ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಅರಳೀತೇ ರಣಜಿ ಸೊಬಗು?

Last Updated 13 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹೋದ ವರ್ಷ ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳ ನಡುವೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದ ರಣಜಿ ಪಂದ್ಯವದು.

ಪಂದ್ಯಕ್ಕೆ ಒಂದೆರೆಡು ದಿನಗಳ ಮೊದಲು ಎರಡೂ ತಂಡಗಳ ಆಟಗಾರರು ಅಭ್ಯಾಸ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಏಳೆಂಟು ವರ್ಷದ ಬಾಲಕನೊಬ್ಬ ಮೈದಾನದ ಸುತ್ತಲೂ ಕಣ್ಣಾಡಿಸಿದ. ನಂತರ ಗಲಿಬಿಲಿಗೆ ಒಳಗಾದಂತೆ ಕಂಡ ಆತ ಮಾಧ್ಯಮದವರ ಬಳಿ ಬಂದು ‘ಯುವರಾಜ್‌ ಸಿಂಗ್ ಆಡುವುದಿಲ್ಲವೇ, ಇವತ್ತು ಅಭ್ಯಾಸಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿದ್ದ.

‘ಯುವರಾಜ್‌ ಇರುವುದು ಪಂಜಾಬ್‌ ತಂಡದಲ್ಲಿ. ಆ ತಂಡ ತವರಿನಲ್ಲಿ ಯಾವುದೇ ಪಂದ್ಯಗಳನ್ನು ಆಡುವಂತಿಲ್ಲ’ ಎಂದು ಪತ್ರಕರ್ತರು ನೀಡಿದ ಉತ್ತರ ಕೇಳಿಸಿಕೊಳ್ಳುತ್ತಿದ್ದಂತೆಯೇ ಯಾರಿಗೆ ಬೇಕು ರಣಜಿ ಎನ್ನುವಂತೆ ಮುಖ ತಿರುಗಿಸಿಕೊಂಡು ಹೋಗಿದ್ದ.ಇದು ಒಂದು ಉದಾಹರಣೆಯಷ್ಟೇ. ಈ ರೀತಿಯ ಅನೇಕ ಘಟನೆಗಳು ಹೋದ ವರ್ಷದ ರಣಜಿ ಟೂರ್ನಿಯ ವೇಳೆ ನಡೆದಿವೆ.

ದೇಶಿ ಕ್ರಿಕೆಟ್‌ನಲ್ಲಿ ಪ್ರತಿಷ್ಠಿತವೆನಿಸಿರುವ ರಣಜಿಯ ಸ್ಪರ್ಧಾತ್ಮಕತೆ ಹೆಚ್ಚಿಸುವ ಸಲುವಾಗಿ ಬಿಸಿಸಿಐ ತಾಂತ್ರಿಕ ಸಮಿತಿ ತಟಸ್ಥ ಸ್ಥಳದಲ್ಲಿ ರಣಜಿ ಪಂದ್ಯಗಳನ್ನು ಆಯೋಜಿಸಿತ್ತು. ಇದಕ್ಕೆ ಅನೇಕ ಪರ–ವಿರೋಧ ಅಭಿಪ್ರಾಯಗಳು ಇದ್ದರೂ ಬಿಸಿಸಿಐ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ತಟಸ್ಥ ಸ್ಥಳಕ್ಕೆ ಅಸ್ತು ಎಂದಿತ್ತು.

ಆದ್ದರಿಂದ ಕರ್ನಾಟಕ ತಂಡ ಕಳೆದ ರಣಜಿ ಋತುವಿನಲ್ಲಿ ಗ್ರೇಟರ್‌ ನೋಯ್ಡಾ, ಕೋಲ್ಕತ್ತ, ಮುಂಬೈ, ವಡೋದರ, ಆಂಧ್ರದ ವಿಜಯನಗರಂ, ದೆಹಲಿ, ಪಟಿಯಾಲ, ಮೊಹಾಲಿ ಮತ್ತು ವಿಶಾಖಪಟ್ಟಣದಲ್ಲಿ ಪಂದ್ಯಗಳನ್ನು ಆಡಿತ್ತು. ಕರ್ನಾಟಕದಲ್ಲಿ ಐದು ಪಂದ್ಯಗಳಿದ್ದವು. ಆ ಪಂದ್ಯಗಳು ಯಾವಾಗ ಇದ್ದವು ಎನ್ನುವುದೇ ರಾಜ್ಯದ ಕ್ರಿಕೆಟ್‌ ಪ್ರೇಮಿಗಳಿಗೆ ಗೊತ್ತಾಗಲಿಲ್ಲ.

ಹುಬ್ಬಳ್ಳಿಯಲ್ಲಿ ಗುಜರಾತ್‌–ಮುಂಬೈ, ಬೆಳಗಾವಿಯಲ್ಲಿ ಗುಜರಾತ್‌–ಮುಂಬೈ, ಗುಜರಾತ್‌–ತಮಿಳುನಾಡು, ಮೈಸೂರಿನಲ್ಲಿ ಮುಂಬೈ–ರೈಲ್ವೇಸ್‌ ಮತ್ತು ಮುಂಬೈ–ಉತ್ತರಪ್ರದೇಶ ತಂಡಗಳು ಪಂದ್ಯಗಳನ್ನಾಡಿದವು. ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರಿನಲ್ಲಿನ ಕ್ರೀಡಾಂಗಣಗಳಲ್ಲೆವೂ ಖಾಲಿ ಖಾಲಿಯಾಗಿದ್ದವು. ಆಟಗಾರ ಶತಕ ಹೊಡೆದಾಗ, ಬೌಲರ್‌ ವಿಕೆಟ್‌ ಪಡೆದಾಗ ಪಂದ್ಯ ವರದಿ ಮಾಡಲು ಬಂದಿದ್ದ ಪತ್ರಕರ್ತರೇ ಪ್ರೇಕ್ಷಕರಾಗಿದ್ದರು!

ತಟಸ್ಥ ಸ್ಥಳದ ರಣಜಿ ಪಂದ್ಯಗಳ ಬಗ್ಗೆ ಮಾತನಾಡಿದ ಮೈಸೂರು ವಲಯದ ನಿಮಂತ್ರಕ ಬಾಲಚಂದರ್ ಅವರು ‘ಹೋದ ವರ್ಷ ರಣಜಿ ಪಂದ್ಯಗಳು ನಡೆದ ವಿಷಯ ಹೆಚ್ಚು ಜನಕ್ಕೆ ಗೊತ್ತಾಗಲೇ ಇಲ್ಲ. ತವರಿನ ತಂಡಗಳು ಆಡಿದ್ದರೆ ಸಾವಿರಾರು ಜನ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದರು. ಆಟಗಾರರಿಗೆ ನೆಟ್ಸ್‌ನಲ್ಲಿ ಬೌಲ್‌ ಮಾಡಲು ತವರಿನ ಕಿರಿಯ ಆಟಗಾರರಿಗೆ ಅವಕಾಶ ಲಭಿಸುತ್ತಿತ್ತು. ಈ ವರ್ಷ ರಣಜಿ ತವರಿಗೆ ಮರಳಿದ್ದರಿಂದ ಖುಷಿಯಾಗಿದೆ. ಕರ್ನಾಟಕ ತಂಡ ಮೈಸೂರಿನಲ್ಲಿ ಆಡಿದರೆ ಹೆಚ್ಚು ಜನ ಪಂದ್ಯಗಳನ್ನು ನೋಡುತ್ತಾರೆ’ ಎಂದರು.

ಈಡೇರದ ಆಶಯ

ದೇಶಿ ಕ್ರಿಕೆಟ್‌ನಲ್ಲಿ ರಣಜಿ, ದುಲೀಪ್‌ ಟ್ರೋಫಿ, ವಿಜಯ್ ಹಜಾರೆ ಹೀಗೆ ಹಲವಾರು ಟೂರ್ನಿಗಳು ಇದ್ದರೂ ರಣಜಿಗೆ ವಿಶೇಷ ಸ್ಥಾನವಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಈ ಟೂರ್ನಿ ಅನೇಕ ಸಲ ವೇದಿಕೆಯೂ ಆಗುತ್ತದೆ.

‘2015–16ರ ರಣಜಿ ಟೂರ್ನಿಯ ಕೆಲವು ಪಂದ್ಯಗಳು ಎರಡೇ ದಿನಗಳಲ್ಲಿ ಮುಗಿದು ಹೋಗಿದ್ದವು. ತವರಿನ ತಂಡ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್‌ ಸಜ್ಜು ಮಾಡಿಕೊಳ್ಳುವುದರಿಂದ ಫಲಿತಾಂಶ ಒಂದೇ ತಂಡದ ಕಡೆ ಇರುತ್ತದೆ. ಕಳಪೆ ಪಿಚ್‌ಗಳು ಆಟಗಾರರ ಕ್ರಿಕೆಟ್‌ ಬದುಕನ್ನೇ ನುಂಗಿ ಹಾಕುತ್ತಿವೆ’ ಎಂದು ಭಾರತ ಜೂನಿಯರ್ ತಂಡದ ಕೋಚ್‌ ರಾಹುಲ್‌ ದ್ರಾವಿಡ್ ಟೀಕಿಸಿದ್ದರು. ಆದ್ದರಿಂದ ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥ ಸೌರವ್‌ ಗಂಗೂಲಿ ಈ ಸಮಸ್ಯೆಗೆ ತಟಸ್ಥ ಸ್ಥಳದ ಪರಿಹಾರ ಹುಡುಕಿದ್ದರು.

ತಟಸ್ಥ ಸ್ಥಳದಿಂದ ರಣಜಿ ಪಂದ್ಯಗಳ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆ ಹೆ ಚ್ಚಾಗಬೇಕಿತ್ತು. ಆದರೆ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಿಸಿದರೂ ಮೂಲ ಆಶಯ ಈಡೇರಲಿಲ್ಲ. ಯೋಜನಾಬದ್ಧವಾಗಿ ಆಡಿದ ತಂಡಗಳಿಗೆ ಗೆಲುವು ಲಭಿಸಿದೆ.

ಒಂದು ತಂಡದ ಶಕ್ತಿ ಮತ್ತು ದೌರ್ಬಲ್ಯದ ಆಧಾರದ ಮೇಲೆ ಫಲಿತಾಂಶ ಲಭಿಸಿದೆ ಎಂಬುದು ಸಾಬೀತಾಗಿದೆ. ಇದಕ್ಕೆ ಪಿಚ್‌ ಸಂಬಂಧವೇ ಇಲ್ಲ ಎನ್ನುವುದೂ ಅನೇಕ ಆಟಗಾರರಿಗೆ ಮನದಟ್ಟಾಗಿದೆ. ತಟಸ್ಥ ಸ್ಥಳದಲ್ಲಿ ಪಂದ್ಯ ನಡೆದಾಗಲೇ ಅನೇಕ ಪಂದ್ಯಗಳು ಎರಡೂವರೆ ದಿನಗಳಲ್ಲಿಯೇ ಮುಗಿದು ಹೋಗಿವೆ.

ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಮುಂಬೈ ಮತ್ತು ತಮಿಳುನಾಡು ನಡುವಣ ಪಂದ್ಯ ಎರಡೂವರೆ ದಿನಗಳಲ್ಲಿ ಮುಗಿದಿತ್ತು. ಮೊದಲ ಇನಿಂಗ್ಸ್‌ನಲ್ಲಿ ತಮಿಳುನಾಡು 87 ರನ್‌ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 185 ರನ್‌ ಮಾತ್ರ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ 97 ರನ್ ಕಲೆ ಹಾಕುವಷ್ಟರಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ರಣಜಿ ಟೂರ್ನಿಯಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದ ಛತ್ತೀಸಗಡ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಮರ್ಥ್ಯ ಸಾಬೀತು ಮಾಡಿತ್ತು. ಈ ತಂಡ 255 ರನ್ ಗಳಿಸಿತ್ತು. ಎದುರಾಳಿ ತ್ರಿಪುರ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 118 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಈ ಎಲ್ಲಾ ಸಾಧನೆ ಮೂಡಿ ಬಂದಿದ್ದು ಆಟಗಾರರ ಶ್ರಮದಿಂದಲೇ ಹೊರತು ತಟಸ್ಥ ಸ್ಥಳಗಳಿಂದ ಅಲ್ಲ.

ಪ್ರಯಾಸವಾದ ಪ್ರವಾಸ

ರಣಜಿಯ ಹಳೆ ನಿಯಮದ ಪ್ರಕಾರ ಒಂದು ತಂಡ ತವರಿನಲ್ಲಿ ನಾಲ್ಕು ಮತ್ತು ಹೊರರಾಜ್ಯದಲ್ಲಿ ನಾಲ್ಕು ಲೀಗ್‌ ಪಂದ್ಯಗಳನ್ನು ಆಡಬೇಕು. ಆದರೆ ತಟಸ್ಥ ಸ್ಥಳ ಜಾರಿಗೆ ಬಂದ ಬಳಿಕ ಎಲ್ಲಾ ಪಂದ್ಯಗಳನ್ನು ಹೊರಗಡೆಯೇ ಆಡಬೇಕಾದ ಅನಿವಾರ್ಯತೆ ಎಲ್ಲಾ ತಂಡಗಳಿಗೆ ಬಂದಿತು. ಹೀಗಾಗಿ ನಿರಂತರ ಪ್ರವಾಸ ಆಟಗಾರರನ್ನು ಹೈರಾಣಾಗಿಸಿತ್ತು.

‘ತಿಂಗಳಾನುಗಟ್ಟಲೇ ಮನೆ ಬಿಟ್ಟು ಇರಬೇಕು. ಸತತ ಪ್ರವಾಸದಿಂದ ದೈಹಿಕ ಶ್ರಮವೂ ಹೆಚ್ಚು. ಎಲ್ಲಕ್ಕಿಂತ ಹೆಚ್ಚಾಗಿ ಯಾವೊಬ್ಬ ಅಭಿಮಾನಿಯೂ ಇಲ್ಲದೇ ಕ್ರಿಕೆಟ್ ಆಡುವುದೆಂದರೆ ಬೇಸರ ಮೂಡಿಸುತ್ತದೆ’ ಎಂದು ಕರ್ನಾಟಕ ತಂಡದ ಆಟಗಾರ ಸಿ.ಎಂ. ಗೌತಮ್‌ ಹೇಳುತ್ತಾರೆ.

(ಸಿ.ಎಂ. ಗೌತಮ್‌)

**

‘ಕಳೆದುಹೋಗಿದ್ದ ಖುಷಿ ಮತ್ತೆ ಸಿಕ್ಕಿದೆ’

ಕರ್ನಾಟಕ ತಂಡದ ಮೇಲೆ ಸಾಕಷ್ಟು ಪ್ರೀತಿ ಇರುವ ಕಾರಣ ಹೋದ ವರ್ಷ ರಾಜ್ಯ ತಂಡ ಆಡಿದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಹೋಗಿ ನೋಡಿದ್ದೇನೆ.

ಒಂಬತ್ತು ನಗರಗಳನ್ನು ಸುತ್ತಾಡಿದರೂ ಪ್ರತಿ ಪಂದ್ಯಕ್ಕೂ ಇಡೀ ಗ್ಯಾಲರಿಯಲ್ಲಿ ನಾನೊಬ್ಬನೇ ಇದ್ದೆ. ನನ್ನ ಹಾಗೆ ಎಲ್ಲರಿಗೂ ತಟಸ್ಥ ಸ್ಥಳಕ್ಕೆ ಹೋಗಿ ಪಂದ್ಯಗಳನ್ನು ನೋಡಲು ಆಗುವುದಿಲ್ಲ. ನಮ್ಮ ರಾಜ್ಯದ ಆಟಗಾರರು ಆಡುವುದನ್ನು ನೋಡಬೇಕು ಎಂದು ಸಾಕಷ್ಟು ಜನರಿಗೆ ಆಸೆ ಇರುತ್ತದೆ.

ಸಣ್ಣ ಊರುಗಳಲ್ಲಿ ಪಂದ್ಯಗಳನ್ನು ಆಯೋಜಿಸಿದರೆ ಸಾವಿರಾರು ಜನ ಸೇರುತ್ತಾರೆ. ತಂಡ ಸಾಧನೆ ಮಾಡಿದಾಗ ಚಪ್ಪಾಳೆ ತಟ್ಟಲು ಜನರೇ ಇಲ್ಲವೆಂದರೆ ಹೇಗೆ? ಅಭಿಮಾನಿಗಳಿಲ್ಲದೇ ಕ್ರಿಕೆಟ್‌ ಇರಲು ಸಾಧ್ಯವೇ? ಆದ್ದರಿಂದ ತಟಸ್ಥ ಸ್ಥಳವನ್ನು ರದ್ದು ಮಾಡಬೇಕು ಎನ್ನುವುದು ಎಲ್ಲರ ಆಸೆಯಾಗಿತ್ತು. ಈ ಆಸೆ ಈಗ ಈಡೇರಿದೆ. ಹೋದ ವರ್ಷ ಕಳೆದು ಹೋಗಿದ್ದ ಖುಷಿ ಈಗ ಮತ್ತೆ ಸಿಕ್ಕಿದೆ.

-ಸುಹಾಸ್ ನಾಯ್ಡು
ಕರ್ನಾಟಕ ತಂಡವನ್ನು ಹಿಂಬಾಲಿಸುವ ಅಭಿಮಾನಿ

**

ಹೊಸ ಪ್ರಯೋಗ ಚೆನ್ನಾಗಿತ್ತು: ಸನತ್
ಆಟಗಾರರ ದೃಷ್ಟಿಯಿಂದ ತಟಸ್ಥ ‌ಸ್ಥಳದ ಪ್ರಯೋಗ ಚೆನ್ನಾಗಿತ್ತು. ಆದರೆ ಪಂದ್ಯಗಳನ್ನು ಆಯೋಜಿಸಲು ಸರಿಯಾದ ಸ್ಥಳಗಳನ್ನು ಅಯ್ಕೆ ಮಾಡಬೇಕಿತ್ತು. ಉತ್ತಮ ಹೋಟೆಲ್‌ಗಳು ಇರುವ ಕಡೆ ಪಂದ್ಯ ಆಯೋಜಿಸಬೇಕಿತ್ತು. ಇದರಿಂದ ಅನಾನುಕೂಲವೂ ಇತ್ತು.

ತಮ್ಮ ರಾಜ್ಯದ ‌ತಂಡ ಇರುತ್ತಿದ್ದಲ್ಲವಾದ್ದರಿಂದ ಆತಿಥ್ಯ ವಹಿಸುವ ಕ್ರಿಕೆಟ್ ಸಂಸ್ಥೆ ಪಂದ್ಯಗಳನ್ನು ಸರಿಯಾಗಿ ಆಯೋಜಿಸುತ್ತಿರಲಿಲ್ಲ. ತವರಿನಲ್ಲಿ ಪಂದ್ಯಗಳು ನಡೆದರೆ ತವರಿನ ಅಭಿಮಾನಿಗಳಿಗೆ ಅನುಕೂಲ. ಆದರೆ ಲೀಗ್ ಹಂತದಲ್ಲಿ ‌ಪಂದ್ಯಗಳ ಸಂಖ್ಯೆ ‌ಕಡಿಮೆ ಮಾಡಬಾರದಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ‌ ರಣಜಿ ತಂಡಗಳ ನಾಯಕರು ಹಾಗೂ ಕೋಚ್ ಗಳು ರಣಜಿ ಟೂರ್ನಿಯಲ್ಲಿ ‌ಲೀಗ್ ಪಂದ್ಯಗಳ ಸಂಖ್ಯೆ ಹೆಚ್ಚಿಸಬೇಕು ಎಂದು‌ ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದರು.ಆದರೆ ಈ‌ ಬಾರಿ ಲೀಗ್ ಪಂದ್ಯಗಳನ್ನು ಕಡಿಮೆ ಮಾಡಲಾಗಿದೆ. ಇದು ಸರಿಯಲ್ಲ. ಇಂಗ್ಲೆಂಡ್. ಆಸ್ಟ್ರೇಲಿಯಾ ದೇಶಗಳಲ್ಲಿ ಪ್ರತಿ ವರ್ಷ 15 ಲೀಗ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಆದ್ದರಿಂದ ಪಂದ್ಯಗಳನ್ನು ಕಡಿಮೆ ಮಾಡಬಾರದಿತ್ತು.

**

ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸಿದ್ದು ಒಳ್ಳೆಯ ಪ್ರಯೋಗ. ಬೇರೆ ಬೇರೆ ವಲಯಗಳಲ್ಲಿ ಪಂದ್ಯಗಳನ್ನು ಆಡಿಸಿದ್ದರಿಂದ ಆಟಗಾರರಿಗೆ ಪ್ರಯಾಣ ಬಹಳ ಹೊರೆಯಾಯಿತು. ಎಲ್ಲಾ ಕಡೆಯೂ ಹೊರಗಿನಿಂದಲೇ ಬಂದ ಪಿಚ್‌ ಕ್ಯುರೇಟರ್‌ಗಳು ಪಿಚ್‌ ಸಜ್ಜು ಮಾಡುವುದರಿಂದ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತವರಿನಲ್ಲಿ ಪಂದ್ಯಗಳು ನಡೆದರೆ ಅಭಿಮಾನಿಗಳಿಗೂ ಖುಷಿಯಾಗುತ್ತದೆ

ಜಿ.ಕೆ, ಅನಿಲ್‌ ಕುಮಾರ್‌, ಕರ್ನಾಟಕದ ತಂಡದ ಸಹಾಯಕ ಕೋಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT