ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿಯಿಂದ ದಿನಸಿ ರಸ್ತೆಗುರುಳಿದಾಗ...

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅದು ಸಂಜೆ ಸುಮಾರು ಏಳು ಗಂಟೆ. ಧಾರವಾಡದ ಸಮೀಪದ ಹೆದ್ದಾರಿಯ ಮೈಲುಗಲ್ಲಿನ ಮೇಲೆ ಕುಳಿತು ಎಂದಿನಂತೆ ಯುವಕ ಹನುಮೇಶ ತನ್ನ ಮೊಬೈಲ್‍ ಫೋನ್‌ನಲ್ಲಿ ಆಟ ಆಡುವುದರಲ್ಲಿ ಮಗ್ನನಾಗಿದ್ದ. ಉಂಡಾಡಿಗುಂಡ ಎಂದೇ ಪ್ರಸಿದ್ಧಿಯಾಗಿದ್ದವ ಹನುಮೇಶನ ಕೈಗೆ ಮೊಬೈಲ್‌ ಫೋನ್‌ ಸಿಕ್ಕರೆ ಸಾಕು, ಈಗಿನ ಮಕ್ಕಳಂತೆಯೇ ಜಗತ್ತಿನ ಪರಿಜ್ಞಾನವೇ ಇಲ್ಲದೇ ಮುಳುಗಿ ಹೋಗುತ್ತಿದ್ದ.

ಅದೇ ವೇಳೆ ಆತ ಕುಳಿತಿದ್ದ ರಸ್ತೆಯ ಸಮೀಪವೇ ಅತ್ಯಂತ ವೇಗವಾಗಿ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿತ್ತು. ಅದರಲ್ಲಿದ್ದ ದಿನಸಿ ವಸ್ತುಗಳೆಲ್ಲ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಆ ಸುದ್ದಿ ಸ್ಥಳೀಯರ ಕಿವಿಗೆ ಮಿಂಚಿನ ವೇಗದಲ್ಲಿ ತಲುಪಿತು. ಪುಕ್ಕಟೆ ದಿನಸಿ ಸಿಗುತ್ತದೆ ಎಂದರೆ ಸುಮ್ಮನೆ ಬಿಟ್ಟಾರೆಯೇ? ಕ್ಷಣ ಮಾತ್ರದಲ್ಲಿ ಕೈಗೆ ಸಿಕ್ಕ ಚೀಲಗಳನ್ನು ತೆಗೆದುಕೊಂಡು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ತಮ್ಮ ಶಕ್ತ್ಯಾನುಸಾರ ಬಾಚಿ ಬಾಚಿ ದಿನಸಿ ಕೊಂಡೊಯ್ದರು. ಪುಕ್ಕಟೆ ಸಿಕ್ಕ ಆ ದಿನಸಿಗಳಿಂದ ಹಬ್ಬದೂಟ ಸವಿದರು.

ಒಂದೆರಡು ದಿನ ಕಳೆಯಿತು. ಕೆಲವರ ಮನೆಯಲ್ಲಿ ಇನ್ನೂ ದಿನಸಿ ಖರ್ಚಾಗಿರಲಿಲ್ಲ. ಅಷ್ಟೊತ್ತಿಗಾಗಲೇ ಅವರ ಮನೆ ಎದುರು ಪೊಲೀಸರು ನೋಟಿಸ್ ಹಿಡಿದುಕೊಂಡು ಬಂದು ನಿಂತರು. ಲಾರಿಯಿಂದ ಬಿದ್ದ ದಿನಸಿ ಬಗ್ಗೆ ವಿಚಾರಿಸಿದರು.

‘ನೀವು ಕಳ್ಳತನ ಮಾಡಿದ್ದೀರಿ. ಆದ್ದರಿಂದ ವಿಚಾರಿಸಲು ಬಂದಿದ್ದೇವೆ’ ಎಂದರು. ‘ನಾವು ಇದನ್ನು ಕದ್ದು ತಂದಿಲ್ಲ’ ಎಂದು ಪೊಲೀಸರ ಎದುರು ಕೆಲವರು ವಾದ ಮಾಡಿದರೆ ಇನ್ನು ಕೆಲವರು ಗುಂಪು ಕಟ್ಟಿಕೊಂಡು ಪೊಲೀಸರ ಮೇಲೆ ಏರಿ ಹೋಗಿ ದಾಂಧಲೆ ನಡೆಸಲು ಶುರುವಿಟ್ಟುಕೊಂಡರು.

ಸಾಕ್ಷ್ಯ, ಪುರಾವೆ ಇಲ್ಲದೆಯೇ ಸಾಮಾನ್ಯವಾಗಿ ಪೊಲೀಸರು ಯಾರನ್ನೂ ವಿಚಾರಣೆಗೆ ಒಳಪಡಿಸುವುದಾಗಲಿ, ಬಂಧಿಸುವುದಾಗಲಿ ಮಾಡುವುದಿಲ್ಲ. ಆದ್ದರಿಂದ ತಾವು ಸಾಮಾನು ಹೊತ್ತು ತಂದಾಗ ಅದನ್ನು ಮೂರನೆಯ ವ್ಯಕ್ತಿ ಗಮನಿಸಿಲ್ಲ ಎನ್ನುವ ಮೊಂಡು ಧೈರ್ಯ ಜನರಿಗಿತ್ತು. ಅಲ್ಲಿದ್ದವರೆಲ್ಲಾ ಸಾಮಾನು ತುಂಬಿಸಿಕೊಂಡವರೇ ಆಗಿದ್ದರಿಂದ ಇದರ ಬಗ್ಗೆ ‍ಪೊಲೀಸರಿಗೆ ಮಾಹಿತಿ ನೀಡುವವರು, ನೀಡಿದರೂ ಅದಕ್ಕೆ ಸಾಕ್ಷ್ಯ, ಪುರಾವೆ ಒದಗಿಸುವವರು ಇಲ್ಲ ಎನ್ನುವ ಧೈರ್ಯ ಅವರಲ್ಲಿತ್ತು.

ಅದೇ ಧೈರ್ಯದಿಂದ ಪೊಲೀಸರ ಎದುರು ವಾದ ಮಾಡುತ್ತಿದ್ದರು. ಅಪರಾಧ ಪ್ರಕರಣದಲ್ಲಿ ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡುತ್ತಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಸಿದ್ಧಪಡಿಸುವಾಗ ಮಾಹಿತಿದಾರರ ಅನುಮತಿ ಪಡೆದು ಅವರ ಹೆಸರನ್ನು ಉಲ್ಲೇಖಿಸುತ್ತಾರೆ.

ಅಂಥ ಸಂದರ್ಭದಲ್ಲಿ ದೂರು ನೀಡಿದವರನ್ನೇ ಸಾಮಾನ್ಯವಾಗಿ ಸಾಕ್ಷಿದಾರರನ್ನಾಗಿ ಮಾಡುವ ಪೊಲೀಸರು ಅವರ ಬಳಿ ಘಟನೆಗೆ ಸಂಬಂಧಿಸಿದ ಏನಾದರೂ ಸಾಕ್ಷ್ಯ ಪುರಾವೆಗಳು ಇದ್ದಲ್ಲಿ ಅದನ್ನು ಪರಿಶೀಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸುತ್ತಾರೆ. ಹಾಗೇನೆ, ಅಪರಾಧ ಕೃತ್ಯ ನಡೆದ ಸಂದರ್ಭಗಳಲ್ಲಿ ಪೊಲೀಸರು ಸ್ಥಾನಿಕ ವಿಚಾರಣೆ ಮಾಡಿ ಎಫ್‌ಐಆರ್‌ ಅನ್ನು 24 ಗಂಟೆಯ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.

ಕೊಲೆ, ದರೋಡೆ, ಕಳ್ಳತನ, ಅತ್ಯಾಚಾರಗಳಂತಹ ಪ್ರಕರಣಗಳಲ್ಲಿ (ಕಾಗ್ನಿಜೆಬಲ್ ಆಫೆನ್ಸ್‌) ಎಫ್‌ಐಆರ್‌ ದಾಖಲು ಮಾಡಿದ ತಕ್ಷಣ ಕೋರ್ಟ್‌ನ ಪೂರ್ವಾನುಮತಿ ಇಲ್ಲದೆಯೂ ಶಂಕಿತರನ್ನು ಬಂಧಿಸಿ ವಿಚಾರಣೆ ಮಾಡುವ ಅಧಿಕಾರ ಪೊಲೀಸರಿಗೆ ಇದೆ.

ಈ ಪ್ರಕರಣದಲ್ಲಿಯೂ ಹಾಗೆಯೇ ಆಯಿತು. ದಿನಸಿ ಕೊಂಡೊಯ್ದ ಆರೋಪದ ಮೇಲೆ ಕೆಲವು ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕರೆತಂದರು. ಅವರೆಲ್ಲಾ ಪೊಲೀಸರ ಮೇಲೆ ಎಗರಾಡಿದರು. ಆಗ ಪೊಲೀಸರು ರಸ್ತೆಗಳ್ಳತನ ಮಾಡಿದ್ದಕ್ಕೆ ಆಗಬಹುದಾದ ಶಿಕ್ಷೆಯ ಕುರಿತು ಎಚ್ಚರಿಕೆ ನೀಡತೊಡಗಿದರು.

‘ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯದ ಒಳಗಡೆ ಯಾರಾದರೂ ರಸ್ತೆಗಳ್ಳತನ, ವಾಹನ ದರೋಡೆ ಮಾಡಿದರೆ ಅಂಥವರಿಗೆ ಭಾರತೀಯ ದಂಡ ಸಂಹಿತೆಯ 392ನೇ ಕಲಮಿನ ಪ್ರಕಾರ ಗರಿಷ್ಠ ಹದಿನಾಲ್ಕು ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಇದೆ ಎಂದು ಕಾನೂನಿನ ಪಾಠ ಮಾಡತೊಡಗಿದರು, ಅದಕ್ಕೆ ಸುಮ್ಮನಾಗದ ಗ್ರಾಮಸ್ಥರು, ‘ನಾವೇನೂ ಸಾಮಾನು ತಂದಿಲ್ಲ. ನಾವೇ ಅದನ್ನು ತಂದಿದ್ದೇವೆ ಎನ್ನುವುದುಕ್ಕೆ ನಿಮ್ಮ ಬಳಿ ಏನು ಸಾಕ್ಷ್ಯಾಧಾರ ಇದೆ?’ ಎಂದು ಏರು ದನಿಯಲ್ಲಿ ಕೇಳತೊಡಗಿದರು.

ಆಗ ಪೊಲೀಸ್‌ ಅಧಿಕಾರಿಯೊಬ್ಬರು, ‘ನಿಮ್ಮ ಕೃತ್ಯದ ಬಗ್ಗೆ ನಮ್ಮಲ್ಲಿ ಪ್ರಬಲವಾದ ಸಾಕ್ಷ್ಯಾಧಾರವಿದೆ. ಇದು ಜಾಮೀನು ರಹಿತ ಬಂಧನದ ಪ್ರಕರಣವಾಗಿದ್ದು ತಕ್ಷಣದಿಂದಲೇ ನಿಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಮಾಡಿ ಜೈಲಿಗೆ ಅಟ್ಟುತ್ತೇವೆ’ ಎನ್ನುತ್ತಿದ್ದಂತೆಯೇ ತಮಗೇನೋ ಗ್ರಹಚಾರ ಕಾದಿದೆ ಎಂದುಕೊಂಡ ಜನರು ತಣ್ಣಗಾದರು.

ದಿನಸಿ ಸಾಮಾನು ಕೊಂಡೊಯ್ದ ಆರೋಪಿಗಳಲ್ಲಿ ಒಬ್ಬಾತ ಕಲ್ಲಪ್ಪ. ಘಟನೆ ನಡೆದ ದಿನ ಟ್ರ್ಯಾಕ್ಟರ್‌ನಲ್ಲಿ ತನ್ನೂರಿಗೆ ವಾಪಸ್‌ ಬರುತ್ತಿದ್ದಾಗ ದಿನಸಿ ಹೊತ್ತುಕೊಂಡು ಹೋಗುತ್ತಿದ್ದವರನ್ನು ನೋಡಿ, ತಾನೂ ಒಂದಿಷ್ಟು ಬಾಚಿಕೊಂಡು ಹೋಗಿದ್ದ ಈತ. ಕಲ್ಲಪ್ಪನ ಟ್ರ್ಯಾಕ್ಟರ್ ನೋಂದಣಿ ಸಂಖ್ಯೆಯ ಗುರುತು ಹಿಡಿದು ಹೊರಟ ಪೊಲೀಸರು ಆತನನ್ನೂ ಕಳ್ಳತದ ಪ್ರಕರಣದಲ್ಲಿ ಹಿಡಿದುಕೊಂಡು ಹೋದರು.ಇತ್ತ, ಆರೋಪಿಗಳ ಕುಟುಂಬದವರು ಹೆದರಿ, ತಮಗೆ ಗೊತ್ತಿರುವ ವಕೀಲರ ಜೊತೆ ಠಾಣೆಗೆ ಧಾವಿಸುತ್ತಾರೆ.

ಕಲ್ಲಪ್ಪನ ಸಂಬಂಧಿಕರು ಕೂಡ ವಕೀಲರ ಹತ್ತಿರ ಓಡಿ ಬರುತ್ತಾರೆ. ಹೇಗಾದರೂ ಮಾಡಿ ಕಲ್ಲಪ್ಪನನ್ನು ಬಚಾವು ಮಾಡುವಂತೆ, ಇಲ್ಲವೇ ಆತನನ್ನು ಪೊಲೀಸರು ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೊಡಿಸುವಂತೆ ಗೋಗರೆಯುತ್ತಾರೆ. ಕೂಡಲೇ ಠಾಣೆಗೆ ಧಾವಿಸುವ ಕಲ್ಲಪ್ಪನ ಪರ ವಕೀಲರು, ‘ಕಾನೂನು ಮತ್ತು ಶಿಕ್ಷೆಯ ಅರಿವಿಲ್ಲದೆಯೇ ಈ ತಪ್ಪನ್ನು ಕಲ್ಲಪ್ಪ ಮಾಡಿದ್ದಾನೆ.

ಇವನು ದರೋಡೆಕೋರನಲ್ಲ, ದರೋಡೆಯ ಯಾವ ಹಿನ್ನೆಲೆಯೂ ಆತನಿಗೆ ಇಲ್ಲ. ರಸ್ತೆಯಲ್ಲಿ ಬಿದ್ದ ಸಾಮಾನು ತೆಗೆದುಕೊಂಡು ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ತಿಳಿಯದೆಯೇ ತಪ್ಪುಮಾಡಿದ್ದಾನೆ. ಆದ್ದರಿಂದ ಆತನ ವಿರುದ್ಧ ಐಪಿಸಿಯ 392ನೇ ಕಲಮಿನ ಅಡಿ ಪ್ರಕರಣ ದಾಖಲಿಸಬೇಡಿ’ ಎಂದು ಪೊಲೀಸರಲ್ಲಿ ವಿನಂತಿಸಿಕೊಳ್ಳುತ್ತಾರೆ.

ಅಷ್ಟೊತ್ತಿಗಾಗಲೇ ದಿನಸಿ ವಸ್ತುಗಳನ್ನು ತೆಗೆದುಕೊಂಡು ಹೋದ 150ಕ್ಕೂ ಹೆಚ್ಚು ಮಂದಿಯ ಕಡೆಯವರು ವಕೀಲರು, ರಾಜಕೀಯ ಧುರೀಣರು... ಹೀಗೆ ಯಾರೆಲ್ಲಾ ಸಾಧ್ಯವೋ ಎಲ್ಲರ ವಶೀಲಿ ಹಚ್ಚಲು ಶುರುವಿಟ್ಟುಕೊಳ್ಳುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ.

ಕೊನೆಗೂ ಈ ಒತ್ತಡಗಳಿಗೆ ಮಣಿದ ತನಿಖಾಧಿಕಾರಿ ರಸ್ತೆ ದರೋಡೆ ಪ್ರಕರಣದ ಬದಲು ‘ಕಳುವಿನ ಪ್ರಕರಣ’ ಎಂದು ದಾಖಲಿಸುತ್ತಾರೆ. ‘ಜಾಮೀನುರಹಿತ ಅಪರಾಧ’ಕ್ಕೆ ಸಂಬಂಧಿಸಿದ ಕಲಮುಗಳನ್ನು ಕೈಬಿಟ್ಟು ‘ಕಳ್ಳತನ’ಕ್ಕೆ ಸಂಬಂಧಿಸಿದ ಕಲಮುಗಳ ಅಡಿ ಮಾತ್ರ ದೋಷಾರೋಪ ಪಟ್ಟಿ ತಯಾರಿಸಿ ಅದನ್ನು ಕೋರ್ಟ್‌ಗೆ ಸಲ್ಲಿಸುತ್ತಾರೆ.

ಅಷ್ಟಕ್ಕೂ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದಾದರೂ ಹೇಗೆ? ಕಲ್ಲಪ್ಪನ ಟ್ರ್ಯಾಕ್ಟರ್‌ ನಂಬರ್‌ನ ಜಾಡು ಹಿಡಿದು ಅವರು ಹೊರಟದ್ದು ಹೇಗೆ?... ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಈ ‘ಕಳ್ಳ’ರೆಲ್ಲಾ ಸಿಕ್ಕಿಬಿದ್ದದ್ದು ಉಂಡಾಡಿಗುಂಡ ಎನಿಸಿಕೊಂಡಿದ್ದ ಹನುಮೇಶನಿಂದ...! ಮೊಬೈಲ್‌ ಫೋನ್‌ನಲ್ಲಿ ಆಟವಾಡುತ್ತ ಕುಳಿತಿದ್ದ ಹನುಮೇಶ ದಿನಸಿ ತುಂಬಿಸಿಕೊಳ್ಳುತ್ತಿದ್ದವರ ವಿಡಿಯೊ ಮಾಡಿಕೊಂಡಿರುತ್ತಾನೆ. ಕಲ್ಲಪ್ಪನ ಟ್ರ್ಯಾಕ್ಟರ್‌ ಕೂಡ ಅವನ ಮೊಬೈಲ್‌ನಲ್ಲಿ ಸೆರೆಯಾಗುತ್ತದೆ.

ಇವುಗಳ ಸಿ.ಡಿ. ಮಾಡಿ ಪೊಲೀಸರಿಗೆ ಆತ ನೀಡಿರುತ್ತಾನೆ. ಇದೇ ಆಧಾರದ ಮೇಲೆ ಪೊಲೀಸರು ಗ್ರಾಮಸ್ಥರ ಮನೆಗೆ ಹೋಗಿರುತ್ತಾರೆ. ಕಾನೂನಿನ ಬಗ್ಗೆ ಹೇಳುವುದಾದರೆ, ಯಾವುದೇ ಅಪರಾಧ ಪ್ರಕರಣದಲ್ಲಿ ಆರೋಪಿತರೇ ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರತ್ಯಕ್ಷ ಸಾಕ್ಷಿಗಳ (ಐ ವಿಟ್‍ನೆಸ್) ಅಗತ್ಯವಿರುತ್ತದೆ.

ಪೊಲೀಸ್ ತನಿಖೆ ವೇಳೆಯಲ್ಲಿ ಸ್ವತಃ ಆರೋಪಿಗಳೇ ತಪ್ಪನ್ನು ಒಪ್ಪಿಕೊಂಡಿದ್ದರೂ ಅದನ್ನು ಸಾಕ್ಷ್ಯವೆಂದು ಕೋರ್ಟ್‌ ಪರಿಗಣಿಸುವಂತಿಲ್ಲ. ಪ್ರತ್ಯಕ್ಷ ಸಾಕ್ಷಿದಾರರ ಅಗತ್ಯ ಇದ್ದೇ ಇರುತ್ತದೆ. ಯಾವುದೇ ಘಟನೆಯ ವಿಡಿಯೊ ಮಾಡಿ ಅದರ ಕ್ಲಿಪಿಂಗ್‍ನ ಸಿ.ಡಿಗಳನ್ನು ಮಾಡಿದಾಗ ಆ ಸಿ.ಡಿಗಳನ್ನು ಪೂರಕ ಸಾಕ್ಷಿಗಳೆಂದು ಪರಿಗಣಿಸಬಹುದೇ ವಿನಾ ಅವು ಪ್ರತ್ಯಕ್ಷ ಅಥವಾ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಲು ಬರುವುದಿಲ್ಲ.

ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಮಾಡಿದ ಚಿತ್ರೀಕರಣ ಭಾರತೀಯ ಸಾಕ್ಷ್ಯ ಅಧಿನಿಯಮ 1872ರ 65(ಎ) ಕಲಮು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ 2(1)(ಟಿ) ಕಲಮಿನ ಪ್ರಕಾರ ಸಾಕ್ಷ್ಯವೆಂದು ಪರಿಗಣಿಸಬಹುದು. ಇದು ಪ್ರಮುಖ ಸಾಕ್ಷ್ಯವೆಂದು ಪರಿಗಣಿಸುವ ಮುನ್ನ ಅದು ಮೂಲ ಕಾಪಿಯೇ ಇಲ್ಲವೇ ವಿಡಿಯೊ ಅನ್ನು ತಿರುಚಲಾಗಿಯೇ ಎಂಬ ಬಗ್ಗೆಯೂ ಪರೀಕ್ಷೆ ಮಾಡಲಾಗುತ್ತದೆ.

ಅಷ್ಟೇ ಅಲ್ಲದೇ, ಇಂಥ ಚಿತ್ರೀಕರಣ ಮಾಡಿಕೊಂಡ ವ್ಯಕ್ತಿ ಕೋರ್ಟ್‌ಗೆ ಬಂದು ಸಾಕ್ಷ್ಯ ನುಡಿಯಬೇಕಾಗುತ್ತದೆ. ಚಿತ್ರೀಕರಣ ಮಾಡಿಕೊಂಡ ಉಪಕರಣವನ್ನು ಸಾಕ್ಷ್ಯಕ್ಕೆ ಬಳಸಿಕೊಂಡು ಚಿತ್ರೀಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ಚಿತ್ರೀಕರಣವನ್ನು ಸಿ.ಡಿ ಮೂಲಕವೋ ಇಲ್ಲವೇ ಅದರ ನಕಲು ಪ್ರತಿ ಮಾಡಿದ್ದರೆ ಅದನ್ನು ಕೋರ್ಟ್‌ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸುವುದಿಲ್ಲ.

ಈ ಪ್ರಕರಣದಲ್ಲಿ ಮೊಬೈಲ್‌ ಮೂಲಕ ಚಿತ್ರೀಕರಣ ಮಾಡಿಕೊಂಡಿದ್ದ ಹನುಮೇಶ ಘಟನೆಯ ಪ್ರತ್ಯಕ್ಷ ಸಾಕ್ಷಿ. ಯಾರಿಗೂ ಬೇಡವಾಗಿದ್ದ ಹನುಮೇಶ ಈಗ ಹೀರೊ ಆಗಿಬಿಡುತ್ತಾನೆ. ನೂರಾರು ಜನರ ‘ಭವಿಷ್ಯ’ ಇವನ ಮೊಬೈಲ್‌ ಫೋನ್‌ನಲ್ಲಿ ಅಡಕವಾಗಿರುತ್ತದಲ್ಲ! ಅದಕ್ಕಾಗಿ ಈತನಿಗೆ ಎಲ್ಲಿಲ್ಲದ ಡಿಮಾಂಡ್‌...! ಈತನೇ ಪ್ರತ್ಯಕ್ಷ ಸಾಕ್ಷಿ ಎಂದು ಆರೋಪಿಗಳ ಪರ ವಕೀಲರಿಗೆ ತಿಳಿಯಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. (ಗೌಪ್ಯವಾಗಿರಬೇಕಿದ್ದ ದೂರುದಾರರ ಹೆಸರು ಪೊಲೀಸ್‌ ಇಲಾಖೆಯಿಂದ ಬಹಿರಂಗವಾಗುವ ಹಿಂದೆ ಮಾಮೂಲಿನಂತೆ ‘ಕಾಣದ ಕೈ’ಗಳು ಕೆಲಸ ಮಾಡಿರುತ್ತವೆ!). ಅಂತೂ ಈ ‘ಕೈ’ಗಳು ಹನುಮೇಶನ ಬಳಿಯೂ ಸಾಗುತ್ತವೆ.

ಆದ್ದರಿಂದ ಹನುಮೇಶ ಕೋರ್ಟ್‌ಗೆ ಬಂದು ಸಾಕ್ಷ್ಯ ನುಡಿಯಲು ಸಿದ್ಧನಾಗುವುದಿಲ್ಲ. ಘಟನೆಯ ಚಿತ್ರೀಕರಣವನ್ನು ಸಿ.ಡಿ ಮಾಡಿ ಪೊಲೀಸರಿಗೆ ಕಳುಹಿಸುವಷ್ಟು ಚಾಕಚಕ್ಯತೆ ತೋರಿದ್ದ ಹನುಮೇಶ, ಎಲ್ಲರ ಒತ್ತಾಸೆಗೆ ಮಣಿದು ವಿಡಿಯೊದ ಮೂಲ ಚಿತ್ರಣವನ್ನು ತನ್ನ ಫೋನ್‌ನ ಮೆಮೊರಿಯಿಂದ ಅಳಿಸಿ (ಡಿಲೀಟ್‌) ಬಿಡುತ್ತಾನೆ.

ಘಟನೆಯನ್ನು ಮುಚ್ಚಿ ಹಾಕುವ ಎಲ್ಲ ಕಡೆಯ ಯತ್ನಗಳೂ ಫಲಿಸುತ್ತವೆ!(ಮೊಬೈಲ್‌ ಫೋನ್‌ನ ಮೆಮೊರಿಯಿಂದ ಡಿಲೀಟ್‌ ಆಗುವ ವಿಡಿಯೊ, ಮೆಸೇಜ್‌ ಮುಂತಾದವುಗಳನ್ನು ವಾಪಸ್‌ ತೆಗೆಯುವ ತಂತ್ರಜ್ಞಾನವೂ ಇದೆ. ಇದೇ ತಂತ್ರಜ್ಞಾನದ ಮೂಲಕ ಹಲವಾರು ಆರೋಪಿಗಳು ಸಿಕ್ಕಿಬಿದ್ದದ್ದೂ ಇದೆ. ಆದರೆ ಈ ಪ್ರಕರಣದಲ್ಲಿ ಹಾಗಾಗಲಿಲ್ಲ) ಇನ್ನೊಂದೆಡೆ, ದಿನಸಿ ಸಾಮಗ್ರಿ ಕೊಂಡೊಯ್ಯುತ್ತಿದ್ದ ಲಾರಿ ಮಾಲೀಕನಾಗಲೀ, ಘಟನೆ ನಡೆದ

ದಿನ ಲಾರಿ ಓಡಿಸುತ್ತಿದ್ದ ಚಾಲಕನಾಗಲೀ ‘ದಿನಸಿ ಸಾಮಾನುಗಳು ಕಳ್ಳತನವಾಗಿವೆ’ ಎಂಬ ದೂರನ್ನು ಪೊಲೀಸರಲ್ಲಿ ದಾಖಲಿಸುವುದಿಲ್ಲ! ದೂರೂ ಇಲ್ಲ, ದೂರುದಾರನೂ ಇಲ್ಲ...! ಎಲ್ಲರೂ ಅಂದುಕೊಂಡಂತೆಯೇ ಆಗಿ ಕೇಸು ಅಲ್ಲಿಗೇ ಮುಗಿಯುತ್ತದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್‌ ಆರೋಪಿಗಳನ್ನು ಖುಲಾಸೆ ಮಾಡುತ್ತದೆ. ಲಾರಿ ಅಥವಾ ಬಸ್‌ ಉರುಳಿಬಿದ್ದಾಗ ಅದರಲ್ಲಿರುವ ಸಾಮಾನುಗಳನ್ನು ಸ್ಥಳೀಯರು ಮುಗಿಬಿದ್ದು ಕಾನೂನಿನ ಬಗ್ಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೊಂಡೊಯ್ಯುವುದು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಆದರೆ ಹೀಗೆ ಸಾಮಾನು ತೆಗೆದುಕೊಂಡು ಹೋಗುವುದು ಕೂಡ ‘ರಸ್ತೆಗಳ್ಳತನ’ದ ವ್ಯಾಪ್ತಿಗೆ ಬರುತ್ತದೆ ಎಂಬ ಅರಿವು ಎಲ್ಲರಿಗೂ ಇರಬೇಕಾದ ಅಗತ್ಯವಿದೆ.

ಈಗ ಮೊಬೈಲ್‌ ಚಿತ್ರೀಕರಣ ಮಾಡಲು ಹನುಮೇಶನಂತಹ ಉಂಡಾಡಿಗುಂಡನೇ ಬೇಕೆಂದೇನೂ ಇಲ್ಲ. ಭೀಕರ ಅಪಘಾತ ಆಗಿ ಸಾಯುತ್ತಿದ್ದರೂ, ಅವರನ್ನು ರಕ್ಷಿಸುವ ಬದಲು ಅಥವಾ ಪೊಲೀಸರಿಗೆ ವಿಷಯ ತಿಳಿಸುವ ಬದಲು ಮಾನವೀಯತೆ ಮರೆತು, ಟಿ.ವಿ ವಾಹಿನಿಗಳಿಗೆ ಕಳುಹಿಸಲು
ಮೊಬೈಲ್‌ ಚಿತ್ರೀಕರಣ ಮಾಡಿಕೊಳ್ಳುವವರಿಗೇನೂ ಕಮ್ಮಿ ಇಲ್ಲ...! ಅದನ್ನು ವಾಹಿನಿಗಳು ಕೂಡ ಅಷ್ಟೇ ಖುಷಿಯಿಂದ ‘ನಮ್ಮದೇ ಎಕ್ಸ್‌ಕ್ಲೂಸಿವ್‌’ ಎಂದು ತೋರಿಸುವ ವಿಷಯ ಹೊಸತೂ ಅಲ್ಲ...! ಸಾಮಗ್ರಿಗಳನ್ನು ಕೊಂಡೊಯ್ಯುವಾಗ ಯಾರಾದರೂ ವಿಡಿಯೊ ಮಾಡಿದ್ದಲ್ಲಿ, ಕೋರ್ಟ್‌ಗೆ ನೀವು ಅಲೆದಾಡಬೇಕಾದೀತು ಎಚ್ಚರಿಕೆ...
ಲೇಖಕರು ನ್ಯಾಯಾಂಗ ಇಲಾಖೆ ಅಧಿಕಾರಿ (ಹೆಸರುಗಳನ್ನು ಬದಲಾಯಿಸಲಾಗಿದೆ)

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT