ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಜಯಕ್ಕೆ ವೇದಿಕೆ ಸಜ್ಜು

ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ; ನಾಲ್ಕು ವಿಕೆಟ್‌ ಕಬಳಿಸಿದ ಕುಲದೀಪ್ ಯಾದವ್‌: ಫಾಲೊ ಆನ್‌ ಬಲೆಗೆ ಬಿದ್ದ ಶ್ರೀಲಂಕಾ
Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪಲ್ಲೆಕೆಲೆ: ಭಾರತ ತಂಡದ ಐತಿಹಾಸಿಕ ಜಯಕ್ಕೆ ವೇದಿಕೆ ಸಜ್ಜಾಗಿದೆ. ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವೇ ಆತಿಥೇಯ ಶ್ರೀಲಂಕಾ ತಂಡಕ್ಕೆ ಫಾಲೊ ಆನ್‌ ನೀಡಿದ ವಿರಾಟ್ ಕೊಹ್ಲಿ ಬಳಗವು ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ ಸ್ವೀಪ್ ಜಯ ದಾಖಲಿಸುವ ಹಾದಿಯಲ್ಲಿದೆ.

ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡಿ ಗಳಿಸಿದ ಚೊಚ್ಚಲ ಶತಕ ಮತ್ತು ಚೈನಾಮನ್ ಬೌಲರ್‌ ಕುಲದೀಪ್ ಯಾದವ್ ಅವರು ಹೆಣೆದ ಸ್ಪಿನ್ ಬಲೆ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಿತು. ಇದರ ಪರಿಣಾಮ ಮೊದಲ ಇನಿಂಗ್ಸ್‌ನಲ್ಲಿ ಕೇವಲ 135 ರನ್‌ಗಳಿಗೆ ಆಲೌಟಾದ ಶ್ರೀಲಂಕಾ 352 ರನ್‌ಗಳ ಹಿನ್ನಡೆ ಅನುಭವಿಸಿತು. ದಿನೇಶ್ ಚಾಂಡಿಮಲ್ ಬಳಗಕ್ಕೆ ಫಾಲೊ ಆನ್‌ ನೀಡಿದ ಕೊಹ್ಲಿ ಪಡೆ ಎರಡನೇ ದಿನದಾಟದ ಮುಕ್ತಾಯದ ವೇಳೆ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಲಂಕಾ ತಂಡದ ಒಟ್ಟಾರೆ 333 ರನ್‌ಗಳ ಹಿನ್ನಡೆಯಲ್ಲಿದೆ.

ಮೊದಲ ದಿನವಾದ ಶನಿವಾರ ಆರು ವಿಕೆಟ್‌ಗಳಿಗೆ 329 ರನ್‌ ಗಳಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ಭಾನುವಾರ ಬೆಳಿಗ್ಗೆಯಿಂದಲೇ ಲಂಕಾ ಬೌಲರ್‌ಗಳ ಮೇಲೆ ಪ್ರಹಾರ ಮಾಡಿದರು. ಮೊದಲ ದಿನದಾಟದ ಕೊನೆಯ ಅವಧಿಯಲ್ಲಿ ಭಾರತದ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿದ್ದ ಎದುರಾಳಿ ಬೌಲರ್‌ಗಳು ಎರಡನೇ ದಿನ ಭರವಸೆಯೊಂದಿಗೆ ಅಂಗಳಕ್ಕೆ ಇಳಿದಿದ್ದರು. ಆದರೆ ಅವರ ಕನಸನ್ನು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮೂಲಕ ನುಚ್ಚುನೂರು ಮಾಡಿದರು. ಏಳು ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಸಿಡಿಸಿದ ಅವರು ಬೌಲರ್‌ಗಳನ್ನು ಕಂಗೆಡಿಸಿದರು. ಕೇವಲ 96 ಎಸೆತಗಳಲ್ಲಿ 108 ರನ್‌ ಗಳಿಸಿ ಮಿಂಚಿದರು.

ಶನಿವಾರ ಒಂದು ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದ ಅವರು 61 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸಂದರ್ಭದಲ್ಲಿ ಅವರ ಬ್ಯಾಟಿನಿಂದ ಒಂದು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳು ಸಿಡಿದಿದ್ದವು. ವೃದ್ಧಿಮಾನ್ ಸಹಾ, ಕುಲದೀಪ್ ಯಾದವ್ ಮತ್ತು ಮಹಮ್ಮದ್ ಶಮಿ ಅವರ ಸಹಕಾರದೊಂದಿಗೆ ತಂಡಕ್ಕೆ ಭಾರಿ ಮೊತ್ತದ ಕಾಣಿಕೆ ನೀಡಿದರು.

ವೃದ್ಧಿಮಾನ್ ಸಹಾ ಔಟಾದ ನಂತರ ಪಾಂಡ್ಯ ಅವರೊಂದಿಗೆ ಭರ್ಜರಿ ಬ್ಯಾಟಿಂಗ್ ಮಾಡಿದ ಕುಲದೀಪ್ ಯಾದವ್‌ ಎಂಟನೇ ವಿಕೆಟ್‌ಗೆ 62 ರನ್‌ ಸೇರಿಸಿ ತಂಡದ ಮೊತ್ತವನ್ನು 400 ದಾಟಿಸಿದರು. ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿಯ ಸತತ ಮೂರು ಪಂದ್ಯಗಳಲ್ಲಿಯೂ 400 ರನ್ ಗಳಿಸಿದ ಮೊದಲ ತಂಡ ಎಂಬ ಖ್ಯಾತಿ ಭಾರತ ತಂಡದ್ದಾಯಿತು. ಅಂತಿಮ ವಿಕೆಟ್‌ಗೆ ಉಮೇಶ್ ಯಾದವ್ ಜೊತೆ 66 ರನ್‌ ಜೋಡಿಸಿ ಕೊನೆಯವರಾಗಿ ಔಟಾದರು. ಲಂಕಾದ ಚೈನಾಮನ್ ಬೌಲರ್‌ ಲಕ್ಷಣ್ ಸಂಡಗನ್‌ (132ಕ್ಕೆ5) ಚೊಚ್ಚಲ ಐದು ವಿಕೆಟ್‌ ಗೊಂಚಲಿನೊಂದಿಗೆ ಸಂಭ್ರಮಿಸಿದರು.

ಸಂಕಷ್ಟದ ಆರಂಭ

ಮೊದಲ ಇನಿಂಗ್ಸ್ ನೀರಸವಾಗಿ ಆರಂಭಿಸಿದ ಶ್ರೀಲಂಕಾ ಯಾವ ಹಂತದಲ್ಲೂ ಭಾರತದ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಲಿಲ್ಲ. ಮಹಮ್ಮದ್ ಶಮಿ ಮತ್ತು ಉಮೇಶ್ ಯಾದವ್‌ ಆರಂಭದಲ್ಲೇ ಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಸಂಕಷ್ಟ ತಂದೊಡ್ಡಿದರು. ಉಪುಲ್ ತರಂಗ ಮತ್ತು ಕರುಣರತ್ನೆ ಅವರನ್ನು ಶಮಿ ವಾಪಸ್ ಕಳುಹಿಸಿದರು. ಕುಶಾಲ್ ಮೆಂಡಿಸ್ ರನೌಟ್‌ ಆಗಿ ಮರಳಿದಾಗ ತಂಡದ ಮೊತ್ತ ಕೇವಲ 38 ಆಗಿತ್ತು. ಇದೇ ಮೊತ್ತಕ್ಕೆ ಏಂಜೆಲೊ ಮ್ಯಾಥ್ಯೂಸ್ ಕೂಡ ಕ್ರೀಸ್‌ ತೊರೆದರು. ನಂತರ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಭಾರಿ ಮೊತ್ತದ ಮುನ್ನಡೆ ಗಳಿಸಿದ್ದರಿಂದ ಎದುರಾಳಿಗಳನ್ನು ಮತ್ತೊಮ್ಮೆ ಬ್ಯಾಟಿಂಗ್‌ಗೆ ಆಹ್ವಾನಿಸಲು ಕೊಹ್ಲಿ ಹಿಂದೇಟು ಹಾಕಲಿಲ್ಲ.

ಒಂದು ಓವರ್‌ನಲ್ಲಿ 26 ರನ್‌!
ಭಾರತದ ಇನಿಂಗ್ಸ್‌ನ 116ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 26 ರನ್ ಗಳಿಸಿದರು. ಪುಷ್ಪಕುಮಾರ ಹಾಕಿದ ಈ ಓವರ್‌ನಲ್ಲಿ ಅವರು ಮೂರು ಸಿಕ್ಸರ್‌ ಮತ್ತು ಎರಡು ಬೌಂಡರಿ ಸಿಡಿಸಿದರು. ಟೆಸ್ಟ್ ಕ್ರಿಕೆಟ್‌ನ ಓವರ್ ಒಂದರಲ್ಲಿ ಭಾರತದ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ರನ್‌ ಇದು. ಈ ಹಿಂದೆ ಸಂದೀಪ್ ಪಾಟೀಲ್‌ ಮತ್ತು ಕಪಿಲ್‌ ದೇವ್‌ 24 ರನ್‌ ಗಳಿಸಿ ಜಂಟಿ ದಾಖಲೆಗೆ ಒಡೆಯರಾಗಿದ್ದರು. ಪಾಂಡ್ಯ ಅವರು ಎರಡನೇ 50 ರನ್‌ ಗಳಿಸಲು 25 ಎಸೆತ ತೆಗೆದುಕೊಂಡರು. 86 ಎಸೆತಗಳಲ್ಲಿ ಅವರು ಗಳಿಸಿದ ಶತಕ ವಿದೇಶದಲ್ಲಿ ಭಾರತದ ಬ್ಯಾಟ್ಸ್‌ಮನ್‌ ಗಳಿಸಿದ ಎರಡನೇ ವೇಗದ ಶತಕವಾಗಿದೆ. 2006ರಲ್ಲಿ ಗ್ರಾಸ್ ಐಲೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವೀರೇಂದ್ರ ಸೆಹ್ವಾಗ್‌ 78 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಸ್ಕೋರ್ ಕಾರ್ಡ್‌

ಭಾರತ, ಮೊದಲ ಇನಿಂಗ್ಸ್ (ಶನಿವಾರ 90 ಓವರ್‌ಗಳಲ್ಲಿ 6ಕ್ಕೆ329) 122.3 ಓವರ್‌ಗಳಲ್ಲಿ 487

ವೃದ್ಧಿಮಾನ್ ಸಹಾ ಸಿ ಪೆರೇರಾ ಬಿ ಫರ್ನಾಂಡೊ 16

ಹಾರ್ದಿಕ್ ಪಾಂಡ್ಯ ಸಿ ಪೆರೇರಾ ಬಿ ಸಂದಗನ್‌ 108

ಕುಲದೀಪ್ ಯಾದವ್‌ ಸಿ ಡಿಕ್ವೆಲಾ ಬಿ ಸಂದಗನ್‌ 26

ಮಹಮ್ಮದ್ ಶಮಿ ಸಿ ಮತ್ತು ಬಿ ಸಂದಗನ್‌ 8

ಉಮೇಶ್ ಯಾದವ್‌ ಔಟಾಗದೆ 3

ಇತರೆ (ಬೈ 10, ಲೆಗ್‌ಬೈ 6, ನೋಬಾಲ್‌ 2, ವೈಡ್‌ 6) 24

ವಿಕೆಟ್ ಪತನ 7–339 (ವೃದ್ಧಿಮಾನ್ ಸಹಾ, 91.3), 8–401 (ಕುಲದೀಪ್ ಯಾದವ್‌, 110.6), 9–421 (ಮಹಮ್ಮದ್ ಶಮಿ, 114.2), 10–487 (ಹಾರ್ದಿಕ್ ಪಾಂಡ್ಯ, 122.3)

ಬೌಲಿಂಗ್‌

ವಿಶ್ವ ಫರ್ನಾಂಡೊ 26–3–87–2, ಲಾಹಿರು ಕುಮಾರ 23–1–104–0, ದಿಮುತ್‌ ಕರುಣರತ್ನೆ 7–0–30–0, ದಿಲ್ರುವಾನ್ ಪೆರೇರ 8–1–36–0, ಲಕ್ಷಣ ಸಂಡಗನ್‌ 32.3–4–132–5, ಮಲಿಂದ ಪುಷ್ಪಕುಮಾರ 23–2–82–2

ಶ್ರೀಲಂಕಾ, ಮೊದಲ ಇನಿಂಗ್ಸ್‌ 37.4 ಓವರ್‌ಗಳಲ್ಲಿ 135

ದಿಮುತ್ ಕರುಣರತ್ನೆ ಸಿ ವೃದ್ಧಿಮಾನ್‌ ಸಹಾ ಬಿ ಮಹಮ್ಮದ್ ಶಮಿ 04

ಉಪುಲ್‌ ತರಂಗ ಸಿ ವೃದ್ಧಿಮಾನ್ ಸಹಾ ಬಿ ಮಹಮ್ಮದ್‌ ಶಮಿ 05

ಕುಶಾಲ್ ಮೆಂಡಿಸ್‌ ರನ್ ಔಟ್ (ಅಶ್ವಿನ್‌/ಕುಲದೀಪ್ ಯಾದವ್) 18

ದಿನೇಶ್ ಚಾಂದಿಮಲ್‌ ಸಿ ಕೆ.ಎಲ್‌. ರಾಹುಲ್‌ ಬಿ ರವಿಚಂದ್ರನ್‌ ಅಶ್ವಿನ್‌ 48

ಏಂಜೆಲೊ ಮ್ಯಾಥ್ಯೂಸ್‌ ಎಲ್‌ಬಿಡಬ್ಲ್ಯು ಬಿ ಹಾರ್ದಿಕ್ ಪಾಂಡ್ಯ 00

ನಿರೋಷನ್‌ ಡಿಕ್ವೆಲಾ ಸ್ಟಂ‌ಪ್ಡ್‌ ವೃದ್ಧಿಮಾನ್ ಸಹಾ ಬಿ ಕುಲದೀಪ್ ಯಾದವ್‌ 29

ದಿಲ್ರುವಾನ್ ಪೆರೇರ ಸಿ ಹಾರ್ದಿಕ್ ಪಾಂಡ್ಯ ಬಿ ಕುಲದೀಪ್ ಯಾದವ್‌ 00

ಮಲಿಂದ ಪುಷ್ಪಕುಮಾರ ಬಿ ಕುಲದೀಪ್ ಯಾದವ್‌ 10

ಲಕ್ಷಣ್ ಸಂಡಗನ್‌ ಸಿ ಶಿಖರ್ ಧವನ್‌ ಬಿ ರವಿಚಂದ್ರನ್ ಅಶ್ವಿನ್‌ 10

ವಿಶ್ವ ತಿಲಾನ ಫರ್ನಾಂಡೊ ಬಿ ಕುಲದೀಪ್ ಯಾದವ್‌ 00

ಲಾಹಿರು ಕುಮಾರ ಔಟಾಗದೆ 00

ಇತರೆ (ಬೈ 4, ಲೆಗ್‌ಬೈ 1, ವೈಡ್‌ 6) 11

ವಿಕೆಟ್ ಪತನ 1–14 (ಉಪುಲ್‌ ತರಂಗ, 2.3), 2–23 (ಕರುಣರತ್ನೆ, 4.3), 3–38 (ಕುಶಾಲ್‌ ಮೆಂಡಿಸ್‌, 8.5), 4–38 (ಮ್ಯಾಥ್ಯೂಸ್‌, 9.3), 5–101 (ನಿರೋಷನ್‌ ಡಿಕ್ವೆಲಾ, 20.3), 6–107 (ಪೆರೇರ, 22.1), 7–125 (ಚಾಂದಿಮಲ್‌, 31.3), 8–125 (ಪುಷ್ಪಕುಮಾರ, 32.2), 9–135 (ಫೆರ್ನಾಂಡೊ, 36.5), 10–135 (ಲಕ್ಷಣ್‌ ಸಂಡಗನ್‌, 37.4).

ಬೌಂಲಿಂಗ್‌

ಮಹಮ್ಮದ್ ಶಮಿ 6.5–1–17–2, ಉಮೇಶ್ ಯಾದವ್‌ 3.1–0–23–0, ಹಾರ್ದಿಕ್ ಪಾಂಡ್ಯ 6–1–28–1, ಕುಲದೀಪ್ ಯಾದವ್‌ 13–2–40–4, ಆರ್‌.ಅಶ್ವಿನ್‌ 8.4–2–22–2

ಶ್ರೀಲಂಕಾ, ಎರಡನೇ ಇನಿಂಗ್ಸ್‌  13 ಓವರ್‌ಗಳಲ್ಲಿ 1ಕ್ಕೆ19

ಕರುಣರತ್ನೆ ಬ್ಯಾಟಿಂಗ್‌ 12

ಉಪುಲ್‌ ತರಂಗ ಬಿ ಉಮೇಶ್‌ ಯಾದವ್‌ 7

ಪುಷ್ಪಕುಮಾರ ಬ್ಯಾಟಿಂಗ್‌ 00

ಇತರೆ 00

ವಿಕೆಟ್ ಪತನ 1–15 (ಉಪುಲ್ ತರಂಗ, 10.4)

ಬೌಲಿಂಗ್‌

ಮಹಮ್ಮದ್ ಶಮಿ 4–2–7–0 ಆರ್.ಅಶ್ವಿನ್‌ 6–4–5–0, ಉಮೇಶ್ ಯಾದವ್‌ 2–0–3–1, ಕುಲದೀಪ್ ಯಾದವ್‌ 1–0–0–4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT