ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ರಾಜ್ಯಗಳಿಗೆ ಚಾಚಿದ್ದ ‘ಬಾಟಮ್ ಫಿಶಿಂಗ್’ ಬೇರು!

Last Updated 12 ಆಗಸ್ಟ್ 2017, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಟಮ್ ಫಿಶಿಂಗ್’ ದಂಧೆ ಮೂಲಕ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಆರೋಪದಡಿ ಇತ್ತೀಚೆಗೆ ಸೈಬರ್ ಪೊಲೀಸರ ಬಲೆಗೆ ಬಿದ್ದಿರುವ ಜಾರ್ಖಂಡ್‌ನ ಡಿಪ್ಲೊಮಾ ವಿದ್ಯಾರ್ಥಿಗಳು, ಕರ್ನಾಟಕ ಸೇರಿದಂತೆ 24 ರಾಜ್ಯಗಳಲ್ಲಿ ತಮ್ಮ ಮೋಸದ ಜಾಲವನ್ನು ವಿಸ್ತರಿಸಿದ್ದರು ಎಂಬ ಸಂಗತಿ ಸಿಐಡಿ ತನಿಖೆಯಿಂದ ಹೊರಬಿದ್ದಿದೆ‌.

ವಿವಿಧ ಆಮಿಷಗಳನ್ನು ಒಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಜಾರ್ಖಂಡ್‌ನ ಕಪಿಲ್ ದೇವ್, ಸೂರಜ್ ಕುಮಾರ್, ಸುಶೀಲ್ ಕುಮಾರ್ ಸುಮನ್ ಹಾಗೂ ಬಿಪ್ಲವ್ ಕುಮಾರ್ ಎಂಬುವರನ್ನು ಪೊಲೀಸರು ಇದೇ ಜುಲೈ 25ರಂದು ಬಂಧಿಸಿದ್ದರು. ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪ‍ಡಿಸಿದಾಗ, ಜಾಲದ ಬೇರುಗಳು ದೇಶದೆಲ್ಲೆಡೆ ಚಾಚಿಕೊಂಡಿರುವುದು ಗೊತ್ತಾಗಿದೆ.

‘24 ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ನಾಗರಿಕರು ಈ  ಜಾಲದಿಂದ ಮೋಸ ಹೋಗಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಕುರಿತು ಆಯಾ ರಾಜ್ಯಗಳ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದ್ದು, ನಮ್ಮ ವಿಚಾರಣೆ ಪೂರ್ಣಗೊಂಡ ಬಳಿಕ ಅವರು ನಗರಕ್ಕೆ ಬರಲಿದ್ದಾರೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

183 ಪ್ರಕರಣ ಪತ್ತೆ: ‘ಜಾಲದ ಕಿಂಗ್‌ಪಿನ್ ಸುಶೀಲ್ ಕುಮಾರ್. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈತ ಗೆಳೆಯರ ಜತೆಗೂಡಿ ವಂಚನೆಯ ದಾರಿ ಹಿಡಿದ. ಐದು ತಿಂಗಳ ಅವಧಿಯಲ್ಲಿ ಇವರು ದೇಶದಾದ್ಯಂತ 400ಕ್ಕೂ ಹೆಚ್ಚು ಮಂದಿಯ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿದ್ದಾರೆ. ಆದರೆ, ದೂರು ಕೊಟ್ಟವರು 183 ಮಂದಿ ಮಾತ್ರ. ಆರೋಪಿಗಳನ್ನು ಬಂಧಿಸಿದಾಗ 460 ಸಿಮ್‌ಗಳು, 15 ಮೊಬೈಲ್‌ಗಳು ಹಾಗೂ 16 ಸಾವಿರ ಮಂದಿಯ ಬ್ಯಾಂಕ್ ಖಾತೆಗಳ ವಿವರಗಳಿರುವ ಪಟ್ಟಿ ಸಿಕ್ಕಿದೆ. ಆ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಖಾತೆಯಿಂದಲೂ ಹಣ ಎಗರಿಸಲು ಅವರು ಹಗಲಿರುಳು ಶ್ರಮಿಸುತ್ತಿದ್ದರು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಬಾಟಮ್ ಫಿಶಿಂಗ್?

ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಅಲ್ಪ ಮೊತ್ತದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವುದೇ ಬಾಟಮ್ ಫಿಶಿಂಗ್. ಸಣ್ಣ ಪ್ರಮಾಣದಲ್ಲಿ ಹಣ ಕಳೆದುಕೊಂಡರೆ ನಾಗರಿಕರು ಪೊಲೀಸರಿಗೆ ದೂರು ಕೊಡುವುದಿಲ್ಲ, ಒಂದು ವೇಳೆ ದೂರು ಕೊಟ್ಟರೂ ಕಡಿಮೆ ಮೊತ್ತವಾದ ಕಾರಣ ಪೊಲೀಸರು ತನಿಖೆ ನಡೆಸುವುದಿಲ್ಲ ಎಂಬುದು ದಂಧೆಕೋರರ ವಿಶ್ವಾಸ. ಹೀಗಾಗಿ, ಅದೇ ತಂತ್ರ ಬಳಸಿಕೊಂಡು ₹ 2 ಸಾವಿರದಿಂದ ₹ 5 ಸಾವಿರದವರೆಗೆ ಮಾತ್ರ ವಂಚನೆ ಮಾಡುತ್ತಾರೆ. ಮಾದಕ ವಸ್ತುಗಳನ್ನು ಖರೀದಿಸುವುದಕ್ಕೆ ಅಥವಾ ಸ್ನೇಹಿತರ ಜತೆ ಪಾರ್ಟಿ ಮಾಡುವುದಕ್ಕೆ ಈ ಹಣ ಬಳಸುತ್ತಾರೆ.

‘ಜಾರ್ಖಂಡ್ ವಿದ್ಯಾರ್ಥಿಗಳ ಈ ಜಾಲದ ವಿರುದ್ಧ ಉತ್ತರ ಪ್ರದೇಶದಲ್ಲಿ 29, ಜಾರ್ಖಂಡ್‌ನಲ್ಲಿ 10, ಪಶ್ಚಿಮ ಬಂಗಾಳದಲ್ಲಿ 5, ಬೆಂಗಳೂರಿನಲ್ಲಿ 2 ದೂರುಗಳು ಸೇರಿದಂತೆ ದೇಶದಾದ್ಯಂತ 183 ಪ್ರಕರಣಗಳು ದಾಖಲಾಗಿವೆ. ಆ ಎಲ್ಲ ದೂರುಗಳನ್ನು ಪರಿಶೀಲಿಸಿ, ವಂಚನೆಯ ಮೊತ್ತ ಲೆಕ್ಕ ಮಾಡಿದ್ದೇವೆ. ಅಷ್ಟೊಂದು ಮಂದಿಗೆ ಮೋಸ ಮಾಡಿ ಆರೋಪಿಗಳು ಎಗರಿಸಿರುವುದು ₹ 8 ಲಕ್ಷ ಮಾತ್ರ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ನಗರದಲ್ಲಿ 40 ನಕಲಿ ಖಾತೆ: ‘ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಕಪಿಲ್ ಹಾಗೂ ಸೂರಜ್, ನಕಲಿ ದಾಖಲೆಗಳನ್ನು ಸಲ್ಲಿಸಿ ಬನಶಂಕರಿ, ಜೆ.ಪಿ.ನಗರ ಹಾಗೂ ಜಯನಗರ ಸುತ್ತಮುತ್ತಲ ಬ್ಯಾಂಕ್‌ಗಳಲ್ಲಿ 40 ಖಾತೆಗಳನ್ನು ತೆರೆದಿದ್ದರು. ಈ ಕುರಿತು ಬ್ಯಾಂಕ್ ಅಧಿಕಾರಿಗಳ ಹೇಳಿಕೆಗಳನ್ನೂ ಪಡೆದಿದ್ದೇವೆ’ ಎಂದು ಹೇಳಿದರು.

‌ಆರೋಪಿಗಳು ಮೇ 5ರಂದು ಜಿಗಣಿಯ ಕ್ಯಾಬ್ ಚಾಲಕ ಸುರೇಶ್ ಎಂಬುವರ 2 ಬ್ಯಾಂಕ್ ಖಾತೆಗಳಿಂದ ₹ 7 ಸಾವಿರ ಎಗರಿಸಿದ್ದರು. ಮೊಬೈಲ್ ಕರೆ ವಿವರ (ಸಿಡಿಆರ್) ಹಾಗೂ ಐಪಿ ವಿಳಾಸ ಆಧರಿಸಿ ತನಿಖೆಗಿಳಿದ ಸಿಐಡಿ ಸೈಬರ್ ಪೊಲೀಸರು, ಬೆಂಗಳೂರು ಹಾಗೂ ಜಾರ್ಖಂಡ್‌ನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

‘ಹಣ ಕೊಡಿಸಿ ಸಾರ್’

‘ಈ ಜಾಲದಿಂದ ತಮಗೂ ವಂಚನೆಯಾಗಿದೆ ಎಂದು ಪ್ರತಿದಿನ ಕನಿಷ್ಠ 10 ಮಂದಿಯಿಂದ ಕರೆಗಳು ಬರುತ್ತವೆ. ಆದರೆ, ಅವರು ಅಧಿಕೃತವಾಗಿ ದೂರು ಕೊಡಲು ಒಪ್ಪುವುದಿಲ್ಲ. ಬದಲಾಗಿ, ‘ದೂರು ಬೇಡ ಸಾರ್. ನಮ್ಮ ಹಣವನ್ನು ಕೊಡಿಸಿ’ ಎಂದು ಕೇಳುತ್ತಿದ್ದಾರೆ. ಉತ್ತರಪ್ರದೇಶದಿಂದ ಕರೆ ಮಾಡುವವರ ಸಂಖ್ಯೆಯೇ ಹೆಚ್ಚಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಹೀಗೆ ವಿವರ ಸಂಗ್ರಹ

ಅಂತರ್ಜಾಲದಲ್ಲಿ 600ಕ್ಕೂ ಹೆಚ್ಚು ಡೊಮೈನ್ ನೇಮ್‌ಗಳನ್ನು ಖರೀದಿಸಿದ್ದ ಈ ವಿದ್ಯಾರ್ಥಿಗಳು, ಅವುಗಳನ್ನು ಬಳಸಿಕೊಂಡು ವಿವಿಧ ಹೆಸರುಗಳಲ್ಲಿ ವೆಬ್‌ಸೈಟ್‌ಗಳನ್ನು ತೆರೆದಿದ್ದರು. ‘ನಮ್ಮ ಕಂಪೆನಿಗೆ ಬಂಡವಾಳ ಹೂಡಿದರೆ, ಪ್ರತಿದಿನ ಶೇ 2ರಷ್ಟು ಬಡ್ಡಿ ನೀಡುತ್ತೇವೆ’ ಎಂದು ಆ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತಿದ್ದರು.

ಹಣದಾಸೆಗೆ ಬಿದ್ದ ಸಾವಿರಾರು ಮಂದಿ, ವಂಚಕರು ವೆಬ್‌ಸೈಟ್‌ನಲ್ಲಿ ನೀಡಿದ್ದ ಸ್ವ–ವಿವರದ ಅರ್ಜಿಯಲ್ಲಿ ತಮ್ಮ ಬ್ಯಾಂಕ್ ಖಾತೆಯ ವಿವರ ನಮೂದಿಸಿದ್ದರು. ಆರೋಪಿಗಳು ಆ ವಿವರಗಳನ್ನು ಬಳಸಿಕೊಂಡೇ ‘ಬಾಟಮ್ ಫಿಶಿಂಗ್’ ಮೂಲಕ ಖಾತೆಗೆ ಕನ್ನ ಹಾಕುತ್ತಿದ್ದರು ಎಂದು ತನಿಖಾಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT