ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾವಿಗೂ ರಾಜಕೀಯ ಬಣ್ಣ

ಮೋದಿ, ಬಿಜೆಪಿಗೆ ಮುಜುಗರ
Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಆತಂಕ ಸೃಷ್ಟಿಸಿರುವ ಉತ್ತರ ಪ್ರದೇಶದ ಗೋರಖಪುರ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಣಿ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ.

70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆದ ಮನಕಲಕುವ ದುರಂತ ಘಟನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಜುಗರ ಎದುರಿಸುವಂತೆ ಮಾಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಈ ದುರಂತ ನಡೆದಿರುವುದರಿಂದ ಅವರೂ ಭಾರಿ ಒತ್ತಡಕ್ಕೆ ಸಿಲುಕಿದ್ದಾರೆ. ಜತೆಗೆ ಈ ಪ್ರಕರಣ ಬಿಜೆಪಿ ನಾಯಕರನ್ನುಇಕ್ಕಟ್ಟಿಗೆ ಸಿಲುಕಿಸಿದ್ದು, ತೀವ್ರ ಅಸಮಾಧಾನ ಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಕ್ಕಳ ಸರಣಿ ಸಾವಿನ ಬಗ್ಗೆ ದೇಶದಾದ್ಯಂತ ತೀವ್ರ ಆತಂಕ ವ್ಯಕ್ತವಾಗಿದ್ದು, ವಿರೋಧ ಪಕ್ಷಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿವೆ. ಸರ್ಕಾರದ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳು, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಲೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಗೋರಖಪುರ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇಟ್ಟಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಸರ್ಕಾರದ ಜತೆ ಪ್ರಧಾನಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಭಾರಿ ಟೀಕೆ ವ್ಯಕ್ತವಾಗುತ್ತಲೇ ತೀವ್ರ ಒತ್ತಡಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಆರ್‌.ಕೆ. ಮಿಶ್ರಾ ಅವರನ್ನು ಅಮಾನತು ಮಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಮಾಧ್ಯಮಗಳು ಗೊಂದಲ ಹುಟ್ಟಿಸುವ ಸಾವಿನ ಸಂಖ್ಯೆ ನೀಡುತ್ತಿವೆ ಎಂದು ಕಿಡಿ ಕಾರಿರುವ ಅವರು, ‘ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ವೈದ್ಯಾಧಿಕಾರಿಗಳು ಆಮ್ಲಜನಕ ಕೊರತೆಯನ್ನುನನ್ನ ಗಮನಕ್ಕೆ ತಂದಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಪ್ರಧಾನಿ ಸೂಚನೆಯ ಮೇರೆಗೆ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಸಿ.ಕೆ. ಮಿಶ್ರಾ ನೇತೃತ್ವದ ತಜ್ಞರ ತಂಡ ಗೋರಖಪುರಕ್ಕೆ ಧಾವಿಸಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಉತ್ತರ ಪ್ರದೇಶ ಆರೋಗ್ಯ ಇಲಾಖೆಯಿಂದಲೂ ವರದಿ ಕೇಳಿದ್ದಾರೆ.

ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್‌ ಟಂಡನ್‌ ಅವರು ಗೋರಖಪುರಕ್ಕೆ ಧಾವಿಸಿದ್ದು ಪರಿಶೀಲನೆ ಆರಂಭಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಪ್ರಕರಣದ ತನಿಖೆ ವಹಿಸಲಾಗಿದೆ. ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್‌ ತಿಳಿಸಿದ್ದಾರೆ.

ಸೋನಿಯಾ, ರಾಹುಲ್‌ ಆಘಾತ:  ಬಾಬಾ ರಾಘವ್‌ ದಾಸ್‌ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮಕ್ಕಳು ಸಾವನ್ನಪ್ಪಿರುವ ಮನಕಲುಕುವ ಘಟನೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಗುಲಾಂ ನಬಿ ಆಜಾದ್‌ ನೇತೃತ್ವದ ಕಾಂಗ್ರೆಸ್‌ ತಂಡ ಗೋರಖಪುರದ ಆಸ್ಪತ್ರೆಗೆ ಭೇಟಿ ನಿಡಿದೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ. ವೈದ್ಯಕೀಯ ಕಾಲೇಜು ಪ್ರಾಚಾರ್ಯರನ್ನು ಅಮಾನತು ಮಾಡಿ ಕಣ್ಣೊರೆಸಿದರೆ ಸಾಲದು. ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಇಂಥದೊಂದು ದುರಂತ ನಡೆದಿದೆ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಅವರಿಗೆ ತಮ್ಮ ಅಜ್ಜ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಹೆಸರು ಹೇಳಿ ಮತ ಕೇಳುವುದೊಂದೇ ಗೊತ್ತು. ರೈಲ್ವೆ ದುರಂತ ನಡೆದಾಗ ನೈತಿಕ ಹೊಣೆ ಹೊತ್ತು ಶಾಸ್ತ್ರಿ ಅವರು ರಾಜೀನಾಮೆ ನೀಡಿದ್ದರು. ಆ ಗುಣ ಮೊಮ್ಮಗನಿಗೆ ಬಂದಿಲ್ಲ. ಅವರು ಇನ್ನೂ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಟ್ವೀಟ್‌ ಮಾಡಿದ್ದಾರೆ.

ನಿಖರ ಕಾರಣ ಇನ್ನೂ ನಿಗೂಢ!: ಮಕ್ಕಳ ಸಾವಿಗೆ ನಾನಾ ಕಾರಣಗಳು ಕೇಳಿ ಬರುತ್ತಿವೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಸರ್ಕಾರದ ಹೇಳಿಕೆಗಳಲ್ಲಿ ಸಾಕಷ್ಟು ಗೊಂದಲವಿದೆ. ಸಾವಿನ ಸಂಖ್ಯೆಯಲ್ಲೂ ಸಾಮ್ಯತೆ ಇಲ್ಲ.

48 ಗಂಟೆಯಲ್ಲಿ ಬಿಆರ್‌ಡಿ ಆಸ್ಪತ್ರೆಯಲ್ಲಿ 60 ಮಕ್ಕಳು ಸಾವನ್ನಪ್ಪಿವೆ ಎಂದು ಗೋರಖಪುರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣಗಳನ್ನು ಅವರು ತಿಳಿಸಿಲ್ಲ.

ಆದರೆ, ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ವರದಿ ಅನ್ವಯ ಆಗಸ್ಟ್‌ 7ರಿಂದ ವಿವಿಧ ರೋಗಗಳಿಂದ ಬಳಲುತ್ತಿದ್ದ 60 ಮಕ್ಕಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸಿದ್ದಾರ್ಥನಾಥ ಸಿಂಗ್‌ ತಿಳಿಸಿದ್ದಾರೆ. ಎರಡು ದಿನಗಳಲ್ಲಿ 60 ಮಕ್ಕಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೀವ್‌ ರೌಟೇಲಾ ಹೇಳಿದ್ದಾರೆ.

ಗೋರಖಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ಪ್ರಕಾರ ಆಮ್ಲಜನಕದ ಕೊರತೆಯಿಂದ 21 ಮಕ್ಕಳು ಕೊನೆಯುಸಿರೆಳೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ತೆರಳಿದ್ದು ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

‘ಆಸ್ಪತ್ರೆ ಅಲ್ಲ, ಮಕ್ಕಳನ್ನು ಕೊಲ್ಲುವ ಕಸಾಯಿಖಾನೆ’

ಲಖನೌ: ಗೋರಖ್‌ಪುರ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಕರುಳ ಕುಡಿಗಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ.

‘ಅದು ಆಸ್ಪತ್ರೆ ಅಲ್ಲ, ಮಕ್ಕಳನ್ನು ಕೊಲ್ಲುವ ಕಸಾಯಿಖಾನೆ’ ಎಂದು ಪಾಲಕರು ಮತ್ತು ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಾವಿನ ದವಡೆಯಿಂದ ಮಕ್ಕಳನ್ನು ಕಾಪಾಡುವ ಆಸೆ ಹೊತ್ತು ಇಲ್ಲಿಗೆ ಕರೆ ತಂದರೆ, ವೈದ್ಯರೇ ಅವರನ್ನು ಬಲಿ ತೆಗೆದುಕೊಂಡು ಬಿಟ್ಟರು’ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ಆಸ್ಪತ್ರೆ ಎದುರು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಮಕ್ಕಳ ಸರಣಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT