ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪೇಂದ್ರ ರಾಜಕೀಯ ಮತ್ತು ನೆಟ್ಟಿಗರ ರಂಜನೆ

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರಚಲಿತ ವಿದ್ಯಮಾನಗಳನ್ನು ಲೇವಡಿ ಮಾಡುವ ಮೀಮ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಸಿಗುತ್ತದೆ. ಸನ್ನಿವೇಶವೊಂದಕ್ಕೆ ಕೆಲವೇ ಪದಗಳಲ್ಲಿ, ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡುವ ಮೀಮ್‌ಗಳಿಗೆ ಯಾರಾದರೂ ‘ಆಹಾರ’ವಾಗಬಹುದು. ವ್ಯಂಗದ ಮೊನಚಿನಿಂದ ಚುಚ್ಚಿ ಜನರಿಗೆ ರಂಜನೆ ನೀಡುತ್ತವೆ ಈ ಮೀಮ್‌ಗಳು.

ಎರಡು ಮೂರು ದಿನಗಳಿಂದ ಬಹುವಾಗಿ ಚರ್ಚೆಯಲ್ಲಿರುವ ವಿಷಯ ಚಿತ್ರನಟ ಉಪೇಂದ್ರ ಅವರ ರಾಜಕೀಯ ಪ್ರವೇಶ ಮತ್ತು ಅವರು ರಾಜಕೀಯ ಮತ್ತು ಸರ್ಕಾರವನ್ನು ವಿಶ್ಲೇಷಿಸಿರುವ ರೀತಿ. ಅಂದ ಮೇಲೆ ನೆಟ್ಟಿಗರು ಸುಮ್ಮನಿರಲು ಸಾಧ್ಯವೆ? ಮೀಮ್‌ ಮೂಲಕ ತಮ್ಮ ಅಭಿಪ್ರಾಯಗಳನ್ನು ಯಥೇಚ್ಛವಾಗಿ ವ್ಯಕ್ತಪಡಿಸಿದ್ದಾರೆ. ಪರ ವಿರೋಧದ ಮೀಮ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಉಪೇಂದ್ರ ಅವರ ರಾಜಕೀಯ ಪ್ರವೇಶದ ಸುದ್ದಿ ಹರಡುತ್ತಿದ್ದಂತೆಯೇ ಅವರ ಹಳೆಯ ಸಿನಿಮಾಗಳ ವಿಡಿಯೊಗಳು, ಚಿತ್ರಗಳು ಫೇಸ್‌ಬುಕ್ ತುಂಬಿಕೊಂಡಿವೆ. ‘ಎ’ ಸಿನಿಮಾದ ದೃಶ್ಯವೊಂದರಲ್ಲಿ, ಕೆಲಸ ಮಾಡದೇ ಸುಮ್ಮನೆ ಕೂತ ವ್ಯಕ್ತಿಗೆ ಗುಂಡಿಕ್ಕುವ ಉಪೇಂದ್ರ ಅವರ ಚಿತ್ರವನ್ನು ಅಪ್‌ಲೋಡ್ ಮಾಡಿ, ಅದರ ಪಕ್ಕದಲ್ಲೇ ಸೋಮಾರಿ ಕಟ್ಟೆಯಿಂದ ಎದ್ದು ಓಡುತ್ತಿರುವ ಜನಗಳ ಚಿತ್ರ ಸೇರಿಸಿ  ‘ಅಯ್ಯೊ ಮೆಂಟಲ್‌ ಬಂದ ಓಡ್ರಪ್ಪೊ...’ ಎಂದು ನೀಡಿರುವ ಕ್ಯಾಪ್ಷನ್‌ ನಗೆ ಉಕ್ಕಿಸುವ ಜೊತೆಗೆ ಉಪೇಂದ್ರ ರಾಜಕೀಯಕ್ಕೆ ಬಂದರೆ ಸೋಮಾರಿಗಳಿಗೆ, ಭ್ರಷ್ಟರಿಗೆ ಉಳಿಗಾಲವಿಲ್ಲ ಎಂಬುದನ್ನೂ ಸೂಚಿಸುತ್ತಿದೆ.

ಬಾಹುಬಲಿ ವೇಷದಲ್ಲಿ ಉಪೇಂದ್ರ ನಡೆದು ಬರುತ್ತಿದ್ದರೆ ವಿವಿಧ ಪಕ್ಷಗಳ ನಾಯಕರು ದಾರಿ ಬಿಡುತ್ತಿರುವ ಚಿತ್ರದ ಅಡಿ ಬರಹ ‘ರಿಯಲ್ ಬಾಹುಬಲಿ’ ಎಂದು. ಉಪೇಂದ್ರ ಅವರು ಮೂರು ಜುಟ್ಟು ಹಾಕಿಕೊಂಡಿರುವ ಚಿತ್ರವನ್ನು ಹಾಕಿರುವ ಅಭಿಮಾನಿಯೊಬ್ಬ ಒಂದು ಜುಟ್ಟಿಗೆ ಕುಟುಂಬ, ಇನ್ನೊಂದು ಜುಟ್ಟಿಗೆ ರಾಜಕೀಯ, ಮತ್ತೊಂದು ಜುಟ್ಟಿಗೆ ಸಿನಿಮಾ ಎಂದು ಹೆಸರಿಟ್ಟು ಉಪೇಂದ್ರ ಅವರ‌ ಬಹುಮುಖ ‌‌‌‌‌ಪ್ರತಿಭೆಯ ಅನಾವರಣವನ್ನು ಹಾಸ್ಯದ ಮೂಲಕ ಮಾಡಿದ್ದಾನೆ.

ಉಪೇಂದ್ರ ಅವರ ರಾಜಕೀಯ ಪ್ರವೇಶದ ನಿರ್ಧಾರವನ್ನು ಟೀಕಿಸುವ ಮೀಮ್‌ಗಳೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ‘ಉಪೇಂದ್ರ ಅವರು ಪಕ್ಕದ ರಾಜ್ಯರ ನಟರ ಸ್ಥಿತಿ ನೋಡಿದಂತಿಲ್ಲ’ ಎಂಬ ಅಡಿ ಬರಹವಿರುವ ಚಿತ್ರದಲ್ಲಿ ತೆಲುಗಿನ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ತಲೆಯ ಮೇಲೆ ಕೈಹೊತ್ತು ಕೂತಿರುವ ಚಿತ್ರವಿದೆ. ಉಪೇಂದ್ರ ಅವರು ಶನಿವಾರ ನಡೆಸಿದ ಸುದ್ದಿಗೋಷ್ಠಿಯ ಬಗ್ಗೆಯೂ ವ್ಯಂಗ್ಯ ಮಾಡಿರುವ ಕೆಲವರು. ‘ಕ್ಯಾಮರಾ ಕಂಡೊಡನೆ ಉಪೇಂದ್ರ ಸುದ್ದಿಗೋಷ್ಟಿ ಎಂಬುದನ್ನು ಮರೆತು ಉದ್ದುದ್ದ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ’ ಎಂದು ಒಬ್ಬರು ಚುಚ್ಚಿದ್ದಾರೆ. ಸುದ್ದಿಗೋಷ್ಠಿಯ ಫೋಟೊ ಹಾಕಿರುವ ಟ್ರೋಲ್‌ ಪೇಜ್‌ವೊಂದು ಉಪೇಂದ್ರ ಪ್ರಾಕ್ಟಿಕಲ್ ಪಾಸ್ ಆಗಿದ್ದಾರೆ ಆದರೆ ‘ವೈವಾ’ಗೆ ತಯಾರಾದಂತೆ ಆದಂತೆ ಕಾಣುತ್ತಿಲ್ಲ ಎನ್ನುವ ಮೂಲಕ ಉಪೇಂದ್ರ ಅವರ ಮಾತು ಪ್ರಬುದ್ಧವಾಗಿರಲಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಮೆಚ್ಚಿ ಮಾಡಿದ ಮೀಮ್‌ಗಳೂ ಇವೆ. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉಪೇಂದ್ರ ತಮ್ಮದೇ ಸ್ಟೈಲ್‌ನಲ್ಲಿ ನೀಡಿದ ಉತ್ತರಗಳನ್ನೇ ಮೀಮ್ ಮಾಡಿ ‘ರೀಲ್‌ನಲ್ಲೂ ಕಿಂಗ್ ರಿಯಲ್‌ನಲ್ಲೂ ಕಿಂಗ್’ ಎಂಬ ಅಡಿಬರಹದೊಂದಿಗೆ ಹರಿಬಿಡಲಾಗಿದೆ. ಇಂತಹ ಹಲವು ಮೀಮ್‌ಗಳನ್ನು ಉಪೇಂದ್ರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.

ಉಪೇಂದ್ರ ಅವರ ರಾಜಕೀಯ ಪ್ರವೇಶ ಸುದ್ದಿಯನ್ನು ಚೂಯಿಂಗ್ ಗಮ್‌ನಂತೆ ಎಳೆದ ಸುದ್ದಿವಾಹಿನಗಳ ಬಗೆಗೂ ಬಗೆ–ಬಗೆಯ ಮೀಮ್‌ಗಳನ್ನು ಸೃಷ್ಟಿಸಿದ್ದಾರೆ ನೆಟ್ಟಿಗರು. ಸಾದುಕೋಕಿಲ ವಿವೇಕಾನಂದ ವೇಷದಲ್ಲಿ ನಿಂತಿರುವ ಚಿತ್ರದಲ್ಲಿ ‘ಉಪೇಂದ್ರ ಪಕ್ಷ ಕಟ್ತಾರೊ ಬಿಡ್ತಾರೊ, ಆದರೆ ಟಿಆರ್‌ಪಿ ತಿನ್ನುವ ಹಸುಗಳಿಗೆ ಒಳ್ಳೆ ಮೇವು ಸಿಕ್ಕಿತು’ ಎಂಬ ಬರಹ ಕಾಣಿಸುತ್ತದೆ. ಮತ್ತೊಬ್ಬರು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ‘ಉಪೇಂದ್ರ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಮೂವರು ಒಂದೇ ದಿನ ಕಾರ್ಯಕ್ರಮ ಇಟ್ಟುಕೊಂಡದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಈ ಚಾನೆಲ್‌ಗಳವರು ಮೂರು ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಮೂರು ದಿನ ತೋರಿಸಿ ನೆಮ್ಮದಿ ಕೆಡಿಸುತ್ತಿದ್ದರು’ ಎಂದು ಸುದ್ದಿವಾಹಿನಿಗಳನ್ನೂ ಲೇವಡಿ ಮಾಡಿದ್ದಾರೆ.

ಕ್ರಿಯಾಶೀಲ ಮೀಮ್‌ಗಳ ಜೊತೆಗೆ ಕೆಲವು ಅಶ್ಲೀಲ, ಅತಿರಂಜಿತ, ಕೆಟ್ಟ ಭಾಷೆ ಬಳಸಿದ ಮೀಮ್‌ಗಳೂ ಹರಿದಾಡುತ್ತಿರುವುದು ಬೇಸರದ ಸಂಗತಿ. ಒಟ್ಟಾರೆ ಉಪೇಂದ್ರ ಅವರ ರಾಜಕೀಯ ಪ್ರವೇಶ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT