ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರು ಡೊಂಗಿಗಳು: ಸಿಎಂ ಸಿದ್ದರಾಮಯ್ಯ ಟೀಕೆ

Last Updated 13 ಆಗಸ್ಟ್ 2017, 7:29 IST
ಅಕ್ಷರ ಗಾತ್ರ

ರಾಯಚೂರು: ‘ರಾಜ್ಯದ ರೈತರ ಸಾಲಮನ್ನಾ ಮಾಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಜೆಪಿ ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದೆ. ಬಿಜೆಪಿ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೆದುರು ಬಾಯಿ ಬಿಡದೆ ನಿಂತಿದ್ದರು. ಹೀಗಾಗಿ ಬಿಜೆಪಿ ನಾಯಕರೆಲ್ಲ ಡೊಂಗಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ರಾಜ್ಯ ಕಾಂಗ್ರೆಸ್‌ ಘಟಕದಿಂದ ಶನಿವಾರ ಏರ್ಪಡಿಸಿದ್ದ 371–ಜೆ ಅನುಷ್ಠಾನಕ್ಕಾಗಿ ಅಭಿನಂದನೆ ಹಾಗೂ ಹೈದರಾಬಾದ್‌ ಕರ್ನಾಟಕ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘ರೈತರ ಬಗ್ಗೆ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡಿದ್ದ ಮೂರೇ ತಿಂಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತು. ರೈತರ ಸಾಲಮನ್ನಾ ಮಾಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದಾಗ, ನೋಟು ಛಾಪಿಸುವ ಯಂತ್ರ ಇಟ್ಟುಕೊಂಡಿಲ್ಲ ಎಂದಿದ್ದರು. ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದರು.

‘ಬಿಜೆಪಿ ಅಧಿಕಾರಾವಧಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಾಗಿ ಒಟ್ಟು ₹21,500 ಕೋಟಿ ವೆಚ್ಚ ಮಾಡಿದ್ದರು. ಕಾಂಗ್ರೆಸ್‌ ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ₹86 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಈ ವರ್ಷ ₹27 ಸಾವಿರ ಕೋಟಿ ಮೀಸಲಿಡಲಾಗಿದೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಶೇ 24.1 ರಷ್ಟು ಮೀಸಲಾತಿ ಒದಗಿಸಲಾಗಿದೆ’ ಎಂದು ಹೇಳಿದರು.

‘ಎಲ್ಲ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಚುನಾವಣೆಯಲ್ಲಿ ಪ್ರಣಾಳಿಕೆ ಸಿದ್ಧಪಡಿಸುತ್ತವೆ. ಆದರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದ 165 ಭರವಸೆಗಳಲ್ಲಿ ಬಹುತೇಕ ಈಡೇರಿಸಿದ್ದೇವೆ. ಪ್ರಮಾಣ ವಚನ ಸ್ವೀಕರಿಸಿದ ಅರ್ಧಗಂಟೆಯೊಳಗಾಗಿ ಬಡವರಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಘೊಷಿಸಿದ್ದೇವೆ’ ಎಂದರು.

‘ಕಾಂಗ್ರೆಸ್‌ ಪಕ್ಷವು ಬಡವರನ್ನು ಆಲಸಿಗಳನ್ನಾಗಿ ಮಾಡುತ್ತಿದೆ. ಜಮೀನಿನಲ್ಲಿ ದುಡಿಯುವುದಕ್ಕೆ ರೈತರಿಗೆ ಕಾರ್ಮಿಕರು ಸಿಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಕೆಲವು ಶಾಸಕರು ಅನ್ನಭಾಗ್ಯದ ಟೀಕೆ ಮಾಡಿದರು. ಕಾಯಕ ನಂಬಿಕೊಂಡು ಬದುಕುವ ಜನರು ಕನಿಷ್ಠ ಎರಡು ಹೊತ್ತಿಗೆ ಊಟ ಮಾಡಬೇಕು ಎನ್ನುವುದು ಕಾಂಗ್ರೆಸ್‌ ಪಕ್ಷದ ಕಾಳಜಿ. ಬಿಜೆಪಿಯವರು ಇತ್ತೀಚಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧೀಜಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನವನ್ನು ಮುಂದುವರಿಸುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿ ಪ್ರತಿವರ್ಷ ₹3 ಸಾವಿರ ಕೋಟಿ ಅನುದಾನ ಒದಗಿಸುತ್ತಿದೆ. ಬಿಜೆಪಿಯವರು ಈಗಲಾದರೂ ಕೇಂದ್ರಕ್ಕೆ ಒತ್ತಾಯಿಸಿ ಸಾಲಮನ್ನಾ ಮಾಡಿಸಲಿ. ಈ ಸಲವೂ ಬರಗಾಲ ಇದೆ’ ಎಂದು ತಿಳಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ನಾನು ಹಾಗೂ ನನ್ನ ಕುಟುಂಬದವರು ಪಕ್ಷಕ್ಕೆ ಅಗೌರವ ತರುವ ಕೆಲಸ ಎಂದಿಗೂ ಮಾಡುವುದಿಲ್ಲ. ವಿರೋಧಿಗಳು ಪಕ್ಷವನ್ನು ಛಿದ್ರಗೊಳಿಸುವ ಕೆಲಸ ಮಾಡಿದಾಗ, ರಾಜ್ಯದಾದ್ಯಂತ ಎಲ್ಲ ಕಾರ್ಯಕರ್ತರು ಸ್ಪಂದಿಸಿ ನನಗೆ ಧೈರ್ಯ ಹೇಳಿದ್ದಾರೆ. ಅವರಿಗೆಲ್ಲ ಧನ್ಯವಾದಗಳು. ಕಾಂಗ್ರೆಸ್‌ ಪಕ್ಷ ಮಾತ್ರ ದೇಶವನ್ನು ಏಕತೆಯಿಂದ ಕಾಣುತ್ತದೆ’ ಎಂದು ಹೇಳಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌,  ಉತ್ತರ ಕರ್ನಾಟಕ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ಮಾತನಾಡಿದರು.

371–ಜೆ ಅನುಷ್ಠಾನಕ್ಕೆ ಶ್ರಮಿಸಿದ್ದಕ್ಕಾಗಿ ರಾಷ್ಟ್ರೀಯ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ರಾಜ್ಯ ಕಾಂಗ್ರೆಸ್‌ನಿಂದ ಬೆಳ್ಳಿಗದೆ ನೀಡಿ ಸನ್ಮಾನಿಸಲಾಯಿತು.
ಸಚಿವರಾದ ಎಚ್‌.ಆಂಜನೇಯ, ಎಚ್‌.ಕೆ.ಪಾಟೀಲ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಸಂಸದ ಬಿ.ವಿ.ನಾಯಕ, ಪಕ್ಷದ ರಾಜ್ಯ ಉಸ್ತುವಾರಿ ಎಚ್‌.ಸಿ.ವೇಣುಗೋಪಾಲ, ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಟ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಬಸವನಗೌಡ ಬಾದರ್ಲಿ ಇದ್ದರು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT