಲ್ ಬಸ್ಸನ್ನೇ ಆತ ಹತ್ತುವುದು. ‘ಆ ತಂಗಿ ಯಾರು? ಈ ತಂಗಿ ಯಾರು? ಅಡ್ಡಿ ಇಲ್ಲ. ಚಂದವಾಗಿದ್ದಾಳೆ. ಅವಳ ತಾಯಿಯೂ ಪ್ರಾಯದಲ್ಲಿ ತುಂಬ ಸುಂದರಿಯಾಗಿದ್ದಳು’ ಅನ್ನುತ್ತಿದ್ದ. ‘ಹೆಂಗಸಿಗೆ ಹಿಂದೆ ಮುಂದೆ ಸರಿಯಾಗಿ ಇಲ್ಲದಿದ್ರೆ ಬರೀ ಮುಖ ಸೌಂದರ್ಯ ಏನೂ ಉಪಯೋಗಿಲ್ಲೋ’ ಎನ್ನುವುದು ಅವನ ವಾದ. ಚಿತ್ತಿನಿ, ಹಸ್ತಿನಿ ಇತ್ಯಾದಿ ಸುಂದರಿಯರ ಪ್ರವರ್ಗಗಳ ಶರೀರಗಳು ಯಾವ ಯಾವ ರೀತಿ ಇರುತ್ತವೆ? ಹೆಣ್ಣು ಮಕ್ಕಳಿಗೆ ಕೂದಲು ಹೇಗಿರಬೇಕು? ತೊಡೆ ಕಂಬಗಳು ಹೇಗಿರಬೇಕು? ಸೊಂಟ ಹೇಗಿರಬೇಕು? ಎದೆ ಹೇಗಿರಬೇಕು? ಇತ್ಯಾದಿ ಅವನಿಗೆ ಸ್ಪಷ್ಟ ವಿಚಾರಗಳಿದ್ದವು. ‘ಸೌಂದರ್ಯ ಅಂದರೆ ಮಲೆಯಾಳ ಕಡೆಯ ಹೆಂಗಸರದು. ಅವರ ಶರೀರ ಸೌಂದರ್ಯದ ಮುಂದೆ ಬೇರೆ ಇಲ್ಲ. ಗಂಡಸು ಅವರ ಸಂಗದಲ್ಲಿ ಧನ್ಯನಾಗುತ್ತಾನೆ’ ಎಂಬುದು ಅವನ ನಂಬಿಕೆಯಾಗಿತ್ತು.

ಆದರೆ ಯಾಕೋ ಘಟ್ಟದ ಮೇಲಿನ ಹುಡುಗಿಯರ ಬಗ್ಗೆ ಅವನ ಅಭಿಪ್ರಾಯ ಚೆನ್ನಾಗಿರಲಿಲ್ಲ. ‘ಅವರು ಉಪಯೋಗಿಲ್ಲ. ಮೈ ಹೊಸಕಲಿಗಳು’ ಎನ್ನುವುದು ಅವನ ಗಟ್ಟಿಯಾದ ಭಾವನೆ. ‘ಆದ್ರೆ ಹೆಂಗಸರು ಸೀರೆ ಉಟ್ಟು ನಿಂತರೆ ಎಷ್ಟು ಚೆಂದಕಾಣುತ್ತಾರೋ ಹಾಗೆ ನಿಜ ಸೌಂದರ್ಯ ಇರುವುದಿಲ್ಲ’ ಎಂದೇನೋ ಒಮ್ಮೆ ನಮ್ಮ ಮನೆಯಲ್ಲಿ ಪಂಚಾಯತಿ ತೆಗೆದು ದೊಡ್ಡಮ್ಮನಿಂದ ಚೆನ್ನಾಗಿ ಬೈಸಿಕೊಂಡಿದ್ದ. ‘ವೆಂಕಣ್ಣಾ, ನೀನು ಅಂತದೆಲ್ಲಾ ಮಾತಾಡುದಿದ್ರೆ ನಮ್ಮನೆಗೆ ಬರುವುದೇ ಬೇಡ’ ಎಂದು ಅವರು ಖಡಾಖಂಡಿತ ಹೇಳಿಬಿಟ್ಟಿದ್ದರು. ‘ಅಲ್ದೇ ತಂಗಿ, ಹಾಂಗೆ ವಿಷಯಕ್ಕೆ ಹೇಳಿದ್ನೆ’ ಎಂದು ದೊಡ್ಡಮ್ಮನಿಗೆ ಸಮಜಾಯಿಸಿ ಹೇಳಿ ಕವಳ ಹಾಕಿ ವಿಷಯಾಂತರ ಮಾಡಿದ್ದ.

ಕುಮಟಾಕ್ಕೆ ಹೆಚ್ಚು ಕಡಿಮೆ ದಿನಾಲು ಹೋಗುವದಿತ್ತು. ಆದರೆ ಏನು ಮಾಡುವುದು ಎನ್ನುವುದನ್ನು ಆತ ನಿರ್ಧರಿಸುವುದು ಅಲ್ಲಿಗೆ ಹೋದ ಮೇಲೆ. ಅಲ್ಲಿ ಹಲವು ಅಯ್ಕೆಗಳಿದ್ದವು. ಟಿ.ಟಿ. ಹೆಗಡೆಯವರ ಬಳಿ ಹೋಗಿ ಕೆಮ್ಮಿಗೆ ಔಷಧಿ ತರಬಹುದು. ಇಲ್ಲವಾದರೆ ಅಡಿಕೆ ಸೊಸೈಟಿಯವರೆಗೆ ಹೋಗಿ ಅಡಿಕೆ ದರ ಹೇಗೆ ನಡೆದಿದೆ ನೋಡಿ ಬರಬಹುದು. ಕೆಳಗಿನ ಬಸ್‌ ಸ್ಟ್ಯಾಂಡ್‌ತನಕ ನಡೆದುಕೊಂಡು ಹೋಗಿ ಅಲ್ಲಿ ತರಕಾರಿ ಇಟ್ಟುಕೊಂಡು ಕುಳಿತಿದ್ದ ಗೌಡತಿಯರೊಂದಿಗೆ ಚೌಕಾಶಿ ಮಾಡಿ ಪಟ್ಲಕಾಯಿ ತರಬಹುದು. ಬಂಗ್ಲೆ ಅಜ್ಜನ ಅಂಗಡಿಗೆ ಹೋಗಿ ಚಾಪುಡಿ ಇತ್ಯಾದಿ ತರಬಹುದು. ಮಾರುಕಟ್ಟೆಯಲ್ಲಿ ಕತ್ತಿ ಮಾರಾಟಕ್ಕೆ ಇಟ್ಟುಕೊಂಡು ಕುಳಿತವರ ಬಳಿ ಕುಳಿತು ಕತ್ತಿ ಎಲ್ಲ ನೋಡಿ ಪಾಸಾದರೆ ತರಬಹುದು. ಹಬ್ಬದ ಸೀಸನ್ ಆದ್ರೆ ಮಗೆಕಾಯಿ ತರಬಹುದು. ಇಲ್ಲವಾದರೆ ಒಂದು ಜಾಜಿದಂಡೆ ತಂದು ನೇತ್ರಾವತಿಗೆ ಕೊಡಬಹುದು.

ಇನ್ನೂ ಹಲವು ಆಯ್ಕೆಗಳಿದ್ದವು. ಹೇಗೂ ಸುತ್ತಮುತ್ತಲಿನ ಊರುಗಳಾದ ಕೆಕ್ಕಾರು, ಬಂಡಿವಾಳ ಹೊಸಾಕುಳಿ, ಹೆಗಡೆ ಅಥವಾ ಬೇರೊಂದು ಕಡೆ, ಹೀಗೆ ಯಾವ ಬಸ್ಸು ಮೊದಲು ನಿಂತಿದೆಯೋ ಅದನ್ನು ಹತ್ತಿ ನೆಂಟರ ಮನೆಗೆ ಹೋಗಬಹುದು. ಹೊನ್ನಾವರಕ್ಕೆ ಹೋಗಿ ಎಮ್ಮೆ ಪೈಲು ಬೇಕಾದರೂ ನೋಡಿ ಬರಬಹುದು... ಒಮ್ಮೊಮ್ಮೆ ಶಂಭಟ್ಟರ ಬಳಿ ಜಾತಕ ಕೇಳಿ ಬರಬಹುದು ಹೀಗೆ ಅವನಿಗೆ ಪುರುಸೊತ್ತಿಲ್ಲದ ತಿರುಗಾಟ. ಮನೆ ಸೇರುವುದು ತಡರಾತ್ರಿಯೇ. ಬಸ್‌ಗೆ ಬಂದು ಇಳಿದು ಯಾರ ಮನೆಯಲ್ಲಾದರೂ ಸೂಡಿ ಪಡೆದು ಓಡುತ್ತಾ ಮನೆ ಸೇರುವುದು. ದಾರಿಯಲ್ಲಿ ಯಾರಾದರು ತಡೆದು ‘ವೆಂಕಣ್ಣಾ, ಊಟ ಮಾಡಿ ಹೋಗು ಈ ರಾತ್ರಿಯೆಂತ ಹೋಗ್ತ್ಯಾ?’ ಎಂದರೆ ಅಲ್ಲೇ ಊಟ ಮಾಡಿ ಮಲಗುವುದು. ಕೆಲವೊಮ್ಮೆ ಕುಮಟಾದ ಥೇಟರ್‌ನಲ್ಲಿ ಗುಟ್ಟಾಗಿ ಹಾಕುತ್ತಿದ್ದ ಇಂಗ್ಲಿಷ್ ಸಿನಿಮಾ ನೋಡಿ ರಾತ್ರಿ ಟಂಟಿ ಹೋಟೆಲ್‌ನಲ್ಲಿಯೇ ಬೆಂಚಿನ ಮೇಲೆ ಮಲಗಿ ಬೆಳಗ್ಗೆಯೂ ಬರಬಹುದು. ಅಂತಹ ಸಿನಿಮಾ ನೋಡಿ ಕೆಲವೊಮ್ಮೆ ‘ಅವಳು ಎಂತಹ ಸುಂದರಿಯೋ ಆ ಹುಡುಗಿ! ಒಂದು ಕೈ ತೊಳೆದು ಮುಟ್ಟವು! ಈ ಹುಡುಗಿಯರೆಲ್ಲ ಉಪಯೋಗಿಲ್ಲೆ’ ಎಂದು ಹೇಳುವುದೂ ಇತ್ತು. ಅವಳು ಕಾಮಶಾಸ್ತ್ರದಲ್ಲಿ ಬರುವ ಹಸ್ತಿನಿಯೋ ಎಂದು ವಿಶೇಷ ವಿವರಣೆ ನೀಡುತ್ತಿದ್ದ.

ಅವನಿಗೆ ಅಪಾರ ಜ್ಞಾನವಿದ್ದುದು ಸುಳ್ಳಲ್ಲ. ಇಡೀ ಕರಾವಳಿಯಲ್ಲಿ ಯಾವ ಅಡಿಕೆ ಮರ ಬೆರೆ ಹಾಕಲು ಅತ್ಯುತ್ತಮ. ಯಾವ ತೆಂಗಿನ ಮರ ಶ್ರೇಷ್ಠ. ಹಾಗೆಯೇ ಯಾವ ಮನೆಯವರ ಬಕ್ಕೆ ಹಣ್ಣು ಅತ್ಯುತ್ತಮ. ಯಾವ ಮನೆಯ ಗುಲಾಬಿ ಹೂವು ಅದ್ಭುತ. ಯಾರ ಮನೆಯ ಎಮ್ಮೆ ಶ್ರೇಷ್ಠ. ಯಾವನು ಯಾವುದರಲ್ಲಿ ಕಸಬುವಾನಿ, ಯಾವನು ಮೈಗಳ್ಳ, ತೋಟಕ್ಕೆ ಯಾವಾಗ ಗೊಬ್ಬರ ಹಾಕಿ ನೀರು ಹಾಕಬೇಕು. ಯಾವ ತೋಟ ಅತ್ಯುತ್ತಮ. ಯಾವ ಭೂಮಿ ಅತ್ಯುತ್ತಮ. ಯಾರ ಮನೆಯ ಹೆಂಗಸಿನ ಕೇಸರಿಬಾತು ಮಧುರ. ಯಾರು ಹಲಸಿನ ಹಣ್ಣಿನ ಇಡ್ಲಿ ಚೆನ್ನಾಗಿ ಮಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆಯವರ ಯಾವ ವೇಷ ಅದ್ಭುತ. ಇತ್ಯಾದಿ... ಶಿವರಾಮ ಹೆಗಡೆ ಕೌರವನ ವೇಷ ನೋಡಲು ಕೋಟಿ ರೂಪಾಯಿ ಕೊಟ್ಟರೂ ಕಡಿಮೆ. ದೇವರು ಹೆಗಡೆಯವರ ಭೀಮ ಅಂದ್ರೆ ಭೀಮ ಇತ್ಯಾದಿ... ರಾಜಕುಮಾರನಂತಹ ನಟ, ಇಂದಿರಾ ಗಾಂಧಿಯಂತಹ ರಾಜಕಾರಣಿ ದೇಶದಲ್ಲಿ ಯಾವಾಗಲೂ ಬರುವುದಿಲ್ಲ. ಎಂದು ಅವನು ಹೇಳುತ್ತಿದ್ದ.

ನೇತ್ರಾವತಿಯ ಚಾದಂಗಡಿಯಲ್ಲಿ ಅವ ಪೇಪರ್‌ ಓದುವುದು. ಹತ್ತಿರ ಹತ್ತಿರ ನೂರು ವರ್ಷ ಬದುಕಿರಬೇಕು ಆತ. ಒಂದೂ ಹಲ್ಲು ಬಿದ್ದಿರಲಿಲ್ಲ. 60–65 ವರ್ಷದವರ ಹಾಗೆ ಕಾಣುತ್ತಿದ್ದ. ಏನೂ ಕಾಯಿಲೆ, ಬಿಪಿ, ಶುಗರ್‌ ಕೂಡಾ ಇರಲಿಲ್ಲ. ಒಂದು ದಿನ ಬೆಳಿಗ್ಗೆ ಸತ್ತುಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT