ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕುಚಿತ ರಾಜಕಾರಣ ಸರಿಯಲ್ಲ’

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವುದು ನಿಜ. ನಮಗೆ ಆಗಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ, ನೀರು ಸಂರಕ್ಷಣೆ, ಮಿತ ಬಳಕೆ ಮತ್ತು, ಪೋಲು ತಡೆಯುವುದಕ್ಕೆ ಸಂಬಂಧಿಸಿದಂತೆ ನಾವೇನು ಮಾಡಿದ್ದೇವೆ ಎಂಬುದರ ಆತ್ಮಾವಲೋಕನ ಆಗಬೇಕಿದೆ. ಈ ನಿಟ್ಟಿನಲ್ಲಿ ಆಗಾಗ ವೈಯಕ್ತಿಕ ನೆಲೆಯಲ್ಲಿ ಧ್ವನಿಗಳು ಕೇಳಿ ಬರುತ್ತಿವೆ. ಆದರೆ, ಈ ನಿಟ್ಟಿನಲ್ಲಿ ವ್ಯವಸ್ಥಿತ ಪ್ರಯತ್ನಗಳು ನಡೆದಿಲ್ಲ’ಎನ್ನುತ್ತಾರೆ ರೈತ ಹೋರಾಟ ಸಮಿತಿ ಮುಖಂಡ, ಕರ್ನಾಟಕ ಜನಶಕ್ತಿ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ. ವಾಸು.

* ಕಾವೇರಿ ನೀರು ಸಂಪೂರ್ಣ ಸದ್ಬಳಕೆಯಾಗುತ್ತಿದೆಯೇ ?
2001ರಲ್ಲಿ ‘ಯುನೈಟೆಡ್ ನೇಷನ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ’ ಯೋಜನೆಯಡಿ ನೀಡಿದ ವರದಿಯಲ್ಲಿ ನೀರು ಪೋಲಾಗುತ್ತಿರುವ ಬಗೆಗೆ ಪ್ರಸ್ತಾಪವಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಕಳುಹಿಸಿದ್ದ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ತಂಡವೂ ಅದನ್ನೇ ಪುನರುಚ್ಚರಿಸಿದೆ. ಇದು 16 ವರ್ಷಗಳ ನಂತರವೂ ನೀರು ಪೋಲಾಗುವುದನ್ನು ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಸೂಚಿಸುತ್ತದೆ.

*ನೀರು ಯಾವ, ಯಾವ ಹಂತಗಳಲ್ಲಿ ಪೋಲಾಗುತ್ತಿದೆ?
ನಾಲೆ, ತೂಬುಗಳ ನಿರ್ವಹಣೆಯಲ್ಲಿ ನೀರು ಪೋಲಾಗುತ್ತಿದೆ. ಗದ್ದೆಗಳಲ್ಲೂ ನೀರು ವ್ಯರ್ಥವಾಗುತ್ತಿದೆ. ಒಟ್ಟಾರೆ ಶೇ 20ರಷ್ಟು ನೀರಿನ ಸೋರಿಕೆಯಾಗುತ್ತಿದೆ ಎನ್ನುವುದನ್ನು ನೀರಾವರಿ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ, ಅದರ ಪ್ರಮಾಣ ಇನ್ನೂ ಹೆಚ್ಚಿದೆ.

ತೂಬುಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ರೈತರು ಗದ್ದೆಗಳಿಗೆ ನೀರು ಹರಿಸಿಕೊಳ್ಳುವುದನ್ನು ತಡೆಯಲಾಗುತ್ತಿಲ್ಲ. ಗದ್ದೆಗಳಲ್ಲಿ ತುಂಬಿ ಹರಿಯುವ ನೀರು ನದಿ ಸೇರುತ್ತದೆ. ಅನಂತರ ಅದು ತಮಿಳುನಾಡು ಸೇರುತ್ತದೆ. ನೀರಿನ ಸೋರಿಕೆಗೆ ಇದು ಉತ್ತಮ ಉದಾಹರಣೆ.

* ನೀರು ಉಳಿಸಲು ಪರ್ಯಾಯ ಪ್ರಯತ್ನಗಳು ಆಗಿವೆಯೇ?
ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಒಂದೆರಡು ಪ್ರಯತ್ನಗಳು ನಡೆದಿದ್ದು ಬಿಟ್ಟರೆ, ಸಾಮೂಹಿಕ ಪ್ರಯತ್ನಗಳು ಆಗಿಲ್ಲ. ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವ ಮಡಗಾಸ್ಕರ್‌, ಏರೋಬಿಕ್‌, ಶ್ರೀ ಇನ್ನಿತರ ಪದ್ಧತಿಗಳಿವೆ. ಹನಿ ನೀರಾವರಿಯಲ್ಲಿ ಕಬ್ಬು ಬೆಳೆಯಬಹುದು. ಆ ಕೆಲಸ ಆಗಿಲ್ಲ.

ತಮಿಳುನಾಡಿನಲ್ಲೂ ಸ್ವಾಮಿನಾಥನ್ ಅವರ ಸಲಹೆ ಮೇರೆಗೆ ಒಂದು ಬಾರಿ ಮಾತ್ರ ಆಧುನಿಕ ಪದ್ಧತಿ ಅಳವಡಿಸಿಕೊಂಡಿದ್ದರು. ಅನಂತರ ಅಲ್ಲಿಯೂ ಹಳೇ ಪದ್ಧತಿಯಲ್ಲಿಯೇ ಬೆಳೆಯಲಾಗುತ್ತದೆ. ಮೆಟಾಸಿಮ್ ಕಂಪೆನಿ ಕೆರೆಯಿಂದಲೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅದು ದೂಳು ತಿನ್ನುತ್ತಿದೆ.

* ನೀರಿನ ತೊಂದರೆಗೆ ಕಾರಣಗಳೇನು ?
ನೀರಿನ ತೊಂದರೆಗೆ ಜಲದ ಮೂಲ ರಕ್ಷಿಸುವ ವಿಷಯದತ್ತ ಗಮನ ಹರಿಸದಿರುವುದು ಪ್ರಮುಖ ಕಾರಣ. ಕಾವೇರಿ ಹುಟ್ಟುವ ಕೊಡಗಿನಲ್ಲೇ ಪರಿಸರ ಸಂರಕ್ಷಣೆಯ ಕೆಲಸ ಆಗುತ್ತಿಲ್ಲ. ಅಂತರ್ಜಲ ಹೆಚ್ಚಿಸುವ ಕೆರೆಗಳ ಹೂಳೆತ್ತುವ ಕೆಲಸ ಆಗುತ್ತಿಲ್ಲ. ಮಂಡ್ಯ ತಾಲ್ಲೂಕಿನಲ್ಲಿ ತಹಶೀಲ್ದಾರ್ ಮಾರುತಿ ಪ್ರಸನ್ನ ಎಂಬುವರ ಉತ್ತೇಜನದಿಂದ ಸ್ವಯಂ ಪ್ರೇರಣೆಯಿಂದ ಹಲವಾರು ಗ್ರಾಮಗಳಲ್ಲಿ ಜನರು ಕೆರೆಗಳ ಹೂಳೆತ್ತಿದ್ದಾರೆ. ಇದೇ ಕಾರ್ಯವನ್ನು ಕಾವೇರಿ ಕೊಳ್ಳದಾದ್ಯಂತ ವಿಸ್ತರಿಸಲು ಏಕೆ ಸಾಧ್ಯವಿಲ್ಲ.

* ಪರ್ಯಾಯ ಬೆಳೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ಸಿರಿಧಾನ್ಯ ಬೆಳೆಯಬೇಕು ಎಂದು ಹೇಳಲಾಗುತ್ತಿದೆ. ಅದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಎಲ್ಲರೂ ಅದನ್ನೇ ಬೆಳೆದರೆ ಮುಂದೊಂದು ದಿನ ಅದಕ್ಕೂ ಬೆಲೆ ಸಿಗುವುದಿಲ್ಲ. ರೈತರು ನಷ್ಟದಿಂದ ಪಾರಾಗಲು ಮಿಶ್ರ ಬೆಳೆಗಳನ್ನು ಬೆಳೆಯಬೇಕು ಎಂದು ಹೇಳಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಸರಾಸರಿ ಹಿಡುವಳಿಯ ಪ್ರಮಾಣ ಕಡಿಮೆ ಇದೆ. ಒಂದು ಎಕರೆಗಿಂತ ಕಡಿಮೆ ಪ್ರದೇಶ ಹೊಂದಿದವರ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಸಮಗ್ರ ಚಿಂತನೆಯಾಗಬೇಕು.

* ನೀರು ಉಳಿಸುವ ಕೆಲಸ ಯಾರು ಮಾಡಬೇಕು?
ನೀರು ಉಳಿಸುವ ಕೆಲಸ ಜನರು ಹಾಗೂ ಸರ್ಕಾರದಿಂದ ಆಗಬೇಕು. ಒಬ್ಬರಿಂದ ಇದು ಸಾಧ್ಯವಿಲ್ಲ. ಜನರನ್ನು ಒಳಗೊಂಡೇ ಸರ್ಕಾರ ಆಂದೋಲನ ರೂಪಿಸಬೇಕು. ಇನ್ನೊಬ್ಬರತ್ತ ಬೆರಳು ತೋರಿಸುತ್ತ ಕೂಡುವುದರಿಂದ ಪ್ರಯೋಜನವಿಲ್ಲ.ಈಗಾಗಲೇ ಪರಿಸರದಲ್ಲಿ ಅಸಮತೋಲನವಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಅಣೆಕಟ್ಟು ಕಟ್ಟುವುದು ಪರಿಹಾರವಲ್ಲ. ಮಳೆ ಬರದಿದ್ದರೆ, ಅಣೆಕಟ್ಟು ಕಟ್ಟಿ ಏನು ಪ್ರಯೋಜನ. ನೀರಿನ ಮೂಲ ಉಳಿಸುವುದು ಮೊದಲ ಆದ್ಯತೆಯಾಗಬೇಕು. ನೀರಿನ ಸಂರಕ್ಷಣೆ, ಬಳಕೆ ವಿಷಯದಲ್ಲಿ ಸಂಕುಚಿತ ರಾಜಕಾರಣ ಮಾಡಬಾರದು. ಸಮಗ್ರ ಪುನಶ್ಚೇತನದ ರೂುರೇಷೆಯೊಂದನ್ನು ಸಿದ್ಧಪಡಿಸಬೇಕಿದೆ.

*ಕಾವೇರಿ ನದಿ ನೀರು ನಮ್ಮ ಹಕ್ಕಷ್ಟೇ ಎನ್ನುವವರ ಬಗ್ಗೆ ಏನಂತೀರಿ?
ಕಾವೇರಿ ಕೊಳ್ಳವನ್ನೇ ಒಂದು ಘಟಕ ಎಂದು ಪರಿಗಣಿಸಬೇಕು. ಎಲ್ಲರ ಅಗತ್ಯ ಹಾಗೂ ಸಾಧ್ಯತೆಗಳನ್ನು ಪರಿಶೀಲಿಸಿ ನೀರು ಹಂಚಿಕೆ ಮಾಡಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಕಾವೇರಿ ಈಗ ಕರ್ನಾಟಕ, ತಮಿಳುನಾಡು ರಾಜ್ಯಗಳ ನಡುವಿನ ವಿಷಯವಾಗಿ ಉಳಿದಿಲ್ಲ. ನೀರಿನ ಕೊರತೆಯಿಂದಾಗಿ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳ ನಡುವೆಯೂ ಬಿಕ್ಕಟ್ಟಾಗಿದೆ. ಯಾರೂ ಯಾರಿಗೂ ಪಾಠ ಹೇಳುವ ಸ್ಥಿತಿಯಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT